Saturday, March 21, 2026
Saturday, March 21, 2026
Home Blog Page 1463

ಪ್ರತಿಭಾ ಕಾರಂಜಿಯಲ್ಲಿ ಪ್ರತಿಭೆ ಮೆರೆದ ರಾಮಕೃಷ್ಣ ವಿದ್ಯಾಲಯದ ಮಕ್ಕಳು

0

ಶಿವಮೊಗ್ಗ ಬೊಮ್ಮನಕಟ್ಟೆಯ ಶ್ರೀ ರಾಮಕೃಷ್ಣ ವಿದ್ಯಾಲಯದ ಹದಿನೇಳಿ ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಮೊದಲ ಮೂರು ಸ್ಥಾನ ಗಳಿಸಿ ಕೀರ್ತಿ ತಂದಿದ್ದಾರೆ.

ಪ್ರತಿಭಾ ಕಾರಂಜಿಯ ಹಾಸ್ಯ, ಸಂಸ್ಕೃತ ದಾರ್ಮಿಕ ಪಠಣ, ಭಕ್ತಿಗೀತೆ, ಭಗವದ್ಗೀತೆ, ಲಘು ಸಂಗೀತ, ಛದ್ಮವೇಷ, ಚಿತ್ರಕಲೆ, ಭಾಷಣದಲ್ಲಿ ಬಹುಮಾನ ಪಡೆದಿದ್ದಾರೆ.

ನಿಶ್ಚಿತಾ, ಪರ್ಹಾನ್ ಖಾನ್, ಪ್ರಚೇತ, ಅಂಜನಾ, ಅಮೃತ, ಕುಮದ್ವತಿ ಪ್ರಥಮ ಸ್ಥಾನ ಪಡೆದಿದ್ದಾರೆ ಅನನ್ಯ, ಕುಶಾಲ್ ಪ್ರಚೇತ್ ಭಟ್, ಕೃತಿಕಾ, ವೈಷ್ಣವಿ ದ್ವಿತೀಯ ಹಾಗೂ ಮೊಹಮದ್, ಸಿರಿ, ನಯನ, ದರ್ಶನ್, ಶಮಾನಸೀಮ, ದೃತಿ ತೃತೀಯ ಸ್ಥಾನ ಪಡೆದಿದ್ದಾರೆ. ಈ ಪ್ರತಿಭಾನ್ವಿತ ರಿಗೆ ಆಡಳಿತ ಮಂಡಳಿ ಪರವಾಗಿ ಕಾರ್ಯದರ್ಶಿ ಶೋಭಾ ವೆಂಕಟರಮಣ ಅಭಿನಂದಿಸಿದ್ದಾರೆ.

ಗಣೇಶನ ಹಬ್ಬಕ್ಕೆ -ಪರಿಸರ ಸ್ನೇಹೀ ಸ್ಪರ್ಶನೀಡಲು ಮಾಲಿನ್ಯ ನಿಯಂತ್ರಣ ಇಲಾಖೆ ಸೂಚನೆ

0

ರಾಜ್ಯದಲ್ಲಿ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರಸ್ನೇಹಿ ಗಣೇಶ ಹಬ್ಬ ಆಚರಿಸುವ ಸಂಬಂಧ ಈ ಕೆಳಕಂಡಂತೆ ಸೂಚನೆಗಳನ್ನು ನೀಡಿದೆ.

ರಾಜ್ಯದಲ್ಲಿ ಜಲಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಂಡಳಿಯು ಪಿಓಪಿಯಿಂದ ಮಾಡುವ ವಿಗ್ರಹಗಳನ್ನು ಯಾವುದೇ ಜಲಮೂಲಗಳಿಗೆ ವಿಸರ್ಜನೆ ಮಾಡುವುದನ್ನು ನಿರ್ಬಂಧಿಸಿ ಅಧಿಸೂಚನೆಯನ್ನು 20/072016 ರಂದು ಹೊರಡಿಸಿದೆ.

ಬೇರೆ ರಾಜ್ಯದಿಂದ ಬರುವಂತಹ ಪಿಓಪಿ ವಿಗ್ರಹಗಳನ್ನು ತಡೆಗಟ್ಟಲು ಸಂಬಂಧಿಸಿದ ಚೆಕ್‍ಪೋಸ್ಟ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಹಾಗೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ಬದಲು ಬಣ್ಣರಹಿತ ಮಣ್ಣಿನ ಮೂರ್ತಿಗಳನ್ನು ತಯಾರಿಸುವಂತೆ ತಯಾರಕರಿಗೆ ವಿವರಿಸಿ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

ಪಿಓಪಿ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿ/ಸಂಸ್ಥೆಗಳಿಗೆ ವ್ಯಾಪಾರ ಲೈಸೆನ್ಸ್ ನೀಡದಿರಲು ಮತ್ತು ಲೈಸೆನ್ಸ್ ಪಡೆಯದೇ ಅನಧಿಕೃತವಾಗಿ ತಯಾರಿ/ಮಾರಾಟ ಮಾಡುವ ವ್ಯಕ್ತಿ/ಸಂಸ್ಥೆಗಳ ಮೇಲೆ ಕಾನೂನು ಕ್ರಮವನ್ನು ತಕ್ಷಣ ಜರುಗಿಸುವುದು.

ಸಾರಿಗೆ ಇಲಾಖೆ ಅಧಿಕಾರಿಗಳು ಬೇರೆ ಊರುಗಳಿಂದ ಮತ್ತು ರಾಜ್ಯಗಳಿಂದ ಬರುವಂತಹ ಪಿಓಪಿ ವಿಗ್ರಹಗಳನ್ನು ತಡೆಗಟ್ಟಲು ಚೆಕ್‍ಪೋಸ್ಟ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಗೌರಿ ಗಣೇಶ ಹಬ್ದ ಸಂದರ್ಭದಲ್ಲಿ ಸಾರ್ವಜನಿಕರು ಬಣ್ಣರಹಿತ ಮಣ್ಣಿನ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ ತದನಂತರ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸ್ಥಳಗಳಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸುವುದು. ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಮೊಬೈಲ್ ಟ್ಯಾಂಕ್‍ಗಳಲ್ಲಿ/ಕಲ್ಯಾಣಿಗಳ ಪಕ್ಕದಲ್ಲಿ ಹಸಿ ಕಸ ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೆ ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಕ್ರಮ ವಹಿಸುವುದು.

ಗರಿಷ್ಟ 5 ಅಡಿ ಎತ್ತರದ ಮಣ್ಣಿನ ವಿಗ್ರಹಗಳನ್ನು ಮಾತ್ರ ತಯಾರಿಸಲು ಅನುಮತಿ ನೀಡುವುದು. ಸಾರ್ವಜನಿಕವಾಗಿ ಇಡಲಾಗುವ ಗಣೇಶ ವಿಗ್ರಹಗಳನ್ನು ಸಮಿತಿಯವರು ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯಿಂದ ನಿಬಂಧನೆಗೊಳಪಟ್ಟ ಅನುಮತಿಯನ್ನು ಪಡೆದು ನಂತರವೇ ಸ್ಥಾಪಿಸುವುದು. ಈ ಅನುಮತಿ ಪತ್ರದಲ್ಲಿ ಲೈಸೆನ್ಸ್ ನೀಡುವ ಸಂದರ್ಭದಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್ ಮತ್ತಿತರ ವಸ್ತುಗಳ ಬಳಕೆ ನಿಷೇಧಿಸುವುದು ಹಾಗೂ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯತನಕ ಧ್ವನಿವರ್ಧಕ ಬಳಕೆ ನಿಷೇಧಿಸುವುದು. ಯಾವುದೇ ಕಾರಣಕ್ಕೂ ತಿಂಗಳುಗಳವರೆಗೆ ಗಣೇಶನನ್ನು ಕೂರಿಸುವುದನ್ನು ಮತ್ತು ವಿಲೇವಾರಿ ಮಾಡುವುದನ್ನು ನಿರ್ಬಂಧಿಸುವುದು.

ಪಿಓಪಿ ಅಥವಾ ಬಣ್ಣವನ್ನು ಬಳಸಿದ ಮೂರ್ತಿಗಳನ್ನು ನೇರವಾಗಿ ಕೆರೆ, ಹೊಂಡ, ನದಿಗಳಿಗೆ ಬಿಡದೆ ಮೂರ್ತಿಗಳನ್ನು ವಿಸರ್ಜಿಸಲು ಕಲ್ಯಾಣಿಗಳು ಅಥವಾ ತಾತ್ಕಾಲಿಕ ಹೊಂಡಗಳನ್ನು ನಿರ್ಮಿಸಿ ಅದರಲ್ಲಿ ಮೂರ್ತಿಗಳನ್ನು ವಿಸರ್ಜಿಸುವುದು. ಉತ್ಸವ ಆಚರಿಸಲು ಬೇಕಾದ ಪೂರ್ವ ತಯಾರಿಗೆ ಸಂಬಂಧಿಸಿದಂತೆ ಪೊಲೀಸ್, ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆ ಪಡೆಯುವುದು, ನಿಯಮಾನುಸಾರ ಧ್ವನಿವರ್ಧಕಗಳನ್ನು ಬಳಸಲು ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ಚಿಕ್ಕಜೋಗಿಹಳ್ಳಿಯಲ್ಲಿ ಕೃಷ್ಣಜಯಂತಿ

0

ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಸೇವಾ ಮಿತ್ರ ಯೋಜನೆಯಡಿ ಶಿಕಾರಿಪುರ ತಾಲೂಕಿನ ಚಿಕ್ಕ ಜೋಗಿಹಳ್ಳಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಆಚರಣೆಯು ವಿಜೃಂಭಣೆಯಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವೂ ನೆರವೇರಿತು.

ಈ ಸಂದರ್ಭದಲ್ಲಿ ಊರಿನ ಮುಖಂಡರು, ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಶ್ರೀಮತಿ ವಿದ್ಯಾಶ್ರೀ ಶಿವಪ್ರಕಾಶ್ ಅವರು ಕಾರ್ಯಕ್ರಮ ನಡೆಸಿದರು.

ತೊಟ್ಟಿಲು ತೂಗುವ ಕೈ ಕುಗ್ವೆಯಲ್ಲಿ ಕೆರೆಯನ್ನೂ ಕಟ್ಟಿತು

0


ಭಾರತವು ಹಳ್ಳಿಗಳಿಂದ ಕೂಡಿದ ದೇಶವಾಗಿದ್ದು, ಇಲ್ಲಿಯ ಬಹುಪಾಲು ಜನರು ತಮ್ಮ ಜೀವನೋಪಾಯಕ್ಕೆ ಕೃಷಿ ಮತ್ತು ಕೂಲಿಯನ್ನೆ ನಂಬಿ ಬದುಕು ನಡೆಸುತ್ತಿದ್ದಾರೆ. ಭಾರತ ಸರ್ಕಾರವು ಗ್ರಾಮೀಣ ಭಾಗದ ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಈ ಯೋಜನೆಗಳ ಲಾಭ ಪಡೆದು ಇಂದು ಗ್ರಾಮೀಣ ಭಾಗದಲ್ಲಿ ಹಲವಾರು ಕಾಮಗಾರಿಗಳು ಯಶಸ್ವಿಯಾಗಿವೆ.

ಹೀಗೆಯೆ ಮಹಾತ್ಮ ಗಾಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಕೂಲ ಪಡೆದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಖಂಡಿಕಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕುಗ್ವೆ ಗ್ರಾಮದ ಜನರು ತಮ್ಮ ಊರಿನಲ್ಲಿ ಲಭ್ಯವಿರುವ ಸರ್ಕಾರಿ ಖಾಲಿ ಜಾಗದಲ್ಲಿ ಕೆರೆಯನ್ನು ನಿರ್ಮಿಸಿದ್ದಾರೆ.

ಕುಗ್ವೆ ಗ್ರಾಮದ ಹೊಸ ಕೆರೆ ಕಾಮಗಾರಿಯ ವಿಶೇಷವೆಂದರೆ ಕೆರೆ ನಿರ್ಮಾಣದಲ್ಲಿ ಗ್ರಾಮದ ಮಹಿಳೆಯರೇ ಹೆಚ್ಚಾಗಿ ಕಾರ್ಯ ನಿರ್ವಹಿಸಿರುವುದು.

ಖಂಡಿಕಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಗ್ವೆ ಗ್ರಾಮವು ಸಾಗರ ಪಟ್ಟಣ ಪ್ರದೇಶಕ್ಕೆ ಹೊಂದಿಕೊಂಡಂತೆ ಇದೆ. ಗ್ರಾಮದಲ್ಲಿ 189 ಕುಟುಂಬಗಳು ವಾಸವಾಗಿದ್ದು ಇಲ್ಲಿನ ಬಹುಪಾಲು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ.

ಕಾಮಗಾರಿಯ ಅನುಷ್ಠಾನ:
ಕುಗ್ವೆ ಗ್ರಾಮದಲ್ಲಿನ ನೂರಾರು ಮಹಿಳಾ ಕೂಲಿ ಕಾರ್ಮಿಕರು ಉದ್ಯೋಗ ನೀಡುವಂತೆ ಖಂಡಿಕಾ ಗ್ರಾಮ ಪಂಚಾಯ್ತಿಗೆ ಅರ್ಜಿ ಸಲ್ಲಿಸಿದಾಗ, ಇದರ ಬಗ್ಗೆ ಗಮನ ಹರಿಸಿದ ಗ್ರಾಮ ಪಂಚಾಯ್ತಿಯು, ಗ್ರಾಮದಲ್ಲಿನ 150 ರಿಂದ 180 ಜನರಿಗೆ ಏಕ ಕಾಲದಲ್ಲಿ ಕೂಲಿ ಕೆಲಸ ನೀಡಲು ಕುಗ್ವೆ ಗ್ರಾಮದ ಸರ್ವೆ ನಂ. 22 ರಲ್ಲಿನ 3 ಎಕರೆ ಸರ್ಕಾರಿ ಖಾಲಿ ಜಾಗದಲ್ಲಿ ಕೆರೆ ನಿರ್ಮಿಸಲು ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆಯಿತು. ನಂತರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮಾರ್ಗಸೂಚಿಯನ್ವಯ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಯಿತು.

ಇಲ್ಲಿಯವರೆಗೆ ಖಂಡಿಕಾ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಇರುವ ಕೆರೆಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಕೇವಲ ಹೂಳೆತ್ತುವ ಕಾಮಗಾರಿ ಮಾತ್ರ ಅನುಷ್ಠಾನಗೊಳ್ಳುತ್ತಿತ್ತು, ಆದರೆ ಹೊಸ ಪ್ರಯೋಗವೆಂಬಂತೆ ಹೊಸದಾಗಿ ಕೆರೆ ನಿರ್ಮಿಸಲು ಮುಂದಾದ ಗ್ರಾಮ ಪಂಚಾಯತ್ ಆಡಳಿತ, ಗ್ರಾ. ಪ. ಸದಸ್ಯರು, ಪಿ.ಡಿ.ಒ. ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನೂತನವಾಗಿ ನಿರ್ಮಾಣವಾಗುವ ಕೆರೆಯ ಒಳ ಮತ್ತು ಹೊರ ಹರಿವುಗಳ ಬಗ್ಗೆ ಪೂರ್ಣ ಪರಿಶೀಲನೆ ನಡೆಸಿ ರೈತರಿಗೆ ಮತ್ತು ಸಾರ್ವಜನಿಕರಿಗರಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುವ ಪ್ರದೇಶದಲ್ಲಿ ಕೆರೆ ನಿರ್ಮಿಸಲು ನಿರ್ಧರಿಸಿತು.

ಮಹಿಳೆಯರಿಂದಲೇ ಕೆರೆ ನಿರ್ಮಾಣ:
ಅಂದಾಜು ಮೊತ್ತ ರೂ.10 ಲಕ್ಷಗಳಲ್ಲಿ ಮಹಿಳೆಯರೇ ಮುಂದಾಳತ್ವ ವಹಿಸಿ ಕರೆ ನಿರ್ಮಿಸಿರುವುದ ಈ ಕೆರೆ ವಿಶೇಷ. ಒಟ್ಟು 146 ಜನ ಕೂಲಿ ಕಾರ್ಮಿಕರಲ್ಲಿ 134 ಜನ ಮಹಿಳೆಯರೇ ಭಾಗವಹಿಸಿದ್ದಾರೆ. ಕೆರೆ ನಿರ್ಮಾಣ ಕಾಮಗಾರಿಯಲ್ಲಿ ಒಟ್ಟು 2997 ಮಾನವ ದಿನಗಳು ಸೃಜನೆಯಾಗಿದ್ದು ನಿಗದಿತ ಸಮಯದೊಳಗೆ ಕೂಲಿ ಪಾವತಿಯಾಗಿದೆ. ಸದರಿ ಕಾಮಗಾರಿಯಲ್ಲಿ ಒಟ್ಟು 8 ಜನ ಮಹಿಳಾ ಮೇಟ್‍ಗಳು ಕೆಲಸ ನಿರ್ವಹಿಸಿದ್ದು, ಮೇಟ್‍ಗಳು ಗ್ರಾಮದ ಮಹಿಳೆಯರಿಗೆ ನರೇಗಾ ಯೋಜನೆಯಡಿ ದೊರೆಯುವ ಕೂಲಿ ಹಾಗೂ ಅವರ ಕೆಲಸದ ಕುರಿತು ಸರಿಯಾದ ಮಾಹಿತಿ ನೀಡಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಕಾಮಗಾರಿಯ ಉಪಯೋಗ:
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಹೊಸ ಕೆರೆ ಕಾಮಗಾರಿಯಿಂದಾಗಿ ಕುಗ್ವೆ ಗ್ರಾಮದ ಮಹಿಳಾ ಕೂಲಿ ಕಾರ್ಮಿಕರಿಗೆ ಉದ್ಯೋಗದ ಜೊತೆಗೆ, ಕೆರೆಯ ಸುತ್ತ ಮುತ್ತಲಿನ ಕೊಳವೆ ಬಾವಿ ಹಾಗೂ ಸಾರ್ವಜನಿಕ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದಾಗಿ ರೈತರಿಗೆ ಬೇಸಿಗೆಯಲ್ಲೂ ಭತ್ತ ಬೆಳೆಯಲು ಅನೂಕೂಲವಾಗಿದೆ. ಇದರ ಜೊತೆಗೆ ಪ್ರಾಣಿ ಪಕ್ಷಿಗಳು ಹಾಗೂ ಗ್ರಾಮದ ಸುಮಾರು 50 ಕುಟುಂಬಗಳ ಜಾನುವಾರುಗಳಿಗೂ ಅನುಕೂಲವಾಗಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

ಹೊಸ ಕೆರೆ ನಿರ್ಮಾಣದಲ್ಲಿ ನಾವುಗಳು ಶ್ರಮವಹಿಸಿ ಭಾಗವಹಿಸಿದ್ದೆವು, ಜೊತೆಗೆ ಗ್ರಾಮದ ಮಹಿಳೆಯರಿಂದಲೇ ಕೆರೆ ನಿರ್ಮಾಣವಾಗಿರುವುದು ಸಂತಸದ ವಿಷಯವಾಗಿದೆ ಎಂದು ಗ್ರಾ. ಪಂ. ಸದಸ್ಯರಾದ ನಾರಾಯಣಪ್ಪನವರು ತಿಳಿಸಿದ್ದಾರೆ.

ಮಹಾತ್ಮ ಗಾಧಿ ನರೇಗಾ ಯೋಜನೆಯನ್ನು ಬಳಸಿಕೊಂಡು ಖಂಡಿಕಾ ಗ್ರಾಮ ಪಂಚಾಯ್ತಿ ಉತ್ತಮ ಕೆಲಸಕ್ಕೆ ಕೈ ಹಾಕಿದೆ. ಪ್ರತಿಯೊಬ್ಬರಿಗೂ ಅಗತ್ಯವಾದ ನೀರನ್ನು ಉಳಿಸಲು ಮತ್ತು ಸಂರಕ್ಷಿಸಲು ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯಾಗಿದೆ ಎಂದು ಗ್ರಾಮಸ್ಥರಾದ ಮಹಾಲೇಶ್ವರನಾಯ್ಕ ಅವರು ತಿಳಿಸಿದ್ದಾರೆ.

ನಗರೀಕರಣ ಆದಂತೆಲ್ಲಾ ಸಾರ್ವಜನಿಕ ಪ್ರದೇಶಗಳ ಸುತ್ತಮುತ್ತಲಿನ ನೀರಿನ ಮೂಲವಾದ ಕೆರೆಗಳು ಒತ್ತುವರಿಯಾಗಿ ನಶಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕೆರೆಗಳನ್ನು ನಿರ್ಮಿಸುವುದು ಮತ್ತು ಇರುವ ಕೆರೆಗಳನ್ನು ಪುನರುಜ್ಜೀವನಗೋಳಿಸಿ, ಮುಂದಿನ ಪೀಳಿಗೆಗೆ ನೀರನ್ನು ಸಂರಕ್ಷಿಸಿಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಜೀವಜಲದ ಮೂಲಗಳು ಕಣ್ಮರೆಯಾಗುತ್ತಿರುವ ಈ ಸಮಯದಲ್ಲಿ ಮಾದರಿಯೆಂಬಂತೆ ಖಂಡಿಕಾ ಗ್ರಾಮ ಪಂಚಾಯ್ತಿ ಹಾಗು ಕುಗ್ವೆ ಗ್ರಾಮದ ಮಹಿಳೆಯರು ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಂಡು ಹೊಸ ಕೆರೆಯನ್ನು ನಿರ್ಮಿಸಿ ಇತರರಿಗೂ ಪ್ರೇರಣೆಯಾಗಿದ್ದಾರೆ.

ವರದಿ: ರಿಥೇಶ ನಾಯ್ಕ್
ಅಪ್ರೆಂಟೀಸ್, ವಾರ್ತಾ ಇಲಾಖೆ ಶಿವಮೊಗ್ಗ

ಕಾರವಾರ ಡಿಸಿಸಿ ಬ್ಯಾಂಕ್ ನಲ್ಲಿ ವಿವಿಧಹುದ್ದೆಗಳಿಗೆ ಅರ್ಜಿ ಆಹ್ವಾನ

0

ಉತ್ತರ ಕನ್ನಡದ ಶಿರಸಿಯ ಕೆನರಾ ಡಿಸ್ಟ್ರಿಕ್ಟ್​ ಸೆಂಟ್ರಲ್​ ಕೋ-ಒಪರೇಟಿವ್​ ಬ್ಯಾಂಕ್​ ಲಿವಿಟೆಡ್​​​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.

ಕಿರಿಯ ಗುಮಾಸ್ತರು ಮತ್ತು ಕಿರಿಯ ಮೇಲ್ವಿಚಾರಕರ ಹುದ್ದೆಗಳು ಸೇರಿದಂತೆ ಒಟ್ಟು 41 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಶಿರಸಿಯಲ್ಲಿ ಕಾರ್ಯ ನಿರ್ವಹಿಸಲು ಇಚ್ಛಿಸುವ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 10 ಆಗಿದೆ. ಈ ಹುದ್ದೆಗೆ ಅರ್ಜಿಯನ್ನು ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ.

ಹುದ್ದೆಯ ಮಾಹಿತಿ
ಕೆನರಾ ಡಿಸ್ಟ್ರಿಕ್ಟ್​ ಸೆಂಟ್ರಲ್​ ಕೋ-ಒಪರೇಟಿವ್​ ಬ್ಯಾಂಕ್​ ಲಿವಿಟೆಡ್

ಹುದ್ದೆಯ ಹೆಸರು
ಕಿರಿಯ ಗುಮಾಸ್ತರು ಮತ್ತು ಕಿರಿಯ ಮೇಲ್ವಿಚಾರಕರು

ಹುದ್ದೆಗಳ ಸಂಖ್ಯೆ
41
ಕಾರ್ಯ ನಿರ್ವಹಣೆ ಸ್ಥಳ
ಶಿರಸಿ, ಉತ್ತರ ಕನ್ನಡ

ವೇತನ
27650-52650 ರೂ ಮಾಸಿಕ

ಶೈಕ್ಷಣಿಕ ಅರ್ಹತೆ
ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.
ಪದವಿಯಲ್ಲಿ ಶೇ 60ರಷ್ಟು ಗುಣಾಂಕ ಪಡೆದ ಪದವೀಧರರು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅಭ್ಯರ್ಥಿಗಳು ಕಡ್ಡಾಯವಾಗಿ ಕಂಪ್ಯೂಟರ್​ ಆಪರೇಟಿಂಗ್​ ಮತ್ತು ಅಪ್ಲಿಕೇಶನ್​ ಜ್ಞಾನ ಹೊಂದಿರಬೇಕು.

ವಯೋಮಿತಿ
ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:
ಪ.ಜಾ, ಪ.ಪಂ ಮತ್ತು ಪ್ರವರ್ಗ-1 ಅಭ್ಯರ್ಥಿಗಳು: 05 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು: 03 ವರ್ಷಗಳು

ಅರ್ಜಿ ಸಲ್ಲಿಕೆ ವಿಧಾನ: ಆಫ್​ಲೈನ್​

ಅರ್ಜಿ ಶುಲ್ಕ:
ಪ.ಜಾ, ಪ.ಪಂ ಮತ್ತು ಪ್ರವರ್ಗ-1, ವಿಕಲಚೇತನ ಅಭ್ಯರ್ಥಿಗಳು: 295 ರೂ.
ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು: 590 ರೂ

ಅರ್ಜಿ ಶುಲ್ಕ ಪಾವತಿ ವಿಧಾನ ಕೆಡಿಸಿಸಿ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಚಾಲ್ತಿ ಖಾತೆಗೆ 122000553848 ಜಮಾಪಡಿಸಿ, ಚಲನ್ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು.

ಅರ್ಜಿ ಪಡೆಯುವ ವಿಧಾನ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಡಿಸಿಸಿ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ, ರೂ. 59 ಪಾವತಿಸಿ ಅರ್ಜಿ ನಮೂನೆಯನ್ನು ಪಡೆದು ನಂತರ ಅದನ್ನು ಸ್ವ-ಹಸ್ತಾಕ್ಷರದಿಂದ ಭರ್ತಿ ಮಾಡಿ ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಲಕೋಟೆಯ ಮೇಲೆ “ಕಿರಿಯ ಗುಮಾಸ್ತ/ಕಿರಿಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ” ಅಂತಾ ಸ್ಪಷ್ಟವಾಗಿ ನಮೂದಿಸಿ ಕಛೇರಿಯ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಕಛೇರಿಗೆ ಖುದ್ದಾಗಿ ಹಾಜರಾಗಿ ಸಲ್ಲಿಸಬೇಕು

ಅರ್ಜಿ ಸಲ್ಲಿಸುವ ವಿಳಾಸ
ವ್ಯವಸ್ಥಾಪಕ ನಿರ್ದೇಶಕರು, ಕೆನರಾ ಡಿ.ಸಿ.ಸಿ ಬ್ಯಾಂಕ್ ಲಿ.,
ಪ್ರಧಾನ ಕಛೇರಿ, ಹೊಸ ಮಾರುಕಟ್ಟೆ, ಶಿರಸಿ – 581 402 (ಉ.ಕ)

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19 ಆಗಸ್ಟ್​​​ 2022
ಅರ್ಜಿ ಫಾರ್ಮ್​​ ಪಡೆಯಲು ಕೊನೆಯ ದಿನಾಂಕ: 8 ಸೆಪ್ಟೆಂಬರ್​ 2022
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 10 ಸೆಪ್ಟೆಂಬರ್​ 2022

ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ವೆಬ್‌ಸೈಟ್: www.kanaradccbank.com

ಅರ್ಜಿ ಸಲ್ಲಿಕೆ ಪ್ರಕ್ರಿಯೆ
ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ

  • ನಿಗದಿತ ಅರ್ಜಿಯಲ್ಲಿ ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ

ಮೀಸಲಾತಿ ಪ್ರಮಾಣ ಸೇರಿದಂತೆ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಅಗತ್ಯ ಪ್ರಮಾಣ ಪತ್ರಗಳು ಲಗತ್ತಿಸಿ ಮೇಲಿನ ವಿಳಾಸಕ್ಕೆ ಸಲ್ಲಿಸಿ.

ತೀವ್ರ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾಗೆ ಭಾರತದಿಂದ ರಸಗೊಬ್ಬರ ಪೂರೈಕೆ

0

ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾಗೆ ಭಾರತ ಮತ್ತೆ ನೆರವಿನ ಹಸ್ತಚಾಚಿದೆ. 21 ಸಾವಿರ ಟನ್​ ರಾಸಾಯನಿಕ ಗೊಬ್ಬರವನ್ನು ಕಳುಹಿಸಿ ಸಹಾಯಕ್ಕೆ ಬಂದಿದೆ.

ವಿಶೇಷ ಬೆಂಬಲದಡಿ ಭಾರತದ ಹೈಕಮಿಷನ್​ ಆ ದೇಶಕ್ಕೆ ನಿನ್ನೆ ರಾಸಾಯನಿಕ ಗೊಬ್ಬರವನ್ನು ಹಸ್ತಾಂತರಿಸಿತು. ಕಳೆದ ತಿಂಗಳು 44 ಸಾವಿರ ಟನ್​ ರಾಸಾಯನಿಕ ಗೊಬ್ಬರವನ್ನು ಪೂರೈಸಲಾಗಿತ್ತು. ಒಟ್ಟಾರೆ ಈ ವರ್ಷ ದ್ವೀಪರಾಷ್ಟ್ರಕ್ಕೆ ಭಾರತ 4 ಬಿಲಿಯನ್​ ಡಾಲರ್​ ನೆರವು ನೀಡಿದಂತಾಗಿದೆ.

ಶ್ರೀಲಂಕಾದ ಕೃಷಿ ಕ್ಷೇತ್ರ ಮತ್ತೆ ಚೇತರಿಕೆ ಕಾಣಲು ಈ ನೆರವು ನೀಡಲಾಗಿದೆ. ದೇಶದ ಆಹಾರ ಭದ್ರತೆಗೂ ಇದು ಬೆಂಬಲವಾಗಿರಲಿದೆ. ಉಭಯ ರಾಷ್ಟ್ರಗಳ ನಿಕಟ ಬಾಂಧವ್ಯವನ್ನೂ ಇದು ತೋರಿಸುತ್ತದೆ” ಎಂದು ಕೊಲಂಬೊದಲ್ಲಿರುವ ಭಾರತ ಹೈಕಮಿಷನ್​ ಸರಣಿ ಟ್ವೀಟ್​ ಮಾಡಿದೆ.

ಶ್ರೀಲಂಕಾದ ಅವಶ್ಯಕತೆಗಳಿಗೆ ಅನುಗುಣವಾಗಿ ಆರ್ಥಿಕ ಸಹಾಯವನ್ನು ನೀಡುವಲ್ಲಿ ಭಾರತ ಮುಂದಿದೆ. ಅಗತ್ಯವಿರುವ ಸಮಯದಲ್ಲಿ ಗರಿಷ್ಠ ಪ್ರಮಾಣದ ಸಹಾಯವನ್ನು ಒದಗಿಸಿದ ದೇಶವಾಗಿದೆ. ಈ ವರ್ಷದ ಆರಂಭದಿಂದ ದ್ವೀಪರಾಷ್ಟ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ನಲುಗಿದೆ. ವಿದೇಶಿ ಸಾಲಗಳನ್ನು ಮರುಪಾವತಿ ಮಾಡುವುದನ್ನು ಮುಂದೂಡಿದೆ. ದೇಶದ 5.7 ಮಿಲಿಯನ್​ ಜನರ ರಕ್ಷಣೆಗಾಗಿ ಲಂಕಾಡಳಿತ ಹಲವು ದೇಶಗಳ ನೆರವು ಬಯಸಿದೆ.

ದೇಶದಲ್ಲಿ ಪ್ರಸ್ತುತ ಕೋರೋನ ಸೋಂಕು ಶೇ 9 ರಷ್ಟು ಇಳಿಕೆ

0

ಕಳೆದ 24 ಗಂಟೆಗಳಲ್ಲಿ ಭಾರತದ ದೈನಂದಿನ ಕೊರೋನಾ ಸಂಖ್ಯೆ ಶೇ. 9 ರಷ್ಟು ಕುಸಿದಿದೆ. ಏಕೆಂದರೆ ದೇಶವು 8,586 ಹೊಸ ಸೋಂಕುಗಳಿಗೆ ಸಾಕ್ಷಿಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳಲ್ಲಿ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ, ಕೇರಳದಲ್ಲಿ 6 ಸಾವುಗಳು ಸೇರಿದಂತೆ 48 ಸಾವುಗಳು ದಾಖಲಾಗಿದೆ. ಒಟ್ಟಾರೆ ಸಾವಿನ ಸಂಖ್ಯೆ 5,27,416 ಕ್ಕೆ ಏರಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೊರೋನಾ ಪ್ರಕರಣಗಳಲ್ಲಿ 1,142 ಪ್ರಕರಣಗಳ ಇಳಿಕೆ ದಾಖಲಾಗಿದೆ.

ಸಿದ್ಧರಾಮಯ್ಯನವರಿಗೆ ಹೆಚ್ಚಿನ ಭದ್ರತೆ ಸಿಎಂ ಸೂಚನೆ

0

ಜೀವಬೆದರಿಕೆ, ಮೊಟ್ಟೆ ಎಸೆತ ಪ್ರಕರಣ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಿದೆ.

ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ಕೊಟ್ಟ 3 ದಿನದ ಬಳಿಕ ಸಿದ್ದರಾಮಯ್ಯ ನಿವಾಸಕ್ಕೆ ಹೆಚ್ಚಿನ ಭದ್ರತಾ ಒದಗಿಸಲಾಗಿದೆ. ಸಿದ್ದರಾಮಯ್ಯ ನಿವಾಸಕ್ಕೆ ಸಾರ್ವಜನಿಕರು ಪ್ರವೇಶದ ಹಿನ್ನೆಲೆಯಲ್ಲಿ ಡಿಟೆಕ್ಟರ್ ಅಳವಡಿಸಲಾಗಿದ್ದು, ಮೆಟೆಲ್ ಡಿಟೆಕ್ಟರ್ ಜೊತೆಗೆ ಹೆಚ್ಚಿನ ಪೊಲೀಸ್ ರನ್ನು ನಿಯೋಜನೆ ಮಾಡಲಾಗಿದೆ.

ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ ಇದೆ ಎಂಬ ಹೇಳಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಪೊಲೀಸ್ ಮಹಾನಿರ್ದೇಶಕರನ್ನು ಕರೆಸಿಕೊಂಡು ಚರ್ಚೆ ನಡೆಸಿದ್ದೇನೆ ವಿರೋಧ ಪಕ್ಷದ ನಾಯಕರ ಭದ್ರತೆಯನ್ನು ಹೆಚ್ಚಿಸುವಂತೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಚುಟುಕು ಸುದ್ದಿಗಳು

0

ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆ
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನೊಂದಾಯಿತ ಕಟ್ಟಡ ಕಾರ್ಮಿಕರಾದ ಬಾರ್‍ಬೆಂಡಿಂಗ್, ಪೈಂಟಿಂಗ್, ಪ್ಲಂಬಿಂಗ್, ಕಾರ್ಪೆಂಟರ್, ಎಲೆಕ್ಟ್ರೀಷಿಯನ್, ಮೆಷನ್ ವೃತ್ತಿಯವರಿಗೆ ಕಿಟ್‍ಗಳನ್ನು ಒದಗಿಸಲಾಗುತ್ತಿದ್ದು, ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ನೋಂದಣಿ ಗುರುತಿನ ಚೀಟಿ, ಫಲಾನುಭವಿಯ ಆಧಾರ್ ಕಾರ್ಡ್ ಪ್ರತಿಯೊಂದಿಗೆ ದಿ:25/08/2022 ರೊಳಗಾಗಿ ತಾಲೂಕು ಮಟ್ಟದಲ್ಲಿ ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು, ಜಿಲ್ಲಾ ಮಟ್ಟದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.

ಸಹಾಯಧನ ಪಡೆಯಲು ಅರ್ಜಿ ಆಹ್ವಾನ
2022-23 ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ತಿಜೋರಿ/ಬ್ಯಾಂಕಿಂಗ್ ಕೌಂಟರ್ ನಿರ್ಮಾಣಕ್ಕಾಗಿ ಸಹಾಯಧನ ಹಾಗೂ ವಿವಿಧ ಸಹಕಾರ ಸಂಘಗಳಿಗೆ ಷೇರು ಬಂಡವಾಳ ಯೋಜನೆಗಳಡಿ ಅರ್ಹ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು http://shimoga.nic.in ಪೋರ್ಟಲ್ ಮೂಲಕ ಅಥವಾ ನೇರವಾಗಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ, ಸಹಕಾರ ಭವನದ ಮೊದಲನೇಯ ಮಹಡಿ, ಶಿವಮೊಗ್ಗ, ಇಲ್ಲಿ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ದಾಖಲಾತಿಗಳೊಂದಿಗೆ ದಿ: 09-09-2022 ರೊಳಗಾಗಿ ಸಲ್ಲಿಸುವಂತೆ ಸಹಕಾರ ಸಂಘಗಳ ಉಪ ನಿಬಂಧಿಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ:08182-222711 ನ್ನು ಸಂಪರ್ಕಿಸುವುದು.

ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್‍ನವರು ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿಯನ್ನು ನೀಡಲು ನಿರ್ಧರಿಸಿದೆ.

ಆಸಕ್ತರು ದಿನಾಂಕ: 29.08.2022 ರೊಳಗಾಗಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ದೂ.ಸಂ. 0821-2515944 ಸಂಪರ್ಕಿಸಬಹುದೆಂದು ಕರಾಮುವಿ ಪ್ರಭಾರ ಕುಲಸಚಿವರಾದ ಡಾ. ಎ. ಖಾದರ್ ಪಾಷ ತಿಳಿಸಿದ್ದಾರೆ.

ಗ್ರಾಮ ವಾಸ್ತವ್ಯದ ಲಾಭ ಪಡೆಯಲು ಸಾರ್ವಜನಿಕರಿಗೆ ಕರೆ

0

ಸಾರ್ವಜನಿಕರಿಂದ ಕುಂದು ಕೊರತೆ ಅರ್ಜಿಗಳನ್ನು ಸ್ಥಳದಲ್ಲೇ ಸ್ವೀಕರಿಸಿ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ’ ಕಾರ್ಯಕ್ರಮವನ್ನು ಪ್ರತಿ 3ನೇ ಶನಿವಾರದಂದು ಆಯ್ದ ಗ್ರಾಮಗಳಲ್ಲಿ ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.

‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ’ ಕಾರ್ಯಕ್ರಮದಡಿ ಇಂದು ಭದ್ರಾವತಿ ತಾಲ್ಲೂಕಿನ ಕಸಬಾ ಹೋಬಳಿಯ ಹುಣಸೆಕಟ್ಟೆ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಹಲವು ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದ್ದು, ಇನ್ನೂ ಗ್ರಾಮಸ್ಥರು, ಸುತ್ತಮುತ್ತಲ ಗ್ರಾಮಸ್ಥರಿಂದ ಅರ್ಜಿಗಳನ್ನು ಸ್ವೀಕರಿಸಿ ಪರಿಹಾರೋಪಾಯ ಕುರಿತು ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭದ್ರಾವತಿ ಶಾಸಕರಾದ ಬಿ.ಕೆ.ಸಂಗಮೇಶ್ವರ್, ಎಡಿಸಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಎಸಿ ದೊಡ್ಡಗೌಡರ್, ಭದ್ರಾವತಿ ತಹಶೀಲ್ದಾರ್, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದರು.