Monday, August 3, 2026
Monday, August 3, 2026
Home Blog Page 2068

ಸೀಟ್ ಬ್ಲಾಕಿಂಗ್ ದಂಧೆಗೆ ಸರ್ಕಾರದ ಕಡಿವಾಣ

0

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕೌನ್ಸಿಲಿಂಗ್ ಸಮಯದಲ್ಲೇ ಸಂಪೂರ್ಣ ಶುಲ್ಕ ಭರ್ತಿ ಮಾಡಿಕೊಳ್ಳುವ ಕ್ರಮಕ್ಕೆ ಮುಂದಾಗಿದೆ. ಇದರಿಂದಾಗಿ ಅನುದಾನರಹಿತ ಖಾಸಗಿ ಕಾಲೇಜುಗಳ ಇಂಜಿನಿಯರಿಂಗ್ ಸೀಟು ಹಂಚಿಕೆಯಲ್ಲಿ ನಡೆಯುತ್ತಿದ್ದಂತಹ ‘ಸೀಟ್ ಬ್ಲಾಕಿಂಗ್’ ಹಾವಳಿಗೆ ತೆರೆ ಎಳೆದಿದೆ.

ಈ ವರ್ಷದ ಶೈಕ್ಷಣಿಕ ಕೌನ್ಸೆಲಿಂಗ್ ಸಮಯದಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಸೇರಿದಂತೆ 20 ಲಕ್ಷ ರೂಪಾಯಿ ಮೊತ್ತದ ಸಂಪೂರ್ಣ ಶುಲ್ಕವನ್ನು ಆರಂಭದಲ್ಲಿ ಪಾವತಿಸಬೇಕು ಹಾಗೂ ವಿದ್ಯಾರ್ಥಿಗಳು ಪ್ರವೇಶ ಪಡೆದ ಬಗ್ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜೊತೆಗೆ ಕಾಮೆಡ್-ಕೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮನದಟ್ಟು ಮಾಡಿಕೊಳ್ಳುತ್ತಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆಲ್ಲಾ ವಿದ್ಯಾರ್ಥಿಗಳು ತಮಗೆ ಸೀಟು ದೊರೆತಾಗ ಬೋಧನಾ ಶುಲ್ಕದಲ್ಲಿ 55 ಸಾವಿರ ರೂಪಾಯಿ ಮಾತ್ರ ಪಾವತಿಸುತ್ತಿದ್ದರು. ನಂತರ ಕೌನ್ಸಿಲಿಂಗ್ ನ ಎಲ್ಲಾ ಸುತ್ತುಗಳು ಮುಗಿದ ಮೇಲೆ ಸೀಟುಗಳನ್ನು ಬಿಟ್ಟು ಕೊಡುತ್ತಿದ್ದರಿಂದ ಸ್ವಾಭಾವಿಕವಾಗಿ ಸೀಟುಗಳು ಆಡಳಿತ ಮಂಡಳಿಯ ಪಾಲಾಗುತ್ತಿತ್ತು. ಅಂತಹ ಸೀಟುಗಳನ್ನು ಆಡಳಿತ ಮಂಡಳಿ ಹೆಚ್ಚಿನ ಮೊತ್ತಕ್ಕೆ ನೀಡಿ ಹಣ ಗಳಿಸುತ್ತಿದ್ದವು. ಇದರಿಂದ ಪ್ರತಿವರ್ಷ ಶೇ.15 ರಿಂದ 25 ರಷ್ಟು ಸೀಟುಗಳನ್ನು ಬ್ಲಾಕ್ ಮಾಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಈ ನಿಟ್ಟಿನಲ್ಲಿ ಪ್ರವೇಶ ಮೇಲ್ವಿಚಾರಣಾ ಸಮಿತಿ ಮುಖ್ಯಸ್ಥರಾಗಿದ್ದ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಬಿ.ಮನೋಹರ್ ಸಮಿತಿಯ ಸಲಹೆಯ ಮೇರೆಗೆ ಕೆಇಎ ಕ್ರಮಕ್ಕೆ ಮುಂದಾಗಿದೆ ಎಂದು ಕಾಮೆಡ್-ಕೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಭಾರತದಲ್ಲಿ ಹೂಡಿಕೆ

0

ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಆರ್ ಬಿ ಡಿ ರಿಟೇಲ್ ಡೈರೆಕ್ಟ್ ಗಿಲ್ಟ್ ಸೌಲಭ್ಯವನ್ನು ಆರಂಭ ಗೊಳಿಸಿದ್ದಾರೆ. ಜನರು ಆನ್ ಲೈನ್ ಮೂಲಕವೇ ರಿಟೇಲ್ ಡೈರೆಕ್ಟರ್ ಖಾತೆಯನ್ನು ತೆರೆಯುವ ಅವಕಾಶ ಕಲ್ಪಿಸಿಕೊಡಲಾಗಿದೆ.

‘ಹೊಸ ಯೋಜನೆಯೂ ದೇಶದಲ್ಲಿ ಹೂಡಿಕೆ ಅವಕಾಶಗಳನ್ನು ಹೆಚ್ಚಿಸಲಿದೆ. ದೇಶದ ಬಂಡವಾಳ ಮಾರುಕಟ್ಟೆಗಳು ಸರಳವಾಗಿ, ಸುರಕ್ಷಿತ ವ್ಯವಸ್ಥೆಯ ಮೂಲಕ ಲಭ್ಯವಾಗುವಂತೆ ಮಾಡುತ್ತದೆ’ಎಂದು ವಿಡಿಯೋ ಕಾನ್ಫರೆನ್ಸ್ ನಲ್ಲಿ ತಿಳಿಸಿದರು.
6-7 ವರ್ಷಗಳ ಹಿಂದೆ ಬ್ಯಾಂಕಿಂಗ್, ಪಿಂಚಣಿ, ವಿಮಾವಲಯಗಳು ಕೆಲವರಿಗೆ ಮಾತ್ರ ಸೀಮಿತವಾಗಿತ್ತು. ಇವುಗಳು ಸಾಮಾನ್ಯ ಜನರಿಗೆ ಲಭ್ಯವಾಗುತ್ತಿರಲಿಲ್ಲ. ‘ಈ ಸೌಲಭ್ಯ ಗಳೆಲ್ಲವೂ ಬಡವರಿಗೂ ಸಿಗುವಂತೆ ಮಾಡಬೇಕಾದ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿಗಳು ಆ ನಿಟ್ಟಿನಲ್ಲಿ ಗಮನ ಹರಿಸಲಿಲ್ಲ’ ಎಂದು ದೂರಿದರು.

ಆರ್ ಡಿ ಜಿ ಖಾತೆಯನ್ನು ಬಳಸಿ ವ್ಯಕ್ತಿಗಳು ಸರ್ಕಾರದ ಸಾಲಪತ್ರಗಳನ್ನು ಖರೀದಿಸಬಹುದು. ಸರ್ಕಾರಿ ಸಾಲಪತ್ರಗಳನ್ನು ಖರೀದಿಸಿದವರು ಅವುಗಳನ್ನು ಇನ್ನೊಬ್ಬರಿಗೆ ಆನ್ ಲೈನ್ ಮೂಲಕವೇ ರವಾನಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಸಾಲಪತ್ರ ಖರೀದಿಗೆ ಹಣ ಪಾವತಿ ಯನ್ನು ಆನ್ಲೈನ್ ಬ್ಯಾಂಕಿಂಗ್ ಅಥವಾ ವ್ಯವಸ್ಥೆಯ ಮೂಲಕ ಮಾಡಬಹುದು. ಪೋರ್ಟಲ್ ಗೆ ಸಂಬಂಧಿಸಿದಂತೆ,18002677955 ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆಯಬಹುದಾಗಿದೆ.ಈ ಯೋಜನೆ ಅಡಿಯಲ್ಲಿ ನೀಡಿರುವ ಯಾವ ಸೌಲಭ್ಯ ಕ್ಕೂ ಹಣ ಪಾವತಿಸಬೇಕಾಗಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ಆರ್ ಡಿ ಜಿ ಖಾತೆ ತೆರೆಯುವ ಸಣ್ಣ ಹೂಡಿಕೆದಾರರು, ಭಾರತದಲ್ಲಿ ಉಳಿತಾಯ ಖಾತೆ ಹೊಂದಿರಬೇಕು. ಪ್ಯಾನ್ ಸಂಖ್ಯೆ, ಕೆವೈಸಿಗೆ ಅಗತ್ಯವಿರುವ ದಾಖಲೆಯನ್ನು ಹೊಂದಿರಬೇಕು. ಮೊಬೈಲ್ ಸಂಖ್ಯೆ ಹಾಗೂ ಇ ಮೇಲ್ ವಿಳಾಸ ಹೊಂದಿರಬೇಕು.

ನೇಮಕ ಖಾಯಂ ಕುರಿತು ಸೇನೆಗೆ ಸುಪ್ರೀಂ ಮೃದು ಪೆಟ್ಟು

0

ಭಾರತೀಯ ಸೇನೆ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದಾಗಿ ಸುಪ್ರೀಂಕೋರ್ಟ್ ನೀಡಿದ ಎಚ್ಚರಿಕೆಗೆ ಮಣಿದ ಸೇನೆಯು , ಎಲ್ಲಾ ಅರ್ಹ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗದ ಅನ್ವಯ ಕಾಯಂ ಹುದ್ದೆ ನೀಡುವುದಾಗಿ ತಿಳಿಸಿದೆ.

ಸೇನಾಧಿಕಾರಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ‘ವುಮೆನ್ ಶಾರ್ಟ್ ಸರ್ವಿಸ್ ಕಮಿಷನ್’ ಅಧಿಕಾರಿಗಳಿಗೆ ಕಾಯಂ ನೇಮಕಾತಿ ನೀಡುವಂತೆ ಲೆಫ್ಟಿನೆಂಟ್ ಕರ್ನಲ್ ನಿತಿಶಾ ಪ್ರಕರಣದಲ್ಲಿ ಈಗಾಗಲೇ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎ. ಎಸ್‌. ಬೋಪಣ್ಣ ಅವರಿದ್ದ ದ್ವಿಸದಸ್ಯ ಪೀಠವು, ಅರ್ಜಿಯ ವಿಚಾರಣೆಯನ್ನು ನಡೆಸಿತ್ತು.
ನಂತರ ಹತ್ತು ದಿನಗಳ ಒಳಗಾಗಿ 11 ಮಹಿಳಾ ಅಧಿಕಾರಿಗಳ ಸೇವೆ ಕಾಯಂಗೊಳಿಸಬೇಕು ಎಂದು ಆದೇಶಿಸಿತ್ತು. ಆದರೆ, ತನ್ನ ಆದೇಶವನ್ನು ಕಡೆಗಣಿಸುತ್ತಿರುವುದು ಮತ್ತು ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
“ತನ್ನ ಸುಪರ್ದಿಯಲ್ಲಿ ಭಾರತೀಯ ಸೇನೆ ಅಗ್ರಸ್ಥಾನ ಇರಬಹುದು. ಆದರೆ ಸಾಂವಿಧಾನಿಕ ವ್ಯಾಪ್ತಿಯಲ್ಲಿ ಸುಪ್ರೀಂಕೋರ್ಟ್ ಸರ್ವೋಚ್ಛ ಎನ್ನುವುದನ್ನು ಮರೆಯದಿರಿ.ಈಗಾಗಲೇ ಮಹಿಳಾ ಅಧಿಕಾರಿಗಳ ಖಾಯಂ ನೇಮಕಾತಿಗೆ ಸಾಕಷ್ಟು ಅವಧಿಯನ್ನು ಸರ್ಕಾರಕ್ಕೆ ಮತ್ತು ಭಾರತೀಯ ಸೇನೆಗೆ ಕೋರ್ಟ್ ನೀಡಿದೆ. ನೇಮಕಾತಿ ಸಂಬಂಧ ಇನ್ನೂ ಕೂಡ ಕೋರ್ಟ್ ಮೆಟ್ಟಿಲು ಏರದೇ ಇರುವವರು, ಸೇನೆಯ ಅರ್ಹತಾ ಮಾನದಂಡ ಪೂರೈಸಿದ್ದಲ್ಲಿ ಅವರಿಗೂ ಕೂಡ ಖಾಯಂ ನೇಮಕಾತಿ ಕಲ್ಪಿಸಬೇಕು. ರಕ್ಷಣಾ ಸಚಿವಾಲಯ ಮತ್ತು ಭಾರತೀಯ ಸೇನೆಯು ಸುಪ್ರೀಂ ಆದೇಶ ಉಲ್ಲಂಘಿಸಿ ನಿಂದನೆಗೆ ಗುರಿಯಾಗುವ ಹಠಮಾರಿತನ ಪ್ರದರ್ಶಿಸಲ್ಲ ಎಂಬ ವಿಶ್ವಾಸವಿದೆ” ಎಂದು ನ್ಯಾ. ಚಂದ್ರಚೂಡ್ ಅವರಿದ್ದ ಪೀಠ ಹೇಳಿದೆ.

ಇ-ಗ್ರಂಥಾಲಯ ಸದಸ್ಯತ್ವ ನೋಂದಣಿ

0

ಉಚಿತ ಇ-ಗ್ರಂಥಾಲಯ ಸದಸ್ಯತ್ವ ನೋಂದಣಿ
ಶಿವಮೊಗ್ಗ, ನವೆಂಬರ್ 12 (ಕರ್ನಾಟಕ ವಾರ್ತೆ) ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಸಾರ್ವಜನಿಕ ಓದುಗರ ಅನುಕೂಲಕ್ಕಾಗಿ ಡಿಜಿಟಲ್ ಗ್ರಂಥಾಲಯ ಸೇವೆಯನ್ನು ಪ್ರಾರಂಭಿಸಲಾಗಿದ್ದು, 2021 ನೇ ಸಾಲಿನ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಡಿಜಿಟಲ್ ಗ್ರಂಥಾಲಯ ಬಳಸಿಕೊಳ್ಳಲು ಉಚಿತವಾಗಿ ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಜಾಲತಾಣ www.karnatakadigitalpubliclibrary.org ಮೂಲಕ e-Sarvajanika Granthalaya ಇ-ಗ್ರಂಥಾಲಯ ಸೇವೆ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಡಿಜಿಟಲ್ ಗ್ರಂಥಾಲಯದ ಸದಸ್ಯತ್ವವನ್ನು ಉಚಿತವಾಗಿ ಪಡೆದುಕೊಂಡು ಮೊಬೈಲ್, ಕಂಪ್ಯೂಟರ್, ಲ್ಯಾಪ್‍ಟಾಪ್, ಟ್ಯಾಬ್ ಮೂಲಕ ಪುಸ್ತಕಗಳು/ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳನ್ನು ಉಚಿತವಾಗಿ ಓದಬಹುದು.
ಇ-ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಇ-ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳು, ಸಿಇಟಿ/ಎನ್‍ಇಇಟಿ/ಯುಪಿಎಸ್‍ಸಿ/ಕೆಪಿಎಸ್‍ಸಿ ಅಲ್ಲದೇ ರಾಜ್ಯ ಸರ್ಕಾರದ ಸಿಬಿಎಸ್‍ಸಿ/ಐಸಿಎಸ್‍ಇ/ಎನ್‍ಸಿಇಆರ್‍ಟಿ ಪಠ್ಯಪುಸ್ತಕಗಳು ಮತ್ತು ವಿವಿಧ ಭಾಷೆಗಳ ಪ್ರಾದೇಶಿಕ, ರಾಷ್ಟ್ರೀಯ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಲಭ್ಯವಿದ್ದು ವಿದ್ಯಾರ್ಥಿಗಳು ಸಾರ್ವಜನಿಕರು ಉಚಿತ ಸದಸ್ಯತ್ವ ಪಡೆದು ಇದರ ಸದುಪಯೋಗ ಪಡೆಯಬೇಕೆಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ(ಪ್ರ) ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ತಂತ್ರಜ್ಞಾನ ಶೃಂಗ ಸಮಾವೇಶ

0

ಡಿಟಿಎಸ್ 2021ರಲ್ಲಿ ಮುಖ್ಯವಾಗಿ ಸೈಬರ್ ಸೆಕ್ಯೂರಿಟಿ, ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯಾಧುನಿಕ ತಂತ್ರಜ್ಞಾನದ ಕಡೆಗೆ ಗಮನ ಹರಿಸಲಾಗುವುದು ಎಂದು ಐಟಿ-ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ ಹೇಳಿದರು.

ನವೆಂಬರ್ 15ರಿಂದ 19ರವರೆಗೆ ನಡೆಯಲಿರುವ 24ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಇದೇ ಮೊದಲ ಬಾರಿಗೆ ಅರಬ್ ಸಂಸ್ಥಾನ, ವಿಯೆಟ್ನಾಮ್, ಯುರೋಪಿಯನ್ ಒಕ್ಕೂಟ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಪಾಲ್ಗೊಳ್ಳುತ್ತಿವೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು” ಸರಕಾರದ ಜಾಗತಿಕ ನಾವಿನ್ಯತೆ ಮೈತ್ರಿಕೂಟ ಕೈಗೊಂಡಿರುವ ರಚನಾತ್ಮಕ ಕ್ರಮಗಳಿಂದಾಗಿ 30ಕ್ಕೂ ಹೆಚ್ಚು ದೇಶಗಳೊಂದಿಗೆ ಶಿಕ್ಷಣ, ನವೋದ್ಯಮ, ಸಂಶೋಧನೆ ಹಾಗೂ ಅಭಿವೃದ್ಧಿ ಸಹಭಾಗಿತ್ವಕ್ಕೆ ಹೆಜ್ಜೆ ಇಡಲಾಗಿದೆ. ಈ ಸಂಘಟನೆಗಳು ರಾಜ್ಯದೊಂದಿಗೆ ತಮ್ಮ ತಂತ್ರಜ್ಞಾನ ಪರಿಣತಿಯನ್ನು ಪರಸ್ಪರ ನೆಲೆಯಲ್ಲಿ ಪ್ರದರ್ಶಿಸಲಿವೆ. ಅಮೆರಿಕದ ಜೊತೆಗಿನ ಸಹಭಾಗಿತ್ವವು, ಹೊಸ ಕ್ಷೇತ್ರದಲ್ಲಿ ಮತ್ತಷ್ಟು ಅಂತರಾಷ್ಟ್ರೀಯ ಅವಕಾಶ ಸೃಷ್ಟಿಸಲಿದೆ ಎಂದು ಅವರು ಆಶಾಭಾವನೆಯನ್ನು ವ್ಯಕ್ತಪಡಿಸಿದರು. ಡಿಟಿಎಸ್ 2021ರಲ್ಲಿ ಮೂವತ್ತಕ್ಕೂ ಹೆಚ್ಚು ದೇಶಗಳು ಭಾಗವಹಿಸಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದೊಂದಿಗೆ ಜಿಐಎ ಸಹಭಾಗಿತ್ವ ಹೊಂದಿರುವ ಆಸ್ಟ್ರೇಲಿಯಾ, ಜರ್ಮನಿ, ಜಪಾನ್, ಸ್ವಿಡ್ಜರ್ಲ್ಯಾಂಡ್ ಇನ್ನೂ ಮುಂತಾದ ದೇಶಗಳು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದವು.

ಸಾರಿಗೆ ಬಸ್ ನಲ್ಲಿ ಮೊಬೈಲ್ ಕಿರಿಕ್, ಬ್ರೇಕ್

0

ಇದು ಆಧುನಿಕ ಯುಗ. ಎಲ್ಲೆಂದರಲ್ಲಿ ಸ್ಮಾರ್ಟ್ ಫೋನ್ ಗಳ ಹಾವಳಿ. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಫೋನ್ ಗಳ ಬಳಕೆ ಸಾರ್ವಜನಿಕರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ. ಇದರಿಂದಾಗಿ ಶಬ್ದ ಮಾಲಿನ್ಯವು ಹೆಚ್ಚಾಗುತ್ತಿದೆ. ನಾವು ಎಷ್ಟೇ ಪ್ರಯತ್ನಿಸಿದರೂ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಫೋನ್ ಗಳ ಬಳಕೆಯನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ.
ಆದರೆ ಈಗ ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಗೊಳಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಮುಂದಾಗಿದೆ.
ಬಸ್ಸಿನಲ್ಲಿ ಸಹಪ್ರಯಾಣಿಕರಿಗೆ ತೊಂದರೆಯಾಗುವಂತೆ ಮೊಬೈಲ್ ನಲ್ಲಿ ಜೋರಾಗಿ ಹಾಡು ಹಾಕುವುದು, ಬೇರೆಯವರಿಗೆ ಕಿರಿಕಿರಿಯಾಗುವಂತೆ ಸಿನಿಮಾ ನೋಡುವುದು, ಗಟ್ಟಿಯಾಗಿ ಮಾತನಾಡುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಈ ರಗಳೆಗಳನ್ನು ತಡೆಯಲು ಸಾರಿಗೆ ಇಲಾಖೆಯು ಮೊದಲ ಪ್ರಯತ್ನಕ್ಕೆ ಸಜ್ಜಾಗಿದೆ.
ಬಸ್ ನಲ್ಲಿ ಪ್ರಯಾಣಿಕರಿಗೆ ಮೊಬೈಲ್ ನಿಂದ ಆಗುವ ತಲೆನೋವು ತಪ್ಪಿಸಲು ಹಾಗೂ ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕಲು ಹೈಕೋರ್ಟ್ ಸೂಚನೆ ಮೇರೆಗೆ ಸಾರಿಗೆ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ಮೋಟಾರು ವಾಹನ ನಿಯಮಗಳು -1989, ನಿಯಮ 94(1) (ವಿ) ಅನ್ನು ಉಲ್ಲಂಘಿಸಿ ನಿಗಮದ ಬಸ್ಸುಗಳಲ್ಲಿ ಮೊಬೈಲ್ ಮೂಲಕ ಜೋರು ಶಬ್ದ ಮಾಡುವುದನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಪ್ರಯಾಣಿಕರಿಗೆ ಕರ್ತವ್ಯನಿರತ ಸಿಬ್ಬಂದಿ ಸೂಕ್ತ ತಿಳಿವಳಿಕೆ ನೀಡಬೇಕು. ಹೆಚ್ಚಾಗಿ ಶಬ್ಧ ಬರುವಂತೆ, ಪ್ರಯಾಣಿಕರಿಗೆ ತೊಂದರೆಯಾಗುವಂತೆ ಮೊಬೈಲ್ ಬಳಸುತ್ತಿದ್ದರೆ, ಬಳಸದಂತೆ ವಿನಂತಿಸಿಕೊಳ್ಳಬೇಕು. ಮನವಿಗೆ ಸ್ಪಂದಿಸದಿದ್ದರೆ ನಿಯಮಾನುಸಾರ ಚಾಲಕ ಅಥವಾ ನಿರ್ವಾಹಕ ಬಸ್ಸಿನಿಂದ ಆ ಪ್ರಯಾಣಿಕನನ್ನು ಕೆಳಗಿಳಿಸಬೇಕು. ಆತ ಕೆಳಕ್ಕೆ ಇಳಿಯುವವರೆಗೂ ಬಸ್ಸನ್ನು ಅಲ್ಲೇ ನಿಲ್ಲಿಸುವುದು ಹಾಗೂ ಕೆಳಕ್ಕಿಳಿದ ಪ್ರಯಾಣಿಕರಿಗೆ ಬಸ್ ದರವನ್ನು ಹಿಂದಿರುಗಿಸಬಾರದು ಎಂದು ಆದೇಶ ಸ್ಪಷ್ಟಪಡಿಸಲಾಗಿದೆ.
ಸಾರಿಗೆ ಇಲಾಖೆಯ ಈ ಹೊಸ ಪ್ರಯತ್ನವು ಜನಸಾಮಾನ್ಯರಿಗೆ ಮಾತ್ರವಲ್ಲದೇ ಪರಿಸರಕ್ಕೂ ಅನುಕೂಲಕರವಾಗಲಿದೆ.
ಈ ಹಿಂದೆ ಕ್ಯಾಸೆಟ್ ಹಾಕಿ ಬಸ್ ನವರೇ ತೊಂದರೆ ಕೊಡುತ್ತಿದ್ದರು. ಅದು ನಿಂತಮೇಲೆ ಪ್ರಯಾಣಿಕರಿಂದ ಈ ಹೊಸ ಕಿರಿಕಿರಿ ಶುರುವಾಗಿತ್ತು. ಈಗ ಎರಡಕ್ಕೂ ಬ್ರೇಕ್!…

ಕೀವೀಸ್ ವಿರುದ್ಧ ಭಾರತ ತಂಡ ಸಿದ್ಧ

0

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಆಗಾರರ ಪಟ್ಟಿ ಪ್ರಕಟವಾಗಿದ್ದು ನವೆಂಬರ್ 25 ರಿಂದ ನಡೆಯಲ್ಲಿರುವ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ 2 ನೇ ಟೆಸ್ಟ್ ಸರಣಿಗೆ ಶುಕ್ರವಾರ 16 ಸದಸ್ಯರನ್ನ ಆಯ್ಕೆ ಮಾಡಲಾಗಿದೆ. ಈ ಟೆಸ್ಟ್ ಸರಣಿಗೆ ಟಿ – 20 ತಂಡದ ನೂತನ ನಾಯಕ ರೋಹಿತ್ ಶರ್ಮಾ ವಿಕೆಟ್ ಕೀಪರ್ ರೀಷಬ್ ಪಂತ್ ವೇಗಿಗಳಾದ ಜಸ್ ಪ್ರಿತ್ ಬಮ್ರಾ ಮತ್ತು ಮಹಮ್ಮದ್ ಶಮೀಗೆ ವಿಶ್ರಾಂತಿ ನೀಡಲಾಗಿದೆ. ಟೆಸ್ಟ್ ಸರಣಿಗು ಮೊದಲು ನಡೆಯಲ್ಲಿರುವಂತಹ 3 ನೇ ಟಿ – 20 ಸರಣಿಯಿಂದಲು ಜಸ್ ಪ್ರಿತ್ ಬುಮ್ರಾ ಮತ್ತು ಮಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಸರಣಿಯಲ್ಲಿ ಹಂಗಾಮಿ ನಾಯಕನಾಗಿ ಅಜಿಂಕ್ಯಾ ರಹಾನೆ ಮತ್ತು ಉಪನಾಯಕನಾಗಿ ಚೇತೇಶ್ವರ್ ಪೂಜಾರ ಕಾರ್ಯ ನಿರ್ವಹಿಸಲಿದ್ದಾರೆ . 2 ನೇ ಟೆಸ್ಟ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುವರು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಟೀಮ್ ಇಂಡಿಯಾದ ಆಟಗಾರರ ಪಟ್ಟಿ ಹೀಗಿದ್ದು

ಅಜಿಂಕ್ಯಾ ರಹಾನೆ (ನಾಯಕ) K.L ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ(ಉಪ ನಾಯಕ)ಶುಭ್ಮನ್ ಗಿಲ್,ಶ್ರೇಯಸ್ ಅಯ್ಯರ್,ವೃದ್ದೀಮಾನ್ ಸಾಹ ( ವಿಕೆಟ್ ಕೀಪರ್)K.S ಭರತ್ (ವಿಕೆಟ್ ಕೀಪರ್)ರವೀಂದ್ರ ಜಡೇಜಾ ,R.ಅಶ್ವಿನ್,ಅಕ್ಷರ್ ಪಟೇಲ್,ಜಯಂತ್ ಯಾದವ್. ಇಶಾಂತ್ ಶರ್ಮ, ಉಮೇಶ್ ಯಾದವ್,ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಇವರುಗಳನ್ನು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಿರುವುದು ಟಿಕೆಟ್ ಪ್ರೀಯರಲ್ಲಿ ಕುತೂಹಲ ಮನೆ ಮಾಡಿದೆ.

ಧನ್ಯವಾಯಿತು ಹುಟ್ಟು ಸಾವಿನಲ್ಲಿ

0

ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೆಲಸವನ್ನು ಡಾ. ರಾಜಕುಮಾರ್ ಕುಟುಂಬ ಹಿಂದಿನಿಂದಲೂ ರೂಪಿಸಿಕೊಂಡು ಬಂದಿದೆ. ಇತ್ತೀಚಿಗೆ ಕನ್ನಡ ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದಿಂದಾಗಿ ಇಡೀ ದೇಶವೇ ದಿಗ್ಭ್ರಮೆಗೆ ಒಳಗಾಗಿದ್ದರೂ ಸಹ ಅವರ ಮರಣದ ನಂತರ ನೇತ್ರದಾನ ಮಾಡುವ ಮೂಲಕ ನಾಲ್ವರು ಅಂಧರ ಬಾಳಲ್ಲಿ ಬೆಳಕು ಮೂಡಿತು. ಈಗ ಪುನೀತ್ ಅವರ ಕಣ್ಣಿನಿಂದ ಇದೇ ಮೊದಲ ಬಾರಿಗೆ ಹತ್ತು ಜನಕ್ಕೆ ದೃಷ್ಟಿ ನೀಡಲು ನಾರಾಯಣ ನೇತ್ರಾಲಯದ ವೈದ್ಯರು ಮುಂದಾಗಿದ್ದಾರೆ.

ಪ್ರಥಮಬಾರಿಗೆ ಒಬ್ಬ ವ್ಯಕ್ತಿಯ ಕಾರ್ನಿಯ ಹಾಗೂ ಸ್ಟೆಮ್ ಸೆಲ್ ಎರಡನ್ನು ಬಳಸಿ ಅಂದರಿಗೆ ದೃಷ್ಟಿ ನೀಡುವ ಪ್ರಯತ್ನಕ್ಕೆ ನಾರಾಯಣ ನೇತ್ರಾಲಯ ಮುಂದಾಗುವ ಮೂಲಕ ರಾಜ್ಯದಲ್ಲೇ ಹೊಸ ದಾಖಲೆ ಸೃಷ್ಟಿಸುವಲ್ಲಿ ಮುಂದಾಗಲಿದೆ.

ಏನಿದು ಸ್ಟೆಮ್ ಸೆಲ್ ?

ಪುನೀತ್ ರಾಜಕುಮಾರ್ ಅವರ ನಿಧನದ ಸುದ್ದಿ ತಿಳಿದ ತಕ್ಷಣ ಆಸ್ಪತ್ರೆಗೆ ಬಂದ ನಾರಾಯಣ ನೇತ್ರಾಲಯ ಡಾ.ಭುಜಂಗ ಶೆಟ್ಟಿ ಅವರು ಪುನೀತ್ ಅವರ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದರು.

ಪುನೀತ್ ಅವರ ಕಣ್ಣಿನ ಬಿಳಿ ಗುಡ್ಡೆಯಿಂದ ತೆಗೆಯಲಾದ ಸ್ಟೆಮ್ ಸೆಲ್ ಗಳನ್ನು ಸಂಗ್ರಹಿಸಿ ಲ್ಯಾಬೋರೇಟರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಸ್ಟೆಮ್ ಸೆಲ್ ಗಳು ಮಲ್ಟಿಪಲ್ ಆಗುತ್ತಿವೆ. ಈ ಪ್ರಕ್ರಿಯೆಗೆ ಸ್ವಲ್ಪ ಸಮಯ ಹಿಡಿಯುತ್ತಿದ್ದು, ಸ್ಟೆಮ್ ಸೆಲ್ ಗಳು ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಯಾದ ಬಳಿಕ ಸ್ಟೆಮ್ ಸೆಲ್ ನಿಂದ ದೃಷ್ಟಿ ಕಳೆದುಕೊಂಡಿದ್ದ ಅಂದರಿಗೆ ಕಸಿ ಮಾಡಬಹುದಾಗಿದೆ.

ಪಟಾಕಿ ಸಿಡಿತದಿಂದಾಗಿ ಅಥವಾ ವಂಶವಾಹಿನಿಯಿಂದಾಗಿ ಹಲವರಲ್ಲಿ ಅಂಧತ್ವ ಸಮಸ್ಯೆ ಇರುತ್ತದೆ. ಅಂತವರಿಗೆ ಸ್ಟೆಮ್ ಸೆಲ್ ಅಳವಡಿಕೆ ಮಾಡುವುದರಿಂದ ದೃಷ್ಟಿ ನೀಡಲು ಸಾಧ್ಯವಿದೆ ಹಾಗೂ ಪುನೀತ್ ರಾಜಕುಮಾರ್ ಅವರ ಸ್ಟೆಮ್ ಸೆಲ್ ಗಳನ್ನು 10 ದಿನದಲ್ಲಿ 10ಕ್ಕೂ ಹೆಚ್ಚು ಮಂದಿಗೆ ದೃಷ್ಟಿ ನೀಡುವ ಪ್ರಯತ್ನ ಯಶಸ್ವಿಯಾದರೆ ರಾಜ್ಯದ ಮಟ್ಟಿಗೆ ಇದು ಹೊಸ ದಾಖಲೆಯಾಗಲಿದೆ ಎಂದು ಡಾ.ಭುಜಂಗ ಶೆಟ್ಟಿ ತಿಳಿಸಿದರು.

ತಾಳಗುಪ್ಪಕ್ಕೆ ರೈಲು ಬಂದ ಸಂಭ್ರಮ

0

ವಿಶ್ವವಿಖ್ಯಾತ ಯಂತ್ರಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಮೈಸೂರು ಒಡೆಯರ ದೂರದೃಷ್ಟಿಯ ಫಲವಾಗಿ ಮಲೆನಾಡಿನ ಮೂಲೆಯ ತಾಳಗುಪ್ಪ ರೈಲು ಬಂಡಿಯನ್ನ ಕಂಡಿತು.
ಶರಾವತಿ ಜಲವಿದ್ಯುತ್ ಯೋಜನೆಯ ಸಲುವಾಗಿ ತಾಳಗುಪ್ಪಕ್ಕೆ ಬಂತು ರೈಲು ಭಾಗ್ಯ. ಈಗ 80 ವರ್ಷ ಪೂರೈಸಿರುವ ಈ ರೈಲು ಮಾರ್ಗ ಮುಂಚಿನ ಸಡಗರ ಕಾಣುತ್ತಿಲ್ಲ.
 ಬ್ರಿಟಿಷರ ಕಾಲದಲ್ಲಿ, ಇಲ್ಲಿನ ಅರಣ್ಯ ಸಂಪತ್ತು ನಾಗರಿಕ ಉಪಯೋಗಕ್ಕಾಗಿ ಲೂಟಿಯಾಯಿತು. ಸ್ವಾತಂತ್ರ್ಯ ನಂತರ ವಿಸ್ತರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
 ಸಧ್ಯ ಸಾರ್ವಜನಿಕರಿಗೆ ಬಸ್ ಪ್ರಯಾಣಕ್ಕಿಂತ ಸುಲಭ ದರದಲ್ಲಿ ಪ್ರಯಾಣ ಸಾಧ್ಯವಾಗಿದೆ. ಇಂತಹ ರೈಲುಮಾರ್ಗದ ಸುಧಾರಣೆಗೆ ಈ ಭಾಗದ ಜನತೆ ಕಾಯುತ್ತಿದೆ.

ಪುನೀತ್ ಅಗಲಿಕೆ : ರಜನಿ, ಕಂಬನಿ

0

ರಜನಿ: ಕಂಬನಿ

” ಪುನೀತ್ ನನ್ನ ಕಣ್ಮುಂದೆ ಬೆಳೆದ ಪ್ರೀತಿಪಾತ್ರ ಮತ್ತು ಪ್ರತಿಭಾವಂತ ಮಗು..” ಎಂದು ತಮ್ಮ ಸಂತಾಪ ಸಂದೇಶವನ್ನ ದಕ್ಷಿಣಭಾರತದ ಖ್ಯಾತ ನಟ ಮತ್ತು ಫಾಲ್ಕೆ ಪ್ರಶಸ್ತಿ ಪುರಸ್ಕೃತ ಶ್ರೀರಜನಿಕಾಂತ್ ,
ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಹಿರಿಯನಟ ರಜನಿ ಮುಂದುವರೆದು ತಮ್ಮ ಸಂದೇಶದಲ್ಲಿ
” ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ನಮ್ಮನ್ನು ಅವರು ಅಗಲಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಲು ಮಾತುಗಳೇ ಬರುತ್ತಿಲ್ಲ. ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ ” ಎಂದು ತಮ್ಮ ಎದೆಯಾಳದ ಅಗಲಿಕೆಯ ನೋವನ್ನ ಹಂಚಿಕೊಂಡಿದ್ದಾರೆ
ಪುನೀತ್ ನಿಧನದ ಸಂರ್ಭದಲ್ಲಿ ರಜನಿಕಾಂತ್ ಕಾವೇರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.ಈ ಕಾರಣ ಅವರು ಪುನೀತ್ ಅವರ ಅಂತಿಮ ದರ್ಶನಕ್ಕೆ ಬರಲಾಗಿರಲಿಲ್ಲ.
ಈಗ ಚೇತರಿಸಿಕೊಂಡ ಕೂಡಲೇ ತಮ್ಮ ಸಂತಾಪವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.