Tuesday, March 3, 2026
Tuesday, March 3, 2026
Home Blog Page 1560

ಹಣವಂತ ಪ್ರಾದೇಶಿಕ ರಾಜಕೀಯ ಪಕ್ಷಗಳಲ್ಲಿ ಡಿಎಂಕೆ ಅಗ್ರಸ್ಥಾನ

0

ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ ಪಕ್ಷ 31 ಪ್ರಾದೇಶಿಕ ಪಕ್ಷಗಳ 2020-21ನೇ ಸಾಲಿನ ಆದಾಯ ಮತ್ತು ಖರ್ಚಿನಲ್ಲಿ ಅಗ್ರಸ್ಥಾನದಲ್ಲಿದೆ ಎನ್ನುವುದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ್ ನಿನ್ನೆ ಶುಕ್ರವಾರ ಬಹಿರಂಗಪಡಿಸಿದೆ.

ಸ್ಟಾಲಿನ್ ನೇತೃತ್ವದ ಪಕ್ಷ 150 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇದರ ವೆಚ್ಚ 218 ಕೋಟಿ ರೂಪಾಯಿಗಳು. ಡಿಎಂಕೆ ಆದಾಯ ಏರಿಕೆ ಇತರ ಪಕ್ಷಗಳಿಗಿಂತ ಅಧಿಕವಾಗಿದೆ. ಈ ಪಕ್ಷದ ಆದಾಯ 85 ಕೋಟಿ ರೂಪಾಯಿ ಹೆಚ್ಚಿದೆ. ಉಳಿದಂತೆ ಜೆಡಿಎಸ್ ಮತ್ತು ವೈಎಸ್‍ಆರ್ ಕಾಂಗ್ರೆಸ್ ನಂತರದ ಸ್ಥಾನಗಳಲ್ಲಿವೆ.

ದೇಶದ 31 ಪ್ರಾದೇಶಿಕ ಪಕ್ಷಗಳ ಪಟ್ಟು ಆದಾಯ 2021ನೇ ಹಣಕಾಸು ವರ್ಷದಲ್ಲಿ 529 ಕೋಟಿ ಆಗಿದೆ. ಡಿಎಂಕೆ ಈ ಪೈಕಿ ಸಿಂಹಪಾಲು ಹೊಂದಿದೆ. ಪಕ್ಷದ ಆದಾಯ ಒಟ್ಟು ಆದಾಯದ ಶೇ. 28ರಷ್ಟಾಗಿದೆ. ವೈಎಸ್‍ಆರ್ ಕಾಂಗ್ರೆಸ್ 108 ಕೋಟಿ ರೂಪಾಯಿ ಆದಾಯ ಹೊಂದಿದೆ. ಇದರ ಪಾಲು ಶೇ.20ರಷ್ಟು ಮತ್ತು ಶೇ. 13ರಷ್ಟು ಅಥವಾ 73 ಕೋಟಿ ಆದಾಯ ಹೊಂದಿದ ಬಿಜೆಡಿ 3ನೇ ಸ್ಥಾನದಲ್ಲಿದೆ.

ಎಲೆಕ್ಟೊರಲ್ ಬಾಂಡ್ ಮೂಲಕ 2020-21ನೇ ಅವಧಿಯಲ್ಲಿ 250.60 ಕೋಟಿ ರೂಪಾಯಿ ದೇಣಿಗೆಯನ್ನು ಸ್ವೀಕರಿಸಿರುವುದಾಗಿ ಪ್ರಾದೇಶಿಕ ಪಕ್ಷಗಳು ಘೋಷಿಸಿವೆ.

5 ಪ್ರಾದೇಶಿಕ ಪಕ್ಷಗಳು ಗರಿಷ್ಠ ವೆಚ್ಚವನ್ನೂ ಮಾಡಿದೆ. ಡಿಎಂಕೆ 218.49 ಕೋಟಿ ರೂಪಾಯಿ, ತೆಲುಗುದೇಶಂ ಪಕ್ಷ ರೂ. 54.769 ಕೋಟಿ, ಎಐಎಡಿಎಂಕೆ ರೂ. 42.37 ಕೋಟಿ, ಜೆಡಿಯು 24.35 ಕೋಟಿ ಹಾಗೂ ಟಿಆರ್‍ಎಸ್ 22.35 ಕೋಟಿ ಪಾಲು ಒಟ್ಟು ಖರ್ಚಿನ ಶೇಕಡ 82ರಷ್ಟಾಗಿವೆ ಎಂದು ವರದಿಯಿಂದ ತಿಳಿದು ಬಂದಿದೆ.

ವೈಎಸ್‍ಆರ್ ಕಾಂಗ್ರೆಸ್‍ನಲ್ಲಿ ಗರಿಷ್ಠ 99%ಖರ್ಚಾಗದ ಹಣ ಇದ್ದು, ಬಿಜೆಡಿ 90%, ಎಐಎಂಐಎಂ 88% ನಂತರದ ಸ್ಥಾನಗಳಲ್ಲಿವೆ. ಟಿಡಿಪಿ 51 ಕೋಟಿ ರೂಪಾಯಿ ಖರ್ಚು ಮಾಡಿದ್ದರೆ, ಟಿಆರ್‍ಎಸ್ 22 ಕೋಟಿ ವೆಚ್ಚ ಮಾಡಿದ್ದಾಗಿ ಹೇಳಿವೆ

ಬಿಎಸ್ ಡಬ್ಲ್ಯೂ ಪರೀಕ್ಷೆಯಲ್ಲಿ ಕು.ಭೂಮಿಕಾ 5 ನೇಶ್ರೇಣಿ ತೇರ್ಗಡೆ

0

2012 ರಲ್ಲಿ ಪ್ರಾರಂಭವಾದ ಅಶೋಕ್ ಪೈ ಸ್ಮಾರಕ ಕಾಲೇಜಿಗೆ ಇದೀಗ ಮತ್ತೆ ಪುನಃ ರ‍್ಯಾಂಕ್‌ನ ಸಂಭ್ರಮ. ಕಾಲೇಜಿನ ಬಿಎಸ್‌ಡಬ್ಲೂ ವಿದ್ಯಾರ್ಥಿನಿ ಕು. ಭೂಮಿಕ ಕುವೆಂಪು ವಿಶ್ವವಿದ್ಯಾಲಯವು ಸೆಪ್ಟೆಂಬರ್/ಅಕ್ಟೋಬರ್ 2021 ರಲ್ಲಿ ನಡೆಸಿದ ಅಂತಿಮ ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಐದನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.

ಡಾ. ಅಶೋಕ್ ಪೈ ರವರ ಸ್ಮರಣಾರ್ಥ ಮಾನಸ ಟ್ರಸ್ಟ್ ನಿಂದ ಕುವೆಂಪು ವಿಶ್ವವಿದ್ಯಾಲಯ ಸಂಯೋಜನೆಯೊಂದಿಗೆ ಪ್ರಾರಂಭಿಸಲ್ಪಟ್ಟ ಈ ಕಾಲೇಜು ತನ್ನ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಸಹಪಠ್ಯ ಚಟುವಟಿಕೆಗಳ ಸಾಧನೆಗಳಿಂದ ಈಗಾಗಲೇ ಪ್ರಸಿದ್ಧಿಯನ್ನು ಪಡೆದಿದೆ. ಇದೀಗ ತನ್ನ ಎರಡನೇ ಬ್ಯಾಚ್‌ನಲ್ಲೂ ರ‍್ಯಾಂಕ್ ಗಳಿಸಿರುವುದರಿಂದ ಕಾಲೇಜು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಕು. ಭೂಮಿಕರವರಿಗೆ ಅಭಿನಂದಿಸಿದ ಡಾ. ರಜನಿ ಪೈರವರು ಡಾ. ಅಶೋಕ್ ಪೈರವರು ಶಿಕ್ಷಣದ ಕುರಿತು ಹೊಂದಿದ್ದ ಕನಸು ನನಸಾಗುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದರು.

ಮಾನಸ ಟ್ರಸ್ಟ್ ನ ಶೈಕ್ಷಣಿಕ ನಿರ್ದೇಶಕರಾದ ಡಾ. ಪ್ರೀತಿ ಶಾನ್‌ಭಾಗ್, ಡಾ. ವಾಮನ್ ಶಾನ್‌ಭಾಗ್ ಹಾಗೂ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಡಾ. ರಾಜೇಂದ್ರ ಚೆನ್ನಿ ಯವರು ವಿದ್ಯಾರ್ಥಿನಿಗೆ ಅಭಿನಂದಿಸುತ್ತಾ ಕಾಲೇಜಿನ ಪ್ರಗತಿಗೆ ಸಹಕರಿಸುತ್ತಿರುವ ಕುವೆಂಪು ವಿಶ್ವವಿದ್ಯಾಲಯಕ್ಕೆ ಶಿವಮೊಗ್ಗದ ಹಲವಾರು ಸಹೃದಯರಿಗೆ ಕೃತಜ್ಞತೆ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾಕಾವೇರಿಯವರು, ಕು. ಭೂಮಿಕರವರಿಗೆ ಅಭಿನಂದನೆಯನ್ನು ತಿಳಿಸುತ್ತಾ ದೂರದ ಜೋಗ್‌ಫಾಲ್ಸ್ ನಿಂದ ಬಂದ ವಿದ್ಯಾರ್ಥಿನಿ ಒಳ್ಳೆಯ ಪರಿಶ್ರಮದಿಂದ ಓದಿ ರ‍್ಯಾಂಕ್ ಪಡೆದಿರುತ್ತಾರೆ. ಮಾತ್ರವಲ್ಲ, ಕಾಲೇಜಿನ ಪ್ರಾಧ್ಯಾಪಕ ವೃಂದದ ಸೂಕ್ತ ಮಾರ್ಗದರ್ಶನ, ಸಿಬ್ಬಂದಿ ಮಿತ್ರರ ಪ್ರೋತ್ಸಾಹ ಹಾಗೂ ಸುವ್ಯವಸ್ಥಿತವಾದ ಶೈಕ್ಷಣಿಕ ವ್ಯವಸ್ಥೆಯನ್ನು ಕಲ್ಪಿಸುತ್ತಿರುವ ಮಾನಸ ಟ್ರಸ್ಟ್ ಕೂಡಾ ಈ ಸಾಧನೆಗೆ ಕಾರಣ ಎಂದರು.

ಕು. ಭೂಮಿಕರವರು ಜೋಗಫಾಲ್ಸ್ ನ ಶ್ರೀಮತಿ ಲಕ್ಷ್ಮಿ ಹಾಗೂ ಶ್ರೀ ರಾಜು ರವರ ಸುಪುತ್ರಿ. ಇದೀಗ ಮಂಗಳೂರಿನ ಎಂ. ವಿ. ಶೆಟ್ಟಿ ಕಾಲೇಜಿನಲ್ಲಿ ಬಿಎಸ್ ಡಬ್ಯ್ಲೂ ಓದುತ್ತಿದ್ದಾರೆ.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಬಿಎ ಮನಃಶಾಸ್ತ್ರ ಪತ್ರಿಕೋದ್ಯಮ, ಇತಿಹಾಸ ಸಮಾಜಶಾಸ್ತ್ರ ಹಾಗೂ ಅರ್ಥಶಾಸ್ತ್ರ, ಬಿಎಸ್‌ಡಬ್ಲ್ಯೂ, ಬಿ.ಎಸ್ಸಿ, ಬಿ.ಕಾಂ ಹಾಗೂ ಎಂಎಸ್ಸಿ ಮನಃಶಾಸ್ತ್ರ ಕೋರ್ಸ್ ಗಳನ್ನು ನಡೆಸುತ್ತಿದೆ.

ಕಾಲೇಜಿನ ಎಲ್ಲ ಸಿಬ್ಬಂದಿ ಮಿತ್ರರೂ, ಸಲಹಾ ಸದಸ್ಯರು ವಿದ್ಯಾರ್ಥಿನಿಗೆ ಶುಭ ಹಾರೈಸಿದ್ದಾರೆ.

ರ‍್ಯಾಂಕ್ ಬರಬೇಕು ಎಂಬುದು ನನ್ನ ಕನಸಾಗಿರದೆ ನನ್ನ ಛಲವಾಗಿತ್ತು. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಇವತ್ತು ನನ್ನ ಸಾಧನೆಯ ದಾರಿಗೆ ಬೆಂಬಲವಾಗಿ ನಿಂತಿದೆ. ಅಲ್ಲಿ ಕಲಿತಂತಹ ಎಷ್ಟೋ ಹೊಸ ವಿಷಯಗಳು, ಮೈಗೂಡಿಸಿಕೊಂಡ ಕಲೆಗಳು ನನ್ನನ್ನು ಬದಲಾಯಿಸಿದೆ. ಅಲ್ಲಿನ ವಾತಾವರಣ, ಸಾಧನೆಯ ಮೆಟ್ಟಿಲನ್ನು ಹತ್ತಲು ಸಿಕ್ಕಂತಹ ಅವಕಾಶಗಳು, ಬೆನ್ನುಲುಬಾಗಿ ನಿಂತ ನಮ್ಮ ಗುರುಗಳು ನಮ್ಮಂತಹ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿದ್ದಾರೆ. ನಮ್ಮ ಹೆಜ್ಜೆಯ ಜೊತೆ ಅವರ ಸಹಕಾರವನ್ನಿಟ್ಟದ್ದು ಇಂದು ನಾನು ರ‍್ಯಾಂಕ್ ಎನ್ನುವ ಮೈಲಿಗಲ್ಲು ಹತ್ತಲು ಸಹಾಯವಾಗಿದೆ. ಇದೀಗ
ಬಿಎಸ್ ಡಬ್ಯ್ಲೂ ಮಾಡುತ್ತಿರುವ ನನಗೆ ಉತ್ತಮ ಆಪ್ತಸಮಾಲೋಚಕಿಯಾಗುವ ಆಸೆ ಇದೆ. ನನಗೆ ಪ್ರೋತ್ಸಾಹ ನೀಡಿದ ಪ್ರತಿಯೊಬ್ಬರಿಗೂ ಸದಾ ನಾನು ಚಿರ ಋಣಿಯಾಗಿರುವೆ ಎಂದಿದ್ದಾರೆ.

ಬೆಳ್ಳೂರಿನಲ್ಲಿ ಜನರ ಸಮಸ್ಯೆಗಳಿಗೆ ಫಟಾಫಟ್ ಸ್ಪಂದಿಸಿದ ಜಿಲ್ಲಾಧಿಕಾರಿ ಸೆಲ್ವಮಣಿ

0

ರೈತರಿಗೆ ವಿವಿಧ ಸೌಲಭ್ಯವನ್ನು ಪಡೆಯಲು ಅನುಕೂಲ ಮಾಡಿಕೊಡುವ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ನೋಂದಣಿ, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ, ಬಸ್ ವ್ಯವಸ್ಥೆ ಮತ್ತು ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಸೇರಿದಂತೆ ಗ್ರಾಮಸ್ಥರ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳು ಹೊಸನಗರ ತಾಲೂಕು ಕೆರೆಹಳ್ಳಿ ಹೋಬಳಿ ಬೆಳ್ಳೂರು ಗ್ರಾಮದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬೆಳ್ಳೂರು ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಕುಂದು ಕೊರತೆಯ ಅರ್ಜಿ ಸ್ವೀಕರಿಸಿ ಮಾತನಾಡಿದರು.

ಗ್ರಾಮಸ್ಥರಾದ ದೇವೇಂದ್ರಪ್ಪ ಮಾತನಾಡಿ, ಭತ್ತ, ಜೋಳ, ಶುಂಠಿ, ಕಬ್ಬು ಬೆಳೆಗೆಳಿಗೆ ವೈಜ್ಞಾನಿಕ ಬೆಲೆ ನಿಗದಿ, ಆರ್‍ಟಿಸಿ ಯಲ್ಲಿ ಹೆಸರು ಮತ್ತು ಬೆಳೆ ನಮೂದು, ಬೆಂಬಲ ಬೆಲೆ ಯೋಜನೆಯಡಿ ಎಪಿಎಂಸಿ ಯಲ್ಲಿ ಭತ್ತ ರಾಗಿ ಗೋಧಿ ಖರೀದಿ ಕೇಂದ್ರ ಸ್ಥಾಪಿಸಿ ಖರೀದಿಸುವಂತೆ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಬೋರ್ಡೊ ಔಷಧಿಗೆ ಕಳೆದ ಬಾರಿ ಸಬ್ಸಿಡಿ ದೊರೆತಿಲ್ಲ, 2019 ರ ಆಗಸ್ಟ್ ನಲ್ಲಾದ ಪ್ರವಾಹದಲ್ಲಿ ಹಾನಿಗೊಳಗಾದವರಿಗೆ ಈವರೆಗೆ ಪರಿಹಾರ ದೊರೆತಿಲ್ಲ ಹಾಗೂ ಭತ್ತದ ನಾಟಿಯಲ್ಲಿ ಯಾಂತ್ರೀಕರಣದ ಸಹಾಯ, ಬಗರ್‍ಹುಕುಂ ಬೆಳೆಗಾರರಿಗೂ ಅಧಿಕೃತ ಬೆಳೆ ಮಾರಾಟ ವ್ಯವಸ್ಥೆ ದೊರಕಿಸುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ದರ ಸ್ಪರ್ಧೆ ಮತ್ತು ಮಧ್ಯವರ್ತಿಗಳನ್ನು ತಡೆಗಟ್ಟಲು ಸಹಕಾರಿ ಕ್ಷೇತ್ರದ ಬಳಕೆ ಮಾಡಿಕೊಳ್ಳಬೇಕು. ನೀವು ಸಹಕಾರ ಸೊಸೈಟಿ ರಚಿಸಿದಲ್ಲಿ ನಾವು ಮೂಲಭೂತ ಸೌಕರ್ಯ ನೀಡುತ್ತೇವೆ. ಇನ್ನು ರೈತರು ಯಂತ್ರೋಪಕರಣ ಸೇರಿದಂತೆ ವಿವಿಧ ಸೌಲಭ್ಯ ಪಡೆಯಲು ಗ್ರಾ.ಪಂ ಮಟ್ಟದಲ್ಲೇ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಒಂದು ದಿನ ನಿಗದಿಪಡಿಸಿಕೊಂಡು ಎಲ್ಲ ರೈತರೂ ನೊಂದಣಿ ಮಾಡಿಸಿಕೊಳ್ಳುವಂತೆ ಸೂಚಿಸಿದರು.

ಗ್ರಾಮಸ್ಥರಾದ ಯೋಗೇಶ್ ಮಾತನಾಡಿ, ಬೆಳ್ಳೂರಿಗೆ ನ್ಯಾಯಬೆಲೆ ಅಂಗಡಿ ಮಂಜೂರು, ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿಗೆ ಕ್ರಮ, ಕಾಲುಸಂಕ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳು ನ್ಯಾಯಬೆಲೆ ಅಂಗಡಿ ತೆರೆಯಲು ಅಧಿಸೂಚನೆ ಹೊರಡಿಸುವಂತೆ ಆಹಾರ ಇಲಾಖೆ ಅಧಿಕಾರಿಗೆ ಸೂಚಿಸಿ, ಬೆಂಬಲ ಬೆಲೆಯಡಿ ಬೆಳೆ ಖರೀದಿಸಲು ರೈತರು ನೋಂದಣಿ ಮಾಡಿಕೊಳ್ಳುವ ಮೂಲಕ ಸಹಕರಿಸಬೇಕೆಂದರು.

ರಾಜಕುಮಾರ್ ಮಾತನಾಡಿ, ಶಾಲಾ-ಕಾಲೇಜು ಮಕ್ಕಳು ವಿದ್ಯಾಸಂಸ್ಥೆಗಳಿಗೆ ಹೋಗಿಬರಲು ಬಸ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳು ಈ ಹಿಂದೆ ಖಾಸಗಿ ಬಸ್ ಮಾರ್ಗ ಇದ್ದು, ಅವರು ನಡೆಸದಿದ್ದರೆ ಕೆಎಸ್‍ಆರ್‍ಟಿಸಿ ಬಸ್‍ಗೆ ವ್ಯವಸ್ಥೆ ಮಾಡುತ್ತೇನೆಂದು ಭರವಸೆ ನೀಡಿದರು.

ನಾಗಪ್ಪ ಅರ್ಜಿ ನೀಡಿ, ಊರಿನಲ್ಲಿ ಸಣ್ಣ ಸಣ್ಣ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಇದಕ್ಕೆ ಕಡಿವಾಣ ಹಾಕಬೇಕೆಂದು ವಿನಂತಿಸಿದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಸಣ್ಣ ಅಂಗಡಿಗಳಲ್ಲಿ ಮದ್ಯ ಮಾರಾಟ ಮತ್ತು ಸಾರ್ವಜನಿಕವಾಗಿ ಮದ್ಯ ಸೇವನೆ ಗಂಭೀರ ವಿಚಾರವಾಗಿದ್ದು ಅಬಕಾರಿ ಇಲಾಖೆಯವರು ದಿಢೀರ್ ದಾಳಿ ಮತ್ತು ಪ್ರಕರಣ ದಾಖಲು ಮಾಡುವ ಮೂಲಕ, ಹಾಗೂ ಗ್ರಾ,ಪಂ ಯವರು ಅಂಗಡಿ ಪರವಾನಗಿ ರದ್ದುಪಡಿಸುವುದು, ಪರವಾನಗಿ ಇಲ್ಲದಿದ್ದರೆ ಕೆಇಬಿ ಎನ್‍ಓಸಿ ರದ್ದುಪಡಿಸುವ ಮೂಲಕ ಕಡಿವಾಣ ಹಾಕಬೇಕೆಂದು ಸೂಚನೆ ನೀಡಿದರು.
ಇನ್ನೋರ್ವ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಕೆರೆ ಒತ್ತುವರಿಯಾಗಿದೆ. ಹಲವು ಬಾರಿ ಅರ್ಜಿ ನೀಡಿದ್ದು ಈ ಬಾರಿ ತೆರವಿಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು, ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳು ಇದನ್ನು ಪರಿಶೀಲಿಸಿ ಇನ್ನು 10 ದಿನದಲ್ಲಿ ತೆರವುಗೊಳಿಸುವಂತೆ ಸೂಚಿಸಿದರು.

ಗ್ರಾಮಗಳಲ್ಲಿ ಮೊಬೈಲ್ ನೆಟ್‍ವರ್ಕ್ ಇಲ್ಲದೇ ಎಲ್ಲ ಕೆಲಸಗಳಿಗೆ ತುಂಬಾ ತೊಂದರೆಯಾಗುತ್ತಿದ್ದು ನೆಟ್‍ವರ್ಕ್ ಒದಗಿಸಿಕೊಡುವಂತೆ ಗ್ರಾಮಸ್ಥರು ಮಾಡಿದ ಮನವಿಗೆ ಡಿಸಿ, ಬಿಎಸ್‍ಎನ್‍ಎಲ್ ವತಿಯಿಂದ ಕಳೆದ ನಾಲ್ಕೈದು ತಿಂಗಳಿಂದ ಕೆಲಸ ನಡೆಯುತ್ತಿದ್ದು 150 ಹಳ್ಳಿಗಳು ಬಾಕಿ ಇದೆ, ಶೀಘ್ರವಾಗಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಸ್ಮಶಾನ ಜಾಗಕ್ಕೆ ಬಂದ ಮನವಿಗೆ ಡಿಸಿ, ಸರ್ಕಾರಿ ಜಾಗ ಗುರುತಿಸಿ ತಿಳಿಸಿದಲ್ಲಿ, ಇಂದು ಸಂಜೆಯೊಳಗೆ ಸ್ಮಶಾನಕ್ಕೆ ಸ್ಥಳ ಮಂಜೂರು ಮಾಡುತ್ತೇನೆಂದು ಹೇಳಿದರು.

ಸಭೆಯಲ್ಲಿ ರಸ್ತೆ, ಕುಡಿಯುವ ನೀರು, ಮೂಲಭೂತ ಸೌಕರ್ಯಗಳು, ಸಾಮಾಜಿಕ ಭದ್ರತೆ, ಕಂದಾಯ ಅರಣ್ಯ, ಸೇರಿದಂತೆ ಹಲವಾರು ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಸ್ವೀಕರಿಸಿ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಾತನಾಡಿ, ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ-ಕಂದಾಯ ಇಲಾಖೆ’ ಎಂಬ ಹೊಸ ಪರಿಕಲ್ಪನೆಯೊಂದಿಗೆ ಜಿಲ್ಲಾಧಿಕಾರಿಗಳ ತಂಡ ಗ್ರಾಮ ಭೇಟಿ ನೀಡಿ ಅಲ್ಲಿಯೇ ಒಂದು ದಿನ ವಾಸ್ತವ್ಯ ಮಾಡುತ್ತಿರುವುದರಿಂದ ಹಳ್ಳಿಗಳಲ್ಲಿನ ವಸ್ತುಸ್ಥಿತಿ ಬಗ್ಗೆ ಅರಿವು ಉಂಟಾಗುತ್ತಿದೆ. ಜನರು ತಮ್ಮ ಸೌಲಭ್ಯಗಳಿಗೆ, ಸಮಸ್ಯೆ ಪರಿಹಾರಕ್ಕಾಗಿ ಓಡಾಡುವುದನ್ನು ತಪ್ಪಿಸಿ, ಶೀಘ್ರವಾಗಿ ಅವರಿಗೆ ಸೌಲಭ್ಯ ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಕಂದಾಯ ಇಲಾಖೆ ಅಧಿಕಾರಿಗಳು, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಶಿಕ್ಷಣ, ಅರಣ್ಯ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಸ್ಥಳದಲ್ಲಿಯೇ ಹಾಜರಿದ್ದು ಸಮಸ್ಯೆ ಪರಿಹಾರಕ್ಕೆ ಹಾಗೂ ಸೌಲಭ್ಯ ಶೀಘ್ರವಾಗಿ ನೀಡಲು ಸಹಕರಿಸುತ್ತಾರೆ. ಈ ಭಾಗದಲ್ಲಿನ ಅರಣ್ಯ, ವನ್ಯಜೀವಿ ಸಂರಕ್ಷಣೆ ಸೇರಿದಂತೆ ಪ್ರಾದೇಶಿಕ ಸಮಸ್ಯೆ ಅರಿತು ಪರಿಹರಿಸಲು ಇದೊಂದು ಉತ್ತಮ ಅವಕಾಶವಾಗಿದ್ದು ಅಗತ್ಯವಿರುವವರೆಲ್ಲ ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.

ತಹಶೀಲ್ದಾರ್ ಗ್ರೇಡ್-2 ರಾಕೇಶ್ ಫ್ರಾನ್ಸಿಸ್ ಪಿಂಟೋ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ರಾಜೀವ್ ಸ್ವಾಗತಿಸಿದರು, ಎಸಿ ನಾಗರಾಜ್, ಬೆಳ್ಳೂರು ಗ್ರಾ.ಪಂ ಅಧ್ಯಕ್ಷೆ ಭವಾನಿ, ಸದಸ್ಯರಾದ ತಿಮ್ಮಣ್ಣ ಬೆಳ್ಳೂರು, ಹೇಮಾವತಿ, ಪಲ್ಲವಿ, ಕವಿತ ತಾ,ಪಂ ಇಓ ಪ್ರವೀಣ್‍ಕುಮಾರ್, ಅರಣ್ಯ ಇಲಾಖೆ ಎಸಿಎಫ್, ಡಿಸಿಎಫ್, ಆರ್‍ಎಫ್‍ಓ, ಕೃಷಿ, ತೋಟಗಾರಿಕೆ ಇಲಾಖೆ ಸೇರಿದಂತೆ ಕಂದಾಯ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವೇದಿಕೆ ಕಾರ್ಯಕ್ರಮದ ನಂತರ ಹೊಸನಗರ ಶಾಸಕರಾದ ಹರತಾಳು ಹಾಲಪ್ಪನವರು ಬೆಳ್ಳೂರು ಗ್ರಾಮಕ್ಕೆ ಆಗಮಿಸಿ, ಜಿಲ್ಲಾಧಿಕಾರಿಗಳೊಂದಿಗೆ ಶಾಲೆಗಳಿಗೆ ಭೇಟಿ ನೀಡಿದರು.

ಜಿಲ್ಲಾಧಿಕಾರಿಗಳು ಬೆಳ್ಳೂರಿನ ಅಂಗನವಾಡಿ, ಸ.ಕಿ.ಪ್ರಾ.ಶಾಲೆ, ಸ.ಹಿ.ಪ್ರಾ.ಶಾಲೆಗಳಿಗೆ ಭೇಟಿ ನೀಡಿ , ವಿದ್ಯಾರ್ಥಿಗಳೊಂದಿಗೆ ಸಂವಾದಿಸಿ, ಪರಿಶೀಲಿಸಿದರು. ನಂತರ ಗುಳಿ ಗುಳಿ ಶಂಕರ ದೇವಸ್ಥಾನಕ್ಕೆ ಭೇಟಿ ನೀಡಿ ಗ್ರಾಮದ ಅಭಿವೃದ್ಧಿ ಕುರಿತು ಗ್ರಾ.ಪಂಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು. ದೂಬೈಲು ಮತ್ತು ಮಸ್ತಾನಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ಅರ್ಜಿಗಳನ್ನು ಸ್ವೀಕರಿಸಿದರು.

ನೆಹರು ಮತ್ತು ಮೋದಿ ನಡುವೆ ಆಕಾಶ ಭೂಮಿಯಷ್ಟು ವ್ಯತ್ಯಾಸ-ಸಿದ್ಧರಾಮಯ್ಯ

0

ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಹಾಗೂ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಕಾಶ ಮತ್ತು ಭೂಮಿಗೆ ಇರುವಷ್ಟು ವ್ಯತ್ಯಾಸವಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜವಾಹರ್‌ ಲಾಲ್‌ ನೆಹರು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನೆಹರು ಅವರು ವಿಜ್ಞಾನ,ತಂತ್ರಜ್ಞಾನ ಮತ್ತು ಪ್ರಜಾಪ್ರಭುತ್ವದ ಆಧಾರದಲ್ಲಿ ದೇಶವನ್ನು ಕಟ್ಟಿ ನಿಲ್ಲಿಸಿದರು. ಅಲ್ಲದೆ, ಪ್ರಜಾಪ್ರಭುತ್ವದ ಬೇರುಗಳು ದೇಶದಲ್ಲಿ ಆಳವಾಗಿ ಬೇರೂರಲು ಬೇಕಾದ ಎಲ್ಲ ಕ್ರಮ ಕೈಗೊಂಡರು. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿ ಇದಕ್ಕೆಲ್ಲಾ ತದ್ವಿರುದ್ಧ. ಇವರು ಪ್ರಧಾನಿ ಆದ ನಂತರ ಒಂದೇ ಒಂದು ಸಂಸ್ಥೆಯನ್ನೂ ಕಟ್ಟಿಬೆಳೆಸಿಲ್ಲ. ನೆಹರು ಅವರು ಕಟ್ಟಿದ ತಾಂತ್ರಿಕ,ವೈಜ್ಞಾನಿಕ-ಶೈಕ್ಷಣಿಕ ಸಂಸ್ಥೆಗಳ ಹೆಸರನ್ನು ಹಾಳು ಮಾಡಲು ಹಗಲೂ ರಾತ್ರಿ ಶ್ರಮಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮಂಗಳೂರಿನಲ್ಲಿ ಮತ್ತೆ ಹಿಜಾಬ್ ವಿವಾದ

0

ಹಿಜಾಬ್ ವಿವಾದದಿಂದಾಗಿ ಇಡೀ ರಾಜ್ಯದಾದ್ಯಂತ ಅಶಾಂತಿಗೆ ಕಾರಣವಾಗಿತ್ತು. ಇನ್ನೇನು ಎಲ್ಲಾ ತಣ್ಣಾಗಾಗಿತ್ತು ಎನೂವಷ್ಟರಲ್ಲಿ ಮಂಗಳೂರಿನ ಜಿಲ್ಲೆಯಲ್ಲಿ ಹಿಜಾಬ್ ವಿವಾದ ಮತ್ತೆ ಬೆಳಕಿಗೆ ಬಂದಿದೆ.

ಅದೇನು ಅಂದರೆ, ಈಗಾಗಲೇ ಹೈಕೋರ್ಟ್ ಶಾಲಾ ಕಾಲೇಜುಗಳಿಗೆ ಹಿಜಾಬ್ ಧರಿಸಿ ಹೋಗುವಂತಿಲ್ಲ ಎಂದು ತೀರ್ಮಾನ ನೀಡಿದೆ. ಆದರೂ ಸಹ ಮಂಗಳೂರಿನ ವಿವಿ ಘಟಕ ಕಾಲೇಜಿಗೆ ಮುಸ್ಲಿಂ ಸಮುದಾಯದ 12 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲೆ ಡಾ.ಅನುಸೂಯ ರೈ ತರಗತಿಗೆ ಬಾರದಂತೆ ಪ್ರವೇಶ ನಿರಾಕರಿಸಿದ್ದಾರೆ.

ನಂತರ ವಿದ್ಯಾರ್ಥಿನಿಯರು ಕಾಲೇಜು ಗ್ರಂಥಾಲಯದತ್ತ ತೆರಳಿದ್ದಾರೆ. ಅಲ್ಲೂ ವಿದ್ಯಾರ್ಥಿನಿಯರನ್ನು ತಡೆದು ಪ್ರಾಂಶುಪಾಲೆ ಬುದ್ಧಿ ಹೇಳಿದ್ದಾರೆ.

ಹಿಜಾಬ್ ತೆಗೆದಿಟ್ಟು ತರಗತಿಗೆ ಹೋಗಿ ಎಂದು ಪ್ರಾಂಶುಪಾಲೆ ಡಾ.ಅನುಸೂಯ ರೈ ಅವರು ಹೇಳಿದ್ದಾರೆ.

ಆದರೂ ವಿದ್ಯಾರ್ಥಿನಿಯರು ಕಾಲೇಜು ಲೈಬ್ರರಿ ಎದುರು ನಿಂತಿದ್ದಾರೆ.

ತರಗತಿಗಳಲ್ಲಿ ಮಾತ್ರವಲ್ಲ. ಕ್ಯಾಂಪಸ್ನಲ್ಲೂ ಹಿಜಾಬ್ ಗೆ ಅವಕಾಶ ಕೊಡುವುದಿಲ್ಲ ಎಂದು ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲರಾದ ಅನುಸೂಯ ರೈ ಅವರು ತಿಳಿಸಿದ್ದಾರೆ.

ನಮ್ಮಲ್ಲಿ 44 ಜನ ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಕೆಲ ವಿದ್ಯಾರ್ಥಿಗಳಿಗೆ ಮಾತ್ರ ಈ ಆದೇಶದ ಬಗ್ಗೆ ಸಮಸ್ಯೆ ಇದೆ. ಅವರನ್ನು ಅವರ ಪೋಷಕರ ಮನವೊಲಿಸಲು ನಮಗೆ ಸಮಯ ಬೇಕು. ಅವರು ನ್ಯಾಯಾಲಯದ ಆದೇಶ ಆಡಳಿತ ಮಂಡಳಿಯಿಂದ ನಿಯಮವನ್ನು ಪಾಲಿಸಲೇ ಬೇಕು. ಆಡಳಿತ ಮಂಡಳಿ ಆದೇಶ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ಅನೇಕ ಶಾಸಕರು ಕರೆ ಮಾಡಿದ್ದಾರೆ ನನಗೆ ಯಾರು ಒತ್ತಡ ಹಾಕಿಲ್ಲ. ಕೇವಲ ನಮ್ಮ ಆದೇಶದ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಪ್ರಾಂಶುಪಾಲರಾದ ಅನುಸೂಯ ರೈ ಅವರು ತಿಳಿಸಿದ್ದಾರೆ.

ಸಾಗರ & ಹೊಸನಗರ ಎಪಿಎಂಸಿ ವಿಲೀನ ಪ್ರಸ್ತಾವನೆ ಕೈಬಿಡಲಾಗಿದೆ- ಹಾಲಪ್ಪ

0

ಹೊಸನಗರ ಹಾಗೂ ಸಾಗರ ಎಪಿಎಂಸಿಗಳನ್ನು ಮರ್ಜ್ ಮಾಡುವ ಪ್ರಸ್ತಾವನೆಯನ್ನು ಕೈ ಬಿಡಲಾಗಿದ್ದು, ಈಗಿರುವ ಸ್ಥಿತಿಯಲ್ಲಿಯೇ ಇವು ಕಾರ್ಯನಿರ್ವಹಿಸಲಿವೆ ಎಂದು ಸಾಗರ ಶಾಸಕ ಹರತಾಳು ಹಾಲಪ್ಪನವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸನಗರಕ್ಕೆ ಬೈಪಾಸ್ ರಸ್ತೆ ಅಗತ್ಯವಾಗಿರುವುದರಿಂದ ಇದನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಮಾಲೀಕರು ಬಿಟ್ಟು ಕೊಡಲು ಮುಂದೆ ಬಂದರೆ ಸೂಕ್ತ ಪರಿಹಾರ ನೀಡಲಾಗುತ್ತದೆ. ಬೈಪಾಸ್ ರಸ್ತೆ ಮಾಡಿದರೆ ಪಟ್ಟಣದ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

ಮುಳುಗಡೆ ಪ್ರದೇಶದವರಿಗೆ ಅರಣ್ಯ ಕಾಯಿದೆಗಳಿಂದ ಮುಕ್ತಿಯೇ ಇಲ್ಲದಂತಾಗಿದೆ. ಒಂದಾದ ಮೇಲೊಂದರಂತೆ ನಿಯಮಗಳನ್ನು ಹೇರಲಾಗುತ್ತಿದೆ. ಮಂಗನ ಕಾಯಿಲೆ ಸಂಶೋಧನಾ ಲ್ಯಾಬ್ ಸಾಗರದಲ್ಲಿ ಆರಂಭಿಸಲು ಗುರುತಿಸಲಾಗಿತ್ತು. ಆದರೆ ವಿಜ್ಞಾನಿಗಳು ಅಲ್ಲಿಗೆ ಬರುವುದಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಆರಂಭಿಸಬೇಕೆಂಬ ಬೇಡಿಕೆ ಬಂದಿದೆ. ಆದರೆ ಶಿವಮೊಗ್ಗದಲ್ಲಾದರೂ ಲ್ಯಾಬ್ ಆರಂಭಿಸಬೇಕೆಂದು ಒತ್ತಾಯಿಸಲಾಗಿದೆ ಎಂದರು.

ಸಾಗರ ಮತ್ತು ಹೊಸನಗರ ಎಪಿಎಂಸಿಗಳನ್ನು ವಿಲೀನ ಮಾಡಲಾಗುತ್ತದೆ ಎಂಬ ಗೊಂದಲ ರೈತ ಸಮುದಾಯದಲ್ಲಿ ಉಂಟಾಗಿತ್ತು. ಆದರೆ ಸರ್ಕಾರ ಈ ಪ್ರಸ್ತಾವನೆಯನ್ನು ಕೈ ಬಿಟ್ಟಿದೆ. ಇದರಿಂದಾಗಿ ಆಯ ನಗರದ ರೈತರಿಗೆ ಕೃಷಿ ಹುಟ್ಟುವಳಿಗಳನ್ನು ಮಾರಾಟ ಮಾಡಲು ಅನುಕೂಲವಾಗಲಿದೆ ಎಂದರು.

ಕರೂರು ಜಾಗವನ್ನು ಬಫರ್ ಜೋನ್ ಮಾಡುವ ಪ್ರಸ್ತಾವನೆಯನ್ನು ಕೈ ಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಅಣ್ಣಪ್ಪ ಇದ್ದರು.

ನೆಹರೂ ಸ್ಮರಣೆಯಲ್ಲಿ ಆರ್ ಎಸ್ಎಸ್ ನವರನ್ನು ಕೆಣಕಿದ ಸಿದ್ಧರಾಮಯ್ಯ

0

ಆರೆಸ್ಸೆಸ್‌ನವರು ಭಾರತೀಯರಾ, ಅದೇನು ನಮ್ಮ ದೇಶದ್ದಾ,ಅವರೇನು ದ್ರಾವಿಡರೇ, ದ್ರಾವಿಡರಷ್ಟೇ ಈ ದೇಶದವರು. ಈ ಪ್ರಶ್ನೆಗಳನ್ನೂ ನಾವು ಕೇಳಬೇಕಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಿನ್ನೆ ಶುಕ್ರವಾರ ನಡೆದ ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಎನ್ನುವ ಒಬ್ಬನಿಗೆ ಮಕ್ಕಳ ಪಠ್ಯ ಪುಸ್ತಕ ರೂಪಿಸುವ ಜವಾಬ್ದಾರಿ ನೀಡಲಾಗಿದೆ. ಇದಕ್ಕಿಂತ ಮೂರ್ಖತನವನ್ನು ನಾನು ನೋಡಿಲ್ಲ. ಈತ ಹೆಡಗೇವಾರ್‌ಗಿಂತ ಒಂದು ಹೆಜ್ಜೆ ಮುಂದಿದ್ದಾನೆ. ಅಪ್ರತಿಮ ದೇಶಭಕ್ತ ಭಗತ್‌ಸಿಂಗ್ ಪಠ್ಯವನ್ನು ತೆಗೆದು ಹೆಡಗೇವಾರ್ ಭಾಷಣ ಹಾಕಿದ್ದಾನೆ. ಭಗತ್‌ಸಿಂಗ್‌ಗಿಂತ ದೇಶಭಕ್ತ ಬೇಕಾ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇಂತದನ್ನು ಪ್ರಶ್ನಿಸುತ್ತಾ ಹೋದರೆ ಏನಾಗುತ್ತದೆ ಗೊತ್ತೆ. ಅದಕ್ಕಾಗಿಯೇ ಚರಿತ್ರೆ ಕೆದಕಲು ಹೋಗಬಾರದು. ಡಾ.ಅಂಬೇಡ್ಕರ್ ಅವರು, ಚರಿತ್ರೆ ಗೊತ್ತಿಲ್ಲದವರು ಭವಿಷ್ಯ ರೂಪಿಸಲಾರರು ಎಂದು ಹೇಳಿದ್ದರು. ಆರೆಸ್ಸೆಸ್‌ನವರಿಗೆ ನಿಜವಾದ ಚರಿತ್ರೆ ಬಗ್ಗೆ ಬಹಳ ಭಯ ಇದೆ. ಅದಕ್ಕಾಗಿಯೇ ಇತಿಹಾಸ ತಿರುಚುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ನೆಹರೂ ಅವರು ವಿಜ್ಞಾನ ಹಾಗೂ ತಂತ್ರಜ್ಞಾನ, ಪ್ರಜಾತಂತ್ರದ ಆಧಾರದಲ್ಲಿ ದೇಶವನ್ನು ಕಟ್ಟಿ ನಿಲ್ಲಿಸಿದ್ದರು. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈಜ್ಞಾನಿಕ ಮನೋಧರ್ಮ ಎಂದರೆ ಏನು ಎನ್ನುವುದೇ ಗೊತ್ತಿಲ್ಲ. ಈ ಕ್ಷೇತ್ರಗಳಲ್ಲಿನ ವೈಫಲ್ಯ ಮುಚ್ಚಿಕೊಳ್ಳಲು ಧರ್ಮ ಮತ್ತು ಜಾತಿ ಸಂಘರ್ಷಗಳ ಬಗ್ಗೆಯೇ ಮಾತನಾಡುತ್ತಾ ದೇಶದ ದಾರಿ ತಪ್ಪಿಸುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಲೇಖಕಿ ಗೀತಾಂಜಲಿಶ್ರೀ ಅವರ ಕೃತಿಗೆ ಬೂಕರ್ ಪ್ರಶಸ್ತಿ

0

ಲೇಖಕಿ ಗೀತಾಂಜಲಿ ಶ್ರೀ ಅವರ ಹಿಂದಿ ಕಾದಂಬರಿಗೆ ಟೋಂಬ್ ಆಫ್ ಸ್ಯಾಂಡ್ ಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಇದೇ ಪ್ರಥಮ ಬಾರಿಗೆ ಯಾವುದೇ ಭಾರತೀಯ ಭಾಷೆಯಲ್ಲಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಪುಸ್ತಕ ಎಂಬ ಗೌರವಕ್ಕೆ ಪಾತ್ರವಾಗಿದೆ.

ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ, ದೆಹಲಿ ಮೂಲದ ಲೇಖಕಿ ಗೀತಾಂಜಲಿ ಶ್ರೀ ಅವರು ಇವರ ಪುಸ್ತಕದ ಇಂಗ್ಲಿಷ್ ಅನುವಾದಕಿ ಡೈಸಿ ರಾಕ್‌ವೆಲ್ ಅವರೊಂದಿಗೆ 50,000 ಮೌಲ್ಯದ ಬಹುಮಾನವನ್ನು ಸ್ವೀಕರಿಸಿದ್ದಾರೆ. ಇಷ್ಟಲ್ಲದೇ ಪ್ರಶಸ್ತಿಯಿಂದ ತಮ್ಮ ಹೃದಯ ತುಂಬಿ ಬಂದಿರುವುದಾಗಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಟೋಂಬ್ ಆಫ್ ಸ್ಯಾಂಡ್ ಕಾದಂಬರಿಯೂ ಮೂಲತಃ ಹಿಂದಿಯಲ್ಲಿ ರೆಟ್ ಸಮಾಧಿ ಎಂದು ಇದೆ. ಉತ್ತರ ಭಾರತ ಮೂಲದ 80 ವರ್ಷದ ಮಹಿಳೆಯನ್ನು ಆಧರಿಸಿದ ಕತೆ ಇದಾಗಿದೆ.

ಬೂಕರ್ ತೀರ್ಪುಗಾರರು ಈ ಕಾದಂಬರಿಯನ್ನು ಸಂತೋಷದ ಕಾಕೋಫೋನಿ ಹಾಗೂ ಆಕರ್ಷಣೀಯ ಕಾದಂಬರಿ ಎಂದು ಕರೆದಿದ್ದಾರೆ.

ಈ ಕಾದಂಬರಿಯಲ್ಲಿ 80ರ ಪ್ರಾಯದ ವೃದ್ದೆ ತನ್ನ ಗಂಡನನ್ನು ಕಳೆದುಕೊಂಡು ಖಿನ್ನತೆಗೆ ಒಳಗಾಗಿರುವ ಕತೆಯಾಗಿದೆ.

ನಾನು ಬೂಕರ್‌ನ ಬಗ್ಗೆ ಕನಸು ಕಂಡಿರಲಿಲ್ಲ. ನಾನು ಅದನ್ನು ಮಾಡಬಹುದೆಂದು ನಾನು ಎಂದಿಗೂ ಯೋಚಿಸಲಿಲ್ಲ. ಎಂತಹ ದೊಡ್ಡ ಗುರುತಿಸುವಿಕೆ, ನಾನು ಆಶ್ಚರ್ಯಚಕಿತಳಾಗಿದ್ದೇನೆ. ಸಂತೋಷಪಡುತ್ತೇನೆ, ಈ ಗೌರವಕ್ಕೆ ವಿನಮ್ರಳಾಗಿದ್ದೇನೆ ಎಂದು ಲೇಖಕಿ ಗೀತಾಂಜಲಿ ಶ್ರೀ ಪ್ರಶಸ್ತಿ ಸ್ವೀಕರಿಸಿ ತಮ್ಮ ಸಂತೋಷದ ಮಾತುಗಳನ್ನು ಆಡಿದ್ದಾರೆ.

ರೆಟ್ ಸಮಾಧಿ ಅಥವಾ ಮರಳಿನ ಸಮಾಧಿ ಕಾದಂಬರಿಯಲ್ಲಿ ನಾವು ವಾಸಿಸುವ ಜಗತ್ತಿಗೆ ಒಂದು ಸೊಗಸು. ಸನ್ನಿಹಿತವಾದ ವಿನಾಶದ ಮಧ್ಯೆಯೂ ಭರವಸೆಯನ್ನು ಉಳಿಸಿಕೊಳ್ಳುವ ಶಾಶ್ವತ ಶಕ್ತಿ ಇದೆ. ಬೂಕರ್ ಪ್ರಶಸ್ತಿಯಿಂದಾಗಿ ಈ ಕಾದಂಬರಿ ಮತ್ತಷ್ಟು ಜನರನ್ನು ತಲುಪಲಿದೆ ಎಂದು ಅವರು ಹೇಳಿದ್ದಾರೆ.

ವಿಧಾನ ಪರಿಷತ್ ಚುನಾವಣೆ: 7 ಅಭ್ಯರ್ಥಿಗಳೂ ಅವಿರೋಧ ಆಯ್ಕೆ ಘೋಷಣೆ

0

ನಿರೀಕ್ಷೆಯೆಂತೆ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಏಳೂ ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಏಳು ಸ್ಥಾನಗಳಿಗೆ ಏಳು ಜನರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಕೆ ವಿಶಾಲಾಕ್ಷಿ ಘೋಷಣೆ ಮಾಡಿದರು.

ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಆಯ್ಕೆಯಾಗುವ ಕಾರಣದಿಂದ ಯಾವುದೇ ಪಕ್ಷಗಳು ಹೆಚ್ಚುವರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.
ಒಟ್ಟು ಏಳು ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳು ಬಿಜೆಪಿಗೆ, ಎರಡು ಸ್ಥಾನ ಕಾಂಗ್ರೆಸ್ ಗೆ ಮತ್ತು ಒಂದು ಸ್ಥಾನ ಜೆಡಿಎಸ್ ಪಾಲಾಗಿದೆ. ಬಿಜೆಪಿಯಿಂದ ಚಲವಾದಿ ನಾರಾಯಣ ಸ್ವಾಮಿ, ಹೇಮಲತಾ ನಾಯಕ್, ಲಕ್ಷ್ಮಣ ಸವದಿ ಮತ್ತು ಕೇಶವಪ್ರಸಾದ್ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ನಾಗರಾಜ ಯಾದವ್ ಮತ್ತು ಅಬ್ದುಲ್ ಜಬ್ಬಾರ್ ಹಾಗೂ ಜೆಡಿಎಸ್ ಪಕ್ಷದಿಂದ ಟಿ.ಎ.ಶರವಣ ಆಯ್ಕೆಯಾಗಿದ್ದಾರೆ.

ದಲಿತ ಯುವಕನ ಕೊಲೆ: ತಪ್ಪಿತಸ್ಥರ ಮೇಲೆ ಕಠಿಣ ಕ್ರಮ- ನಿರಾಣಿ

0

ಕಲುಬುರಗಿಯಲ್ಲಿ ನಡೆದ ದಲಿತ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ತಪ್ಪಿತಸ್ಥ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಲಬುರಗಿ ಜಿಲ್ಲಾ ‌ಉಸ್ತುವಾರಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ‌ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಪ್ರಕಾರ ಪ್ರತಿಯೊಬ್ಬರಿಗೂ ಶಿಕ್ಷೆಯಾಗಲಿದೆ. ಇದರಲ್ಲಿ ಯಾವುದೇ ಕಾರಣಕ್ಕೂ ರಾಜೀಯಾಗುವುದಿಲ್ಲ ಎಂದು ನಿರಾಣಿ ಸ್ಪಷ್ಟಪಡಿಸಿದರು.
ಘಟನೆ ನಡೆದ ತಕ್ಷಣವೇ ಪೊಲೀಸರು ಕಾರ್ಯೋನ್ಮುಖರಾಗಿ ತಪ್ಪಿತಸ್ಥರು ಯಾರಿದ್ದಾರೋ ಅವರನ್ನು ಕಾನೂನು ಪ್ರಕಾರವಾಗಿ ಬಂಧಿಸಿದ್ದಾರೆ.

ಮುಂದಿನ ಪ್ರಕ್ರಿಯೆಗಳು ಕೂಡ ಕಾನೂನು ಅಡಿಯಲ್ಲೇ ನಡೆಯಬೇಕಾಗರುವುದರಿಂದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿಯೇ ತಿರುತ್ತೇವೆ ಎಂದು ಅವರು ಗುಡುಗಿದರು.

ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದಲೇ ಆರೋಪಿಗಳನ್ನು ತಕ್ಷಣವೇ ಬಂಧಿಸಲು ಸಾದ್ಯವಾಗಿದೆ. ನಮ್ಮ ಪೊಲೀಸರು ಸಮರ್ಥರಾಗಿದ್ದರಿಂದಲೇ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಾನು ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ದೂರವಾಣಿಯಲ್ಲಿ ಮಾತನಾಡಿ ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸುವಂತೆ ಸೂಚಿನೆ ಕೊಡಲಾಗಿತ್ತು.

ಅದರಂತೆ ಪೊಲೀಸರು ಕೂಡಲೇ ವಿಶೇಷ ತಂಡವನ್ನು ರಚಿಸಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸಿದ್ದಾರೆ.