ಪ್ರಪಂಚಾದ್ಯಂತ ಕೊರೋನಾ ರೂಪಾಂತರಿ ತಳಿ ಹರಡುತ್ತಿದೆ. ಚೀನಾ, ಯೂರೋಪ್ ನಂತರ ಭಾರತದ ಹಲವು ಕಡೆ ಕರೊನಾ ಸೋಂಕು ಹೆಚ್ಚಳದ ಜೊತೆಗೆ ಹೊಸ ರೂಪಾಂತರಿ ವೈರಸ್ ಪತ್ತೆಯಾಗುತ್ತಿದೆ. ನಾಲ್ಕನೇ ಅಲೆಯ ಆತಂಕವನ್ನು ಹೆಚ್ಚಿಸಿದೆ.
ನಾಲ್ಕನೇ ಅಲೆಯ ಸುಳಿವು ಸಿಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳಿಗೆ ಮುಂದಾಗಿದೆ.
ಎರಡು ಡೋಸ್ ಲಸಿಕಾಕರಣ ಪ್ರಕ್ರಿಯೆಯ ನಂತರ ಭಾರತದಲ್ಲಿ ಕೊರೋನಾ ತೀವ್ರತೆ ಕಡಿಮೆಯಾಗಿತ್ತು.ಪ್ರಸ್ತುತ ಸಂದರ್ಭದಲ್ಲಿ ಬೂಸ್ಟರ್ ಡೋಸ್ ಲಸಿಕೀಕರಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ನಾಲ್ಕನೇ ಅಲೆ ತಡೆಯಲು ಸರ್ಕಾರ ತೀರ್ಮಾನಿಸಿದೆ.
ಮಾಸ್ಕ್ ಬಳಕೆ ಹಾಗೂ ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವುದನ್ನು ಮರೆಯದಿರುವಂತೆ ಜನರಲ್ಲಿ ಮನವಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ದೇಶದ ಹಲವು ಕಡೆ ಸೋಂಕು ಪ್ರಕರಣ ಹೆಚ್ಚುತ್ತಿರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ತುರ್ತು ಸಭೆ ನಡೆಸಿದ್ದಾರೆ.
ಈ ಸಭೆಯಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ನಿರ್ಧಾರಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಒಪ್ಪಿಗೆ ಪಡೆದ ನಂತರ ತ್ವರಿತವಾಗಿ ಜಾರಿಗೊಳಿಸಬೇಕು. ಮುಂಬೈನಲ್ಲಿ ಮಾಸ್ಕ್ ಕಡ್ಡಾಯ ಕೈಬಿಡಲಾಗಿದೆ. ಆದರೆ ರಾಜ್ಯದಲ್ಲಿ ಅಂತಹ ನಿರ್ಧಾರ ಕೈಗೊಳ್ಳದಿದ್ದರೂ ಕೂಡ ರಾಜ್ಯದಲ್ಲಿ ಮಾಸ್ಕ್ ಬಳಕೆ ಕಡಿಮೆಯಾಗಿದೆ.
ಜೂನ್-ಜುಲೈ ತಿಂಗಳ ಹೊತ್ತಿಗೆ ನಾಲ್ಕನೇ ಅಲೆ ಪ್ರವೇಶದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕ, ಇತರರ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಮಾಸ್ಕ್ ಬಳಕೆ ಮುಂದುವರಿಸಬೇಕು ಎಂದು ಡಾ.ಕೆ.ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.