Monday, August 10, 2026
Monday, August 10, 2026
Home Blog Page 185

Chandragutti Shri Renukamba Devi ಚಂದ್ರಗುತ್ತಿ ದೇವಿ ಜಾತ್ರೆಗೆ ಪಲ್ಲಕ್ಕಿ ಉತ್ಸವದ ಮೂಲಕ ಸಾಂಪ್ರದಾಯಿಕವಾಗಿ ಚಾಲನೆ

0

Chandragutti Shri Renukamba Devi ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವ ಫೆಬ್ರವರಿ 22 ರಿಂದ 27ರವರೆಗೆ ಜಾತ್ರೆ ನಡೆಯಲಿದೆ.

ಈ ಹಿನ್ನಲೆಯಲ್ಲಿ
ಈಗಾಗಲೇ ಸಾಂಪ್ರದಾಯಿಕ ಪದ್ಧತಿಯಂತೆ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಶ್ರೀ ರೇಣುಕಾಂಬ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ ಮೂಲಕ ತೆರಳಿ ಜಾತ್ರೆಗೆ ಆಹ್ವಾನಿಸುವ ಕರೆ ನೀಡುವ ವಿಶಿಷ್ಟ ಧಾರ್ಮಿಕ ಪದ್ಧತಿ ನೆರವೇರಿತು.

Chandragutti Shri Renukamba Devi ಈ ಮೂಲಕ ಜಾತ್ರಾ ಸಡಗರಕ್ಕೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ. ಫೆಬ್ರವರಿ 22 ರಂದು ಕಂಕಣ ಬಂಧನ ಧ್ವಜಾರೋಹಣ ಭೇರಿತಾಡನೆ, 23 ರಂದು ಕಳಶಸ್ಥಾಪನೆ ಯಾಗಶಾಲೆ ಪ್ರವೇಶ ವೃಷಭಯಂತ್ಯೋತ್ಸವ, 24ರಂದು ಪುಷ್ಪಮಂಜರಿ ಯಂತ್ರೋತ್ಸವ ಸಣ್ಣತೇರು, 25 ರಂದು ಮಹಾರಥೋತ್ಸವ, 26 ರಂದು ಅವಭೃಥ್ಯೋತ್ಸವ ನಡೆಯಲಿದೆ.

ಫೆ.21.ವೀರಭದ್ರ ಟಾಕೀಸ್‌ನಲ್ಲಿಶ್ರೀ ವಾಸವಿ ಚಲನಚಿತ್ರ ಪ್ರದರ್ಶನ

0

ಕರ್ನಾಟಕ ಆರ್ಯವೈಶ್ಯ ಮಹಾಸಭಾ ಜಿಲ್ಲಾ ಸಮಿತಿ ವತಿಯಿಂದ ಫೆ. 21ರ ಶನಿವಾರ ಸಂಜೆ 5.30ಕ್ಕೆ ಹಾಗೂ ರಾತ್ರಿ 8.30ಕ್ಕೆ ನಗರದ ವೀರಭದ್ರ ಟಾಕೀಸ್‌ನಲ್ಲಿ ವಿಶ್ವರೂಪಿಣಿ ಶ್ರೀ ವಾಸವಿ ಕನ್ನಡ ಚಲನಚಿತ್ರದ ಪ್ರದರ್ಶನ ಏರ್ಪಡಿಸಲಾಗಿದೆ.

ಆರ್ಯವೈಶ್ಯ ಸಮಾಜದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಈ ಚಲನಚಿತ್ರ ಪ್ರದರ್ಶನ ಏರ್ಪಡಿಸಿದ್ದು, ಸಮಾಜಬಾಂಧವರು ಹಾಗೂ ಆಸಕ್ತರು ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಭೂಪಾಳಂ ಎನ್. ಶಶಿಧರ್ ಕೋರಿದ್ದಾರೆ.

Shivaganga Yoga Center ಭಜನೆಯಿಂದ ಭಕ್ತಿಭಾವ ಸಿಂಚನ.ಧ್ವನಿ ಸಂಸ್ಕರಣ ಪ್ರಕ್ರಿಯೆ- ಹೆಚ್.ಎಂ.ಚಂದ್ರಶೇಖರಯ್ಯ

0

Shivaganga Yoga Center ಶಿವಗಂಗಾ ಯೋಗ ಕೇಂದ್ರ ಕಲ್ಲಹಳ್ಳಿಯಲ್ಲಿ ಮಹಾಶಿವರಾತ್ರಿಯ ಅಂಗವಾಗಿ ನಗರದ 38 ಯೋಗ ಶಾಖೆಗಳಿಂದ 500ಕ್ಕೂ ಹೆಚ್ಚು ಶಿಕ್ಷಣಾರ್ಥಿಗಳಿಂದ ಬ್ರಾಹ್ಮಿ ಕಾಲದಲ್ಲಿ ಸಾಮೂಹಿಕ ಭಜನೆ ಮತ್ತು ಭಕ್ತಿಗೀತೆಗಳಿಂದ ಶ್ರೀ ಶಿವಗಂಗಾ ಯೋಗ ಕೇಂದ್ರದ ಸಂಪೂರ್ಣ ಯೋಗ ಆರೋಗ್ಯಧಾಮ ಆವರಣದಲ್ಲಿ ಇರುವ ಧ್ಯಾನಸಕ್ತ ಆದಿಯೋಗಿ ಶಿವನಿಗೆ ಭಜನೆ ಹಾಗೂ ಭಕ್ತಿ ಗೀತೆಗಳ ಸಿಂಚನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಎಚ್ .ಎಮ್. ಚಂದ್ರಶೇಖರಯ್ಯ ಮಾತನಾಡುತ್ತಾ ಭಕ್ತಿಗೀತೆಗಳು ಭಜನೆಗಳು ನಮಗೆ ಸಂಸ್ಕಾರವನ್ನ ನೀಡುತ್ತವೆ ನಮ್ಮ ಖಿನ್ನತೆ ದೂರವಾಗುತ್ತದೆ ನಮ್ಮ ದೇಹದಲ್ಲಿ ಭಕ್ತಿ ಭಾವ ಸಿಂಚನವಾಗುತ್ತದೆ ಜೊತೆಗೆ ಧ್ವನಿ ಸಂಸ್ಕರಣ ಗೊಳ್ಳುತ್ತದೆ ಎಂದ ಅವರು ಪ್ರತಿವರ್ಷ ಈ ಸ್ಥಳದಲ್ಲಿ ಸಾವಿರಾರು ಜನ ಯೋಗ ಬಂಧುಗಳು ಭಜನೆ ಹಾಗೂ ಭಕ್ತಿ ಗೀತೆಗಳು ಈ ಸ್ಥಳಕ್ಕೆ ವಿಶೇಷವಾದ ಶಕ್ತಿ ಇದೆ ಎಂದು ನುಡಿದರು.

Shivaganga Yoga Center 38 ಕೇಂದ್ರದ ಯೋಗ ಬಂದುಗಳು ವಿವಿಧ ರೀತಿಯ ಭಜನೆ ಶಿವನಿಗೆ ಅರ್ಪಿಸಿದರು ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಜಿಎಸ್ ಓಂಕಾರ್, ವಿಜಯ ಕೃಷ್ಣ. ಹರೀಶ್, ಕಾಟನ್ ಜಗದೀಶ್ , ವಿಜಯ ಬಾಯರ್ 38 ಶಾಖೆಗಳ ಶಿಕ್ಷಕರು ಉಪಸ್ಥಿತರಿದ್ದರು.

ಏಪ್ರಿಲ್ 2 . ಶ್ರೀಆದಿಚುಂಚನಗಿರಿ ಶಾಖಾಮಠದ ಆಶ್ರಯದಲ್ಲಿ 27 ನೇ ಸಾಮೂಹಿಕ ವಿವಾಹ ಮಹೋತ್ಸವ ಆಯೋಜನೆ

0

ಏಪ್ರಿಲ್ 02 ರಂದು ಕಾಲಭೈರವೇಶ್ವರ ದೇವಾಲಯದ ವಾರ್ಷಿಕೋತ್ಸವ ಹಾಗೂ 27ನೇ ವರ್ಷದ ಉಚಿತ ಸಾಮೂಹಿಕ ವಿವಾಹ”
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಪರಮ ಪೂಜ್ಯ ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಬೆಳೆದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಕನಸಿನಂತೆ 1998 ರಂದು ನಿರ್ಮಿಸಿದ ಸಮುದಾಯ ಭವನ ಉದ್ಘಾಟನೆ ದಿನದಿಂದ ಆರಂಭಗೊಂಡ ವಿವಾಹ ಮಹೋತ್ಸವಕ್ಕೆ ಇಂದು 27ರ ಸಂಭ್ರಮ. ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆಯುವ ಈ ಶುಭ ವಿವಾಹ ಅಂದಿನಿಂದ ಇಂದಿನವರೆಗೆ ಸರಿಸುಮಾರು 700 ಕ್ಕಿಂತ ಹೆಚ್ಚು ದಾಂಪತ್ಯ ಜೀವನಗಳನ್ನು ಕಟ್ಟಿಕೊಟ್ಟಿದೆ.
ಇಂದಿನ ಪ್ರತಿ ವಿವಾಹ ಮಹೋತ್ಸವದ ವಿಶೇಷತೆ ಎಂದರೆ ಮದುವೆಯಾಗುವ 21ವರ್ಷ ಮೇಲ್ಪಟ್ಟ ವರ ಹಾಗೂ 18 ವರ್ಷ ಮೇಲ್ಪಟ್ಟ ವಧು, ವರರಿಗೆ ವಿವಾಹಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಮಠವೇ ನೀಡುತ್ತದೆ.ಹೆಣ್ಣಿಗೆ ತಾಳಿ, ಕಾಲುಂಗುರ, ಬಟ್ಟೆ ನೀಡಿದರೆ. ಗಂಡಿಗೆ ಅಂಗಿ,ಪಂಚೆ, ಕಲ್ಪವೃಕ್ಷ ನೀಡುತ್ತಾರೆ.
ಕಳೆದ 2013 ರಿಂದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ನಡೆಯುತ್ತಿರುವ. ಇಡೀ ವಿವಾಹ ಮಹೋತ್ಸವದ ಸಂಪೂರ್ಣ ಹೊಣೆಗಾರಿಕೆ ಹಾಗೂ ಜವಾಬ್ದಾರಿಯನ್ನು ಹೊತ್ತುಕೊಂಡು ಮಹಾಸಂಸ್ಥಾನಮಠದ ಪ್ರಧಾನ ಕಾರ್ಯದರ್ಶಿಗಳೂ ಆದ ಶಿವಮೊಗ್ಗ ಶಾಖಾಮಠದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಲ್ಲಿಸುತ್ತಿರುವ ಸೇವೆ ಗೌರವಾನ್ವಿತವಾದದ್ದು.
ಆಸಕ್ತ ವಧುವರರು ತಮ್ಮ ಇತ್ತೀಚಿನ ಭಾವಚಿತ್ರ,ಆಧಾರ್ ಕಾರ್ಡ್, ಜಾತಿ ಹಾಗೂ ಜನನ ಪ್ರಮಾಣ ಪತ್ರ,ಗ್ರಾಮ ಪಂಚಾಯಿತಿ ಅಥವಾ ನಗರಸಭೆಯಿಂದ ಪಡೆದ ದೃಢೀಕರಣ ಪತ್ರದೊಂದಿಗೆ ತಾವು ಹಾಗೂ ತಮ್ಮ ಪೋಷಕರೊಂದಿಗೆ ಬಂದು, ದಿನಾಂಕ : 25 /03 /2026 ರೊಳಗೆ ತಮ್ಮ ಹೆಸರನ್ನು ಮೇಲ್ಕಂಡ ವಿಳಾಸದಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಕೋರುತ್ತೇವೆ.
ಆದರ್ಶ ದಂಪತಿಗಳಿಗೆ ಸನ್ಮಾನ :
ಪ್ರತಿ ವರ್ಷದಂತೆ ವಿವಾಹವಾಗಿ 50 ವರ್ಷ ತುಂಬಿದ ಹಿರಿಯ ಆದರ್ಶ ದಂಪತಿಗಳಿಗೆ ಸನ್ಮಾನವೂ ಸಹ ಇರುತ್ತದೆ. ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ನೇತೃತ್ವದಲ್ಲಿ ಇಂತಹ ಉಚಿತ ಸಾಮೂಹಿಕ ವಿವಾಹ ಸಮಾರಂಭಗಳನ್ನು ಎಂತಹುದೇ ಸಂದರ್ಭದಲ್ಲಿ ನಿಲ್ಲಿಸದೇ ಕಳೆದ 26 ವರ್ಷಗಳಿಂದ ನಿರಂತರವಾಗಿ, ವೈಭವಯುತವಾಗಿ ನಡೆಸಿಕೊಂಡು ಬರುತ್ತಿರುವ ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಾಖಾಮಠದ ಪ್ರಯತ್ನ ಶ್ಲಾಘನೀಯ ಹಾಗೂ ಗೌರವಾನ್ವಿತವಾದುದೇ ಹೌದು. ಈ ಬಾರಿಯ 27ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಏಪ್ರಿಲ್ 02ರ ಗುರುವಾರ ಬೆಳಿಗ್ಗೆ 9:30ಕ್ಕೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಶ್ರೀ ಕಾಲಭೈರವೇಶ್ವರ ದೇವಾಲಯದ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ ಎಂದು ಮಠದ ವ್ಯವಸ್ಥಾಪಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ,08182-257958, 254141, 9742885627, 9844201506 ನಂಬರಿಗೆ ಸಂಪರ್ಕಿಸಿ.

Kuvempu University ಪಠ್ಯಕ್ರಮದ ಜೊತೆಗೆ ಇತರೆ ಶೈಕ್ಷಣಿಕ ಚಟುವಟಿಕೆಗಳು ಮಹತ್ವ ಪಾತ್ರವಹಿಸುತ್ತವೆ- ಪ್ರೊ.ತಿಮ್ಮರಾಯಪ್ಪ

0

ಪಾಥ್ವೇಸ್ ಘಟಕದ ವತಿಯಿಂದ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ರಸಪ್ರಶ್ನಾ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.

Kuvempu University ಪ್ರೊ. ತಿಮ್ಮರಾಯಪ್ಪ, ಕುಲಸಚಿವರು (ಮೌಲ್ಯಮಾಪನ), ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಇವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಜೊತೆಗೆ ಇತರೆ ಶೈಕ್ಷಣಿಕ ಚಟುವಟಿಕೆಗಳ ಮಹತ್ವವನ್ನು ವಿವರಿಸಿದರು ಮತ್ತು ಈ ರೀತಿಯ ರಸಪ್ರಶ್ನೆ ಸ್ಪರ್ಧೆಗಳು ವಿದ್ಯಾರ್ಥಿಗಳ ಭೌದ್ಧಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಶ್ರೀ. ಹೇಮಂತ್ ಎನ್. ಐಎಎಸ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾಪಂಚಾಯತ್, ಶಿವಮೊಗ್ಗ, ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಜೀವನದಲ್ಲಿ ಮಹತ್ತರವಾದ ಕನಸನ್ನು ಕಾಣಬೇಕು ಹಾಗೂ ಆ ಕನಸುಗಳನ್ನು ನನಸಾಗಿಸಾಲು ಪ್ರತಿನಿತ್ಯ ಶ್ರಮವಹಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ತಮ್ಮ ವಿಧ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗಾಗಿ ತಮ್ಮನ್ನು ತಾವು ತೊಡಗಿಸಿಕೊಕೊಳ್ಳಬೇಕೆಂದು ನೆರೆದಿರುವ ವಿಧ್ಯಾರ್ಥಿಗಳಿಗೆ ತಿಳಿಹೇಳಿದರು.
ಶ್ರೀ ಜಿ. ವಿಜಯ್ ಕುಮಾರ್, ಉಪಾಧ್ಯಕ್ಷರು, ಶಿವಮೊಗ್ಗ ಜಿಲ್ಲಾ
ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ
ಇವರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಆಳವಾದ ಅಧ್ಯಯನ ಕಡಿಮೆಯಾಗುತ್ತಿದೆ, ಅದರಲ್ಲಿಯೂ ಇತಿಹಾಸ, ವಿಜ್ಞಾನ ಮತ್ತು ತಂತ್ರಜ್ಞಾನಗಳ ವಿಷಯಗಳ ಕುರಿತು ಅಭ್ಯಸ ಮಾಡದೇ ಯು.ಪಿ.ಎಸ್.ಸಿ , ಕೆ.ಪಿ.ಎಸ್.ಸಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕಷ್ಟ ಸಾಧ್ಯ ಎಂದರು ಮತ್ತು ವಿದ್ಯಾರ್ಥಿಗಳು ಒಂದೇ ಗುರಿಯನ್ನು ಇಟ್ಟು ಹಾಗೂ ಆ ಗುರಿಯನ್ನು ಮುಟ್ಟುವ ತನಕ ವಿಶ್ರಮಿಸಬಾರದು ಎಂಬ ಕಿವಿ ಮಾತುಗಳನ್ನು ಆಡಿದರು.

Kuvempu University ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜೇಶ್ವರಿ ಎನ್, ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸಿರಾಜ್ ಅಹಮ್ಮದ್, ಪಾಥ್ವೇಸ್ ನಿರ್ದೇಶಕರಾದ ಡಾ.ಗಿರಿಧರ್ ಕೆ.ವಿ, ಎಜುರೇಟ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್ ಶಂಕರ್ ನಾರಾಯಣ್ ಮತ್ತು ವಿವಿಧ ಕಾಲೇಜಿನ ವಿದ್ಯಾರ್ಥಿಗಳ 34 ತಂಡಗಳು ಹಾಗೂ ಪಾಥ್ವೇಸ್ ಘಟಕದ ಸ್ವಯಂಸೇವಕರೆಲ್ಲರು ಉಪಸ್ಥಿತರಿದ್ದರು.

ಶಿವಾಜಿ ಮಹಾರಾಜರು ಧೈರ್ಯ,ಶೌರ್ಯ,ಸ್ವಾಭಿಮಾನದ ಸಂಕೇತ- ಸಿ.ಎಸ್.ಚಂದ್ರಭೂಪಾಲ್

0

ಶಿವಾಜಿ ಮಹಾರಾಜರು ಧೈರ್ಯ, ಶೌರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿದ್ದಾರೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ ಎಸ್ ಚಂದ್ರಭೂಪಾಲ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಾಜಿ ಮಹಾರಾಜರು ಹಿಂದೂಸ್ತಾನಕ್ಕೆ ನೀಡಿರುವ ಕೊಡುಗೆ ಅಪಾರ. ಎಲ್ಲ ಕ್ಷೇತ್ರದಲ್ಲಿ ಮರಾಠ ಸಮಾಜದ ಅಸ್ತಿತ್ವವನ್ನು ನಾವು ಕಾಣಬಹುದಾಗಿದೆ. ನಮ್ಮ ಮಕ್ಕಳಿಗೆ ಶಿವಾಜಿ ಮಹಾರಾಜರ ಬಗ್ಗೆ ತಿಳಿಸಬೇಕಿದ್ದು ಧೈರ್ಯ, ಶೌರ್ಯ, ಮಹಿಳೆಯರಿಗೆ ಗೌರವ, ಹೋರಾಟದ ಶ್ರದ್ದೆ ಮತ್ತು ಸ್ವಾಭಿಮಾನದಂತಹ ಗುಣಗಳನ್ನು ಶಿವಾಜಿಯವರನ್ನು ನೋಡಿ ಕಲಿಯಬೇಕಿದೆ ಎಂದರು.
ತೀರ್ಥಹಳ್ಳಿ ಚಿಟ್ಟೆಬೈಲು ಪ್ರಜ್ಞಾಭಾರತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಲೋಹಿತಾಶ್ವ ಕೇದಿಗ್ಗೆರೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಹೆಸರೇ ನಮ್ಮ ಮಕ್ಕಳನ್ನು ಬೆಳೆಸಲು ಪ್ರೇರಣಾ ಶಕ್ತಿಯಾಗಿದೆ. ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿ ಗರ್ಭದಿಂದಲೇ ಮಗನಿಗೆ ಶಿಕ್ಷಣ ನೀಡಿದ್ದಾರೆ. ಶಿವಾಜಿ ಚಿಕ್ಕವನಿರುವಾಗಲೇ ಧೈರ್ಯದ, ಶೌರ್ಯದ, ಸ್ವಾಭಿಮಾನದ ಶಿಕ್ಷಣವನ್ನು ತಾಯಿ ಜೀಜಾಬಾಯಿ ನೀಡಿದ್ದಾರೆ. ಶಿವಾಜಿಯವರ ಚಿಂತನೆಗಳು, ತತ್ವಗಳು ನಮ್ಮ ಮಕ್ಕಳಲ್ಲಿ ಬರಬೇಬೆಕೆಂದರೆ ಎಲ್ಲ ತಾಯಂದಿರು ಜೀಜಾಬಾಯಿ ಆಗಬೇಕು ಎಂದ ಅವರು ಶಿವಾಜಿಯವರು ತಮ್ಮ 12 ನೇ ವಯಸ್ಸಿನಲ್ಲಿಯೇ ಸ್ವಯಂಭು ಲಿಂಗದ ಮುಂದೆ ಹಿಂದುವೀ ಸಾಮ್ರಾಜ್ಯ ನಿರ್ಮಾಣ ಮಾಡುವುದಾಗಿ ಸಂಕಲ್ಪ ಮಾಡಿದ್ದರೆಂದು ತಿಳಿಸಿದರು.
ಜೀಜಾಬಾಯಿಯವರಿಗೆ ತಮ್ಮ ಮಗು ಗರ್ಭದಲ್ಲಿರುವಾಗ ಸಾಮಾನ್ಯ ಹೆಣ್ಣು ಮಕ್ಕಳ ರೀತಿಯ ಬಯಕೆಗಳು ಇರಲಿಲ್ಲ. ಅಸಾಮಾನ್ಯವಾದ ಬಯಕೆಗಳನ್ನು ಆಕೆ ಹೊಂದಿದ್ದರು. ಉತ್ತಮ ಇತಿಹಾಸ ಮರುಸ್ಥಾಪನೆ ಮಾಡುವಂತಹ ಮಗ ಹುಟ್ಟಲಿ ಎಂಬ ಕನಸು ಕಂಡಿದ್ದರು. ಪ್ರತಿ ತಾಯಿಯೂ ಜೀಜಾಬಾಯಿ ಆಗಬೇಕು ಹಾಗೂ ಪ್ರತಿ ಗುರು ದಾದಾಜಿ ಕೊಂಡದೇವರಾಗಬೇಕು ಆಗ ಶಿವಾಜಿಯಂತಹ ಮಕ್ಕಳು ಬೆಳೆಯಲು ಸಾಧ್ಯವಾಗುತ್ತದೆ.
ಗೋವುಗಳು ನಡೆಯುವ ದಾರಿಯಲ್ಲಿ ದಾರಿಗಳ ನಿರ್ಮಾಣವಾಗುತ್ತದೆ. ಗೋವು ಸಂತತಿಗಳೇ ನಮಗೆ ದಾರಿಗಳನ್ನು ನೀಡಿದ್ದು, ನಮ್ಮ ಬದುಕಿಗೆ ಪೂರಕವಾಗಿ ಅವು ಬದುಕುತ್ತಿವೆ. ಇಂತಹ ಗೋವನ್ನು ಮಾತೆಯೆಂದು ಗೌರವಿಸಬೇಕು. ಮಹಿಳೆಯರನ್ನು ಗೌರವಿಸಬೇಕು ಎಂದು ಶಿವಾಜಿ ಸಾರಿದ್ದು ಪ್ರತಿ ಮಕ್ಕಳು ಶಿವಾಜಿ ರೂಪ ತಾಳಬೇಕು. ಶಿವಾಜಿಯವರು ಯಾವುದೇ ರಾಜ್ಯ, ಜಾತಿಗೆ ಸೀಮಿತರಲ್ಲ ಅವರು ಅಸೀಮರಾಗಿದ್ದು ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಶಿವಾಜಿ ಮಹಾರಾಜರ ಅಧ್ಯಯನ ಪೀಠವಾಗಬೇಕು ಎಂದರು.
ಶಿವಾಜಿಯವರು ಸಂಸ್ಕೃತದಲ್ಲಿ ಮುದ್ರೆ ಬಿಡುಗಡೆ ಮಾಡಿದರು. ಜಗತ್ತಿನ ಮಂಗಳಕ್ಕಾಗಿ ಶಿವಾಜಿಯ ಮುದ್ರೆ ಇದೆ ಎಂದು ಸಾರಿದರು. ಪರಮಾತ್ಮನ, ಧರ್ಮದ ಕೆಲಸಕ್ಕಾಗಿ ಹಾಗೂ ಶಿಷ್ಟ ರಕ್ಷಣೆಗಾಗಿ, ಕೆಟ್ಟದನ್ನು ನಾಶ ಮಾಡುವುದಕ್ಕಾಗಿಯೇ ಶಿವಾಜಿ ಜನ್ಮವಾಗಿದೆ ಎಂದು ತಾಯಿ ಜೀಜಾಬಾಯಿ ಅವರನ್ನು ಬೆಳೆಸಿದ್ದು, 16 ನೇ ವಯಸ್ಸಿನಲ್ಲಿಯೇ ಸೈನ್ಯ ಕಟ್ಟಿ ನಾವೆಲ್ಲ ಒಂದೇ ಎಂಬ ಸಂದೇಶ ನೀಡಿ, ತೋರಣಗಡ ಕೋಟೆಯನ್ನೇ ಗೆದ್ದಿದ್ದರು ಶಿವಾಜಿ. ಸ್ವಂತ ಶಕ್ತಿ ಮತ್ತು ಪ್ರತಿಭೆಯಿಂದ ರಾಜನಾಗಿ ಹೊರಮ್ಮಿದ ಶಿವಾಜಿ ಮಹಾರಾಜರು ತಮ್ಮ ಆಡಳಿತ ವೈಖರಿಗೆ ಹೆಸರಾಗಿದ್ದು ಸುರಾಜ್ಯ, ಸ್ವರಾಜ್ಯದ ಬಗ್ಗೆ ತಿಳಿಸಿದ್ದಾರೆ. ಪ್ರತಾಪಗಡ ಯುದ್ದದಲ್ಲಿ ನಾವು ಶಿವಾಜಿಯವರ ವೀರತ್ವ ಮತ್ತು ಶೂರತ್ವ ಕಾಣಬಹುದು ಎಂದರು.
ಶಿವಾಜಿ ಮಹಾರಾಜರ ತತ್ವ, ಚಿಂತನೆಗಳು ಹಾಗೂ ಅವರ ಪ್ರತಿ ಹೆಜ್ಜೆಯನ್ನು ಮುಂದಿನ ಪೀಳಿಗೆಗೆ ನಾವು ತಿಳಿಸಬೇಕಿದೆ. ಶಿವಾಜಿಯವರ ಕುರಿತಾದ ಪುಸ್ತಕಗಳನ್ನು ಮಕ್ಕಳಿಗೆ ನೀಡಬೇಕು ಎಂದರು.
ಅಪರ ಜಿಲ್ಲಾಧಿಕಾರಿಗಳಾದ ಅಭಿಷೇಕ್ ವಿ ಮಾತನಾಡಿ, ಭಾರತ ದೇಶದ ಅತ್ಯಂತ ಪ್ರಮುಖ ರಾಜರಲ್ಲಿ ಶಿವಾಜಿ ಮಹಾರಾಜರು ಒಬ್ಬರಾಗಿದ್ದು ಧೈರ್ಯ, ಶೌರ್ಯಕ್ಕೆ ಅವರು ಮಾದರಿಯಾಗಿದ್ದಾರೆ. ಸಂಘಟಿತ ನೌಕಾಪಡೆಯನ್ನು ನಿರ್ಮಿಸಿದ ಮಹಾನ್ ಯೋಧರಾಗಿದ್ದು ಆದರ್ಶಪುರುಷರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಸಂದೇಶಗಳನ್ನು, ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಕಾರಿಯಪ್ಪ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ನ ಜಿಲ್ಲಾಧ್ಯಕ್ಷ ಆರ್.ಚಂದ್ರರಾವ್ ಗಾರ್ಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

DVS College of Arts, Science and Commerce ಸಂತರದ್ದು ಸರಳ ಭಾಷೆ. ಜೀವನ‌ಮೌಲ್ಯಗಳನ್ನ ಸಾಹಿತ್ಯದಲ್ಲಿ ಅರ್ಥವಾಗುವಂತೆ ವಿವರಿಸಿದ್ದಾರೆ- ಪ್ರೊ. ಧನ್ಯಕುಮಾರ್ ಬಿರಜ್ದಾರ್

0

DVS College of Arts, Science and Commerce ಹಿಂದಿ ಸಾಹಿತ್ಯದಲ್ಲಿ ಸಂತ ಮಹಾತ್ಮರ ಕೊಡುಗೆ ಅಮೂಲ್ಯ. ಸಂತ ಕವಿಗಳು ಸಾಹಿತ್ಯದ ಮೂಲಕ ಅತ್ಯಮೂಲ್ಯ ಸಂದೇಶ ಸಾರಿದರು ಎಂದು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದ ಲೇಖಕ ಪ್ರೊ. ಧನ್ಯಕುಮಾರ್ ಬಿರಜ್ದಾರ್ ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಹಿಂದಿ ವಿಭಾಗದಿಂದ ಆಯೋಜಿಸಿದ್ದ ಭಾರತೀಯ ಸಾಹಿತ್ಯದಲ್ಲಿ ಸಂತ ಪರಂಪರೆ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.

ಸಂತ ಪರಂಪರೆಯು ಸರಳ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ್ದು, ಜೀವನ ಮೌಲ್ಯಗಳನ್ನು ಸಾಹಿತ್ಯದಲ್ಲಿ ಅರ್ಥ ಆಗುವಂತೆ ವಿವರಿಸಿದ್ದಾರೆ. ಸಮಾಜ ಸುಧಾರಣೆಗೆ ಪೂರಕವಾದ ಅಂಶಗಳನ್ನು ಸಾಹಿತ್ಯದಲ್ಲಿ ಅಳವಡಿಸಿದ್ದಾರೆ. ಮಾನವೀಯ ಮೌಲ್ಯಗಳನ್ನು ಪ್ರತಿನಿಧಿಸುತ್ತವೆ ಎಂದು ತಿಳಿಸಿದರು.

ಹಿಂದಿ ಸಾಹಿತ್ಯದಲ್ಲಿ ಸಂತ ಮಹಾತ್ಮರು ಭಕ್ತಿಪರ ಕಾವ್ಯ, ಸಾಮಾಜಿಕ ಸಂದೇಶಗಳು ಭಾರತೀಯ ಸಂಸ್ಕೃತಿಗೆ ದಿಕ್ಕು ತೋರಿಸುವ ಬೆಳಕಿನಂತಿದೆ. ಮಹಾನ್ ಸಂತರು ಸಾಹಿತ್ಯದ ಮೂಲಕ ಸಮಾಜದ ಪರಿವರ್ತನೆಯ ಶಕ್ತಿ ಸಾರುತ್ತದೆ ಎಂದು ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಅಧ್ಯಕ್ಷ ಕೆ.ಬಸಪ್ಪಗೌಡ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ನಡೆಸಬೇಕು. ಸಾಹಿತ್ಯದಲ್ಲಿನ ಮೌಲ್ಯಯುತ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಸಮಿತಿ ವತಿಯಿಂದ ನಿರಂತರವಾಗಿ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

DVS College of Arts, Science and Commerce ದೇಶೀಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ಪಿ.ದಿನೇಶ್ , ಸಹ ಕಾರ್ಯದರ್ಶಿ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಎಂ.ರಾಜು, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಐಕ್ಯೂಎಸಿ ಸಂಚಾಲಕ ಪ್ರೊ. ಎನ್.ಕುಮಾರಸ್ವಾಮಿ, ಹಿಂದಿ ವಿಭಾಗದ ಮುಖ್ಯಸ್ಥ ಡಾ. ಎಂ.ಸಿದ್ದಯ್ಯ ಮತ್ತಿತರರು ಉಪಸ್ಥಿತರಿದ್ದರು.

ರೈತರು ಮತ್ತು ಜನಸಾಮಾನ್ಯರಿಗೆ ಭೂವಿವಾದಗಳಿಗೆ ಸಂಬಂಧಿಸಿದ ಕಾನೂನು ಅರಿವು, ಪರಿಹಾರ ತಿಳಿಸಬೇಕು- ನ್ಯಾ.ಎಂ.ಎಸ್.ಸಂತೋಷ್

0

ಜನಸಾಮಾನ್ಯರಿಗೆ ಕಾನೂನಿನ ಅರಿವು ಅತ್ಯಂತ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಹೇಳಿದರು.
ಹೊಸಕೊಪ್ಪ-ತಟ್ಟೆಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕುವೆಂಪು ವಿಶ್ವವಿದ್ಯಾಲಯ, ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಸಂಜೆ ಕಾಲೇಜಿನ ರಾಷ್ಟ್ರೀಯಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರದಲ್ಲಿ ಮಾತನಾಡಿದರು.
ರೈತರು ಮತ್ತು ಜನಸಾಮಾನ್ಯರಿಗೆ ಸಂಬಂಧಿಸಿದ ಭೂ ವಿವಾದಗಳು ಮತ್ತು ಅವುಗಳಿಗೆ ಪರಿಹಾರಗಳನ್ನು ಅರಿತುಕೊಳ್ಳಬೇಕು. ಪೋಕ್ಸೋ ಕಾಯ್ದೆಯ ಬಗ್ಗೆ ಮಾಹಿತಿ ಹೊಂದಬೇಕು. ತೊಂದರೆಗೆ ಒಳಗಾದ ಸಂದರ್ಭದಲ್ಲಿ ಯಾವ ರೀತಿ ಮುನ್ಸೂಚನೆ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ದೇಶೀಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷ ಜಿ.ಮಧುಸೂದನ್ ಮಾತನಾಡಿ, ಎನ್‌ಎಸ್‌ಎಸ್ ಶಿಬಿರಗಳು ವಿವಿಧ ಕಾರ್ಯಕ್ರಮಗಳ ಮೂಲಕ ಗ್ರಾಮಗಳಲ್ಲಿ ಅರಿವನ್ನು ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ಪಿ.ದಿನೇಶ್ ಮಾತನಾಡಿ, ಎನ್‌ಎಸ್‌ಎಸ್
ಶಿಬಿರಗಳಿಂದ ಗ್ರಾಮಗಳಲ್ಲಿ ಸ್ವಚ್ಛತೆ ಅರಿವು ಮೂಡಿಸಬಹುದು ಮತ್ತು ವಿವಿಧ ಕಾರ್ಯಕ್ರಮಗಳ ಯೋಜನೆ ಮೂಲಕ ಜನರಲ್ಲಿ ವಿವಿಧ ಬಗೆಯ ವಿಷಯಗಳ ಜ್ಞಾನದ ಅರಿವನ್ನು ಮೂಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಬಸಪ್ಪಗೌಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತ್ಯವಶ್ಯಕವಾಗಿದ್ದು, ಕಾನೂನಿನ ಅಡಿಯಲ್ಲಿ ಪಡೆಯಬಹುದಾದ ಹಲವಾರು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸದೃಢ ಭಾರತವನ್ನು ನಾವು ಕಟ್ಟಬೇಕಾದರೆ ಯುವಪೀಳಿಗೆಯ ಪಾತ್ರ ಮುಖ್ಯವಾಗಿದೆ. ಈ ರೀತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ಅವರಿಗೆ ಅರಿವನ್ನು ಮೂಡಿಸುವುದು ಅತ್ಯಂತ ಉಪಯುಕ್ತಕಾರಿಯಾದ ಅಂಶವಾಗಿದೆ ಎಂದು ತಿಳಿಸಿದರು.
ರಾಷ್ಟಿçÃಯ ಸೇವಾ ಯೋಜನೆ ಅಧಿಕಾರಿ ಜಿ.ಕೆ.ಮಂಜಪ್ಪ, ಡಿವಿಎಸ್ ಸಂಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್.ಕುಮಾರಸ್ವಾಮಿ, ಸುಮಾ, ಸಹ ಶಿಬಿರಾಧಿಕಾರಿ ಮನು ಎಸ್ ಮೂರ್ತಿ ಮತ್ತು ಸಹಾಯಕ ಎನ್.ಮಂಜುನಾಥ್, ಸಿಬ್ಬಂದಿ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

H.K.Patil ಪ್ರವಾಸೋದ್ಯಮವು ಅಡೆತಡೆಗಳನ್ನ ನಿವಾರಿಸುವ ಸಾಮಾಜಿಕ ಶಕ್ತಿ- ಸಚಿವ ಹೆಚ್.ಕೆ.ಪಾಟೀಲ್.

0

ಬೆಂಗಳೂರು (ಪ್ರತಿನಿಧಿಯಿಂದ)

H.K.Patil ಪ್ರವಾಸೋದ್ಯಮವು ಅಡೆತಡೆಗಳನ್ನು ನಿವಾರಿಸುವ ಒಂದು ಸಾಮಾಜಿಕ ಶಕ್ತಿ. ಅನುಭವದ ಗುಣಮಟ್ಟ ಮತ್ತು ಸುಸ್ಥಿರತೆಯ ಮೇಲೆ ಪ್ರಗತಿಯ ಪಾಲುದಾರರು, ಪ್ರವಾಸೋದ್ಯಮ ಕ್ಷೇತ್ರದ ಎಲ್ಲಾ ವಿಭಾಗದ ಅಧಿಕಾರಿಗಳು, ನೌಕರರು, ವಿವಿಧ ಪ್ರವಾಸಿ ಪ್ರಿಯರು ಗಮನ ಹರಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರು ಹೇಳಿದರು.

ರೆಸಿಡೆನ್ಸಿ ರಸ್ತೆಯ ಮೈಸೂರು ಹಾಲ್ ನಲ್ಲಿ ಆಯೋಜಿಸಿದ್ದ `ಕನೆಕ್ಟ್-೨೦೨೬’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ವಲಯದ ಬೆಳವಣಿಗೆಯ ಪ್ರಯೋಜನಗಳು ಬೆಂಗಳೂರಿನ ಜನನಿಬಿಡ ಬೀದಿಗಳಿಂದ ಹಿಡಿದು ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ಪ್ರಶಾಂತ ಹಳ್ಳಿಗಳವರೆಗೆ ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಕರ್ನಾಟಕವನ್ನು ಶಾಂತಿ, ಕಲಿಕೆ ಮತ್ತು ಸಮೃದ್ಧಿಯ ದಾರಿದೀಪವನ್ನಾಗಿಸಬೇಕು. ಇಂದು ಪ್ರವಾಸಿಗರೆಂದರೆ ದೊಡ್ಡ ದೊಡ್ಡ ರೆಸಾರ್ಟ್ ಗಳಿಗೆ ತೆರಳುವ ಪ್ರವಾಸಿಗರಷ್ಟೇ ಅಲ್ಲ. ಅಂಕಿ ಅಂಶಗಳ ಪ್ರಕಾರ 80 ರಿಂದ 85 ರಷ್ಟು ಪ್ರವಾಸಿಗರು ಧಾರ್ಮಿಕ ಪ್ರವಾಸೋದ್ಯಮಕ್ಕೆ ತೆರಳುತ್ತಿದ್ದು, ಅವರುಗಳಿಗೆ ಉತ್ತಮ ಗುಣಮಟ್ಟದ ಹೋಟೆಲ್ ಸೌಲಭ್ಯ, ಹೋಂ ಸ್ಟೇ, ಕಮ್ಯೂನಿಟಿ ಸ್ಟೇ ಮುಂತಾದ ಸೌಲಭ್ಯಗಳನ್ನು ಕಲ್ಪಿಸುವ ಕಡೆ ಈ ಉದ್ಯಮ ಯೋಜನೆ ರೂಪಿಸಬೇಕಿದೆ. ಒಬ್ಬ ದೇಶೀಯ ಪ್ರವಾಸಿಗ ರೂ 6,178ಗಳನ್ನು ಮತ್ತು ಒಬ್ಬ ವಿದೇಶಿ ಪ್ರವಾಸಿಗ ರೂ 2,87,261ಗಳನ್ನು ವೆಚ್ಚ ಮಾಡುತ್ತಿದ್ದು, ಈ ವೆಚ್ಚದ ಪ್ರಮಾಣವನ್ನು ದುಪ್ಪಟ್ಟುಗೊಳಿಸುವ ಮೂಲಕ ಅಭಿವೃದ್ಧಿ ಮಾಡುವ ಕಡೆ ಯೋಜನೆ ರೂಪಿಸಬೇಕಿದೆ ಎಂದರು.

ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯ ಸದುಪಯೋಗ ಪಡಿಸಿಕೊಂಡು ಶೇ 50% ರಷ್ಟು ಇರುವ ಮಹಿಳೆಯರಿಗೆ ಈ ಸೇವೆಯನ್ನು ನೀಡುವ ಮೂಲಕ ಸಾಮಾಜಿಕ ಬದ್ದತೆಯನ್ನು ಪ್ರದರ್ಶಿಸಬೇಕು. ರಾಜ್ಯವನ್ನು ಹೆಚ್ಚಾಗಿ “ಒಂದು ರಾಜ್ಯ, ಹಲವು ಜಗತ್ತು” ಎಂದು ಬಣ್ಣಿಸಲಾಗುತ್ತದೆ. ವಾಸ್ತುಶಿಲ್ಪದ ಅದ್ಭುತಗಳಾದ ಬೇಲೂರು ಹಳೇಬೀಡು, ಹಂಪಿ, ಲಕ್ಕುಂಡಿ, ಬಾದಾಮಿ, ಐಹೊಳೆ, ಪಟ್ಟದಕಲ್ಲಿನಿಂದ ಹಿಡಿದು, ಮಂಜಿನ ಬೆಟ್ಟಗಳು ಮತ್ತು ೩೪೩ ಕಿಲೋಮೀಟರ್ ಉದ್ದದ ಸುಂದರ ಕರಾವಳಿಯವರೆಗೆ – ಈ ನುಡಿಗಟ್ಟು ನಮ್ಮ ನಾಡಿನ ಆತ್ಮವನ್ನು ಪ್ರತಿಬಿಂಬಿಸುತ್ತದೆ ಎಂದರು.

ಕರ್ನಾಟಕ ಪ್ರವಾಸೋದ್ಯಮ ನೀತಿ 2024-25ಅನ್ನು ಜಾರಿಗೆ ತಂದಿದ್ದು ನಾವು ಉಲ್ಲೇಖಿಸಿರುವಂತೆ ನಮ್ಮ ದೃಷ್ಟಿಕೋನ ಸ್ಪಷ್ಟವಾಗಿದ್ದು ಕೇವಲ ಒಂದು ವಲಯವನ್ನು ನಿರ್ಮಿಸುತ್ತಿಲ್ಲ; ಬದಲಾಗಿ ಅಂತರ್ಗತ ಬೆಳವಣಿಗೆ, ಶಾಂತಿ ಮತ್ತು ಜ್ಞಾನೋದಯದ ಇಂಜಿನ್ ಅನ್ನು ನಿರ್ಮಿಸುತ್ತಿದ್ದೇವೆ. ನಮ್ಮ ರಾಜ್ಯವನ್ನು ಒಂದು `ಟ್ರಿಲಿಯನ್ ಡಾಲರ್’ ಆರ್ಥಿಕತೆಯನ್ನಾಗಿ ಮಾಡುವ ಮಹತ್ವಾಕಾಂಕ್ಷೆಗೆ ಗಣನೀಯ ಕೊಡುಗೆ ನೀಡುವ ಮೂಲಕ, ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸುವುದು ನಮ್ಮ ಗುರಿಯಾಗಿದೆ. ಈಗ ನಡೆಯುತ್ತಿರುವ ಎಐ ಸಮ್ಮಿಟ್ ಮಾದರಿಯಲ್ಲಿಯೇ ನಮ್ಮ ರಾಜ್ಯದಲ್ಲೂ ಹಲವಾರು ದೊಡ್ಡ ದೊಡ್ಡ ಕಾರ್ಯಕ್ರಮಗಳು ನಡೆಯಬೇಕು. ಬೆಂಗಳೂರು ಟೆಕ್ ಸಮ್ಮಿಟ್, ಇನ್ವೆಸ್ಟರ್ಸ್ ಮೀಟ್, ಹಾಗೂ ನಮ್ಮ ಕೆಐಟಿಇ ಸಮಾವೇಶದ ಯಶಸ್ಸಿನ ನಂತರ, ಐಐಟಿಎಂ, ಟಿಟಿಎಫ್ ಕಾರ್ಯಕ್ರಮಗಳ ನಂತರ ಇತರೆ ಯಾವುದೇ ಕಾರ್ಯಕ್ರಮಗಳು ನಡೆಯದಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ನೀವೆಲ್ಲರೂ ಕಾರ್ಯೋನ್ಮುಖರಾಗಿ ಹೆಚ್ಚೆಚ್ಚು ಇವೆಂಟ್ ಗಳನ್ನು ಆಯೋಜಿಸಬೇಕು. ಬ್ರಾö್ಯಂಡ್ ಬೆಂಗಳೂರು ಅಷ್ಟೇ ಅಲ್ಲದೇ ಬಿಯಾಂಡ್ ಬೆಂಗಳೂರಿಗೂ ಹೆಚ್ಚಿನ ಒತ್ತನ್ನು ಮತ್ತು ಸಮಯವನ್ನು ನಾವೆಲ್ಲರೂ ನೀಡಬೇಕಾಗಿದೆ. ಹೆಚ್ಚೆಚ್ಚು ಕನೆಕ್ಟ್ ಕಾರ್ಯಕ್ರಮಗಳನ್ನು ರಾಜ್ಯದೆಲ್ಲಡೆ ಆಯೋಜಿಸಬೇಕು ಎಂದರು.

H.K.Patil ಕಠಿಣ ಸಮಯದಲ್ಲಿ ನಿಮ್ಮೊಂದಿಗೆ:
ಕನ್ವೆಷನಲ್ ಟೂರಿಸ್ಟ್ ಪ್ರಾಜೆಕ್ಟ್ ಗಳಷ್ಟೇ ಅಲ್ಲದೇ ಪಿಪಿಪಿ ಮಾದರಿಯಲ್ಲಿ ಎಂಐಸಿಐ ಟೂರಿಸಂ, ಇವೆಂಟ್ ಟೂರಿಸಂ ಮೆಡಿಕಲ್ ಟೂರಿಸಂ, ಗಾಲ್ಫ್ ಟೂರಿಸಂ ಪ್ರಾಡಕ್ಟ್ ಮುಂತಾದ ನೂತನ ಪ್ರಾಡಕ್ಟ್ ಗಳನ್ನು ಸಹಾ ಬೆಳೆಸಬೇಕು. ಸ್ಮಾರಕ ಯೋಜನೆಯ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರ ಅವಶ್ಯಕತೆ ಇದೆ ಎಂದ ಅವರು, ಪ್ರವಾಸೋದ್ಯಮ ನಿರ್ವಾಹಕರು, ಹೋಟೆಲ್ ಮಾಲೀಕರು ಮತ್ತು ಹೋಂ ಸ್ಟೇ ಮಾಲೀಕರು ಈ ಉದ್ಯಮದ ಜೀವಾಳ. ಎಲ್ಲರ ಸಹಕಾರ, ಪ್ರೋತ್ಸಾಹವಿಲ್ಲದಿದ್ದರೆ ಪ್ರವಾಸೋದ್ಯಮ ವಲಯ ಸ್ಥಬ್ದವಾಗುತ್ತದೆ. ಗಟ್ಟಿದನಿಯಲ್ಲಿ ತ್ರಿಕರಣಪೂರ್ವಕವಾಗಿ ಈ ವಲಯವನ್ನು ಪ್ರೋತ್ಸಾಹಿಸಬೇಕು. ಎಂತಹ ಕಠಿಣ ಸಂದರ್ಭದಲ್ಲೂ ಸಹಾ ನಿಮ್ಮ ಬೆಂಬಲಕ್ಕೆ ನಮ್ಮ ಸರ್ಕಾರವು ನಿಲ್ಲುತ್ತದೆ. ನಮ್ಮ ವಲಯದಲ್ಲಿ ಎಐ ಯುಗದಲ್ಲಿ ಮುಖ್ಯವಾಗಿ ವರ್ತನೆಯ ಮತ್ತು ಆ್ಯಟಿಟ್ಯೂಡಿನಲ್ ಬದಲಾವಣೆ ಬರಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ರಾಜ್ಯದ ಪ್ರವಾಸೋದ್ಯಮ ವಲಯದ ಭವಿಷ್ಯವನ್ನು ನಾವೆಲ್ಲರೂ ಸೇರಿ ಬದಲಾಯಿಸುವ ಸಮಯ ಬಂದಿದೆ ಎಂದು ಪ್ರವಾಸೋದ್ಯಮ ಸಚಿವರು ಹೇಳಿದರು.

ಧನಾತ್ಮಕ ಬದಲಾವಣೆ ತನ್ನಿ:
ನೀವೆಲ್ಲರೂ ನಮ್ಮ ರಾಜ್ಯದ ರಾಯಭಾರಿಗಳಾಗಿ ಪ್ರತಿನಿಧಿಸಿ, ಈ ವಲಯದಲ್ಲಿ ಧನಾತ್ಮಕ ಬದಲಾವಣೆಯನ್ನು ತರುವಂತಹ ಪ್ರಯತ್ನಗಳನ್ನು ಮಾಡಬೇಕಿದೆ. ನಿಮ್ಮ ಬೆಳವಣಿಗೆಯನ್ನು ಬೆಂಬಲಿಸಲು, ಪ್ರವಾಸೋದ್ಯಮ ಇಲಾಖೆಯು ಪ್ರೋತ್ಸಾಹಕಗಳು ಮತ್ತು ಸಬ್ಸಿಡಿಗಳ ಬಲವಾದ ಚೌಕಟ್ಟನ್ನು ನೀಡಿ ನಿಮ್ಮಗಳ ಮೂಲಕ ಪ್ರವಾಸೋದ್ಯಮ ವಲಯಕ್ಕೆ ಶಕ್ತಿ ನೀಡುವ ಸಾಧನವಾಗಿದೆ. ನಮ್ಮ ಸರ್ಕಾರ ಬಂದ ಮೇಲೆ ಇಲ್ಲಿಯವರೆಗೂ ರೂ.2091.46 ಕೋಟಿ ಮೊತ್ತದ 122 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದಾಗಿ 11,200 ನೇರ ಉದ್ಯೋಗ ಸೃಷ್ಟಿಯಾಗಲಿದ್ದು, ಇದೊಂದು ರಾಜ್ಯ ಪ್ರವಾಸೋದ್ಯಮ ವಲಯದಲ್ಲಿ ಹೊಸ ಮೈಲಿಗಲ್ಲಾಗಿದೆ. ನಮ್ಮ 343 ಕಿಲೋಮೀಟರ್ ಉದ್ದದ ಸುಂದರ ಕರಾವಳಿಯ ಸಂಪೂರ್ಣ ಲಾಭ ನಮ್ಮ ವಲಯಕ್ಕೆ ತಲುಪಿಸಲು ಈಗಾಗಲೇ ಮಂಗಳೂರಿನಲ್ಲಿ ಕರಾವಳಿ ಭಾಗಿದಾರರ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಿ, ನಮ್ಮ ಸರ್ಕಾರವು ಈ ವಲಯದ ಅಭಿವೃದ್ದಿಗೆ ವೇಗ ನೀಡುವ ಸಂದೇಶವನ್ನು ನೀಡಲಾಗಿದೆ.

ಕಳೆದ ವರ್ಷ ನಿಮ್ಮೆಲ್ಲರ ಸಹಕಾರದಿಂದ ದಕ್ಷಿಣ ಭಾರತ ರಾಜ್ಯಗಳ ಹೂಡಿಕೆ ಸಮಾವೇಶ ನಡೆದು ರೂ.3000 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಯೋಜನೆಗಳಿಗೆ ಒಪ್ಪಂದ ನಡೆದಿದ್ದು, ಇಲ್ಲಿಯವರೆಗೂ ಒಂದು ಯೋಜನೆಯು ಸಾಕಾರಗೊಳ್ಳದಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದ ಅವರು, ನೀವುಗಳು ಮುಂದೆ ಬಂದು ಬಂಡವಾಳ ಹೂಡಿಕೆ ಮಾಡಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡುವುದಷ್ಟೇ ಅಲ್ಲದೇ, ಹೆಚ್ಚಿನ ಸಂಖ್ಯೆಯಲ್ಲಿ ಇತರೆ ಬಂಡವಾಳ ಹೂಡಿಕೆದಾರರನ್ನು ಕರೆರಬೇಕೆಂದು ಸಲಹೆ ನೀಡಿದರು.

ಕೆಪಿಎಸ್ ಅಧ್ಯಕ್ಷರಾದ ಶಾಮರಾಜು, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕ್ ಚಂದ್ರ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಕುಮಾರ್ ಮಿಶ್ರಾ, ಜೆ ಎಲ್ ಆರ್ ವ್ಯವಸ್ಥಾಪಕ ನಿರ್ದೇಶಕರಾದ ಮನು ಸೇರಿದಂತೆ ಇಲಾಖೆಯ ಇತರೆ ಅಧಿಕಾರಿಗಳು, ಹೂಡಿಕೆದಾರರು, ಹೋಂ ಸ್ಟೇ ಮತ್ತು ಪ್ರವಾಸಿ ರೆಸಾರ್ಟ್ಗಳ ಉದ್ಯಮಿಗಳು ಮತ್ತು ಪ್ರವಾಸಿಗರು ಈ ಕಾರ್ಯಕ್ರಮದಲ್ಲಿದ್ದರು.

Chamber of Commerce Shivamogga ಶಿವಮೊಗ್ಗ ನಗರವನ್ನು ಮಾಹಿತಿ ತಂತ್ರಜ್ಞಾನ, ವಾಣಿಜ್ಯದ ” ಹಬ್” ಆಗಿ ಪರಿವರ್ತಿಸಬೇಕು- ಬಿ.ಗೋಪಿನಾಥ್

0

Chamber of Commerce Shivamogga ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಶಿವಮೊಗ್ಗದಲ್ಲಿ ಹೆಚ್ಚಿನ ಅವಕಾಶಗಳಿವೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಬೆಂಗಳೂರಿನಾಚೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಶಿವಮೊಗ್ಗ ನಗರವನ್ನು ಮಾಹಿತಿ ತಂತ್ರಜ್ಞಾನದ ವಾಣಿಜ್ಯದ ಕೇಂದ್ರವಾಗಿ ಪರಿವರ್ತಿಸುವುದು, ಬೆಂಗಳೂರಿನ ಮೇಲಿನ ಹೊರೆ ಕಡಿಮೆ ಮಾಡುವುದು ಮಾಹಿತಿ ತಂತ್ರಜ್ಞಾನ ಮತ್ತು ನಾವೀನ್ಯತೆ ಸಂಬಂಧಿತ ಚಟುವಟಿಕೆಯನ್ನು ಶಿವಮೊಗ್ಗ ನಗರಕ್ಕೆ ಸ್ಥಳಾಂತರಿಸುವಂತೆ ಸರ್ಕಾರದ ಗಮನ ಸೆಳೆಯುವುದು ಬೆಂಗಳೂರಿನಾಚೆ ಕಾರ್ಯಕ್ರಮದ ಗುರಿಯಾಗಿದೆ ಎಂದು ತಿಳಿಸಿದರು.

ಫೆಬ್ರವರಿ 28ಕ್ಕೆ ಶಿವಮೊಗ್ಗದ ಜೆಎನ್‌ಎನ್‌ಸಿಇ ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (ಎಫ್‌ಕೆಸಿಸಿಐ) ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ ) ಸಹಯೋಗದೊಂದಿಗೆ ಬೆಂಗಳೂರಿನಾಚೆ ಮಾಹಿತಿ ತಂತ್ರಜ್ಞಾನ ಕಾರ್ಯಕ್ರಮ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಮಾಹಿತಿ ತಂತ್ರಜ್ಞಾನ ಪ್ರತಿಭಾವಂತರ ಸಂಖ್ಯೆ ಸಾಕಷ್ಟಿದ್ದು, ಬೌದ್ಧಿಕ ಬಂಡವಾಳ, ಅಭಿವೃದ್ಧಿ ಹೊಂದುತ್ತಿರುವ ಐಟಿ ಪರಿಸರ ವ್ಯವಸ್ಥೆ, ಐಟಿ ಎಸ್‌ಇಝಡ್ ಮತ್ತು ಟೆಕ್ ಪಾರ್ಕ್, ಎಂಜಿನಿಯರಿಂಗ್ ತಂತ್ರಜ್ಞಾನ ಕಾಲೇಜು, ಇನ್‌ಕುಬೇಟರ್, ಐಟಿ, ಸ್ಟಾರ್ಟ್ಅಪ್ ಹೊಂದಿರುವ ನಗರ. ಮಲೆನಾಡು ಪ್ರದೇಶ ಶಿವಮೊಗ್ಗ ಮಾಹಿತಿ ತಂತ್ರಜ್ಞಾನದ ಸಂಭಾವ್ಯ ಕೇಂದ್ರವಾಗಿ ಬೆಳೆಯಲು ವಿಪುಲ ಅವಕಾಶವಿದೆ ಎಂದು ತಿಳಿಸಿದರು.

ಅನ್ವೇಷಣ ನಾವೀನ್ಯತೆ ಮತ್ತು ಉದ್ಯಮಶೀಲತಾ ವೇದಿಕೆಯ ಸಿ.ಎಂ.ಪಾಟೀಲ್ ಮಾತನಾಡಿ, ಮಲೆನಾಡು ಪ್ರದೇಶದ ಮೇಲೆ ಆರಂಭಿಕ ಗಮನವನ್ನು ಹೊಂದಿರುವ ಉದ್ಯಮಶೀಲ ಪರಿಸರ ವ್ಯವಸ್ಥೆಯ ಬೆಳವಣಿಗೆಯನ್ನು ಉತ್ತೇಜಿಸಲು ಈ ಕಾರ್ಯಕ್ರಮ ತುಂಬಾ ಪ್ರಯೋಜನಕಾರಿಯಾಗಿದೆ ಎಂದರು.

Chamber of Commerce Shivamogga ಅನ್ವೇಷಣ ನಾವೀನ್ಯತೆ ಮತ್ತು ಉದ್ಯಮಶೀಲತಾ ವೇದಿಕೆಯ ಹರೀಶ್, ಭರತ್, ಜೆಎನ್‌ಎನ್‌ಸಿಇ ಕಾಲೇಜಿನ ಅರುಣ್‌ ಕುಮಾರ್‌, ನಾಗೇಶ್, ಮಾಹಿತಿ ತಂತ್ರಜ್ಞಾನದ ಪ್ರಮುಖರಾದ ಸುರೇಶ್ ಕುಮಾರ್, ಶಿವಕುಮಾರ್, ನವೀನ್, ವೆಂಕಟೇಶ್, ವಿಶ್ವಾಸ್, ವಿಶಾಲ್ ಗೌಡ, ಮಾಚೇನಹಳ್ಳಿ ಕೈಗಾರಿಕಾ ಸಂಘದ ಡಿ.ಜಿ.ಬೆನಕಪ್ಪ, ಡಿವಿಎಸ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ವಿನೋದ್‌ಕುಮಾರ್, ಜಿ.ವಿ.ಕಿರಣ್ ಕುಮಾರ್, ಸಿ.ಎ.ಶರತ್, ರವಿಪ್ರಕಾಶ್ ಜೆನ್ನಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು.