Tuesday, March 3, 2026
Tuesday, March 3, 2026
Home Blog Page 1565

ವಿಶ್ವದ ಅತಿವೇಗಿಷ್ಟ ರೈಲು ಮ್ಯಾಗ್ಲೆವ್ ಚೀನಾದಲ್ಲಿದೆ!

0

ರೈಲು ನಿರ್ಮಾಣ, ರೈಲು ಅವಿಷ್ಕಾರ, ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಲ್ಲಿ ಚೀನಾ ಇತರ ದೇಶಗಳಿಗಿಂತ ಮಂಚೂಣಿಯಲ್ಲಿದೆ. ಇದೀಗ ವಿಶ್ವದ ಅತೀ ವೇಗದ ರೈಲನ್ನು ಚೀನಾ ಅನಾವರಣ ಮಾಡಿದೆ. ಇದು ಗಂಚೆಗೆ 600 ಕಿ.ಮೀ ವೇಗದಲ್ಲಿ ಚಲಿಸಲಿದೆ.
ಚೀನಾದ ನೂತನ ಹೈ ಸ್ಪೀಡ್ ರೈಲಿಗೆ ಮ್ಯಾಗ್ಲೆವ್ ಎಂದು ಹೆಸರಿಡಲಾಗಿದೆ.

ಅತೀ ವೇಗದ ರೈಲಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅತೀಯಾದ ವೇಗವಿರುವ ಕಾರಣ ಬ್ರೇಕ್ ಕುರಿತು ಹೆಚ್ಚಿನ ಗಮನಹರಿಸಲಾಗಿದೆ. ಹೀಗಾಗಿ ತುರ್ತು ಸಂದರ್ಭದಲ್ಲಿ ರೈಲು ನಿಲ್ಲಿಸಲು ಸಾಧ್ಯವಿದೆ. ಫ್ರಿಕ್ಷನ್ ಬ್ರೇಕಿಂಗ್ ಹಾಗೂ ಆಕ್ಸಲರೇಶನ್ ತಂತ್ರಜ್ಞಾನ ಬಳಕೆ ಮಾಡಲಾಗಿದೆ.
ಇನ್ನು ರೈಲಿನಲ್ಲಿ ಪ್ರತಿ ಸೀಟಿಗೂ ಬೆಲ್ಟ್ ನೀಡಲಾಗಿದೆ. ವಿಮಾನ ಪ್ರಯಾಣದಲ್ಲಿರುವಂತೆ ಹೈಸ್ಪೀಡ್ ರೈಲಿನಲ್ಲಿ ಸೀಟ್ ಬೆಲ್ಟ್ ಕಡ್ಡಾಯವಾಗಿದೆ. ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕ ಸೀಟ್ ಬೆಲ್ಟ್ ಧರಿಸಬೇಕು. ಈ ಮೂಲಕ ಅತೀವೇಗದಿಂದ ಸೃಷ್ಟಿಯಾಗುವ ಅಪಾಯ ತಪ್ಪಲಿದೆ.

ಚೀನಾದ ಕರಾವಳಿ ಭಾಗ ಕ್ವಿಂಗ್‌ದಾದಲ್ಲಿ ಈ ರೈಲು ನಿರ್ಮಾಣ ಮಾಡಲಾಗಿದೆ. ಎಲೆಕ್ಟ್ರೋ-ಮ್ಯಾಗ್ನೆಟಿಕ್ ಬಲವನ್ನು ಬಳಸಿಕೊಂಡು, ಮ್ಯಾಗ್ಲೆವ್ ರೈಲು ಚಲಿಸಲಿದೆ.
ಚೀನಾ ರಾಜಧಾನಿ ಬೀಜಿಂಗ್‌ನಿಂದ ಬೀಜಿಂಗ್ ದೂರ ಸರಿಸುಮಾರು 1,200 ಕಿಲೋಮೀಟರ್‌ಗೂ ಹೆಚ್ಚಿದೆ.. ಮ್ಯಾಗ್ಲೆವ್ ರೈಲಿನಲ್ಲಿ ಬೀಜಿಂಗ್‌ನಿಂದ ಶಾಂಘೈ ತಲುಪಲು ಕೇವಲ 2.5 ಗಂಟೆ ಸಾಕು. ಇನ್ನು ಬೀಜಿಂಗ್‌ನಿಂದ ಶಾಂಘೈಗೆ ವಿಮಾನದ ಮೂಲಕ ಪ್ರಯಾಣಿಸಲು 3 ಗಂಟೆ ತೆಗೆದುಕೊಳ್ಳಲಿದೆ.

ರೈಲಿನಲ್ಲಿ ವೈಫ್, ವೈಯರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ.
ಭಾರತದಲ್ಲಿ 160 ಕಿ.ಮೀ ವೇಗದ ರೈಲು
ತಾಸಿಗೆ 160 ಕಿ.ಮೀ. ವೇಗದವರೆಗೆ ಸಾಗಬಲ್ಲ ದೇಶದ ಅತೀ ವೇಗದ ರೈಲು ವಂದೇಭಾರತ್‌ ಎಕ್ಸ್‌ಪ್ರೆಸ್‌’ಗೆ ಭಾರತದಲ್ಲಿದೆ.

ಐತಿಹಾಸಿಕ ರೈಲು ಓಡಾಟಕ್ಕೆ ನವದೆಹಲಿ ರೈಲು ನಿಲ್ದಾಣದಲ್ಲಿ ಹಸಿರು ಧ್ವಜ ತೋರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ವಾರಾಣಸಿ ಹಾಗೂ ದಿಲ್ಲಿ ನಡುವೆ ಈ ರೈಲು ಸಂಚರಿಸಲಿದ್ದು, 820 ಕಿ.ಮೀ. ದೂರವನ್ನು 9.45 ಗಂಟೆಯಲ್ಲಿ ಕ್ರಮಿಸಲಿದೆ.

ಸಾಹಿತಿ ದೇವನೂರು ಅವರು ತಮ್ಮ ಪಠ್ಯಕ್ಕೆ ನೀಡಿದ ಅನುಮತಿ ಹಿಂಪಡೆದಿದ್ದಾರೆ

0

ಪಕ್ಷ, ತತ್ವ, ಪಂಥ, ಸಿದ್ಧಾಂತಗಳ ಹಿನ್ನೆಲೆಯಲ್ಲಿ ಈ ಹಿಂದೊಮ್ಮೆ ಉಂಟಾಗಿದ್ದ ಸಂಘರ್ಷ ಪ್ರಶಸ್ತಿ ವಾಪ್ಸಿಯಂಥ ಅಭಿಯಾನಕ್ಕೆ ಕಾರಣವಾಗಿತ್ತು. ಇದೀಗ ಪಠ್ಯ ಪರಿಷ್ಕರಣೆ ಸಂಬಂಧ ಉಂಟಾಗಿರುವ ವಿಚಾರವೂ ಕೂಡ ಅಂಥದ್ದೇ ಹಾದಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ
ಪಾಠ ವಾಪ್ಸಿ ಎನ್ನುವಂಥ ಬೆಳವಣಿಗೆಗೆ ಕಾರಣವಾಗಿದೆ.

ಈ ನಿಟ್ಟಿನಲ್ಲಿ ಸಾಹಿತಿ ದೇವನೂರ ಮಹಾದೇವ ಅವರು ತಮ್ಮ ಪಾಠವನ್ನು ಹಿಂಪಡೆಯುವ ಇಂಗಿತ ವ್ಯಕ್ತಪಡಿಸಿದ್ದಲ್ಲದೆ ಅನುಮತಿ ಕೂಡ ನಿರಾಕರಿಸಿದ್ದಾರೆ. ಹತ್ತನೇ ತರಗತಿಯ ಕನ್ನಡ ಪಠ್ಯದಲ್ಲಿ ನನ್ನದೊಂದು ಕಥನ ಸೇರಿದೆ ಎನ್ನಲಾಗುತ್ತಿದೆ. ಸೇರಿಸಿದ್ದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದಿರುವ ಅವರು ಈ ಹಿಂದೆ ಹಳೇ ಪಠ್ಯಕ್ಕೆ ನೀಡಿದ್ದ ಅನುಮತಿ ಕೂಡ ಹಿಂಪಡೆದಿದ್ದೇನೆ ಎಂದಿದ್ದಾರೆ.

ಡಾ.ಜಿ. ರಾಮಕೃಷ್ಣ ಎಂಬವರು ಈ ಬಗ್ಗೆ ದನಿ ಎತ್ತಿದ್ದು, ತಮ್ಮ ಯಾವುದೇ ಬರಹವನ್ನು ಪಠ್ಯದಲ್ಲಿ ಅಳವಡಿಸಬೇಡಿ ಎಂದಿದ್ದಾರೆ. ಇದರೊಂದಿಗೆ ಯಾವುದಾದರೂ ಬರಹ ಆಯ್ಕೆ ಮಾಡಿಕೊಂಡಿದ್ದರೆ ಅದಕ್ಕೆ ತಮ್ಮ ಅನುಮತಿ ಇರುವುದಿಲ್ಲ ಎಂದೂ ಹೇಳಿದ್ದಾರೆ.

ಸ್ಮಾರ್ಟ್ ಸಿಟಿ ಕಾಮಗಾರಿ ಅವೈಜ್ಞಾನಿಕ : ಕಾಂಗ್ರೆಸ್ ಪ್ರತಿಭಟನೆ

0

ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಗಳು ಅವೈಜ್ಞಾನಿಕವಾಗಿದೆ. ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಈ ಸಂಬಂಧ ಕೂಡಲೇ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮಂಗಳವಾರ ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ಕಾಮಗಾರಿಯಲ್ಲಿ ಶೇ.40ರಷ್ಟು ಕಮಿಷನ್ ಪಡೆಯಲಾಗಿದೆ. ಪಾಲಿಕೆ ಯಾಗಲಿ, ಜಿಲ್ಲಾಡಳಿತವಾಗಲಿ ಕಾಮಗಾರಿ ನಡೆಸುವಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರು ಮಾತನಾಡಿ, ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿ ಗಳಿಂದಾಗಿ ಇಡೀ ನಗರವೇ ಹಾಳಾಗಿದೆ. ಕಳೆದ ಒಂದೆರಡು ದಿನಗಳಲ್ಲಿ ಬಿದ್ದ ಭಾರೀ ಮಳೆಯಿಂದ ಬಡವರ ಬದುಕು ಮೂರಾಬಟ್ಟೆಯಾಗಿದೆ. ರಾಜಕಾಲುವೆ ಗಳಲ್ಲಿ ಹೂಳು ತುಂಬಿಕೊಂಡಿದೆ. ನೀರು ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನುಗ್ಗಿದೆ. ಚರಂಡಿಗೆ ನೀರು ಸರಾಗವಾಗಿ ಸಾಗದೆ ರಸ್ತೆ ಮೇಲೆ ನೀರು ಹರಿದಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ನೀರುಪಾಲಾಗಿವೆ. ಇದಕ್ಕೆಲ್ಲಾ ಸ್ಮಾರ್ಟ್ ಸಿಟಿ ಅವೈಜ್ಞಾನಿಕ ಕಾಮಗಾರಿಗಳೇ ಕಾರಣ. ಅಧಿಕಾರಿಗಳು ಮತ್ತು ಆಡಳಿತ ಪಕ್ಷದವರು ಸೇರಿಕೊಂಡು ಬಾರಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಪಿ. ಗಿರೀಶ್, ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕ್ವಾಡ್ ಸಮೂಹದಿಂದ ಚೀನಾಗೆ ಖಡಕ್ ವಾರ್ನಿಂಗ್

0

ಇಂಡೋ ಪೆಸಿಫಿಕ್‌ ವಲಯ ದಲ್ಲಿ ಏಕಪಕ್ಷೀಯವಾಗಿ ಯಾವುದೇ ಬದಲಾವಣೆ ಮಾಡಬೇಡಿ ಹೀಗೆಂದು ಚೀನಾಕ್ಕೆ ಕ್ವಾಡ್‌ ರಾಷ್ಟ್ರಗಳ ಒಕ್ಕೂಟ ಖಡಕ್ ಎಚ್ಚರಿಕೆ ನೀಡಿದೆ.

ಜಪಾನ್‌ ರಾಜಧಾನಿ ಟೋಕಿಯೋದಲ್ಲಿ ನಡೆದ ಭಾರತ, ಜಪಾನ್‌, ಅಮೆರಿಕ, ಆಸ್ಟ್ರೇಲಿಯಾಗಳನ್ನು ಒಳಗೊಂಡ ಕ್ವಾಡ್‌ ರಾಷ್ಟ್ರಗಳ ಸಮ್ಮೇಳನದಲ್ಲಿ ಇಂಡೋ ಪೆಸಿಫಿಕ್‌ ವಲಯದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳನ್ನು ಸಮಗ್ರವಾಗಿ ಚರ್ಚಿಸಲಾಯಿತು.

ದಕ್ಷಿಣ ಸಮುದ್ರ ಚೀನ ವ್ಯಾಪ್ತಿ ಮತ್ತು ಇಂಡೋ ಪೆಸಿಫಿಕ್‌ ವಲಯದಲ್ಲಿ ಸೇನಾ ಬಲ ಬಳಸಿ ಅಂತಾ ರಾಷ್ಟ್ರೀಯ ಮಟ್ಟದ ನಿಯಮಗಳನ್ನು ಉಲ್ಲಂಘಿಸಿ ಅಲ್ಲಿನ ವ್ಯವಸ್ಥೆಯಲ್ಲಿ ಏಕಪಕ್ಷೀಯವಾಗಿ ಬದಲಾವಣೆ ತರಲೇ ಬಾರದು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್‌ ಪ್ರಧಾನಿ ಫ್ಯೂಮಿಯೋ ಕಿಶಿದಾ, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಆಸ್ಟ್ರೇಲಿಯಾದ ನಿಯೋಜಿತ ಪ್ರಧಾನಿ ಆಯಂಟನಿ ಅಲ್ಬನೀಸ್‌ ತಮ್ಮ ಸ್ಪಷ್ಟ ಮಾತುಗಳಲ್ಲಿ ಎಚ್ಚರಿಕೆ ನೀಡಿದ್ದಾರೆ.

ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ, ಸ್ವಾತಂತ್ರ್ಯಕ್ಕೆ, ಸಾರ್ವ ಭೌಮತೆ, ಪ್ರಾದೇಶಿಕ ಸಮಗ್ರತೆಗೆ ಬೆಂಬಲ ನೀಡುತ್ತೇವೆ. ವಿವಾದ ಇದ್ದಲ್ಲಿ ಶಾಂತವಾಗಿ ಪರಿಹರಿಸಬೇಕು ಎಂದು ಕ್ವಾಡ್‌ ನಾಯಕರು ತಿಳಿಸಿದ್ದಾರೆ.

ಇನ್ನು ಮುಂದೆ ಬೇಸ್ ಮೆಂಟ್ ಪ್ಲಾನ್ ಗೆ ಅಂಗೀಕಾರ ನೀಡದಿರಲು ಚಿಂತನೆ

0

ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ಮುಂದೆ ನೆಲಮಟ್ಟದ ಕೆಳಗಡೆ ಬೇಸ್ ಮೆಟ್ ನಿರ್ಮಿಸುವುದಕ್ಕೆ ಬ್ರೇಕ್ ಹಾಕಲು ಪಾಲಿಕೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ರವೀಂದ್ರ ಅವರು ಪ್ರತಿಕ್ರಿಯಿಸಿ, ಬೇಸ್ ಮೆಟ್ ಅನ್ನು ನೆಲಮಟ್ಟದಿಂದ ಎತ್ತರ ಇರುವಂತೆ ನಿರ್ಮಿಸಲು ಕಟ್ಟಡ ಮಾಲೀಕರಿಗೆ ಸೂಚನೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಬೇಸ್ ಮೆಟ್ ನಿರ್ಮಿಸಿರುವ ಅಪಾರ್ಟ್ ಮೆಂಟ್ ಗಳಲ್ಲಿ ನೀರು ಹೊರಹಾಕಲು ಪಂಪ್ ಮೋಟಾರು ಅಳವಡಿಸಿಕೊಳ್ಳುವಂತೆ ಸಹ ನೋಟಿಸ್ ನೀಡಲಾಗಿದೆ ಎಂದಿದ್ದಾರೆ.

ಮಳೆಗಾಲದಲ್ಲಿ ಅಪಾರ್ಟ್ಮೆಂಟ್ ಗಳಲ್ಲಿ ನೀರು ಸರಾಗವಾಗಿ ಹರಿದುಹೋಗದೆ ಇಲ್ಲದ ಫಜೀತಿ ಸೃಷ್ಟಿಸುತ್ತಿರುವುದರಿಂದ ಈ ರೀತಿಯ ಕ್ರಮಕ್ಕೆ ಮುಂದಾಗಿದೆ.

ಬೆಂಗಳೂರಿನ ಬಹುತೇಕ ಅಪಾರ್ಟ್ಮೆಂಟ್ ಗಳಲ್ಲಿನ ಪಾರ್ಕಿಂಗ್ ಜಾಗವನ್ನು ನೆಲಮಟ್ಟದಿಂದ ಕೆಳಗಿನ ಬೇಸ್ ಮೆಟ್ ಗಳಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಮಳೆಗಾಲದಲ್ಲಿ ಹರಿದು ಬರುವ ನೀರು ಚರಂಡಿ ಸೇರದೆ ಪಾರ್ಕಿಂಗ್ ಜಾಗದಲ್ಲಿ ಸಂಗ್ರಹವಾಗಿರುತ್ತದೆ.

ಪರಿಷತ್ ಚುನಾವಣಾ ಕಣಕ್ಕೆ ಬಹುತೇಕ ಅನಿರೀಕ್ಷಿತ ಅಭ್ಯರ್ಥಿಗಳು

0

ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಿನ್ನೆ ಕೊನೆಯ ದಿನವಾಗಿತ್ತು. ಜೆಡಿಎಸ್‌ ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿವೆ. ಕಳೆದ ದಿನ ಕಾಂಗ್ರೆಸ್‌ ತಮಗೆ ಲಭಿಸಿರುವ 2 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿತ್ತು.

ಪರಿಷತ್ತಿನ 7 ಸ್ಥಾನಗಳ ಪೈಕಿ ಕಾಂಗ್ರೆಸ್‌ಗೆ 2 ಸ್ಥಾನಗಳು ಸಿಗಲಿವೆ. ಆ 2 ಸ್ಥಾನಗಳಲ್ಲಿ ಒಂದನ್ನು ಹಿಂದುಳಿದ ವರ್ಗ ಮತ್ತು ಇನ್ನೊಂದನ್ನು ಮುಸ್ಲಿಂ ಅಥವಾ ಕ್ರೈಸ್ತ ಸಮುದಾಯಕ್ಕೆ ಕೊಡಲು ಸಿದ್ದರಾಮಯ್ಯ ಹೈಕಮಾಂಡ್‌ಗೆ ಮನವಿ ಮಾಡಿದ್ದರು ಎನ್ನಲಾಗಿತ್ತು. ಆದರೆ, ಹಿರಿಯ ನಾಯಕರು ಸೂಚಿಸಿದ್ದ ಹೆಸರುಗಳಿಗೆ ಮಣೆ ಹಾಕದ ಕಾಂಗ್ರೆಸ್‌ ಹೈಕಮಾಂಡ್‌ ಹೊಸ ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಣೆ ಮಾಡಿ ಅಚ್ಚರಿ ಮೂಡಿಸಿದೆ. ಕೆ. ಅಬ್ದುಲ್ ಜಬ್ಬಾರ್ ಮತ್ತು ಎಂ. ನಾಗರಾಜ್ ಯಾದವ್ ಅವರು ಕಾಂಗ್ರೆಸ್‌ ಅಭ್ಯರ್ಥಿಗಳಾಗಿದ್ದಾರೆ.

ಇದೇ ದಾರಿ ಹಿಡಿದಿರುವ ಬಿಜೆಪಿ, ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಚ್ಚರಿ ಮೂಡಿಸಿದೆ. ಈ ಹಿಂದೆ ಬಿ.ಎಸ್‌ ಯಡಿಯೂರಪ್ಪ ತಮ್ಮ ಮಗ ಬಿ.ವೈ ವಿಜಯೇಂದ್ರಗೆ ಟಿಕೆಟ್‌ ನೀಡುವಂತೆ ಲಾಬಿ ಮಾಡಿದ್ದರು ಎನ್ನಲಾಗಿತ್ತು. ಆದರೆ, ಈಗ ಹಿರಿಯರ ಮಾತಿಗೆ ಸೊಪ್ಪು ಹಾಕದ ಬಿಜೆಪಿ ಹೈಕಮಾಂಡ್‌, ಛಲವಾದಿ ನಾರಾಯಣಸ್ವಾಮಿ, ಹೇಮಲತಾ ನಾಯಕ್, ಕೇಶವಪ್ರಸಾದ್, ಲಕ್ಷ್ಮಣ ಸವದಿಗೆ ಟಿಕೆಟ್ ನೀಡಿ ಅಚ್ಚರಿ ಮೂಡಿಸಿದೆ. ಈ ಬೆಳವಣಿಯನ್ನು ಹಲವರು ಸಂತೋಷದಿಂದ ಸ್ವಾಗತಿಸಿದ್ದಾರೆ. ಇನ್ನು ಪಶ್ಚಿಮ ಕ್ಷೇತ್ರದಿಂದ ಬಸವರಾಜ ಹೊರಟ್ಟಿ ಅಭ್ಯರ್ಥಿಯಾಗಿದ್ದಾರೆ.

ಇನ್ನು ಜೆಡಿಎಸ್‌ನಿಂದ ಕೊನೆ ಹಂತದಲ್ಲಿ ಶರವಣಗೆ ಜೆಡಿಎಸ್ ಟಿಕೆಟ್‌ ನೀಡಿದೆ. ನಿನ್ನೆ
ಬೆಳಗ್ಗೆ 11.30ಕ್ಕೆ ಶರವಣ ಅವರು ನಾಮಪತ್ರ ಸಲ್ಲಿಸಿದ್ದಾರೆ.

ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಗೆ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಯಾಗಿದೆ.
ಸದ್ಯ ವಿದ್ಯಮಾನದ ಪ್ರಕಾರ ಈ ಎಲ್ಲ ಅಭ್ಯರ್ಥಿಗಳೂ ಅವಿರೋಧ ಆಯ್ಕೆ ಆಗುವ ಸಂಭವ ಹೆಚ್ಚಾಗಿದೆ ಎಂದು ರಾಜಕೀಯ ಪರಿಣಿತರ ಲೆಕ್ಕಾಚಾರವಾಗಿದೆ.

ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಆಸ್ತಿಪಾಸ್ತಿ ಜಾತಕ

0

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಿಂದ ಆಯ್ಕೆ ಆಗಿರುವ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ ತಮ್ಮ ಆಸ್ತಿ ವಿವರಗಳನ್ನೂ ಘೋಷಿಸಿಕೊಂಡಿದ್ದಾರೆ. ಆದರೆ ಆಸ್ತಿ ವಿಚಾರದಲ್ಲಿ ಪಕ್ಷಭೇದವಿಲ್ಲದೆ ಎಲ್ಲರೂ ಕೋಟ್ಯಧೀಶ್ವರರೇ ಎಂಬುದು ಕಂಡುಬಂದಿದೆ.

ಪರಿಷತ್ ಅಭ್ಯರ್ಥಿಗಳು ಸಲ್ಲಿಸಿರುವ ಆಸ್ತಿ ವಿವರ ಹೀಗಿದೆ.

ಕೇಶವ ಪ್ರಸಾದ್, ಬಿಜೆಪಿ ಅಭ್ಯರ್ಥಿ
ಒಟ್ಟು ಆಸ್ತಿ ಮೌಲ್ಯ: 3 ಕೋಟಿ 92 ಲಕ್ಷ ರೂ.
ಚರಾಸ್ತಿ: 69.58 ಲಕ್ಷ ರೂ.
ಸ್ಥಿರಾಸ್ತಿ: 20 ಲಕ್ಷ ರೂ.
ಪತ್ನಿ ಹೆಸರಲ್ಲಿ ಚರಾಸ್ತಿ: 1 ಕೋಟಿ 4 ಲಕ್ಷ ರೂ.
ಸ್ಥಿರಾಸ್ತಿ: 1 ಕೋಟಿ 98 ಲಕ್ಷ ರೂ.
ಸಾಲ: 13 ಲಕ್ಷ 50 ಸಾವಿರ ರೂ.

ಟಿ.ಎ. ಶರವಣ (ಜೆಡಿಎಸ್ ಅಭ್ಯರ್ಥಿ)
ಒಟ್ಟು ಆಸ್ತಿ ಮೌಲ್ಯ: 41.79 ಕೋಟಿ ರೂ.
ಚರಾಸ್ತಿ: 3.25 ಲಕ್ಷ ರೂ.
ಸ್ಥಿರಾಸ್ತಿ: 26.36 ಕೋಟಿ ರೂ.
ಪತ್ನಿ ಶೀಲಾದೇವಿ ಹೆಸರಲ್ಲಿ ಚರಾಸ್ತಿ: 6.87 ಕೋಟಿ ರೂ.
ಸ್ಥಿರಾಸ್ತಿ: 5 ಕೋಟಿ ರೂ.
ಪುತ್ರಿ ಶ್ರೇಯಾ ಹೆಸರಲ್ಲಿ ಚರಾಸ್ತಿ: 15.30 ಲಕ್ಷ ರೂ.
ಪುತ್ರಿ ಶ್ರುತಿ ಹೆಸರಲ್ಲಿ ಸ್ಥಿರಾಸ್ತಿ: 2.59 ಲಕ್ಷ ರೂ.

ಹೇಮಲತಾ ನಾಯಕ್, ಬಿಜೆಪಿ ಅಭ್ಯರ್ಥಿ
ಒಟ್ಟು ಆಸ್ತಿ ಮೌಲ್ಯ: 89 ಲಕ್ಷ ರೂ.
ಚರಾಸ್ತಿ: 28 ಲಕ್ಷ ರೂ.
ಸ್ಥಿರಾಸ್ತಿ: 29 ಲಕ್ಷ ರೂ.
ಪತಿ ಹೆಸರಲ್ಲಿ ಚರಾಸ್ತಿ: 2 ಲಕ್ಷ ರೂ.
ಸ್ಥಿರಾಸ್ತಿ: 30 ಲಕ್ಷ ರೂ.

ಲಕ್ಷ್ಮಣ ಸವದಿ, ಬಿಜೆಪಿ ಅಭ್ಯರ್ಥಿ
ಕುಟುಂಬದ ಒಟ್ಟು ಆಸ್ತಿ: 36 ಕೋಟಿ 37 ಲಕ್ಷ ರೂ.
ಚರಾಸ್ತಿ: 5 ಕೋಟಿ 84 ಲಕ್ಷ ರೂ.
ಸ್ಥಿರಾಸ್ತಿ: 29 ಕೋಟಿ 59 ಲಕ್ಷ ರೂ.
ಸಾಲ: 1 ಕೋಟಿ 81 ಲಕ್ಷ ರೂ.
ಲಕ್ಷಣ ಸವದಿ ಪತ್ನಿ ಪುಷ್ಪ ಆಸ್ತಿ ವಿವರ
ಚರಾಸ್ತಿ: 64 ಲಕ್ಷ ರೂ.
ಸ್ಥಿರಾಸ್ತಿ: 30 ಲಕ್ಷ ರೂ.

ನಾಗರಾಜ ಯಾದವ್, ಕಾಂಗ್ರೆಸ್‌ ಅಭ್ಯರ್ಥಿ
ಒಟ್ಟು ಆಸ್ತಿ ಮೌಲ್ಯ: 7 ಕೋಟಿ 12 ಲಕ್ಷ ರೂ.
ಚರಾಸ್ತಿ: 48 ಲಕ್ಷ ರೂ.
ಸ್ಥಿರಾಸ್ತಿ: 2 ಕೋಟಿ 59 ಲಕ್ಷ ರೂ.
ಪತ್ನಿ ರಾಜಶ್ರೀ ಹೆಸರಲ್ಲಿ ಚರಾಸ್ತಿ: 52 ಲಕ್ಷ ರೂ.
ಸ್ಥಿರಾಸ್ತಿ: 3 ಕೋಟಿ 53 ಲಕ್ಷ ರೂ.
ಸಾಲ: 10 ಲಕ್ಷ ರೂ.

ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ಅಭ್ಯರ್ಥಿ
ಒಟ್ಟು ಆಸ್ತಿ ಮೌಲ್ಯ: 6 ಕೋಟಿ 32 ಲಕ್ಷ ರೂ.
ಚರಾಸ್ತಿ: 23 ಲಕ್ಷ ರೂ.
ಸ್ಥಿರಾಸ್ತಿ: 5 ಕೋಟಿ 85 ಲಕ್ಷ ರೂ.
ಪತ್ನಿ ಹೆಸರಲ್ಲಿ ಚರಾಸ್ತಿ: 24 ಲಕ್ಷ ರೂ.
ಯಾವುದೇ ಸಾಲ ಇಲ್ಲ

ಅಬ್ದುಲ್ ಜಬ್ಬಾರ್, ಕಾಂಗ್ರೆಸ್‌ನ ಅಭ್ಯರ್ಥಿ
ಒಟ್ಟು ಆಸ್ತಿ ಮೌಲ್ಯ: 7 ಕೋಟಿ ರೂ.
ಚರಾಸ್ತಿ: 34 ಲಕ್ಷ ರೂ.
ಸ್ಥಿರಾಸ್ತಿ: 5 ಕೋಟಿ 82 ಲಕ್ಷ ರೂ.
ಪತ್ನಿ ಪರ್ವೀನಾ ಹೆಸರಲ್ಲಿ ಚರಾಸ್ತಿ: 12 ಲಕ್ಷ ರೂ.
ಸ್ಥಿರಾಸ್ತಿ: 68 ಲಕ್ಷ ರೂ.
ಸಾಲ: 71 ಲಕ್ಷ ರೂ.

ಪಂಜಾಬ್ ಸಿಎಂ ಖಡಕ್ ಕಾರ್ಯಾಚರಣೆ: ಆರೋಗ್ಯಮಂತ್ರಿ ವಜಾ

0

ಪಂಜಾಬ್‌ನಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ಕಮಿಷನ್‌ ತಗೆದುಕೊಂಡ ಆರೋಪದ ಮೇಲೆ ಅಲ್ಲಿನ ಸಚಿವರೊಬ್ಬರನ್ನು ವಜಾಗೊಳಿಸಲಾಗಿದೆ.

ವಿಶೇಷವೆಂದರೆ, ಖುದ್ದು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮನ್‌ ಈ ಕ್ರಮ ಕೈಗೊಂಡಿದ್ದು ಆರೋಪಿ ಮಂತ್ರಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಭಗವಂತ್‌ ಮನ್‌ ಜನರು ನಮ್ಮ ಮೇಲೆ ನಂಬಿಕೆ ಇಟ್ಟುಕೊಂಡು ಅಧಿಕಾರ ಕೊಟ್ಟಿದ್ದಾರೆ. ನಾವು ಕೂಡ ಭ್ರಷ್ಟಾಚಾರ ಮುಕ್ತ ಸಿದ್ದಾಂತದ ಮೇಲೆಯೇ ನಿಂತಿದ್ದೇವೆ. ಭಾರತ ಮಾತೆಯ ಮಗನಾಗಿ ಅರವಿಂದ್‌ ಕೇಜ್ರಿವಾಲ್‌ ಇದ್ದಾರೆ. ಸೈನಿಕನಂತೆ ನಾನು ಇದ್ದೀನಿ. ಭ್ರಷ್ಟಾಚಾರದ ವಿರುದ್ದ ಹೋರಾಡುತ್ತಿವಿ. ಅದು ಒಂದು ಪರ್ಸೆಂಟ್‌ ಇದ್ರೂ ನಾವು ಸಹಿಸಲ್ಲ ಎಂದಿದ್ದಾರೆ.

ಇದರೊಂದಿಗೆ ಪಂಜಾಬ್‌ ಸಿಎಂ ಅವರ ಈ ಕ್ರಮದ ಬಗ್ಗೆ ದೆಹಲಿ ಸಿಎಂ ಆಪ್‌ ವರಿಷ್ಠ ಅರವಿಂದ್ ಕೇಜ್ರಿವಾಲ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು ಇದು ನನ್ನ ಕಣ್ಣಲ್ಲಿ ನೀರು ತಂದಿದೆ. ಅಂದ್ರೆ ಆನಂದ ಬಾಷ್ಪ ಬಂದಿದೆ. ಇಡೀ ದೇಶಕ್ಕೆ ಇವತ್ತು ಹೆಮ್ಮೆಯಾಗುತ್ತಿದೆ ಎಂದು ಶ್ಲಾಘಿಸಿದ್ದಾರೆ.

ಅಂದಹಾಗೆ, ಕಮಿಷನ್‌ ಕೇಳಿ ತಮ್ಮ ಸರ್ಕಾರದಿಂದಲೇ ವಜಾಗೊಂಡವರು ಪಂಜಾಬ್‌ನ ಆರೋಗ್ಯ ಮಂತ್ರಿ ವಿಜಯ್‌ ಸಿಂಗ್ಲಾ. ಟೆಂಡರ್‌ನಲ್ಲಿ ಒಂದು ಪರ್ಸೆಂಟ್‌ ಕಮಿಷನ್‌ ಕೇಳಿದ್ದರು ಎಂದು ಅಲ್ಲಿನ ಅಧಿಕಾರಿಗಳು ಹಿಂದಿನ ವಾರವಷ್ಟೇ ಸಿಎಂ ಭಗವಂತ್‌ಗೆ ದೂರು ನೀಡಿದ್ದರಂತೆ. ಇದರನ್ವಯ ಆರೋಪದ ಬಗ್ಗೆ ಗುಪ್ತವಾಗಿ ತನಿಖೆ ಮಾಡಲು ಆದೇಶ ನೀಡಲಾಗಿತ್ತು. ಇದರಲ್ಲಿ ಆರೋಪಿ ಮಂತ್ರಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷಿ ಸಿಕ್ಕಿತ್ತು.

ಹೀಗಾಗಿ ತಕ್ಷಣವೇ ಕಾರ್ಯಪ್ರವೃತ್ತರಾದ ಮನ್‌, ತಮ್ಮ ಸಂಪುಟದ ಸಚಿವನನ್ನೇ ಕೆಲಸದಿಂದ ಡಿಸ್ಮಿಸ್‌ ಮಾಡಿದ್ದಾರೆ. ಈ ಬಗ್ಗೆ ಜನತೆಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಸಂಪುಟದ ಇತರ ಸದಸ್ಯರಿಗೂ ವಾರ್ನಿಂಗ್‌ ಕೊಟ್ಟಿದ್ದು ಎಚ್ಚರ ತಪ್ಪಿದರೆ ತಮಗೂ ಅದೇ ಗತಿ ಎಂದು ಖಡನ್‌ ಸೂಚನೆ ನೀಡಿದ್ದಾರೆ.

ಡೇಟಾ ಸಾಕ್ಷರತೆಗೆ ಇಂಗ್ಲೆಂಡಿನ ಐಒಎ ಆಸಕ್ತಿ: ರಾಜ್ಯ ಸರ್ಕಾರದೊಂದಿಗೆ ಮಾತುಕತೆ

0

ಕರ್ನಾಟಕದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ಆಯ್ದ 1,000 ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆಯನ್ನು ಒದಗಿಸಲು ಮತ್ತು ಶಾಲಾ ವಿದ್ಯಾರ್ಥಿಗಳ ಮಟ್ಟದಲ್ಲಿ ಸಂಪೂರ್ಣವಾಗಿ ಈ ಕಾರ್ಯಕ್ರಮವನ್ನು ವಿಸ್ತರಿಸಲು ಇಲ್ಲಿನ ಅನಲಿಟಿಕ್ಸ್ ಇನ್ಸ್ಟಿಟ್ಯೂಟ್ ತೀವ್ರ ಆಸಕ್ತಿ ವ್ಯಕ್ತಪಡಿಸಿದೆ.

ಇಲ್ಲಿ ನಡೆಯುತ್ತಿರುವ ವರ್ಲ್ಡ್ ಎಜುಕೆಷನ್ ಫೋರಂ ಸಮಾವೇಶದಲ್ಲಿ ಭಾಗವಹಿಸಲು ಬಂದಿರುವ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿ ಆ ಸಂಸ್ಥೆಯ ಉನ್ನತಾಧಿಕಾರಿಗಳ ನಿಯೋಗ ಈ ವಿಚಾರವನ್ನು ಹಂಚಿಕೊಂಡಿದೆ.

ಸಚಿವರೊಂದಿಗೆ ಮಾತುಕತೆ ನಡೆಸಿದ ಅನಲಿಟಿಕ್ಸ್ ಐಒಎ ಪ್ರತಿನಿಧಿ ಡಾ.ಕ್ಲೇರ್ ವಾಲ್ಶ್, ಈ ಕಾರ್ಯಕ್ರಮಗಳಿಗೆ ಸಂಸ್ಥೆಯು ವಿಶೇಷ ನಿಧಿಯನ್ನು ತಾನೇ ಹೊಂದಿಸಲಿದೆ. ಇದಕ್ಕಾಗಿ ಕರ್ನಾಟಕ ಸರಕಾರವು ಯಾವುದೇ ವೆಚ್ಚ ಮಾಡಬೇಕಾಗಿಲ್ಲ. ವಿದ್ಯಾರ್ಥಿಗಳ ಜತೆಗೆ ಸರಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೂ ನಮ್ಮ ಸಂಸ್ಥೆಯ ಸದಸ್ಯತ್ವ ನೀಡುವ ಮೂಲಕ ಅವರೆಲ್ಲ ತಮ್ಮ ಅನಲಿಟಿಕ್ಸ್ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಡೇಟಾ ಸಾಕ್ಷರತೆ ಕಲಿಸುವುದು ನಮ್ಮ ಸದುದ್ದೇಶವಾಗಿದೆ ಎಂದರು.

ಎಂಜಿನಿಯರಿಂಗ್ ಕಲಿಯುತ್ತಿರುವವರಿಗೆ ಅನಲಿಟಿಕ್ಸ್ ಜಾಣ್ಮೆ ಕಲಿಸುವುದು ಅಗತ್ಯವಾಗಿದೆ. ಈ ಮೂಲಕ ಐಒಎ ಸಾಮಾಜಿಕ ಜಾಲತಾಣಗಳಲ್ಲಿ ಹೇರಳ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ನಮ್ಮ ಸಂಸ್ಥೆಯು ವಿಶ್ವಾದ್ಯಂತ ಅನಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಅಧ್ಯಯನ, ಅನ್ವಯಿಕತೆ ಮತ್ತು ವ್ಯಾಪಕ ಪ್ರಸಾರಕ್ಕೆ ಕಟಿಬದ್ಧವಾಗಿದೆ ಎಂದು ವಾಲ್ಶ್ ತಿಳಿಸಿದರು.

ಅನಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಬಳಕೆಯನ್ನು ಕೇವಲ ಹೈ-ಟೆಕ್ ಉದ್ದಿಮೆಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಬದಲಿಗೆ ಸರಕಾರಿ ಇಲಾಖೆಗಳಲ್ಲಿ ಕೂಡ ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಐಒಎ ಸಂಸ್ಥೆಯು ಕಾರ್ಪೊರೇಟ್ ಸದಸ್ಯತ್ವದ ಜತೆಗೆ ಕರ್ನಾಟಕ ಸರಕಾರದ ಐಟಿ ಇಲಾಖೆಯ ಉದ್ಯೋಗಿಗಳಿಗೆ ಉಚಿತವಾಗಿ 100 ಸದಸ್ಯತ್ವ ಕೊಡಲು ಸಿದ್ಧವಿದೆ ಎಂದು ಅವರು ಮನದಟ್ಟು ಮಾಡಿಕೊಟ್ಟರು.

ಕರ್ನಾಟಕ ಸರ್ಕಾರದೊಂದಿಗೆ ಸಹಭಾಗಿತ್ವ ಹೊಂದಲು ಸಂಸ್ಥೆಯು ಹೊಂದಿರುವ ಆಸಕ್ತಿಯು 2022ರ ಬೆಂಗಳೂರು ತಂತ್ರಜ್ಞಾನ ಸಮಾವೇಶದ ಆಶಯಗಳಿಗೆ ತಕ್ಕಂತಿದೆ. ಈ ಮೂಲಕ ಅನಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಎರಡನ್ನೂ ಉಪಯೋಗಿಸುತ್ತಿರುವ ಐಟಿ, ಬಿಟಿ ಮತ್ತು ಡೀಪ್ ಟೆಕ್ ವಲಯದ ಅಗ್ರಗಣ್ಯ ಕಂಪನಿಗಳು ಮತ್ತು ನವೋದ್ಯಮಗಳನ್ನು ಬೆಸೆಯಬಹುದು. ಸಂಸ್ಥೆಯು ಭಾರತದಲ್ಲಿ ಅಂತಾರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದೊಂದಿಗೆ ಕೆಲಸ ಮಾಡುತ್ತಿದೆ ಎಂದು ವಾಲ್ಶ್ ಮಾಹಿತಿ ನೀಡಿದರು.

ಮಾತುಕತೆಯ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಟಾಮ್ ಜೋಸೆಫ್, ಐಒಎ ಸದಸ್ಯತ್ವ ವಿಭಾಗದ ಮುಖ್ಯಸ್ಥೆ ರೋಸಿ ಸ್ವೀನಿ ಕೂಡ ಇದ್ದರು.

ಯುನೈಟೆಡ್ ಕಿಂಗ್ಡಂನ ಇನ್ಸ್ಟಿಟ್ಯೂಟ್ ಆಫ್ ಅನಲಿಟಿಕ್ಸ್ ಸಂಸ್ಥೆಯ ಉನ್ನತಾಧಿಕಾರಿಗಳಾದ ಡಾ.ಕ್ಲೇರ್ ವಾಲ್ಶ್ ಮತ್ತು ರೋಸಿ ಸ್ವೀನಿ ಅವರು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಭೇಟಿಯಾದ ಕ್ಷಣ. ಅಂತಾರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಟಾಮ್ ಜೋಸೆ ಇದ್ದರು.

ಜಿಪಂ & ಗ್ರಾಪಂಗಳ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ಬಗ್ಗೆ ಗಡುವು ನೀಡಿದ ಕೋರ್ಟ್

0

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ಪುನರ್ವಿಂಗಡಣೆ, ಹಿಂದುಳಿದವರು ಹಾಗೂ ಎಲ್ಲ ವರ್ಗಗಳಿಗೂ ಮೂರು ತಿಂಗಳೊಳಗೆ ಮೀಸಲಾತಿ ನಿಗದಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಗಡುವು ವಿಧಿಸಿರುವ ಹೈಕೋರ್ಟ್ ನಂತರ ಒಂದು ವಾರದೊಳಗೆ ಚುನಾವಣೆ ಪ್ರಕ್ರಿಯೆ ಆರಂಭಿಸಲು ಆಯೋಗಕ್ಕೆ ನಿರ್ದೇಶನ ನೀಡಿದೆ.

ಈ ಕುರಿತು ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರಿಗೆ ಬಿಬಿಎಂಪಿ ಪ್ರಕರಣದಲ್ಲಿ ಎಂಟು ವಾರಗಳಲ್ಲಿ ಕ್ಷೇತ್ರ ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಗಡುವು ವಿಧಿಸಿದೆ.

ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದಿರುವುದಕ್ಕೆ ತಡೆ ನೀಡುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಆವಸ್ತಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ನ್ಯಾಯಪೀಠ ಆದೇಶ ನೀಡಿತು.
ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ಒಂದು ವಾರದ ಬಳಿಕ ಚುನಾವಣಾ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿರುವ ನ್ಯಾಯಾಲಯವು ಯಾವುದೇ ಕಾರಣಕ್ಕೂ ಅನಂತರ ಸಮಯ ವಿಸ್ತರಣೆ ಮಾಡುವುದಿಲ್ಲ ಎಂದು ಸರ್ಕಾರಕ್ಕೆ ಸ್ಪಷ್ಟಪಡಿಸಿದೆ.

ಒಂದು ವಾರದ ಬಳಿಕ ಚುನಾವಣೆ ಪ್ರಕ್ರಿಯೆ ಆರಂಭಿಸಲು ಆಯೋಗಕ್ಕೆ ನಿರ್ದೇಶಿಸಿದೆ. ಕ್ಷೇತ್ರ ಪುನರ್ವಿಂಗಡಣೆ ಮತ್ತು ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ವರ್ಗಗಳನ್ನೊಳಗೊಂಡ ಮೀಸಲಾತಿ ನಿರ್ಧರಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಚುನಾವಣಾ ಆಯೋಗದ ನಿವೃತ್ತ ಆಯುಕ್ತರನ್ನೊಳಗೊಂಡ ಸಮಿತಿಯನ್ನು ರಾಜ್ಯ ಸರ್ಕಾರ ನೇಮಿಸಿದೆ.