Thursday, March 12, 2026
Thursday, March 12, 2026
Home Blog Page 1521

ಯುವಜನತೆ ದುಶ್ಚಟಗಳಿಗೆ ದಾಸರಾಗದೇ ಪೋಷಕರಿಗೆ ಹೆಸರು ತರಬೇಕು- ಕವಿರಾಜ್

0

ಜೀವನ ತುಂಬಾ ಸುಂದರವಾಗಿದೆ. ಅದನ್ನು ಅನುಭವಿಸಲು ಉತ್ತಮ ಆರೋಗ್ಯ ಮತ್ತು ಅಭ್ಯಾಸಗಳು ಬೇಕು. ಈ ನಿಟ್ಟಿನಲ್ಲಿ ನಡೆದು ಸುಂದರ ಬದುಕನ್ನು ನಮ್ಮದಾಗಿಸಿಕೊಳ್ಳೋಣ ಎಂದು ಕನ್ನಡ ಚಲನಚಿತ್ರ ಸಾಹಿತಿ ಕವಿರಾಜ್ ಯಡೂರು ಯುವ ಸಮುದಾಯಕ್ಕೆ ಕರೆ ನೀಡಿದರು.

ಶಿವಮೊಗ್ಗ ಜಿಲ್ಲಾ ಪೊಲೀಸ್, ಕೌಶಲ್ಯಾಭಿವೃದ್ದಿ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿಶ್ವವಿದ್ಯಾಲಯ, ನೆಹರು ಯುವ ಕೇಂದ್ರ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಾದ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ಸಮಾಜ ಒಗ್ಗೂಡಿ ಎದುರಿಸಬಹುದಾದಂತಹ ಆಪತ್ತು ಮಾದಕ ವ್ಯಸನ. ಪ್ರಸ್ತುತ ಶೇ.30 ರಷ್ಟು ಯುವಜನತೆ ಮಾದಕ ವ್ಯಸನಕ್ಕೆ ತುತ್ತಾಗಿರುವ ಅಂಕಿಅಂಶ ಆಘಾತಕಾರಿಯಾಗಿದ್ದು, ಇದನ್ನು ತಡೆಯುವುದು ಅತ್ಯವಶ್ಯ. ಚಿಕಿತ್ಸೆಗಿಂತ ರೋಗ ಬಾರದಂತೆ ತಡೆಯುವುದು ಮುಖ್ಯ ಎಂಬಂತೆ ಯುವಜನತೆ ವಿವಿಧ ಮಾದಕ ದ್ರವ್ಯಗಳಿಗೆ ವ್ಯಸನಿಗಳಾಗದಂತೆ ಸಮುದಾಯದಲ್ಲಿ ಜಾಗೃತಿ ಹೆಚ್ಚಬೇಕು ಎಂದು ತಿಳಿಸಿದರು.

ಮಕ್ಕಳು ಅಥವಾ ಯುವ ಜನತೆ ಮಾಡುವ ಕೆಲಸಗಳು ಅವರ ತಂದೆ ತಾಯಿ, ಕುಟುಂಬಕ್ಕೆ ಒಳ್ಳೆಯ ಅಥವಾ ಕೆಟ್ಟ ಹೆಸರನ್ನು ತಂದು ಕೊಡುತ್ತದೆ. ಮೊದಲಿಗೆ ಮಾದಕ ಚಟಗಳು ಸ್ವರ್ಗದಂತೆ ಕಂಡರೂ ಹಂತ ಹಂತವಾಗಿ ವ್ಯಸನಿಯನ್ನು ಇದು ನರಕಕ್ಕೆ ತಳ್ಳುತ್ತದೆ. ಆದ್ದರಿಂದ ಯುವಜನತೆ ಯಾವುದೇ ದುಶ್ಚಟಗಳಿಗೆ ದಾಸರಾಗದೇ, ಜವಾಬ್ದಾರಿಯುತವಾಗಿ ನಡೆದುಕೊಂಡು ಪೋಷಕರಿಗೆ ಒಳ್ಳೆಯ ಹೆಸರನ್ನು ತರಬೇಕು. ಸಂಗೀತ, ಓದು, ಜ್ಞಾನ, ಗೆಳತನದಂತಹ ಉತ್ತಮ ಚಟಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಗೆಳೆಯರಲ್ಲಿ ಯಾರಾದರೂ ಒಬ್ಬರು ಸಿಗರೇಟ್, ಕುಡಿತ ಅಥವಾ ಗಾಂಜಾ ಇತರೆ ಡ್ರಗ್ಸ್‍ಗೆ ಒಳಗಾಗುತ್ತಿದ್ದಾರೆಂಬ ಸುಳಿವು ಸಿಕ್ಕಲ್ಲಿ ಅವರ ತಂದೆ, ತಾಯಿ ಅಥವಾ ಅವರ ಪ್ರಾಥಮಿಕ ಸಂಪರ್ಕಿತರಿಗೆ ತಿಳಿಸುವ ಮೂಲಕ ಗೆಳಯನ ಜೀವನ ಉಳಿಸಲು ಸಹಾಯ ಮಾಡಬೇಕು. ಜೀವನದಲ್ಲಿ ದೊಡ್ಡದಾಗಿ ಸಾಧಿಸಿದರೆ ಮಾತ್ರ ಸಾಧನೆಯಲ್ಲ. ಉತ್ತಮ ಜೀವನ ನಿರ್ವಹಣೆ ಕೂಡ ಒಂದು ದೊಡ್ಡ ಸಾಧನೆಯಾಗಿದ್ದು ಮಕ್ಕಳು ಯಾವುದೇ ದುಶ್ಚಟಕ್ಕೆ ಬಲಿಯಾಗದೇ ಬದುಕನ್ನು ಸುಂದರವಾಗಿಸಿಕೊಳ್ಳಬೇಕೆಂದರು.

ಮನೋವೈದ್ಯರಾದ ಡಾ.ಅರವಿಂದ್ ಎಸ್.ಟಿ ಮಾತನಾಡಿ, ಮಾದಕ ವ್ಯಸನ ಎಂದರೇನು, ಯಾವೆಲ್ಲ ರೀತಿಯ ಮಾದಕ ವಸ್ತುಗಳನ್ನು ವ್ಯಸನಕ್ಕೆ ಬಳಸಲಾಗುತ್ತಿದೆ, ಮಾದಕ ವಸ್ತುಗಳ ಬಳಕೆ ನಿಧಾನವಾಗಿ ಆರಂಭವಾಗಿ ನಂತರ ವ್ಯಸನವಾಗಿ ಹೇಗೆ ಪರಿವರ್ತನೆಯಾಗುತ್ತದೆ ಎಂದು ವಿವರಿಸಿದ ಅವರು ಮಾದಕ ವ್ಯಸನವನ್ನು ಒಂದೇ ಬಾರಿಗೆ ಬಿಡಿಸಲು ಬರುವುದಿಲ್ಲ. ಅದು ರೋಗಿಗೆ ಮಾರಕ ಕೂಡ. ಆದ್ದರಿಂದ ಸರಿಯಾದ ಮನೋವೈದ್ಯಕೀಯ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯಿಂದ ವ್ಯಸನಮುಕ್ತಗೊಳಿಸಬಹುದು. ವ್ಯಸನ ಬಿಟ್ಟ ನಂತರ ಕೂಡ ಅನುಸರಣೆ ತುಂಬಾ ಮುಖ್ಯವಾಗುತ್ತದೆ. ವ್ಯಸನಿಗಳಿಗೆ ಮಾನಸಿಕ ಚಿಕಿತ್ಸೆಯ ಅಗತ್ಯ ತುಂಬಾ ಇದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಡಿ-ಅಡಿಕ್ಷನ್ ಚಿಕಿತ್ಸೆ ಲಭ್ಯವಿರುವ ಬಗ್ಗೆ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀಪ್ರಸಾದ್ ಬಿ.ಎಂ ಮಾತನಾಡಿ, ಯುವಪೀಳಿಗೆಯನ್ನು ಅತಿ ವೇಗವಾಗಿ ಸೆಳೆಯುತ್ತಿರುವ ಸಮಸ್ಯೆಗಳಲ್ಲಿ ಮಾದಕ ವ್ಯಸನ ಪ್ರಮುಖವಾಗಿದ್ದು, ಇದರ ದುಷ್ಪರಿಣಾಮವನ್ನು ಎಲ್ಲರೂ ಅರಿಯಬೇಕೆಂದು ಒಂದು ಕಥೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಮಾದಕ ವ್ಯಸನದ ದುಷ್ಪರಿಣಾಮದಿಂದ ವಸ್ಯನಿ ಮಾತ್ರವಲ್ಲದೆ ಅವರ ತಂದೆ ತಾಯಿ, ಕುಟುಂಬ ಸೇರಿದಂತೆ ಇಡೀ ಸಮುದಾಯವೇ ನೋವು ಅನುಭವಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು, ಯುವಜನತೆ ಇದರಿಂದ ದೂರವಿರಬೇಕು. ಗೆಳೆಯರು ಮಾದಕ ವಸ್ತುಗಳ ಬಳಕೆ ಮಾಡುವಂತೆ ಹೇಳಿದರೆ, ಒತ್ತಾಯಿಸಿದರೆ ದೃಢವಾಗಿ ಅಲ್ಲಗಳೆಯಬೇಕು. ಗೆಳೆಯರು ಕೂಡ ತಮ್ಮಲ್ಲಿ ಯಾರಾದರೊಬ್ಬರು ಮಾದಕ ವ್ಯಸನಕ್ಕೆ ತುತ್ತಾಗುವುದು ಕಂಡು ಬಂದಲ್ಲಿ ದೊಡ್ಡವರಿಗೆ ತಿಳಿಸಬೇಕು. ಯುವಜನತೆಯೇ ಸಂದೇಶಕಾರರಾಗಿ ಉತ್ತಮ ಸಂದೇಶವನ್ನು ನೀಡಬೇಕು. ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿ ಮಾದಕ ವ್ಯಸನ ತಡೆಯುವ ನಿಟ್ಟಿನಲ್ಲಿ ಮಾದಕ ವ್ಯಸಕ ಕುರಿತು ಜಾಗೃತಿ ಮೂಡಿಸಲು 100 ಜನ ಯುವ ಸ್ವಯಂಸೇವಕರ ತಂಡ ಸಿದ್ದವಾಗಿದೆ. ಈ ತಂಡಕ್ಕೆ ಇಂದು ಚಾಲನೆ ನೀಡಲಾಗುವುದು. ಹಾಗೂ ಅವರಿಗೆ ತರಬೇತಿ ಸಹ ನೀಡಲಾಗುವುದು. ಆಸಕ್ತಿ ಇರುವ ಸ್ವಯಂ ಸೇವಕರು ಈ ತಂಡಕ್ಕೆ ಸೇರಬಹುದು ಎಂದು ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರೇಖಾ ಗಿರೀಶ್ ಮಾತನಾಡಿ, ಹೆಣ್ಣುಮಕ್ಕಳು ಸುರಕ್ಷಿತವಾಗಿ ಇರುವ ಬಗ್ಗೆ, ಸುರಕ್ಷಿತ ಮೊಬೈಲ್ ಬಳಕೆ ಹಾಗೂ ಮಕ್ಕಳ ಸಹಾಯವಾಣಿ ಸಂಖ್ಯೆ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಾದಕ ವ್ಯಸನ ತಡೆ ಕುರಿತಾದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಹಾಗೂ ತಾಲ್ಲೂಕು ಮಟ್ಟದಲ್ಲಿ ಮಾದಕ ವ್ಯಸನ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕುವೆಂಪು ವಿವಿ ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋಜಕ ಡಾ.ನಾಗರಾಜ್ ಪರಿಸರ, ಕೌಶಲ್ಯಾಭಿವೃದ್ದಿ ಅಧಿಕಾರಿ ಹೆಚ್.ಎಂ.ಸುರೇಶ್, ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆಟಿಕೆ, ಅಮೃತ್ ನೋನಿ ಆಯುರ್ವೇದಿಕ್ ಔಷಧಿ ವಿತರಕ ಡಾ.ಶ್ರೀನಿವಾಸ್, ವಿದ್ಯಾರ್ಥಿಗಳು ಹಾಜರಿದ್ದರು. ಸಾಗರ ಉಪವಿಭಾಗದ ಡಿವೈಎಸ್‍ಪಿ ರೋಹನ್ ಜಗದೀಶ್ ಸ್ವಾಗತಿಸಿದರು, ಸಮನ್ವಯ ಕಾಶಿ ನಿರೂಪಿಸಿದರು

ದಾವಣಗೆರೆ ಜಿಲ್ಲೆ ಹೆದ್ದಾರಿಯ ಸರ್ವೀಸ್ರಸ್ತೆ ಕಾಮಗಾರಿ ಪೂರ್ಣಗೊಳಿಸಿ-ಸಿದ್ಧೇಶ್ವರ

0

ಹೆದ್ದಾರಿಗೆ ಹೊಂದಿಕೊಂಡಿರುವ ಎಲ್ಲಾ ಸರ್ವಿಸ್ ರಸ್ತೆಗಳನ್ನು ಕಳೆದ ಅಕ್ಟೋಬರ್ ನಲ್ಲೆ ಪೂರ್ಣಗೊಳಿಸಲು ಕಾಲಮಿತಿ ಇದ್ದರೂ ಪೂರ್ಣಗೊಳ್ಳದ ಕಾರಣ ಇದರಿಂದ ಅಪಘಾತಗಳು ಸಂಭವಿಸಬಹುದಾಗಿದೆ. ಅಪಘಾತಗಳನ್ನು ತಡೆಗಟ್ಟಲು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಎಲ್ಲಾ ಸರ್ವಿಸ್ ರಸ್ತೆಗಳನ್ನು ಪೂರ್ಣಗೊಳಿಸಬೆಕೆಂದು ಸಂಸದ ಡಾ. ಜಿ.ಎಂ ಸಿದ್ದೇಶ್ವರ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.

ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿಯ ಎಲ್ಲಾ ಸರ್ವಿಸ್‍ರಸ್ತೆಗಳು 2021ರ ಅಕ್ಟೋಬರ್‍ನಲ್ಲಿ ಮುಗಿಸಬೇಕೆಂದು ಗಡುವು ವಿಧಿಸಲಾಗಿತ್ತು. ಆದರೆ ನಾಲ್ಕು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ತಮ್ಮ ಅಸಮಧಾನ ವ್ಯಕ್ತ ಪಡಿಸಿದ ಸಂಸದರು ಅಧಿಕಾರಿಗಳು ಬೆಂಗಳೂರಲ್ಲಿ ಕೂತು ಎಲ್ಲದಕ್ಕೂ ಸರಿ ಅನ್ನುತ್ತೀರಾ, ಕಾಮಗಾರಿ ನಡೆಯುವ ಸ್ಥಳಕ್ಕೆ ಬಂದು ವೀಕ್ಷಣೆ ಮಾಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ, ಬನಶಂಕರಿ ಬಡಾವಣೆ ಹತ್ತಿರ ಅಂಡರ್ ಪಾಸ್, ಹದಡಿ ಬ್ರಿಡ್ಜ್ ಹತ್ತಿರ ಸರ್ಕಲ್ ನಿರ್ಮಾಣವನ್ನು ಎಷ್ಟು ದಿನಗಳಲ್ಲಿ ಪೂರ್ಣಗೊಳಿಸುತ್ತೀರಿ ಎಂದು ಎನ್.ಹೆಚ್.ಎ.ಐ ಅಧಿಕಾರಿಗಳನ್ನು ಕೇಳಿದರು. ಎನ್.ಹೆಚ್.ಎ.ಐ ಅಧಿಕಾರಿ ಪ್ರತಿಕ್ರಿಯಿಸಿ ನಕ್ಷೆಯನ್ನು ಸಿದ್ಧಪಡಿಸಿ ಒಂದು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸುತ್ತೇವೆಂದು ತಿಳಿಸಿದರು
ದಾವಣಗೆರೆ ನಗರಕ್ಕೆ ಚಿತ್ರದುರ್ಗ ಕಡೆಯಿಂದ ಬರುವಾಗ ಮುಖ್ಯ ಪ್ರವೇಶದ್ವಾರ ನಿರ್ಮಾಣ, ತುಂಗಭದ್ರಾ ಬಡಾವಣೆ ಹತ್ತಿರ ಸರ್ವಿಸ್ ರಸ್ತೆ ನಿರ್ಮಾಣ, ಮಲ್ಲಶೆಟ್ಟಿಹಳ್ಳಿ ಬಳಿ ಪಾದಾಚಾರಿ ಕೆಳಸೇತುವೆ ನಿರ್ಮಾಣ, ಶಾಮನೂರು ಹತ್ತಿರ ಸರ್ವಿಸ್ ರಸ್ತೆ, ಲಕ್ಕಮುತ್ತೇನಹಳ್ಳಿ ಮತ್ತು ನಿರ್ಥಡಿ ಹತ್ತಿರ ಮೇಲ್ಸೇತುವೆ ನಿರ್ಮಾಣದ ಬಗ್ಗೆ ಚರ್ಚಿಸಿದರು.

ನಗರದ ವಿದ್ಯಾನಗರ ಬಳಿ ಸರ್ವಿಸ್ ರಸ್ತೆಯಲ್ಲಿ ಹೈಟೆನ್ಷನ್ ವಿದ್ಯುತ್ ಲೈನ್‍ಗಳು ಇದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿರುವುದರಿಂದ ಅವುಗಳನ್ನು ಶಿಫ್ಟ್ ಮಾಡಲು ಅಗತ್ಯ ಕ್ರಮವಹಿಸುವಂತೆ ಸಂಸದರು ಸೂಚಿಸಿದರು.

ಎನ್.ಹೆಚ್.ಎ.ಐ. ಅಧಿಕಾರಿ ಪ್ರತಿಕ್ರಿಯಿಸಿ ಸರ್ವಿಸ್ ರಸ್ತೆಯಲ್ಲಿರುವ ಹೈಟೆನ್ಷನ್ ವಿದ್ಯುತ್ ಲೈನ್ ಸ್ಥಳಾಂತರಿಸಲು ಅಗತ್ಯ ಕ್ರಮವಹಿಸಲಾಗುವುದೆಂದು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೆಶ್ ಬೀಳಗಿ ಮಾತನಾಡಿ, ಮಲ್ಲಶೆಟ್ಟಿಹಳ್ಳಿ ಮತ್ತು ಕಲ್ಪನಹಳ್ಳಿ ಹತ್ತಿರ ಸರ್ವಿಸ್ ರಸ್ತೆ ಎನ್.ಹೆಚ್.ಎ.ಐ ಯುಟಿಲಿಟಿ ಕಾರಿಡಾರ್ ನಲ್ಲಿ ಪೈಪ್ ಲೈನ್‍ಗಳಲ್ಲಿ ಅಳವಡಿಸುವ ಅಗತ್ಯವಿದ್ದು ಇದಕ್ಕೆ ಎನ್.ಹೆಚ್.ಎ.ಐ. ಪ್ರಾಧಿಕಾರದವರು ಅನುಮತಿ ನೀಡಬೇಕೆಂದು ತಿಳಿಸಿದರು. ಎನ್.ಹೆಚ್.ಎ.ಐ. ಅಧಿಕಾರಿಗಳು ಈಗಾಗಲೇ ಪೈಪ್‍ಗಳನ್ನು ಆಳವಡಿಸಲಾಗಿರುತ್ತದೆ. ಆದರೆ ಯುಟಿಲಿಟಿ ಕಾರಿಡಾರ್‍ನಲ್ಲಿ ಜಾಗ ಇರುವುದಿಲ್ಲ ಎಂದು ಸಭೆಗೆ ತಿಳಿಸಿದರು,
ಎನ್.ಹೆಚ್.ಎ.ಐ ಯೋಜನಾ ಅನುಷ್ಠಾನ ಘಟಕದ ಯೋಜನಾ ನಿರ್ದೇಶಕ ಶ್ರಿನಿವಾಸಲು ನಾಯ್ಡು ಮಾತನಾಡಿ, ಅಕ್ಟೋಬರ್‍ನಲ್ಲಿ ಕಾಮಗಾರಿಯನ್ನು ಶುರುಮಾಡಿ ನಂತರ ಒಂದು ವರ್ಷದಲ್ಲಿ ಕಾಮಗಾರಿಗಳನ್ನು ಮುಗಿಸಲಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಶೇ40 ಕಮೀಷನ್ ಆರೋಪ: ಕೆಂಪಣ್ಣ ಅವರಿಂದ ವರದಿ ಕೋರಿದ ಪಿಎಂ ಆಫೀಸ್

0

40 %ಕಮಿಷನ್ ಆರೋಪದ ಕುರಿತು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಪಿಎಂ ಕಾರ್ಯಾಲಯದಿಂದ ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಿದೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ರಾಜ್ಯದಲ್ಲಿ ಪ್ರತಿ ಗುತ್ತಿಗೆ ಕಾಮಗಾರಿಗೆ 40 % ಕಮಿಷನ್ ನೀಡಬೇಕು. ಇದರಿಂದ ಗುಣಮಟ್ಟದ ಕಾಮಗಾರಿ ಮಾಡಲು ಆಗುತ್ತಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಪ್ರಧಾನಿ ಕಾರ್ಯಾಲಯದಿಂದ ಕರೆ ಬಂದಿದ್ದು, 40 %ಕಮಿಷನ್ ಕುರಿತು ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಿದೆ. ಈ ಮೂಲಕ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ 40 % ಕಮಿಷನ್ ವಿಚಾರ ಮತ್ತೊಮ್ಮೆ ಸುದ್ದಿಯಲ್ಲಿದೆ.

ವಿದ್ಯುತ್ ದರ ಏರಿಸಿ ರಾಜ್ಯದ ಜನತೆಗೆ ಶಾಕ್ ನೀಡಿದ ಸರ್ಕಾರ?

0

ದಿನಸಿ, ತರಕಾರಿ, ಅಡುಗೆ ಎಣ್ಣೆ, ಗ್ಯಾಸ್ , ಅಕ್ಕಿ , ಪೆಟ್ರೋಲ್, ಡೀಸೆಲ್, ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಜುಲೈ 1 ರಿಂದ ಮತ್ತೊಂದು ಹೊಡೆತ ಬೀಳಲಿದೆ.
ಜುಲೈ 1 ರಿಂದ ಪ್ರತಿ ತಿಂಗಳ ವಿದ್ಯುತ್ ದರ ಮತ್ತಷ್ಟು ಏರಿಕೆಯಾಗಲಿದೆ.

ಮಾಸಿಕ 100 ಯೂನಿಟ್ ವಿದ್ಯುತ್ ಬಳಸುವ ಗ್ರಾಹಕರು ಹೆಚ್ಚುವರಿಯಾಗಿ 19 ರಿಂದ 31 ರೂಪಾಯಿ ಪಾವತಿಸಬೇಕಿದೆ. ವಿದ್ಯುತ್ ವಿತರಣಾ ಕಂಪನಿಗಳ ಮೇಲೆ ಈ ದರ ಪರಿಷ್ಕರಣೆ ಅವಲಂಬಿತವಾಗಿರುತ್ತದೆ.
ಕಲ್ಲಿದ್ದಲು ದರ ಏರಿಕೆಯಾಗಿದ್ದು, ಇದರ ವೆಚ್ಚವನ್ನು ಗ್ರಾಹಕರಿಂದ ಭರಿಸಲು ಅವಕಾಶ ಕಲ್ಪಿಸುವಂತೆ ಎಸ್ಕಾಂಗಳಿಂದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ಪ್ರತಿ ಯೂನಿಟ್ ಗೆ 38 ರಿಂದ 55 ರೂಪಾಯಿ ವಸೂಲಿ ಮಾಡಲು ಎಸ್ಕಾಂಗಳು ಕೋರಿವೆ.
ಈ ಪ್ರಸ್ತಾವನೆಗೆ ವಿದ್ಯುತ್ ನಿಯಂತ್ರಣ ಆಯೋಗ ಅನುಮೋದನೆ ನೀಡಿದ್ದರೂ, ಎಸ್ಕಾಂಗಳು ನಿಗದಿಪಡಿಸಿದ್ದ ದುಬಾರಿ ದರ ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಗ್ರಾಹಕರಿಗೆ ದುಬಾರಿ ದರದಿಂದ ಹೊರೆಯಾಗುವ ಕಾರಣಕ್ಕೆ ಎಸ್ಕಾಂಗಳು ನಿಗದಿಪಡಿಸಿದ ದರ ಕಡಿತಗೊಳಿಸಲಾಗಿದೆ.
2022ರ ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಆರು ತಿಂಗಳ ಅವಧಿಗೆ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ವಸೂಲು ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಜುಲೈ 1 ರಿಂದ ಪ್ರತಿ ತಿಂಗಳ ವಿದ್ಯುತ್ ದರ ಮತ್ತಷ್ಟು ಹೆಚ್ಚಳವಾಗಲಿದೆ.
ಕಲ್ಲಿದ್ದಲು ಪೂರೈಕೆಯಲ್ಲಿ ಸಮಸ್ಯೆಯಾಗಿದ್ದರಿಂದ ಈ ಕ್ರಮ ಕೈಗೊಂಡಿದ್ದು, ಮತ್ತೆ ದರಗಳು ಯಥಾಸ್ಥಿತಿಗೆ ಬರಲಿವೆ ಎಂದು ಹೇಳಲಾಗಿದೆ.

ಜೋರ್ಡಾನ್ ಅಕಾಬಾ ಬಂದರಿನಲ್ಲಿ ವಿಷಾನಿಲ ಸ್ಫೋಟ

0

ಜೋರ್ಡಾನ್‌ನ ಅಕಾಬಾ ಬಂದರಿನಲ್ಲಿ ವಿಷಕಾರಿ ಅನಿಲ ಬಿಡುಗಡೆಯಾಗಿ ಸ್ಫೋಟದಿಂದ 13 ಜನ ಸಾವನ್ನಪ್ಪಿದ್ದು ಸುಮಾರು 250 ಜನರು ಅಸ್ವಸ್ಥರಾಗಿದ್ದಾರೆ.

ಕ್ಲೋರಿನ್ ಟ್ಯಾಂಕ್‌ಗಳನ್ನು ಹಡಗಿನಲ್ಲಿ ತುಂಬಿಸುತ್ತಿದ್ದ ಕ್ರೇನ್ ಒಂದನ್ನು ಬೀಳಿಸಿದ ಪರಿಣಾಮ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ.
ಸುಮಾರು 250 ಜನರು ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.

ಜೋರ್ಡಾನ್‌ನ ಬಂದರಿನ ಅಕಾಬಾದಲ್ಲಿ ಸುತ್ತಮುತ್ತಲಿನ ವಿಷಕಾರಿ ಹಳದಿ ಹೊಗೆ ಸ್ಫೋಟವನ್ನು ಪ್ರಚೋದಿಸಿತು. ಆರಂಭದ ತನಿಖೆಯಿಂದ ಇದನ್ನು ಅನಿಲ ಸೋರಿಕೆ ಎಂದು ಸಾರ್ವಜನಿಕ ಭದ್ರತಾ ನಿರ್ದೇಶನಾಲಯ ಹೇಳಿದೆ.

ಅಧಿಕಾರಿಗಳು ಗಾಯಗೊಂಡವರನ್ನು ಸ್ಥಳಾಂತರಿಸಿದ ನಂತರ ಪ್ರದೇಶವನ್ನು ಮುಚ್ಚಿದ್ದಾರೆ ಮತ್ತು ಪರಿಸ್ಥಿತಿಯನ್ನು ಪರಿಹರಿಸಲು ತಜ್ಞರನ್ನು ಕಳುಹಿಸಿದ್ದಾರೆ.

ಇದರೊಂದಿಗೆ ಒಟ್ಟು 251 ಮಂದಿ ಗಾಯಗೊಂಡಿದ್ದಾರೆ ಎಂದು ಸಾರ್ವಜನಿಕ ಭದ್ರತಾ ನಿರ್ದೇಶನಾಲಯ ತಿಳಿಸಿದೆ.
ಸ್ಥಳೀಯ ಆರೋಗ್ಯ ಅಧಿಕಾರಿ ಡಾ. ಜಮಾಲ್ ಒಬೇದತ್, ಅವರು ಸುತ್ತಲು ಪ್ರದೇಶದಲ್ಲಿ ಜನರನ್ನು ಸುರಕ್ಷಿತವಾಗಿರಿಸಲು ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚುವಂತೆ ಒತ್ತಾಯಿಸಿದ್ದರು ಎಂದು ತಿಳಿದುಬಂದಿದೆ.

ಡಿವಿಎಸ್ ಸಂಜೆಕಾಲೇಜಿನಲ್ಲಿ ಪದವಿ ಪ್ರವೇಶ ಆರಂಭ

0

ಶಿವಮೊಗ್ಗ ನಗರದ ಡಿವಿಎಸ್ ಸಂಜೆ ಕಾಲೇಜಿನಲ್ಲಿ ಪ್ರಸಕ್ತ 2022- 23ನೇ ಸಾಲಿನ ಬಿಎ ಪದವಿ ಪ್ರವೇಶ ಪ್ರಾರಂಭವಾಗಿದೆ. ವಿದ್ಯಾರ್ಥಿಗಳಿಗೆ, ಸರ್ಕಾರಿ ಉದ್ಯೋಗಿಗಳಿಗೆ, ಗೃಹಿಣಿಯರಿಗೆ, ಶಿಕ್ಷಕರಿಗೆ, ಖಾಸಗಿ ಉದ್ಯೋಗಸ್ಥರಿಗೆ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ.

1968ರಲ್ಲಿ ಆರಂಭ ವಾಗಿರುವ ಈ ಕಾಲೇಜು ಸುದೀರ್ಘ 52 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ನ್ಯಾಕ್‌ನಿಂದ ಬಿ ಶ್ರೇಣಿ ಮಾನ್ಯತೆ ಪಡೆದಿರುವ ಕುವೆಂಪು ವಿಶ್ವವಿದ್ಯಾಲಯದ ಏಕೈಕ ಅನುದಾನಿತ ಸಂಜೆ ಕಾಲೇಜು ಎನ್ನುವ ಹೆಗ್ಗಳಿಕೆ ಹೊಂದಿದೆ.

ಪಿಯುಸಿ, ಜೆಒಸಿ, ಐಟಿಐ, ಡಿಪ್ಲೊಮೊ ಅಥವಾ ಪ್ಯಾರ ಮೆಡಿಕಲ್ ಕೋರ್ಸ್ ತೇರ್ಗಡೆಹೊಂದಿದ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ. ಅನುಭವಿ ಹಾಗೂ ನುರಿತ ಉಪನ್ಯಾಸಕ ವೃಂದ, ಉತ್ತಮ ಗ್ರಂಥಾಲಯ, ಸುಸಜ್ಜಿತ ಸೆಮಿನಾರ್ ಹಾಲ್, ವಿದ್ಯಾರ್ಥಿ, ವಿದ್ಯಾರ್ಥಿನಿ ಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಇದೆ. ಎಸ್ಸಿ, ಎಸ್.ಟಿ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವ್ಯವಸ್ಥೆ, ಉಚಿತ ಕಂಪ್ಯೂಟರ್ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಮಾಹಿತಿ ಹಾಗೂ ಮಾರ್ಗದರ್ಶನ ಕಾರ್ಯಾಗಾರ ನಡೆಸಲಾಗುತ್ತದೆ.

ಆಸಕ್ತರು ವಿವರಗಳಿಗೆ ಪ್ರಾಂಶುಪಾಲ ಡಾ.ಎ.ಟಿ. ಪದ್ಮೇಗೌಡ, 91416 33477 ಸಂಪರ್ಕಿಸಬಹುದು.

ಶ್ರೀಲಂಕಾದಲ್ಲಿ ಇಂಧನ ಕೊರತೆ ಶಾಲೆಗಳು ಬಂದ್

0

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ಇನ್ನೂ ಚೇತರಿಸಿಕೊಂಡಿಲ್ಲ. ಕಳೆದ ಏಳು ದಶಕಗಳಲ್ಲೇ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ದ್ವೀಪ ರಾಷ್ಟ್ರದಲ್ಲಿ ಇಂಧನ ಕೊರತೆ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಪೆಟ್ರೋಲ್‌, ಡೀಸೆಲ್‌ ವಿತರಣೆಗಾಗಿ ಸೈನಿಕರು ಸಾರ್ವಜನಿಕರಿಗೆ ಟೋಕನ್‌ಗಳನ್ನು ಹಸ್ತಾಂತರಿಸಿದ್ದಾರೆ.
ಇನ್ನೊಂದೆಡೆ ಇಂಧನ ಕೊರತೆ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಶಾಲೆಗಳನ್ನು ಬಂದ್‌ ಮಾಡಲಾಗಿದೆ. ಎಲ್ಲರೂ ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸರ್ಕಾರ ಸೂಚನೆ ನೀಡಿದೆ.

ಶ್ರೀಲಂಕಾದಲ್ಲಿ ಸದ್ಯ ಕೇವಲ 9,000 ಟನ್ ಡೀಸೆಲ್ ಮತ್ತು 6,000 ಟನ್ ಪೆಟ್ರೋಲ್ ದಾಸ್ತಾನು ಇದೆ ಎಂದು ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನಾ ವಿಜೆಶೇಖರ ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ವರ್ಕ್‌ ಫ್ರಮ್‌ ಹೋಮ್‌ ಮಾಡುವಂತೆ ಸರ್ಕಾರವು ಉದ್ಯೋಗಿಗಳಿಗೆ ಸೂಚಿಸಿದೆ. ಕೊಲಂಬೊ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಲೆಗಳನ್ನು ಒಂದು ವಾರದವರೆಗೆ ಮುಚ್ಚಲಾಗಿದೆ.
ಕಳೆದೊಂದು ವಾರದಿಂದೀಚೆಗಂತೂ ಪೆಟ್ರೋಲ್‌ ಬಂಕ್‌ಗಳಲ್ಲಿ ಜನರ ಸರತಿ ಸಾಲು ಹೆಚ್ಚುತ್ತಲೇ ಇದೆ. ದಿನಗಟ್ಟಲೆ ಕಾದರೂ ಲೀಟರ್‌ ಪೆಟ್ರೋಲ್‌ ಸಿಗದೇ ಜನರು ಕಂಗೆಟ್ಟಿದ್ದಾರೆ ಎನ್ನಲಾಗಿದೆ.

ದ್ರೌಪದಿ ಮುರ್ಮು ಅವರ ಸ್ವಂತ ಗ್ರಾಮಕ್ಕೀಗ ವಿದ್ಯುತ್ ಭಾಗ್ಯ

0

ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಹುಟ್ಟಿದ ಊರು ಉಪರಬೇಡ ಗ್ರಾಮದ ಜನ ಕಡೆಗೂ ವಿದ್ಯುತ್ ಸಂಪರ್ಕದ ಭಾಗ್ಯ ಪಡೆದುಕೊಂಡಿದ್ದಾರೆ.

ದೇಶಕ್ಕೆ ಎನ್‍ಡಿಎಯಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಘೋಷಣೆ ಆಗುವವರೆಗೆ ಹಲವರು ಅವರ ಹೆಸರನ್ನು ಕೇಳಿರಲಿಲ್ಲ. ಇದೀಗ ದ್ರೌಪದಿ ಮುರ್ಮು ದೇಶಕ್ಕೆ ಪರಿಚಯವಾಗಿದ್ದಾರೆ. ಆದರೆ, ವಿಪರ್ಯಾಸವೆಂದರೆ ದ್ರೌಪದಿ ಮುರ್ಮು ಅವರ ಹುಟ್ಟೂರು ಒಡಿಸ್ಸಾದ ಮಾಯರ್ಭಾಂಜ್‌ ಜಿಲ್ಲೆಯ ಉಪರಬೇಡ ಗ್ರಾಮಕ್ಕೆ ಇಷ್ಟು ವರ್ಷಗಳ ವರೆಗೂ ವಿದ್ಯುತ್ ಸಂಪರ್ಕ ಮರೀಚಿಕೆಯಾಗಿತ್ತು. ಮಾಯರ್ಭಾಂಜ್‌ ಜಿಲ್ಲೆಯ ಕುಸುಮ್ ಬ್ಲಾಕ್‍ನ ಡುಂಗುರಿಶಾಹಿ ಗ್ರಾಮದಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ವಿದ್ಯುತ್ ಸಂಪರ್ಕ ಮಾತ್ರ ಇರಲಿಲ್ಲ.

ದ್ರೌಪದಿ ಮುರ್ಮು ಮಾಯರ್ಭಾಂಜ್‌ ಜಿಲ್ಲೆಯ ಉಪರಬೇಡ ಗ್ರಾಮದಲ್ಲಿ ಜನಿಸಿದರು. 3,500 ಜನಸಂಖ್ಯೆ ಹೊಂದಿರುವ ಈ ಹಳ್ಳಿಯಲ್ಲಿ ಎರಡು ಕುಗ್ರಾಮಗಳಿವೆ. ಬಡಾ ಶಾಹಿ ಮತ್ತು ಡುಂಗ್ರಿ ಶಾಹಿ. ಬಡಾ ಶಾಹಿಯಲ್ಲಿ ವಿದ್ಯುತ್ ಸಂಪರ್ಕ ಇದೆ. ಆದರೆ, ಡುಂಗ್ರಿ ಶಾಹಿ ಕತ್ತಲೆಯಲ್ಲಿ ಮುಳುಗಿತ್ತು. ಸೀಮೆಎಣ್ಣೆ ದೀಪದ ಮೂಲಕ ರಾತ್ರಿ ವೇಳೆ ಬೆಳಕನ್ನು ಉಪರಬೇಡ ಗ್ರಾಮದ ಜನ ಕಾಣುತ್ತಿದ್ದರು. ಇದೀಗ ದ್ರೌಪದಿ ಮುರ್ಮು ರಾಷ್ಟ್ರಪತಿ ಅಭ್ಯರ್ಥಿಯಾದ ನಂತರ ಹುಟ್ಟೂರಿಗೆ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ.

ಒಡಿಸ್ಸಾ ಸರ್ಕಾರ ಇಂದು ಮಾಯರ್ಭಾಂಜ್‌ ಜಿಲ್ಲೆಯ ಉಪರಬೇಡ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯವನ್ನು ಪ್ರಾರಂಭಿಸಿದೆ.

ಹಳ್ಳಿಯ ಜನರು ವಿದ್ಯುತ್ ಇಲ್ಲದೆ ವಾಸಿಸುತ್ತಿದ್ದಾರೆ ಎಂದು ಮಾಧ್ಯಮ ವರದಿ ನಂತರ ಇದೀಗ ಸರ್ಕಾರ ಎಚ್ಚೆತ್ತುಕೊಂಡಿದೆ.

ದ್ರೌಪದಿ ಮುರ್ಮು ಪ್ರಸ್ತುತ ಉಪರಬೇಡ ಗ್ರಾಮದಲ್ಲಿ ವಾಸಿಸುತ್ತಿಲ್ಲ. ಉಪರಬೇಡ ಡುಂಗುರಿಶಾಹಿಯಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಪಟ್ಟಣವಾದ ರೈರಂಗಪುರದಲ್ಲಿ ವಾಸಿಸುತ್ತಿದ್ದಾರೆ.

ದ್ರೌಪದಿ ಮುರ್ಮು ಅವರು ಒಡಿಸ್ಸಾದ ಮಾಯರ್ಭಾಂಜ್‌ ಜಿಲ್ಲೆಯವರಾಗಿದ್ದಾರೆ. ಬುಡಕಟ್ಟು ಜನಾಂಗ ಮೂಲದ ಮಹಿಳೆ. ಈ ಹಿಂದೆ ಬಿಜೆಪಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. 2015-21ರ ಅವಧಿಯಲ್ಲಿ ಜಾರ್ಖಂಡ್‍ನ ರಾಜ್ಯಪಾಲರಾಗಿದ್ದರು. ಇದೀಗ 16ನೇ ರಾಷ್ಟ್ರಪತಿ ಚುನಾವಣೆಯ ಎನ್‍ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಸಾಲ ಸ್ವೀಕಾರ ನಿರ್ವಹಣೆ ಮತ್ತು ಮರುಪಾವತಿ ಮುಖ್ಯಅಂಶಗಳು

0

ಸಾಲ ಪಡೆಯುವುದು, ನಿರ್ವಹಣೆ ಸಾಲ ಮರುಪಾವತಿ ಜವಾಬ್ದಾರಿ ಜೀವನ ವ್ಯವಸ್ಥೆಯ ಮುಖ್ಯ ಅಂಗ ಕಟ್ಟೇ ಸುದೀಂದ್ರ ಆಚಾರ್,
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ Loan Management in Business and Ratings ಎಂಬ ವಿಷಯವಾಗಿ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಉದ್ಘಾಟನೆಯನ್ನು ಪ್ರಖ್ಯಾತ ಅನುಭವಿ ಎಂ.ಎಸ್.ಎ.ಇ ಮತ್ತು ವೈಯಕ್ತಿಕ ಹುಡಿಕೆದಾರರ ಸಲಹೆಗಾರಾದ ಶ್ರೀಯುತ ಕಟ್ಟೆ ಸುಧೀಂದ್ರಆಚಾರ್ರವರು ನೆರವೇರಿಸಿ ಮಾತನಾಡುತ್ತಾ ಉದ್ದಿಮೆದಾರರು ಸಾಲ ಪಡೆಯುವ ಬಗ್ಗೆ ಸಾಲ ಮರುಪಾವತಿ ಮತ್ತು ಸಿಬಿಲ್ ಸ್ಕೋರ್ ನಿರ್ವಹಣೆ ಬಗ್ಗೆ ಸುಮಾರು ಎರಡು ಗಂಟೆಗಳ ಸುಧೀರ್ಘ ವಿಶೇಷ ಉಪನ್ಯಾಸ ನೀಡಿ, ವ್ಯಾಪಾರೋದ್ಯಮದಲ್ಲಿ ಆರೋಗ್ಯಕರ ಸಾಲ ನಿರ್ವಹಣೆ, ಸಿಬಿಲ್ ಮೌಲ್ಯಾಂಖಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ಗುಣಾತ್ಮಕ ಸಾಲ ಪಡೆದು ಸೌಲಭ್ಯವನ್ನು ಸಕಾಲದಲ್ಲಿ ಪಾವತಿಸಿ ಪ್ರಮಾಣಿಕತೆ ಹೊಂದಿದ್ದಲ್ಲಿ ರಿಯಾಯಿತಿ ಸೌಲಭ್ಯಗಳನ್ನು ಪಡೆಯಬಹುದು.

ಉದ್ದಿಮೆಗಳು ಹಾಗೂ ಸಾಲಗಳ ಸಂಯೋಜನೆ ದೇಶದ ಅಭಿವೃದ್ದಿಗೆ ಪೂರಕವಾಗುತ್ತದೆ. ಸಣ್ಣ ಉದ್ದಿಮೆಗಳು ಸಾಲ ಪಡೆದು ಆರ್ಥಿಕ ಅಭಿವೃದ್ದಿಯ ಜೊತೆಗೆ ಬಂಡವಾಳ ಹೊಂದಿ ಉತ್ಪಾದನೆ ಗುರಿ ಮುಟ್ಟಿದಲ್ಲಿ ದೇಶದ ರಕ್ಷಣೆಯ ಸಿಪಾಯಿಗಳಿದ್ದಂತೆ ಎಂದು ತಿಳಿಸುತ್ತಾ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎನ್.ಗೋಪಿನಾಥ್ರವರು ವಹಿಸಿ ಮಾತನಾಡುತ್ತಾ ಉದ್ಯಮಗಳು ಮತ್ತು ಸಾಲ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಬ್ಯಾಂಕ್ ರಾಷ್ಟಿಕರಣದ ಮೊದಲು ಸಾಲ ಪಡೆಯುವುದು ಕೆಲವೇ ವರ್ಗದವರ ಸೊತ್ತಾಗಿತ್ತು. ಅನಂತರದಲ್ಲಿ ಎಲ್ಲಾ ವರ್ಗದವರಿಗೂ ಸಾಲ ಪಡೆಯುವ ಯೋಜನೆ, ರಿಯಾಯಿತಿ ಸೌಲಭ್ಯಗಳು ಪ್ರಾರಂಭವಾದವು. ಉದ್ದಿಮೆದಾರರಿಗೆ ಈ ಬಗ್ಗೆ ಮಾಹಿತಿಯ ಅವಶ್ಯಕತೆಯನ್ನು ಮನಗಂಡು ಇಂತಹ ಕಾರ್ಯಕ್ರಮಗಳು ವಾಣಿಜ್ಯೋದ್ಯಮಿಗಳಿಗೆ, ಕೈಗಾರಿಕೋದ್ಯಮಿಗಳಿಗೆ ತಮ್ಮ ತಮ್ಮ ಉದ್ದಿಮೆಯ ಅವಶ್ಯಕತೆಗಳಿಗೆ ಸಾಲವನ್ನು ಪಡೆಯುವುದು, ಪಡೆದ ನಂತರದಲ್ಲಿ ಬರುವ ತೊಡಕುಗಳನ್ನು ಹೇಗೆ ನಿಭಾಯಿಸಿಕೊಂಡು ನಿರ್ವಹಣೆ ಮಾಡಬಹುದು ಎಂಬ ಉಪಯುಕ್ತ್ತ ಮಾಹಿತಿಯಾಗಿದೆ ಪತ್ರಿಯೊಬ್ಬರೂ ಎಚ್ಚರಿಕೆಯಿಂದ ನಿರ್ವಹಿಸಿದಲ್ಲಿ ಬ್ಯಾಂಕ್ಗಳು, ಖಾಸಗೀ ಹಣಕಾಸು ಸಂಸ್ಥೆಗಳು ಸದೃಡವಾಗುತ್ತವೆ ದೇಶ ಪ್ರಗತಿಯತ್ತ ಸಾಗುತ್ತದೆ ಎಂದು ಹೇಳುತ್ತಾ ಮಾನ್ಯ ಸದಸ್ಯರು ಕಾರ್ಯಕ್ರಮದ ಉಪಯುಕ್ತತೆ ಪಡೆದುಕೊಳ್ಳಬೇಕೆಂದು ತಿಳಿಸಿದೆ.

ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರು, ಮಾಜಿ ಅಧ್ಯಕ್ಷರೂ ಆದ ಶ್ರೀಯುತ ಎಂ. ಭರದ್ವಾಜ್ರವರ ನಿಧನದ ಪ್ರಯುಕ್ತ ಸಭೆ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿತು. ಉಪಾಧ್ಯಕ್ಷರಾದ ಬಿ. ಗೋಪಿನಾಥ್ರವರು ಸ್ವಾಗತ ಕೋರಿದರು, ಕಾರ್ಯದರ್ಶಿ ವಸಂತ್ ಹೋಬಳಿದಾರ್ ನಿರೂಪಣೆ ನಡೆಸಿಕೊಟ್ಟರು. ತೆರಿಗೆ ಸಲಹಾ ಸಮಿತಿ ಛರ್ಮನ್ರಾದ ಇ. ಪರಮೇಶ್ವರರವರು ಪ್ರಸ್ತಾವಿಕ ನುಡಿ ನುಡಿದರು.

ಟ್ಯಾಕ್ಸ್-ಬಾರ್ ಅಸೋಷಿಯೇಸನ್ ನ ಅಧ್ಯಕ್ಷರಾದ ಮಂಜುನಾಥ್ ಅವರು ಮುಖ್ಯ ಅತಿಥಿಗಳ ಪರಿಚಯ ಕಾರ್ಯಕ್ರಮ ನಡೆಸಿಕೊಟ್ಟರು. ನಿರ್ದೇಶಕರುಗಳಾದ ಎಂ. ರಾಜು, ಕೆ.ಎಸ್. ಸುಕುಮಾರ್, ಪ್ರದೀಪ್ ವಿ. ಯಲಿ, ಗಣೇಶ್ ಎಂ. ಅಂಗಡಿ, ಮಾಜಿ ಅಧ್ಯಕ್ಷರುಗಳಾಜದ ಟಿ.ಆರ್.ಅಶ್ವಥ್ ನಾರಾಯಣ ಶೆಟ್ಟಿ, ಡಿ. ಎಂ. ಶಂಕರಪ್ಪ ಸಂಘದ ಸದಸ್ಯ ಬಂಧುಗಳು, ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ಲೆಕ್ಕಪರಿಶೋಧಕರು, ತೆರಿಗೆ ಸಲಹೆಗಾರರು, ವೃತ್ತಿಪರರು, ಉಪಸ್ಥಿತರಿದ್ದು, ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು. ಸಹ-ಕಾರ್ಯದರ್ಶಿ ಜಿ. ವಿಜಯಕುಮಾರ್ರವರು ವಂದನಾರ್ಪಣೆ ಸಲ್ಲಿಸಿದರು.

ರಾಜ್ಯದಲ್ಲಿ ಮಾಸ್ಕ್ ಧರಿಸದವರಿಗೆ ದಂಡ‌ವಿಧಿಸಲು ತಾಂತ್ರಿಕ ಸಮಿತಿ ಶಿಫಾರಸು

0

ರಾಜ್ಯಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಹಾಗೂ ಓಮಿಕ್ರಾನ್ ಉಪತಳಿಗಳ ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಕರ್ನಾಟಕದ ಕೊರೋನಾ ತಾಂತ್ರಿಕ ಸಲಹಾ ಸಮಿತಿ ತಜ್ಞರು ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದ್ದಾರೆ.

ಕರ್ನಾಟಕದ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದೆ.ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಾಸ್ಕ್ ಧರಿಸದವರಿಗೆ ಸರ್ಕಾರಿ ಸಂಸ್ಥೆಗಳನ್ನು ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಶಿಫಾರಸು ಮಾಡಿದರು. ಶಿಫಾರಸುಗಳನ್ನು ಸರ್ಕಾರಕ್ಕೆ ರವಾನಿಸಲಾಗಿದೆ. ವಾರದೊಳಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ಕೊರೋನಾ ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಹಾಗೂ ಲಸಿಕೆ ವ್ಯಾಪ್ತಿಯನ್ನು ಸುಧಾರಿಸುವುದು ಇಂದಿನ ಅಗತ್ಯವಾಗಿದೆ. ಆದ್ದರಿಂದ ಶಿಫಾರಸು ಮಾಡಲಾಗಿದೆ ಎಂದು ಟಿಎಸಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.