ಶಿಕ್ಷಣಕ್ಕಾಗಿ ಹೋರಾಡಿದ ಮಲಾಲ ಯೂಸುಫ್ ಝೂಯ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನೊಬೆಲ್ ಶಾಂತಿ ಪ್ರಸ್ತುತ ಸಾಮಾಜಿಕ ಹೋರಾಟಗಾರ್ತಿ ಮಲಾಲ ಅವರು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಉನ್ನತಾಧಿಕಾರಿ ಅಸೆರ್ ಮಲ್ಲಿಕ್ ಅವರನ್ನು ವಿವಾಹವಾಗಿದ್ದಾರೆ.
ಜೂನ್ ತಿಂಗಳ ಮ್ಯಾಗಜಿನ್ ಒಂದಕ್ಕೆ ಸಂದರ್ಶನ ನೀಡಿದ ಮಲಾಲ ಅವರು “ನಾನು ಜೀವನದಲ್ಲಿ ಮದುವೆ ಆಗುವ ಸಾಧ್ಯತೆ ಕಡಿಮೆ. ಜನ ಏಕೆ ಮದುವೆಯಾಗುತ್ತಾರೋ ಗೊತ್ತಿಲ್ಲ. ಜೀವನ ಪಯಣದಲ್ಲಿ ಒಬ್ಬ ವ್ಯಕ್ತಿ ಬೇಕೆಂದರೆ ಏಕೆ ಮದುವೆಯಾಗಬೇಕು? ಏಕೆ ವಿವಾಹ ನೋಂದಣಿ ಪತ್ರಗಳ ಮೇಲೆ ಸಹಿ ಹಾಕಬೇಕು?, ಮದುವೆಯಾಗದೆ ಇಬ್ಬರು ಒಟ್ಟಿಗೆ ಇರಲು ಸಾಧ್ಯವಿಲ್ಲವೇ” ಎಂದು ಮದುವೆ ಕುರಿತು ಮಲಾಲ ಹೇಳಿದ್ದರು. ಇವರ ಅಸಮಾಧಾನ ವ್ಯಕ್ತಪಡಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಆದರೆ, ಅದೇ ಮಲಾಲ ಈಗ ತಮ್ಮ ಗೆಳೆಯನನ್ನು ಮದುವೆಯಾಗುತ್ತಿದ್ದಾರೆ.
ಬ್ರಿಟನ್ ಬರ್ಮಿಂಗ್ ಹ್ಯಾಮ್ ನಲ್ಲಿರುವ ತಮ್ಮ ನಿವಾಸದಲ್ಲಿ ಸರಳ ವಿವಾಹವಾಗಿದ್ದಾರೆ. ತಮ್ಮ ಮದುವೆ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
‘ಇದು ನನ್ನ ಜೀವನದ ಅತ್ಯಮೂಲ್ಯ ದಿನ. ನಾನು ಹಾಗೂ ಅಸೆರ್ ಮಲ್ಲಿಕ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇವೆ. ಬರ್ಮಿಂಗ್ಹ್ಯಾಮ್ ನಲ್ಲಿರುವ ನನ್ನ ನಿವಾಸದಲ್ಲಿ ಕುಟುಂಬಸ್ಥರ ಆಶೀರ್ವಾದದೊಂದಿಗೆ ಮದುವೆಯಾಗಿದ್ದೇವೆ. ನಿಮ್ಮ ಹಾರೈಕೆಗಳು ಇರಲಿ’ ಎಂದು ಮಲಾಲ ತಿಳಿಸಿದ್ದಾರೆ.