ಮಾರ್ಗ ಸಮೀಕ್ಷೆ ನಡೆದು ಶತಮಾನ ಕಳೆದರೂ ತಾಳಗುಪ್ಪ ಭಟ್ಕಳ ರೈಲುಮಾರ್ಗ ನಿರ್ಮಾಣವಾಗದಿರುವುದು ಮಲೆನಾಡು ಭಾಗದ ದೌರ್ಭಾಗ್ಯ ಎಂದು ಕರ್ನಾಟಕ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಗೂರ್ಲಕೆರೆ ಹೇಳಿದರು.
ಅವರು ತಾಳಗುಪ್ಪಕ್ಕೆ ರೈಲು ಬಂದ 80 ವರ್ಷದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು. ಸರ್ ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿ, ಮೈಸೂರು ಒಡೆಯರ ಅಭಿವೃದ್ದಿ ಪರ ಆಡಳಿತದ ಫಲವಾಗಿ ಶರಾವತಿ ಜಲವಿದ್ಯುದೋಜನೆಯ ಸಲುವಾಗಿ ನಿರ್ಮಾಣಗೊಂಡ ಶಿವಮೊಗ್ಗಾ ರೈಲು ಮಾರ್ಗ ೮೦ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದೆ. ಕಾಡು, ಸೂರ್ಯರಶ್ಮಿ ನೆಲಕಾಣದಂತೆ ಸುರಿಯುತ್ತಿದ್ದ ಮಳೆ, ಮಲೇರಿಯಾ ಮೊದಲಾದ ಹಲವು ವೈರುದ್ದಗಳಿಂದ ಹೊರ ಜಗತ್ತಿಗೆ ಭಯಮೂಡಿಸುತ್ತಿದ್ದ ಮಲೆನಾಡಿನ ಅಭಿವೃದ್ಧಿಗೆ ಕಾರಣವಾಗಿದೆ.ಆದರೆ, ಸ್ವಾತಂತಾನಂತರದ ಸರಕಾರಗಳ ಅವಗಣನೆಯಿಂದ ರೈಲುಮಾರ್ಗದ ವಿಸ್ತರಣೆಯು ಮರೀಚಿಕೆಯಾಗಿದೆ” ಎಂದರು. ತಾಳಗುಪ್ಪ ಕೊಂಕಣ ರೈಲ್ವೆ ಸಂಪರ್ಕ ಮಾರ್ಗ ನಿರ್ಮಾಣಗೊಳ್ಳಲು ಜನ ಹೋರಾಟ ನಡೆಯಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಗಣಪತಿ ಹೆಗಡೆ ಮೂಗೀಮನೆ ಮಾತನಾಡಿ, ಎಂಬತ್ತು ವರ್ಷದ ಹಿಂದೆ ತಾಳಗುಪ್ಪಕ್ಕೆ ರೈಲು ಲಿಂಗನಮಕ್ಕಿ ಆಣೆಕಟ್ಟಿನ ಕಾಮಗಾರಿಯ ಜತೆ ಸಾರ್ವಜನಿಕರಿಗೆ ಅನುಕೂಲವಾಯಿತು, ಇಂದೂ ಕೂಡ ಶಿವಮೊಗ್ಗ ದಿಂದ 30 ರೂಪಾಯಿಗಳಿಗೆ ಜನರನ್ನು ಕರೆದುಕೊಂಡು ಹೋಗುತ್ತಿರುವ ಬಡವರ ಪರ ಸಾರಿಗೆ ವ್ಯವಸ್ಥೆ ಎಂದರೆ ರೈಲು, ಇದನ್ನ ಉಳಿಸಿಕೊಳ್ಳಲು ಹಲವಾರು ರೀತಿಯ ಹೋರಾಟಗಳು ತಾಳಗುಪ್ಪದಲ್ಲಿ ನಡೆದಿದೆ. ಸಾಗರದ ಮಹನೀಯರುಗಳು ಹೋರಾಟಕ್ಕೆ ಬೆಂಬಲ ನೀಡಿದ್ದರು.ಇನ್ನು ಮುಂದೆ ಕೊಂಕಣ ರೈಲು ಮಾರ್ಗಕ್ಕೆ ಸೇರಿಸಲು ಮತ್ತೆ ಹೋರಾಟದ ಅಗತ್ಯ ಇದೆ ಎಂದರು.
ರೈತರು ರೈಲಿಗೆಪೂಜೆ ಸಲ್ಲಿಸಿ ಆರತಿ ಬೆಳಗಿದರು.ಸಿಹಿ ಹಂಚಿ ಸಂಭ್ರಮಿಸಿದರು.ಕಾರ್ಯಕ್ರಮದಲ್ಲಿ, ಗ್ರಾಪಂ ಉಪಾಧ್ಯಕ್ಷ ಲಕ್ಷ್ಮೀನಾರಾಯಣ, ಸದಸ್ಯ ಉದಯ ಗೌಡ್ರು, ಮೆಡಿಕಲ್ ರಾಮಣ್ಣ, ನಾಗರಾಜ, ಆಟೋಚಾಲಕರ ಸಂಘದ ಅಧ್ಯಕ್ಷ ಮಾದೇವ, ಅಸಳ್ಳೆ ಚಂದ್ರು, ಗಣೇಶ ಮರತ್ತೂರು, ಪಾಂಡು,ಹೋಟೆಲ್ ಗುರು, ಗಣಪತಿ ಹೆಗಡೆ. ಇತರರು ಹಾಜರಿದ್ದರು.