Wednesday, March 4, 2026
Wednesday, March 4, 2026
Home Blog Page 333

DC Shivamogga ಪರೀಕ್ಷಾರ್ಥಿಯ ಜನಿವಾರ ತೆಗೆಸಿದ ಪ್ರಕರಣ, ಈರ್ವರು ಗೃಹ ರಕ್ಷಕ ದಳ ಸಿಬ್ಬಂದಿ ಅಮಾನತು-ಗುರುದತ್ತ‌ ಹೆಗಡೆ

0

DC Shivamogga ಶಿವಮೊಗ್ಗ ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಇತ್ತೀಚಿಗೆ ನಡೆದ ಜನಿವಾರ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಜನಿವಾರ ಪ್ರಕರಣದ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ವಿಚಾರಣೆ ಹಾಗೂ ಸಿಸಿ ಟಿವಿ ವಿಡಿಯೋವನ್ನು ಸಂಪೂರ್ಣವಾಗಿ ಪರಿಶೀಳಿಸಲಾಗಿದೆ. ಸಿಸಿ ಟಿವಿ ವಿಡಿಯೋದಲ್ಲಿ ಒಬ್ಬ ವಿದ್ಯಾರ್ಥಿ ಬರುತ್ತಾರೆ, ಇಬ್ಬರು ಸೆಕ್ಯೂರಿಟಿಗಳಿಗೆ ಆ ವಿದ್ಯಾರ್ಥಿಯೇ ಜನಿವಾರ ತೆಗೆದು ತೋರಿಸುತ್ತಾರೆ. ಇದಕ್ಕೆ ಅನುಮತಿ ಇದೆಯೇ ಎಂದಾಗ, ಆಗ ಸೆಕ್ಯೂರಿಟಿರವರು ಇಲ್ಲ ಎನ್ನುತ್ತಾರೆ. ಆ ವಿದ್ಯಾರ್ಥಿಯೇ ಪಕ್ಕಕ್ಕೆ ಹೋಗಿ ಜನಿವಾರ ತೆಗೆದುಕೊಂಡು ಬರುತ್ತಾರೆ. ಇನ್ನೂರ್ವ ವಿದ್ಯಾರ್ಥಿ ಬಂದಾಗ ಸೆಕ್ಯೂರಿಟಿರವರು ಜನಿವಾರ ಹಾಕಿಕೊಂಡು ಪರೀಕ್ಷಾ ಕೊಠಡಿಗೆ ಅವಕಾಶ ಇಲ್ಲ ಎಂದಾಗ, ವಿದ್ಯಾರ್ಥಿ ಇಲ್ಲ ನಾನು ಜನಿವಾರ ತೆಗೆಯುವುದಿಲ್ಲ ಎಂದು ಪರೀಕ್ಷಾರ್ಥಿಯನ್ನು ಸೆಕ್ಯೂರಿಟಿರವರು ಪರೀಕ್ಷಾ ಕೇಂದ್ರದ ಒಳಗೆ ಬಿಡದೆ ಅಲ್ಲೆ ಕೂರಿಸುತ್ತಾರೆ. ಆಗ ಕಾಲೇಜಿನ ಪ್ರಾಂಶುಪಾಲರು ಅಲ್ಲಿ ಬಂದು ವಿದ್ಯಾರ್ಥಿ ಕುಳಿತು ಕೊಂಡಿರುವ ಕುರಿತು ವಿಚಾರಿಸಿದಾಗ ಜನಿವಾರದ ವಿಚಾರವನ್ನು ಸೆಕ್ಯೂರಿಟಿರವರು ಹೇಳಿದಾಗ ಸಂಪ್ರದಾಯಕ್ಕೆ ಅಡ್ಡಿ ಪಡಿಸುವ ಯಾವುದೇ ಕ್ರಮ ಇಲ್ಲ. ವಿದ್ಯಾರ್ಥಿ ಹೋಗಿ ಪರೀಕ್ಷೆ ಬರೆಯಬಹುದು ಎಂದು ಹೇಳಿ ವಿದ್ಯಾರ್ಥಿಯನ್ನು‌ ಪರೀಕ್ಷೆ ಬರೆಯಲು ಒಳಗೆ ಕಳುಹಿಸಿಕೊಟ್ಟಿರುತ್ತಾರೆ.
ಇಲ್ಲಿ ಪರೀಕ್ಷೆ ಬರೆಯಲು ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವುದಿಲ್ಲ. ಸರಿಯಾದ ಸಮಯಕ್ಕೆ ಹೋಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುತ್ತಾರೆ. ಇಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆಯಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದ್ದರಿಂದ ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿಯನ್ನು ಆಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಅಲ್ಲದೆ, ಮುಂದಿನ ಹಂತದ ತನಿಖೆಗೆ ಆದೇಶ ಮಾಡಲಾಗಿದೆ.

ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಸಮಯ ಪ್ರಜ್ಞೆ ಹಾಗೂ ಸಕಾಲಿಕಾ ಕ್ರಮಗಳಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ತೊಂದರೆ ಆಗಿಲ್ಲ. ಆದರೆ ಇಬ್ಬರು ಸೆಕ್ಯೂರಿಟಿ ರವರ ತಿಳುವಳಿಕೆಯ ಕೊರತೆಯಿಂದ ಈ ರೀತಿಯ ಘಟನೆ ನಡೆದಿದೆ.

ಬ್ರಾಹ್ಮಣ ಮಹಾಸಭಾದ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಇಲ್ಲಿ ಜನಿವಾರ ಕತ್ತರಿಸಲಾಗಿಲ್ಲ. ಜನಿವಾರವನ್ನು ವಿದ್ಯಾರ್ಥಿಯ ಕೈಯಿಂದಲೇ ತೆಗೆಯಿಸಲಾಗಿದೆ ಎಂದರು.

ಜನಿವಾರ ಪ್ರಕರಣದ ಕುರಿತು ಸೂಕ್ತ ತನಿಖೆಗೆ ಅದೇಶಿಸಲಾಗಿದೆ ಅಲ್ಲದೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಲಾಗಿದೆ. ಇಲ್ಲಿ ಜನಿವಾರವನ್ನು ಕತ್ತರಿಸಿ, ಕಸದ ಬುಟ್ಟಿಗೆ ಎಸೆಯುವ ಯಾವ ಕುಕೃತ್ಯವೂ ನಡೆದಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ಜನಿವಾರ ತೆಗೆದುಕೊಂಡು ಬನ್ನಿ ಎನ್ನುವುದು ಸಹ ಒಪ್ಪುವಂತದ್ದು ಅಲ್ಲ. ಈ ಜನಿವಾರದ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದರು.

DC Shivamogga ಗೃಹ ರಕ್ಷಕ ದಳದ ಇಬ್ಬರು ಸಿಬ್ಬಂದಿಯನ್ನು ಗೃಹ ರಕ್ಷಕ ದಳದ ಕಮಾಂಡೆಟ್ ಅಮಾನತು ಮಾಡಿದ್ದಾರೆ. ಅಮಾನತು ಕುರಿತ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.

Klive Special Article “ಪಾಕಿ” ಮಾತಿಗೆ ಒಂದು ‘ತೆಪರಾಕಿ’ ಲೇ: ಎಚ್.ಕೆ.ವಿವೇಕಾನಂದ

0

Klive Special Article ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅತ್ಯಂತ ದ್ವೇಷದ ಹೇಳಿಕೆಯೊಂದನ್ನು ನೀಡಿದ್ದಾರೆ.

ಹಿಂದೂ ಮುಸ್ಲಿಂ, ಪಾಕಿಸ್ತಾನ ಮತ್ತು ಭಾರತದ ನಡುವೆ ತುಂಬಾ ದ್ವೇಷ ಮತ್ತು ಅಸೂಯೆ ಬರುವ ರೀತಿಯಲ್ಲಿ ಉದ್ರೇಕಿಸಿ ಮಾತನಾಡಿದ್ದಾರೆ. ಸಾಗರೋತ್ತರ ಪಾಕಿಸ್ತಾನಿ ಪ್ರಜೆಗಳ ಸಮಾವೇಶದಲ್ಲಿ ಪಾಕಿಸ್ತಾನದ ಅಧ್ಯಕ್ಷರು ಮತ್ತು ಹಿರಿಯ ಸಚಿವರ ಸಮ್ಮುಖದಲ್ಲಿ ಈ ಮಾತನ್ನು ಹೇಳಿದ್ದಾರೆ.

ಖಂಡಿತವಾಗಲೂ ಯಾವುದೇ ದೇಶದ ಸೈನಿಕ ಮುಖ್ಯಸ್ಥರು ಆ ದೇಶದ ನಿಜವಾದ ರಕ್ಷಕರು. ಸೈನ್ಯದ ಮುಖ್ಯಸ್ಥರೆಂದರೆ ಕೇವಲ ಇನ್ನೊಬ್ಬರ ಮೇಲೆ ಆಕ್ರಮಣ ಮಾಡುವವರಲ್ಲ, ಅವರು ಯಾವಾಗಲೂ ದೇಶ ರಕ್ಷಣೆಯ ಮಹತ್ವವನ್ನು ತಿಳಿದಿರಬೇಕು ಮತ್ತು ಅತ್ಯಂತ ಮಾನವೀಯವಾಗಿಯೂ ಸಹ ನಡೆದುಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ದೇಶದ ಸೈನಿಕರಿಗೆ ಮಾನವೀಯತೆ ಹೆಚ್ಚಾಗಿಯೇ ಇರಬೇಕು. ರಕ್ಷಣೆ ಹೊರತುಪಡಿಸಿದ ಅಕ್ರಮಣಕಾರಿ ಯುದ್ಧಗಳಲ್ಲಿ ನಂಬಿಕೆ ಇರಬಾರದು. ಕೊಲ್ಲುವ ಮತ್ತು ಸಾಯುವ ಆಟದಲ್ಲಿ ಅವರೇ ಮೊದಲ ಬಲಿಪಶುಗಳು. ಅದರ ವಾಸ್ತವಿಕ ಲಾಭ ಇನ್ಯಾರಿಗೋ ಆಗುತ್ತದೆ.

ಇತ್ತೀಚೆಗೆ ತೆಲುಗಿನ ತಾಂಡೇಲ್ ಎಂಬ ಸಿನಿಮಾದಲ್ಲಿ ಪಾಕಿಸ್ತಾನದ ಜೈಲಿನ ದೃಶ್ಯದಲ್ಲಿ ಕೆಲವು ಮೀನುಗಾರರು ಭಾರತದಿಂದ ಆಕಸ್ಮಿಕವಾಗಿ ಪಾಕಿಸ್ತಾನದ ಸಮುದ್ರ ಉಲ್ಲಂಘನೆಯ ಸಂದರ್ಭದಲ್ಲಿ ಬಂಧಿತರಾದ ಆ ಸಿನಿಮಾದ ದೃಶ್ಯಗಳಲ್ಲಿ ಸಹ ಪಾಕಿಸ್ತಾನದ ಬಗ್ಗೆ ಭಾರತದ ಅದರ ನಿರ್ದೇಶಕರು ಅತ್ಯಂತ ಕೆಟ್ಟದಾಗಿ, ದ್ವೇಷ ಬರುವ ರೀತಿಯಲ್ಲಿ ಅನಾವಶ್ಯಕವಾಗಿ ಚಿತ್ರಿಸಿದ್ದಾರೆ. ಮುಸ್ಲಿಮರು ಹಿಂದುಗಳ ಆಜನ್ಮ ಶತ್ರುಗಳು ಎಂಬಂತೆ ತೋರಿಸಿದ್ದಾರೆ. ಆಸಕ್ತರು ಬೇಕಾದರೆ ನಾಗ ಚೈತನ್ಯ ಅಭಿನಯದ ತೆಲುಗಿನ ತಾಂಡೇಲ್ ಎಂಬ ಸಿನಿಮಾವನ್ನು ನೋಡಬಹುದು.

ಈ ವಿಷಯ ಪ್ರಸ್ತಾಪಿಸಲು ಕಾರಣ ಹಿಂದೂ ಧರ್ಮವಿರಲಿ, ಇಸ್ಲಾಂ ಧರ್ಮವೇ ಇರಲಿ, ಭಾರತವೇ ಇರಲಿ, ಪಾಕಿಸ್ತಾನವೇ ಇರಲಿ ಜನರಲ್ ಅಸಿಮ್ ಮುನೀರ್ ಪ್ರಕಾರ ಎರಡು ತುಂಬಾ ಭಿನ್ನವಾಗಿದೆ ಮತ್ತು ವಿರುದ್ಧವಾಗಿದೆ. ಈ ಭಾವನೆಯನ್ನು ಮಕ್ಕಳಲ್ಲಿ ತುಂಬಿಸಿ ಎಂದು ಹೇಳಿಕೆ ಕೊಟ್ಟಿದ್ದಾರೆ.

ಮಿಸ್ಟರ್ ಜನರಲ್ ಅವರೇ, ಮನುಷ್ಯನಿಗೆ ಧರ್ಮ ಎಂಬುದು ಒಂದು ಕ್ರಮಬದ್ಧ ನಡವಳಿಕೆಯ ಸಹಜ ಆಚರಣೆಗಳ ಕ್ರಿಯೆಗಳೇ ಹೊರತು ದ್ವೇಷ ಅಸೂಯೆಯ ತತ್ವಗಳಲ್ಲ. ಸುಮ್ಮನೆ ಆಚರಣೆಗಾಗಿ ಒಬ್ಬರು ಏಕ ದೇವರನ್ನು ಪೂಜಿಸಿದರೆ, ಇನ್ನೊಬ್ಬರು ಬಹು ದೇವರಗಳನ್ನು ಪೂಜಿಸುತ್ತಾರೆ. ಒಬ್ಬರು ಸಂಪೂರ್ಣ ಮಾಂಸಹಾರಿಗಳಾದರೆ ಇನ್ನೊಬ್ಬರು ಸಸ್ಯಹಾರ ಮತ್ತು ಮಾಂಸಹಾರ ಎರಡನ್ನು ಸೇವಿಸುತ್ತಾರೆ. ಒಬ್ಬರು ಬಲಗಡೆಯಿಂದ ಬರೆದರೆ ಇನ್ನೊಬ್ಬರು ಎಡಗಡೆಯಿಂದ ಬರೆಯುತ್ತಾರೆ. ಒಬ್ಬರಿಗೆ ಶುಕ್ರವಾರ ಒಳ್ಳೆಯದಾದರೆ ಇನ್ನೊಬ್ಬರಿಗೆ ಗುರುವಾರ ಒಳ್ಳೆಯದು. ಒಬ್ಬರಿಗೆ ನಮಾಜು ಒಳ್ಳೆಯದಾದರೆ ಇನ್ನೊಬ್ಬರಿಗೆ ಪೂಜೆ ಒಳ್ಳೆಯದು. ಒಬ್ಬರಿಗೆ ಮೆಕ್ಕ ಪವಿತ್ರ ಸ್ಥಳವಾದರೆ ಇನ್ನೊಬ್ಬರಿಗೆ ಕಾಶಿ ಪವಿತ್ರ.

ಆದರೆ ಎಲ್ಲರೂ ಆಹಾರವನ್ನೇ ಊಟ ಮಾಡುತ್ತಾರೆ, ನೀರನ್ನು ಕುಡಿಯುತ್ತಾರೆ, ಗಾಳಿಯನ್ನೇ ಉಸಿರಾಡುತ್ತಾರೆ. ಎಲ್ಲರೂ ಬಹುತೇಕ ಒಂದೇ ರೀತಿಯ ಕೌಟುಂಬಿಕ ವ್ಯವಸ್ಥೆಯನ್ನು ಹೊಂದಿದ್ದಾರೆ. ಎಲ್ಲರ ಸಂತಾನೋತ್ಪತ್ತಿಯು ಒಂದೇ ರೀತಿಯಾಗಿರುತ್ತದೆ. ಎಲ್ಲರ ನೋವು ನಲಿವು, ಕಷ್ಟ ಸುಖ, ಭಾವನೆಗಳು ಬಹುತೇಕ ಒಂದೇ ರೀತಿ ಇರುತ್ತವೆ. ಇವುಗಳಲ್ಲಿ ಯಾವ ಭಿನ್ನತೆಯೂ ಇಲ್ಲ.

ಅನಾವಶ್ಯಕವಾಗಿ ದ್ವೇಷವನ್ನು ಬಿತ್ತುವ ಕೆಲಸ ಯಾರೂ ಮಾಡಬಾರದು. ಈ ಮಾತುಗಳು ಕೇವಲ ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಮಾತ್ರವಲ್ಲ. ಭಾರತದ ಆ ರೀತಿ ವರ್ತನೆ ಮಾಡುವ, ಹೇಳಿಕೆ ನೀಡುವ ಇತರ ಎಲ್ಲರಿಗೂ ಸಹ ಸಮನಾಗಿ ಅನ್ವಯಿಸುತ್ತದೆ.

ನಿಜಕ್ಕೂ ಸೇನಾಧಿಕಾರಿ ಶಾಂತಿಯ ಸಮಯದಲ್ಲಿ ಅತ್ಯಂತ ಹೆಚ್ಚು ಸಂಯಮದಿಂದ ವರ್ತಿಸಬೇಕು. ಏಕೆಂದರೆ ಯುದ್ಧ ಅಂತಿಮ ಅಸ್ತ್ರವಾಗುವವರೆಗೂ ಅವರಿಗೆ ಸಂಧಾನವೇ ಬಹುಮುಖ್ಯವಾಗಬೇಕು. ನಿಜಕ್ಕೂ ಯುದ್ಧದಲ್ಲಿ ಅತಿ ಹೆಚ್ಚು ಸಾವು ನೋವಾಗುವುದು ಸಾಮಾನ್ಯವಾಗಿ ಸೈನಿಕರಿಗೇ. ಅಂತಹ ಯಾರೋ ಹೆತ್ತ ಮಕ್ಕಳ ಜೀವದ ಮುಖ್ಯಸ್ಥರಾಗುವ ಸೇನಾ ಜನರಲ್ ಗಳು ಈ ರೀತಿ ಹುಚ್ಚುಚ್ಚಾಗಿ ಹೇಳಿಕೆಗಳನ್ನು ನೀಡಬಾರದು. ಅದಕ್ಕಾಗಿಯೇ ಹೇಳಿದ್ದು ರಕ್ಷಣೆ ಹೊರತುಪಡಿಸಿ ಸೈನಿಕರಿಗೆ ಎಲ್ಲಕ್ಕಿಂತ ಹೆಚ್ಚು ಮಾನವೀಯತೆ ಬೇಕಾಗುತ್ತದೆ. ಆಗ ಯುದ್ಧಗಳು ತೀರಾ ಅಪರೂಪ ಆಗುತ್ತದೆ. ಇಲ್ಲದಿದ್ದರೆ ಮನುಷ್ಯ ಕುಲವೇ ನಾಶವಾಗುತ್ತದೆ.

Klive Special Article ಯಾರೋ ರಾಜಕಾರಣಿ ತನ್ನ ತೆವಲಿಗೆ ಈ ರೀತಿ ಹೇಳಿಕೆ ಕೊಟ್ಟಿದ್ದರೆ ಸ್ವಲ್ಪ ಮಟ್ಟಿಗೆ ನಿರ್ಲಕ್ಷಿಸಬಹುದಿತ್ತು. ಆದರೆ ಎರಡು ಧರ್ಮಗಳ ಬಗ್ಗೆ ದ್ವೇಷ ಬರುವ ರೀತಿಯಲ್ಲಿ ಸೈನಿಕ ಮುಖ್ಯಸ್ಥರು ಮಾತನಾಡಿದ್ದು ಖಂಡಿತ ಅಕ್ಷ್ಯಮ್ಯ ಅಪರಾಧ.

ಈಗಲಾದರೂ ಅವರು ಭಾರತ ಮತ್ತು ಪಾಕಿಸ್ತಾನ ಹಾಗೂ ಹಿಂದೂ ಮುಸ್ಲಿಂ ಇಬ್ಬರ ಕ್ಷಮೆಯನ್ನು ಕೇಳಿ ಇಬ್ಬರ ನಡುವೆ ಸೌಹಾರ್ದತೆಯ ಮಾತನಾಡಲಿ. ಅವರ ಧರ್ಮವನ್ನು ಅವರು ಗೌರವಿಸಲಿ, ಪ್ರೀತಿಸಲಿ. ಇನ್ನೊಬ್ಬರ ಧರ್ಮ ದ್ವೇಷವೂ ಅಲ್ಲ, ಕೆಟ್ಟದ್ದು ಅಲ್ಲಾ. ಎರಡು ಒಂದೇ. ಸಣ್ಣ ಆಚರಣೆಗಳ ಭಿನ್ನಾಭಿಪ್ರಾಯ ಸಹಜವಾಗಿಯೇ ಇರುತ್ತದೆ. ಅದನ್ನು ಎತ್ತಿ ಹೇಳುವ ಅವಶ್ಯಕತೆ ಇಲ್ಲ.

ಮುಖ್ಯವಾಗಿ ಎಲ್ಲಕ್ಕಿಂತ ಹೆಚ್ಚಾಗಿ ನಾಗರಿಕ ಧರ್ಮವೇ ಅತ್ಯಂತ ಶ್ರೇಷ್ಠವಾದದ್ದು, ಜೀವಪರ ನಿಲುವೇ ಅತ್ಯಂತ ಮಹತ್ವವಾದದ್ದು …..

ಸಾಮಾನ್ಯ ಜನರಾದ ನಾವು ಯಾವ ದೇಶವನ್ನು, ಯಾವ ಧರ್ಮವನ್ನು ದ್ವೇಷಿಸದೆ ನಮ್ಮ ಬದುಕನ್ನು ಪ್ರೀತಿಸುತ್ತಾ ಮುನ್ನಡೆಯೋಣ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……

Kaysanur Forest Disease ಮಂಗನ ಜ್ವರದ ಬಗ್ಗೆ ಐಸಿಎಂಆರ್ ನಿಂದ ಜಿಲ್ಲೆಯಲ್ಲಿ ಸೀರೋ ಸರ್ವೆ

0

Kaysanur Forest Disease ಕೆಎಫ್‌ಡಿ ರೋಗದ ಹರಡುವಿಕೆ ಪ್ರಮಾಣ ಅರ್ಥ ಮಾಡಿಕೊಂಡು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ(ಐಸಿಎಂಆರ್) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯು ಜಿಲ್ಲೆಯಲ್ಲಿ ಸೀರೋಸರ್ವೇ ನಡೆಸಿತು.

ಕ್ಯಾಸನೂರು ಫಾರೆಸ್ಟ್ ಡಿಸೀಜ್ (ಕೆಎಫ್‌ಡಿ) ಸಾಮಾನ್ಯವಾಗಿ ಮಂಗನ ಜ್ವರವೆಂದು ಕರೆಯಲ್ಪಡುವ ಈ ರೋಗವು ಪಶ್ಚಿಮಘಟ್ಟದ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತದೆ.

ಆರಂಭದಲ್ಲಿ ಈ ರೋಗವು ಕೇವಲ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಕಂಡುಬಂದಿದ್ದರೆ, ಈಗ ಇದು ಕರ್ನಾಟಕದ ಇತರ ಜಿಲ್ಲೆಗಳಲ್ಲಿಯೂ ಹಾಗು ಪಕ್ಕದ ರಾಜ್ಯಗಳಲ್ಲಿಯೂ ಹರಡಿದೆ.
ಈ ರೋಗದ ಹರಡುವಿಕೆ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ(ಐಸಿಎಂಆರ್) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ(ಎನ್‌ಐಇ) ವಿಭಾಗವು ಪಶ್ಚಿಮಘಟ್ಟದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳ ಹಾಗೂ ವಯಸ್ಕರಲ್ಲಿ ಕೆಎಫ್‌ಡಿ ಸೀರೋಸರ್ವೇ(ರಕ್ತಸಾರ ಸಮೀಕ್ಷೆ) ನಡೆಸುತ್ತಿದೆ. ಈ ಸೀರೋಸರ್ವೇಯನ್ನು ಕರ್ನಾಟಕ, ಮಹಾರಾಷ್ಟ್ರ, ಗೋವಾ, ಕೇರಳ ಮತ್ತು ತಮಿಳುನಾಡು ಸೇರಿದಂತೆ ಐದು ರಾಜ್ಯಗಳಲ್ಲಿ ನಡೆಸಲಾಗುವುದು.

ಕರ್ನಾಟಕದಲ್ಲಿ ಈ ಸೀರೋಸರ್ವೇ ಅನ್ನು ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ವೈದ್ಯಕೀಯ ವಿಭಾಗ ಹಾಗೂ ರಾಜ್ಯ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ.

ಈ ಅಧ್ಯಯನಕ್ಕಾಗಿ ಕರ್ನಾಟಕದ ಎಂಟು ಜಿಲ್ಲೆಗಳ 51 ಗ್ರಾಮಗಳಲ್ಲಿ ಸೀರೋಸರ್ವೇ ನಡೆಸಲಾಗುವುದು. ಇವುಗಳಲ್ಲಿ ಹಿಂದೆ ಕೆಎಫ್‌ಡಿ ಪ್ರಕರಣಗಳು ಕಂಡುಬಂದ 20 ಗ್ರಾಮಗಳನ್ನು ವಿಶೇಷವಾಗಿ ಆಯ್ಕೆ ಮಾಡಲಾಗಿದೆ.

ಸಮೀಕ್ಷೆ ಯೋಜನೆಯಂತೆ, ಎನ್‌ಐಇ ಚೆನ್ನೆöÊ ತಂಡವು ಉತ್ತರ ಕನ್ನಡ ಜಿಲ್ಲೆಯ 10 ಗ್ರಾಮಗಳು, ಉಡುಪಿ ಜಿಲ್ಲೆಯ 6, ಶಿವಮೊಗ್ಗದ 7, ಕೊಡಗಿನ 8, ಹಾಸನದ 1, ದಕ್ಷಿಣ ಕನ್ನಡದ 14, ಚಿಕ್ಕಮಗಳೂರಿನ 4 ಹಾಗೂ ಬೆಳಗಾವಿಯ 1 ಗ್ರಾಮಗಳಲ್ಲಿ ಸಿರೋಸರ್ವೇ ನಡೆಸಲಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಮಾ.22 ರಿಂದ ಏ.15 ರವರೆಗೆ ಸೀರೋ ಸರ್ವೆ ನಡೆಸಲಾಯಿತು.

ಪ್ರತಿ ಗ್ರಾಮದಲ್ಲಿ 6 ರಿಂದ 18 ವರ್ಷದೊಳಗಿನ 14 ಮಕ್ಕಳಿಂದ ಹಾಗೂ 18 ರಿಂದ 50 ವರ್ಷದೊಳಗಿನ 22 ಜನ ವಯಸ್ಕರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಈ 36 ಜನರನ್ನು ಸದರಿ ಗ್ರಾಮಗಳಲ್ಲಿ ರ‍ಯಾಂಡಮ್ ಆಗಿ ಆಯ್ಕೆ ಮಾಡಲಾಗುತ್ತದೆ. ಸಂಗ್ರಹಿಸಿದ ರಕ್ತದ ಮಾದರಿಗಳನ್ನು ನಿಯಮಿತವಾಗಿ ಪುಣೆಯ ಐಸಿಎಮ್‌ಆರ್ – ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರೋಲಾಜಿಗೆ ಕಳುಹಿಸಿ, ಕೆ ಎಫ್ ಡಿ ವೈರಸ್ ವಿರೋಧಿ ಪ್ರತಿಕಾಯಗಳನ್ನು ಪರೀಕ್ಷಿಸಲಾಗುತ್ತದೆ.

ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳ ಹಾಗೂ ವಯಸ್ಕರ ಪೈಕಿ ಎಷ್ಟು ಮಂದಿ ಈಗಾಗಲೇ ಕೆಎಫ್‌ಡಿ ಸೋಂಕು ಹೊಂದಿದ್ದಾರೆ ಮತ್ತು ಎಷ್ಟು ಮಂದಿ ಈ ಸೋಂಕಿಗೆ ಅತಿ ಸಂಭಾವ್ಯರಾಗಿ ಉಳಿದಿದ್ದಾರೆ ಎಂಬುದನ್ನು ತಿಳಿಯುವುದಕ್ಕಾಗಿ ಐಸಿಎಂಆರ್-ಎನ್‌ಐಇ ಈ ಸಂಶೋಧನೆ ನಡೆಸುತ್ತಿದೆ.

ಈ ಸೀರೋಸರ್ವೇ ಮೂಲಕ ವೈರಸ್ ಹೆಚ್ಚು ಹರಡಿರುವ ಭೌಗೋಳಿಕ ಪ್ರದೇಶಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಹಾಗು ವೈರಸ್‌ನ ಶಾಂತ ಸಂಚಾರ(ಸೈಲೆಂಟ್ ಟ್ರಾನ್ಸ್ಮಿಷನ್)ನಡೆಯುತ್ತಿರುವ ಪ್ರದೇಶಗಳ ಪತ್ತೆಯೂ ಸಾಧ್ಯವಾಗುತ್ತದೆ.

Kaysanur Forest Disease ಹೆಚ್ಚಿನ ಅಪಾಯವಿರುವ ಜಿಲ್ಲೆಗಳಲ್ಲಿ ಮತ್ತು ವಯೋವರ್ಗಗಳಲ್ಲಿ ಲಸಿಕಾಕರಣವನ್ನು ಆದ್ಯತೆಯಾಗಿಸಲು ಈ ಮಾಹಿತಿಯು ಸಹಾಯ ಮಾಡುತ್ತದೆ. ಜೊತೆಗೆ, ಈ ಅಧ್ಯಯನದಿಂದ ದೊರೆಯುವ ಸಾಕ್ಷ್ಯಾಧಾರಗಳು ರೋಗದ ನಿಗಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಹಕರಿಸುತ್ತದೆ ಹಾಗೂ ಇದರಿಂದ ಪ್ರಭಾವಿತ ಪ್ರದೇಶಗಳಲ್ಲಿ ರೋಗವನ್ನು ಬೇಗನೆ ಪತ್ತೆ ಹಚ್ಚುವುದು ಸುಲಭವಾಗುತ್ತದೆ.
ಇತ್ತೀಚೆಗೆ ಈ ಸಮೀಕ್ಷೆಯ ಕುರಿತಂತೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ , ಐ ಸಿ ಎಮ್ ಆರ್ ನ ನಿರ್ದೇಶಕರಾದ ಡಾ. ಮನೋಜ್ ಮುರೇಕರ್ ಇವರ ನೇತೃತ್ವದಲ್ಲಿ ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಯಾಗಾರವನ್ನು ನಡೆಸಲಾಯಿತು.

ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ. ಬಾಲು ಪಿ ಎಸ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ, ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಡಾ.ಲತಾ ಆರ್ ತೆಲಂಗ್, ಪ್ರಾಂಶುಪಾಲರಾದ ಡಾ.ಸಿದ್ದಲಿಂಗಪ್ಪ, ಡೀನ್ ಡಾ.ವಿನಾಯಕ್ ಮುಂತಾದವರು ಉಪಸ್ಥಿತರಿದ್ದರು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ ತಿಳಿಸಿದ್ದಾರೆ.

Mental health ಮಾನಸಿಕ ಸಮಸ್ಯೆಗಳು‌‌ ಮತ್ತು‌ ಸೂಕ್ತ ಪರಿಹಾರಗಳು ಲೇ: ಆರ್.ಎಸ್.ಆಕಾಶ್.

0


Mental health ಮಾನಸಿಕ ಖಾಯಿಲೆಗಳು ಯಾರಿಗಾದರೂ ಬರಬಹುದು : ಸೂಕ್ತ ಚಿಕಿತ್ಸೆಯಿಂದ ಗುಣ ಸಾಧ್ಯ

ಮಾನಸಿಕ ಖಾಯಿಲೆಗಳು ಯಾರಿಗೆ ಬೇಕಾದರೂ ಬರಬಹುದು. ಆದರೆ ಇದನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಬಹುದು.

ಇತ್ತೀಚಿನ ಆಧುನಿಕ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾನವ ದುಡಿಮೆ, ಸಂಸಾರ ಹೀಗೆ ಹತ್ತು ಹಲವಾರು ಒತ್ತಡಗಳಿಗೆ ಸಿಲುಕಿ ತನ್ನ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಾ ಬದುಕು ಬವಣೆಯಾಗುತ್ತಿರುವ ಸಂದರ್ಭದಲ್ಲಿ ಇದನ್ನು ಮನಗಂಡ ರಾಜ್ಯ ಸರ್ಕಾರವು ಇದರಿಂದ ಹೊರತರಲು ಮುಂದಾಗಿದ್ದು, 31 ಜಿಲ್ಲೆಗಳನ್ನು ಒಳಗೊಂಡಂತೆ ಆರೋಗ್ಯ ಇಲಾಖೆಯ ಸಹಕಾರದಡಿಯಲ್ಲಿ ಮಾನಸಿಕ ಆರೋಗ್ಯವೆಂಬ ಕಾರ್ಯಕ್ರಮವನ್ನು ರೂಪಿಸಿದೆ.

ಮಾನಸಿಕ ಆರೋಗ್ಯ ಕಾರ್ಯಕ್ರಮ ವರ್ತಮಾನದ ಮನುಷ್ಯನ ಮನಸ್ಥಿತಿಗೆ ಅತಿ ಅತ್ಯವಶ್ಯಕವಾಗಿದೆ ಎಂದರೆ ತಪ್ಪಿಲ್ಲ. ಯಾಕೆಂದರೆ ಮನುಷ್ಯ ಹುಟ್ಟಿನಿಂದ ಸಾಯುವವರೆಗು ತನ್ನ ಬದುಕಿನುದ್ದಕ್ಕೂ ಏನೇ ಕಷ್ಟ, ನೋವು, ಜಂಜಾಟಗಳನ್ನು ಅನುಭವಿಸಿದರೂ ಕೊನೆಯದಾಗಿ ಆತ ಬಯಸುವುದು ನೆಮ್ಮದಿಯನ್ನು ಮಾತ್ರ. ಅಂತಹ ನೆಮ್ಮದಿಯೇ ಸಿಗದಿದ್ದಾಗ ಮನುಷ್ಯ ಸ್ಥಿತಿ ಏನೆಂಬುದನ್ನು ನಾವೆಲ್ಲ ಆಲೋಚನೆ ಮಾಡಬೇಕಾಗಿದೆ.

ಮನಸ್ಸು ಮನುಷ್ಯನ ನಿಯಂತ್ರಣದಲ್ಲಿರಬೇಕು. ಆದರೆ ಅದು ಈ ಧಾವಂತದ ಬದುಕಿನಲ್ಲಿ ಹಿಡಿತ ತಪ್ಪಿ, ಸಮತೋಲನ ಕಷ್ಟವಾಗಿ, ಮಾನಸಿಕವಾಗಿ ಜರ್ಜಿರಿತನಾಗುತ್ತಿದ್ದಾನೆ.
ವೇಗದ ಜಗತ್ತಿಗೆ ಒಗ್ಗಿಕೊಳ್ಳುವ ಭರದಲ್ಲಿ ಅದರ ಹಿಂದೆ ಓಡಲು ಆರಂಭಿಸಿದ್ದಾನೆ. ಮನುಷ್ಯ ಭಾವಜೀವ ಹಾಗೂ ಸಂಘಜೀವಿ. ಆದರೆ ಈಗ ಭಾವನೆಗಳೆಲ್ಲಾ ಬತ್ತಿ ಹೋಗಿ ಮನಸ್ಸು ಮತ್ತು ಬುದ್ದಿಯ ನಡುವಿನ ಸಂಘರ್ಷದಲ್ಲಿ ಮಾನಸಿಕವಾಗಿ ಕುಗ್ಗುತ್ತಿದ್ದಾನೆ. ಹಾಗಾದರೆ ಮನುಷ್ಯನನ್ನು ಮೊದಲಿನಂತೆ ಮಾಡಲು ಸಾಧ್ಯವಿಲ್ಲವೇ? ಅದಕ್ಕೆ ಚಿಕಿತ್ಸೆ ಏನು?
ಮಾನಸಿಕ ಸಮಸ್ಯೆಗಳನ್ನು ಸಾಮಾನ್ಯವಾಗಿ ಮೂಢನಂಬಿಕೆಯ ಹಿನ್ನೆಲೆಯಲ್ಲಿಯೇ ನೋಡಲಾಗುತ್ತದೆ.

ದ್ವೆವ, ಭೂತ, ಮಾಟ, ಮಂತ್ರಕ್ಕೆ ಒಳಗಾದವರೆಂದು ಪರಿಹಾರಕ್ಕೆ ಹಲವಾರು ಮಾರ್ಗಗಳನ್ನು ಸಹ ಅನುಸರಿಸುವುದನ್ನು ಕಾಣುತ್ತೇವೆ. ಆದರೆ ಮೆಡಿಕಲ್ ಸೈನ್ಸ್ಗಳು ಇವೆಲ್ಲವನ್ನೂ ಸುಳ್ಳೆಂದು ಕಾಲಾನುಕಾಲದಿಂದ ಸಾಬೀತು ಪಡಿಸುತ್ತಾ ಬಂದಿದೆ. ಹಾಗಾದರೆ ಮಾನಸಿಕ ಕಾಯಿಲೆ ಎಂದರೇನು, ಅದರ ರೂಪಗಳು ಯಾವುವು?. ತಡೆಗಟ್ಟುವುದು ಹೇಗೆ?. ಚಿಕಿತ್ಸೆಯ ಕ್ರಮಗಳೇನು?. ಎಂಬುದನ್ನೆಲ್ಲಾ ಅರಿಯುವುದು ಮುಖ್ಯವಾಗಿದೆ.

Mental health ಮಾನಸಿಕ ಖಾಯಿಲೆ ಹಾಗೂ ಅದರ ನಾನಾ ಬಗೆ:
ಮನುಷ್ಯನ ದೈಹಿಕ ಖಾಯಿಲೆಗಿಂತ ಮಾನಸಿಕ ಖಾಯಿಲೆ ಅತ್ಯಂತ ಅಪಾಯಕಾರಿಯಾದದ್ದು. ಯಾಕೆಂದರೆ ದೇಹದ ಮೇಲೆ ಉಂಟಾಗುವ ಖಾಯಿಲೆ ಕಣ್ಣಿಗೆ ಕಾಣುತ್ತದೆ. ಅದನ್ನು ಹೇಗೆ ಗುಣಪಡಿಸಬಹುದು ಎಂಬುದು ಕೂಡ ಸರಳವಾಗಿ ಅರ್ಥೈಸಿಕೊಳ್ಳಬಹುದು.

ಆದರೆ ಮಾನಸಿಕ ಖಾಯಿಲೆ ಮನುಷ್ಯನ ನಿಗೂಢ ವ್ಯವಸ್ಥೆಯಲ್ಲಿರುತ್ತದೆ. ಹಲವು ಮಾನಸಿಕ ಸಮಸ್ಯೆಗಳು ತುಂಬಾ ಜಟಿಲವಾಗಿರುತ್ತವೆ. ಕುಟುಂಬ, ಸಮಾಜದ ಮುಂದೆ ಇದನ್ನು ಹೇಗೆ ಹೇಳಬೇಕು, ಎದುರಿಸಬೇಕೆಂಬ ಸಂಕುಚಿತ ಭಾವದಿಂದಲೇ ಸಮಸ್ಯೆ ಉಲ್ಬಣಿಸುತ್ತಾ ಹೋಗುತ್ತದೆ.
ಮಾನಸಿಕ ಖಾಯಿಲೆ ಒಂದೇ ಹಾದಿಯಲ್ಲಿ ಸಾಗುವಂತಹದಲ್ಲಾ, ಅದು ಮನಸ್ಸಿನ ಮೂಲೆಯಲ್ಲಿ ರೂಪಗೊಂಡು ನಾನಾ ಬಣ್ಣ ಪಡೆದುಕೊಳ್ಳುತ್ತದೆ.

ಹಾಗೇ ನೋಡುವುದಾದರೇ ಮಾನಸಿಕ ಖಾಯಿಲೆಯೂ ಚಿತ್ತ ಚಂಚಲತೆ, ಚಿತ್ತ ವಿಕಲತೆ, ಮದ್ದು/ಮದ್ಯವ್ಯಸವ, ಬುದ್ಧಿ ಮಾಂದ್ಯತೆ, ಮಕ್ಕಳಲ್ಲಿ ಕಂಡು ಬರುವ ನಡವಳಿಕೆ ದೋಷಗಳು ಮತ್ತಿತರ ಮನಸ್ಸಿನ ಕಾಯಿಲೆ, ಮನೋದೈಹಿಕ ಬೇನೆಗಳು, ವ್ಯಕ್ತಿ ದೋಷಗಳು, ಮೆದುಳಿನ ಅಂಗದೋಷದ ಖಾಯಿಲೆಗಳು ಇವೆ.

ಖಾಯಿಲೆಗಳನ್ನು ತಡೆಗಟ್ಟುವುದು ಹೇಗೆ:
ಮಾನಸಿಕ ಖಾಯಿಲೆ ಎಲ್ಲಡೆ ಹೆಚ್ಚಾಗುತ್ತಿರುವುದರಿಂದ ಸರ್ಕಾರವು ಆರೋಗ್ಯ ಇಲಾಖೆಯ ಸಹಾಯದೊಂದಿಗೆ ಮನುಷ್ಯನನ್ನು ಇವೆಲ್ಲದರಿಂದ ಮುಕ್ತಿಗೊಳಿಸುವಲ್ಲಿ ಪ್ರಯತ್ನಿಸುತ್ತಿದೆ. ಆ ಮೂಲಕ ಜಿಲ್ಲೆಯಲ್ಲಿ ಮಾನಸಿಕ ಖಾಯಿಲೆಗೆ ಸಂಬಂಧಪಟ್ಟಂತೆ ನಿಯಮಾವಳಿಯನ್ನು ಸಿದ್ದಪಡಿಸಿದೆ.

ಅವುಗಳು ಇಂತಿವೆ.
ಆರೋಗ್ಯವಂತ ಮಗು : ಆರೋಗ್ಯವಂತ ಮಗು ಪಡೆಯಲು ಗರ್ಭಿಣಿ ಸ್ತ್ರೀಯರ ಯೋಗಕ್ಷೇಮವನ್ನು ನೋಡಿಕೊಂಡು, ಆಕೆಗೆ ಒಳ್ಳೆಯ ಆಹಾರ, ಸರಿಯಾದ ಸಮಯದಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು.

ಮೆದುಳಿನ ಆರೋಗ್ಯ: ತಲೆಗೆ ಪೆಟ್ಟು ಬೀಳುವುದನ್ನು ತಪ್ಪಿಸಬೇಕು.
ದೈಹಿಕ ಆರೋಗ್ಯ: ಯಾವುದೇ ಶಾರೀರಿಕ ರೋಗ ಲಕ್ಷಣ ಕಾಣಿಸಿಕೊಂಡಾಗ ಉದಾಸೀನ ಮಾಡದೇ ಪರಿಚಯದ ವೈದ್ಯರನ್ನು ಕಾಣಬೇಕು.

ಸಂಬಂಧಗಳು: ಎಲ್ಲರೊಡನೆ ಸ್ನೇಹ ಬೆಳಿಸಿ, ಸ್ನೇಹಪೂರ್ವಕ ನಡವಳಿಕೆ ಬೆಸೆದುಕೊಂಡಾಗ ಆತಂಕವನ್ನು ಕಡಿಮೆ ಮಾಡುತ್ತದೆ. ರೋಗಿಗಳು ತಮ್ಮ ಅಭಿರುಚಿಗೆ ತಕ್ಕವರ ಹಾಗೂ ನಿಮ್ಮೊಡನೆ ಸ್ಪಂದಿಸಬಲ್ಲ ಕೆಲವು ಆತ್ಮೀಯರೊಡನೆ ನಿಮ್ಮ ಅನಿಸಿಕೆ, ಆಲೋಚನೆ, ಭಾವನೆಗಳನ್ನು ಹಂಚಿಕೊಳ್ಳಿ.

ಜೀವನ ಶೈಲಿ ಹಾಗೂ ಮೌಲ್ಯಗಳು: ಒಂದು ಆದರ್ಶ, ರೀತಿ, ನೀತಿ, ಜೀವನ ಮೌಲ್ಯಗಳನ್ನು ರೂಪಿಸಿಕೊಂಡು ಅದಕ್ಕೆ ನಿಷ್ಟರಾಗಿರಿ. ದೇವರು ಅಥವಾ ಮಾನವಾತೀತವಾದ ಶಕ್ತಿಯೊಂದರಲ್ಲಿ ನಂಬಿಕೆ ಇಟ್ಟುಕೊಳ್ಳಿ.
ದಿನಚರಿ: ದೈನಂದಿನ ಕೆಲಸಗಳನ್ನು ಕ್ರಮವಾಗಿ ಮಾಡಿ, ಮನೆಕೆಲಸ, ಮನರಂಜನೆ, ವಿಶ್ರಾಂತಿಗೆ ಗಮನ ಕೊಡಿ. ಶರೀರಕ್ಕೆ ವ್ಯಾಯಾಮ ಅತ್ಯವಶ್ಯಕ.
ಮಾನಸಿಕ ಒತ್ತಡ: ಸಂಕಷ್ಟ, ಸಮಸ್ಯೆಗಳು ಎದುರಾದಾಗ ಓಡಲು ಯತ್ನಿಸಬೇಡಿ, ಅದನ್ನು ಮರೆಯಲು ಮದ್ದು-ಮದ್ಯಗಳಿಗೆ ದಾಸರಾಗಬೇಡಿ. ಮನೆಯವರ, ಆತ್ಮೀಯರ, ಸಲಹೆ ಸಹಾಯ ಪಡೆಯಿರಿ.

ಸ್ಕಿಜೋಫ್ರೀನಿಯಾ ಕಾಯಿಲೆ:
ಸ್ಕಿಜೋಫ್ರೀನಿಯಾ ಎಂದರೆ ಮಾನಸಿಕ ಅಸ್ವಸ್ಥತೆ. ಈ ರೋಗಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಪಾಯ, ಅಸಾಧ್ಯ ಎಂದು ಎಲ್ಲರೂ ಹೇಳುವ ಕಾಲವಿತ್ತು. ಈ ಖಾಯಿಲೆ ತುತ್ತಾದವರು ಸಾಯುವವರೆಗು ಹಾಗೇ ಇರುವರು, ಇದು ಗುಣವಾಗುವುದೇ ಇಲ್ಲ ಎಂದು ನಂಬಿದ್ದರು. ಆದರೆ ಕಳೆದ 30 ವರ್ಷಗಳಿಂದ ಪರಿಸ್ಥಿತಿ ಬದಲಾಗಿದೆ ವೈದ್ಯಕೀಯರ ಆವಿಷ್ಕಾರದಿಂದ ರೋಗಿಗಳನ್ನು ಆಸ್ಪತ್ರೆಗೆ ಸೇರಿಸದೇ ಮನೆಯಲ್ಲೇ ಇಟ್ಟು ಮನೆಯವರ ನೆರವಿನಿಂದಲೆ ಚಿಕಿತ್ಸೆ ಪಡೆದರೆ ಫಲ ಅದ್ಬುತ.


ಸ್ಕಿಜೋಫ್ರೀನಿಯಾ ರೋಗಿಗಳಿಗೆ ಹೊರರೋಗಿ ವಿಭಾಗದಲ್ಲೇ ಚಿಕಿತ್ಸೆ ನಡೆಸುವುದು, ಪ್ರಾ.ಆ.ಕೇಂದ್ರಗಳ ಹಾಗೂ ಖಾಸಗಿ ಚಿಕಿತ್ಸಾಲಯಗಳ ಸಾಧಾರಣ ವೈದ್ಯರ ನೆರವಿನಿಂದಲೇ ಚಿಕಿತ್ಸೆ ಮುಂದುವರೆಸುವುದು ಈಗ ಜನಪ್ರತಿಯವಾಗುತ್ತಿದೆ.

ಇದರ ಲಕ್ಷಣಗಳು:
ಇದು ಸಾಮಾನ್ಯವಾಗಿ ಮುಖ್ಯವಾಗಿ ಆಲೋಚನೆಗಳು, ಭಾವನೆಗಳು ಹಾಗೂ ಪಂಚೇಂದ್ರಿಯಗಳ ಮೂಲಕ ಸಂವೇದನಾ ಕ್ರಿಯೆಯಲ್ಲಿ ಏರುಪೇರಾಗುತ್ತದೆ.
ಅಸ್ತವ್ಯಸ್ತ ಆಲೋಚನೆ- ಅಂದರೆ ಸ್ಕಿಜೋಫ್ರೀನಿಯಾ ರೋಗಿಯ ಆಲೋಚನೆ ಸ್ವಷ್ಟವಾಗಿರುವುದಿಲ್ಲ. ಹಾಗೂ ತರ್ಕಬದ್ದವಾಗಿರುವುದಿಲ್ಲ. ಅಸಂಬದ್ಧವಾಗಿರುತ್ತದೆ. ಅರ್ಥಹೀನವಾಗಿರುತ್ತದೆ. ವಿಚಿತ್ರವಾಗಿರುತ್ತದೆ.

ಆತ ವ್ಯಕ್ತಪಡಿಸುವ ನಂಬಿಕೆಗಳಿಗೆ ಯಾವುದೇ ಆಧಾರವಿರುವುದಿಲ್ಲ. ವಿನಾಕಾರಣ ಆತ ಸಂಶಯಪೀಡಿತನಾಗಬಹುದು.
ಭಾವನೆಗಳ ಏರುಪೇರು-ಸ್ಕಿಜೋಫ್ರೀನಿಯಾ ಖಾಯಿಲೆಯಿಂದ ನರಳುತ್ತಿರುವ ವ್ಯಕ್ತಿಗೆ ವಿಪರೀತ ಕೋಪ, ದುಃಖ, ಸಂತೋಷದ ಮನಸ್ಥಿತಿ ಇರುತ್ತದೆ, ವಿನಾಕಾರಣ ನಗುವುದು, ಅಳುವುದು ಅಥವಾ ಯಾವುದೇ ಭಾವನೆ ತೋರಿಸದೆ ನಿರ್ಲಿಪ್ತನಂತಿರುವುದು.
ಅಸಹಜ ಹಾಗೂ ವಿಚಿತ್ರ ಅನುಭವಗಳು- ಈ ವ್ಯಕ್ತಿಯು ಭ್ರಮಾಧೀನನಾಗಿರುತ್ತಾನೆ. ಕಣ್ಣು ನೋಡುವುದೊಂದಾದರೆ, ಆತ ಅರ್ಥ ಮಾಡಿಕೊಳ್ಳುವುದು ಇನ್ನೊಂದಾಗುತ್ತದೆ. ಆತನ ಪ್ರಜಾಸ್ಥಿತಿ ನೂರಕ್ಕೆ ನೂರು ಸರಿ ಇದ್ದರೂ ಹಗಲಿನಲ್ಲೂ ಹಗ್ಗವನ್ನು ಕಂಡು ಹಾವೆಂದು ಭಯ ಭೀತನಾಗಬಹುದು.

ನೆರಳನ್ನು ಕಂಡು ಭೂತ/ಕಳ್ಳ ಎಂದು ಹೇಳಬಹುದು. ಹಾಗೆಯೇ ಕೇಳಿದ ಧ್ವನಿಯನ್ನು, ಗ್ರಹಿಸಿದ ವಾಸನೆಯನ್ನು, ಸ್ವರ್ಶವನ್ನು ತಪ್ಪು ತಪ್ಪಾಗಿ ವಿಶ್ಲೇಷಿಸುತ್ತಾನೆ.
ದೈಹಿಕ ಕ್ರಿಯೆಗಳ ಏರುಪೇರು- ರೋಗಿಯು ಹಸಿವು ಮತ್ತು ಆಹಾರ ಸೇವನೆ ಅಸ್ತವ್ಯಸ್ತವಾಗುತ್ತದೆ, ಮನಸ್ಸಿಗೆ ಬಂದರೆ ತಿನ್ನುವುದು, ಇಲ್ಲದಿದ್ದರೆ ದಿನಗಟ್ಟಲೆ ಉಪವಾಸವಿರುವುದು. ಯಾವುದನ್ನು ತಿನ್ನಬೇಕು, ಯಾವುದು ತಿನ್ನಬಾರದು ಆತನಿಗೆ ತಿಳಿದಿರುವುದಿಲ್ಲ.
ಇದಲ್ಲದೇ ಇನ್ನೂ ಸಾಮಾನ್ಯವಾಗಿ ಮಂಕುತನ, ಜಡತ್ವ ಗಲಾಟೆ ಹಾಗೂ ಉದ್ರೇಸಕಾವಸ್ಥೆ ಅಥವಾ ಅತ ಸಂಶಯ/ಅನುಮಾನ ಪ್ರವೃತ್ತಿ ಸ್ಥಿತಿ ಕಾಣುತ್ತದೆ.

ಸ್ಕಿಜೋಫ್ರೀನಿಯಾ ಸಂಭವ:
ಇದು ಸಾಮಾನ್ಯವಾಗಿ 15 ರಿಂದ 25 ವರ್ಷ ವಯಸ್ಸಿನ ಅವಧಿಯಲ್ಲಿ ಕಾಣಿಸಿಕೊಳ್ಳುತ್ತದೆ. ಪದೇ ಪದೇ ಬರುವ ತೀವ್ರತರವಾದ ಸಂಕಷ್ಟಗಳಿಗೆ ವ್ಯಕ್ತಿ ಸಿಲುಕಿದಾಗ ಕಾಯಿಲೆ ಬರುತ್ತದೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಜನ, ಶ್ರೀಮಂತರು ಹಾಗೂ ಬಡವರು ಎಲ್ಲ ಬುಡಕಟ್ಟಿಗೆ ಸೇರಿದವರು ಸಮಾನವಾಗಿ ಈ ರೋಗಕ್ಕೆ ತುತ್ತಾಗುತ್ತಾರೆ.

ಚಿಕಿತ್ಸೆಯ ಕ್ರಮಗಳು:
ಮಾನಸಿಕ ಖಾಯಿಲೆಗೆ ಆಪ್ತ ಸಮಾಲೋಚನೆ, ವೈದ್ಯರ ಸಲಹೆಯೊಂದಿಗೆ ಔಷಧಿಗಳು, ಚುಚ್ಚುಮದ್ದುಗಳ ರೂಪದಲ್ಲಿ ಅನೇಕ ಬಗೆಯ ಚಿಕಿತ್ಸೆಗಳು ನೀಡಲಾಗುತ್ತದೆ.

ಇನ್ನೂ ಇಂತಹ ಖಾಯಿಲೆ ಕಾಣಿಸಿಕೊಂಡ ಕೆಲವೇ ವಾರದೊಳಗೆ ಔಷಧೋಪಚಾರವನ್ನು ಪ್ರಾರಂಭಿಸಬೇಕು. ವೈದ್ಯರನ್ನು ಆಗಿಂದಾಗ್ಗೆ ಕಂಡು ಸಲಹೆ ಮಾರ್ಗದರ್ಶನ ಪಡೆಯಬೇಕು. ಮನೆಯವರು ಸರಿ ಪ್ರಮಾಣದ ಪ್ರೀತಿ, ವಿಶ್ವಾಸ, ಆಸರೆ ನೀಡಬೇಕು. ರೋಗಿ ವಾಸಿಸುವ ವಾತಾವರಣ ಅಹಿತಕರವಾಗಿದ್ದರೆ ಖಾಯಿಲೆೆ ವಾಸಿಯಾಗದು ಹಾಗೂ ಮರುಕಳಿಸಬಹುದು. ಕೆಲಸ, ಮನರಂಜನೆ, ರೋಗಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಆತನ ಆತ್ಮವಿಶ್ವಾಸ, ಸ್ವಾವಲಂಬನೆ ಪ್ರೋತ್ಸಾಹಿಸತಕ್ಕಂತಹ ಕೆಲಸ ಮಾಡಬೇಕು. ಮದ್ಯ, ಮಾದಕ, ವರ್ಜ್ಯ-ರೋಗಿ ಯಾವುದೇ ಕಾರಣಕ್ಕಾಗಿ ಮದ್ಯಪಾನ ಮಾಡುವುದು, ಗಾಂಜಾ, ಅಫೀಮು ಇತ್ಯಾದಿ ಮಾದಕ ವಸ್ತುಗಳನ್ನು ಸೇವಿಸುವುದರಿಂದ ಖಾಯಿಲೆ ವಾಸಿಯಾಗದೆ ಜಾಸ್ತಿಯಾಗಬಹುದು, ಇವೆಲ್ಲವುಗಳನ್ನು ಕ್ರಮವಾಗಿ ಪಾಲಿಸುವದರಿಂದ ಸ್ಕಿಜೋಫ್ರೀನಿಯಾ ರೋಗವು ಗುಣಮುಖವಾಗುತ್ತದೆ.

ಹಾಗೂ ಈ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಯಾವುದೇ ಆಹಾರ ಪಥ್ಯ ಮಾಡುವ ಅಗತ್ಯವಿಲ್ಲ.

ಟೆಲಿಮನಸ್-ರೋಗಿಗಳಿಗೆ ಅನುಕೂಲ:
ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಆಪ್ತ ಸಮಾಲೋಚನ ಕಾರ್ಯಕ್ರವವನ್ನು ಕೂಡ ಹಮ್ಮಿಕೊಳ್ಳಲಾಗಿದೆ.

ಆ ಮೂಲಕ ಔಷಧಿಗಳಿಂದ ಗುಣಮುಖರಾಗದವರನ್ನು ಆಪ್ತ ಸಮಾಲೋಚನೆಯ ಮೂಲಕ ಗುಣಪಡಿಸುವ ಆಶಾಭಾವನೆಯನ್ನು ಹೊಂದಿದ್ದಾರೆ. ಸರ್ಕಾರವು ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಇಂತಹ ಕಾರ್ಯಕ್ರಮವನ್ನು ನಡೆಸುತ್ತಿದೆ. ಮುಖಾಮುಖಿಯಾಗಿ ಹಾಗೂ ದೂರವಾಣಿ ಸಂಪರ್ಕ ಮೂಲಕ ಆಪ್ತ ಸಮಾಲೋಚನೆ ರೋಗಿಗಳಿಗೆ ನೆರವಾಗಲಿದ್ದು, ಟೆಲಿಮನಸ್ ಸಂಖ್ಯೆ 14416 ನಂಬರ್ ಗೆ ಕರೆ ಮಾಡಿ ವ್ಯಥೆಗೆ ಒಳಪಟ್ಟವರು, ಪರೀಕ್ಷೆ ಒತ್ತಡಕ್ಕೊಳಗಾದವರು, ಕೌಟುಂಬಿಕ ಮಸ್ಯೆ, ಆತ್ಮಹತ್ಯೆ ಆಲೋಚನೆ, ಮಾದಕ ವ್ಯಸನ, ಇತರೆ ಯಾವುದೇ ಮಾನಸಿಕ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು.

ಈ ಸಹಾಯವಾಣಿ ರೋಗಿಯ ಮಾಹಿತಿಯನ್ನು ಕಲೆಹಾಕಿ ಆಯಾ ಜಿಲ್ಲೆಯ ಆರೋಗ್ಯ ಕೇಂದ್ರಕ್ಕೆ ಮಾಹಿತಿಯನ್ನು ತಲುಪಿಸುತ್ತದೆ. ಇದರಿಂದ ರೋಗಿಗಳಿಗೆ ಜಿಲ್ಲೆಯ ಆರೋಗ್ಯ ಕೇಂದ್ರದಿಂದ ಎಲ್ಲ ರೀತಿ ಚಿಕಿತ್ಸೆ ದೊರಕುತ್ತದೆ.

ಆಕಾಶ್. ಆರ್.ಎಸ್, ಪ್ರಶಿಕ್ಷಣಾರ್ಥಿ, ವಾರ್ತಾ ಇಲಾಖೆ

S.N.Chennabasappa ಪರೀಕ್ಷೆಗೆ ಮುನ್ನ ತಪಾಸಣೆಯಲ್ಲಿ ಜನಿವಾರಕ್ಕೆ ಕತ್ತರಿ‌ ಪ್ರಕರಣ, ಸೂಕ್ತ ಕ್ರಮಕ್ಕೆ ಶಾಸಕ ‘ಚೆನ್ನಿ’ ಆಗ್ರಹ

0

S.N.Chennabasappa ವಿದ್ಯಾರ್ಥಿಗಳು ಮತ್ತು ಬಹುಸಂಖ್ಯಾತರು ನನ್ನನ್ನು ಭೇಟಿಮಾಡಿ ರಾಜ್ಯ ಸರಕಾರದ ಪರೀಕ್ಷಾ ಮಂಡಳಿಯ ಅಧಿಕಾರಿಯಿಂದ ತಮಗಾದ ಅನ್ಯಾಯವನ್ನು ತೋಡಿಕೊಂಡಿರುತ್ತಾರೆ. ದಿನಾಂಕ: 16/04/2025 ರಂದು ಶಿವಮೊಗ್ಗ ನಗರದ ಆದಿಚುಂಚನಗಿರಿ ಬಿಜಿಎಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬಹುಸಂಖ್ಯಾತ ವಿದ್ಯಾರ್ಥಿಗಳು ನಿತ್ಯ ಧರಿಸುವ ಜನಿವಾರ, ಶಿವದಾರ, ಕಾಶಿದಾರ ಹಾಗು ನಂಬಿದ ದೇವರುಗಳ ದಾರದ ಸಂಕೇತಗಳನ್ನೆಲ್ಲಾ ಬಿಚ್ಚಿಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳನ್ನು ಗೊಂದಲಗೊಳಿಸಿದ್ದಲ್ಲದೇ ಅಧೀರರನ್ನಾಗಿ ಮಾಡಿ ತೊಂದರೆ ಕೊಟ್ಟಿದ್ದಾರೆ. ಇದು ವಿದ್ಯಾರ್ಥಿಯ ಹುಟ್ಟು ನಂಬಿಕೆ ಮತ್ತು ಭವಿಷ್ಯ ಎರಡನ್ನೂ ನಿಶ್ಚಿತವಾಗಿ ತೊಡೆದು ಹಾಕುವ ಪ್ರಯತ್ನವಾಗಿದೆ. ಪರೀಕ್ಷಾ ಕೇಂದ್ರದ ಅಧಿಕಾರಿ ನಡೆದು ಕೊಂಡಿರುವ ರೀತಿ ಬಹುಸಂಖ್ಯಾತರ ಮೇಲಿನ ನೇರ ಅಕ್ರಮವಾಗಿರುತ್ತದೆ ಮತ್ತು ಅತೀರೇಕದ ವರ್ತನೆಯಾಗಿರುತ್ತದೆ.

S.N.Chennabasappa ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ಶಿವದಾರಗಳನ್ನು ಕತ್ತರಿಸಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆತರುವ ಕೆಲಸವಾಗಿರುತ್ತದೆ. ಮೇಲ್ನೋಟಕ್ಕೆ ಆಡಳಿತದಿಂದ ನಡೆದ ತಪ್ಪು ತೋರುತ್ತದೆ ಈ ಬಗ್ಗೆ ಕುರಿತು ತಕ್ಷಣವೇ ಈ ವಿಷಯ ಪರಿಶೀಲಿಸಿ ತಪ್ಪು ಎಸಗಿದ ಅಧಿಕಾರಿಯ ಮೇಲೆ ತಕ್ಷಣ ಸೂಕ್ತ ಕಠಿಣ ಕ್ರಮ ಜರುಗಿಸಿ ಮುಂದಿನ ದಿನಗಳಲ್ಲಿ ಈ ರೀತಿಯ ಸನ್ನಿವೇಶಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕಾಗಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಕೋರಲಾಗಿದೆ.

Scheduled Castes Welfare Department ಪ್ರತಿಷ್ಠಿತ ಶಾಲೆಗಳ ಅರ್ಹತಾ ಪರೀಕ್ಷೆ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

0

Scheduled Castes Welfare Department ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು 2025-26ನೇ ಸಾಲಿನಲ್ಲಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು ಶಿವಮೊಗ್ಗ ಜಿಲ್ಲೆಯ ನೊಂದಾಯಿತ ಪ್ರತಿಷ್ಠಿತ ಶಾಲೆಗಳಿಗೆ ಅರ್ಹತಾ ಪರೀಕ್ಷೆಯ ಮೂಲಕ 6ನೇ ತರಗತಿಯ 18 ಸ್ಥಾನಗಳಿಗೆ ದಾಖಲಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ.
ಅರ್ಹ 5ನೇ ತರಗತಿ ಉತ್ತೀರ್ಣರಾಗಿರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ಎಲ್ಲಾ ತಾಲೂಕಗಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಮೇ 03 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ದೂ.ಸಂ.: 7022796636 ನ್ನು ಹಾಗೂ ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸುವುದು.

Akhila Karnataka Sports Karate Association ಕರಾಟೆ ತೀರ್ಪುಗಾರರ ಪರೀಕ್ಷೆಯಲ್ಲಿ ಶಿವಮೊಗ್ಗದ ಶ್ರೀಹರ್ಷ ಉತ್ತೀರ್ಣ

0

Akhila Karnataka Sports Karate Association ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ ಕರಾಟೆ ಇಂಡಿಯಾ ಆರ್ಗನೈಜೇಷನ್ ನ ಕರಾಟೆ ತೀರ್ಪುಗಾರರ ಪರೀಕ್ಷೆಯಲ್ಲಿ
ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ನ ತೀರ್ಪುಗಾರ ಹಾಗೂ ಶಿವಮೊಗ್ಗದ ಒಕ್ಕಲಿಗ ಸಮಾಜದ ಶ್ರೀಮತಿ ಜ್ಯೋತಿ ಮತ್ತು ಶಾಂತರಾಜು ದಂಪತಿಗಳ ಪುತ್ರ ಶ್ರೀ ಹರ್ಷ ಪರೀಕ್ಷೆಯಲ್ಲಿ ಭಾಗವಹಿಸಿ ಜೆ ಎ ತೀರ್ಪುಗಾರರಾಗಿ ಉತ್ತೀರ್ಣರಾಗಿದ್ದು
ಇವರು ಈ ಹಿಂದೆ ಶಿವಮೊಗ್ಗದಲ್ಲಿ ನಡೆದ ತೀರ್ಪುಗಾರರ ಪರೀಕ್ಷೆಯಲ್ಲಿ ಭಾಗವಹಿಸಿ
ಜಿ ಬಿ ತೀರ್ಪುಗಾರರಾಗಿ ಅರ್ಹತೆಯನ್ನು ಪಡೆದುಕೊಂಡಿದ್ದರು.

Akhila Karnataka Sports Karate Association ಕರಾಟೆ ಇಂಡಿಯಾ ಆರ್ಗನೈಸೇಷನ್
ಭಾರತದ ರಾಷ್ಟ್ರೀಯ ಕರಾಟೆ ಫೆಡರೇಶನ್ ಆಗಿದ್ದು ವಿಶ್ವಕರಾಟೆ ಫೆಡರೇಷನ್ ಇಂದ ಮಾನ್ಯತೆ ಪಡೆದಿದ್ದು ಪ್ರಸ್ತುತ ಶ್ರೀ ಹರ್ಷ
ಮೇಲ್ಕಂಡ ಸಂಸ್ಥೆಯ ಅರ್ಹತೆ ಪಡೆದ ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ತೀರ್ಪುಗಾರನಾಗಿದ್ದು
ಪ್ರಸ್ತುತ ಇವರು ಕರಾಟೆ ಬ್ಲಾಕ್ ಬೆಲ್ಟ್ ಆಗಿದ್ದು ವಿನೋಬನಗರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು ತೀರ್ಪುಗಾರನಾಗಿ
ಮುಂಬಡ್ತಿ ಪರೀಕ್ಷೆಯಲ್ಲಿ ಉತ್ತೀರ್ಣನಾದ ಶ್ರೀ ಹರ್ಷ ರವರಿಗೆ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಶುಭಕೋರಿದ್ದಾರೆ.

ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನಡೆದ ಕನಕದಾಸರ ಕೀರ್ತನೆ ಗಾಯನ ಸ್ಪರ್ಧೆ

0

ಶಿವಮೊಗ್ಗ ಕನಕ ಭಜನಾ ಮಂಡಳಿಯವರು ದಶಮಾನೋತ್ಸವ ಕಾರ್ಯಕ್ರಮವನ್ನು ಜಯಂತಿ ಪರಮೇಶ್ವರ್ ರವರ ಮನೆಯಲ್ಲಿ ಆಚರಣೆ ಮಾಡಿದರು. ಸವಿನೆನಪಿಗಾಗಿ ಕನಕದಾಸರ ಕೀರ್ತನೆಗಳ ಗಾಯನ ಸ್ಪರ್ಧೆ ಯನ್ನು ಶಿವಮೊಗ್ಗದ ಆಯ್ದ ಭಜನಾ ಮಂಡಳಿಗಳಿಗೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ, ಉತ್ತರ ಕರ್ನಾಟಕದ ಭಜನಾ ಪರಿಷತ್ತಿನ ಸಂಚಾಲಕರಾದ
ಡಾ , ವಿಜೇಂದ್ರ ಚಾರ್ ಜೋಷಿಗಳು ಮಂತ್ರಾಲಯ,
ನೂತನ ಜಿಲ್ಲಾ ಭಜನಾ ಪರಿಷತ್ತಿನ ಅಧ್ಯಕ್ಷ ವೇ/ ಬ್ರ ಸಂದೇಶ್ ಉಪಾಧ್ಯಯ,
ಕಾರ್ಯದರ್ಶಿ ಶಬರೀಶ್ ಕಣ್ಣನ್, ಅಂಕಣಗಾರ್ತಿ ಶ್ರೀರಂಜನಿ ದತ್ತಾತ್ರಿ,
ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಾಹುಲ್ ಪಿ ಬಿದರೆ, ಕನಕ ಭಜನಾ ಮಂಡಳಿ ಅಧ್ಯಕ್ಷರಾದ ಗೀತಾ ನಾಗರಾಜ್, ಕಾರ್ಯದರ್ಶಿ ರಾಣಿ ರಾಜು, ಉಪಾಧ್ಯಕ್ಷೆ ಸಪ್ನಾ ಸುರೇಶ್ ಹಾಗೂ ಆಡಳಿತ ಮಂಡಳಿಯ ಕಾರ್ಯಕಾರಿ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.

S.N.Chennabasappa ಶಿವಮೊಗ್ಗ ಸಹ್ಯಾದ್ರಿ‌ನಗರದಲ್ಲಿ ನೀರಿಗಾಗಿ ಸಾರ್ವಜನಿಕರ ಪ್ರತಿಭಟನೆ, ಶಾಸಕ ‘ಚೆನ್ನಿ’ ಭೇಟಿ ಪರಿಶೀಲನೆ

0

S.N.Chennabasappa ಶಿವಮೊಗ್ಗದ ಸಹ್ಯಾದ್ರಿ ನಗರ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ಸ್ಥಳೀಯ ನಿವಾಸಿಗಳು ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ತಕ್ಷಣ ಭೇಟಿ ನೀಡಿ, ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು.

ಸ್ಥಳೀಯರ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಕುಡಿಯುವ ನೀರು ಸರಬರಾಜು ಮಂಡಳಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಸಮಸ್ಯೆಯ ಮೂಲ ಕಾರಣವನ್ನು ಗುರುತಿಸಿ, ರಾತ್ರಿ 10 ಗಂಟೆಯಿಂದ ಬಡಾವಣೆಗೆ ನೀರಿನ ಸರಬರಾಜು ಪ್ರಾರಂಭಿಸಲಾಯಿತು.

S.N.Chennabasappa ಸ್ಥಳೀಯರು ಈ ಕ್ರಮಕ್ಕೆ ತೃಪ್ತಿ ವ್ಯಕ್ತಪಡಿಸಿ, ತಮ್ಮ ಧ್ವನಿಗೆ ಸ್ಪಂದನೆ ದೊರೆತಿರುವುದಕ್ಕೆ ಶಾಸಕರಿಗೆ ಕೃತಜ್ಞತೆ ತಿಳಿಸಿದರು. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳನ್ನು ಪೂರ್ವಭಾವಿಯಾಗಿ ತಡೆಯುವ ನಿಟ್ಟಿನಲ್ಲಿ, ನಿರಂತರ ನಿಗಾವಹಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಶಾಸಕರು ಸೂಚನೆ ನೀಡಿದರು.

Thirtahalli Police ಸೊಪ್ಪುಗುಡ್ಡೆ ಗ್ರಾಮದಿಂದ ವ್ಯಕ್ತಿ ನಾಪತ್ತೆ, ತೀರ್ಥಹಳ್ಳಿ‌ಪೊಲೀಸ್ ಠಾಣೆ ಪ್ರಕಟಣೆ

0

Thirtahalli Police ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿವಿಧ ದಿನಾಂಕಗಳಂದು 3 ಜನ ಕಾಣೆಯಾಗಿದ್ದು, ಮಾಹಿತಿ ನೀಡಲು ತಿಳಿಸಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಸೊಪ್ಪುಗುಡ್ಡೆ ಗ್ರಾಮದ ನಾಗರಾಜ ಟಿ. ಎಂಬುವವರ ತಮ್ಮ ಟಿ.ಡಿ. ಜಯಪ್ರಕಾಶ್ ಬಿನ್ ದೇವಪ್ಪ ನಾಯ್ಕ ಎಂಬ 48 ವರ್ಷದ ವ್ಯಕ್ತಿ ದಿ: 15/03/2010 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.

ಈ ವ್ಯಕ್ತಿಯ ಚಹರೆ 5.4 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಕೊಂಕಣಿ, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ.

ತೀರ್ಥಹಳ್ಳಿ ತಾಲೂಕಿನ ಅಕ್ಲಾಪುರ ಗ್ರಾಮದ ರೇಖಾ ಎಂಬುವವರ ಪತಿ ರಾಘು ಶೆಟ್ಟಿಗಾರ್ ಬಿನ್ ಬಗ್ರು ಶೆಟ್ಟಿಗಾರ್ ಎಂಬ 30 ವರ್ಷದ ವ್ಯಕ್ತಿ 2024ರ ಜುಲೈನಲ್ಲಿ ಮನೆಯಿಂದ ಬೈಕ್ ರಿಪೇರಿ ಮಾಡಿಕೊಂಡು ಬರುತ್ತೇನೆಂದು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಕಾಲಿನಲ್ಲಿ ಸುಟ್ಟ ಗಾಯದ ಕಲೆ ಇರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾರೆ.
ತೀರ್ಥಹಳ್ಳಿ ತಾಲೂಕಿನ ಯಡೆಹಳ್ಳಿಕೇರೆ ಗ್ರಾಮದ ಶಮೀನಾ ಬಾನು ಎಂಬುವವರ ಪತಿ ಅಕ್ರಮ್ ಬಾಷಾ ಬಿನ್ ಬಾಷಾ ಸಾಬ್ ಎಂಬ 38 ವರ್ಷದ ವ್ಯಕ್ತಿ ದಿ:07/02/2025 ರಂದು ಮನೆಯಿಂದ ಗ್ಯಾರೇಜ್ ಕೆಲಕ್ಕೆಂದು ಹೋದವರು ಈವರೆಗೂ ವಾಪಸ್ಸು ಬಂದಿರುವುದಿಲ್ಲ.

Thirtahalli Police ಈತನ ಚಹರೆ 5.8 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಉರ್ದು ಭಾಷೆ ಮಾತನಾಡುತ್ತಾರೆ.

ಈ ವ್ಯಕ್ತಿಗಳ ಕುರಿತು ಮಾಹಿತಿ ಇದ್ದಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆ ದೂ.ಸಂ.:08181-228333 ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ದೂ.ಸಂ.: 9480803352 ಇವರನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.