Saturday, March 21, 2026
Saturday, March 21, 2026
Home Blog Page 1461

ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ವ್ಯವಸ್ಥಿತ ಕ್ರಮ- ಸೆಲ್ವಮಣಿ

0

ಶಿವಮೊಗ್ಗ ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಶಾಂತಿಯುತವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದರು.

ಏಕಗವಾಕ್ಷಿ ವ್ಯವಸ್ಥೆ: ಶಿವಮೊಗ್ಗ ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ವಿವಿಧ ಇಲಾಖೆಗಳಿಂದ ಪರವಾನಿಗೆ ಪಡೆಯುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗುವುದು. ಮಹಾನಗರ ಪಾಲಿಕೆ, ಪೊಲೀಸ್, ಮೆಸ್ಕಾಂ ಮತ್ತಿತರ ಇಲಾಖೆಗಳ ಅಧಿಕಾರಿಗಳ ತಂಡಗಳನ್ನು ರಚಿಸಿ ಅಗತ್ಯ ಪರವಾನಿಗೆ ನೀಡಲು ಕ್ರಮ ಕೈಗೊಳ್ಳಬೇಕು. ಪರವಾನಿಗೆಗೆ ಅರ್ಜಿ ಸಲ್ಲಿಸಲು ನಿಗದಿತ ನಮೂನೆಯನ್ನು ಸಿದ್ಧಪಡಿಸಿ ಏಕಗವಾಕ್ಷಿ ಕೇಂದ್ರಗಳನ್ನು ಆರಂಭಿಸುವಂತೆ ಅವರು ಸೂಚನೆ ನೀಡಿದರು.

ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಬಂದೋಬಸ್ತಿಗೆ ಸೂಕ್ತ ಬ್ಯಾರಿಕೇಡ್, ತಾತ್ಕಾಲಿಕ ಸಿಸಿಟಿವಿ ಮತ್ತು ವಿಡಿಯೋ ಕ್ಯಾಮೆರಾಗಳ ವ್ಯವಸ್ಥೆಯನ್ನು ಮಹಾನಗರ ಪಾಲಿಕೆ ವತಿಯಿಂದ ಕಲ್ಪಿಸಬೇಕು. ಮೆರವಣಿಗೆ ಸಾಗುವ ಹಾದಿಯಲ್ಲಿ ಯಾವುದೇ ವಿದ್ಯುತ್ ಅವಘಡಗಳು ಸಂಭವಿಸದಂತೆ ಮೆಸ್ಕಾಂ ಮೊದಲೇ ಪರಿಶೀಲನೆ ನಡೆಸಬೇಕು. ಮೆರವಣಿಗೆ ಹಾದಿಯಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಬೇಕು. ಲೈನ್‍ಮೆನ್‍ಗಳು ಸ್ಥಳದಲ್ಲೇ ಲಭ್ಯವಿರುವಂತೆ ವ್ಯವಸ್ಥೆ ಮಾಡಬೇಕು ಎಂದರು.

ಫ್ಲೆಕ್ಸ್, ಬಂಟಿಂಗ್ ನಿರ್ಬಂಧ: ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯದೇ ಫೆಕ್ಸ್ ಮತ್ತು ಬಂಟಿಂಗ್ ಅಳವಡಿಸಲು ಅವಕಾಶ ನೀಡಬಾರದು. ಅನಧಿಕೃತವಾಗಿ ಅಳವಡಿಸುವ ಫ್ಲೆಕ್ಸ್‍ಗಳ ಮೇಲೆ ನಿಗಾ ಇರಿಸಿ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ತಂಡಗಳನ್ನು ರಚಿಸುವಂತೆ ಅವರು ತಿಳಿಸಿದರು.

ಗಣೇಶ ಪೆಂಡಾಲ್‍ಗಳಲ್ಲಿ ವಿದ್ಯುತ್ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆಯನ್ನು ಪರಿಶೀಲಿಸಿ, ಯಾವುದೇ ಅವಘಡಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಸಿಬ್ಬಂದಿಗಳು ಇದನ್ನು ಖಾತ್ರಿಪಡಿಸಬೇಕು. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು. ಬೋಟ್ ಇತ್ಯಾದಿ ಸುರಕ್ಷತಾ ಸಾಧನಗಳನ್ನು ಸನ್ನದ್ಧಗೊಳಿಸಬೇಕು. ಅಂಬ್ಯುಲೆನ್ಸ್ ಮತ್ತು ಆರೋಗ್ಯ ಸಿಬ್ಬಂದಿ ಸ್ಥಳದಲ್ಲಿಯೇ ಲಭ್ಯವಿರಬೇಕು. ಮದ್ಯ ಮಾರಾಟ ನಿರ್ಬಂಧ ಆದೇಶವನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕು. ಹೊರಗಿನಿಂದ ಮದ್ಯ ತಂದು ಮಾರಾಟ ಮಾಡುವ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಶಿವಮೊಗ್ಗ ನಗರ ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಈ ಎಲ್ಲಾ ಸೂಚನೆಗಳನ್ನು ಸ್ಥಳೀಯವಾಗಿ ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಹೇಳಿದರು.

ಗಣೇಶೋತ್ಸವ ಆಚರಣೆ ಕುರಿತು ರಾಜ್ಯ ಪರಿಸರ ಮಾಲಿನ್ಯ ಮಂಡಳಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದರು.

ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀಪ್ರಸಾದ್, ಎಎಸ್ಪಿ ವಿಕ್ರಮ್ ಅಮಟೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಶಿವಮೊಗ್ಗ ಉಪವಿಭಾಗಾಧಿಕಾರಿ ದೊಡ್ಡಗೌಡರ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕೆಲವು ಪ್ರತಿಷ್ಠಾನ ಅಧ್ಯಕ್ಷರು,ಸದಸ್ಯರ ನಾಮಕರಣದಲ್ಲಿ ಯಾಮಾರಿದ ಸರ್ಕಾರ

0

ಟ್ರಸ್ಟ್, ಪ್ರತಿಷ್ಠಾನಗಳಿಗೆ ಹೊಸ ಅಧ್ಯಕ್ಷರು ಹಾಗೂ ಸದಸ್ಯರನ್ನ ರಾಜ್ಯ ಸರ್ಕಾರ ಬುಧವಾರ ನೇಮಿಸಿತ್ತು. ಈ ಪೈಕಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ನರೇಂದ್ರ ರೈ ದೇರ್ಲ ಅವರು ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿದ್ದಾರೆ.

ಈ ಸಂಬಂಧ ರಾಜ್ಯ ಸರ್ಕಾರದ ಸಂಸ್ಕೃತಿ ಇಲಾಖೆಗೆ ಅವರು ಕೋರಿಕೆ ಸಲ್ಲಿಸಿದೆ. ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸದಂತೆ ಮನವಿ ಮಾಡಿಕೊಂಡಿದ್ದಾರೆ. ಇದೇ ರೀತಿ, ಶ್ರೀಗಳನಾಥ್ ಮತ್ತು ನಾ ಶ್ರೀ ರಾಜಪುರೋಹಿತ ಪ್ರತಿಷ್ಠಾನಕ್ಕೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಇದನ್ನು ಚಕ್ರವರ್ತಿ ಸೂಲಿಬೆಲೆ ಅವರು ತಿಸ್ಕರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಬರೆದುಕೊಂಡಿದ್ದಾರೆ. ಈ ಎಲ್ಲಾ ವಿವಾದಗಳ ಬೆನ್ನಲ್ಲೇ ಇಡೀ ನೇಮಕಾತಿಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿ ಗುರುವಾರ ಆದೇಶಿಸಿದೆ.

ನರೇಂದ್ರ ರೈ ದೇರ್ಲ ಅವರು ಸರ್ಕಾರಕ್ಕೆ ಬರೆದಿರುವ ಪತ್ರ ದಲ್ಲಿ ನೋಡಿ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷನನ್ನಾಗಿ ನನ್ನನ್ನು ನೇಮಕ ಮಾಡಿದ ಸುದ್ದಿ ಮಾಧ್ಯಮಗಳ ಮೂಲಕ ನನಗೆ ತಿಳಿಯಿತು. ತೇಜಸ್ವಿ ಅವರ ಒಡನಾಟ ಮತ್ತು ಅವರ ಕುರಿತು ಒಂದಷ್ಟು ಬರವಣಿಗೆ ಅವರ ಪತ್ರಗಳ ಸಂಪಾದನೆಯನ್ನು ನಾನು ಮಾಡಿರುವುದು ನಿಜ. ಈ ಕಾರಣಕ್ಕಾಗಿಯೇ ಸರಕಾರ ನನ್ನನ್ನು ಆಯ್ಕೆ ಮಾಡಿದೆ ಎಂದು ಅನೇಕ ಸ್ನೇಹಿತರು, ಬಂಧುಗಳು, ತೇಜಸ್ವಿ ಓದುಗರು ಅಭಿನಂದಿಸಿ ನನಗೆ ಸಂದೇಶ ಕಳಿಸಿದ್ದಾರೆ. ಈ ಕುರಿತು ಘನ ಸರಕಾರಕ್ಕೂ ನನ್ನ ಧನ್ಯವಾದಗಳು.

ಆದರೆ, ವೈಯಕ್ತಿಕ ಕಾರಣಗಳಿಂದಾಗಿ ಸಂಬಂಧಿಸಿದ ಜವಾಬ್ದಾರಿಯನ್ನು ನಾನು ಸ್ವೀಕರಿಸುವುದಿಲ್ಲ .ಈ ಕುರಿತು ಸಂಬಂಧಿಸಿದ ಯಾವುದೇ ಇಲಾಖೆಯ ವ್ಯಕ್ತಿಗಳು, ಅಧಿಕಾರಿಗಳು ನನ್ನನ್ನು ಈವರೆಗೆ ಸಂಪರ್ಕಿಸಿಯೂ ಇಲ್ಲ .ಅಂತಹ ಪತ್ರ- ಆದೇಶ ನನಗೆ ಬಂದಿಲ್ಲ. ಒಂದು ವೇಳೆ ಅದು ಬಂದಾಗಲೂ ನನ್ನ ಈ ಅಭಿಪ್ರಾಯ ಬದಲಾಗುವುದಿಲ್ಲ. ದಯವಿಟ್ಟು ಯಾರೂ ಕೂಡಾ ಇದನ್ನು ನನ್ನ ಅಹಂ, ಉದ್ದಟತನವೆಂದು ಭಾವಿಸಬಾರದು .ಇಂಥ ಸರಳ ಸೌಜನ್ಯ- ನಿರಾಕರಣೆಗೆ ನನಗೆ ತೇಜಸ್ವಿ ಅವರೇ ಸ್ಪೂರ್ತಿ.

ಸರಕಾರ ಮುಂದೆ ಯಾರನ್ನೇ ಬೇಕಾದರೂ ಆಯ್ಕೆ ಮಾಡಲಿ, ತೇಜಸ್ವಿಯ ವಿಚಾರದಲ್ಲಿ ಅವರಿಗೆ ನನ್ನ ಸಹಾಯ ಇದ್ದೇ ಇದೆ. ಆದರೆ ಇಂಥ ಪ್ರತಿಷ್ಠಾನ ಪ್ರಾಧಿಕಾರ ಅಕಾಡೆಮಿಗಳಿಗೆ ನೇಮಕ ಮಾಡುವಾಗ ಸೌಜನ್ಯಕ್ಕಾದರೂ ಅವರನ್ನು ಸಂಪರ್ಕಿಸಿ ಪೂರ್ವಾನುಮತಿ ಪಡೆಯುವುದು ಹೆಚ್ಚು ಸೂಕ್ತ. ಆಗ ಇಂತಹ ಅನಪೇಕ್ಷಿತ ಮುಜುಗರವೂ ತಪ್ಪುತ್ತದೆ .ದಯವಿಟ್ಟು ಸಂಸ್ಕೃತಿ ಇಲಾಖೆ ಇದನ್ನು ಗಮನಿಸಬೇಕೆಂದು ವಿನಮ್ರ ಕೋರಿಕೆ ಎಂದು ನರೇಂದ್ರ ರೈ ದೇರ್ಲ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ 9 ಮಂದಿಯನ್ನ ನೇಮಿಸಲಾಗಿದೆ. ಈ‌ ಪ್ರತಿಷ್ಠಾನದಲ್ಲಿ ಮೃತಪಟ್ಟಿರುವ ರಾಜೇಶ್ವರಿ ‌ಪೂರ್ಣಚಂದ್ರ ತೇಜಸ್ವಿ ಅವರನ್ನೂ ಸದಸ್ಯರನ್ನ ಸೇರಿಸಲಾಗಿದೆ. ರಾಜೇಶ್ವರಿ ಅವರು ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿಯಾಗಿದ್ದು, ಅವರು ಮೃತಪಟ್ಟು 8 ತಿಂಗಳಾಗಿದೆ. ಆದರೂ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ರಾಜೇಶ್ವರಿ ಅವರನ್ನ ಸದಸ್ಯರನ್ನಾಗಿ ನೇಮಿಸಿರುವ ಮೂಲಕ ಸರ್ಕಾರ ಎಡವಟ್ಟು ಮಾಡಿಕೊಂಡಿದೆ.

ನಾಲಗೆ ಕತ್ತರಿಸ್ತೀವಿ- ಕೆಎಸ್ ಈಶ್ವರಪ್ಪನವರಿಗೆ ಬೆದರಿಕೆ ಪತ್ರದ ಒಕ್ಕಣೆ

0

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನವರಿಗೆ ಅನಾಮಧೇಯ ಪತ್ರ ಬರೆದಿರುವ ದುಷ್ಕರ್ಮಿಗಳು ಮಗನೇ ನಿನ್ನ ನಾಲಗೆ ಕತ್ತರಿಸುತ್ತೇವೆ ಎಂದು ಬೆದರಿಸಿದ್ದಾರೆ.

ಶಿವಮೊಗ್ಗದ ಮಲ್ಲೇಶ್ವರನಗರದಲ್ಲಿರುವ ಈಶ್ವರಪ್ಪನವರ ಮನೆಗೆ ಅನಾಮಧೇಯ ಪತ್ರ ಬಂದಿದೆ. ನಿರಂತರವಾಗಿ ಮುಸ್ಲಿಂರನ್ನು ಟೀಕಿಸುತ್ತಾ, ಮುಸ್ಲಿಂರನ್ನು ಗೂಂಡಾಗಳು ಎಂದು ಕರೆಯುವ ನಿನ್ನನ್ನು ಬಿಡುವುದಿಲ್ಲ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆ ಬೆನ್ನೂರಿನಲ್ಲಿ ಕಾಲೇಜು ಕಟ್ಟಲು ಮುಸ್ಲಿಂ ಸಿಮೆಂಟ್ ಬ್ರಿಕ್ಸ್ ಗಳನ್ನು ಬಳಸುತ್ತಿದ್ದೀರಾ. ಆದರೂ ನಿಮಗೆ ಮುಸ್ಲಿಂರು ಬೇಡ. ನಿನಗೆ ನಾಚಿಕೆಯಾಗಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.

ಯಾರೋ ಹೇಡಿಗಳು ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾರೆ. ಈ ರೀತಿಯ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ತನಿಖೆ ನಡೆಸಿ ಹೇಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಈಶ್ವರಪ್ಪನವರು ಹೇಳಿಕೆ ನೀಡಿದ್ದಾರೆ.

ಮಂಕಿಪಾಕ್ಸ್ ಸೋಂಕಿಗೆ ಆಕ್ಸ್ಫರ್ಡ್ ವಿವಿ ಔಷಧ ಸಂಶೋಧನೆ

0

ಮಂಕಿಪಾಕ್ಸ್‌ನ ಹೆಚ್ಚುತ್ತಿರುವ ಪ್ರಕರಣಗಳ ನಡುವೆ, ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಮಂಕಿಪಾಕ್ಸ್ ವಿರುದ್ಧ ಔಷಧದ ಪರಿಣಾಮಕಾರಿತ್ವವನ್ನ ಪರೀಕ್ಷಿಸಲು ಪ್ಲಾಟಿನಂ ಎಂಬ ಪ್ರಯೋಗವನ್ನು ಪ್ರಾರಂಭಿಸಿದೆ. ಸಿಗಾದ ಟೆಕೊವಿರಿಮ್ಯಾಟ್, ಟಿಪೊಕ್ಸ್ ಎಂಬ ಬ್ರಾಂಡ್ ನೇಮ್ ಆಗಿ ಮಾರಾಟವಾಗುತ್ತಿತ್ತು.

ಇದನ್ನು ಆರಂಭದಲ್ಲಿ ಯುರೋಪಿಯನ್ ಯೂನಿಯನ್ ಮತ್ತು ಯುನೈಟೆಡ್ ಕಿಂಗ್ ಡಮ್‌ನಿಂದ ಸಿಡುಬು, ಮಂಕಿಪಾಕ್ಸ್ ಹಾಗೂ ಕೌಪಾಕ್ಸ್ಗಳನ್ನು ಒಳಗೊಂಡಿರುವ ಆರ್ಥೋಪಾಕ್ಸ್ ವೈರಸ್ ಕುಟುಂಬದಿಂದ ಉಂಟಾಗುವ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿತ್ತು.

ಹೀಗಿರುವಾಗ, ಈ ಔಷಧವನ್ನು ಮಂಕಿಪಾಕ್ಸ್‌ನ ತೀವ್ರ ಪ್ರಕರಣಗಳಿಗೆ ಬಳಸಲು ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಏಜೆನ್ಸಿ ಅನುಮೋದಿಸಿದೆ. ಆದ್ರೆ, ಮಂಕಿಪಾಕ್ಸ್ ಚಿಕಿತ್ಸೆಯಲ್ಲಿ ಔಷಧದ ಪರಿಣಾಮಕಾರಿತ್ವವನ್ನ ಸಾಬೀತುಪಡಿಸಲು ಪ್ರಯೋಗವನ್ನು ನಡೆಸಲಾಗುತ್ತಿದೆ. ಈ ಪ್ರಯೋಗ ಯೋಜನೆಯನ್ನ ಕೈಗೆತ್ತಿಕೊಂಡಿರುವ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ತಂಡವು ಈ ಹಿಂದೆ ಕೊರೋನಾ ಚಿಕಿತ್ಸೆಗಳ ಪರಿಣಾಮಕಾರಿತ್ವವನ್ನ ಪರೀಕ್ಷಿಸುವ ಪ್ರಯೋಗ ಗಳಲ್ಲಿ ಭಾಗಿಯಾಗಿತ್ತು.

ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ನಿಂದ ನೇಮಕಾತಿ ಪ್ರಕ್ರಿಯೆ

0

ಉತ್ತರ ಕರ್ನಾಟಕದ ಐಟಿ ಉದ್ಯೋಗ ಆಕಾಂಕ್ಷಿಗಳಿಗೆ ಇನ್ಫೋಸಿಸ್ ಸಿಹಿ ಸುದ್ದಿ ನೀಡಿದೆ. ಹುಬ್ಬಳ್ಳಿ ಇನ್ಫೋಸಿಸ್ ಕ್ಯಾಂಪಸ್ ಕಾರ್ಯಾರಂಭ ಮಾಡಿದ್ದು, ಈ ಉದ್ಯೋಗಿಗಳ ನೇಮಕಾತಿಗೆ ಮುಂದಾಗಿದೆ.

ಹುಬ್ಬಳ್ಳಿ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಖಾಲಿ ಇರುವ ಏರೋಸ್ಪೇಸ್ ಮತ್ತು ಜಾವಾ ಡೆವಲರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಉತ್ತರ ಕರ್ನಾಟಕದಲ್ಲೇ ಕೆಲಸ ಬೇಕು ಎನ್ನುವವರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು.
ಖಾಲಿ ಇರುವ ಹುದ್ದೆ: ಜಾವಾ ಡೆವಲಪರ್
ಅನುಭವ: 5 ವರ್ಷಕ್ಕಿಂತ ಹೆಚ್ಚಿನ ಅನುಭವ
ತಾಂತ್ರಿಕ ಮತ್ತು ವೃತ್ತಿಪರ ಅಗತ್ಯತೆಗಳು:
ಪ್ರಾಥಮಿಕ ಕೌಶಲ್ಯಗಳು: ಜಾವಾ, ಜಾವಾ-ಜಾವಾ 8, ಜಾವಾ-ಮೈಕ್ರೋ ಸರ್ವೀಸಸ್, ಜಾವಾ – ಸ್ಪ್ರಿಂಗ್ಬೂಟ್, ಜಾವಾ-ಎಎಲ್ಎಲ್

ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಆಫ್ ಎಂಜಿನಿಯರಿಂಗ್, ಬ್ಯಾಚುಲರ್ ಆಫ್ ಟೆಕ್ನಾಲಜಿ, ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್‌ಗಳು, ಮಾಸ್ಟರ್ ಆಫ್ ಟೆಕ್ನಾಲಜಿ, ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್‌ಗಳು, ಮಾಸ್ಟರ್ ಆಫ್ ಸೈನ್ಸ್, ಮಾಸ್ಟರ್ ಆಫ್ ಇಂಜಿನಿಯರಿಂಗ್

ಅನುಭವ: 5 ವರ್ಷಕ್ಕಿಂತ ಹೆಚ್ಚಿನ ಅನುಭವ
ತಾಂತ್ರಿಕ ಮತ್ತು ವೃತ್ತಿಪರ ಅಗತ್ಯತೆಗಳು:
ಪ್ರಾಥಮಿಕ ಕೌಶಲ್ಯಗಳು: ಏರೋಸ್ಪೇಸ್ ಡೊಮೈನ್, ಏರೋಸ್ಪೇಸ್ ಡೊಮೈನ್-ಏರ್‍‌ಕ್ರಾಫ್ಟ್ ನಿರ್ವಹಣೆ, ಎಂಬೆಡೆಡ್ ಸಾಫ್ಟ್‌ವೇರ್-ನಿಯಂತ್ರಣ ವ್ಯವಸ್ಥೆಗಳು ಮತ್ತು ಸ್ವಾಧೀನ ವ್ಯವಸ್ಥೆಗಳು

ಮಾಧ್ಯಮಿಕ ಕೌಶಲ್ಯಗಳು: ಏರೋ ಎಂಜಿನ್ ವಿನ್ಯಾಸ, ಏರೋ ಎಂಜಿನ್ ಒತ್ತಡ, CFD, UGNX
ಆದ್ಯತೆಯ ಕೌಶಲ್ಯಗಳು:
ಎಂಬೆಡೆಡ್ ಸಾಫ್ಟ್‌ವೇರ್ : ನಿಯಂತ್ರಣ ವ್ಯವಸ್ಥೆಗಳು ಮತ್ತು ಸ್ವಾಧೀನ ವ್ಯವಸ್ಥೆಗಳು
ಏರೋಸ್ಪೇಸ್ ಡೊಮೈನ್ : ಏರ್‍‌ಕ್ರಾಫ್ಟ್ ನಿರ್ವಹಣೆ

ಆಸಕ್ತ ಅಭ್ಯರ್ಥಿಗಳು @InfosysCareers ಅಧಿಕೃತ ಟ್ವಿಟರ್ ಖಾತೆಗೆ ಭೇಟಿ ನೀಡಿ, ಅಲ್ಲಿ ಕೊಟ್ಟಿರುವ ಲಿಂಕ್ ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿ

ಬೆಳಗಾವಿ ಚಿರತೆ ಹಿಡಿಯಲು ಸಕ್ರೆಬೈಲ್ ಪಡೆ

0

ಬೆಳಗಾವಿ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಇನ್ನೂ ಅರಣ್ಯ ಇಲಾಖೆಯ ಕಣ್ಣು ತಪ್ಪಿಸಿಕೊಂಡಿದ್ದು ಇದೀಗ ಚಿರತೆ ಸೆರೆಗೆ ಶಿವಮೊಗ್ಗದಿಂದ ವಿಶೇಷ ತಂಡ ಬೆಳಗಾವಿಗೆ ಹೊರಟಿದೆ.

ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ ನಾನಾ ರೀತಿಯ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಿಲ್ಲ, ಇದೀಗ ಶಿವಮೊಗ್ಗದ ಡಾಟಿಂಗ್ ಸ್ಪೆಷಲಿಸ್ಟ್ ವನ್ಯಜೀವಿ ತಜ್ಞ ಡಾ. ವಿನಯ್ ನೇತೃತ್ವದಲ್ಲಿ ವಿಶೇಷ ತಂಡವೊಂದು ಬೆಳಗಾವಿಗೆ ತೆರಳಲು ಸಿದ್ಧವಾಗಿದೆ, ಇದರಲ್ಲಿ ಸಕ್ರೇಬೈಲು ಆನೆ ಬಿಡಾರದ ಅರ್ಜುನ ಹಾಗೂ ಆಲೆ ಆನೆಗಳೂ ಸೇರಿ ವೈದ್ಯರು, ಸಹಾಯಕ ಸಿಬ್ಬಂದಿ, ಮಾವುತರು, ಕಾವಾಡಿಗಳು ಮತ್ತು ಬಿಡಾರದ ಸಹಾಯಕ ಸಿಬ್ಬಂದಿ ಸೇರಿದಂತೆ 8 ಜನರ ತಂಡ ಬೆಳಗಾವಿಗೆ ಹೊರಟಿದೆ.
ಚಿರತೆ ಪ್ರತ್ಯಕ್ಷಗೊಂಡ ಹಿನ್ನೆಲೆಯಲ್ಲಿ ಬೆಳಗಾವಿಯ ಕೆಲ ಶಾಲೆಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಲಾಗಿದೆ.

ಅಲ್ಲದೆ ಸೋಮವಾರ ಮುಂಜಾನೆ ನಗರದ ಪ್ರಮುಖ ರಸ್ತೆಯಲ್ಲೇ ಸಂಚರಿಸಿ ಭೀತಿ ಹುಟ್ಟಿಸಿದೆ.

ಗಣೇಶೋತ್ಸವದಲ್ಲಿ ಕಳೆದ ಬಾರಿಯ ಸೂಚನೆಗಳನ್ನೇ ಪಾಲಿಸಿ- ಲಕ್ಷ್ಮೀಪ್ರಸಾದ್

0

ಈ ಬಾರಿ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಹಿಂದೆ ವಿಧಿಸಿದ್ದ ನಿರ್ಬಂಧಗಳನ್ನು ಸಂಘ-ಸಂಸ್ಥೆಗಳು ಪಾಲಿಸಬೇಕು. ಹೊಸ ನಿರ್ಬಂಧಗಳನ್ನು ಹೇರುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು ತಿಳಿಸಿದ್ದಾರೆ.

ಗಣಪತಿ ಹಬ್ಬದ ಅಂಗವಾಗಿ ಪೊಲೀಸ್ ಇಲಾಖೆ ಏರ್ಪಡಿಸಿದ್ದ ಸಾಗರದ ಶಾರದಾಂಬ ಸಭಾ ಭವನದಲ್ಲಿ, ಮತ್ತು ಭದ್ರಾವತಿಯ ವಿವಿಧ ಸಂಘ-ಸಂಸ್ಥೆಗಳ ಮುಖಂಡರ ಜೊತೆ ಏರ್ಪಡಿಸಿದ್ದ, ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಯಾವುದೇ ರೀತಿಯ ಕಾನೂನು ಉಲ್ಲಂಘನೆ ಯಂತಹ ಚಟುವಟಿಕೆಗೆ ಅವಕಾಶ ಇಲ್ಲ. ಎಲ್ಲರೂ ಕಾನೂನು ಪಾಲನೆ ಮಾಡಬೇಕು. ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು ಎಂದು ಮನವಿ ಮಾಡಿಕೊಂಡರು.

ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಹಿಂದೆಯೇ ನಿರ್ಬಂಧಗಳನ್ನು ಹೇರಲಾಗಿದೆ. ಈ ಬಾರಿಯೂ ಅದೇ ನಿರ್ಬಂಧಗಳು ಮುಂದುವರೆಯಲಿವೆ. ಗಣಪತಿಯ ವಿಗ್ರಹದ ವಿಸರ್ಜನೆಗೆ ನಿಗದಿಪಡಿಸಿದ ಸಮಯದಲ್ಲಿ ನೆರವೇರಿಸುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಮನವಿ ಮಾಡಿದರು.

ಗಣಪತಿ ಪೆಂಡಾಲ್ ನಿರ್ಮಿಸುವವರು ಸುರಕ್ಷತೆ ದೃಷ್ಟಿಯಿಂದ ಅಳವಡಿಸುವುದು ಸೂಕ್ತ. ಪೆಂಡಾಲ್ ನಲ್ಲಿ ವಿದ್ಯುತ್, ಅಗ್ನಿ ಅವಘಡಕ್ಕೆ ಅವಕಾಶವಾಗದಂತೆ ಮುಂಜಾಗ್ರತ ಕ್ರಮವನ್ನು ವಹಿಸಬೇಕು ಎಂದು ಲಕ್ಷ್ಮೀ ಪ್ರಸಾದ್ ಅವರು ಸಲಹೆ ನೀಡಿದ್ದಾರೆ.

ಪ್ರವಾಸಿಗರನ್ನ ಆಕರ್ಷಿಸುವಲ್ಲಿ ಸಜ್ಜಾಗಿದೆ ಬಂಡಿಪುರರಾಷ್ಟ್ರೀಯ ಉದ್ಯಾನ

0

ಭಾರತದ ಎರಡನೆಯ ಅತಿ ದೊಡ್ಡ ಹುಲಿ ಸಂರಕ್ಷಣಾ ನೆಲೆ ಬಂಡೀಪುರ ರಾಷ್ಟ್ರೀಯ ಉದ್ಯಾನವು ವಯನಾಡ್, ಮುದುಮಲೈ ಮತ್ತು ನಾಗರಹೊಳೆಯೊಂದಿಗೆ ಗಡಿ ಹಂಚಿಕೊಂಡಿದೆ. ಇದು ದಕ್ಷಿಣ ಏಷ್ಯಾದ ಕಾಡು ಅನೆಗಳ ಅತಿ ದೊಡ್ಡ ವಾಸಸ್ಥಾನವೂ ಹೌದು. ಮೈಸೂರಿಗೆ ಬಂದ ಬಹುತೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಇದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದೆ.

ಇಲ್ಲಿ ಹುಲಿ, ಕಾಡು ನಾಯಿ, ಕಾಡು ಹಂದಿ, ಕರಡಿ, ಚಿರತೆ, ಜಿಂಕೆ, ಕಡವೆ, ಮಲಬಾರ್ ಅಳಿಲುಗಳು ಮತ್ತಿತರ ಪ್ರಾಣಿಗಳು ಕಾಣಸಿಗುತ್ತವೆ. ಅರಣ್ಯ ಇಲಾಖೆಯಿಂದ ಪ್ರತಿದಿನ ಎರಡು ಬಾರಿ ಸಫಾರಿ ನಡೆಸಲಾಗುತ್ತದೆ. ಒಂದು ಗಂಟೆ ಅವಧಿಯ ಬಸ್ ಸಫಾರಿ, ಜೀಪ್ ಸಫಾರಿಗಳು ಹೆಚ್ಚು ಸೂಕ್ತವಾಗಿವೆ.

ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳು ಇಲ್ಲಿಗೆ ಭೇಟಿ ನೀಡುವುದು ಉತ್ತಮ. ಇದು ಬೆಂಗಳೂರಿನಿಂದ 220 ಕಿ.ಮೀ. ದೂರದಲ್ಲಿದೆ. ವಾಹನಗಳ ಅಪಘಾತ ತಪ್ಪಿಸಲು ರಾತ್ರಿ 9 ರಿಂದ ಬೆಳಗಿನ 6 ರವರೆಗೆ ಇಲ್ಲಿ ಯಾವುದೇ ವಾಹನ ಪ್ರಯಾಣಿಸುವುದಿಲ್ಲ. ರಾಷ್ಟ್ರೀಯ ಉದ್ಯಾನವನದ ಹೊರಗೆ ಬಂಡೀಪುರ ಸಫಾರಿ ಲಾಡ್ಜ್ ಇದೆ. ಇದರ ಹೊರತಾಗಿಯೂ ಕೆಲವು ಖಾಸಗಿ ರೆಸಾರ್ಟ್.

ಬೇನಾಮಿ ಆಸ್ತಿ ಪ್ರಕರಣದಲ್ಲಿ ಶಿಕ್ಷೆ ಅಸಾಂವಿಧಾನಿಕ- ಸುಪ್ರೀಂ ಕೋರ್ಟ್

0

ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ 1988ರ ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆಯ ಸೆಕ್ಷನ್ 3(2) ಅಸಂವಿಧಾನಿಕ ಎಂದು ಘೋಷಿಸಿದೆ.

ಇದಾದ ನಂತರ ಬೇನಾಮಿ ಆಸ್ತಿ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದರೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶ ಕೊನೆಗೊಂಡಿದೆ. ಈ ಹಿಂದೆ ತಪ್ಪಿತಸ್ಥರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿತ್ತು. ಇಂತಹ ಪರಿಸ್ಥಿತಿಯಲ್ಲಿ 2016ರ ತಿದ್ದುಪಡಿ ಕಾಯಿದೆಯ ಸೆಕ್ಷನ್ 3 (2) ಕೂಡ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 2016ರ ತಿದ್ದುಪಡಿಯಾದ ಬೇನಾಮಿ ಕಾಯಿದೆಯನ್ನು ಹಿಂದಿನಂತೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಸುಪ್ರೀಂ ಹೇಳಿದೆ.

ಮೆಟ್ರಿಕ್ ನಂತರದ ಹಾಸ್ಟೆಲ್ ಗೆ ಜಿಪಂ ಸಿಇಓ ದಿಢೀರ್ ಭೇಟಿ

0

ಆ.22 ರಂದು ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ.ಪ್ರಕಾಶ್ ಇವರು ನಗರದ ಎನ್.ಟಿ. ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ:ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕ ವಿದ್ಯಾರ್ಥಿನಿಲಯಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಿದರು.

ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ, ಹಾಜರಿರುವ ವಿದ್ಯಾರ್ಥಿಗಳ ಸಂಖ್ಯೆ, ವಿದ್ಯಾರ್ಥಿಗಳು ಬಯೋ ಮೆಟ್ರಿಕ್ ಹಾಜರಾತಿ ನಮೂದಿಸುತ್ತಿರುವ ಬಗ್ಗೆ, ಸೋಲಾರ್ ವಾಟರ್ ಹೀಟರ್ ನಿರ್ವಹಣೆ, ಕುಡಿಯುವ ನೀರಿನ ವಾಟರ್ ಫಿಲ್ಟರ್ ನಿರ್ವಹಣೆ, ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ, ಸ್ಟಾಕ್ ರಿಜಿಸ್ಟರ್ ಸರಿಯಾಗಿ ನಿರ್ವಹಿಸಿರುವ ಬಗ್ಗೆ ಪರಿಶೀಲಿಸಿದರು.

ಅಡುಗೆಕೋಣೆಯ ಸ್ವಚ್ಛತೆಯ ಬಗ್ಗೆ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರವನ್ನು ನೀಡುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ವಿದ್ಯಾರ್ಥಿಗಳೊಂದಿಗೆ ಆಹಾರವನ್ನು ಸೇವಿಸಿದರು. ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರದಿಂದ ನೀಡುವ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಸರ್ಕಾರದಿಂದ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾಗರಾಜ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹೆಚ್.ಇ.ಅಜ್ಜಪ್ಪ, ಶಿವಮೊಗ್ಗ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಅವಿನಾಶ್.ಸಿ, ಶಿವಮೊಗ್ಗ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಮಲ್ಲೇಶಪ್ಪ, ವಿದ್ಯಾರ್ಥಿನಿಲಯದ ವಾರ್ಡನ್ ಕೊಟ್ರೇಶ್‍ಹಾಜರಿದ್ದರು.