ಓಮಿಕ್ರಾನ್ ರೂಪಾಂತರಿ ಭಾರತಕ್ಕೆ ಕಾಲಿಟ್ಟ ಬೆನ್ನಲ್ಲೇ ಜನರು ಆತಂಕಕ್ಕೀಡಾಗಿದ್ದಾರೆ. ಜನರ ಮನಸ್ಸಿನಲ್ಲಿರುವ ಗೊಂದಲಗಳನ್ನು ಪರಿಹರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಓಮಿಕ್ರಾನ್ ಗೊಂದಲಗಳಿಗೆ ಪ್ರಶ್ನೋತ್ತರ ರೂಪದಲ್ಲಿ ಉತ್ತರಿಸುವ ಪ್ರಯತ್ನ ಮಾಡಿದೆ.
ಲಸಿಕೆ ಪರಿಣಾಮಕಾರಿಯೇ?
ಇದುವರೆಗೆ ಬಳಸಲಾಗುತ್ತಿರುವ ಯಾವ ಲಸಿಕೆಯು ರೂಪಾಂತರಿಗಳ ವಿರುದ್ಧ ಪರಿಣಾಮಕಾರಿ ಅಲ್ಲ ಎಂಬುದು ದೃಢಪಟ್ಟಿಲ್ಲ. ಹೊಸ ರೂಪಾಂತರಿಗಳು ಲಸಿಕೆಯ ಸಾಮರ್ಥ್ಯ ಕುಂಠಿತಗೊಳಿಸಬಹುದು ಹೊರತು, ನಿಷ್ಕ್ರಿಯಗೊಳಿಸುವುದಿಲ್ಲ. ಆದ್ದರಿಂದ ಭಾರತದಲ್ಲಿಯೂ ಲಸಿಕೆಯ ಪರಿಣಾಮಕಾರಿತ್ವದ ಕುರಿತು ಸಂದೇಹ ಬೇಡ.
ಓಮಿಕ್ರಾನ್ ವಿರುದ್ಧ ನಾವೆಷ್ಟು ಜಾಗೃತರಾಗಿರಬೇಕು?
ಇದು ಸಹ ರೂಪಾಂತರಿಯೇ ಆಗಿರುವುದರಿಂದ ಹೆಚ್ಚಿನ ಕ್ರಮಗಳ ಅಗತ್ಯವಿಲ್ಲ. ಲಸಿಕೆ ಪಡೆಯುವುದು, ಅನವಶ್ಯಕವಾಗಿ ಮನೆಯಿಂದ ಹೊರಗೆ ಬರದಿರುವುದು, ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಆಗಾಗ ಕೈ ತೊಳೆಯುವುದು, ಜನ ಸಂದಣಿಯ ಸಮಾರಂಭಗಳಿಗೆ ತೆರಳದಿರುವುದು, ಪೌಷ್ಟಿಕಾಂಶಯುತ ಆಹಾರ ಸೇವನೆ- ಇವಿಷ್ಟನ್ನು ಪಾಲಿಸಿದರೆ ಸಾಕು.
ರೂಪಾಂತರಿ ಅಪಾಯಕಾರಿಯೇ?
ಸಾರ್ಸ್ -ಸಿಒವಿ -2ನ ಹಲವು ರೂಪಾಂತರಿಗಳಂತೆ ಓಮಿಕ್ರಾನ್ ಸಹ ರೂಪಾಂತರಿ ಅಷ್ಟೇ. ಇದಕ್ಕೆ ಬಿ.1.1.529 ಎಂದು ಕರೆಯಲಾಗಿದೆ. ಗ್ರೀನ್ ಅಲ್ಫಾ ಬೆಟ್ ಗಳಾದ ಅಲ್ಪಾ, ಬೀಟಾ, ಡೆಲ್ಟಾದಂತೆ ಇದಕ್ಕೆ ಓಮಿಕ್ರಾನ್ ನ ಮೂವತ್ತಕ್ಕೂ ಅಧಿಕ ರೂಪಾಂತರಿಗಳು ಮನುಷ್ಯನ ದೇಹದ ರೋಗನಿರೋಧಕ ಶಕ್ತಿಯನ್ನು ಕುಂದಿಸುವ ಶಕ್ತಿ ಹೊಂದಿದೆ. ಆದರೆ ಹೊಸ ರೂಪಾಂತರಿ ಮಾರಣಾಂತಿಕ ಎಂಬುದು ಇದುವರೆಗೆ ಸಾಬೀತಾಗಿಲ್ಲ. ಹಾಗಾಗಿ ಭೀತಿಗೊಳಗಾಗುವ ಅವಶ್ಯಕತೆ ಇಲ್ಲ.
ಇದು ಮೂರನೇ ಅಲೆ ಆರಂಭವೇ?
ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್ 24ರಂದು ಪತ್ತೆಯಾದ ಸೋಂಕು ಹತ್ತೇ ದಿನದಲ್ಲಿ ಮೂವತ್ತಕ್ಕೂ ಅಧಿಕ ದೇಶಗಳಿಗೆ ಹಬ್ಬಿದೆ ಯಾದರೂ, ಇದು ಮಾರಣಾಂತಿಕವೇ ಎಂಬುದು ದೃಢಪಟ್ಟಿಲ್ಲ. ಅಲ್ಲದೇ ಸಾಮೂಹಿಕವಾಗಿಯೂ ಹರಡುತ್ತಿಲ್ಲ. ದೇಶದಲ್ಲಂತೂ ನಿತ್ಯ ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿಯೇ ಇದೆ. ಹಾಗಾಗಿ ದೇಶದಲ್ಲಿ ಇದು ಮೂರನೇ ಅಲೆಗೆ ಕಾರಣವಾಗುತ್ತದೆ ಎಂಬ ಆತಂಕ ಬೇಕಿಲ್ಲ.
ಸುಲಭವಾಗಿ ಪತ್ತೆ ಸಾಧ್ಯವೇ?
ಬಹುತೇಕ ರೂಪಾಂತರಿಗಳನ್ನು ಆರ್ ಟಿಪಿಸಿಆರ್ ತಪಾಸಣೆಯಿಂದ ಪತ್ತೆ ಹಚ್ಚಬಹುದಾಗಿದೆ. ವೈರಾಣು ಹರಡುವಿಕೆಯ ತೀವ್ರತೆ, ಸೋಂಕಿನ ಪತ್ತೆ ಸೇರಿ ಹಲವು ವಿಧದಲ್ಲಿ ಪತ್ತೆಹಚ್ಚಬಹುದು. ಸದ್ಯ , ಓಮಿಕ್ರಾನ್ ನ ವೈರಾಣು ಹರಡುವಿಕೆಯ ತೀವ್ರತೆ ಹೆಚ್ಚಿಲ್ಲದ ಕಾರಣ ಜಿನೋಮ್ ಸೀಕ್ವೆನ್ಸಿಂಗ್ ಮೊರೆ ಹೋಗಲಾಗುತ್ತಿದೆ. ಹಾಗೊಂದು ವೇಳೆ ಹೊಸ ರೂಪಾಂತರಿಯ ಪ್ರಸರಣ ಹೆಚ್ಚಾದರೆ, ಅದರಲ್ಲೂ ಆರ್ ಟಿ- ಪಿಸಿಆರ್ ಪರೀಕ್ಷೆ ಮೂಲಕವೇ ಪತ್ತೆ ಹಚ್ಚಬಹುದಾಗಿದೆ.
ಡಬ್ಲ್ಯೂ ಎಚ್ ಒ ಹೇಳಿದ್ದೆನು?
ಹೊಸ ರೂಪಾಂತರಿಯು ವೇಗವಾಗಿ ಹರಡುವ, ಮನುಷ್ಯನ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಂದಿಸುವ ಸಾಂಕ್ರಾಮಿಕವಾಗಿದೆ. ಇದುವರೆಗೆ ಯಾವ ದೇಶದಲ್ಲಿಯೂ ರೂಪಾಂತರಿ ವೈರಾಣುವಿನಿಂದ ಸಾವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.