Sunday, March 1, 2026
Sunday, March 1, 2026
Home Blog Page 1582

2022 ರ ಬೆಳೆವಿಮೆ 2022ರಲ್ಲೇ ಇತ್ಯರ್ಥ ಪಡಿಸಿ- ಬಿ.ಸಿ.ಪಾಟೀಲ್

0

ಹಂಗಾಮುವಾರು ಬೆಳೆ ವಿಮೆ ಶೀಘ್ರ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲರ ಅಧ್ಯಕ್ಷತೆಯಲ್ಲಿ ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು.

ಸಭೆಯಲ್ಲಿ ಇ-ಆಡಳಿತ ಮತ್ತು ಆರ್ಥಿಕ ಹಾಗೂ ಸಾಂಖ್ಯಿಕ ಇಲಾಖಾಧಿಕಾರಿಗಳೊಂದಿಗೆ ತಾಂತ್ರಿಕ ದೋಷಗಳು ಪರಿಹಾರಗಳ ಬಗ್ಗೆ ಚರ್ಚಿಸಲಾಯಿತು. ಬೆಳೆ ವಿಮೆಗೆ ಅನುಕೂಲ ಕಲ್ಪಿಸುವ ನನ್ನ ಬೆಳೆ ನನ್ನ ಹಕ್ಕು ಬೆಳೆ ಸಮೀಕ್ಷೆ ಯೋಜನೆಗೆ ರೈತರು ಹೆಚ್ಚು ಒತ್ತು ನೀಡಿ ರೈತರೇ ಸ್ವತಃ ಮೊಬೈಲ್ ಬೆಳೆ ಸಮೀಕ್ಷೆಯನ್ನು ಯಶಸ್ವಿಯಾಗಿ ಮಾಡುವಂತೆ ನೋಡಿಕೊಳ್ಳಬೇಕು. ಬೆಳೆ ಸಮೀಕ್ಷೆ ಹಂಗಾಮುವಾರು ಸರಿಯಾಗಿ ಅಪ್ಲೋಡ್ ಆಗಬೇಕು
ಬೆಳೆ ಕಟಾವು ಪ್ರಯೋಗಗಳ ದತ್ತಾಂಶ ಹಾಗೂ ಬೆಳೆ‌ ಸಮಿಕ್ಷೆ ದತ್ತಾಂಶವನ್ನು ಅಧಿಕಾರಿಗಳು ತಾಳೆ ಮಾಡಿ ಅಪ್ಲೋಡ್ ಮಾಡಿ ಬೆಳೆ ವಿಮೆಯನ್ನು ಘಟಕವಾರು ಇತ್ಯರ್ಥಪಡಿಸಿಸಬೇಕೆಂದು ತೀರ್ಮಾನಿಸಲಾಯಿತು.ಇದನ್ನು 2022 ರ ಬೆಳೆವಿಮೆಯನ್ನು 2022 ರ ನವೆಂಬರೊಳಗೆ ಇತ್ಯರ್ಥಪಡಿಸಬೇಕು. ಆದ ಬಳಿಕ ರೈತರ‌ಪಹಣಿಯಲ್ಲಿ ತಕ್ಷಣವೇ ತರಲು ಸೂಚಿಸಲಾಯಿತು.

ಸಭೆಯಲ್ಲಿ ಇ-ಆಡಳಿತ ಪ್ರಧಾನ ಕಾರ್ಯದರ್ಶಿ ಪೊನ್ನುರಾಜ್, ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ್,ಕೃಷಿ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ, ಇ-ಆಡಳಿತ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಇನ್ನು ಮುಂತಾದವರು ಉಪಸ್ಥಿತರಿದ್ದರು.

ಅಸಾನಿ ಕ್ಷೀಣವಾದರೂ ರಾಜ್ಯದಲ್ಲಿ ಮಳೆಯಾಗಲಿದೆ- ಮುನ್ಸೂಚನೆ

0

ಅಸಾನಿ ಚಂಡಮಾರುತದ ಅಬ್ಬರ ಕ್ಷೀಣಿಸಿದೆ. ಆದರೂ ಕೂಡ ರಾಜ್ಯಾದ್ಯಂತ ಮುಂದಿನ 4 ದಿನಗಳ ಕಾಲ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಇಂದಿನಿಂದ ಮೇ 17 ರ ವರೆಗೆ ರಾಜ್ಯಾದ್ಯಂತ ಮಳೆ ಮುಂದುವರೆಯಲಿದೆ. ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಮತ್ತು ಮಲೆನಾಡು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ತಿಳಿಸಿದೆ.

ಅಸಾನಿ ಚಂಡಮಾರುತದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ರಾಜ್ಯದ ವಿವಿಧ ಕಡೆ ಭಾರೀ ಮಳೆಯಾಗುತ್ತಿದೆ.

ರಷ್ಯದ ಭೀತಿ:ಸ್ವಿಡನ್ & ಫಿನ್ಲೆಂಡ್ ನ್ಯಾಟೋ ಸದಸ್ಯತ್ವಕ್ಕೆ ಒಲವು

0

ರಷ್ಯಾ ವಿರುದ್ಧ ಗೆಲುವು ಸಾಧಿಸುವವರೆಗೂ ಉಕ್ರೇನ್‌ ಬೆಂಬಲಿಸಲು ಜಿ-7 ರಾಷ್ಟ್ರಗಳು ಪ್ರಬಲವಾಗಿ ಒಗ್ಗೂಡಿವೆ ಎಂದು ಫ್ರಾನ್ಸ್ ಹೇಳಿದೆ.

ಇಲ್ಲಿ ನಡೆಯುತ್ತಿರುವ ‘ಜಿ-7’ ವಿದೇಶಾಂಗ ಸಚಿವರ ಮೂರು ದಿನಗಳ ಮಾತುಕತೆಗಾಗಿ ಆಗಮಿಸಿರುವ ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್‌, ಉಕ್ರೇನ್‌ಗೆ ಹೆಚ್ಚಿನ ಶಸ್ತ್ರಾಸ್ತ್ರ ಪೂರೈಕೆ ಮತ್ತು ರಷ್ಯಾದ ಮೇಲೆ ಮತ್ತಷ್ಟು ನಿರ್ಬಂಧ ಹೇರುವ ಮೂಲಕ ಪುಟಿನ್ ಮೇಲೆ ನಾವು ಒತ್ತಡ ಹೆಚ್ಚಿಸುವುದು ಈಗಿನ ತುರ್ತು ಅಗತ್ಯ. ಈ ಬಿಕ್ಕಟ್ಟಿನಲ್ಲಿ ಜಿ-7 ರಾಷ್ಟ್ರಗಳ ಒಗ್ಗಟ್ಟು ಕೂಡ ಮಹತ್ವದ್ದಾಗಿದೆ ಎಂದರು.

ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ಪೂರೈಕೆಯ ವಿರುದ್ಧ ನ್ಯಾಟೊಗೆ ರಷ್ಯಾ ‘ಅಣ್ವಸ್ತ್ರ ಯುದ್ಧ’ದ ಬೆದರಿಕೆ ಹಾಕಿದ ನಡುವೆಯೂ, ಬ್ರಿಟನ್‌, ರಷ್ಯಾ ಮೇಲೆ ಒತ್ತಡ ಮುಂದುವರಿಸಲು ಕೀವ್‌ಗೆ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಪೂರೈಸಲು ಪಶ್ಚಿಮದ ರಾಷ್ಟ್ರಗಳಿಗೆ ಕರೆ ಕೊಟ್ಟಿದೆ.

ಇದೇ ವೇಳೆ ಉಕ್ರೇನ್‌ಗೆ ₹2.40 ಲಕ್ಷ ಕೋಟಿಯ ಸೇನಾ ನೆರವನ್ನು ಜಿ-7 ಘೋಷಿಸಿದೆ.

ರಷ್ಯಾದ ಆಕ್ರಮಣದ ಭೀತಿಯಿಂದ ಸ್ವೀಡನ್ ಮತ್ತು ಫಿನ್ಲೆಂಡ್‌ ನ್ಯಾಟೊ ಸದಸ್ಯತ್ವ ಪಡೆಯುವ ಪ್ರಕ್ರಿಯೆ ಚುರುಕುಗೊಳಿಸಿವೆ. ಆದರೆ, ನ್ಯಾಟೊ ಸದಸ್ಯ ರಾಷ್ಟ್ರ ಟರ್ಕಿ ಇದಕ್ಕೆ ಅಸಮ್ಮತಿ ಸೂಚಿಸಿದೆ. ಪ್ರತೀಕಾರವಾಗಿ ಫಿನ್ಲೆಂಡ್‌ಗೆ ಶನಿವಾರದಿಂದಲೇ ವಿದ್ಯುತ್‌ ಸರಬರಾಜು ಕಡಿತಗೊಳಿಸುವುದಾಗಿ ರಷ್ಯಾ ಎಚ್ಚರಿಕೆ ನೀಡಿದೆ.

ರಷ್ಯ ಯುದ್ಧ ನೌಕೆಯನ್ನ ಧ್ವಂಸ ಗೈದ ಉಕ್ರೇನ್ ಪಡೆ

0

ತನ್ನ ಮೇಲಿನ ಆಕ್ರಮಣಕ್ಕೆ ತಿರುಗಿ ಬಿದ್ದಿರೋ ಉಕ್ರೇನ್‌ ಈಗ ರಷ್ಯಾದ ನೌಕಾಪಡೆಗೆ ಸೇರಿದ ಮತ್ತೊಂದು ಹಡಗಿನ ಮೇಲೆ ದಾಳಿ ನಡೆಸಿದೆ. ಈ ಬಗ್ಗೆ ಉಕ್ರೇನ್‌ನ ಮಿಲಿಟರಿ ಅಧಿಕಾರಿ ಸರ್ಯಿ ಬ್ರಟ್ಚುಕ್‌ ಮಾಹಿತಿ ನೀಡಿದ್ದಾರೆ.

ಕಪ್ಪು ಸಮುದ್ರದ ಜಿಮಿನ್ಯಿ ದ್ವೀಪದ ಬಳಿ ರಷ್ಯಾದ ವೆವೊಲೊಡ್‌ ಬಾಬೊರ್ವ್‌ ಅನ್ನೋ ಹೊಸ ಯುದ್ದನೌಕೆಯನ್ನು ನಮ್ಮ ಪಡೆಗಳು ಹೊಡೆದುರುಳಿಸಿವೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ, ಇದಕ್ಕೆ ರಷ್ಯಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನು ಮತ್ತೊಂದು ಕಡೆ ರಷ್ಯಾದ ಗಡಿಯೊಳಗೆ ನುಗ್ಗಿರುವ ಉಕ್ರೇನ್‌ ಪಡೆಗಳು ಅಲ್ಲಿನ ಹಳ್ಳಿಯೊಂದರ ಮೇಲೆ ಶೆಲ್ಲಿಂಗ್ ದಾಳಿ ನಡೆಸಿವೆ. ಇದರಲ್ಲಿ ಒಬ್ಬ ಮೃತಪಟ್ಟಿದ್ದಾರೆ. ಏಳು ಮಂದಿ ಗಾಯಗೊಂಡಿದ್ದಾರೆ. ಬಹುಶಃ ಇದೇ ಪ್ರಥಮ ಬಾರಿಗೆ ಉಕ್ರೇನ್‌ ದಾಳಿಗೆ ರಷ್ಯಾದ ನಾಗರೀಕನ ಬಲಿಯಾಗಿದೆ ಎಂದು ಹೇಳಲಾಗುತ್ತಿದೆ. ರಷ್ಯಾದ ಬೆಲ್ಗರೋಡ್‌ ಪ್ರಾವಿನ್ಸಸ್‌ನ ಸೋಲೋಕಿ ಅನ್ನೋ ಹಳ್ಳಿಯ ಮೇಲೆ ಈ ದಾಳಿ ಮಾಡಲಾಗಿದೆ. ಈ ಬಗ್ಗೆ ಅಲ್ಲಿನ ಮೇಯರ್‌ ಕೂಡ ಕನ್ಪರ್ಮ್‌ ಮಾಡಿದ್ದು ಉಕ್ರೇನ್‌ ಸೇನೆ ನಿರಂತರವಾಗಿ ಶೆಲ್ಲಿಂಗ್‌ ದಾಳಿ ಮಾಡುತ್ತಿದೆ. ಇದರಿಂದ ಹಳ್ಳಿಯ ಜನರನ್ನೇ ಸ್ಥಳಾಂತರ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ದಾಳಿಯ ಬಗ್ಗೆ ಮಾತನಾಡಿರೋ ಉಕ್ರೇನ್‌ನ ಅಧ್ಯಕ್ಷೀಯ ಸಲಹೆಗಾರ ಮಿಕಾಯ್ಲೋ ಪೊಡೊಲ್ಯಾಕ್‌ ರಷ್ಯಾ ಯಾವುದೇ ದೇಶದ ಶಾಂತಿಯನ್ನು ಕಿತ್ತುಕೊಂಡರೆ ಅಲ್ಲಿನ ಜನರನ್ನು ಟ್ಯಾಂಕ್‌ನಿಂದ ಸಾಯಿಸಿದರೆ ಆತ ಸುಮ್ಮನಿರೋಲ್ಲ. ಕರ್ಮ ಹಿಂದಿರುಗುತ್ತದೆ. ಅದು ಆ ಕ್ಷಣಕ್ಕೆ ಆಗದೇ ಹೋದರು ಮುಂದೊಂದು ದಿನ ಆಗುತ್ತದೆ ಎಂದು ಕಿಡಿಕಾರಿದ್ದಾರೆ.

ಬೆಳಿಗ್ಗೆ5 ಕ್ಕೆ ಆಜಾನ್ ನಿಲ್ಲಿಸಲು ಸೂಚಿಸಲಾಗಿದೆ-ಇಮಾಮ್ ಮೌಲಾನ್ ಮಕ್ಸೂದ್

0

ರಾಜ್ಯ ಸರ್ಕಾರದಿಂದ ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಕೆಯ ಬಗ್ಗೆ ಮಾರ್ಗಸೂಚಿಯನ್ನು ಜಾರಿಗೊಳಿಸಲಾಗಿದೆ. ಬೆಳಗಿನ ಜಾವದಲ್ಲಿ ಇಂತಿಷ್ಟೇ ಡೆಸಿಬಲ್ ಶಬ್ದವನ್ನು ಹೊರಸೂಸುವಂತೆ ಧ್ವನಿ ವರ್ಧಕ ಬಳಕೆಗೂ ಖಡಕ್ ಸೂಚನೆ ನೀಡಲಾಗಿದೆ.

ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವಂತ ಮುಸ್ಲೀಂ ಮುಖಂಡರು, ಇನ್ನು ಮುಂದೆ ರಾಜ್ಯಾಧ್ಯಂತ ಬೆಳಿಗ್ಗೆ 5 ಗಂಟೆಯ ಆಜಾನ್ ಕೂಗೋದನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ.

ಈ ಕುರಿತಂತೆ ಮುಸ್ಲೀಂ ಮುಖಂಡರು ಸಭೆ ನಡೆಸಿದ ಬಳಿಕ, ಮಾಧ್ಯಮ ಮಿತ್ರರಿಗೆ ಮಾಹಿತಿ ನೀಡಿದಂತ ಇಮಾಮ್ ಮೌಲಾನ್ ಮಕ್ಸೂದ್ ಇಮ್ರಾನ್ ರಶಾದಿ ಅವರು, ಇನ್ಮುಂದೆ ಬೆಳಿಗ್ಗೆ 5 ಗಂಟೆಗೆ ಧ್ವನಿ ವರ್ಧಕಗಳಲ್ಲಿ ಆಜಾನ್ ಕೂಗದಂತೆ ಎಲ್ಲಾ ಮಸೀದಿ, ಮುಸ್ಲೀಂ ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯಾಧ್ಯಂತ ಇರುವ ಮಸೀದಿಗಳಲ್ಲಿ ಬೆಳಿಗ್ಗೆ 5 ಗಂಟೆ, 5.15, 5.30ಕ್ಕೆ ಮೈಕ್ ನಲ್ಲಿ ಆಜಾನ್ ಕೂಗಬಾರದು. ಸರ್ಕಾರ ಧ್ವನಿ ವರ್ಧಕ ಕುರಿತಂತೆ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲಿಸಬೇಕು. ಬೆಳಿಗ್ಗೆ 6 ಗಂಟೆಯ ನಂತರ ಪೊಲೀಸರಿಂದ ಅನುಮತಿ ಪಡೆದು, ಆಜಾನ್ ಕೂಗಲು ಸೂಚನೆ ನೀಡಿರೋದಾಗಿ ತಿಳಿಸಿದ್ದಾರೆ

ಭಾರತೀಯ ನೌಕಾಪಡೆಗೆ ಸೂರತ್ & ಉದಯಗಿರಿ ಸೇರ್ಪಡೆ

0

ಭಾರತೀಯ ನೌಕಾಪಡೆಯ ಎರಡು ಮುಂಚೂಣಿ ಯುದ್ಧನೌಕೆಗಳು ಸೂರತ್ ಮತ್ತು ಉದಯಗಿರಿ ಮಂಗಳವಾರ ಏಕಕಾಲದಲ್ಲಿ ಉಡಾವಣೆಯಾಗಲಿದೆ. ಸ್ಥಳೀಯ ಯುದ್ಧನೌಕೆ ನಿರ್ಮಾಣದ ಹೆಗ್ಗುರುತಾಗಿದೆ.

ಸೂರತ್, ಪ್ರಾಜೆಕ್ಟ್ 15 ಬಿ ಡೆಸ್ಟ್ರಾಯರ್ ಮತ್ತು ಉದಯಗಿರಿ, ಪ್ರಾಜೆಕ್ಟ್ 17 ಎ ಫ್ರಿಗೇಟ್ ಅನ್ನು ಮುಂಬೈನ ಮಜಗಾಂವ್ ಡಾಕ್ಸ್ ಲಿಮಿಟೆಡ್‌ನಲ್ಲಿ ಅರಬ್ಬಿ ಸಮುದ್ರಕ್ಕೆ ಏಕಕಾಲದಲ್ಲಿ ಉಡಾವಣೆ ಮಾಡಲಾಗುತ್ತದೆ. ಕಾರ್ಯಕ್ರಮಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಪ್ರಾಜೆಕ್ಟ್ 15ಬಿ ವರ್ಗದ ಹಡಗುಗಳು ಮುಂಬೈನ ಎಂಡಿಎಲ್ ನಲ್ಲಿ ನಿರ್ಮಿಸಲಾಗುತ್ತಿರುವ ಭಾರತೀಯ ನೌಕಾಪಡೆಯ ಮುಂದಿನ ಪೀಳಿಗೆಯ ರಹಸ್ಯ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕಗಳಾಗಿವೆ.

ಸೂರತ್ ಪ್ರಾಜೆಕ್ಟ್ 15B ವಿಧ್ವಂಸಕಗಳ 4ನೇ ಹಡಗು, ಇದು ಪಿ15ಎ ಅಥವಾ ಕೋಲ್ಕತ್ತಾ-ಕ್ಲಾಸ್ ಡಿಸ್ಟ್ರಾಯರ್‌ಗಳ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ ಮತ್ತು ಗುಜರಾತ್‌ನ ವಾಣಿಜ್ಯ ರಾಜಧಾನಿ ಮತ್ತು ಮುಂಬೈ ನಂತರ ಪಶ್ಚಿಮ ಭಾರತದ ಎರಡನೇ ಅತಿದೊಡ್ಡ ವಾಣಿಜ್ಯ ಕೇಂದ್ರವಾಗಿ ಹೆಸರಿಸಲಾಗಿದೆ. ಸೂರತ್ ನಗರವು ಶ್ರೀಮಂತ ಕಡಲ ಮತ್ತು ಹಡಗು ನಿರ್ಮಾಣದ ಇತಿಹಾಸವನ್ನು ಹೊಂದಿದೆ. ಹಾಗೂ 16 ಮತ್ತು 18 ನೇ ಶತಮಾನಗಳಲ್ಲಿ ನಗರದಲ್ಲಿ ನಿರ್ಮಿಸಲಾದ ಹಡಗುಗಳು ತಮ್ಮ ದೀರ್ಘಾಯುಷ್ಯಕ್ಕೆ ಹೆಸರುವಾಸಿಯಾಗಿದ್ದವು.

2 ವಿಭಿನ್ನ ಭೌಗೋಳಿಕ ಸ್ಥಳಗಳಲ್ಲಿ ಹಲ್ ನಿರ್ಮಾಣವನ್ನು ಒಳಗೊಂಡಿರುವ ಬ್ಲಾಕ್ ನಿರ್ಮಾಣ ವಿಧಾನವನ್ನು ಬಳಸಿಕೊಂಡು ಸೂರತ್ ಹಡಗನ್ನು ನಿರ್ಮಿಸಲಾಗಿದೆ ಮತ್ತು ಮುಂಬೈನ ಎಂಡಿಎಲ್ ನಲ್ಲಿ ಒಟ್ಟಿಗೆ ಸೇರಿಕೊಳ್ಳಲಾಗಿದೆ. ಈ ವರ್ಗದ ಮೊದಲ ಹಡಗನ್ನು 2021 ರಲ್ಲಿ ನಿಯೋಜಿಸಲಾಯಿತು. 2ನೇ ಮತ್ತು 3ನೇ ಹಡಗುಗಳನ್ನು ಪ್ರಾರಂಭಿಸಲಾಗಿದೆ. ಮತ್ತು ಸಜ್ಜುಗೊಳಿಸುವಿಕೆ ಅಥವಾ ಪ್ರಯೋಗಗಳ ವಿವಿಧ ಹಂತಗಳಲ್ಲಿವೆ. ಆಂಧ್ರಪ್ರದೇಶ ರಾಜ್ಯದ ಪರ್ವತ ಶ್ರೇಣಿಯ ಹೆಸರನ್ನು ಹೊಂದಿರುವ ಉದಯಗಿರಿ, ಪ್ರಾಜೆಕ್ಟ್ 17ಎ ಫ್ರಿಗೇಟ್‌ಗಳ 3ನೇ ಹಡಗು.

ಇವುಗಳು ಪಿ17 ಫ್ರಿಗೇಟ್‌ಗಳು ಅಥವಾ ಸುಧಾರಿತ ಸ್ಟೆಲ್ತ್ ವೈಶಿಷ್ಟ್ಯಗಳು, ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳು ಹಾಗೂ ಪ್ಲಾಟ್‌ಫಾರ್ಮ್ ನಿರ್ವಹಣಾ ವ್ಯವಸ್ಥೆಗಳೊಂದಿಗೆ ಶಿವಲಿಕ್ ವರ್ಗದ ಅನುಸರಣೆಗಳಾಗಿವೆ. ಉದಯಗಿರಿಯು ಹಿಂದಿನ ಉದಯಗಿರಿಯ ಪುನರ್ಜನ್ಮವಾಗಿದೆ. ಲಿಯಾಂಡರ್ ವರ್ಗದ ಎಎಸ್ ಡಬ್ಯೂ ಯುದ್ಧನೌಕೆ, ಇದು 1976 ರಿಂದ 2007 ರವರೆಗೆ 3 ದಶಕಗಳ ಕಾಲ ದೇಶಕ್ಕೆ ತನ್ನ ಸುಪ್ರಸಿದ್ಧ ಸೇವೆಯಲ್ಲಿ ಹಲವಾರು ಸವಾಲಿನ ಕಾರ್ಯಾಚರಣೆಗಳನ್ನು ಕಂಡಿತು. ಪಿ17ಎ ಕಾರ್ಯಕ್ರಮದ ಅಡಿಯಲ್ಲಿ, ಎಂಡಿಎಲ್ ನಲ್ಲಿ 04 ಹಾಗೂ ಜಿಆರ್ ಎಸ್ ಸಿ ನಲ್ಲಿ 03 ಒಟ್ಟು 7 ಹಡಗುಗಳು ನಿರ್ಮಾಣ ಹಂತದಲ್ಲಿವೆ.

ಈ ಯೋಜನೆಯಲ್ಲಿ ಇಂಟಿಗ್ರೇಟೆಡ್ ಕನ್‌ಸ್ಟ್ರಕ್ಷನ್, ಮೆಗಾ ಬ್ಲಾಕ್ ಔಟ್‌ಸೋರ್ಸಿಂಗ್, ಪ್ರಾಜೆಕ್ಟ್ ಡೇಟಾ ಮ್ಯಾನೇಜ್‌ಮೆಂಟ್, ಪ್ರಾಜೆಕ್ಟ್ ಲೈಫ್‌ಸೈಕಲ್ ಮ್ಯಾನೇಜ್‌ಮೆಂಟ್ ಮುಂತಾದ ವಿವಿಧ ನವೀನ ಪರಿಕಲ್ಪನೆಗಳು ಮತ್ತು ತಂತ್ರಜ್ಞಾನಗಳನ್ನು ಮೊದಲ ಬಾರಿಗೆ ಈ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಪಿ17A ಯೋಜನೆಯ ಮೊದಲ 2 ಹಡಗುಗಳನ್ನು 2019 ಮತ್ತು 2020 ರಲ್ಲಿ ಕ್ರಮವಾಗಿ ಎಂಡಿಎಲ್ ಮತ್ತು ಜಿ ಆರ್ ಎಸ್ ಸಿ ನಲ್ಲಿ ಪ್ರಾರಂಭಿಸಲಾಯಿತು.

15 ಬಿ ಮತ್ತು ಪಿ17ಎ 2 ಹಡಗುಗಳನ್ನು ನೇವಲ್ ಡಿಸೈನ್ ಡೈರೆಕ್ಟರೇಟ್ ಮೂಲಕ ವಿನ್ಯಾಸಗೊಳಿಸಲಾಗಿದೆ. ಇದು ರಾಷ್ಟ್ರದ ಎಲ್ಲಾ ಯುದ್ಧನೌಕೆ ವಿನ್ಯಾಸ ಚಟುವಟಿಕೆಗಳಿಗೆ ಕಾರಂಜಿಯಾಗಿದೆ. ಹಾಗೂ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣ ಹಂತದಲ್ಲಿ, ಸುಮಾರು 75% ಆರ್ಡರ್‌ಗಳು ಎಂಎಸ್ಇ ಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಮೇಲೆ ಉಪಕರಣಗಳು ಮತ್ತು ವ್ಯವಸ್ಥೆಗಳನ್ನು ಇರಿಸಲಾಗಿದೆ. ಇದು ದೇಶದಲ್ಲಿ ಆತ್ಮ ನಿರ್ಭರ್ತದ ನಿಜವಾದ ಪುರಾವೆಯಾಗಿದೆ ಎಂದು ಭಾರತೀಯ ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ಶಿವಮೊಗ್ಗ ಪಿ.ಎಲ್.ಗಂಗಮ್ಮ ಅವರಿಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ

0

ಶಿವಮೊಗ್ಗ ಮೆಗಾನ್ ಬೋಧನಾ ಆಸ್ಪತ್ರೆಯ ನರ್ಸ್ ಶ್ರೀಮತಿ ಪಿ. ಎಲ್. ಗಂಗಮ್ಮ ಅವರಿಗೆ ಪ್ರತಿಷ್ಠಿತ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಲಭಿಸಿದೆ.

ಅಂತಾರಾಷ್ಟ್ರೀಯ ದಾದಿಯರ ದಿನದಂದು ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಸಮಾರಂಭದಲ್ಲಿ ಈ ಪ್ರಶಸ್ತಿ ವಿತರಿಸಿದರು.

ನರ್ಸ್ ಗಂಗಮ್ಮ ಅವರು ಭದ್ರಾವತಿಯ ಜನರಲ್ ಆಸ್ಪತ್ರೆಯಲ್ಲಿ 1986 ರಿಂದ 1990 ರವರಗೆ ಸೇವೆಯಲ್ಲಿದ್ದಾಗ 2,500 ಕುಟುಂಬ ಯೋಜನಾ ಶಸ್ತ್ರಕ್ರಿಯೆಗಳಿಗೆ ಸಹಾಯಕಿಯಾಗಿ ಸೇವೆಸಲ್ಲಿಸಿದ್ದರು.

ಶಿವಮೊಗ್ಗೆಗೆ ಹೆಸರು ತಂದ ಪಿ.ಎಲ್.ಗಂಗಮ್ಮ ಅವರಿಗೆ ಅಭಿನಂದನೆಗಳು.

ಆಂಧ್ರದ ಕರಾವಳಿಯಲ್ಲಿ ತೇಲಿಬಂದ ರಥ ಚಿನ್ನದ್ದಲ್ಲ!

0

ಕೆಲವೇ ಕೆಲವು ದಿನಗಳ ಹಿಂದಿನ ಮಾತಿದು. ಸಮುದ್ರದ ರಾಕ್ಷಸ ಅಲೆಗಳ ಮಧ್ಯದಿಂದ ತೇಲಿ ಬಂದಿತ್ತು ಚಿನ್ನದ ರಥ. ಹಾಗೆ ರಥ ತೇಲಿ ಬರೋದನ್ನ ನಾವು ಸಿನೆಮಾದಲ್ಲಿ ಮಾತ್ರ ನೋಡಿರಬಹುದು. ಆದರೆ ಇದು ಸಿನೆಮಾ ಅಲ್ಲ.. ವಾಸ್ತವದಲ್ಲಿ ನಡೆದ ಘಟನೆ. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸುನ್ನಾಪಲ್ಲಿಯ ಕಡಲ ದಡದಲ್ಲಿ ಹೀಗೆ ತೇಲಿ ಬಂದಿತ್ತು ಬಂಗಾರದ ರಥ.

ಇಡೀ ವಿಶ್ವವೇ ಈ ಒಂದು ದೃಶ್ಯವನ್ನ ನೋಡಿ ದಂಗಾಗಿ ಹೋಗಿತ್ತು.
ಅಸಾನಿ ಚಂಡಮಾರುತದ ರೌದ್ರಾವತಾರಕ್ಕೆ ಸಮುದ್ರದ ಅಲೆಗಳು ಅಬ್ಬರಿಸ್ತಾ ಇತ್ತು. ಅದೇ ಸಮುದ್ರದ ಅಲೆಗಳ ನಡುವಿನಿಂದ ತೇಲಿ ಬಂದಿತ್ತು ಈ ಹೊನ್ನಿನ ರಥ.

ಇದೇ ರಥದ ಬಗ್ಗೆ ಈಗ ನಾನಾ ಕಥೆಗಳು ಹುಟ್ಟಿಕೊಂಡಿವೆ. ಈ ರಥ ಬಂದಿದ್ದೆಲ್ಲಿಂದ… ಇಲ್ಲಿಗೇಕೆ ಬಂತು.. ಇದನ್ನ ಯಾರಾದರೂ ಉದ್ದೇಶ ಪೂರಕವಾಗಿ ಕಳುಹಿಸಿದ್ದಾರಾ ಅನ್ನೊ ಹತ್ತು ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಅಸಲಿಗೆ ಈ ರಥ ತೇಲಿ ಬಂದಿರೋ ರೀತಿ ನೋಡ್ತಿದ್ರೇನೆ ಅನೇಕ ಅನುಮಾನಗಳು ಕಾಡುತ್ತದೆ. ಕಾರಣ ಈ ರಥವನ್ನ ಖಾಲಿ ಡ್ರಮ್ಮ್‌ಗಳನ್ನ ಸೇರಿಸಿ ತೆಪ್ಪದ ರೀತಿ ಮಾಡಿ, ಅದರ ಮೇಲೆ ರಥವನ್ನ ತೇಲುವಂತೆ ಮಾಡಲಾಗಿದೆ. ಇನ್ನೂ ಈ ರಥದ ಕಂಬಿಗಳ ಮೇಲೆ 16-01-2022 ಅಂತ ಬರೆದಿರುವುದನ್ನ ಸಹ ಕಾಣಬಹುದಾಗಿದೆ. ಇದೆಲ್ಲವನ್ನ ಗಮನಿಸಿದ್ರೆ, ಯಾರೋ ಇದನ್ನ ಉದ್ದೇಶ ಪೂರಕವಾಗಿಯೇ ಮಾಡಿದ್ದಿರಬಹುದೇನೋ ಎಂದೆನಿಸುತ್ತದೆ.

ಇನ್ನೂ ಚಿನ್ನದ ರಥ ಅಂತ ಹೇಳಲಾಗುತ್ತಿರೋ ಈ ರಥ. ಅಸಲಿಗೆ ಚಿನ್ನದ ರಥವೇ ಅಲ್ಲ..! ಇದು ಸ್ಟೀಲ್ ಲೋಹದ ರಥವಾಗಿದ್ದು, ಇದಕ್ಕೆ ಗೋಲ್ಡ್ ಕಲರ್‌ನ್ನ ಹಚ್ಚಲಾಗಿದೆ, ಅಂತ ಶ್ರೀಕಾಕುಳಂ ಜಿಲ್ಲೆ ತೆಕ್ಕಲಿಯ ಇನ್ಸ್ ಪೆಕ್ಟರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಬಹುಶಃ ಥೈಲ್ಯಾಂಡ್ ಅಥವಾ ಮಯನ್ಮಾರ್‌ನಿಂದ ತೇಲಿ ಬಂದಿರೋ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.

ರಾಜ್ಯ ಸರ್ಕಾರದಿಂದ ಎಸ್ ಸಿ & ಎಸ್ ಟಿ ವರ್ಗದವರಿಗೆ ಉಚಿತವಾಗಿ75 ವಿದ್ಯುತ್ ಯೂನಿಟ್

0

ರಾಜ್ಯ ಸರ್ಕಾರವು ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದೆ.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಬಿಪಿಎಲ್ ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರರಿಗೆ 40 ಯೂನಿಟ್ ವರೆಗೆ ಇದ್ದ ಉಚಿತ ವಿದ್ಯುತ್ ಪೂರೈಕೆ ಪ್ರಮಾಣವನ್ನು 75 ಯೂನಿಟ್ ಗೆ ಹೆಚ್ಚಳ ಮಾಡಿ ಮೇ. 1 ರಿಂದಲೇ ಪೂರ್ವಾನ್ವಯವಾಗುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಎಸ್ ಸಿ, ಎಸ್ ಟಿ ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು ನೀಡುತ್ತಿದ್ದ ಉಚಿತ ವಿದ್ಯುತ್ ಪ್ರಮಾಣವನ್ನು 40 ಯೂನಿಟ್ ನಿಂದ 75 ಯನಿಟ್ ಗೆ ಏರಿಕೆ ಮಾಡಿದೆ.

ಈ ಸಂಬಂಧ ಆದೇಶ ಹೊರಡಿಸಿರುವ ಇಂಧನ ಇಲಾಖೆ, ಈ ಹಿಂದೆ ಇದ್ದ 40 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ ಸೌಲಭ್ಯವಿತ್ತು. ಇನ್ಮುಂದೆ ಎಸ್ ಸಿ, ಎಸ್ ಟಿ ಗೆ ಸೇರಿದ ಭಾಗ್ಯಜ್ಯೋತಿ/ ಕುಟೀರ ಜ್ಯೋತಿ ಬಳಕೆದಾರರು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ಬಿಪಿಎಲ್ ಕುಟುಂಬದವರಿಗ ಉಚಿತ ಮಾಸಿಕ 75 ಯೂನಿಟ್ ವಿದ್ಯುತ್ ಸೌಲಭ್ಯ ಸಿಗಲಿದೆ.

ಸ್ವರ್ಣವಲ್ಲಿ ಮಠದಲ್ಲಿ ತ್ರಿಧರ್ಮೀಯರ ಸೌಹಾರ್ದ ತೇರು ಹಬ್ಬ

0

ಸಾಮರಸ್ಯ, ಸೌಹಾರ್ದತೆಯ ಪ್ರತೀಕ ಎನಿಸಿಕೊಂಡಿರುವ ಶಿರಸಿ ತಾಲೂಕಿನ ಸ್ವರ್ಣವಲ್ಲಿಯ ರಥೋತ್ಸವಕ್ಕೆ ರಥ ಕಟ್ಟುವ ಕೆಲಸ ಆರಂಭವಾಗಿದೆ. ಇಂದು ರಥೋತ್ಸವ ಜರುಗಲಿದ್ದು, ಈ ರಥವನ್ನು ಕಟ್ಟುವ ಕೆಲಸ ಮುಸ್ಲಿಂ ಧರ್ಮಿಯರಿಂದ ಆಗಿರುವುದು ವಿಶೇಷ. ಇಲ್ಲಿ ಮುಸ್ಲಿಮರೇ ರಥ ನಿರ್ಮಾಣ ಮಾಡುವ ಪದ್ಧತಿ ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿದೆಯಂತೆ.

ಸೌಹಾರ್ದತೆಯ ಪ್ರತೀಕ ಮುಸ್ಲಿಂ ಸಮುದಾಯದವರು ರಚಿಸಿದ ಸ್ವರ್ಣವಲ್ಲಿ ಮಠದ ರಥ
ಸ್ವರ್ಣವಲ್ಲಿಯ ಪೀಠಾಧೀಶ, ಹಸಿರು ಸ್ವಾಮಿಗಳೆಂದು ಹೆಸರುವಾಸಿಯಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಸೌಹಾರ್ದತೆಯ ಪ್ರತೀಕ ಎನಿಸಿಕೊಂಡಿದ್ದಾರೆ.

ಸುಮಾರು 300 ವರ್ಷಗಳಿಂದ ಸ್ವರ್ಣವಲ್ಲಿಯಲ್ಲಿ ಮುಸ್ಲಿಂ ಧರ್ಮಿಯರು ರಥ ಕಟ್ಟುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ‘ನಾವು ಅಲ್ಲಾನನ್ನು ನಂಬುತ್ತೇವೆ. ನರಸಿಂಹ ದೇವರನ್ನೂ ಕೂಡ ನಂಬುತ್ತೇವೆ. ಎಲ್ಲರೂ ಒಂದಾಗಿ ಬಾಳುತ್ತೇವೆ ಎನ್ನುತ್ತಾರೆ ರಥ ಕಟ್ಟುವ ಪ್ರಮುಖ ವ್ಯಕ್ತಿ ಸೋಂದಾದ ಹಸನಸಾಬ ಖಾಜಿ.

ಅಜಾನ್ ಗಲಾಟೆ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ, ಹಿಜಾಬ್​​ ವಿವಾದ ಹೀಗೆ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿದ್ದರೂ ಸಹ ಶ್ರೀಗಳು ಮಾತ್ರ ತಮ್ಮ ಹಿಂದಿನ ಪದ್ಧತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಈ ವರ್ಷ ಸಹ ನೂರಾರು ವರ್ಷಗಳಿಂದ ನಡೆದುಕೊಂಡ ಬಂದ ಪದ್ಧತಿಯಂತೆ ಮುಸ್ಲಿಂ ಧರ್ಮಿಯರೇ ರಥವನ್ನು ಕಟ್ಟುತ್ತಾರೆ. ಈ ಸ್ವರ್ಣವಲ್ಲಿ ಮಠದಲ್ಲಿ ಮುಸ್ಲಿಂ ಧರ್ಮದವರು ನೂರಾರು ವರ್ಷಗಳಿಂದ ಈ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ನಿಲ್ಲಿಸಲು ಸಾಧ್ಯವಿಲ್ಲ.
ಎಲ್ಲಾ ಕಡೆ ಸೌಹಾರ್ದಯುತ ವಾತಾವರಣ ಇರಬೇಕು ಎಂದು ಸ್ವರ್ಣವಲ್ಲಿ ಶ್ರೀಗಳು ತಿಳಿಸಿದರು.

ಐದು ಜನ ಸೇರಿ ರಥ ಕಟ್ಟುತ್ತಾರೆ. ರಥವನ್ನು ಹಗ್ಗದಿಂದ ಮಾಡಲಾಗುತ್ತದೆ. ರಥೋತ್ಸವದ ದಿನ ರಥದ ಮೇಲೆ ನಿಯಂತ್ರಣವನ್ನೂ ಸಹ ಮುಸ್ಲಿಂ ಸಮುದಾಯದವರೇ ಮಾಡುತ್ತಾರೆ. ಸ್ವರ್ಣವಲ್ಲಿ ಮಠದಲ್ಲಿ ಮುಸ್ಲಿಂ ಬಾಂಧವರು ರಥ ಕಟ್ಟುವ ಕೆಲಸ ಮಾಡಿದರೆ, ಕ್ರಿಶ್ಚಿಯನ್ ಸಮುದಾಯದವರು ಪಟಾಕಿ ಸಿಡಿಸುವ ಸಂಭ್ರಮದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಕಾರಣ ಈ ರಥೋತ್ಸವ ಸರ್ವ ಧರ್ಮದವರ ಸೌಹಾರ್ದತೆಯ ಪ್ರತೀಕವಾಗಿದೆ. ಅಲ್ಲದೇ ಇದು ತಾಲೂಕಿನಲ್ಲಿ ನಡೆಯುವ ಮಾಸದ ಕೊನೆಯ ರಥೋತ್ಸವವಾಗಿದೆ.