Tuesday, March 10, 2026
Tuesday, March 10, 2026
Home Blog Page 1524

ಚೀನಾಗೆ ತಡವಾಗಿ ಮನವರಿಕೆ: ಕಾದಾಟದ ಬದಲು ಸಹಕಾರವಿರಲಿ-ವಾಂಗ್

0

ಭಾರತೀಯ ರಾಯಭಾರಿ ಪ್ರದೀಪ್ ಕುಮಾರ್ ರಾವತ್ ಅವರು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಬೀಜಿಂಗ್‌ನಲ್ಲಿ ಭೇಟಿಯಾದರು.

ಈ ಭೇಟಿಯ ಕುರಿತು ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
14ನೇ ಬ್ರಿಕ್ಸ್ ಶೃಂಗಸಭೆಗೂ ಮುನ್ನ ಹಾಗೂ ಪೂರ್ವ ಲಡಾಖ್‌ನಲ್ಲಿ ಕಳೆದ ಎರಡು ವರ್ಷಗಳ ಮಿಲಿಟರಿ ಬಿಕ್ಕಟ್ಟಿನ ಬಗ್ಗೆ ಇಬ್ಬರೂ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಚೀನಾ ಮತ್ತು ಭಾರತದ ಸಾಮಾನ್ಯ ಹಿತಾಸಕ್ತಿಗಳು ಭಿನ್ನಾಭಿಪ್ರಾಯಗಳನ್ನು ಮೀರಿಸುತ್ತವೆ ಎಂದು ವಾಂಗ್ ಹೇಳಿದ್ದಾರೆ. ಎರಡೂ ಕಡೆಯವರು ಪರಸ್ಪರರ ವಿರುದ್ಧ ಕಾವಲು ಕಾಯುವ ಬದಲು ಸಹಕಾರವನ್ನು ಬಲಪಡಿಸಬೇಕು ಮತ್ತು ಸುಧಾರಿಸಬೇಕು. ಒಬ್ಬರನ್ನೊಬ್ಬರು ಅನುಮಾನಿಸುವ ಬದಲು ಪರಸ್ಪರ ನಂಬಿಕೆಯಿಂದ ಇರಬೇಕು ಎಂದಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಮಾರ್ಚ್‌ನಲ್ಲಿ ವಾಂಗ್ ಭಾರತಕ್ಕೆ ಭೇಟಿ ನೀಡಿದ್ದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆ ಮಾತುಕತೆ ನಡೆಸಿದ್ದರು.

ವಿವಿಧ ಚಟುವಟಿಕೆಯಲ್ಲಿ ಭಾಗಿಯಾದ ಸಾಗರದ ಶಾಸಕ ಹರತಾಳು ಹಾಲಪ್ಪ

0

ಸಾಗರದ ಜೋಸೆಫ್ ನಗರದಲ್ಲಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ (ಆವಿನಹಳ್ಳಿ) ವಿದ್ಯಾರ್ಥಿಗಳು ಇತ್ತೀಚೆಗೆ ಮೂಲಭೂತ ಸೌಕರ್ಯ ಹಾಗೂ ಅಧಿಕಾರಿಗಳ ವಿರುದ್ಧ ಹಾಸ್ಟೇಲ್ ತೊರೆದು ತಡರಾತ್ರಿ ಪ್ರತಿಭಟನೆ ನೆಡೆಸಿದ್ದರು.

ಈ ಹಿನ್ನೆಲೆಯಲ್ಲಿ ಶಾಸಕರಾದ ಹರತಾಳು ಹಾಲಪ್ಪನವರು ಸದರಿ ವಸತಿ ಶಾಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳ ಸಭೆ ನೆಡೆಸಿ, ವಿದ್ಯಾರ್ಥಿಗಳ ಕುಂದುಕೊರತೆ ವಿಚಾರಿಸಿದರು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕರ್ತವ್ಯ ಲೋಪವೆಸಗಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಮುಂದೆ ಇಂತಹ ಘಟನೆಗಳು ಮರುಕಳಿಸಿದರೆ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸುವ ಬಗ್ಗೆ ಎಚ್ಚರಿಸಿದರು.

ಸಾಗರ, ಶಂಕರಮಠದಲ್ಲಿ ಆಯೋಜಿಸಿದ್ದ, 8 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು.
ಸಾಗರ, ವಾರ್ಡ್ ನಂ 24 ರ ಜನ್ನತ್ ನಗರದಲ್ಲಿ ನೂತನ ಹೈಮಾಸ್ಟ್ ಬೀದಿ ದೀಪ ಉದ್ಘಾಟನೆಯನ್ನು ನೆರವೇರಿಸಿದರು.

ಸಾಗರದ ವಾರ್ಡ್ ನಂ 30 ರ ಎಸ್.ಎನ್ ನಗರದ ಆಶ್ರಮ ಶಾಲೆ ಹಿಂಭಾಗದಲ್ಲಿ ನೂತನ ಹೈಮಾಸ್ಟ್ ಬೀದಿ ದೀಪ ಉದ್ಘಾಟನೆಯನ್ನು ಮಾಡಿದರು.

ವಾರ್ಡ್ ನಂ 10 ರ ಇಂದಿರಾನಗರದ ಬೆಥನಿ ಶಾಲೆ ಹತ್ತಿರ ನೂತನ ಹೈಮಾಸ್ಟ್ ಬೀದಿ ದೀಪ ಉದ್ಘಾಟನೆ ಕಾರ್ಯಕ್ರಮ ನಡೆಸಿದರು.
ವಾರ್ಡ್ ನಂ 09 ರ ಲೋಹಿಯಾ ನಗರದಲ್ಲಿ ನೂತನ ಹೈಮಾಸ್ಟ್ ಬೀದಿ ದೀಪ ಉದ್ಘಾಟನೆ ಕಾರ್ಯಕ್ರಮದಲ್ಲೂ ಭಾಗಿಯಾದರು.

ಸೂಕ್ತ ವೈದ್ಯಕೀಯದಿಂದ ತಾಯಿ ಮರಣ ಪ್ರಮಾಣವನ್ನ ಕಡಿಮೆ ಮಾಡಿ-ಸೆಲ್ವಮಣಿ

0

ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರಸೂತಿ ವಿಭಾಗದ ವೈದ್ಯರು ಅವರ ಕರ್ತವ್ಯಾನುಸಾರ ಲಭ್ಯವಿದ್ದು, ತಕ್ಷಣ ಗರ್ಭಿಣಿಯರನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ತಾಯಿಮರಣ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಎಂಎಂಆರ್(ಮ್ಯಾಟರ್ನಲ್ ಮಾರ್ಟಾಲಿಟಿ ರೇಷಿಯೋ) ಮತ್ತು ಇತರೆ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸೂತಿ ತಜ್ಞರು/ವೈದ್ಯರು ಗರ್ಭಿಣಿಯರು ಆಸ್ಪತ್ರೆಗೆ ದಾಖಲಾದ ವೇಳೆ ತಕ್ಷಣ ತಪಾಸಣೆ ನಡೆಸಿ, ಅವರ ಆರೋಗ್ಯದ ಸ್ಥಿತಿ, ಗಂಭೀರತೆ ಏನಾದರೂ ಇದ್ದರೆ ಅದರ ಕುರಿತು ಸಮರ್ಪಕವಾಗಿ ಕೇಸ್‍ಶೀಟ್‍ನಲ್ಲಿ ದಾಖಲಿಸಬೇಕು ಹಾಗೂ ತ್ವರಿತವಾಗಿ ಮುಂದಿನ ಚಿಕಿತ್ಸೆ ಕುರಿತು ಕ್ರಮ ಕೈಗೊಳ್ಳಬೇಕು ಎಂದರು.

ಡೆತ್ ಆಡಿಟ್ ಸಮಿತಿಯು ತಾಯಿ ಮರಣ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮರಣಕ್ಕೆ ಸೂಕ್ತ ಕಾರಣ ತಿಳಿದು ಕ್ರಮ ವಹಿಸಬೇಕು. ವೈದ್ಯರ ನಿರ್ಲಕ್ಷ್ಯ ಅಥವಾ ಇನ್ನಾವುದೇ ಗಂಭೀರ ಪ್ರಕರಣಗಳು ಇದ್ದಲ್ಲಿ ವಿಚಾರಣೆ ನಡೆಸಿ ತಮಗೆ ವರದಿ ಸಲ್ಲಿಸಬೇಕೆಂದರು.

ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಮಗು ನೋಡಲು ಹಾಗೂ ಸಿಬ್ಬಂದಿ ತಮ್ಮ ಇತರೆ ಕರ್ತವ್ಯ ನಿರ್ವಹಿಸಿದ್ದಕ್ಕೆ ರೋಗಿಗಳ ಕಡೆಯವರಿಂದ ಹಣ ಕೇಳುತ್ತಾರೆ. ಹಾಗೂ ತಮಗೆ ಬೇಕಾದವರಿಗೆ ಮಾತ್ರ ಒಳಗೆ ಪ್ರವೇಶ ನೀಡುತ್ತಾರೆಂದು ರೋಗಿ ಕುಟುಂಬದವರು ದೂರಿದ್ದು, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರು ಆಸ್ಪತ್ರೆಯ ಎಲ್ಲ ಮೂಲೆಗಳಲ್ಲಿ ಹಣ ಕೇಳಿದರೆ ದೂರು ನೀಡಲು ಸಂಪರ್ಕಿಸಬಹುದಾದ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಪ್ರದರ್ಶಿಸಬೇಕು ಹಾಗೂ ಇಂತಹ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸಬೇಕು. ಸಿಬ್ಬಂದಿಗಳು ಈ ರೀತಿ ವರ್ತಿಸುವುದಕ್ಕೆ ಕಡಿವಾಣ ಹಾಕಿ, ಮುಂದೆ ಹೀಗೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಸೂಚನೆ ನೀಡಿದರು.

ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ ಎಂದು ಕಾರಣ ನೀಡಿ ರೋಗಿಗಳನ್ನು ಅಲೆದಾಡಿಸಬಾರದು ಎಂದು ಹೇಳಿದರು.
ಇನ್ನು ಮುಂದೆ ಪ್ರತಿ ತಿಂಗಳು ಎಂಎಂಆರ್ ಪರಿಶೀಲನೆ ಸಭೆ ನಡೆಸಬೇಕು. ಎಂಎಂಆರ್‍ನ್ನು ಸಮರ್ಪಕವಾಗಿ ದಾಖಲಿಸಿ ವರದಿ ಸಲ್ಲಿಸಬೇಕೆಂದು ತಿಳಿಸಿದರು.

ಜಿಲ್ಲಾ ಏಡ್ಸ್ ತಡೆಗಟ್ಟುವ ಕಾರ್ಯಕ್ರಮದಡಿ ಬರುವ ಐದು ಎನ್‍ಜಿಓ ಗಳ ಪ್ರಗತಿ ಪರಿಶೀಲಿಸಿದ ಅವರು ಎನ್‍ಜಿಓಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಡಿಹೆಚ್‍ಓ ಎಲ್ಲರೂ ಸಮನ್ವಯ ಸಾಧಿಸಿ ಪರಿಣಾಮಕಾರಿಯಾಗಿ ಹೆಚ್‍ಐವಿ/ಏಡ್ಸ್ ನಿಯಂತ್ರಣಕ್ಕೆ ಯೋಜನೆ ರೂಪಿಸಬೇಕು. ಲೈಂಗಿಕ ಕಾರ್ಯಕರ್ತರ ಚಟುವಟಿಕೆ ತಾಣಗಳನ್ನು ಗುರುತಿಸಿ, ಮಾಹಿತಿ, ಶಿಕ್ಷಣ ಮತ್ತು ಸಂಹವನ ಚಟುವಟಿಕೆಗಳನ್ನು ಹೆಚ್ಚಿಸಬೇಕು. ಎನ್‍ಜಿಓ ಗಳು ವೈದ್ಯಾಧಿಕಾರಿಗಳ ಸಹಯೋಗದೊಂದಿಗೆ ಹೆಚ್‍ಐವಿ/ಏಡ್ಸ್ ತಡೆ ಕುರಿತು ಮಾಹಿತಿ ನೀಡಿ ಅರಿವು ಮೂಡಿಸುವ ಚಟುವಟಿಕೆಗಳನ್ನು ಹೆಚ್ಚು ಮಾಡಬೇಕು. ಎನ್‍ಜಿಓ ಗಳು ಹೆಚ್‍ಐವಿ ರೋಗಿಗಳಿಗೆ ನಿಯಮಿತವಾಗಿ ಎಆರ್‍ಟಿ ಚಿಕಿತ್ಸೆ, ಜಾಗೃತಿ ಕಾರ್ಯಕ್ರಮ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಬೇಕೆಂದು ತಿಳಿಸಿದ ಅವರು ಜಿಲ್ಲೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಸರ್ಕಾರದಿಂದ ಗುರುತಿಸಿಕೊಂಡಿರುವ ಶಂಕರ ಕಣ್ಣಿನ ಆಸ್ಪತ್ರೆ, ಉಡುಪಿ, ಮಣಿಪಾಲ ಕೇಂದ್ರ ಸೇರಿದಂತೆ ನಾಲ್ಕು ಆಸ್ಪತ್ರೆಗಳು ಸಮುದಾಯದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಕುರಿತು ಮಾಹಿತಿ ಶಿಕ್ಷಣ ನೀಡಿ, ಸೌಲಭ್ಯ ನೀಡಬೇಕೆಂದರು.

ಸಭೆಯಲ್ಲಿ ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಮೆಗ್ಗಾನ್ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಆರ್‍ಸಿಹೆಚ್‍ಓ ಡಾ.ನಾಗರಾಜನಾಯ್ಕ, ಇತರೆ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ಫ್ರಧಾನ ಅರಣ್ಯಾಧಿಕಾರಿಗಳಿಂದ ಅಭಿವೃದ್ಧಿ ಪರಿಶೀಲನೆ

0

ಶ್ರೀ ರಾಜೀವ್ ರಂಜನ್(ಭಾ.ಅ.ಸೇ) ಮಾನ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು(ಅಭಿವೃದ್ಧಿ) ರವರು ಶಿವಮೊಗ್ಗ ವೃತ್ತದ ಶಂಕರ ವಲಯಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಡಾ.ಕೆ.ಟಿ.ಹನುಮಂತಪ್ಪ(ಭಾ.ಅ.ಸೇ), ಮಾನ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಶಿವಮೊಗ್ಗ ವೃತ್ತ ಮತ್ತು ಶ್ರೀ ಜಿ.ಯು.ಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಶಿವಮೊಗ್ಗ ವಿಭಾಗ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಲೋಕಸಭಾಕ್ಷೇತ್ರದಲ್ಲಿ ಕಾಲುಸಂಕ: ಸಂಸದರಿಂದ ವರಿಷ್ಠರ ಭೇಟಿ

0

ಮಲೆನಾಡು ಪ್ರದೇಶಗಳಲ್ಲಿ ಕಾಲುಸಂಕ ನಿರ್ಮಾಣ, ಅಂಗನವಾಡಿ ಕೇಂದ್ರಗಳ ರಕ್ಷಣೆಗೆ ಅಗತ್ಯ ಅನುದಾನ ಬಿಡುಗಡೆಗೊಳಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಇಂದು ದೆಹಲಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ದಿ & ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಯಾದವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 634 ಕಾಲು ಸಂಕಗಳನ್ನು ನಿರ್ಮಾಣ ಮಾಡುವುದಕ್ಕೆ ಮತ್ತು ಲೋಕಸಭಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಸೂಕ್ತ ರಕ್ಷಣೆ ಒದಗಿಸಲು, 805 ಅಂಗನವಾಡಿ ಕೇಂದ್ರಗಳ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸಮಾಲೋಚಿಸಿರುವುದಾಗಿ ಅವರು ತಿಳಿಸಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರವು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿ ಮತ್ತು ಮಲೆನಾಡು ಪ್ರದೇಶವನ್ನು ಒಳಗೊಂಡಿರುವ ವಿಶಿಷ್ಟವಾದ ಭೂಸ್ವರೂಪವನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಲೆನಾಡು ಪ್ರದೇಶಗಳಲ್ಲಿ ಅಂದಾಜು 4954 ಕುಗ್ರಾಮಗಳಿದ್ದು, ಮಾನವ ವಾಸವು ಚದುರಿದ ಮತ್ತು ಗುಡ್ಡಗಾಡು ಪರ್ವತಗಳಲ್ಲಿ ವಾಸಿಸುವ ಹಾಗೂ ಮಳೆಗಾಲದಲ್ಲಿ ತುಂಬಿ ಹರಿಯುವ ಸಣ್ಣ ತೊರೆಗಳನ್ನು ಶಾಲಾ ಮಕ್ಕಳು ಸ್ಥಳೀಯ ಕಾಲು ಸೇತುವೆಗಳ ಮೇಲೆ ದಾಟುವುದು ಕಷ್ಟಕರ ಮತ್ತು ಸವಾಲಿನದ್ದಾಗಿದ್ದು, ಅಸಮರ್ಪಕ ರಸ್ತೆ ಸಂಪರ್ಕದಿಂದ ಜನ ಮತ್ತು ಜಾನುವಾರುಗಳು ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ.

ಅಲ್ಲದೇ ಜನರು ತಮ್ಮ ಸ್ಥಳಗಳಿಗೆ ತಲುಪಲು ದೂರದ ಪ್ರಯಾಣವನ್ನು ತಡೆಯಲು ಮಕ್ಕಳಿಗೆ ಮತ್ತು ನಾಗರೀಕರಿಗೆ ಸೂಕ್ತವಾದ ರಕ್ಷಣೆಯನ್ನು ನೀಡಬೇಕಾಗಿರುವ ಕುರಿತು ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡಲಾಗಿದೆ ಹಾಗೂ ಈ ಬಗ್ಗೆ ಸಮಿತಿ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿರುವುದಕ್ಕೆ ಸಂಸದರು ಕೇಂದ್ರ ಗ್ರಾಮೀಣಾಭಿವೃದ್ದಿ & ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಯಾದವ್ ಅವರಿಗೆ ಅಭಿನಂದಿಸಿದ್ದಾರೆ.

ಮೊಬೈಲ್ ಸಂದೇಶವನ್ನ ನಂಬಿ ಮೋಸ ಹೋದ ಕೃಷಿಕ

0

ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ತಡಗಳಲೆ ಗ್ರಾಮದ ಮಲ್ಲೇಶ್‌ರಿಗೆ ವ್ಯಾಪಾರ ಮಾಡಲು ಸಬ್ಸಿಡಿ ದರದಲ್ಲಿ ಸಾಲ ಕೊಡುವುದಾಗಿ ವಂಚಿಸಿದ ಪ್ರಕರಣ ಸಾಗರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

ಮಲ್ಲೇಶ್ ಎಂಬುವವರ ಮೊಬೈಲ್‌ಗೆ ಶೇ. 50 ರ ಸಬ್ಸಿಡಿ ದರದಲ್ಲಿ ವ್ಯಾಪಾರಕ್ಕೆ ಸಾಲ ಕೊಡುವುದಾಗಿ ಸಂದೇಶ ಬಂದಿತ್ತು.

ಈ ಸಂದೇಶ ಗಮನಿಸಿದ ಕೃಷಿಕ ಸಂದೇಶ ಕಳುಹಿಸಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಸಬ್ಸಿಡಿ ಬೇಕಾದಲ್ಲಿ ರಿಜಿಸ್ಟರ್ ಮಾಡಬೇಕು. ಇದಕ್ಕಾಗಿ 7,200 ರೂ. ಹಣ ಕಟ್ಟಬೇಕೆಂದಿದ್ದಾರೆ.
ಕೃಷಿಕ ಪೋನ್ ಪೇ ಮೂಲಕ ಹಣ ಪಾವತಿಸಿದ್ದಾರೆ. ಮತ್ತೆ ಕರೆ ಮಾಡಿ ತೆರಿಗೆ ಬಾಬತ್ತು ಎಂದು 22,600 ರೂ. ಪಡೆದಿದ್ದಾರೆ.

ಅಂತಿಮವಾಗಿ ಆರ್‌ಬಿಐ ತೆರಿಗೆಯನ್ನೂ ನೀವು ಕಟ್ಟಬೇಕಾಗುತ್ತದೆ ಎಂದು ಹೇಳಿಕೊಂಡು 30,700 ರೂ. ಹಣ ಪಾವತಿಸಿಕೊಂಡಿದ್ದಾರೆ. ಒಟ್ಟು 60,500 ರೂ. ಹಣ ಪಡೆದುಕೊಂಡ ವ್ಯಕ್ತಿ ನಂತರ ಕರೆ ಸ್ವೀಕರಿಸದೆ ಇರುವುದರಿಂದ ಕೃಷಿಕ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಾಶಿಯಾತ್ರಿಕರ ಸುರಕ್ಷಿತ ವಾಪಸಾತಿ: ರಾಜ್ಯ ಸರ್ಕಾರದ ಸ್ತುತ್ಯರ್ಹ ಕ್ರಮ

0

ಉತ್ತರ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ತೆರಳಿದ್ದ ವೇಳೆ ಅಗ್ನಿಪಥ್‌ ವಿರುದ್ಧದ ಹೋರಾಟ ಹಿಂಸಾತ್ಮಕ ಸ್ವರೂಪ ಪಡೆದ ಪರಿಣಾಮ ದಿಕ್ಕೆಟ್ಟಿದ್ದ 164 ಮಂದಿ ರಾಜ್ಯದ ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸು ಕರೆತರಲಾಗಿದೆ.

ರಾಮನಗರ ಮಂಡ್ಯ, ಸೇರಿದಂತೆ ವಿವಿಧ ಜಿಲ್ಲೆಗಳ 164 ಮಂದಿ, ಬೆಂಗಳೂರಿನ ಮಹಾಲಕ್ಷ್ಮೇ ಬಡಾವಣೆಯಲ್ಲಿರುವ ಸಚಿವ ಕೆ. ಗೋಪಾಲಯ್ಯ ಕಚೇರಿಗೆ ಆಗಮಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಗೋಪಾಲಯ್ಯ ಅವರು ಪ್ರವಾಸಿಗರ ಯೋಗಕ್ಷೇಮ ವಿಚಾರಿಸಿ ಬಸ್ಸು ವ್ಯವಸ್ಥೆ ಮಾಡಿ ಮನೆಗಳಿಗೆ ಕಳುಹಿಸಿಕೊಟ್ಟರು.
ಪ್ರವಾಸಿಗರು ಕಾಶಿಗೆ ತೆರಳಿದ್ದ ವೇಳೆ ಆ ಭಾಗದಲ್ಲಿ ಅಗ್ನಿಪಥ್‌ ವಿರುದ್ಧದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿತ್ತು. ಹೀಗಾಗಿ ತಮ್ಮನ್ನು ಸುರಕ್ಷಿತವಾಗಿ ಕರೆ ತರುವಂತೆ ಪ್ರವಾಸಿಗರು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರಿಗೆ ಮನವಿ ಮಾಡಿದ್ದರು ಎಂದು ತಿಳಿದುಬಂದಿದೆ.

ಗೋಪಾಲಯ್ಯ ಅವರು ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ ಮೂರು ಪ್ರತ್ಯೇಕ ಬಸ್ಸುಗಳ ವ್ಯವಸ್ಥೆ ಮಾಡಿ ವಾಪಸು ಕರೆತಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗೋಪಾಲಯ್ಯ, ಪ್ರತಿಭಟನಾಕಾರರು ರೈಲುಗಳಿಗೆ ಬೆಂಕಿ ಹಚ್ಚುತ್ತಿದ್ದರಿಂದ ಪ್ರವಾಸಿಗರು ಅಲ್ಲಿಂದ ವಾಪಸು ಬರಲು ಆಗಿರಲಿಲ್ಲ. ಇವರೆಲ್ಲರೂ ರೈಲು ಪ್ರಯಾಣಕ್ಕಾಗಿ ತಲಾ 800 ರು. ಟಿಕೆಟ್‌ ಬುಕ್‌ ಮಾಡಿದ್ದರು. ಆದರೆ ಅನಿರೀಕ್ಷಿತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಹಾಯ ಕೋರಿದ್ದರಿಂದ ಕೂಡಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು ಎಂದು ಹೇಳಿದರು.

ಖಾಸಗಿ ಅನುದಾನ ರಹಿತ ಇಂಜಿನಿಯರಿಂಗ್ ಕಾಲೇಜು ಶುಲ್ಕ ಶೇ10 ಏರಿಕೆ

0

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶ ಶುಲ್ಕವನ್ನು ಶೇಕಡ ಹತ್ತರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಶೇ. 10ರಷ್ಟು ಶುಲ್ಕ ಹೆಚ್ಚಳಕ್ಕೆ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ನಿಗದಿ ಸಮಿತಿ ಶಿಫಾರಸು ಮಾಡಿತ್ತು. ಅದನ್ನು ಅಂಗೀಕರಿಸಿ ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಲಾಗಿದೆ. ನಿಗದಿತ ಶುಲ್ಕ ಹೊರತಾಗಿ ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಹಣ ಸಂಗ್ರಹಿಸಿದಂತೆ ಖಾಸಗಿ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಲಾಗಿದೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ ನಾರಾಯಣ ಅವರು ತಿಳಿಸಿದ್ದಾರೆ.

ಸಾಮಾನ್ಯ ವರ್ಗಕ್ಕೆ ಸೇರಿದ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇ.45ರಷ್ಟು ಸೀಟುಗಳನ್ನು ಕಡಿಮೆ ದರದ ಶುಲ್ಕದಲ್ಲಿ ನೀಡಲಾಗುತ್ತದೆ. ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಶೇ.40ರಷ್ಟು ಸೀಟುಗಳನ್ನು ಕಡಿಮೆ ದರದ ಶುಲ್ಕದಲ್ಲಿ ಹಾಗೂ ತಲಾ ಶೇ. ಮೂವತ್ತರಷ್ಟು ಸೀಟುಗಳನ್ನು ಹೆಚ್ಚಿನ ದರದ ಶಿಲ್ಪದಲ್ಲಿ ಮತ್ತು ಅನಿವಾಸಿ ಭಾರತೀಯ ಹಾಗೂ ಆಡಳಿತ ಮಂಡಳಿ ಕೋಟಾದಡಿ ನೀಡಬಹುದು ಎಂದು ಹೇಳಿದರು.

ಅನಾರೋಗ್ಯ ನಿಮಿತ್ತ ಹಲವಾರು ವಾರ ಇಡಿ ಮುಂದೆ ಹಾಜರಾತಿ ಅಸಾಧ್ಯ

0

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಇಡಿ (ಜಾರಿ ನಿರ್ದೇಶನಾಲಯ) ಸೋನಿಯಾಗೆ ಸೂಚಿಸಿದೆ.

ಆದರೆ ಅನಾರೋಗ್ಯದ ಕಾರಣದಿಂದ ಸೋನಿಯಾ ಹಾಜರಾಗುತ್ತಿಲ್ಲ ಎಂದು ವರದಿ ತಿಳಿಸಿದೆ.

ಯಂಗ್ ಇಂಡಿಯಾ ಪ್ರೈವೆಟ್ ಕಂಪನಿಯಲ್ಲೂ ಸೋನಿಯಾ ಶೇ 38 ರಷ್ಟು ಶೇರು ಹೊಂದಿದ್ದಾರೆ. ಪ್ರಕರಣದ ವಿಚಾರಣೆಗಾಗಿ ಈ ಹಿಂದೆ ಜೂನ್ 8 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿತ್ತು. ಆದರೆ ಕೋವಿಡ್ ಕಾರಣ ನೀಡಿ 23 ಜೂನ್ ಗೆ ವಿಚಾರಣೆಗೆ ಹಾಜರಾಗುವ ಬಗ್ಗೆ ತಿಳಿಸಲಾಗಿತ್ತು. ಆದರೆ ಮತ್ತೆ ಅನಾರೋಗ್ಯದ ಕಾರಣ ನೀಡುರುವ ಸೋನಿಯಾ ಗಾಂಧಿ ಇಂದು ಸಹ ವಿಚಾರಣೆಗೆ ಗೈರಾಗುತ್ತಿದ್ದಾರೆ.

ಮುಂದಿನ ಹಲವು ವಾರ ವಿಚಾರಣೆಗೆ ಹಾಜರಾಗಲು ಸಾದ್ಯವಿಲ್ಲ ಎಂದು ಇಡಿಗೆ ಸೋನಿಯಾ ಗಾಂಧಿ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಕೋವಿಡ್ ಪಾಸಿಟಿವ್ ಆದ ಕಾರಣ ಸೋನಿಯಾ ಗಾಂಧಿ ಜೂನ್ 2ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 12ರ ವರೆಗೆ ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಸದ್ಯ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸೋನಿಯಾ ಪುತ್ರ ರಾಹುಲ್ ಗಾಂಧಿ ಅವರನ್ನು ಹಲವು ದಿನ ವಿಚಾರಣೆ ನಡೆಸಿದ್ದಾರೆ.

ರಕ್ಷಿತ್ ಸಿನಿಮಾ ಮೆಚ್ಚಿದ ಸೂಪರ್ ಸ್ಟಾರ್ ರಜನಿಕಾಂತ್

0

ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಚಾರ್ಲಿ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಪರಭಾಷೆಯ ಗಣ್ಯರು ಚಾರ್ಲಿಯನ್ನು ಮೆಚ್ಚಿಕೊಂಡಿದ್ದಾರೆ. ಧರ್ಮ ಮತ್ತು ಚಾರ್ಲಿಯ ಭಾವನಾತ್ಮಕ ಕಥೆಗೆ ಪ್ರತಿಯೊಬ್ಬರಿಗೂ ಇಷ್ಟವಾಗಿದೆ.
ಈಗಾಗ್ಲೆ 777 ಚಾರ್ಲಿ ಸಿನಿಮಾವನ್ನ ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಸಾಕಷ್ಟು ಮಂದಿ ವೀಕ್ಷಿಸಿದ್ದು ಮೆಚ್ಚುಗೆ ಸೂಚಿಸಿದ್ದಾರೆ.ಈ ಸಿನಿಮಾಗೆ ಎಲ್ಲಾ ಕಡೆಯಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

ಈ ಬಗ್ಗೆ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 777 ಚಾರ್ಲಿ ವೀಕ್ಷಿಸಿದ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ರಕ್ಷಿತ್ ಶೆಟ್ಟಿಗೆ ಕರೆ ಮಾಡಿದ್ದು, ಸಿನಿಮಾದ ಬಗ್ಗೆ ಹಾಡಿಹೊಗಳಿದ್ದಾರೆ.
‘ಇವತ್ತಿನ ದಿನದ ಆರಂಭ ಅದ್ಭುತವಾಗಿತ್ತು. ರಜಿನಿಕಾಂತ್ ಅವರಿಂದ ಫೋನ್ ಬಂದಿತ್ತು. ನಿನ್ನೆ ರಾತ್ರಿ ರಜನಿಕಾಂತ್ 777 ಚಾರ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾದ ಅದ್ಭುತ ಮೆಕಿಂಗ್ ಗುಣಮಟ್ಟದ ಬಗ್ಗೆ, ಸಿನಿಮಾದ ಆಳವಾದ ವೀನ್ಯಾಸದ ಬಗ್ಗೆ ಹೆಚ್ಚು ಮಾತನಾಡಿದರು. ಮತ್ತು ಕ್ಲೈಮ್ಯಾಕ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಆಧ್ಯಾತ್ಮಿಕ ಮಾತಿನ ಮೂಲಕ ಮುಗಿಸಿದರು. ಅಂತಹ ಮಾತುಗಳನ್ನು ಸೂಪರ್ ಸ್ಟಾರ್ ಅವರಿಂದನೇ ಕೇಳುವುದು ಅದ್ಭುತವಾಗಿತ್ತು. ಧನ್ಯವಾದಗಳು ರಜನಿ ಸರ್’ ಎಂದು ಟ್ವಿಟ್ಟರ್‌ನಲ್ಲಿ ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ ಟ್ವೀಟ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ಕೇಳಿ ಬಂದಿದೆ. ಇದಕ್ಕೂ ಮೊದಲು ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಸಿನಿಮಾವನ್ನು ವೀಕ್ಷಿಸಿದ್ದ ರಜನಿಕಾಂತ್ ಸಿನಿಮಾವನ್ನ ಹಾಡಿಹೊಗಳಿದ್ದರು.