ರೈತ ಮುಖಂಡರ ಸಭೆ ಅಕ್ಷರಶಃ ರಣಾಂಗಣವಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಸಭೆ ವೇಳೆಯೇ ಭಾರತೀಯ ಕಿಸಾನ್ ಯುನಿಯನ್ ಮುಖಂಡ ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ ಎರಚಿ ಹಲ್ಲೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ರೈತ ಮುಖಂಡರ ಸಭೆ ವೇಳೆ ಏಕಾಏಕಿ ಗೊಂದಲ, ಗಲಾಟೆ ಆರಂಭವಾಗಿದೆ. ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಯಧುವೀರ್ ಸಿಂಗ್ ಅವರ ಮೇಲೆ ಮಸಿ ಎರಚಲಾಗಿದೆ.
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಸುದ್ದಿಗೋಷ್ಠಿ ನಡೆಸುತ್ತಿದ್ದ ರಾಕೇಶ್ ಟಿಕಾಯತ್, ನಾವು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಕೋಡಿಹಳ್ಳಿ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸುತ್ತಿದ್ದಂತೆ ಮುಖಂಡರ ನಡುವೆ ವಾಗ್ವಾದ ಆರಂಭವಾಗಿದೆ. ಕುರ್ಚಿಯನ್ನು ಎಳೆದಾಡಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದೇ ವೇಳೆಯಲ್ಲಿ ಟಿಕಾಯತ್ ಮತ್ತು ಯಧುವೀರ್ ಸಿಂಗ್ ಮೇಲೆ ಕಪ್ಪು ಮಸಿ ಎರಚಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.