ಕೊರೋನಾ ಕಾಲದಲ್ಲಿ ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆ ಹೆಚ್ಚಿಸಬಾರದು ಎನ್ನುವ ಪ್ರಧಾನಿ ನರೇಂದ್ರ ಮೋದಿ ಸಲಹೆ ಮೇರೆಗೆ, ಪ್ರಸ್ತುತ ಸಾಲಿನ ಬಜೆಟ್ ನಲ್ಲಿ ತೆರಿಗೆ ಏರಿಕೆ ಮಾಡಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
ಹಣಕಾಸು ಸಚಿವಾಲಯದ ಅಧಿಕಾರಿಗಳ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾ ಡುತ್ತಿದ್ದರು. ” ಕೊರೋನಾ ಕಾಲದಲ್ಲಿ ಸರ್ಕಾರವು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಇದರ ಹೊರತಾಗಿಯೂ ಜನರಿಗೆ ತೆರಿಗೆ ವಿಧಿಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಸಣ್ಣ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಿಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ರಿಸರ್ವ್ ಬ್ಯಾಂಕ್ ಮೂಲಕ ಚಲಾವಣೆಯಲ್ಲಿ ಇರುವುದನ್ನು ಮಾತ್ರ ಕರೆನ್ಸಿ ಎಂದು ಪರಿಗಣಿಸುತ್ತೇವೆ. ಅದು ಕ್ರಿಪ್ಟೋ ಆದರೂ ಸರಿ ಇನ್ಯಾವುದೇ ರೂಪವಾದರೂ ಸರಿ. ಹೀಗಾಗಿ ವೈಯಕ್ತಿಕ ಅಥವಾ ಬ್ಯಾಂಕಿಂಗ್ ವ್ಯವಸ್ಥೆಗಿಂತ ಹೊರಗಡೆ ಸೃಷ್ಟಿಯಾಗಿರುವ ವ್ಯವಹಾರವನ್ನು ಕರೆನ್ಸಿ ಎಂದು ಕರೆಯುವುದಿಲ್ಲ. ಆದ್ದರಿಂದ ಕ್ರಿಪ್ಟೋಕರೆನ್ಸಿ ವರ್ಗಾವಣೆಗಳ ಆದಾಯದ ಮೇಲೆ ಗಳಿಸುವ ಆದಾಯದ ಮೇಲಿನ ತೆರಿಗೆಯನ್ನು ಕರೆನ್ಸಿ ಮೇಲಿನ ತೆರಿಗೆ ಇಂದು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಆರ್ಥಿಕ ವ್ಯವಸ್ಥೆಯ ಚೇತರಿಕೆಗೆ ಈ ಬಜೆಟ್ ಸಹಕಾರಿಯಾಗಲಿದೆ. ಈ ಬಜೆಟ್ ಎಲ್ಲರಿಗೂ ನೆರವು ನೀಡಲಿದೆ. ಅದರಲ್ಲೂ ಬಡವರು ಮತ್ತು ಸಮಾಜದ ಹಿಂದುಳಿದ ವರ್ಗಕ್ಕೆ ಅನುಕೂಲಕರವಾಗಲಿದೆ. ಹೆಚ್ಚು ಹೂಡಿಕೆ, ಮೂಲಸೌಕರ್ಯಗಳ ವೃದ್ಧಿ ಮೂಲಕ ಹೆಚ್ಚು ಅಭಿವೃದ್ಧಿ ಸಾಧಿಸುವುದೇ ಲೆಕ್ಕಪತ್ರದ ಗುರಿಯಾಗಿದೆ ಎಂದು ವಿತ್ತ ಸಚವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.