Wednesday, February 25, 2026
Wednesday, February 25, 2026
Home Blog Page 1630

ಉಕ್ರೇನ್ ದೇಶದ ಬುಚಾದಲ್ಲಿನ ನಾಗರಿಕರ ಹತ್ಯೆಯನ್ನ ಭಾರತ ಖಂಡಿಸುತ್ತದೆ- ಮೋದಿ

0

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ನಿನ್ನೆ ರಾತ್ರಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ರಷ್ಯಾ,ಉಕ್ರೇನ್‌ ನಡುವಣ ಬಿಕ್ಕಟ್ಟು ಪರಿಹಾರದ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಉಭಯ ದೇಶಗಳ ದ್ವಿಪಕ್ಷೀಯ ವ್ಯವಹಾರಗಳ ಬಗ್ಗೆ ಸಂವಾದ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ದಾಳಿಯಿಂದ ಉಕ್ರೇನಿನಲ್ಲಿ ಪರಿಸ್ಥಿತಿ ಚಿಂತಾಜನಕವಾಗಿರುವ ಸಂದರ್ಭದಲ್ಲಿ ನಾವು ಮಾತನಾಡುತ್ತಿದ್ದೇವೆ. ಉಕ್ರೇನಿನ ಬುಚಾದಲ್ಲಿ ನಡೆದ ಮುಗ್ಧ ನಾಗರಿಕರ ಹತ್ಯೆ ತೀವ್ರ ನೋವುಂಟು ಮಾಡಿದೆ. ಈ ಘಟನೆಯನ್ನು ಭಾರತ ಖಂಡಿಸಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ರಷ್ಯಾ ಮತ್ತು ಉಕ್ರೇನ್‌ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದೇನೆ. ಉಕ್ರೇನಿನ ಅಧ್ಯಕ್ಷರೊಂದಿಗೆ ನೇರವಾಗಿ ಮಾತನಾಡಿ ಬಿಕ್ಕಟ್ಟು ಪರಿಹರಿಸಿಕೊಳ್ಳುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ಸಲಹೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ನಂತರ ರಷ್ಯಾ,ಉಕ್ರೇನ್‌ ನಡುವಣ ನಡೆಯುತ್ತಿರುವ ಶಾಂತಿ ಮಾತುಕತೆ ಯಶಸ್ವಿಯಾಗುತ್ತದೆ ಎಂದು ಭಾವಿಸುತ್ತೇನೆ ಎಂದು ತಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಂತರ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧದ ಕುರಿತು ಮಾತನಾಡಿದರು. ವಿಶ್ವದ ಅತಿ ದೊಡ್ಡ ಹಾಗೂ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ, ಅಮೆರಿಕ ಸ್ವಾಭಾವಿಕ ಪಾಲುದಾರರು ಎಂದು ವರ್ಣಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಿನಲ್ಲಿ ನಾನು ವಾಷಿಂಗ್ಟನ್‌ಗೆ ಬಂದಾಗ, ಭಾರತ-ಅಮೆರಿಕ ಪಾಲುದಾರಿಕೆಯು ಅನೇಕ ಜಾಗತಿಕ ಸಮಸ್ಯೆಗಳ ಪರಿಹಾರಕ್ಕೆ ಕೊಡುಗೆ ನೀಡಬಹುದು ಎಂದು ನೀವು ಹೇಳಿದ್ದೀರಿ. ಈ ಮಾತನ್ನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದು ಹೇಳಿದ್ದಾರೆ.

ನಂತರದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಉಕ್ರೇನಿನ ಜನರಿಗೆ ಮಾನವೀಯ ನೆರವು ನೀಡಿದ ಭಾರತ ಕ್ರಮವನ್ನು ಅಮೆರಿಕ ಸ್ವಾಗತಿಸುತ್ತದೆ. ರಷ್ಯಾದ ಯುದ್ಧದ ಪರಿಣಾಮಗಳ ನಿರ್ವಹಣೆ ಹೇಗೆ ಎಂಬ ಬಗ್ಗೆ ಅಮೆರಿಕ ಮತ್ತು ಭಾರತ ಸಮಾಲೋಚನೆಯನ್ನು ಮುಂದುವರಿಸಲಿವೆ ಎಂದು ಹೇಳಿದ್ದಾರೆ. ಇದೇ ವೇಳೆ ಬಲವಾದ ಮತ್ತು ಬೆಳೆಯುತ್ತಿರುವ ಪ್ರಮುಖ ರಕ್ಷಣಾ ಪಾಲುದಾರಿಕೆಯನ್ನು ಪರಸ್ಪರ ಹಂಚಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಪಾಕ್ ನೂತನ ಪ್ರಧಾನಿಗೆ ಮೋದಿ ಶುಭಹಾರೈಕೆ

0

ಪಾಕಿಸ್ತಾನದ ನೂತನ ಪ್ರಧಾನಿ ಶಾಹಬಾಝ್‌ ಷರೀಫ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು.

ಭಾರತವು ಶಾಂತಿ, ಸ್ಥಿರತೆಯನ್ನು ಬಯಸುತ್ತದೆ. ಇದರಿಂದ ಅಭಿವೃದ್ಧಿ ಸವಾಲುಗಳತ್ತ ಕೇಂದ್ರೀಕರಿಸಬಹುದು. ಅಲ್ಲದೆ ಜನರ ಯೋಗಕ್ಷೇಮ, ಸಮೃದ್ಧಿಯನ್ನು ಖಾತ್ರಿಪಡಿಸಿಕೊಳ್ಳಬಹುದು ಎಂದಿದ್ದಾರೆ.

ನಾವು ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಬಯಸುತ್ತೇವೆ. ಆದರೆ, ಕಾಶ್ಮೀರ ವಿವಾದವನ್ನು ಪರಿಹರಿಸುವವರೆಗೆ ಶಾಂತಿ ಸಾಧ್ಯವಿಲ್ಲ’ ಎಂದು ಶಾಹಬಾಝ್‌ ಷರೀಫ್‌ ಹೇಳಿದ ಬೆನ್ನಲ್ಲೇ ಮೋದಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಕಾಶ್ಮೀರದ ಜನರಿಗೆ ನೈತಿಕ ಬೆಂಬಲ ನೀಡುತ್ತೇವೆ. ಕಾಶ್ಮೀರದ ಜನರಿಗಾಗಿ ಪ್ರತಿ ವೇದಿಕೆಯಲ್ಲಿ ಧ್ವನಿ ಎತ್ತುತ್ತೇವೆ. ರಾಜತಾಂತ್ರಿಕ ಬೆಂಬಲವನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ಶಾಹಬಾಝ್‌ ಷರೀಫ್ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ನರೇಂದ್ರ ಮೋದಿ ಟ್ವೀಟ್‌ ಮೂಲಕ ಶುಭ ಹಾರೈಸಿದ್ದಾರೆ.

ಭಾರತದೊಂದಿಗೆ ಮಿಲಿಟರಿ ಆಧುನೀಕರಣಕ್ಕೆ ಚರ್ಚೆ ನಡೆಯುತ್ತಿದೆ

0

ಉಕ್ರೇನ್ – ರಷ್ಯಾ ಯುದ್ಧ ಪ್ರಾರಂಭವಾಗಿ ಸುಮಾರು 2 ತಿಂಗಳುಗಳು ಆಗಿವೆ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುವುದರೊಂದಿಗೆ ಅಲ್ಲಿ ಹಿಂಸಾಚಾರವನ್ನು ಮಾಡುತ್ತಿದೆ ಎಂದು ತಿಳಿದುಬಂದಿದೆ.

ಈ ಹಿನ್ನಲೆಯಲ್ಲಿ ರಷ್ಯಾದೊಂದಿಗೆ ಶಸ್ತ್ರಾಸ್ತ್ರ ವಹಿವಾಟುಗಳನ್ನು ನಡೆಸದಂತೆ ಅಮೆರಿಕ ಕರೆ ನೀಡುತ್ತಿದೆ.
ಭಾರತ ಮತ್ತು ಅಮೆರಿಕದ ರಕ್ಷಣ ಮತ್ತು ವಿದೇಶಾಂಗ ಸಚಿವರ ನಡುವಿನ 2+2 ಸಚಿವರ ಮಾತುಕತೆಯ ನಂತರ ಮಾತನಾಡಿದ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ರಷ್ಯಾದೊಂದಿಗೆ ಶಸ್ತ್ರಾಸ್ತ್ರಗಳ ಒಪ್ಪಂದ ಮಾಡಿಕೊಳ್ಳದಂತೆ ಮನವಿ ಮಾಡಿದ್ದಾರೆ.

ನಾವು ಭಾರತಕ್ಕೆ ರಕ್ಷಣಾ ಉಪಕರಣಗಳನ್ನು ಪೂರೈಸಲು ಸಾಧ್ಯವಾಗದ ಸಂದರ್ಭದಲ್ಲಿ ರಷ್ಯಾ ಭಾರತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಈಗ ನಾವು ಭಾರತದ ಪಾಲುದಾರರಾಗಲು ಸಮರ್ಥರಾಗಿದ್ದೇವೆ ಮತ್ತು ಸಿದ್ಧರಿದ್ದೇವೆ ಎಂದು ಬ್ಲಿಂಕನ್ ಭರವಸೆ ನೀಡಿದರು.

ಇನ್ನೂ ಭಾರತ ಈಗಾಗಲೇ ರಷ್ಯಾದಿಂದ ಕೆಲವು ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದು, ಭಾರತದ ಮೇಲೆ ನಿರ್ಬಂಧಗಳನ್ನು ಹೇರಲಾಗುತ್ತದೆಯೇ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ರಷ್ಯಾದೊಂದಿಗೆ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಹೊಸ ವಹಿವಾಟುಗಳನ್ನು ನಡೆಸದಂತೆ ನಾವು ಎಲ್ಲಾ ದೇಶಗಳನ್ನು ಒತ್ತಾಯಿಸುತ್ತೇವೆ ಎಂದರು.

ಮಿಲಿಟರಿ ಉಪಕರಣಗಳ ವ್ಯಾಪಾರದಲ್ಲಿ ಭಾರತ ಮತ್ತು ರಷ್ಯಾ ನಡುವೆ ಸುದೀರ್ಘ ಇತಿಹಾಸವಿದೆ.

ಇದರ ಜೊತೆಗೆ ಮಾತನಾಡಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಅಮೆರಿಕ ಭಾರತದೊಂದಿಗೆ ಮಿಲಿಟರಿ ಆಧುನೀಕರಣದ ಬಗ್ಗೆ ಚರ್ಚಿಸುತ್ತಿದೆ. ಭಾರತಕ್ಕೆ ಶಸ್ತ್ರಗಳನ್ನು ಹೆಚ್ಚು ಸಿಗುವಂತೆ ಮಾಡಲು ಅಮೆರಿಕ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಸಹಾಯಕವಾಗುವಂತೆ ಸಿಎಂ ಮಾರ್ಗದರ್ಶಿ ಯೋಜನೆ

0

ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದೆ.

ರಾಜ್ಯದ ಪ್ರತಿಯೊಂದು ಹಳ್ಳಿಯ ವಿದ್ಯಾರ್ಥಿಗಳೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಸಹಾಯಕವಾಗುವಂತೆ ಸಿಎಂ ಮಾರ್ಗದರ್ಶಿ ಯೋಜನೆಯಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಿಎಂ, ರಾಜ್ಯದ ಪ್ರತಿಯೊಂದು ಹಳ್ಳಿಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಸಹಾಯಕವಾಗುವಂತೆ ಸಿಎಂ ಮಾರ್ಗದರ್ಶಿ ಯೋಜನೆಯನ್ನು ಈ ಬಜೆಟ್ ನಲ್ಲಿ ಜಾರಿಗೆ ತರಲಾಗಿದೆ ಎಂದರು.

ಸಿಎಂ ಮಾರ್ಗದರ್ಶಿ ಯೋಜನೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ವಿಷಯಗಳು, ಪ್ರಶ್ನಾ ಪತ್ರಿಕೆಗಳು ಆನ್ ಲೈನ್ ನಲ್ಲಿ ಲಭ್ಯ ಇರುತ್ತವೆ ಎಂದು ತಿಳಿಸಿದ್ದಾರೆ.

ರಾಜ್ಯದ ಮೀನುಗಾರರಿಗೆ ಮತ್ಸ್ಯಸಿರಿ ಯೋಜನೆ ಘೋಷಣೆ- ಬೊಮ್ಮಾಯಿ

0

ರಾಜ್ಯದ ಮೀನುಗಾರ ಸಮುದಾಯದವರಿಗೂ ವಿದ್ಯಾ ಸಿರಿ ಯೋಜನೆ ವಿಸ್ತರಿಸುವುದರ ಜೊತೆಗೆ ಹೊಸದಾಗಿ ಮತ್ಸ್ಯ ಸಿರಿ ಯೋಜನೆಯನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ.

ಕಾಪು ತಾಲೂಕು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಬ್ರಹ್ಮಕಲಶ ಪುಣ್ಯೋತ್ಸವದ ಸಭೆಯಲ್ಲಿ ನಿನ್ನೆ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ರೈತರ ಮಕ್ಕಳಿಗೆ 8 ನೇ ತರಗತಿಯಿಂದ ಸ್ನಾತಕೋತ್ತರ ಶಿಕ್ಷಣವರೆಗೆ ಈ ವಿದ್ಯಾಸಿರಿ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇನ್ನು ಮುಂದೆ ಮೀನುಗಾರರು ಹಾಗೂ ನೇಕಾರರ ಮಕ್ಕಳಿಗೂ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ.

ಮೀನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಪ್ರೋತ್ಸಾಹಿಸುವ ಉದ್ದೇಶದಿಂದ ತಲಾ 1.50 ಕೋಟಿ ರೂಪಾಯಿ ಮೌಲ್ಯದ 100 ಹೈ ಸ್ಪೀಡ್‌ ಮೀನುಗಾರಿಕಾ ಬೋಟ್‌ಗಳನ್ನು ಕರಾವಳಿಯ ಮೂರು ಜಿಲ್ಲೆಯ ಮೀನುಗಾರರಿಗೆ ನೀಡುವ ಮತ್ಸ್ಯಸಿರಿ ಯೋಜನೆಯನ್ನು ಈ ಸಾಲಿನಿಂದಲೇ ಜಾರಿಗೊಳಿಸಲಾಗುತ್ತಿದೆ. ಇದರಲ್ಲಿ ಶೇ. 40 ಕೇಂದ್ರ ಸರ್ಕಾರ, ಶೇ. 10 ಫಲಾನುಭವಿಗಳು ಮತ್ತು ಉಳಿದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಪ್ರಕಟಿಸಿದ್ದಾರೆ.

ಇಮ್ರಾನ್ ಪದಚ್ಯುತಿ ಸೇನೆ ವಿರುದ್ಧ ಪಾಕ್ ನಲ್ಲಿ ಪ್ರತಿಭಟನೆ

0

ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ ಇಮ್ರಾನ್‌ ಖಾನ್‌ ಪದಚ್ಯುತಿ ವಿರೋಧಿಸಿ ಅಲ್ಲಿನ ಜನ ಪಂಜಾಬ್ ಪ್ರಾಂತ್ಯದ ಲಾಲ್ ಹವೇಲಿಯಲ್ಲಿ ಸೇನೆ ವಿರುದ್ಧ ಬೃಹತ್‌ ಪ್ರತಿಭಟನೆಯನ್ನು ನಡೆಸಿದ್ದಾರೆ.

ಸೇನೆ ವಿರುದ್ಧ ಚೌಕಿದಾರ್‌ ಚೋರ್‌ ಹೇ ಎಂಬ ಘೋಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೇನೆ ವಿರುದ್ಧ ಯಾವುದೇ ರೀತಿಯ ಘೋಷಣೆ ಕೂಗಬೇಡಿ. ನಮ್ಮದು ಶಾಂತಿಯುತ ಹೋರಾಟ ಆಗಬೇಕೆಂದು ಆಂತರಿಕ ವ್ಯವಹಾರಗಳ ಮಾಜಿ ಸಚಿವ ಶೇಖ್ ರಶೀದ್ ಮನವಿ ಮಾಡಿಕೊಂಡಿದ್ದಾರೆ.

ಈ ವಿಷಯಕ್ಕೆ ಇಮ್ರಾನ್‌ ಖಾನ್‌ ಅವರು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿಯಾಗಿ ಶಹಬಾಜ್ ಅವರನ್ನು ಜನ ಒಪ್ಪಿಕೊಳ್ಳುವುದಿಲ್ಲ. ನೂತನ ಸರ್ಕಾರದ ವಿರುದ್ಧ ದೇಶಾದ್ಯಂತ ಹೋರಾಟ ನಡೆಸಲಾಗುತ್ತದೆ.ವಿದೇಶಿ ಕುತಂತ್ರದ ವಿರುದ್ಧ ಇಂದಿನಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತೊಂದು ಹೋರಾಟ ಆರಂಭವಾಗಲಿದೆ.

ಈ ಬೆಳವಣಿಗೆಯ ವಿರುದ್ಧ ಪಿಐಟಿ ಕಾರ್ಯಕರ್ತರು ಹಾಗೂ ಜನರು ಬೀದಿಗಿಳಿದು ಪ್ರತಿಭಟಿಸಬೇಕೆಂದು ಇಮ್ರಾನ್ ಕರೆ ನೀಡಿದ್ದಾರೆ. ಇಮ್ರಾನ್ ಕರೆಯನ್ನು ಓಗೊಟ್ಟು ಜನ ರಸ್ತೆಗಿಳಿದು ಪ್ರತಿಭಟಿಸಿದ್ದಾರೆ. ನಮ್ಮ ದೇಶದ ಇತಿಹಾಸದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ರಸ್ತೆಗಿಳಿದಿರುವುದು ಹಿಂದೆಂದೂ ನಾನು ನೋಡಿಲ್ಲ ಎಂದು ಬರೆದಿದ್ದಾರೆ.

ಹಿಂದೂ- ಮುಸ್ಲೀಮರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು-ಯಡಿಯೂರಪ್ಪ

0

ವಿನಾಕಾರಣ ಬೆಲೆ ಏರಿಕೆ ವಿಷಯ ದೊಡ್ಡದು ಮಾಡುವುದು ಬೇಡ. ಕಾಂಗ್ರೆಸ್​ನವರಿಗೆ ಬೇರೇನೂ ಚಟುವಟಿಕೆ ಇಲ್ಲ. ರಾಜ್ಯದ ಅಭಿವೃದ್ಧಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಹಕಾರ ನೀಡಲಿ. ನಾವೆಲ್ಲರೂ ಒಟ್ಟಾಗಿ ಸೇರಿ ರಾಜ್ಯ ಅಭಿವೃದ್ಧಿ ಮಾಡಬೇಕು. ಸಣ್ಣ ಪುಟ್ಟ ವಿಷಯಗಳಿಗೆ ಗೊಂದಲ ಉಂಟು ಮಾಡಬಾರದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ತಿಳಿಸಿದ್ದಾರೆ.

ಹಿಂದೂ-ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು. ಇನ್ಮುಂದೆ ಅಹಿತಕರ ಘಟನೆಗೆ ಅವಕಾಶ ಕೊಡದಿರಲಿ. ಕೆಲ‌ ಕಿಡಿಗೇಡಿಗಳು ಸೌಹಾರ್ದತೆ ಕೆಡಿಸುವ ಕೆಲಸ ಮಾಡ್ತಿದ್ದಾರೆ. ನಾನೂ ಕೂಡ ಅಂಥವರಿಗೆ ಕಿವಿಮಾತು ಹೇಳುತ್ತೇನೆ. ಅಹಿತಕರ ಘಟನೆ ನಡೆಯದಂತೆ ಈಗಾಗಲೇ‌ ಸಿಎಂ ಬೊಮ್ಮಾಯಿ ಎಚ್ಚರಿಕೆಯನ್ನು ಕೂಡ ಕೊಟ್ಟಿದ್ದಾರೆ. ಸರ್ಕಾರ ಇದನ್ನೆಲ್ಲ ಸಹಿಸೋದಿಲ್ಲ. ನಿಮ್ಮ ನಿಮ್ಮ ಕೆಲಸ ಮಾಡಿಕೊಂಡು ಹೋಗಿ. ಯಾರೂ ಸಾಮರಸ್ಯ ಕದಡಬೇಡಿ. ಮುಸ್ಲಿಮರು‌ ನೆಮ್ಮದಿ, ಗೌರವದಿಂದ ಬಾಳಬೇಕಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರು ಹೇಳಿದ್ದಾರೆ.

ನಾಳೆಯಿಂದ 3 ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡ್ತಿದ್ದೇವೆ. ಪಕ್ಷ ಬಲಪಡಿಸಲು ಈ ರಾಜ್ಯ ಪ್ರವಾಸ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸುತ್ತೇವೆ. ಮುಂದಿನ ಚುನಾವಣೆ ಸಿದ್ಧತೆಗಾಗಿ ಈ ರಾಜ್ಯ ಪ್ರವಾಸ. ಇನ್ಮುಂದೆ ನಿರಂತರವಾಗಿ ರಾಜ್ಯ ಪ್ರವಾಸಗಳು ನಡೆಯುತ್ತವೆ ಎಂದರು.

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್​ನಿಂದ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಕಾಂಗ್ರೆಸ್​​ನವರ ಅಧಿಕಾರದ ಅವಧಿಯಲ್ಲಿ ಬೆಲೆ ಏರಿಕೆ ಹೇಗಿತ್ತು? ಕಾಂಗ್ರೆಸ್​ಗೆ ಹೋಲಿಸಿದ್ರೆ ಈಗಿನ ದರ ಏನೇನೂ ಇಲ್ಲ ಎಂದರು.

ಆಂಧ್ರ ಸಂಪುಟ ಪುನಾರಚನೆ ನಟಿ ರೋಜಾಗೆ ಮಂತ್ರಿ ಸ್ಥಾನ

0

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ ಸಚಿವ ಸಂಪುಟ ಪುನರ್ ರಚನೆ/ವಿಸ್ತರಣೆ ಮಾಡಿದ್ದಾರೆ.

ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ನಟಿ, ವೈಎಸ್ಸಾರ್ ಸಿಪಿ ನಾಯಕಿ ರೋಜಾ ಅವರು ನಗರಿ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆಯಾದರೂ ಸಚಿವ ಸ್ಥಾನ ಸಿಕ್ಕಿರಲಿಲ್ಲ, ಆದರೆ, ನಾನು ವೈಎಸ್ಸಾರ್ ಪಕ್ಷದ ‘ಲಕ್ಕಿ ಚಾರ್ಮ್’ ಎಂದು ಹೇಳಿಕೊಳ್ಳುತ್ತಿದ್ದ ರೋಜಾ ಸೆಲ್ವಮಣಿ ಇಂದು ಸಕತ್ ಭಾವನಾತ್ಮಕವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದಲ್ಲದೆ ಸಿಎಂ ಜಗನ್ ಅವರಿಗೆ ಮುತ್ತು ನೀಡಿ, ಧನ್ಯವಾದ ಅರ್ಪಿಸಿದ್ದಾರೆ.

ರಾಜಕೀಯ ಸುದ್ದಿ, ಬೆಳವಣಿಗೆ ಆಸಕ್ತರ ಕುತೂಹಲ ಕೆರಳಿಸಿದ್ದ ಜಗನ್ ಸಚಿವ ಸಂಪುಟ ಪುನರ್ ರಚನೆ ಇಂದು ನೆರವೇರಿದೆ. ಸಂಪುಟ ಪುನರ್ ರಚನೆಗೂ ಮುನ್ನ ಸಚಿವರೆಲ್ಲರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು ಸರಿ ಸುಮಾರು 24 ಮಂದಿ ಸಚಿವರ ರಾಜೀನಾಮೆಯನ್ನು ಅಧಿಕೃತವಾಗಿ ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು.

ಆಂಧ್ರದ ರಾಜ್ಯಪಾಲ ಬಿಸ್ವ ಭೂಷಣ್ ಹರಿಚಂದ್ರನ್ ಅವರು ಎಲ್ಲರ ರಾಜೀನಾಮೆಯನ್ನು ಅಂಗೀಕರಿಸಿದ್ದರು. ಇದರ ಬೆನ್ನಲ್ಲೇ ಹೊಸದಾಗಿ ಮತ್ತೊಮ್ಮೆ ಜಗನ್ ತಮ್ಮ ಸಂಪುಟ ರಚಿಸಿದ್ದಾರೆ. ಏಪ್ರಿಲ್ 11ರಂದು ಹೊಸ ಸಂಪುಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಶಾಸಕಿ ರೋಜಾಗೆ ಸಿಕ್ತು ಪವರ್, ಕೈಗಾರಿಕಾ ನಿಗಮಕ್ಕೆ
ಭರವಸೆ ನೀಡಿದಂತೆ ಎಲ್ಲಾ ಸಮುದಾಯ, ಹೊಸ ಜಿಲ್ಲೆ, ಹೊಸ ಮುಖಗಳಿಗೆ ಸಿಎಂ ಜಗನ್ ಆದ್ಯತೆ ನೀಡಿದ್ದಾರೆ. ಹೊಸ ಸಚಿವ ಸಂಪುಟದಲ್ಲಿ 25 ಮಂದಿಗೆ ಸ್ಥಾನ ಕಲ್ಪಿಸಲಾಗಿದೆ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಂಡ, ಅಲ್ಪ ಸಂಖ್ಯಾತರು ಹೀಗೆ ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶಾಸಕರಾದವರಿಗೆ ಆದ್ಯತೆ ನೀಡಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

ಮೂಲಗಳ ಪ್ರಕಾರ ಭರ್ಜರಿ ಖಾತೆಯೂ ದಕ್ಕುವ ಸಾಧ್ಯತೆಯಿದೆ.
ಸಿನಿಮಾ ಹಾಗೂ ಜನಪ್ರಿಯ ಕಾರ್ಯಕ್ರಮ ಜಬರ್ದಸ್ತ್ ಜಡ್ಜ್ ಸ್ಥಾನಕ್ಕೆ ರೋಜಾ ಬೈ ಬೈ ಹೇಳಿದ್ದಾರೆ. ಸದ್ಯ ಬಣ್ಣದ ಬದುಕು, ಶೂಟಿಂಗ್ ಮರೆತು ಜಗನ್ ಆಶಯದಂತೆ ಜನತೆಗಾಗಿ ಕಾರ್ಯ ನಿರ್ವಹಿಸುವುದಾಗಿ ರೋಜಾ ಘೋಷಿಸಿದ್ದಾರೆ.

ಕೊನೆ ಕ್ಷಣದ ತನಕ ಸಚಿವ ಸ್ಥಾನ ಸಿಗುವ ಬಗ್ಗೆ ಸಕತ್ ಟೆನ್ಶನ್ ಇತ್ತು. 2024ರಲ್ಲಿ ಅಲ್ಲ ಮುಂದಿನ 20 ವರ್ಷ ಜಗನ್ ಅವರೇ ಆಂಧ್ರದ ಸಿಎಂ ಆಗಿರಲಿದ್ದಾರೆ. ಟಿಡಿಪಿಗೆ ಕೇಡುಗಾಲ ಇನ್ನೇನು ಶುರುವಾಗಲಿದೆ ಎಂದು ಎಂದಿನಂತೆ ತಮ್ಮ ಫೈರ್ ಬ್ರ್ಯಾಂಡ್ ಧಾಟಿಯಲ್ಲಿ ರೋಜಾ ಗುಟುರು ಹಾಕಿದರು.

ಯಾವುದೇ ಖಾತೆ ಸಿಕ್ಕರೂ ಓಕೆ ಎಂದಿರುವ ರೋಜಾಗೆ ಗೃಹ ಖಾತೆ ಸಿಗುವ ಬಗ್ಗೆ ಸುದ್ದಿ ಹಬ್ಬಿದೆ. ಸಂಜೆ ವೇಳೆಗೆ ನೂತನ ಸಚಿವರುಗಳ ಖಾತೆ ಹಂಚಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ ಹೊಸ ಶಕ್ತಿ

0

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಕೃಷಿಗೆ ಸಂಬಂಧಿಸಿದ ಇತರ ಯೋಜನೆಗಳು ದೇಶದ ಕೋಟ್ಯಂತರ ರೈತರಿಗೆ ಹೊಸ ಶಕ್ತಿ ನೀಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

PM-KISAN ಯೋಜನೆಯಡಿಯಲ್ಲಿ ಅರ್ಹ ರೈತರ ಕುಟುಂಬಕ್ಕೆ ವರ್ಷಕ್ಕೆ ಆರು ಸಾವಿರ ರೂಪಾಯಿಗಳ ಆರ್ಥಿಕ ಪ್ರಯೋಜನವನ್ನು ಒದಗಿಸಲಾಗುತ್ತದೆ.

ನಮ್ಮ ರೈತರ ಬಗ್ಗೆ ದೇಶವು ಹೆಮ್ಮೆಪಡುತ್ತದೆ.
ನಮ್ಮ ರೈತರು ಸಶಕ್ತರಾದಾಗ ನವ ಭಾರತವು ಹೆಚ್ಚು ಸಮೃದ್ಧವಾಗಿರುತ್ತದೆ. ರೈತರು ಬಲಿಷ್ಠರಾದಾಗ ರಾಷ್ಟ್ರ ಅಭಿವೃದ್ಧಿಯಾಗುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದ್ದು, ಮೂರು ಕಂತುಗಳಲ್ಲಿ ಎರಡು ಸಾವಿರ ರೂ. ನೀಡಲಾಗುವುದು. ಇದುವರೆಗೆ 11 ಕೋಟಿ 30 ಲಕ್ಷಕ್ಕೂ ಹೆಚ್ಚು ರೈತರ ಕುಟುಂಬಕ್ಕೆ ಪ್ರಯೋಜನ ಸಿಕ್ಕಿದೆ ಎಂದಿದ್ದಾರೆ.

ಕೃಷಿ ಮೂಲಸೌಕರ್ಯ ನಿಧಿಯಡಿ ಕೃಷಿ ಸಂಬಂಧಿತ ಮೂಲಸೌಕರ್ಯಗಳ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ಸಾಲ ಸೌಲಭ್ಯ ಒದಗಿಸಲಾಗಿದೆ. ಒಂದು ಕೋಟಿ 73 ಲಕ್ಷಕ್ಕೂ ಹೆಚ್ಚು ರೈತರು ಇ-ನ್ಯಾಮ್ ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

ರಾಷ್ಟ್ರೀಯ ಕೃಷಿ ಮಾರುಕಟ್ಟೆ ಭಾರತದಲ್ಲಿ ಕೃಷಿ ಸರಕುಗಳಿಗೆ ಆನ್‌ಲೈನ್ ವ್ಯಾಪಾರ ವೇದಿಕೆಯಾಗಿದೆ ಎಂದರು.

ಟಾಟಾ ಐಪಿಎಲ್- 22 ಡೆಲ್ಲಿ ಕ್ಯಾಪಿಟಲ್ಸ್ ಗೆ 44 ರನ್ ಗಳ ಜಯ

0

ಆರಂಭಿಕರಾದ ಡೇವಿಡ್ ವಾರ್ನರ್, ಪೃಥ್ವಿ ಶಾ ಅವರ ಅರ್ಧಶತಕಗಳ ಜೊತೆಗೆ ಚೈನಾ ಮನ್ ಬೌಲರ್ ಕುಲದೀಪ್ ಯಾದವ್ ಹಾಗೂ ಎಡಗೈ ಮಧ್ಯಮ ವೇಗಿ ಕಲೀಲ್ ಅಹಮದ್ ಅವರ ಕರಾರುವಾಕ್ ಬೌಲಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 15ನೇ ಆವೃತ್ತಿಯ 19ನೇ ಪದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 44ರನ್ ಗಳಿಂದ ಸೋಲುಣಿಸಿ ತು. ಇದರೊಂದಿಗೆ ಟೂರ್ನಿಯಲ್ಲಿ ಸತತ ಎರಡು ಸೋಲುಗಳ ನಂತರ ಎರಡನೇ ಜಯ ದಾಖಲಿಸಿತು.

ಮುಂಬೈಯ,ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಒಡ್ಡಿದ 216 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ಶ್ರೇಯಸ್ ಅಯ್ಯರ್ ನೇತೃತ್ವದ ಕೊಲ್ಕತ್ತಾ ತಂಡ ಎರಡು ಎಸೆತಗಳು ಬಾಕಿ ಇರುವಂತೆಯೇ ತನ್ನೆಲ್ಲ ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಶಕ್ತಗೊಂಡಿತು. ಇದರೊಂದಿಗೆ ಟೂರ್ನಿಯಲ್ಲಿ ಎರಡನೇ ಸೋಲಿಗೆ ಒಳಗಾದ ಕೊಲ್ಕತ್ತಾ, ಹ್ಯಾಟ್ರಿಕ್ ಜಯದ ಅವಕಾಶವನ್ನ ಕಳೆದುಕೊಂಡಿತು. ಬೃಹತ್ ಮೊತ್ತ ಬೆನ್ನಟ್ಟುವ ಹಾದಿಯಲ್ಲಿ ನಾಯಕ ಶ್ರೇಯಸ್ ಐಯ್ಯರ್ ಹೊರತುಪಡಿಸಿದರೆ, ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಲಿಲ್ಲ. ಹಂತ ಹಂತಕ್ಕೂ ಕಾಡಿದ ಕುಲದೀಪ್ ಹಾಗೂ ಖಲೀಲ್ ಅಹ್ಮದ್ ಜೋಡಿ ನೈಟ್ ರೈಡರ್ಸ್ ಬ್ಯಾಟರ್ ಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದರು.

ಇದಕ್ಕೂ ಮುಂಚೆ ಅಭರದ ಬ್ಯಾಟಿಂಗ್ ನಡೆಸಿದ ಪೃಥ್ವಿ ಹಾಗೂ ವಾರ್ನರ್ ಜೋಡಿ ಮೊದಲ ವಿಕೆಟ್ಗೆ 93 ರನ್ ಗಳನ್ನು ತಂಡಕ್ಕೆ ನೀಡಿದರು. ನಾಯಕ ರಿಷಬ್ ಪಂತ್, ಅಲ್ಪಮೊತ್ತಕ್ಕೆ ಸಿಮೀತಗೊಂಡರೆ, ಮಧ್ಯಮ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಹಾಗೂ ಶಾರ್ದುಲ್ ಠಾಕೂರ್ ಅವರ ಸಿಡಿಲಬ್ಬರದ ಆಟದಿಂದಾಗಿ ಪ್ರಸಕ್ತ ಐಪಿಎಲ್ ನಲ್ಲಿ ತನ್ನ ಅತ್ಯಧಿಕ ಮೊತ್ತವನ್ನು ಗಳಿಸಿತು.