ಕೊರೋನಾ ಸೋಂಕಿನಿಂದ ತಮ್ಮ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ಪಿಎಂ ಕೇರ್ಸ್ ಅಡಿಯಲ್ಲಿ ಮಕ್ಕಳ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದಾರೆ.
ಅನಾಥ ಮಕ್ಕಳಿಗೆ ತಮ್ಮ ದೈನಂದಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಈ ಯೋಜನೆಯಡಿ ಪ್ರತಿ ತಿಂಗಳು 4,000 ರೂಪಾಯಿಗಳ ಸ್ಟೈಪಂಡ್ ಅನ್ನು ನೀಡಲಾಗುತ್ತದೆ.
ವೃತ್ತಿಪರ ಕೋರ್ಸ್ ಗಳಿಗೆ ಅಥವಾ ಉನ್ನತ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲವನ್ನೂ ಪಡೆಯಲು ಪಿಎಂ-ಕೇರ್ಸ್ ನೆರವಾಗಲಿದೆ.
ದೇಶದ ಅನೇಕ ಭಾಗಗಳ ಮಕ್ಕಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ನಾನು ಮಕ್ಕಳೊಂದಿಗೆ ಓರ್ವ ಪ್ರಧಾನಿಯಾಗಿ ಅಲ್ಲ. ಅವರ ಕುಟುಂಬದ ಸದಸ್ಯನಾಗಿ ಮಾತನಾಡಿದ್ದೇವೆ. ನಾನು ಇಂದು ಮಕ್ಕಳೊಂದಿಗೆ ಇದ್ದೇನೆ ಎಂಬುದು ನನಗೆ ಸಮಾಧಾನ ತಂದಿದೆ. ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಎಂಬುದು ಪ್ರತಿಯೊಬ್ಬ ನಾಗರಿಕನಿಗೂ ಅರ್ಥವಾಗಿದೆ ಎಂದು ಹೇಳಿದ್ದಾರೆ.
ಅನಾಥ ಮಕ್ಕಳ ಶಾಲಾಭ್ಯಾಸ ಮುಗಿದ ನಂತರ ಭವಿಷ್ಯದ ಕನಸುಗಳನ್ನು ಸಾಕಾರ ಮಾಡಿಕೊಳ್ಳಲು ಹೆಚ್ಚು ಹಣದ ಅಗತ್ಯವಿರುತ್ತದೆ. ಇದಕ್ಕಾಗಿ 18 ರಿಂದ 23 ವರ್ಷದವರೆಗಿನ ಯುವ ಸಮುದಾಯ ಪ್ರತಿ ತಿಂಗಳ ಸ್ಟೈಪಂಡ್ ಅನ್ನು ಪಡೆಯಲಿದೆ. 23 ವರ್ಷ ತುಂಬಿದ ನಂತರ ಅವರು 10 ಲಕ್ಷ ರೂಪಾಯಿಯನ್ನು ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ಮಕ್ಕಳಿಗೆ ಸೂಕ್ತ ವಸತಿ, ಊಟ ಸೌಲಭ್ಯದೊಂದಿಗೆ ಅವರನ್ನು ಸಬಲರನ್ನಾಗಿ ಮಾಡುವ ಪ್ರಮುಖ ಉದ್ದೇಶ ಈ ಯೋಜನೆ ಹೊಂದಿದೆ. ಅಲ್ಲದೇ, 23 ವರ್ಷ ಪೂರ್ಣಗೊಂಡ ನಂತರ 10 ಲಕ್ಷ ರೂಪಾಯಿ ಪಡೆಯುವುದು.ಹಾಗೂ ಆರೋಗ್ಯ ವಿಮೆಯ ಮೂಲಕ ಅವರ ಯೋಗಕ್ಷೇಮವನ್ನು ಖಾತರಿಪಡಿಸುವುದು. ಈ ಯೋಜನೆಯ ಪ್ರಮುಖ ಗುರಿಯಾಗಿದೆ ಎಂದು ನರೇಂದ್ರ ಮೋದಿ ಅವರು ಯೋಜನೆಯ ಮಹತ್ವವನ್ನು ವಿವರಿಸಿದ್ದಾರೆ.
ಈ ಯೋಜನೆಯ ಸೌಲಭ್ಯ ಪಡೆಯಲು ನೋಂದಣಿ ಮಾಡಿಸಿಕೊಳ್ಳಲು pmcaresforchildren.in ಎಂಬ ಹೆಸರಿನ ಪೋರ್ಟಲ್ ಅನ್ನು ಆರಂಭಿಸಲಾಗಿದೆ. ಇದೊಂದು ಏಕಗವಾಕ್ಷಿ ವ್ಯವಸ್ಥೆಯಾಗಿದೆ. ಅನುಮೋದನೆ ಪ್ರಕ್ರಿಯೆ ಸೇರಿದಂತೆ ಎಲ್ಲಾ ನೆರವನ್ನು ಮಕ್ಕಳಿಗೆ ಇದರ ಮೂಲಕ ನೀಡಲಾಗುತ್ತದೆ.