ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ತಡಗಳಲೆ ಗ್ರಾಮದ ಮಲ್ಲೇಶ್‌ರಿಗೆ ವ್ಯಾಪಾರ ಮಾಡಲು ಸಬ್ಸಿಡಿ ದರದಲ್ಲಿ ಸಾಲ ಕೊಡುವುದಾಗಿ ವಂಚಿಸಿದ ಪ್ರಕರಣ ಸಾಗರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ಮಲ್ಲೇಶ್ ಎಂಬುವವರ ಮೊಬೈಲ್‌ಗೆ ಶೇ. 50 ರ ಸಬ್ಸಿಡಿ ದರದಲ್ಲಿ ವ್ಯಾಪಾರಕ್ಕೆ ಸಾಲ ಕೊಡುವುದಾಗಿ ಸಂದೇಶ ಬಂದಿತ್ತು.
ಈ ಸಂದೇಶ ಗಮನಿಸಿದ ಕೃಷಿಕ ಸಂದೇಶ ಕಳುಹಿಸಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಸಬ್ಸಿಡಿ ಬೇಕಾದಲ್ಲಿ ರಿಜಿಸ್ಟರ್ ಮಾಡಬೇಕು. ಇದಕ್ಕಾಗಿ 7,200 ರೂ. ಹಣ ಕಟ್ಟಬೇಕೆಂದಿದ್ದಾರೆ.
ಕೃಷಿಕ ಪೋನ್ ಪೇ ಮೂಲಕ ಹಣ ಪಾವತಿಸಿದ್ದಾರೆ. ಮತ್ತೆ ಕರೆ ಮಾಡಿ ತೆರಿಗೆ ಬಾಬತ್ತು ಎಂದು 22,600 ರೂ. ಪಡೆದಿದ್ದಾರೆ.
ಅಂತಿಮವಾಗಿ ಆರ್‌ಬಿಐ ತೆರಿಗೆಯನ್ನೂ ನೀವು ಕಟ್ಟಬೇಕಾಗುತ್ತದೆ ಎಂದು ಹೇಳಿಕೊಂಡು 30,700 ರೂ. ಹಣ ಪಾವತಿಸಿಕೊಂಡಿದ್ದಾರೆ. ಒಟ್ಟು 60,500 ರೂ. ಹಣ ಪಡೆದುಕೊಂಡ ವ್ಯಕ್ತಿ ನಂತರ ಕರೆ ಸ್ವೀಕರಿಸದೆ ಇರುವುದರಿಂದ ಕೃಷಿಕ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.