ದೇಶದಲ್ಲಿ ಸಾಮಾನ್ಯ ಪಟಾಕಿಗಳನ್ನು ನಿಷೇಧಿಸಿ, ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ಸುಪ್ರೀಂಕೋರ್ಟ್ 2018ರಲ್ಲಿ ಆದೇಶ ನೀಡಿತ್ತು. ಆದರೆ ಈ ಆದೇಶ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ ಎಂದು ಸುಪ್ರೀಂಕೋರ್ಟ್ ಕಳೆದ ವಾರವಷ್ಟೇ ಅಸಮಾಧಾನ ವ್ಯಕ್ತಪಡಿಸಿತ್ತು. ತನ್ನ ಆದೇಶವನ್ನು ಸಂಪೂರ್ಣವಾಗಿ ಮತ್ತು ಯಥಾವತ್ತಾಗಿ ಜಾರಿಗೆ ತರುವ ಪ್ರಯತ್ನಗಳು ಸರ್ಕಾರಗಳು ಮಾಡಬೇಕು ಎಂದು ಸೂಚಿಸಿದೆ.
ಹಸಿರು ಪಟಾಕಿ ಎಂಬುವುದು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ ಪರಿಕಲ್ಪನೆ. ಪರಿಸರ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಹಸಿರು ಪಟಾಕಿ ಬಳಕೆಗೆ ಅನುಮತಿ ನೀಡಲಾಗಿದೆ.
ಹಸಿರು ಪಟಾಕಿಗಳು ಪರಿಸರ ಮತ್ತು ಮನುಷ್ಯನ ಆರೋಗ್ಯದ ಮೇಲೆ ಕಡಿಮೆ ಅಪಾಯ ಉಂಟು ಮಾಡುತ್ತವೆ. ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಸಾಂಪ್ರದಾಯಿಕ ಪಟಾಕಿಗಳನ್ನು ಬಳಸುವ ಕಚ್ಚಾ ವಸ್ತುಗಳಿಗೆ ಬದಲಾಗಿ, ಪರ್ಯಾಯ ಕಚ್ಚಾವಸ್ತುಗಳಿಂದ ಇವುಗಳನ್ನು ತಯಾರಿಸಲಾಗುತ್ತದೆ. ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಶೇಕಡಾ 30ರಷ್ಟು ಕಡಿಮೆ ಮಾಲಿನ್ಯ ಉಂಟು ಮಾಡುತ್ತವೆ. ಬೇರಿಯಂ ನೈಟ್ರೇಟ್ ರಾಸಾಯನಿಕವು ಹೆಚ್ಚು ಹೊಗೆಹೊರಸೂಸುತ್ತದೆ. ಆದರೆ ಹಸಿರು ಪಟಾಕಿಗಳಿಗೆ ಬೇರೆಯ ನೈಟ್ರೇಟನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ ಅಥವಾ ಈ ರಾಸಾಯನಿಕ ಇಲ್ಲದೆ ಪಟಾಕಿ ತಯಾರಿಸುವುದರಿಂದ ಹೊರಸೂಸುವಿಕೆ ಇರುವುದಿಲ್ಲ ಎಂದು ಹೇಳುತ್ತಾರೆ.
ಎಲ್ಲಾ ಅನುಕೂಲಗಳು ಕಂಡುಬಂದರೂ, ಈ ಪಟಾಕಿಗಳು ಸಾಮಾನ್ಯ ಪಟಾಕಗಳಿಗಿಂತ ದುಬಾರಿಯಾಗಿವೆ. ಸರ್ಕಾರದಿಂದ ನೊಂದಣಿಯಾಗಿರುವ ಮಾರಾಟಗಾರರಿಂದ ಅಥವಾ ಆನ್ಲೈನ್ನಲ್ಲಿ ಹೆಸರು ಪಟಾಕಿ ಖರೀದಿಸಬಹುದು. ಮಾರುಕಟ್ಟೆಯಲ್ಲಿರುವ ಯಾವುದು ಹಸಿರು ಪಟಾಕಿ ಎಂದು ಗುರುತಿಸಲು ಜನರಿಗೆ ಅನುಕೂಲವಾಗಲಿ ಎಂದು ಪೊಟ್ಟಣಗಳ ಮೇಲೆ ಲೋಗೋ ಮುದ್ರಿತವಾಗಿರುತ್ತದೆ. ಜೊತೆಗೆ ಕ್ಯೂಆರ್ ಕೋಡ್ ಸಹ ಇದ್ದು, ಜನರು ಅವುಗಳನ್ನು ಸ್ಕ್ಯಾನ್ ಮಾಡಿ ಗುರುತಿಸಬಹುದು.
ಪರಿಸರ ಸ್ನೇಹಿ : ಹಸಿರು ಪಟಾಕಿ
Date: