2011ನೇ ಸಾಲಿನಲ್ಲಿ ಕೆಎಎಸ್ ಅಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳನ್ನು ಸಕ್ರಮಗೊಳಿಸುವ ಸಂಬಂಧ ರೂಪಿಸಿರುವ ಕಾಯಿದೆಗೆ ತಡೆ ನೀಡಲು ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ನಿರಾಕರಿಸಿದೆ.
ಇದರಿಂದಾಗಿ ಆಯ್ಕೆಯಾದವರಿಗೆ ನೇಮಕ ಪತ್ರ ವಿತರಣೆಗೆ ಸರಕಾರಕ್ಕೆ ಹಸಿರು ನಿಶಾನೆ ದೊರೆತಿದೆ.
ಟಿ.ಶ್ರೀನಿವಾಸ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಕೆಎಟಿ ಸದಸ್ಯರಾದ ನಾರಾಯಣ ಮತ್ತು ಎನ್.ಶಿವಶೈಲಂ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.
ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾ ಸಿಂಧುಗೊಳಿಸುವಿಕೆ) ಕಾಯಿದೆ-2022ರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾಗೊಂಡಿದೆ.
ಆ ಹಿನ್ನೆಲೆಯಲ್ಲಿ ಕಾಯಿದೆ ಜಾರಿಗೆ ತಡೆ ನೀಡಬೇಕೆಂಬ ಅರ್ಜಿದಾರರ ಮಧ್ಯಂತರ ಮನವಿಯನ್ನು ಕೆಎಟಿ ತಳ್ಳಿಹಾಕಿದೆ.
ಈ ಕಾಯಿದೆಯ ಅನುಸಾರ ಸರ್ಕಾರ 362 ಅಭ್ಯರ್ಥಿಗಳಿಗೆ ನೇಮಕ ಆದೇಶ ನೀಡಬಹುದು. ಆದರೆ, ಅದು ಕೆಎಟಿ ಕೈಗೊಳ್ಳುವ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರಲಿದೆ ಎಂದು ಸ್ಪಷ್ಟಪಡಿಸಿದೆ.
ಅರ್ಜಿದಾರರು ನೀಡಿದ ಸಿಐಡಿ ವರದಿ ಆಧರಿಸಿ ಹೈಕೋರ್ಟ್ ನೇಮಕ ರದ್ದುಗೊಳಿಸಿತ್ತು. ಅದನ್ನು ಸುಪ್ರೀಂಕೋಟ್ ಕೂಡ ಎತ್ತಿಹಿಡಿದಿದೆ. ಆದರೂ ಸಹ ನ್ಯಾಯಾಲಯ ಆದೇಶವನ್ನು ಬದಿಗೊತ್ತಿ 362 ಅಭ್ಯರ್ಥಿಗಳ ಅಕ್ರಮ ನೇಮಕ ಸಕ್ರಮಗೊಳಿಸಲು ರೂಪಿಸಿರುವ ಕಾಯಿದೆ ಕಾನೂನು ಬಾಹಿರವಾದುದು. ಹಾಗಾಗಿ ರದ್ದುಗೊಳಿಸಬೇಕು ಎಂದು ಕೋರಿದ್ದಾರೆ.
ನೇಮಕ ಸಿಂಧುಗೊಳಿಸುವ ಸರಕಾರದ ಕ್ರಮ ಪ್ರಶ್ನಿಸಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲೂ ಅರ್ಜಿ ಸಲ್ಲಿಸಲಾಗಿತ್ತು. ಕೆಎಟಿ ಯಾವುದೇ ಮಧ್ಯಂತರ ಆದೇಶ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಮಧ್ಯೆ, ಕರ್ನಾಟಕ ಲೋಕಸೇವಾ ಆಯೋಗ 2011ನೇ ಸಾಲಿನಲ್ಲಿ ನಡೆಸಿದ್ದ 362 ಗೆಜೆಟೆಡ್ ಪ್ರೊಬೆಷನರಿಗೆ ಹುದ್ದೆಗಳ ಆಯ್ಕೆ ಸಿಂಧುಗೊಳಿಸುವ ಸಂಬಂಧ ರೂಪಿಸಿರುವ ಕಾಯ್ದೆ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಅರೀಫ್ ಜಮೀಲ್ ಸಲ್ಲಿಸಿದ್ದ ಪಿಐಎಲ್ ಸಿಜೆ ರಿತುರಾಜ್ ಅವಸ್ಥಿ ಮತ್ತು ನ್ಯಾ. ಎಸ್. ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯಪೀಠದ ಮುಂದೆ ಬಂದಿತು.
ನ್ಯಾಯಪೀಠ ವಾದ ಆಲಿಸಿದ ಬಳಿಕ ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಆಯ್ಕೆ ಮತ್ತು ನೇಮಕ ಸಿಂಧುಗೊಳಿಸುವಿಕೆ) ಕಾಯ್ದೆಯನ್ನು ರದ್ದುಪಡಿಸಲು ನಿರಾಕರಿಸಿತಲ್ಲದೆ, ಆ ಕುರಿತು ಅರ್ಜಿಯನ್ನು ವಜಾಗೊಳಿಸಿತು.
2011ನೇ ಸಾಲಿನ ನೇಮಕಾತಿಯನ್ನು ಹೈಕೋರ್ಟ್ ಈ ಹಿಂದೆ ರದ್ದುಪಡಿಸಿದ ಎಂಬ ಹಿನ್ನೆಲೆಯಲ್ಲಿ ಇಡೀ ಕಾಯ್ದೆಯನ್ನು ಅಸಂವಿಧಾನಿಕ ಎನ್ನಲಾಗದು. ಕಾಯ್ದೆಯಲ್ಲಿ ಯಾವ ನಿಯಮಗಳು ಅಸಾಂವಿಧಾನಿಕ ಎಂಬುದನ್ನು ಅರ್ಜಿದಾರರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.