Tuesday, May 5, 2026
Tuesday, May 5, 2026
Home Blog Page 1979

ಎಲ್ಲರ ಅಭಿಮಾನದ ಮನುಷ್ಯ, ಬಂಗಾರಪ್ಪ

0

ಸೊರಬ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಜನರ ಸಮಸ್ಯೆಗೆ ಧ್ವನಿಯಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರೆ.
ಸೊರಬದ ಬಂಗಾರ ಧಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 88ನೇ ಜನ್ಮದಿನದ ಅಂಗವಾಗಿ ಅವರ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು.
ಗ್ರಾಮೀಣ ಕೃಪಾಂಕ, ರೈತರ ಪಂಪಸೆಟ್‍ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ತಳ ಸಮುದಾಯದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ರೈತರಿಗೆ ಭೂಮಿಯ ಹಕ್ಕನ್ನು ಕೊಡುವುದು ಬಂಗಾರಪ್ಪ ಅವರ ಮೊದಲ ಧ್ಯೇಯವಾಗಿತ್ತು ಎಂದು ಮಧು ಬಂಗಾರಪ್ಪ ನುಡಿದಿದ್ದಾರೆ.

ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಂಡಿದ್ದಾರೆ ಇದು ಬಂಗಾರಪ್ಪ ಅವರ ಬಗೆಗಿನ ಎಲ್ಲರ ಅಭಿಮಾನವನ್ನು ತೋರಿಸುತ್ತದೆ ಎಂದರು.

ರಾಜ್ಯದಲ್ಲಿ ನವೋದ್ಯಮಗಳಿಗೆ ಸ್ವಾಗತ

0

ರಾಜ್ಯದ ನವೋದ್ಯಮಗಳಿಗೆ ಶೇ.90 ರಷ್ಟು ವಿದೇಶಿ ಹೂಡಿಕೆ ಇದೆ. ಸ್ಥಳೀಯರೂ ಬಂಡವಾಳ ಹೂಡಿದರೆ, ಆರ್ಥಿಕತೆಗೆ ವೇಗ ಸಿಗಲಿದೆ ಎಂದು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾಕ್ಟರ್ ಸಿ.ಎನ್. ಅಶ್ವತ್ ನಾರಾಯಣ್ ಹೇಳಿದರು.
ಮೈಸೂರಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ‘ಬಿಯಾಂಡ್ ಬೆಂಗಳೂರು’ ಅಭಿಯಾನದಡಿಯಲ್ಲಿ ಆಯೋಜಿಸಿದ್ದ “ದಿ ಬಿಗ್ ಟೆಕ್ ಶೋ” ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಉದ್ಘಾಟಿಸಿದರು.
ಐಟಿ, ಬಿಟಿ , ಉದ್ಯೋಗಗಳು ಎಲ್ಲಾ ನಗರಗಳಲ್ಲಿ ದೊರೆಯಲೆಂದೇ ಭೂಸುಧಾರಣಾ ಕಾಯ್ದೆ ಮತ್ತು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ತರಲಾಗಿದೆ. ಎಲ್ಲಾ ಪದವಿಗಳಲ್ಲಿ ತಾಂತ್ರಿಕ ಶಿಕ್ಷಣದ ವಿಷಯವನ್ನು ಕಡ್ಡಾಯಗೊಳಿಸಲು ಚಿಂತಿಸಲಾಗಿದೆ. ಬೆಂಗಳೂರು ಹೊರತಾಗಿ ಇತರೆಡೆ ಇಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ 600 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ರಾಜ್ಯ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್,ಮೇಯರ್ ಸುನಂದಾ ಫಾಲನೇತ್ರ , ಕೆಡಿಇಎಂ ಮುಖ್ಯಸ್ಥ ಬಿ.ವಿ.ನಾಯ್ಡು ಮತ್ತು ಇನ್ನಿತರರು ಉಪಸ್ಥಿತರಿದ್ದರು.

ಏತ ನೀರಾವರಿ ಯೋಜನೆ ಪ್ರಗತಿ ವೀಕ್ಷಿಸಿದ : ಬಿ ಎಸ್ ವೈ

0

ಶಿಕಾರಿಪುರ ತಾಲೂಕು ಕಸಬಾ ಹೋಬಳಿ ಕಾಳೇನಹಳ್ಳಿಯ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಮತ್ತು ಸಂಸದರಾದ ಬಿ. ವೈ. ರಾಘವೇಂದ್ರ ಅವರು ವೀಕ್ಷಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಶಿಕಾರಿಪುರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳು ವಿಶ್ರಾಂತಿ ಪಡೆಯದೆ ತಾಲೂಕಿನ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.

ಕೋವಿಡ್ ನಿಂದ ಲಕ್ಷಾಂತರ ಕಂಪನಿಗಳು ಕಣ್ಮರೆ

0

ದೇಶದಲ್ಲಿ ಕಳೆದ ಸೆಪ್ಟೆಂಬರ್
ಅಂತ್ಯದ ವೇಳೆಗೆ 7.73 ಲಕ್ಷಕ್ಕೂ ಹೆಚ್ಚು ಕಂಪನಿಗಳು ಸ್ಥಗಿತವಾಗಿವೆ ಎಂಬ ಆಘಾತಕಾರಿ ಅಂಶವನ್ನು ಸರ್ಕಾರದ ಅಂಕಿ-ಅಂಶಗಳು ಬಹಿರಂಗ ಪಡಿಸಿವೆ.
ಈ 2021 ರ ಸೆಪ್ಟೆಂಬರ್ ನಲ್ಲಿ 17,000 ಹೊಸ ಕಂಪನಿಗಳು ನೋಂದಣಿಯಾಗಿವೆ. ಇದರೊಂದಿಗೆ ಒಟ್ಟು ಸಕ್ರಿಯ ಕಂಪನಿಗಳ ಸಂಖ್ಯೆ 14.1 ಲಕ್ಷಕ್ಕೆ ಏರಿಕೆಯಾಗಿವೆ ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಕಾರ್ಪೊರೇಟರ್ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, 2021 ರ ಸೆಪ್ಟೆಂಬರ್ 30 ರ ವೇಳೆಗೆ ಒಟ್ಟು 22,32,699 ಕಂಪನಿಗಳು ನೊಂದಣಿಯಾಗಿದ್ದು, ಅದರಲ್ಲಿ 7,73,070 ಕಂಪನಿಗಳು ಬಂದಾಗಿವೆ. ಮತ್ತು 2,298 ಕಂಪನಿಗಳು ತಾತ್ಕಾಲಿಕವಾಗಿ ನಿಷ್ಕ್ರಿಯವಾಗಿವೆ. 6,944 ಕಂಪನಿಗಳು ಮಾರಾಟ ಅಥವಾ ಹರಾಜಿನ ಮೂಲಕ ನಗದೀಕರಣ ಕಾಯುತ್ತಿವೆ.
36,110 ಕಂಪನಿಗಳು ನೊಂದಣಿ ಕಳೆದುಕೊಳ್ಳುವ ಹಂತದಲ್ಲಿವೆ ಎನ್ನಲಾಗುತ್ತಿದೆ. ನಿರುದ್ಯೋಗದ ಪ್ರಮಾಣ ಶೇ. 7.8 ಮಟ್ಟದಲ್ಲಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಸಂಸ್ಥೆಯು ವರದಿ ಮಾಡಿದೆ.
ಔದ್ಯೋಗಿಕರಣದ ಪ್ರಗತಿಯ ಸಂದರ್ಭದಲ್ಲಿ ಈ ಕಂಪನಿಗಳ ನಿಷ್ಕ್ರಿಯತೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.

ತಲೈವ ಮುಡಿಗೆ ಫಾಲ್ಕೆ ಮುಕುಟ

0

ಟಿಕೆಟ್ ಟಿಕೆಟ್ ಎಂದು ರಾಜ್ಯ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿದ್ದ ಯುವಕನೊಬ್ಬ ಭಾರೀ ಬೇಡಿಕೆಯ ತಾರೆಯಾಗುತ್ತಾನೆಂದು ಯಾರೂ ಎಣಿಸಿರಲಿಲ್ಲ. ಆತ್ಮೀಯರಾಗಿದ್ದ ಸಹೋದ್ಯೋಗಿ ತನ್ನ ಕಂಡಕ್ಟರಿಗೆ ನೀನು ಸಿನಿಮಾಗೆ ಸೇರು ನಿನಗೆ ನಟನೆಯಲ್ಲಿ ಆಸಕ್ತಿ ಇದೆ ಎಂದು ಸಲಹೆ ನೀಡಿದ. ಆ ಸಲಹೆ ಕಂಡಕ್ಟರ್ ಮಿತ್ರನ ಬದುಕನ್ನೇ ಬದಲಿಸಿತು. ಆ ಸಹೋದ್ಯೋಗಿ ಮಿತ್ರರೇ ರಾಜ್ ಬಹುದ್ದೂರ್ ಮತ್ತು ಇಂದಿನ ಸೂಪರ್ ಸ್ಟಾರ್ ರಜನಿಕಾಂತ್.

ಆಗ ಬಸ್ ಕಂಡಕ್ಟರ್ ಇಂದಿನ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಮಿಂಚಿದ್ದಾರೆ. ಇಂದಿಗೂ ಅವರ ಸಿನಿಮಾಗಳಿಗೆ ನಿರ್ಮಾಪಕರು ಕೋಟಿಗಟ್ಟಲೆ ಬಂಡವಾಳ ಹಾಕಲು ಮುಗಿಬೀಳುತ್ತಾರೆ.

ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಲನಚಿತ್ರ ನಟನೆ ಮತ್ತು ಚಿತ್ರರಂಗದಲ್ಲಿ ಅಪಾರ ಸೇವೆಯನ್ನು ಪರಿಗಣಿಸಿ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸೋಮವಾರ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಮಾನ್ಯ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರು ರಜನಿಕಾಂತ್ ಅವರಿಗೆ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದರು.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಾ ಧನ್ಯತಾಭಾವ ವ್ಯಕ್ತಪಡಿಸಿದರು. ಅವರು ನಟಿಸಿದ ಮೊದಲ ಚಿತ್ರ ‘ಅಪೂರ್ವ ರಾಗಂಗಳ್’ ನಿರ್ದೇಶಿಸಿದ ದಿವಂಗತ ಚಲನಚಿತ್ರ ನಿರ್ಮಾಪಕ ಕೆ.ಬಾಲಚಂದರ್, ಸಹೋದರ ಸತ್ಯನಾರಾಯಣರಾವ್, ರಜನಿಕಾಂತ್ ಅಭಿನಯಿಸಿರುವ ಎಲ್ಲಾ ಚಿತ್ರದ ನಿರ್ದೇಶಕರು, ನಿರ್ಮಾಪಕರು ಥಿಯೇಟರ್ ಮಾಲೀಕರು ತಂತ್ರಜ್ಞರು ಮತ್ತು ತಮಗೆ ಜೀವ ನೀಡಿದ ತಮಿಳು ಜನತೆಗೆ ಧನ್ಯವಾದ ಅರ್ಪಿಸಿದರು.

ಇಂತಹ ಮೇರು ನಟ ತನ್ನ ವೃತ್ತಿಬದುಕಿನ ಪೂರ್ವಾರ್ಧವನ್ನು ಕನ್ನಡ ನೆಲದಲ್ಲಿ ಕಳೆದರು ಎಂದು ನಮ್ಮ ಕನ್ನಡಿಗರಲ್ಲಿ ಹೆಮ್ಮೆ ಇದೆ. ಕನ್ನಡ ಚಿತ್ರರಂಗದಲ್ಲು ಕಥಾಸಂಗಮ, ಸಹೋದರರ ಸವಾಲ್, ತಪ್ಪಿದ ತಾಳ, ಕುಂಕುಮ ರಕ್ಷೆ, ಗಲಾಟೆ ಸಂಸಾರ ಮುಂತಾದ ಚಿತ್ರಗಳಲ್ಲೂ ತಮ್ಮ ನಟನಾ ಕೌಶಲ್ಯವನ್ನು ಮೆರೆದಿದ್ದಾರೆ.

ಒಟ್ಟಾರೆ ರಜನಿಕಾಂತ್ ಅಸಾಧಾರಣ ಕಲಾವಿದ. ತನ್ನ ಅಭಿನಯದ ಚಾಣಾಕ್ಷತೆ, ಆಂಗಿಕ ಭಂಗಿ, ಮಿಂಚಿನ ಚಾಕಚಕ್ಯತೆ ಮುಂತಾದವು ಅವರ ಚಿತ್ರರಂಗದ ವಿಶಿಷ್ಟ, ಅನನ್ಯ, ಏಕಮೇವ ನಟನೆ ಅವರದು. ಹೀಗಾಗಿ ತಮಿಳಿನಲ್ಲಿ ತಲೈ‌ವ ಎಂದೇ ಜನಜನಿತರಾಗಿದ್ದಾರೆ. ಇತಂಹ ಅಭಿಜಾತ ಕಲಾವಿದನಿಗೆ ನಮ್ಮೆಲ್ಲರ ಅಭಿನಂದನೆಗಳು.

ಶಾಲೆ ಎಂಬ ಗೂಡಿಗೆ ಹಾರಿ ಬಂದ ಹಕ್ಕಿಗಳು

0

ಸುಮಾರು ಒಂದುವರೆ ವರ್ಷಗಳವರೆಗೂ ಶಾಲಾ ವಾತಾವರಣ ಸ್ತಬ್ಧವಾಗಿತ್ತು. ಈಗ ಒಂದರಿಂದ ಐದನೇ ತರಗತಿಯವರೆಗೆ ಭೌತಿಕ ತರಗತಿಗಳು ನಿನ್ನೆಯಿಂದ ರಾಜ್ಯದ್ಯಂತ ಆರಂಭಗೊಂಡಿವೆ. ಬರಿದಾದ ಗೂಡಿಗೆ ಹಕ್ಕಿಗಳು ಹಾರಿಬಂದಂತೆ ಶಾಲಾ ವಾತಾವರಣದಲ್ಲಿ ಚಿಲಿಪಿಲಿ ಶುರುವಾಗಿದೆ.
ಶಾಲೆಗಳ ಆವರಣದಲ್ಲಿ ಮತ್ತೆ ಮಕ್ಕಳ ಕಲರವ ಶುರುವಾಗಿದೆ. ಹಲವು ಶಾಲೆಗಳಲ್ಲಿ ಪ್ರವೇಶದ್ವಾರವನ್ನು ತಳಿರು-ತೋರಣಗಳಿಂದ ಅಲಂಕೃತ ಗೊಳಿಸಲಾಗಿತ್ತು. ಬಣ್ಣ ಬಣ್ಣದ ಬಲೂನುಗಳು ಆಕಾಶದಲ್ಲಿ ಚಿಮ್ಮುತ್ತಿದ್ದವು. ಶಾಲೆಯ ಅಂಗಳದ ರಂಗೋಲಿಯಿಂದ ಶೋಭಿಸುತ್ತಿತ್ತು. ಉತ್ಸುಕತೆಯಿಂದ ಬಂದ ಮಕ್ಕಳಿಗೆ ಶಾಲಾವೃಂದವು ಹೂವು ಮತ್ತು ಸಿಹಿಯನ್ನು ನೀಡಿ ಬರಮಾಡಿಕೊಂಡಿತು.
ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅರ್ಧ ದಿನ ಮಾತ್ರ ಭೌತಿಕ ತರಗತಿಗಳನ್ನು ನಡೆಸಲಾಯಿತು. ಮೊದಲ ದಿನ ಶೇ. 55 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ತಿಳಿದು ಬಂದಿದೆ.
ಕೋವಿಡ್, ಲಾಕ್ ಡೌನ್ ನಿಂದ ಹುಟ್ಟಿಕೊಂಡ ಆರ್ಥಿಕ ಸಂಕಷ್ಟದಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳ ಬದಲಿಗೆ ಸರ್ಕಾರಿ ಶಾಲೆಗೆ ಸೇರಿಸಲು ಒತ್ತು ನೀಡಿರುವುದು ಕಂಡುಬಂದಿದೆ. ಈ ವರ್ಷ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ 10ನೇ ತರಗತಿಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ 2.35 ಲಕ್ಷ (ಶೇ.5.36) ಏರಿಕೆಯಾಗಿದೆ ಎನ್ನಲಾಗುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚುತ್ತಿರುವುದು ಸಂತೋಷದ ವಿಷಯವಾದರೂ, ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಮತ್ತು ಮೂಲ ಸೌಕರ್ಯಗಳ ಕೊರತೆಯನ್ನು ತುಂಬುವುದು ಸವಾಲಿನ ಕೆಲಸವೇ ಆಗಿದೆ. ಸರ್ಕಾರವು ಶೀಘ್ರವಾಗಿ ಶಾಲಾ ಕಟ್ಟಡ ನಿರ್ವಹಣೆ ಮತ್ತು ಶಿಕ್ಷಕರ ನೇಮಕಾತಿ ಬಗ್ಗೆ ಗಮನಹರಿಸಿ ಈಗಿರುವ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಬೇಕಿದೆ.

T20- ಬಿ ಗ್ರೂಪ್ ಗೆ ಆಫ್ಘನಿಸ್ತಾನ್

0

ಟಿ – 20 ವಿಶ್ವಕಪ್ ಟೂರ್ನಿಯ ಪಂದ್ಯವು ಅಫ್ಘಾನಿಸ್ತಾನ ಮತ್ತು ಸ್ಕಾಟ್ಲೆಂಡ್ ನಡುವೆ ನಡೆಯಿತು. ಅಫ್ಘಾನಿಸ್ತಾನ ತಂಡವು ಸ್ಕಾಟ್ಲೆಂಡ್ ತಂಡದ ವಿರದ್ಧ ನಿರಾಯಾಸ ಗೆಲುವನ್ನು ಸಾಧಿಸಿದೆ.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಟಿ – 20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ 2 ನೇ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನವು ಸ್ಕಾಟ್ಲೆಂಡ್ ವಿರುದ್ಧ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಗಳ ನ್ನು ಕಲೆ ಹಾಕಿದೆ.
ಆರಂಭಿಕ ಜೋಡಿಯಲ್ಲಿ ಹಜರತ್ ಉಲ್ಲಾ ಜಜೈ ಮತ್ತು ಮೊಹಮ್ಮದ್ ಶೆಹಜಾದ್ ಭರ್ಜರಿ ಆಟದೊಂದಿಗೆ ಮಿಂಚಿದರು. ಆರಂಭದ ಜೊತೆಯಾಟದಲ್ಲಿ ಆಡಿದ ಅವರು ಕೆಲವು ಎಸೆತಗಳನ್ನು ತಾಳ್ಮೆಯಿಂದ ಎದುರಿಸಿದರು.ಉಲ್ಲಾ ಜಜೈ ಮತ್ತು ಮೊಹಮ್ಮದ್ ಶೆಹಜಾದ್ ನಂತರ ಬೌಂಡರಿಗಳನ್ನು ಸಿಡಿಸಿ.ಕೇವಲ 35 ಎಸೆತಗಳಲ್ಲಿ 54 ರನ್ ಗಳನ್ನು ಸೇರಿಸಿದರು.ನಂತರ ಷರೀಪ್ ಎಸೆತಗಳಲ್ಲಿ ಮೊಹಮ್ಮದ್ ಶೆಹಜಾದ್ ಔಟಾದರು. ನಂತರ 3 ನೆ ಹಂತದ ವಿಕೆಟ್ ಗೆ ಅಂಕಣಕ್ಕೆ ಇಳಿದ ಗುರ್ಬಾಜ್ ರವರು ಜಜೈ ಜೊತೆಗೂಡಿ ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ಗುರ್ಬಾಜ್ ರವರು ರನ್ ರೇಟ್ ವೇಗವನ್ನು ಹೆಚ್ಚಿಸಿದರು.
ಕೇವಲ 3 ಎಸೆತಗಳಲ್ಲಿ ತಲಾ 3 ಸಿಕ್ಸರ್ ಮತ್ತು ಬೌಂಡರಿ ಸಿಡಿಸಿದ ಜಜೈ 44 ರನ್ ಗಳನ್ನ ಕಲೆ ಹಾಕಿ ಔಟಾದರು.
ಜಜೈ ಔಟಾದ ಬಳಿಕ 4 ನೆ ವಿಕೆಟ್ ಹಂತಕ್ಕೆ ಕಾಲಿಟ್ಟು ಅಂಕಣಕ್ಕೆ ಇಳಿದ ಜದ್ರಾನ್. ಗುರ್ಬಾಜ್ ಜೊತೆಗೂಡಿ ಸ್ಕಾಟ್ಲೆಂಡ್ ತಂಡದ ಬೌಲರ್ ಗಳನ್ನ ಕಂಗೇಡುವಂತೆ ಮಾಡಿ 87 ರನ್ ಕಲೆ ಹಾಕಿ ಅಫ್ಘಾನಿಸ್ತಾನದ ಮೊತ್ತವನ್ನು ಗಡಿ ದಾಟಿಸಿದರು.
ಕೊನೆಯ ಓವರ್ ಗಳಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಟ ಆಡಿದ ಜಾದ್ರಾನ್ ರವರು 5 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ ಬ್ಯಾಟಿಂಗ್ ಆಡಿದ ಅವರು 200 ರನ್ ಸಮೀಪ ತಲುಪಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.
ತಂಡದ ಎಲ್ಲಾ ಆಟಗಾರರ ಉತ್ತಮ ಪ್ರದರ್ಶನದಿಂದಾಗಿ ಟಿ – 20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಮೊದಲನೇ ಸ್ಥಾನ ತಲುಪಿದೆ.

ಕಾಶ್ಮೀರ ಈಗ ಎಲ್ಲರಿಗೂ ಬಾಗಿಲು ತೆರೆದಿದೆ :ಅಮಿತ್ ಶಾ

0

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಅಳಿಸಿ ಶಾಂತಿಭಂಗ ವನ್ನು ಕೊನೆಗಾಣಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.
ಜಮ್ಮುವಿನಲ್ಲಿರುವ ಗುರುದ್ವಾರ ಡಿಗಿಯಾನಾದ ಆಶ್ರಮಕ್ಕೆ ಭೇಟಿ ನೀಡಿದ ಅಮಿತ್ ಶಾ ಅವರು, ಈ ಕೇಂದ್ರಾಡಳಿತ ಪ್ರದೇಶವು ಪ್ರಧಾನಿ ನರೇಂದ್ರ ಮೋದಿಯವರ ಹೃದಯದಲ್ಲಿ ಜಾಗ ಪಡೆದಿದೆ. ಇದರ ಶಾಂತಿ ಮತ್ತು ಅಭಿವೃದ್ಧಿಗೆ ಧಕ್ಕೆ ಉಂಟು ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದರು.
70 ವರ್ಷದ ಬಳಿಕ ಜಮ್ಮು-ಕಾಶ್ಮೀರದಲ್ಲಿ ತಳಮಟ್ಟದ ಪ್ರಜಾಪ್ರಭುತ್ವ ಸ್ಥಾಪನೆಯ ಗೌರವವು ಬಿಜೆಪಿಗೆ ಸಲ್ಲಬೇಕು. ಈಗ ಯಾರು ಬೇಕಿದ್ದರೂ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಬಹುದು, ಸಚಿವರಾಗಬಹುದು. ಪಂಡಿತ ಸಮುದಾಯವನ್ನು ಮತ ಬ್ಯಾಂಕ್ ಆಗಿ ಮಾತ್ರ ನೋಡಲಾಗಿತ್ತು. ಈಗ ಅವರಿಗೂ ಪ್ರಾತಿನಿಧ್ಯವಿದೆ. ಅವರ ಪ್ರತಿನಿಧಿಗೂ ಮುಖ್ಯಮಂತ್ರಿ ಆಗುವ ಅವಕಾಶವೂ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಐಐಟಿ ಜಮ್ಮುವಿನ ಹೊಸ ಕ್ಯಾಂಪಸ್ ಅನ್ನು ಅಮಿತ್ ಶಾ ಅವರು ಉದ್ಘಾಟಿಸಿದರು. ಎರಡು 210 ರೂ. ಕೋಟಿ ವೆಚ್ಚದಲ್ಲಿ ಈ ಕ್ಯಾಂಪಸ್ ನಿರ್ಮಿಸಲಾಗಿದೆ. ಉನ್ನತ ಶಿಕ್ಷಣ ಕೇಂದ್ರದ ಜೊತೆಗೆ ಹಾಸ್ಟೆಲ್, ಜಿಮ್ ಹಾಗೂ ಮತ್ತಿತರ ಸೌಲಭ್ಯಗಳನ್ನು ಕ್ಯಾಂಪಸ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮಕ್ಕಳ ಸಂತಸದಲ್ಲಿ ಪಾಲ್ಗೊಂಡ, ಸಚಿವ ನಾಗೇಶ್

0

ಇಂದಿನಿಂದ ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳ ಆರಂಭ. ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು, ಶಿವಮೊಗ್ಗ ಸನಿಹದ ಮಲವಗೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಗೆ ಇಂದು ಭೇಟಿ ನೀಡಿದರು. ಮಕ್ಕಳೊಂದಿಗೆ ಸಚಿವರು ಸಂವಾದ ನಡೆಸಿದರು.”ಕಳೆದ ಹದಿನೈದು ದಿನಗಳಿಂದ ಶಾಲೆ ಯಾವಾಗ ಆರಂಭವಾಗುವುದು ಅಂತ ಕಾಯುತ್ತಿದ್ದರು. ಕಳೆದವಾರ ವಾರ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಲಾ ಆರಂಭದ ನಿರ್ಣಯ ತೆಗೆದುಕೊಳ್ಳಲಾಯಿತು. ಅದರ ಫಲವಾಗಿ ಇಂದು ಪ್ರಾಥಮಿಕ ಶಾಲೆಗಳು ಆರಂಭಗೊಂಡಿವೆ. ನಾನು ಕೂಡ ಉತ್ಸುಕತೆಯಿಂದ ಭೇಟಿ ನೀಡಿದ್ದೇನೆ. ಮಕ್ಕಳು ಖುಷಿಯಿಂದ ಶಾಲೆಗೆ ಬಂದಿದ್ದಾರೆ. ಪೋಷಕರು, ಶಿಕ್ಷಕರು ಹೂ ,ಸಿಹಿ ನೀಡಿ ಮಕ್ಕಳನ್ನು ಸ್ವಾಗತ ಮಾಡಿದ್ದಾರೆ.

ಸದ್ಯಕ್ಕೆ ಸಿಲಬಸ್ ಕಡಿತವಿಲ್ಲ. ಅಗತ್ಯಬಿದ್ದರೆ ಚಿಂತನೆ ಮಾಡ್ತೀವಿ. ಈಗ ಇರುವ ಅವಧಿಯಲ್ಲಿ ಸಿಲಬಸ್ ಪೂರ್ಣ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ. ರಜೆಯ ದಿನಗಳಲ್ಲೂ ಸಹ ಬಳಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡುತ್ತೇವೆ. ರಾಜ್ಯದಲ್ಲಿ ಹಂತಹಂತವಾಗಿ ಎಲ್ಲಾ ಶಾಲೆಗಳು ಇಂದಿಗೆ ಆರಂಭವಾಗಿವೆ. ರಾಜ್ಯದ ಕೆಲವು ಶಾಲೆಗಳಲ್ಲಿ ಇನ್ನಷ್ಟು ವ್ಯವಸ್ಥೆ ಮಾಡಬೇಕಿದೆ. ಪ್ರತಿವರ್ಷ ಮಕ್ಕಳ ಸಂಖ್ಯೆಯನ್ನು ಆಧರಿಸಿ ಶಾಲೆಗಳಲ್ಲಿ ಶಾಲೆಗಳಲ್ಲಿ ಮೂಲಸೌಕರ್ಯ ಹೆಚ್ಚಳ ಮಾಡುತ್ತೇವೆ”ಎಂದು ಸಚಿವ ನಾಗೇಶ್ ರವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಸೇವೆಗೆ ಸಿದ್ಧ ಪಡಿಸಿದ ಮಾದರಿ : ಡಾ.ಶ್ರೀ ವೀರೇಂದ್ರ ಹೆಗ್ಗಡೆ

0

ಭಾರತೀಯ ಪರಂಪರೆಯಲ್ಲಿ ಅನೇಕ ಮಠ-ಮಾನ್ಯ, ಸಂಘ-ಸಂಸ್ಥೆಗಳು, ಸಾಮಾಜಿಕ ಸೇವೆ ಸಲ್ಲಿಸುತ್ತಾ ಬಂದಿದೆ. ಸಮುದಾಯದ ಅಭಿವೃದ್ಧಿಯನ್ನು ಗಮನದಲ್ಲಿರಿಸಿ, ಸಾಧುಸಂತರು, ಸಾರ್ವಜನಿಕ ಮುಖಂಡರು, ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಹ ತಾರ ಸಮೂಹದಲ್ಲಿ ಹೊಳೆಯುವವರಲ್ಲಿ ನಮ್ಮ ಹೆಮ್ಮೆಯ ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ಡಾ.ವೀರೇಂದ್ರ ಹೆಗ್ಗಡೆಯವರು.

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಂಟ್ವಾಳದಲ್ಲಿ ಮುಗಿಸಿದರು. ಪ್ರೌಢ ಶಿಕ್ಷಣವನ್ನು ಉಜಿರೆಯಲ್ಲಿ ಮುಗಿಸಿದ ನಂತರ , ಬೆಂಗಳೂರಿನ ಕಾಲೇಜು ಶಿಕ್ಷಣವನ್ನು ಪೂರೈಸಿದರು.

1968ರಲ್ಲಿ ತಂದೆ ಶ್ರೀ. ರತ್ನವರ್ಮ ಹೆಗ್ಗಡೆ ತರುವಾಯ, ಶ್ರೀ ಕ್ಷೇತ್ರ ಧರ್ಮಸ್ಥಳ ದ 20 ನೇ ಧರ್ಮಾಧಿಕಾರಿಯಾದರು. ಆಗಿನ್ನೂ ಅವರಿಗೆ ವಯಸ್ಸು ಕೇವಲ 21 ವರ್ಷ. ತಾರುಣ್ಯದಲ್ಲೇ ಸಮಾಜ ಸೇವೆಯ ಬಗ್ಗೆ ಡಾ.ವೀರೇಂದ್ರ ತರತರಹದ ಆಸಕ್ತಿ ಬೆಳೆಸಿಕೊಂಡಿದ್ದರು. ಸಾಮಾಜಿಕ ಪ್ರಗತಿಯ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಾ ಬಂದರು. ಅದರ ಫಲವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಆರಂಭಿಸಿದರು. 1982 ರಿಂದಲೂ ಈ ಯೋಜನೆಗಳು ಗ್ರಾಮೀಣರಿಗೆ,ಜನಸಾಮಾನ್ಯರಿಗೆ ಸಹಾಯಕವಾಗಿವೆ.
ಕೃಷಿ ಅಭಿವೃದ್ಧಿ,ಸಮುದಾಯದ ಹಿತ ಚಿಂತನೆ, ಅವರ ವಿಶಿಷ್ಟ ಗುಣಗಳಾಗಿವೆ. ಅವರು ಈ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.
ಭಾರತ ಸರ್ಕಾರವು ಅವರ ಈ ಸಮಾಜ ಸೇವೆ ಗುರುತಿಸಿ 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. 1985 ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ.
1994 ರಲ್ಲಿ ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ ದೊರಕಿದೆ. ಇಷ್ಟಲ್ಲದೆ ಇನ್ನಷ್ಟು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದು ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ.
ಸಮಾಜಸೇವೆಗೆ ಯಾರೇ ಪ್ರವೇಶ ಮಾಡಲಿ ಶ್ರೀ ವೀರೇಂದ್ರ ಹೆಗ್ಗಡೆಯವರ ಸಾಧನೆ ಸಿದ್ಧಪಡಿಸಿದ ಮಾದರಿಯಾಗಿದೆ. ಇದೀಗ ತಾನೆ ಶ್ರೀ ಕ್ಷೇತ್ರ ಧರ್ಮಾಧಿಕಾರಿಯಾಗಿ 54 ಸಾರ್ಥಕ ಸಂವತ್ಸರಗಳನ್ನ ಪೂರೈಸಿರುವ ಅವರಿಗೆ ಶ್ರೀ ಮಂಜುನಾಥೇಶ್ವರನು ಸಕಲ ಆಯುರಾರೋಗ್ಯ ಭಾಗ್ಯಗಳ್ಳನ್ನ ನೀಡಲಿ ಎಂಬುವುದೇ ನಮ್ಮ ಆಶಯ.