National Science Day ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಿಸಿಕೊಂಡು, ವಿಜ್ಞಾನದ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಹೊಸ ಅನ್ವೇಷಣೆಗಳನ್ನು ಮಾಡಬೇಕು ಎಂದು ಡಿಡಿಪಿಐ ಮಂಜುನಾಥ್ ಹೇಳಿದರು.
ಅಬ್ಬಲಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಭಾರತೀಯ ವಿಜ್ಞಾನ ಸಂಸ್ಥೆ ಆವರಣ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ‘ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರ ಸಬಲೀಕರಣ. ಎಂದ ಶೀರ್ಷಿಕೆಯಡಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ 2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೈಜ್ಞಾನಿಕ ಮನೋಭಾವ, ಉತ್ತಮ ಕೌಶಲ್ಯ, ಹೊಸ ಕಲಿಕಾ ಅಭ್ಯಾಸ ಮತ್ತು ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಅನೇಕ ಚಟುವಟಿಕೆಗಳನ್ನು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕೈಗೊಳ್ಳುತ್ತಿದೆ.
ವಿಜ್ಞಾನಿಯಾದ ಸಿ.ವಿ.ರಾಮನ್ ಅವರ ರಾಮನ್ ಪರಿಣಾಮದ ಸಂಸ್ಮರಾಣರ್ಥವಾಗಿ ದೇಶದೆಲ್ಲೆಡೆ ಇಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ವಿಜ್ಞಾನದ ವಿದ್ಯಾರ್ಥಿಗಳು ಅಂತಹ ಮಹಾನೀಯರ ಆಲೋಚನೆಗಳು, ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಅನಾದಿ ಕಾಲದಿಂದಲೂ ಈ ಸಮಾಜದಲ್ಲಿ ಮೂಡನಂಭಿಕೆ ಆಚರಣೆಯಲ್ಲಿದ್ದು, ಇಂದಿಗೂ ಅದು ಮುಂದುವರೆದಿದೆ. ಅಂತಹ ಮೂಡನಂಭಿಕೆಯನ್ನು ನಮ್ಮ ವೈಜ್ಞಾನಿಕ ಆಲೋಚನೆಗಳಿಂದ ತೊಡೆದು ಹಾಕಿ ದೇಶವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದರು.
ವಿಜ್ಞಾನದ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಚಿಂತನೆ ಅತ್ಯವಶ್ಯಕ. ಇಂತಹ ಚಿಂತನೆಗಳಿಲ್ಲದೆ ವಿಜ್ಞಾನಿಯಾಗಲು ಸಾಧ್ಯವಿಲ್ಲ. ಪ್ರಶ್ನಿಸುವ ಮನೋಭಾವವನ್ನು ಬೆಳಸಿಕೊಳ್ಳಬೇಕು. ಈ ದಿಸೆಯಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡು ಈ ದೇಶಕ್ಕೆ ಕೊಡುಗೆ ನೀಡಬೇಕು ಎಂದರು.
National Science Day ಹೊಳೆಹೊನ್ನೂರಿನ ವಿವೇಕಾನಂದ ಪಿಯು ಕಾಲೇಜಿನ ಪ್ರಾಂಶುಪಾಲರಾದ ಎಸ್. ರಂಗನಾಥಯ್ಯ ಮಾತನಾಡಿ, ನಾವೆಲ್ಲಾ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇವೆ ಎಂದು ಕೊರಗದೆ, ಹೆಮ್ಮೆ ಪಡೆಬೇಕು. ಸರ್ಕಾರ ಈ ವ್ಯವಸ್ಥೆಯೊಳಗೆ ಯರ‍್ಯಾರಿಗೆ ಏನು ಬೇಕೋ ಅದನ್ನು ವ್ಯವಸ್ಥಿತವಾಗಿ ತಲುಪಿಸುತ್ತಿದೆ. ವಿದ್ಯಾರ್ಥಿಗಳು ಯಾವುದೇ ಕೀಳರಿಮೆ ಬೆಳೆಸಿಕೊಳ್ಳದೇ, ಸಾಧನೆಯತ್ತ ಗಮನ ಹರಿಸಬೇಕು. ವೈಜ್ಞಾನಿಕ ಚಿಂತನೆಯನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಬೇಕು. ಅದರಿಂದ ನಿಮ್ಮ ಜ್ಞಾನವೂ ವಿಸ್ತಾರಗೊಳ್ಳುತ್ತದೆ. ಜೊತೆಗೆ ಇನ್ನೊಬ್ಬರನ್ನು ಚಿಂತನೆಗೆ ಒಳಪಡಿಸಿದಂತಾಗುತ್ತದೆ. ಈ ಸಮಾಜದಲ್ಲಿ ಮೇಲು-ಕೀಳು, ಜಾತಿ, ಧರ್ಮ ಎಂಬ ಅನೇಕ ಕಟ್ಟಳೆಗಳು ಇವೆ. ಆದರೆ ಪ್ರಕೃತಿಯು ಎಲ್ಲರನ್ನೂ ಸಮಾನತೆಯಿಂದ ನೋಡುತ್ತದೆ. ಸಮಾನ ಸವಲತ್ತುಗಳನ್ನು ಬಳಸಿಕೊಳ್ಳೋಣ. ಪ್ರಕೃತಿಯ ಹಾದಿಯಲ್ಲೆ ನಡೆಯೊಣ ಎಂದರು. ನಂತರದ ಅಧಿವೇಶನದಲ್ಲಿ ಇವರು ರಾಮನ್ ಪರಿಣಾಮದ ಕುರಿತು ವಿವರಣೆ ನೀಡಿದರು.
ರಾಮಕೃಷ್ಣ ಆಶ್ರಮದ ವಿನಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಸ್ವಾಮಿ ವಿವೇಕಾನಂದರು ಚಿಕ್ಕ ವಯಸ್ಸಿನಲ್ಲೇ ಧೈರ್ಯವಂತ ಮತ್ತು ಎಲ್ಲವನ್ನು ಪ್ರಶ್ನಿಸುವ ಹುಡುಗನಾಗಿದ್ದರು.
ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳ ಮೊದಲ ಲಕ್ಷಣ ಧೀರತನ ಮತ್ತು ಪ್ರಶ್ನೆ ಮಾಡುವ ಗುಣವಾಗಿದೆ. ನಾವೆಲ್ಲ ಸತ್ಯಕ್ಕಾಗಿ ಬದುಕಬೇಕು. ಮಾತು, ಕೃತಿ, ಆಲೋಚನೆ ಒಂದೇ ಆಗಿರಬೇಕು ಎಂದರು.
ಮುಗ್ದ ಮಕ್ಕಳೇ ನಿಜವಾದ ವಿಜ್ಞಾನಿಗಳು. ಮಕ್ಕಳು ಎಲ್ಲವನ್ನೂ ಪ್ರಶ್ನಿಸುತ್ತಾ ತಿಳಿದುಕೊಳ್ಳುತ್ತಾರೆ. ಹಾಗೆಯೇ ನಾವೂ ಕೂಡ ವ್ಯವಸ್ಥೆಯ ಬಗ್ಗೆ ಪ್ರಶ್ನಿಸಿ, ಇಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಬೇಕು. ದೇಶದಲ್ಲಿ ಹಲವಾರು ಸಮಸ್ಯೆಗಳಿಗೆ,. ಇದಕ್ಕೆ ಮುಖ್ಯ ಕಾರಣ ವಿದ್ಯಾವಂತರೇ ಆಗಿದ್ದಾರೆ. ಯಾಕೆಂದರೆ ಇವರು ಪ್ರಶ್ನೆ ಮಾಡುವುದಿಲ್ಲ. ಪ್ರಶ್ನೆ ಮಾಡದೇ ಸಮಸ್ಯೆಗಳು ಹೆಚ್ಚಿವೆ. ಆದ್ದರಿಂದ ನಾವೆಲ್ಲ ಧೈರ್ಯವಾಗಿ ಪ್ರಶ್ನಿಸಿ, ಪರಿಹರಿಸುವ ಗುಣ ಬೆಳೆಸಿಕೊಳ್ಳಬೇಕೆಂದರು.
ನಿಜವಾದ ವಿಜ್ಞಾನದ ವಿದ್ಯಾರ್ಥಿಗಳು ಧೈರ್ಯವಾಗಿ ಪ್ರಶ್ನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು ಲೌಕಿಕ ವಿದ್ಯೆ, ಅಲೌಕಿಕ ವಿದ್ಯೆ, ಆಧ್ಯಾತ್ಮಿಕ ವಿದ್ಯೆ ಬಗ್ಗೆ ತಿಳಿಸಿಕೊಟ್ಟರು. ವಿಜ್ಞಾನ ಕೊನೆಗೊಂಡಾಗ ಧರ್ಮ ಆರಂಭವಾಗುತ್ತದೆ. ತರ್ಕ ಕೊನೆಗೊಂಡಾಗ ನಂಬಿಕೆ ಹುಟ್ಟುತ್ತದೆ. ಅನಂತ ಶಕ್ತಿ, ಅನಂತ ಜ್ಞಾನ ಮತ್ತು ಅನಂತ ಸಾಧ್ಯತೆಗಳು ನಮ್ಮೊಳಗಿವೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದು ಈ ನಿಟ್ಟಿನಲ್ಲಿ ನಾವು ಸಾಗಬೇಕಿದೆ ಎಂದರು.
ಜಿ.ಪಂ ಮೌಲ್ಯಮಾಪನಾಧಿಕಾರಿ ಸೈಯದ್ ರೆಹಮತ್ ಪ್ಯಾರಿ ಮಾತನಾಡಿ, ಎಲ್ಲ ಮಕ್ಕಳಲ್ಲಿ ಒಂದೊAದು ವಿಶೇಷ ಪ್ರತಿಭೆ ಮತ್ತು ಕೌಶಲ್ಯ ಅಡಗಿದೆ. ಶಾಲೆಯಲ್ಲಿ ಇಂದು ಮಕ್ಕಳು ಏರ್ಪಡಿಸಿರುವ ವೈಜ್ಞಾನಿಕ ವಸ್ತುಪ್ರದರ್ಶನ ಅದ್ಭುತವಾಗಿದೆ. ಸರ್ಕಾರಿ ಶಾಲಾ ಮಕ್ಕಳಲ್ಲಿ ಇಷ್ಟೊಂದು ಪ್ರತಿಭೆ ಅಡಗಿರುವುದು ಸಂತಸದ ವಿಷಯ. ಈ ಮಕ್ಕಳಿಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಚಿಂತಿಸಿ, ಧೈರ್ಯ ಮತ್ತು ಸ್ಥೆöÊರ್ಯದಿಂದ ಮುಂದೆ ಬರಬೇಕು ಎಂದ ಅವರು ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲೂ ಉತ್ತಮ ಕೊಡುಗೆ ನೀಡಬೇಕೆಂದರು.
ಗ್ರಾ.ಪA. ಅಧ್ಯಕ್ಷೆ ಭಾಗ್ಯ ಬಿ. ಹೊಸಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಹಾಗೂ ಇದೇ ಸಂದರ್ಭದಲ್ಲಿ ಸಿ.ವಿ.ರಾಮನ್ ಕುರಿತು ಏರ್ಪಡಿಸಲಾಗಿದ್ದ ಭಾಷಣ ಸ್ಪರ್ಧೆ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ವಿಜ್ಞಾನ ವಿಷಯ ಪರಿವೀಕ್ಷಕ ಅಸುಂತ ಸಿಕ್ವೇರಾ, ಪಿಡಿಓ ರಾಜಪ್ಪ, ಮುಖ್ಯ ಶಿಕ್ಷಕರಾದ ಮುರಳೀಧರ್, ದೈಹಿಕ ಶಿಕ್ಷಣ ಅಧಿಕಾರಿ ಪ್ರಕಾಶ್, ಎನ್‌ಆರ್‌ಡಿಎಂಎಸ್ ಯೋಜನಾ ಸಂಯೋಜಕ ಶಂಕರ್, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
National Science Day ವೈಜ್ಞಾನಿಕ ಚಿಂತನೆಯಿಂದ ಮೂಢ ನಂಬಿಕೆ ತೊಡೆದು ಹಾಕಿ-ಡಿಡಿಪಿಐ ಮಂಜುನಾಥ್
KUWJ Shivamogga ಶಿವಮೊಗ್ಗದ ಪತ್ರಕರ್ತರಾದ ಗಿರೀಶ್ ಉಮ್ರಾಯ್, ಶೃಂಗೇರಿ ಚಂದ್ರಶೇಖರ್ & ಕವಿತಾ ಅವರಿಗೆ ವಾರ್ಷಿಕ ದತ್ತಿ ಪ್ರಶಸ್ತಿ
KUWJ Shivamogga ವೃತ್ತಿ ಸೇವೆ, ಸಾಮಾಜಿಕ ಬದ್ಧತೆ ಮತ್ತು ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ನಗರದ ಹಿರಿಯ ಪತ್ರಕರ್ತರು, ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಚಂದ್ರಶೇಖರ್ ಶೃಂಗೇರಿಯವರಿಗೆ ಮಿಂಚು ಶ್ರೀನಿವಾಸ್ ಪ್ರಶಸ್ತಿ, ಹಿರಿಯ ಪತ್ರಕರ್ತ ಗಿರೀಶ್ ಉಮ್ರಾಯ್‌ರವರಿಗೆ ಎಸ್. ಹೆಚ್. ರಂಗಸ್ವಾಮಿ ಪ್ರಶಸ್ತಿ, ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ್ತಿ ಕವಿತಾರವರಿಗೆ ಗಿರಿಜಮ್ಮ, ರುದ್ರಪ್ಪ ತಾಳಿಕೋಟಿ ಪ್ರಶಸ್ತಿ ಪ್ರಕಟವಾಗಿದೆ.
ಕೊಪ್ಪಳದಲ್ಲಿ ಮಾ.09ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ತಿಳಿಸಿದ್ದಾರೆ. ಚಂದ್ರಶೇಖರ್ ಶೃಂಗೇರಿ
ಇವರು ಸ್ನಾತಕೋತ್ತರ ಪದವಿ ನಂತರ ಶಿವಮೊಗ್ಗದಲ್ಲಿ ಎರಡು ವರ್ಷಗಳ ಕಾಲ ಉಪನ್ಯಾಸಕ ವೃತ್ತಿ, ನಂತರ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದ್ದು, ಶಿವಮೊಗ್ಗದ ಸ್ಥಳೀಯ ದಿನ ಪತ್ರಿಕೆ (ಹಾಲಿ ದಾವಣಗೆರೆಯಿಂದ ಪ್ರಕಟ) ಮಲೆನಾಡುವಾಣಿ'ಗೆ ವರದಿಗಾರನಾಗಿ ಸೇರ್ಪಡೆಗೊಂಡವರು.ಅಲ್ಲಿಂದ ಶಿವಮೊಗ್ಗದ ಅತ್ಯಂತ ಹಳೆಯ ದಿನಪತ್ರಿಕೆಯಾದಎಚ್ಚರಿಕೆ’ ಸಂಜೆ ದಿನಪತ್ರಿಕೆ, ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಕನ್ನಡಜನ ಅಂತರಂಗ ಪತ್ರಿಕೆಯ ಶಿವಮೊಗ್ಗ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದವರು. ರವಿ ಬೆಳಗೆರೆರವರಹಾಯ್ ಬೆಂಗಳೂರು’ ಪತ್ರಿಕೆಯ ಮೈಸೂರು ಪ್ರಾಂತ್ಯದ ವರದಿಗಾರನಾಗಿಯೂ ಕಾರ್ಯನಿರ್ವಹಣೆ ಮಾಡಿರುವ ಇವರು, ಮಂಗಳೂರು ಮತ್ತು ಬೆಂಗಳೂರು ಆವೃತ್ತಿಗಳಲ್ಲಿ ಪ್ರಕಟವಾಗುತ್ತಿದ್ದ ಜನವಾಹಿನಿ' ರಾಜ್ಯಮಟ್ಟದ ಪತ್ರಿಕೆಗೆ ಹಾಸನ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರನಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರವಿಜಯಕರ್ನಾಟಕ’ ದಿನಪತ್ರಿಕೆಯ ಹಾಸನ ಜಿಲ್ಲಾ ವರದಿಗಾರನಾಗಿ, ರಾಜ್ಯದ ನಾಲ್ಕು ಆವೃತ್ತಿಗಳಲ್ಲಿ ಪ್ರಕಟವಾಗುತ್ತಿದ್ದ ಕರುನಾಡು ಸಂಜೆ' ದಿನಪತ್ರಿಕೆಯ ದಾವಣಗೆರೆ ಆವೃತ್ತಿಯ ಮುಖ್ಯಸ್ಥನಾಗಿ ಕಾರ್ಯನಿರ್ವಹಣೆ ಮಾಡಿರುವ ಇವರು, ವಿಜಯಕರ್ನಾಟಕ ದಿನ ಪತ್ರಿಕೆಯ ಸಹ ಪತ್ರಿಕೆಯಾಗಿ ಆರಂಭವಾದಉಷಾ ಕಿರಣ’ದ ಶಿವಮೊಗ್ಗದ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ, ನಂತರ ಶಿವಮೊಗ್ಗದ ಜನಹೋರಾಟ' ಪತ್ರಿಕೆಯಲ್ಲಿ ಸಹ ಸಂಪಾದಕನಾಗಿ, ವಿಜಯ ಸಂಕೇಶ್ವರರ ನೇತೃತ್ವದಲ್ಲಿ ಆರಂಭವಾದವಿಜಯವಾಣಿ’ ದಿನಪತ್ರಿಕೆಗೆ 2013 ರಲ್ಲಿ ಸೇರ್ಪಡೆಗೊಂಡು, ಗಂಗಾವತಿ ಆವೃತ್ತಿಯ ಸ್ಥಾನಿಕ ಸಂಪಾದಕನಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ.ವಿಜಯ ಕರ್ನಾಟಕ 'ದಿನಪತ್ರಿಕೆಗೆ ಸೇರ್ಪಡೆಯಾಗಿ ಶಿವಮೊಗ್ಗ ಆವೃತ್ತಿಯ ಸ್ಥಾನಿಕ ಸಂಪಾದಕನಾಗಿ ಮೂರು ವರ್ಷ ಕಾರ್ಯನಿರ್ವಹಣೆ ಮಾಡಿ ಇದೀಗವಿಜಯವಾಣಿ’ ದಿನಪತ್ರಿಕೆಯ ಶಿವಮೊಗ್ಗ ಆವೃತ್ತಿಯ ಸ್ಥಾನಿಕ ಸಂಪಾದಕ ಹಾಗೂ ಬ್ಯುರೋ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸುದೀರ್ಘವಾಗಿ 28 ವರ್ಷಗಳ ಕಾಲ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಮೆ ಇವರದ್ದು.
ಗಿರೀಶ್ ಉಮ್ರಾಯ್
ಮೈಸೂರು ವಿಶ್ವವಿದ್ಯಾಲಯದಿಂದ ಬಿಎ ಪದವೀಧರರಾಗಿರುವ ಹಿರಿಯ ಪತ್ರಕರ್ತ ಗಿರೀಶ್ ಉಮ್ರಾಯ್‌ರವರು ಭಂಡಿಗಡಿ ನಂಜುಂಡಪ್ಪರವರ ವಾಯ್ಸ್ ಶಿವಮೊಗ್ಗ ಪತ್ರಿಕೆಯಿಂದ ವೃತ್ತಿಯನ್ನು ಆರಂಭಿಸಿದವರು.
2009 ರಿಂದ 2014ರವರೆಗೆ ನಾವಿಕ ಪತ್ರಿಕೆಯಲ್ಲಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿರುವ ಇವರು,2014 ರಿಂದ 2019ರವರೆಗೆ ನಾವಿಕ ಪತ್ರಿಕೆಯ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 2020ರಿಂದ ಹವ್ಯಾಸಿ ಪತ್ರಕರ್ತರಾಗಿ ನಗರದ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿವಮೊಗ್ಗೆಯಲ್ಲಿ ಸ್ಥಾಪಿತವಾಗಿರುವ ಜಿಲ್ಲೆಯ ಪತ್ರಕರ್ತರ ಕೇಂದ್ರವಾದ ಪತ್ರಿಕಾ ಭವನದ ನಿವೇಶನ ಮಂಜೂರಾತಿ, ನಿರ್ಮಾಣ ಹಾಗೂ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸಿದವರು.
ಸುದ್ದಿ ಸಂಗ್ರಹ ಹಾಗೂ ವಿಶ್ಲೇಷಣೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಇವರು, ಪ್ರತೀ ಸುದ್ದಿಯ -ಲೋಅಪ್ ಮಾಡಿ ಓದುಗರ ಮುಂದೆ ವಾಸ್ತವವನ್ನು ತೆರೆದಿಡುವಲ್ಲಿ ನಿಷ್ಣಾತರು. ಕವಿತಾ
ಅಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ಕವಿತಾರವರು, ಪ್ರಸ್ತುತ ಸಂಯುಕ್ತ ಕರ್ನಾಟಕ ಪತ್ರಿಕೆಯ ಪ್ರಧಾನ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
1999 ರಿಂದ ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕವಿತಾ, 2007ರ ರವರೆಗೆ ಕನ್ನಡ ಪ್ರಭ – ಇಂಡಿಯನ್ ಎಕ್ಸ್ಪ್ರಸ್ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2007 ರಿಂದ 2010ರವರೆಗೆ ಸಂಯುಕ್ತ ಕರ್ನಾಟಕ ಪತ್ರಿಕೆಯ ದಾವಣಗೆರೆ ಆವೃತ್ತಿಯಲ್ಲಿ ಕೆಲಸ ಮಾಡಿರುವ ಇವರು, 2010ರಿಂದ ಶಿವಮೊಗ್ಗೆಯಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕರ್ತವ್ಯದಲ್ಲಿದ್ದಾರೆ.
ಪತ್ರಿಕಾ ಕ್ಷೇತ್ರದ ಜೊತೆಗೆ ಪುಷ್ಪೋದ್ಯಮದಲ್ಲಿಯೂ ಆಸಕ್ತಿ ವಹಿಸಿರುವ ಇವರು, ಅದೇ ಸೂಕ್ಷ್ಮತೆ ಹಾಗೂ ಸಂವೇದನೆಯನ್ನು ತಮ್ಮ ವರದಿಗಾರಿಕೆಯಲ್ಲಿಯೂ ಮೆರೆಯುತ್ತಿದ್ದಾರೆ.
ಉಳಿದ ಪ್ರಶಸ್ತಿ ಪುರಸ್ಕೃತರ ವಿವರ ಇಂತಿದೆ
ಸುಬ್ಬು ಹೊಲೆಯಾರ್ (ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ), ರಾಘವೇಂದ್ರ ಗಣಪತಿ, ವಿಜಯವಾಣಿ (ಡಿ.ವಿ.ಜಿ.ಪ್ರಶಸ್ತಿ), ಯು.ಜಿ.ಭಟ್, ಉದಯವಾಣಿ, ಹೊನ್ನಾವರ ( ಎಚ್. ಎಸ್. ದೊರೆಸ್ವಾಮಿ ಪ್ರಶಸ್ತಿ), ಅನು ಶಾಂತರಾಜು, ಹಿರಿಯ ಪೋಟೋ ಜರ್ನಲಿಸ್ಟ್, ತುಮಕೂರು (ಎಸ್.ವಿ. ಜಯಶೀಲರಾವ್ ಪ್ರಶಸ್ತಿ), ಸುಭಾಷ್ ಹೂಗಾರ, ಹಿರಿಯ ಪತ್ರಕರ್ತರು (ಪಾಟೀಲ್ ಪುಟ್ಟಪ್ಪ(ಪಾಪು) ಪ್ರಶಸ್ತಿ), ಎಂ.ಆರ್.ಸತ್ಯನಾರಾಯಣ, ಮೈಸೂರು (ಗೊಮ್ಮಟ ಮಾಧ್ಯಮ ಪ್ರಶಸ್ತಿ), ಉಗಮ ಶ್ರೀನಿವಾಸ್, ಕನ್ನಡಪ್ರಭ (ಸಿ.ಆರ್.ಕೃಷ್ಣರಾವ್ ಪ್ರಶಸ್ತಿ), ಮಂಜುಶ್ರೀ ಎಂ ಕಡಕೊಳ, ಪ್ರಜಾವಾಣಿ (ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ), ಗಂಗಹನುಮಯ್ಯ, ಅಮೃತವಾಣಿ, ತುಮಕೂರು (ಬದರಿನಾಥ ಹೊಂಬಾಳೆ ಪ್ರಶಸ್ತಿ), ಡಾ.ಸಿದ್ಧನಗೌಡ ಪಾಟೀಲ್, ಸಂಪಾದಕರು, ಹೊಸತು (ಡಾ.ಎಂ.ಎಂ.ಕಲ್ಬುರ್ಗಿ ಪ್ರಶಸ್ತಿ), ಮು.ವೆಂಕಟೇಶಯ್ಯ, ಸಿಂಹ ಬೆಂಗಳೂರು (ಕಿಡಿಶೇಷಪ್ಪ ಪ್ರಶಸ್ತಿ), ಎಂ.ಕೆ.ಹೆಗಡೆ, ಹಿರಿಯ ಪತ್ರಕರ್ತರು, ಬೆಳಗಾವಿ (ರವಿ ಬೆಳಗೆರೆ ಪ್ರಶಸ್ತಿ), ಎಂ.ಯೂಸುಫ್ ಪಟೇಲ್, ಹಿರಿಯ ಪತ್ರಕರ್ತರು (ಪಿ.ಆರ್. ರಾಮಯ್ಯ ಸ್ಮಾರಕ ಪ್ರಶಸ್ತಿ), ಬಸವರಾಜ ಹೆಗ್ಗಡೆ, ಸಂಜೆ ಮಿತ್ರ, ಮಂಡ್ಯ (ಹೆಚ್.ಕೆ. ವೀರಣ್ಣಗೌಡ ಸ್ಮಾರಕ ಪ್ರಶಸ್ತಿ), ಕೆ.ಕೆ.ಬೋಪಣ್ಣ, ಆಂದೋಲನ, ಕೊಡಗು (ರಾಜಶೇಖರ ಕೋಟಿ ಪ್ರಶಸ್ತಿ), ಎಸ್.ಟಿ.ರವಿಕುಮಾರ್, ಸ್ಟಾರ್ ಆಪ್ ಮೈಸೂರು (ಪಿ.ರಾಮಯ್ಯ ಪ್ರಶಸ್ತಿ), ತಾ.ನಂ. ಕುಮಾರಸ್ವಾಮಿ, ಆನೆಕಲ್ (ಮಾ. ರಾಮಮೂರ್ತಿ ಸ್ಮಾರಕ ಪ್ರಶಸ್ತಿ), ಪ್ರಭುಲಿಂಗ ನಿಲೂರೆ, ವಿಜಯ ಕರ್ನಾಟಕ, ಕಲಬುರ್ಗಿ (ಮಹದೇವ ಪ್ರಕಾಶ್ ಪ್ರಶಸ್ತಿ), ಕೆ.ಬಿ.ಜಗದೀಶ್, ಸಂಜೆವಾಣಿ, ಕೋಲಾರ (ಎಂ.ನಾಗೇಂದ್ರ ರಾವ್ ಪ್ರಶಸ್ತಿ), ಗಣೇಶ್ ಕಾಸರಗೋಡು, ಹಿರಿಯ ಪತ್ರಕರ್ತರು (ಅಪ್ಪಾಜಿಗೌಡ (ಸಿನಿ)ಪ್ರಶಸ್ತಿ), ಎಂ.ಚಿರಂಜೀವಿ, ಹಿರಿಯ ಪತ್ರಕರ್ತರು, ಹಾವೇರಿ (ಮೂಡಣ, ಹಾವೇರಿ ಪ್ರಶಸ್ತಿ).
ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿಗಳು ರಂಗನಾಥ್ ಎಸ್. ಭಾರದ್ವಾಜ್- ಟಿವಿ -09, ರಮಾಕಾಂತ್-ಟಿವಿ – 05, ಶ್ರೀನಿವಾಸ್-ಬೆಂಗಳೂರು. ಬಿ.ಪಿಳ್ಳರಾಜು- ಬೆಂಗಳೂರು ಗ್ರಾಮಾಂತರ, ಬಾಸ್ಕರ ರೈ ಕಟ್ಟ-ಮಂಗಳೂರು, ಗುರುಶಾಂತ.ಎನ್. -ಬಳ್ಳಾರಿ, ಎಸ್.ಎಂ.ಮನೋಹರ-ಹೊಸಪೇಟೆ, ವಿಜಯನಗರ. ಸಿ.ಬಿ.ಸುಬೇದಾರ್- ನರಗುಂದ, ಗದಗರವರಿಗೆ ಪ್ರಕಟಿಸಲಾಗಿದೆ.
Karnataka Govt Urban Development ಹೊರಗುತ್ತಿಗೆ ವಾಹನ ಚಾಲಕರು & ಸಹಾಯಕರಿಗೆ ನೇರಪಾವತಿ ಮಾಡಲು ಮನವಿ
Karnataka Govt Urban Development ಶಿವಮೊಗ್ಗನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ವಾಹನ ಚಾಲಕರು ಮತ್ತು ಸಹಾಯಕರಗೆ ನೇರ ಪಾವತಿಗೆ ಒತ್ತಾಯಿಸಿ- ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ರವರಿಗೆ ಮನವಿ ಶಿವಮೊಗ್ಗ ಮಹಾನಗರ ಪಾಲಿಕೆ ಹೊರಗುತ್ತಿಗೆ ವಾಹನ ಚಾಲಕರ ಮತ್ತು ಸಹಾಯಕರ ಸಂಘ (ರಿ.) ವತಿಯಿಂದ ಕರ್ನಾಟಕ ಸರ್ಕಾರದ ನಗರಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರನ್ನು ಅವರು ನಿವಾಸದಲ್ಲಿ ಭೇಟಿಯಾಗಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ವಾಹನ ಚಾಲಕರು ಮತ್ತು ಸಹಾಯಕರಗೆ ನೇರ ಪಾವತಿಗೆ ಒತ್ತಾಯಿಸಿ ಯುವ ಮುಖಂಡರಾದ ಕೆ ರಂಗನಾಥ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಆನಂದ್, ಧರ್ಮ ನಾಯಕ್ , ಸಂತೋಷ್ , ಉಮೇಶ್, ಇತರರು ಇದ್ದರು
Department of Horticulture ರೈತರ ಮಕ್ಕಳಿಗಾಗಿ ತೋಟಗಾರಿಕೆ ತರಬೇತಿಗೆ ಶಿವಮೊಗ್ಗ ಜಿಲ್ಲೆಯವರಿಂದ ಅರ್ಜಿ ಆಹ್ವಾನ
Department of Horticulture ತೋಟಗಾರಿಕೆ ಇಲಾಖೆಯು 2025-26 ನೇ ಸಾಲಿಗೆ ರೈತರ ಮಕ್ಕಳಿಗಾಗಿ ದಿ:02/05/2025 ರಿಂದ ದಿ: 28/02/2026 ರವರೆಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹೊಸೂರು ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 10 ತಿಂಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಯು ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾಗಿದ್ದು, ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಬಗ್ಗೆ ಪಹಣಿ ನೀಡುವುದು ಕಡ್ಡಾಯವಾಗಿರುತ್ತದೆ.
ಆಸಕ್ತರು ಅರ್ಜಿಯನ್ನು ತೋಟಗಾರಿಕೆ ಇಲಾಖೆಯ ವೆಬ್‌ಸೈಟ್ https://horticulturedir.karnataka.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳುವುದು ಅಥವಾ ಶಿವಮೊಗ್ಗ ಜಿಲ್ಲೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಿಂದ ಅಥವಾ ಆಯಾ ತಾಲ್ಲೂಕಿನಲ್ಲಿರುವ ತೋಟಗಾರಿಕೆ ಇಲಾಖೆಯ ಕಚೇರಿಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ದಿ: 01/04/2025 ರೊಳಗಾಗಿ ಸಲ್ಲಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-222794/9686950460 ಗಳನ್ನು ಸಂಪರ್ಕಿಸಬಹುದು.
ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೇ ಎರಡನ್ನೂ ಸಮಾನ ಸ್ವೀಕರಿಸಿ- ಜಗದೀಶ್
ಕ್ರೀಡೆ ಮಾನಸಿಕವಾಗಿ ಸದೃಢರಾಗಲು ಸಹಕಾರಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಹೇಳಿದರು.
ಅವರು ಥ್ರೋಬಾಲ್ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಬಿಎಸ್‌ವೈ ಕಪ್ ಥ್ರೋಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಎಂದು ಕ್ರೀಡಾಪಡುಗಳಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯ ವಾಲಿಬಾಲ್ ಸಂಸ್ಥೆಯ ಖಜಾಂಚಿ ಕೆ.ಎಸ್.ಶಶಿ ಮಾತನಾಡುತ್ತಾ, ಸತತವಾಗಿ ನಾಲ್ಕು ವರ್ಷಗಳಿಂದ ಬಿ.ಎಸ್.ಯಡಿಯೂರಪ್ಪ ಜನ್ಮದಿನದ ಪ್ರಯುಕ್ತ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸುತ್ತಾ ಬರುತ್ತಿದ್ದು, ಕಳೆದ ಬಾರಿಗಿಂತ ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿರುವುದು ಸಂತಸದ ಸಂಗತಿ ಎಂದರು.
ಅಂತಿಮ ಪಂದ್ಯದಲ್ಲಿ ಮಹಿಳೆಯರ ಜೆಎನ್‌ಎನ್‌ಇ ಕಾಲೇಜಿನ ಮಹಿಳೆಯರು ಮತ್ತು ಶಿವಮೊಗ್ಗದ ನಿಸರ್ಗ ಮಹಿಳಾ ತಂಡದ ಪಂದ್ಯಾವಳಿ ಅತ್ಯಂತ ರೋಚಕವಾಗಿತ್ತು ಎಂದು ತಿಳಿಸಿದರು.
ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಜೆಎನ್‌ಎನ್‌ಇ ಕಾಲೇಜು, ದ್ವಿತೀಯ ಸ್ಥಾನ ನಿಸರ್ಗ ಮಹಿಳಾ ತಂಡ ಪಡೆದುಕೊಂಡರೇ ತೃತೀಯ ಸ್ಥಾನ ಶಿವಮೊಗ್ಗ ಫ್ರೇಂಡ್ಸ್ ಗ್ರೂಪ್, ಚತುರ್ಥ ಸ್ಥಾನ ಸೃಷ್ಠಿ ಮಹಿಳಾ ತಂಡ ಯಲವಟ್ಟಿ, ಪುರುಷರ ವಿಭಾಗದಲ್ಲಿ ಶಿವಮೊಗ್ಗ ಸಹ್ಯಾದ್ರಿ ತಂಡ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಹೊಸನಗರ ತಂಡ, ತೃತೀಯ ನವುಲೆ ಬಾಯ್ಸ್, ಚತುರ್ಥ ಸ್ಥಾನ ಪೆಸಿಟ್ ಕಾಲೇಜು ಬಾಲಕರು ಪಡೆದುಕೊಂಡರು. ನಗದು, ಟ್ರೋಫಿಯನ್ನು ವಿತರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾನಾಯ್ಕ್, ದೈಹಿಕ ಶಿಕ್ಷಣ ತಾಲ್ಲೂಕು ಅಧಿಕಾರಿಗಳಾದ ನಿರಂಜನಮೂರ್ತಿ, ಪತ್ರಕರ್ತ ಗಾ.ರಾ.ಶ್ರೀನಿವಾಸ್, ಜಯನಗರ ಪಿಎಸ್‌ಐ ಕೋಮಲ, ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ವಿಕಾಸ್, ಪುಟ್ಬಾಲ್ ಜಿಲ್ಲಾ ಸಂಸ್ಥೆಯ ಅಧ್ಯಕ್ಷ ಶ್ರೀನಾಥ್, ತುಂಗಾ ತರಂಗ ಪತ್ರಿಕೆಯ ವರದಿಗಾರ ರಾಕೇಶ್ ಸೋಮಿನಕೊಪ್ಪ, ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾ.ಹ.ತಿಮ್ಮೇನಹಳ್ಳಿ, ಥ್ರೋಬಾಲ್ ಸಂಸ್ಥೆಯ ಕಾರ್ಯದರ್ಶಿ ಕೆ.ಜಿ. ಮಠಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
CM Siddaramaiah ಮೊಬೈಲ್ & ಡಿಜಿಟಲ್ ಗೀಳಿನಿಂದ ಹೊರ ಬಂದು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು- ಸಿದ್ಧರಾಮಯ್ಯ
CM Siddaramaiah ನಾವು ಮಾನವೀಯ ಮೌಲ್ಯಗಳನ್ನು ರೂಪಿಸಿಕೊಳ್ಳಲು ಒಳ್ಳೆಯ ಪುಸ್ತಕಗಳನ್ನು ಓದುವ ಅಭ್ಯಾಸ ರೂಡಿಸಿಕೊಳ್ಳಬೇಕು. ಇದರಿದ ನಮ್ಮ ಜ್ಞಾನ ವಿಕಾಸ ಹೊಂದುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿವಿಮಾತು ಹೇಳಿದರು.
ವಿಧಾನಸಭೆಯ ವತಿಯಿಂದ ವಿಧಾನಸೌಧದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿರುವ ಪುಸ್ತಕ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ನಾವು ಸಮಾದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಬೇಕಾದರೆ ಉತ್ತಮವಾದ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯದ ಮೌಲ್ಯಗಳು ಅರಿಯಲು ಪುಸ್ತಕಗಳೇ ಮೂಲಕಾರಣ. ನಾವು ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದರ ಜೊತೆಗೆ ನಮ್ಮ ಮಕಳ್ಳಲ್ಲಿಯೂ ಸಹ ಈ ಅಭಿರುಚಿಯನ್ನು ಬೆಳೆಸಬೇಕು. ಮಕ್ಕಳು ಮೊಬೈಲ್ ಮತ್ತು ಡಿಜಿಟಲ್ ಚಟದಿಂದ ಹೊರಗೆ ಬಂದು ಪುಸ್ತಕಗಳನ್ನು ಓದುವ ಹವ್ಯಾಸ, ಅಭ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕಗಳನ್ನು ಖರೀದಿಸಿ, ಮನೆ ಮನೆಯಲ್ಲಿ ಗ್ರಂಥಾಲಯ ಮಾಡಿಕೊಳ್ಳಿ ಎಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು
ಇತ್ತೀಚಿನ ದಿನಗಳಲ್ಲಿ ಡಿಜಿಟಲಿಕರಣದ ದಿಸೆಯಿಂದಾಗಿ ಪುಸ್ತಕಗಳನ್ನು ಓದವ ಅಭ್ಯಾಸ ಕಡಿಮೆಯಾಗುತ್ತಿದೆ. ಹಿಂದೆ ಪ್ರತಿ ಮನೆಲ್ಲಿ ಕನಿಷ್ಟ ಹತ್ತಾರು ಪುಸ್ತಕಗಳಾದರೂ ಇರುತ್ತಿದ್ದವು. ಈಗ ಮೊಬೈಲ್ ಮತ್ತು ಡಿಜಿಟಲ್ ಹವ್ಯಾಸದಿಂದಾಗಿ ಪುಸ್ತಕಗಳ ಓದುವ ಅಭ್ಯಾಸವೇ ಕಡಿಮೆಯಾಗಿ, ನಮ್ಮಲ್ಲಿ ಸಾಹಿತ್ಯದ ಜ್ಞಾನವೇ ಇಲ್ಲದಂತಾಗಿದೆ ಎಂದು ತಿಳಿಸಿದರು.
ವಿಧಾಸಭೆಯ ಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಆಲೋಚನೆ ಮಾಡಿ ಪುಸ್ತಕಮೇಳವನ್ನು ಏರ್ಪಾಡು ಮಾಡಿರುವುದು ಸಂತೋಷದ ವಿಷಯ. ಪುಸ್ತಕ ಮೇಳದಲ್ಲಿ 150 ಸ್ಟಾಲ್ ಗಳಿದ್ದು, ಬೇರೆ ಭಾಷೆಯ ಪುಸ್ತಕಗಳು ಕನ್ನಡಕ್ಕೆ ತರ್ಜುಮೆ ಯಾಗಿರುವ ಪುಸ್ತಕಗಳು, ಕನ್ನಡದಿಂದ ಬೇರೆ ಭಾಷಗೆ ತರ್ಜುಮೆಯಾಗಿರುವ ಪುಸ್ತಕಗಳು ಮಳಿಗೆಗಳಲ್ಲಿ ಲಭ್ಯವಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವುದಲ್ಲದೇ ಸಿಬ್ಬಂದಿಗಳು ಹೆಚ್ಚಾಗಿ ಪುಸ್ತಕಗಳನ್ನ ಖರೀದಿಸಿ ಓದಬೇಕು ಎಂದರು.
ವಿಧಾನಸೌಧದಲ್ಲಿ ಓದುಗರ, ಸಾಹಿತ್ಯಾಸಕ್ತರ ಹಬ್ಬ. ಇದನ್ನು ಸಾಹಿತ್ಯಾಸಕ್ತರು ಸದುಪಯೋಗ ಪಡಿಸಿಕೊಳ್ಳಬೇಕು. ಇನ್ನು ಮುಂದೆ ಪ್ರತೀ ವರ್ಷ ವಿಧಾನಸೌಧದಲ್ಲಿ ಸಾಹಿತ್ಯ, ಪುಸ್ತಕ ಹಬ್ಬ ನಡೆಸಲಾಗುವುದು. ಸರ್ಕಾರ ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
CM Siddaramaiah ಈ ಪುಸ್ತಕಮೇಳವು ಕರ್ನಾಟಕದ ಪ್ರವಾಸಿಗರಿಗೆ ಅನುಕೂಲವಾಗಲಿ. ಅಲ್ಲದೇ ಶಾಸಕರು ಸಹ ಪುಸ್ತಕಗಳನ್ನು ಖರೀದಿ ಮಾಡಿ ತಮ್ಮ ಕ್ಷೇತ್ರದ ಗ್ರಂಥಾಲಯಗಳಿಗೆ ನೀಡಲಿ. ವಿಧಾನ ಸಭೆಯ ಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಅವರ ಯೋಜನೆಗಳಿಗೆ ಸರ್ಕಾರದ ಬೆಂಬಲವಿದೆ ಎಂದರು.
ಪುಸ್ತಕಗಳನ್ನು ಓದುವುದರಿಂದ ಇತಿಹಾಸ ಅರಿವಾಗುವುದು – ಉಪ ಮುಖ್ಯಮಂತ್ರಿ ಡಿ.ಕೆ ಶಿ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತಾನಾಡುತ್ತಾ, ಪುಸ್ತಕಗಳನ್ನು ಓದುವುದರಿಂದ ಇತಿಹಾಸ ತಿಳಿಯುವುದರೊಂದಿಗೆ ಜ್ಞಾನದ ಅರಿವಾಗುತ್ತದೆ. ಅವಕಾಶಗಳನ್ನು ಬಳಸಿಕೊಳ್ಳುವುದು ಹೇಗೆ ಎಂದು ಸಭಾಧ್ಯಕ್ಷರು ತಿಳಿಸಿದ್ದಾರೆ. ವಿಧಾನಸಭೆಗೆ ಹೊಸ ರೂಪ ನೀಡಿದ್ದಾರೆ. ವಿಧಾನ ಸಭೆಯ ಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಅವರ ಯೋಜನೆಗಳಿಗೆ ಸರ್ಕಾರದ ಬೆಂಬಲವಿದೆ ಎಂದರು. ಪುಸ್ತಕ ಮೇಳವನ್ನು ಪ್ರತಿ ವರ್ಷ ನಡೆಯಬೇಕು. ಪುಸ್ತಕ ಮೇಳದಿಂದ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು.
ವಿವಿಧ ಸಮುದಾಯಗಳನ್ನು ಒಗ್ಗೂಡಿಸುವ ಮಹತ್ವ ಪುಸ್ತಕ ಕ್ಕಿದೆ – ಸಭಾಧ್ಯಕ್ಷ ಯು.ಟಿ ಖಾದರ್
ಸಭಾಧ್ಯಕ್ಷರಾದ ಯು.ಟಿ ಖಾದರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಸಮುದಾಯಗಳನ್ನು ಒಗ್ಗೂಡಿಸಿ ಮುನ್ನಡೆಸುವ ಶಕ್ತಿ ಪುಸ್ತಕಗಳಿಗಿವೆ. ಪುಸ್ತಕಗಳನ್ನು ಓದಿ ಸಾಹಿತ್ಯವನ್ನು ಸಮರ್ಪಕವಾಗಿ ಅರ್ಥ ಮಾಡಿಕೊಳ್ಳಬೇಕು. ಸಾಹಿತಿಗಳಿಗೆ ವಿಶೇಷ ಸ್ಥಾನವನ್ನು ಕೊಡಬೇಕು. ಸಾಹಿತಿಗಳು ಸತ್ಯವನ್ನು ಅನ್ವೇಷಣೆ ಮಾಡುತ್ತಾರೆ. ಸತ್ಯಾಸತ್ಯತೆಗಳನ್ನು ತಮ್ಮ ಬರಹಗಳ ಮೂಲಕ ಸಮಾಜಕ್ಕೆ ತಿಳಿಸುತ್ತಾರೆ ಎಂದು ಹೇಳಿದರು
ಇದೊಂದು ಐತಿಹಾಸಿಕ ಕಾರ್ಯಕ್ರಮ. ಈ ಪುಸ್ತಕ ಮೇಳಕ್ಕೆ ಸಹಕಾರ ನೀಡಿದ ಸರ್ಕಾರಕ್ಕೆ ಧನ್ಯವಾದಗಳು. ಈ ಪುಸ್ತಕಮೇಳದಿಂದ ಪುಸ್ತಕ ಪ್ರಿಯರಿಗೆ, ಬರಹಗಾರರಿಗೆ ಮುಖ್ಯವಾಗಿ ಪ್ರಕಾಶಕರಿಗೆ ಅನುಕೂಲವಾಗುತ್ತದೆ, ಸಾಹಿತಿಗಳ ಕನಸು ನನಸು ಮಾಡಲು ಪ್ರಕಾಶಕರು ಅತ್ಯವಶ್ಯ. ಪ್ರಕಾಶಕರು ಇಲ್ಲದಿದ್ದಲ್ಲಿ ಬರಹಗಳು ಜನರಿಗೆ ತಲುಪಲು ಸಾಧ್ಯವಿಲ್ಲ. ಈ ಪುಸ್ತಕ ಮೇಳಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಈ ಪುಸ್ತಕಮೇಳದಲ್ಲಿ ವಿದ್ಯಾರ್ಥಿಗಳು ಮುಖ್ಯವಾಗಿ ಯುವಕರು ಮುಕ್ತವಾಗಿ ಭಾಗವಹಿಸಿ ಪುಸ್ತಕಮೇಳದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪುಸ್ತಕಮೇಳಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪುಸ್ತಕ ಪ್ರಾಧಿಕಾರ ಕೈಜೋಡಿಸಿದ್ದಾರೆ. ಅಲ್ಲದೇ ಈ ಪುಸ್ತಕ ಮೇಳ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿಶೇಷ ಪ್ರಚಾರ ನೀಡಿದೆ ಎಂದರು. ಪುಸ್ತಕ ಮೇಳ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಪುಸ್ತಕ ಮೇಳವು ಫೆಬ್ರವರಿ 27 ರಿಂದ ಮಾರ್ಚ್ 02 ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಿದೆ. ಕರ್ನಾಟಕದ ಎಲ್ಲಾ ರೀತಿಯ ಪುಸ್ತಕಗಳು ಒಂದೇ ಸೂರಿನಲ್ಲಿ ಲಭ್ಯವಿದೆ, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಪುಸ್ತಕ ಮೇಳದ ಸಂದರ್ಭದಲ್ಲಿ ಕವಿಗೋಷ್ಠಿ, ಚರ್ಚೆಗಳು, ಸಂವಾದಗಳು ಜರುಗಲಿವೆ ಎಂದರು.
ಇದೇ ವೇಳೆ, ಹಿರಿಯ ಸಾಹಿತಿ, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ಗೋವಾ ರಾಜ್ಯದ ಹಿರಿಯ ಸಾಹಿತಿ, ಜ್ಞಾನಪೀಠ ಪುರಸ್ಕೃತ ದಾಮೋದರ್ ಮೌಜೋ ಸೇರಿದಂತೆ ಇತರೆ ಹಿರಿಯ ಸಾಹಿತಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಮತ್ತು ನಸೀರ್ ಅಹ್ಮದ್, ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ, ಶಾಸಕರಾದ ರಾಜುಗೌಡ, ರಿಜ್ವಾನ್ ಅರ್ಷದ್, ನಾಗರಾಜ ಯಾದವ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
Karnataka Lokayukta ಮಾರ್ಚ್ 18 ರಂದು ಶಿವಮೊಗ್ಗಕ್ಕೆ ರಾಜ್ಯ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಭೇಟಿ
Karnataka Lokayukta ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಾರ್ಚ್18ರಿಂದ 21ರವರೆಗೆ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು ಅಲ್ಲದೇ ಇದೇ ಅವಧಿಯಲ್ಲಿ ವಿವಿಧ ಸಭೆ-ಸಮಾರಂಭ, ತರಬೇತಿ ಕಾರ್ಯಾಗಾರಗಳು, ಸಮಾಲೋಚನಾ ಸಭೆಗಳಲ್ಲಿ ಭಾಗವಹಿಸುವರು.
ಮಾರ್ಚ್ 18 ರಂದು ಸಂಜೆ 7.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಮಾರ್ಚ್19ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು. ಅಂದು ಸಂಜೆ 5.30ರಿಂದ 6.30ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಶಿಕ್ಷಣ ಇಲಾಖೆ, ರೇಷ್ಮೇ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗಾಗಿ ಹಾಗೂ ನ್ಯಾಯಾಂಗ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳಿಗಾಗಿ ಏರ್ಪಡಿಸಲಾಗುವ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಾರ್ಚ್20ರಂದು ಬೆಳಿಗ್ಗೆ 9.45 ರಿಂದ 10.45ರವರೆಗೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನಕ್ಕೆ ಭೇಟಿ ನೀಡಿ, ಹಿರಿಯ ವಕೀಲರು ಹಾಗೂ ವಕೀಲರ ಸಂಘದ ಪದಾಧಿಕಾರಿಗಳೊಂದಿಗೆ ಸಾರ್ವಜನಿಕರಿಗೆ ಉತ್ತಮ ಸೇವೆ ಮತ್ತು ಆಡಳಿತ ನೀಡುವಲ್ಲಿ ವಕೀಲರ ಪಾತ್ರ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸುವರು.
Karnataka Lokayukta ಬೆಳಿಗ್ಗೆ 11ರಿಂದ 11.30ರವರೆಗೆ ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸುವ ಕುರಿತು ದೂರುದಾರರು ಮತ್ತು ಪ್ರತಿವಾದಿಗಳನ್ನು ಉದ್ದೇಶಿಸಿ ಮಾತನಾಡುವರು. ಅಲ್ಲದೇ ಸಾರ್ವಜನಿಕರು ಸಲ್ಲಿಸಿದ ದೂರುಗಳು ಮತ್ತು ಕುಂದು-ಕೊರತೆಗಳ ಪರಿಹಾರಕ್ಕಾಗಿ ಅಗತ್ಯ ಕ್ರಮಕೈಗೊಳ್ಳುವರು.
ಮಾರ್ಚ್21ರಂದು ಬೆಳಿಗ್ಗೆ 9ರಿಂದ 10ರವರೆಗೆ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ಪೊಲೀಸ್ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಬೆಳಿಗ್ಗೆ 10.30ರಿಂದ ಸಂಜೆ 5ರವರೆಗೆ ಜಿಲ್ಲೆಯ ಶಿವಮೊಗ್ಗ ನಗರ ಮತ್ತು ತಾಲೂಕು ಕೇಂದ್ರಗಳಲ್ಲಿನ ಸರ್ಕಾರಿ ಕಚೇರಿಗಳು ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುವರು.
ಅಂದು ಸಂಜೆ 6 ರಿಂದ 7ರವರೆಗೆ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತ ಮತ್ತು ಕಾನೂನು ಸೇವಾ ಪ್ರಾಧಿಕಾರಗಳ ಪಾತ್ರ ಎಂಬ ವಿಷಯದ ಕುರಿತು ನ್ಯಾಯಾಧೀಶರೊಂದಿಗೆ ಸಂವಾದ ನಡೆಸುವರು.
ಅಂದು ರಾತ್ರಿ 11ಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಹಿಂದಿರುಗುವರು.
Karnataka Urdu Academy ಪತ್ರಕರ್ತ ಮುದಸ್ಸಿರ್ ಅಹ್ಮದ್ ಗೆ ಉತ್ತಮ ಪತ್ರಕರ್ತ ಪ್ರಶಸ್ತಿ ಪ್ರದಾನ
Karnataka Urdu Academy ಕರ್ನಾಟಕ ಉರ್ದು ಅಕಾಡೆಮಿಯ ವತಿಯಿಂದ ಬೆಂಗಳೂರು ಕೆ.ಎಂ.ಡಿ.ಸಿ ಭವನದಲ್ಲಿ ಉರ್ದು ಸಾಹಿತ್ಯಕ್ಕೆ ಸಹಾಯಹಸ್ತ ನೀಡಿದ ಸಾಹಿತಿಗಳು, ಕವಿ, ಲೇಖಕರು ಮತ್ತು ಪತ್ರಕರ್ತರನ್ನು ಗೌರವಿಸುವ ಪ್ರಶಸ್ತಿ ವಿತರಣಾ ಸಮಾರಂಭವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಆಜ್ ಕಾ ಇನ್‌ಕ್ವಿಲಾಬ್ ದಿನಪತ್ರಿಕೆಯ ಸಂಪಾದಕ ಮುದಸ್ಸಿರ್ ಅಹ್ಮದ್ ಮತ್ತು ದಾವಣಗೆರೆಯ ವರದಿಗಾರ ಅಲ್ತಾಫ್ ರಿಜ್ವಿ ಅವರನ್ನು ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು.
ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು ನಿಸಾರ್ ಅಹ್ಮದ್ ಮುಖ್ಯ ಅತಿಥಿಯಾಗಿ ಮಾತನಾಡಿ, “ಕರ್ನಾಟಕ ಉರ್ದು ಅಕಾಡೆಮಿ ಕಳೆದ ಒಂದು ವರ್ಷದ ಹಿಂದೆ ಪುನಶ್ಚೇತನಗೊಂಡಿದ್ದು, ನಿರಂತರ ಸೇವೆಗಳನ್ನು ಒದಗಿಸುತ್ತಿದ್ದು, ಇದು ಶ್ಲಾಘನೀಯವಾಗಿದೆ. ಉರ್ದು ಅಕಾಡೆಮಿ, ಕೆ.ಎಂ.ಡಿ.ಸಿ ಮತ್ತು ಅಲ್ಪಸಂಖ್ಯಾತ ಆಯೋಗ ಒಟ್ಟಾಗಿ ಸಮುದಾಯದ ಅಭಿವೃದ್ಧಿಗೆ ಹಾಗೂ ಯುವಕರಿಗೆ ಉದ್ಯೋಗ ಅವಕಾಶ ಒದಗಿಸಲು ಕಾರ್ಯನಿರ್ವಹಿಸುತ್ತಿವೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂ.ಎಲ್.ಸಿ ಬಿಲ್ಕೀಸ್ ಬಾನು ಅವರು ಮಾತನಾಡಿ, “ಉರ್ದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದು ಭವಿಷ್ಯದ ದೃಷ್ಟಿಯಿಂದ ಆತಂಕಕಾರಿ ಸಂಗತಿಯಾಗಿದೆ. ಇದರಿಂದ ಉರ್ದು ಭಾಷೆಯ ಪ್ರಚಾರ-ಪ್ರಸಾರ ತಗ್ಗುವ ಅಪಾಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಿಹೇಳಿದರು.
ಮುಖ್ಯಮಂತ್ರಿ ಸಲಹೆಗಾರ ನಸೀರ್ ಅಹ್ಮದ್ ಅವರು ಮಾತನಾಡಿ, “ಉರ್ದು ಒಂದು ಬದುಕಿರುವ ಭಾಷೆಯಾಗಿದ್ದು, ವಿಶ್ವದ ಅನೇಕ ದೇಶಗಳಲ್ಲಿ ಮಾತನಾಡಲಾಗುತ್ತದೆ. ಆದರೆ, ಕರ್ನಾಟಕದಲ್ಲಿ ಉರ್ದು ಶಾಲೆಗಳ ಸಂಖ್ಯೆ 12,000ರಿಂದ 4,000ಕ್ಕೆ ಇಳಿದಿರುವುದು ವಿಷಾದನೀಯ ಸಂಗತಿಯಾಗಿದೆ. ಉರ್ದು ಅಕಾಡೆಮಿಯು ಉರ್ದು ಮದರಸಾಗಳ ಸ್ಥಿತಿಗತಿಗಳ ಅಧ್ಯಯನ ಮಾಡಬೇಕಿದೆ” ಎಂದು ಸಲಹೆ ನೀಡಿದರು.
ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷ ಮೌಲಾನಾ ಕಾಜಿ ಮೊಹಮ್ಮದ್ ಅಲಿ ಅವರು ಸ್ವಾಗತ ಭಾಷಣದಲ್ಲಿ, “ಅಕಾಡೆಮಿ ಸೀಮಿತ ಸಂಪತ್ತು ಹೊಂದಿದ್ದರೂ ಯಶಸ್ವಿಯಾಗಿ ಉರ್ದು ಸೇವಕರನ್ನು ಗೌರವಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ಪುರಸ್ಕೃತ ವ್ಯಕ್ತಿಗಳನ್ನು ಗೌರವಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಹ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಲಾಗುವುದು” ಎಂದು ಹೇಳಿದರು.
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಶ್ರೇಷ್ಠ ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಜೊತೆಗೆ, ಕರ್ನಾಟಕ ಉರ್ದು ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳು ಮತ್ತು ಇತರ ಸನ್ಮಾನಗಳನ್ನು ಹಂಚಲಾಯಿತು.
ಕಾರ್ಯಕ್ರಮದ ಆರಂಭ ಮುನೀರ್ ಅಹ್ಮದ್ ಜಾಮಿ ಅವರ ನಾತ್ ಗಾಯನದಿಂದ ಜರುಗಿತು. ನಿರೂಪಣೆಯನ್ನು ಅಕಾಡೆಮಿಯ ಸದಸ್ಯ ಅಜಂ ಶಾಹಿದ್ ನಡೆಸಿದರು. ಪ್ರಶಸ್ತಿ ಪ್ರಕಟಣೆಯನ್ನು ಅಜೀಮ್ ಉದ್ದೀನ್ ಕಿನಿಗಲ್ ಮತ್ತು ಶರೀಫ್ ಅಹ್ಮದ್ ಶರೀಫ್ ಮಾಡಿದರು, ಡಾ. ದಾವೂದ್ ಮೊಹ್ಸಿನ್ ಧನ್ಯವಾದ ವ್ಯಕ್ತಪಡಿಸಿದರು.
S.N. Channabasappa ಶಾಸಕ ಚೆನ್ನಿ ಅವರಿಂದ ಬೊಮ್ಮನ ಕಟ್ಟೆ ರೈಲ್ವೆ ಹಳಿ ರಸ್ತೆಯಲ್ಲಿನ ಟ್ರಾಫಿಕ್ ದಟ್ಟಣೆ ಪರಿಶೀಲನೆ
S.N. Channabasappa ಶಿವಮೊಗ್ಗ ನಗರದ ಅಲ್ಲಮ ಪ್ರಭು ಮೈದಾನದ ಹಿಂಭಾಗದಲ್ಲಿರುವ ಬೊಮ್ಮನಕಟ್ಟೆ ರಸ್ತೆಯ ರೈಲ್ವೆ ಟ್ರ್ಯಾಕ್ ಬಳಿ ಟ್ರಾಫಿಕ್ ದಟ್ಟಣೆಯ ನಿವಾರಣೆಯ ದೃಷ್ಟಿಯಿಂದ ನೂತನ ಫ್ಲೈ ಓವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಎನ್.ಹೆಚ್ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.
ಟ್ರಾಫಿಕ್ ದಟ್ಟಣೆಯ ನಿವಾರಣೆಯ ದೃಷ್ಟಿಯಿಂದ, ಸ್ಥಳೀಯರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹಾಗೂ ಸುಗಮ ಸಂಚಾರಕ್ಕಾಗಿ ಈ ಫ್ಲೈ ಓವರ್ ಅತ್ಯಂತ ಅನುಕೂಲವಾಗಲಿದ್ದು, ಶೀಘ್ರವೇ ಕಾಮಗಾರಿಯನ್ನು ಕಾರ್ಯರೂಪಕ್ಕೆ ತರುವಲ್ಲಿ ಬೇಕಾಗಿರುವಂತಹ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
Town Municipal Councils Shikaripura ಶಿಕಾರಿಪುರದ ನಾಗರಿಕರು ಎ & ಬಿ ಖಾತಾ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Town Municipal Councils Shikaripura ಮಾಹಿತಿ ಶಿಕಾರಿಪುರ ಪುರಸಭೆ ವ್ಯಾಪ್ತಿಯಲ್ಲಿ ದಿ: 10/09/2024ರ ಅಂತ್ಯದವರೆಗೆ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿಕೊಂಡಿರುವ ನಿವೇಶನ/ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಆಸ್ತಿ ಮಾಲೀಕರು ಪುರಸಭೆ ಕಚೇರಿಯನ್ನು ಸಂಪರ್ಕಿಸುವಂತೆ ಶಿಕಾರಿಪುರ ಪುರಸಭೆ ತಿಳಿಸಿದೆ.
ಎ-ಖಾತೆ ಪಡೆಯಲು ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವ ಸಾಬೀತು ಮಾಡಿಸುವ ಮೊಂದಾಯಿತ ಮಾರಾಟ ಪತ್ರಗಳು/ದಾನ ಪತ್ರ/ವಿಭಾಗ ಪತ್ರಗಳು ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕುಪತ್ರಗಳು/ ಮಂಜೂರಾತಿ ಪತ್ರಗಳು, ಕಂದಾಯ ಇಲಾಖೆಯಿಂದ 94 ಸಿ.ಸಿ. ಅಡಿ ನೀಡಲಾದ ಹಕ್ಕುಪತ್ರ. ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಢೀಕೃತ ಪ್ರತಿ ಮತ್ತು ನಿವೇಶನ ಬಿಡುಗಡೆ ಪತ್ರ. ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ. ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ. ಮಾಲೀಕರ ಗುರುತಿನ ದಾಖಲೆ ಪ್ರತಿ ಮತ್ತು ಕಟ್ಟಡವಿದ್ದಲ್ಲಿ ವಿದ್ಯುಚ್ಛಕ್ತಿ ಬಿಲ್ ಪ್ರತಿಗಳನ್ನು ಸಲ್ಲಿಸುವುದು.
Town Municipal Councils Shikaripura ಬಿ-ಖಾತೆ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸುವ ದಿ: 10/09/2024ರ ಪೂರ್ವದಲ್ಲಿ ನೊಂದಾಯಿತ ಮಾರಾಟ ಪತ್ರಗಳು/ ದಾನ ಪತ್ರ/ವಿಭಾಗ ಪತ್ರಗಳು/ಹಕ್ಕು ಖುಲಾಸೆ ಪತ್ರಗಳು. ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ. ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ. ಮಾಲೀಕರ ಗುರುತಿನ ದಾಖಲೆ ಪ್ರತಿಗಳನ್ನು ಸಲ್ಲಿಸುವುದು.
ಈ ಪ್ರಕಟಣೆ ದಿನಾಂಕದಿಂದ ಮೂರು ತಿಂಗಳೊಳಗೆ ದಾಖಲೆಗಳನ್ನು ಸಲ್ಲಿಸಿ ಬಿ-ಖಾತೆಯನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶಿಕಾರಿಪುರ ಪುರಸಭೆ ಕಚೇರಿಯ ಸಹಾಯವಾಣಿ ಸಂ.: 08187-222221 ನ್ನು ಅಥವಾ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬಹುದು.
