Saturday, March 21, 2026
Saturday, March 21, 2026
Home Blog Page 1459

ನಂಬಿಕಸ್ಥನಾಯಿ ದಿನ ಶ್ವಾನಗಳಿಗೊಂದು ಸಲಾಮ್

0

ಅಂತಾರಾಷ್ಟ್ರೀಯ ಶ್ವಾನ ದಿನವನ್ನು ಪ್ರತಿ ವರ್ಷ ಆಗಸ್ಟ್ 26 ರಂದು ಆಚರಿಸಲಾಗುತ್ತದೆ.

ಆಗಸ್ಟ್ 26 ನೇ ದಿನಾಂಕವನ್ನು ಆಯ್ಕೆ ಮಾಡಲಾಗಿದೆ ಏಕೆಂದರೆ ಈ ದಿನಾಂಕದಂದು ಕೊಲೀನ್ ಅವರ ಕುಟುಂಬವು ಸ್ಥಳೀಯ ಪ್ರಾಣಿಗಳ ಆಶ್ರಯದಿಂದ ತನ್ನ ಮೊದಲ ನಾಯಿ “ಶೆಲ್ಟಿ” ಅನ್ನು ದತ್ತು ತೆಗೆದುಕೊಂಡಿತು. ಆ ಸಮಯದಲ್ಲಿ ಕೊಲೀನ್‌ಗೆ 10 ವರ್ಷ.

2004 ರಲ್ಲಿ, ಪೆಟ್ & ಫ್ಯಾಮಿಲಿ ಲೈಫ್ ಸ್ಟೈಲ್ ಎಕ್ಸ್‌ಪರ್ಟ್, ಅನಿಮಲ್ ರೆಸ್ಕ್ಯೂ ಅಡ್ವೊಕೇಟ್, ಕನ್ಸರ್ವಶನಿಸ್ಟ್ ಡಾಗ್ ಟ್ರೈನರ್ ಮತ್ತು ಲೇಖಕ ಕೊಲೀನ್ ಪೈಜ್ ಅವರು ಈ ದಿನವನ್ನು ಸ್ಥಾಪಿಸಿದರು. ಪ್ರಪಂಚದಾದ್ಯಂತ ಪ್ರಾಣಿಗಳ ಪ್ರಾಮುಖ್ಯತೆಯನ್ನು ಗಮನಕ್ಕೆ ತರಲು ಮತ್ತು ದತ್ತು ಪಡೆಯಲು ಪ್ರೋತ್ಸಾಹಿಸಲು ಅವರು ರಾಷ್ಟ್ರೀಯ ನಾಯಿಮರಿ ದಿನ, ರಾಷ್ಟ್ರೀಯ ಮಟ್ ಡೇ, ರಾಷ್ಟ್ರೀಯ ಬೆಕ್ಕು ದಿನ ಮುಂತಾದ ಹಲವಾರು ರಜಾದಿನಗಳ ಸಂಸ್ಥಾಪಕರಾಗಿದ್ದಾರೆ.

ಪ್ರತಿ ವರ್ಷ ರಕ್ಷಿಸಬೇಕಾದ ವಿವಿಧ ತಳಿಯ ನಾಯಿಗಳನ್ನು ಗುರುತಿಸಲು ಸಾರ್ವಜನಿಕರನ್ನು ಉತ್ತೇಜಿಸುವುದು ಅಂತರರಾಷ್ಟ್ರೀಯ ಶ್ವಾನ ದಿನದ ಮುಖ್ಯ ಉದ್ದೇಶವಾಗಿದೆ.

ಇನ್ನೂ ಹೆಚ್ಚಿನ ಸಂಖ್ಯೆಯ ಶ್ವಾನಗಳು ತಮ್ಮ ಮನೆಗಾಗಿ ಕಾಯುತ್ತಿವೆ ಜೊತೆಗೆ ತಮ್ಮ ಆಶ್ರಯವನ್ನು ಬಯಸುತ್ತಿವೆ ಎಂಬುದನ್ನು ನೆನಪಿಸಲು ಈ ದಿನವನ್ನು ರಚಿಸಲಾಗಿದೆ.

ಈಡೀ ಜಗತ್ತಿನಲ್ಲಿ ಬಹುಪಾಲು ಜನರು ಅಕ್ಕರೆಯಿಂದ ಪ್ರೀತಿಸುವ ಸಾಕು ಪ್ರಾಣಿಗಳಲ್ಲಿ ನಾಯಿ ಮೊದಲ ಸಾಲಿನಲ್ಲಿದೆ. ಇವು ಮಾನವನ ಅತ್ಯುತ್ತಮ ಸ್ನೇಹಿತ ಎಂದು ಕೂಡ ಕರೆಯಲಾಗುತ್ತದೆ. ನೀತಿ, ನಿಯತ್ತಿಗೆ ಇರುವ ಪ್ರಾಣಿ ಅಂದ್ರೆ ಅದು ಶ್ವಾನ ಮಾತ್ರ ಎಂಬುದು ಹಿಂದಿನ ಕಾಲದಿಂದ ಹಿಡಿದು ಚಾಲ್ತಿಯಲ್ಲಿರುವ ಹಿರಿಯರ ನಾಣ್ಣುಡಿ. ಇವೆಲ್ಲ ಕಾರಣಗಳಿಂದ ಇಂದಿನ ಯುವ ಪೀಳಿಗೆ ಕೂಡ ಶ್ವಾನ ಸಾಕಾಣಿಕೆಯಲ್ಲಿ ಅತೀವ ಆಸಕ್ತಿಯನ್ನು ಹೊಂದಿರುವುದನ್ನು ನಾವು ಇತ್ತೀಚಿನ ದಿನಗಳಲ್ಲಿ ಕಾಣುತ್ತೇವೆ.

ಡಿಸಿ ಅವರೊಂದಿಗೆ ಒಂದು ದಿನ ಗೌರವ ಪಡೆದ ಪ್ರಬಂಧ ಪ್ರತಿಭಾವಂತೆ

0

ವಿಶ್ವ ಯುವ ಕೌಶಲ್ಯ ದಿನಾಚರಣೆ ಅಂಗವಾಗಿ ಕೌಶಲ್ಯ ಅಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಲ್ಲಿರುವ ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ವತಿಯಿಂದ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಕು.ಹಂಸಿಣಿ ಎನ್ ಇವರು ಶಿವಮೊಗ್ಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ವಿಜೇತರಾಗಿರುತ್ತಾರೆ.

ಇವರಿಗೆ ‘ಕೌಶಲ್ಯ ಸ್ಪೂರ್ತಿ’ ಶೀರ್ಷಿಕೆ ಅಡಿಯಲ್ಲಿ ‘ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ’ (ಡಿಸ್ಟ್ರಿಕ್ಟ್ ಕಲೆಕ್ಟರ್ ಶ್ಯಾಡೊಯಿಂಗ್) ಕಾರ್ಯಕ್ರಮವನ್ನು ಆ.25 ರಂದು ಏರ್ಪಡಿಸಲಾಗಿದ್ದು ಕು.ಹಂಸಿಣಿ ಎನ್ ಇವರು ಜಿಲ್ಲಾಧಿಕಾರಿಗಳೊಂದಿಗೆ ಅವರ ದಿನದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ, ಅವರ ಅಧ್ಯಕ್ಷತೆಯಲ್ಲಿ ನಡೆದ ಹಲವು ಸಭೆಗಳಲ್ಲಿ ಪಾಲ್ಗೊಂಡು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಗಮನಿಸಿರುತ್ತಾರೆ.

ಈ ಕುರಿತು ಕು.ಹಂಸಿಣಿ ಎನ್ ಪ್ರತಿಕ್ರಿಯೆ ನೀಡಿ, ಈ ಕಾರ್ಯಕ್ರಮದಿಂದಾಗಿ ಅನೇಕ ಹೊಸ ವಿಷಯಗಳನ್ನು ಕಲಿಯಲು ಅವಕಾಶ ದೊರೆಯಿತು. ಅಲ್ಲದೇ ಯಾವುದೇ ಕಾರ್ಯದಲ್ಲಿ ಯಶಸ್ವಿಯಾಗಲು ಕೌಶಲ್ಯ ಬಹಳ ಮುಖ್ಯ ಎಂದು ತಿಳಿಯಿತು. ಈ ಅವಕಾಶ ಕಲ್ಪಿಸಿಕೊಟ್ಟ ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮಕ್ಕೆ ಧನ್ಯವಾದ ತಿಳಿಸುತ್ತೇನೆ. ಇಂದು ನನ್ನ ಪಾಲಿನ ಸುವರ್ಣ ದಿನ. ಜಿಲ್ಲಾಧಿಕಾರಿಗಳ ದಿನಚರಿ ಹೇಗಿರುತ್ತದೆ ಎಂಬುದನ್ನು ಹತ್ತಿರದಿಂದ ನೋಡಲು ಸಾಧ್ಯವಾಯಿತು. ಅವರ ಕೆಲಸದ ಒತ್ತಡ ಎಷ್ಟಿರುತ್ತದೆ ಎಂದು ಹತ್ತಿರದಿಂದ ನೋಡಿದ ಮೇಲೆ ಅರಿವಾಯಿತು ಎಂದ ಅವರು ನಾನೂ ಐಎಎಸ್ ಅಧಿಕಾರಿ ಆಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸುರೇಶ್.ಹೆಚ್.ಎಂ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಆರ್ ಇವರಿಗೆ ವಂದನೆಗಳನ್ನು ಸಲ್ಲಿಸಿದರು.

ಕಿರ್ಲೋಸ್ಕರ್ ಫೆರಸ್ ಮುಡಿಗೆ ಗ್ರೀನ್ ಟೆಕ್ ಪರಿಸರ ಪ್ರಶಸ್ತಿ ಕಿರೀಟ

0

ಪರಿಸರ ಸಂರಕ್ಷಣೆ ವಿಭಾಗದಲ್ಲಿ ನೀಡುವ ಪ್ರತಿಷ್ಠಿತ ಗ್ರೀನ್‌ಟೆಕ್ ಪರಿಸರ ಪ್ರಶಸ್ತಿ-2022 ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಗೆ ಸಂದಿದೆ. ಈ ಪ್ರಶಸ್ತಿಯೊಂದಿಗೆ ಸಿಎಸ್‌ಆರ್, ಸುರಕ್ಷತೆ ಹಾಗೂ ಮಾನವ ಸಂಪನ್ಮೂಲದ ಜೊತೆಗೆ ಸಂರಕ್ಷಣೆಯ ಕುರಿತ ಪ್ರಶಸ್ತಿಗೆ ಭಾಜನವಾಗಿದೆ.

ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಯು ಪರಿಸರ ಸಂರಕ್ಷಣೆಯನ್ನು ಸುಧಾರಿಸುವ, ನಾವು ಕೆಲಸ ಮಾಡುವ ಮತ್ತು ವಾಸಿಸುವ ಪರಿಸರದ ಸಂರಕ್ಷಣೆಗಾಗಿ ದೀರ್ಘಕಾಲೀನ ಬದಲಾವಣೆಗಳನ್ನು ಸೃಷ್ಠಿಸುವ ಮತ್ತು ಸುಸ್ಥಿರ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತ ನವೀನ ಅಭ್ಯಾಸಗಳು ಮತ್ತು ಉಪಕ್ರಮಗಳನ್ನು ಅಳವಡಿಸಿಕೊಂಡಿರುವ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ನವದೆಹಲಿಯ ಗ್ರೀನ್‌ಟೆಕ್ ಫೌಂಡೇಶನ್‌ರವರು ದಿನಾಂಕ ೨೩ ಮತ್ತು ೨೪ನೇ ಆಗಸ್ಟ್ ೨೦೨೨ ರಂದು ಅಸ್ಸಾಂನ ಗೌಹಾಟಿಯ ತಾಜ್ ವಿವಾಂತ ಹೋಟೆಲ್‌ನಲ್ಲಿ ಆಯೋಜಿಸಲಾದ ಎರಡು ದಿನಗಳ ಶೃಂಗಸಭೆ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಿರ್ಲೋಸ್ಕರ್ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಪಿ. ನಾರಾಯಣ ಹಾಗೂ ಪರಿಸರ ಮತ್ತು ಸುರಕ್ಷತಾ ಉಪ ವ್ಯವಸ್ಥಾಪಕರಾದ ಶ್ರೀ ಸಂತೋಷ್ ಬಿ ಗುತ್ತೇದಾರ್ ಇವರು ಅಸ್ಸಾಂ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಡಾಕ್ಟರ್ ಅರುಪ್ ಕುಮಾರ್ ಮಿಶ್ರಾ, ಓಎನ್‌ಜಿಸಿ ಲಿಮಿಟೆಡ್‌ನ ಮಾಜಿ ನಿರ್ದೇಶಕರು ಹಾಗೂ ಐಐಎಮ್-ರೋಹ್‌ಟಕ್‌ನ ಶ್ರೀ ವೇದಪ್ರಕಾಶ್ ಮಹಾವರ್ ಮತ್ತು ನವದೆಹಲಿಯ ಗ್ರೀನ್‌ಟೆಕ್ ಫೌಂಡೇಶನ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಕಮಲೇಶ್ವರ್ ಶರಣ್ ಇವರಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು, ಅಸ್ಸಾಂ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ರವಿಶಂಕರ್ ಪ್ರಸಾದ್ ಇವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು.

ಪರಿಸರ, ಸುರಕ್ಷತೆ, ವೃತ್ತಿಪರರು, ನಿಯಂತ್ರಕ ಪ್ರಾಧಿಕಾರಗಳು, ತಜ್ಞರು, ಸಲಹೆಗಾರರು ಮತ್ತು ಪರಿಸರ ಹೋರಾಟಗಾರರು ಇತ್ಯಾದಿ ಸುಮಾರು ೨೫೦ ಪ್ರತಿನಿಧಿಗಳು ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು, ಅನೇಕ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಕಂಪನಿಗಳ ಉನ್ನತ ಕಾರ್ಯನಿರ್ವಾಹಕರು ಮತ್ತು ಪ್ರತಿನಿಧಿಗಳೂ ಸಹ ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
ಎಲ್ಲಾ ಉದ್ಯೋಗಿಗಳು ಸಂಸ್ಥೆಯ ದೃಷ್ಠಿಕೋನ, ಗುರಿ ಹಾಗೂ ಮೌಲ್ಯಗಳನ್ನೊಳಗೊಂಡಂತೆ ಕಾರ್ಯಕ್ಷಮತೆಯ ಮೂಲಕ ಕೆಲಸ ನಿರ್ವಹಿಸಿದುದ್ದಕ್ಕಾಗಿ ಈ ಪ್ರಶಸ್ತಿಯು ಕಾರ್ಖಾನೆಗೆ ಲಭಿಸಿರುತ್ತದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಆರ್.ವಿ. ಗುಮಾಸ್ತೆಯವರು ಈ ಸಂದರ್ಭದಲ್ಲಿ ತಿಳಿಸಿದರು.

ಸೆಪ್ಟೆಂಬರ್ ನಿಂದ ರೈತಶಕ್ತಿ ಯೋಜನೆ ಚಾಲನೆ-ಬಿ.ಸಿ.ಪಾಟೀಲ್

0

ರೈತರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಕೃಷಿ ಇಲಾಖೆ ಮುಂದಾಗಿದ್ದು, ಕೃಷಿಕರ ಮೇಲಿನ ಹೊರೆ ತಪ್ಪಿಸುವ ಸಲುವಾಗಿ ಬಜೆಟ್‌ನಲ್ಲಿ ಘೋಷಿಸಿದಂತೆ ” ರೈತ ಶಕ್ತಿ ಯೋಜನೆ” ಶೀಘ್ರವೇ ಚಾಲನೆ‌ ಸಿಗಲಿದೆ.

ರೈತರಿಗೆ ಕೃಷಿ ಯಾಂತ್ರೀಕರಣವು ಡೀಸೆಲ್‌ ಇಂಧನದ ಮೇಲೆ ಬಹುತೇಕ‌ ಅವಲಂಬಿತವಾಗಿದೆ.ಹೀಗಾಗಿ ರೈತರ ಮೇಲಿನ ಆರ್ಥಿಕ ಹೊರೆ ಆದಷ್ಟು ಕಡಿತಗೊಳಿಸುವ ನಿಟ್ಟಿನಲ್ಲಿ 2022 23 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಬರುವ ಸೆಪ್ಟೆಂಬರ್‌ನಲ್ಲಿ ” ರೈತ ಶಕ್ತಿ ಯೋಜನೆಗೆ” ಚಾಲನೆ ಸಿಗಲಿದೆ ಎಂದು ಕೃಷಿ ಸಚಿವ ಬಿ‌.ಸಿ.ಪಾಟೀಲ್ ಅವರು ತಿಳಿಸಿದ್ದಾರೆ.

ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನದ ವೆಚ್ಚದ ಹೊರೆಯನ್ನು ಕಡಿಮೆ ಮಾಡಲು ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ “ರೈತ ಶಕ್ತಿ ಯೋಜನೆ” ಜಾರಿಯಾಗಲಿದೆ.

ಪ್ರತಿ ಎಕರೆಗೆ ರೂ .250 / – ಗಳಂತೆ ಗರಿಷ್ಠ ಐದು ಎಕರೆಗೆ ಡಿ.ಬಿ.ಟಿ ಮೂಲಕ ಡೀಸೆಲ್ ಗೆ ಸಹಾಯಧನವನ್ನು ನೀಡಲು ” ರೈತ ಶಕ್ತಿ ” ಎಂಬ ಹೊಸ ಯೋಜನೆಯನ್ನು ಘೋಷಣೆ ಮಾಡಲಾಗಿದ್ದು , ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರಿ ಆದೇಶ ಹೊರಡಿಸಲಾಗಿದೆ‌.

ರಾಜ್ಯದ ರೈತರಿಗೆ ಕೃಷಿ ಇಲಾಖೆಯ ಎಲ್ಲಾ ಯೋಜನೆಗಳನ್ನು ರೈತರಿಗೆ FRUITS ಫೋರ್ಟಲ್‌‌ ಮೂಲಕ ನೋಂದಣಿ ಗುರುತಿನ ಸಂಖ್ಯೆ ಬಳಸಿ ಕಿಸಾನ್ ತಂತ್ರಾಂಶದ ಮೂಲಕವೇ ಅನುಷ್ಠಾನ ಮಾಡಲಾಗುತ್ತಿದೆ . ಅದೇ ರೀತಿಯಲ್ಲಿ FRUITS ಪೋರ್ಟಲ್‌ನಲ್ಲಿ ನೊಂದಣಿಗೊಂಡ ರಾಜ್ಯದ ಎಲ್ಲಾ ರೈತರಿಗೆ ರೈತ ಶಕ್ತಿ ಯೋಜನೆಯನ್ನು , ಸಹ ಕಿಸಾನ್ ತಂತ್ರಾಂಶ ಬಳಸಿಕೊಂಡು ನೇರ ವರ್ಗಾವಣೆ ( DBT ) ಮೂಲಕವೇ ಯೋಜನೆ ಅನುಷ್ಠಾನ ಮಾಡಲಾಗುವುದು. ನಗದು ಯೋಜನೆಯ FRUITS ಪೋರ್ಟಲ್ ನಲ್ಲಿ ನೊಂದಣಿಗೊಂಡ ರಾಜ್ಯದ ಎಲ್ಲಾ ರೈತರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.ಈ ಯೋಜನೆಯು ಅರ್ಹತಾಧಾರಿತ ಯೋಜನೆಯಾಗಿರುವುದರಿಂದ ಯಾವುದೇ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ , ದಾಖಲೆಗಳ ಪರಿಶೀಲನೆಯನ್ನು ಸರ್ಕಾರದ FRUITS ಪೋರ್ಟಲ್ ನಲ್ಲಿ ಲಭ್ಯವಿರುವ ದತ್ತಾಂಶಗಳ ಆಧಾರದ ಮೇಲೆ ಮಾಡಲಾಗುವುದು . FRUITS ಪೋರ್ಟಲ್‌ನಲ್ಲಿ ನಮೂದಿಸಲಾದ ಹಿಡುವಳಿಯ ವಿಸ್ತೀರ್ಣದ ಆಧಾರದ ಮೇಲೆ ರೈತರಿಗೆ ಡೀಸೆಲ್‌ ಸಹಾಯಧನವನ್ನು ನೇರ ನಗದು ವರ್ಗಾವಣೆ ( DBT ) ಮೂಲಕ ರೈತರ ಖಾತೆಗೆ ವರ್ಗಾಯಿಸಲಾಗುವುದು . FRUITS ತಂತ್ರಾಂಶದಲ್ಲಿ ನೋಂದಾವಣಿಗೊಂಡ ರೈತರು ಹೊಂದಿರುವ ಭೂ ಹಿಡುವಳಿಯ ಆಧಾರದ ಮೇಲೆ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ ರೂ .250 / – ರಂತೆ ಗರಿಷ್ಠ ಐದು ಎಕರೆಗೆ ರೂ .1250 / – ರವರಗೆ ಡೀಸೆಲ್ ಸಹಾಯಧನವನ್ನು ಒದಗಿಸಲಾಗುವುದು . ಅರ್ಹ ರೈತರಿಗೆ ಡೀಸಲ್ ಸಹಾಯಧನದ ಮೊತ್ತವನ್ನು ಸರ್ಕಾರದ DBT ವೋರ್ಟಲ್ ಮೂಲಕ ಆಧಾರದ ಸೀಡೆಡ್ ಬ್ಯಾಂಕ್ / ಪೋಸ್ಟ್ ಆಫೀಸ್ ಖಾತೆಗೆ ವರ್ಷಕ್ಕೊಮ್ಮೆ ವರ್ಗಾಯಿಸಲಾಗುವುದು.

ರೈತರು ನಿಯಮಾನುಸಾರ ಸೂಚಿಸಿದಂತೆ ಯೋಜನೆಯ ಅರ್ಹತಾಧಾರರಾಗಿ ಫಲಾನುಭವಿಗಳಾಗುವಂತೆ ಕೃಷಿ ಸಚಿವರು ರಾಜ್ಯದ ರೈತರಿಗೆ ತಿಳಿಸಿದ್ದಾರೆ.

ಜೀವನೋಪಾಯಕ್ಕೆ ಭೂಮಿ ಒತ್ತುವರಿ ರೈತರಿಗೆ ಕೊಂಚ ರಿಲೀಫ್

0

ಭೂಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಗುರುವಾರ ಜರುಗಿದ ರಾಜ್ಯ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ , ಜೀವನೋಪಾಯಕ್ಕೆ ಜಮೀನು ಒತ್ತುವರಿ ಮಾಡಿಕೊಂಡಿದ್ದ ಗ್ರಾಮೀಣ ಭಾಗದ ಅನೇಕ ರೈತರು ಎದುರಿಸುತ್ತಿದ್ದ ಬಂಧನ ಭೀತಿ ದೂರವಾದಂತಾಗಿದೆ.

ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011ರ ಪ್ರಕಾರ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು 2015ರ ಆಗಸ್ಟ್ ನಲ್ಲಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. 2016ರ ಆಗಸ್ಟ್ 16ರಂದು ಈ ವಿಶೇಷ ನ್ಯಾಯಾಲಯಗಳನ್ನು ಬೆಂಗಳೂರಿನಲ್ಲಿ ಉದ್ಘಾಟಿಸಲಾಗಿತ್ತು. ಈ ಕಾಯ್ದೆಯ ಪ್ರಕಾರ ಭೂ ಒತ್ತುವರಿದಾರರಿಗೆ 5 ವರ್ಷ ಜೈಲು, 50 ಸಾವಿರ ರೂ. ದಂಡ, ನೆರವಾಗುವ ಅಧಿಕಾರಿಗಳಿಗೆ 1 ಲಕ್ಷ ರೂ. ದಂಡ, 5 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಭೂ ಒತ್ತುವರಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪ್ರಮುಖವಾಗಿ 3 ವರದಿಗಳಿವೆ. ಬೆಂಗಳೂರು ನಗರದ ಸುತ್ತಮುತ್ತ ಆಗಿರುವ ಭೂ ಒತ್ತುವರಿಯ ಕುರಿತು ಎ.ಟಿ. ರಾಮಸ್ವಾಮಿ ಅವರು 2007ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆ ವರದಿಯು, ಬೆಂಗಳೂರು ನಗರವೊಂದರಲ್ಲೇ 34 ಸಾವಿರಕ್ಕೂ ಹೆಚ್ಚು ಎಕರೆಯಷ್ಟು ಸರ್ಕಾರಿ ಭೂಮಿ ಒತ್ತುವರಿ ಆಗಿದೆ ಎಂದು ಹೇಳಿದೆ. ಸರ್ಕಾರದ ಜಮೀನು ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸ್ಥಾಪಿಸಿರುವ ಕರ್ನಾಟಕ ಸಾರ್ವಜನಿಕ ಭೂಮಿ ನಿಗಮದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2017ರಿಂದ 2019ರವರೆಗೂ 63.8 ಲಕ್ಷ ಸರ್ಕಾರಿ ಜಮೀನು ಇತ್ತು. ನಂತರ ಅದು 61.88 ಲಕ್ಷ ಎಕರೆಗೆ ಇಳಿಯಿತು. ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣ್ಯಂ ನೇತೃತ್ವದ ಸಮಿತಿಯು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 13 ಲಕ್ಷ ರೈತರಿಂದ ಅಂದಾಜು 30 ಲಕ್ಷ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ವರದಿ ನೀಡಿದೆ. ಇದರಲ್ಲಿ ಜೀವನೋಪಾಯಕ್ಕಾಗಿ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತ ಸಕ್ರಮಕ್ಕಾಗಿ ಪ್ರಯತ್ನ ನಡೆಸಿ, ಬಗರ್​ಹುಕುಂ ಸಾಗುವಳಿ ಸಮಿತಿಗಳ ಮುಂದೆ ಅರ್ಜಿ ಸಲ್ಲಿಸಿರುವುದೂ ಸೇರಿದೆ.

ಬೆಂಗಳೂರು ಸೇರಿದಂತೆ ಬಹುತೇಕ ಪ್ರಮುಖ ನಗರಗಳಲ್ಲಿ ಬಲಾಢ್ಯರು ಸರ್ಕಾರಿ ಭೂಮಿ ಒತ್ತುವರಿ ಮಾಡಿದೆ. ಯಾರಿಗೂ ಶಿಕ್ಷೆಯಾಗುತ್ತಿಲ್ಲ. ಸಣ್ಣಪುಟ್ಟ ರೈತರು ಮಾತ್ರ ಶಿಕ್ಷೆಗೆ ಒಳಗಾಗುತ್ತಿರುವ ಆರೋಪಗಳು ಕೇಳಿಬಂದಿದ್ದವು. ಹೀಗಾಗಿ, ಗ್ರಾಮೀಣ ಭಾಗದ ರೈತರನ್ನು ಬಿಟ್ಟು ಬಲಾಢ್ಯರಿಂದ ಒತ್ತುವರಿ ತೆರವು ಮಾಡಿಸುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸುವುದು ಸಮಂಜಸ ಕ್ರಮವಾಗಿ ಕಂಡಬರುತ್ತದೆ. ಜೀವನಕ್ಕಾಗಿ ಸ್ವಲ್ಪ ಭೂಮಿ ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುವುದು ಬೇರೆ; ವಾಣಿಜ್ಯ ಉದ್ದೇಶಕ್ಕಾಗಿ ಒತ್ತುವರಿ ಮಾಡುವುದು ಬೇರೆ. ಸಚಿವ ಸಂಪುಟ ಕೈಗೊಂಡ ಇನ್ನೊಂದು ಪ್ರಮುಖ ನಿರ್ಧಾರವೆಂದರೆ, ಚಾಮರಾಜನಗರ, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ, ಬೀದರ್ ಹಾಗೂ ಮಂಡ್ಯದಲ್ಲಿ ವಿಶ್ವವಿದ್ಯಾಲಯಗಳ ಸ್ಥಾಪನೆ ಕುರಿತದ್ದು. ಕೇವಲ ಕಟ್ಟಡ ಕಟ್ಟುವುದಕ್ಕೆ ಆದ್ಯತೆ ನೀಡದೆ, ಬೋಧನಾ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯವಿರುವ ಸಿಬ್ಬಂದಿ ಮತ್ತು ಇತರ ಸೌಲಭ್ಯಗಳಿಗೆ ಅನುದಾನ ಒದಗಿಸುವತ್ತಲೂ ಗಮನ ನೀಡಬೇಕಾದ ಅಗತ್ಯವಿದೆ.

ಹುತಾತ್ಮ ಯೋಧರ ಕುಟುಂಬಕ್ಕೆ ಅನುಕಂಪ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಲು, ಸಂದರ್ಶನವಿಲ್ಲದೆ ಕೇವಲ ಲಿಖಿತ ಪರೀಕ್ಷೆ ಆಧಾರದಲ್ಲಿ ಡಿ ವರ್ಗದ ನೇಮಕಾತಿ ಕೈಗೊಳ್ಳಲು, ರೈತ ವಿದ್ಯಾನಿಧಿ ಯೋಜನೆಯನ್ನು ಕೃಷಿ ಕಾರ್ವಿುಕರ ಮಕ್ಕಳಿಗೆ ವಿಸ್ತರಿಸಲು, ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಹಾಗೂ ವಿಜಯಪುರ, ಬಾಗಲಕೋಟೆ, ಹಾಸನದ ವಿವಿಧ ನೀರಾವರಿ ಯೋಜನೆಗಳಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ.

ಈದ್ಗ ಮೈದಾನ ಯಥಾಸ್ಥಿತಿ ಕಾಪಾಡಿ-ಹೈಕೋರ್ಟ್ ಸೂಚನೆ

0

ಚಾಮರಾಜಪೇಟೆ ಈದ್ಗಾ ಮೈದಾನ ಮಾಲೀಕತ್ವ ವಿವಾದ ಸಂಬಂಧ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈದ್ಗಾ ಮೈದಾನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳು ವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಆಟದ ಮೈದಾನವಾಗಿ ಬಳಸಬೇಕು ಎಂದು ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.

ರಂಜಾನ್, ಬಕ್ರೀದ್ ಸಂದರ್ಭದಲ್ಲಿ ಮಾತ್ರ ಪ್ರಾರ್ಥನೆಗೆ ಬಳಸಲು ಅನುಮತಿ ಇದೆ. ಆದರೆ, ಶುಕ್ರವಾರದ ಪ್ರಾರ್ಥನೆಗೆ ಅವಕಾಶ ಇಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಮುಂದಿನ ಆದೇಶದವರೆಗೂ ಯಥಾಸ್ಥಿತಿ ಕಾಪಾಡಲು ಹೈಕೋರ್ಟ್ ಸೂಚಿಸಿದೆ. ಯಾವುದೇ ವಿವಾದಕ್ಕೆ ಆಸ್ಪದ ಮಾಡಿಕೊಡಬೇಡಿ. ಮೈದಾನವಾಗಿರುವುದರಿಂದ ಯಥಾಸ್ಥಿತಿ ಕಾಪಾಡಿ ಎಂದು ಸರ್ಕಾರಕ್ಕೆ ಪೀಠ ಸೂಚನೆ ನೀಡಿದೆ. ನ್ಯಾ. ಹೇಮಂತ್ ಚಂದನ್ ಗೌಡರ್ ಅವರಿದ್ದ ಪೀಠ ಆದೇಶ ನೀಡಿದೆ.

ಈದ್ಗಾ ವಿವಾದ ಸಂಬಂಧ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮೈದಾನವನ್ನು ಆಟಕ್ಕೆ ಬಳಸಬಹುದು. ಶುಕ್ರವಾರದ ಪ್ರಾರ್ಥನೆಗೆ ಅವಕಾಶ ಇಲ್ಲ. ರಂಜಾನ್ ಮತ್ತು ಬಕ್ರೀದ್ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಇದೆ. ಇದನ್ನು ಹುಬ್ಬಳ್ಳಿ ಈದ್ಗಾ ಮೈದಾನದ ರೀತಿಯಲ್ಲಿ ಮಾಡಬೇಡಿ ಎಂದು ತಿಳಿಸಿದೆ.

ಅಲ್ಲದೇ, ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡುವುದಕ್ಕೆ ಯಾವುದೇ ಅನುಮತಿ ಬೇಕಿಲ್ಲ ಎಂದು ಅಭಿಪ್ರಾಯಪಟ್ಟಿದೆ.ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 23ಕ್ಕೆ ಮುಂದೂಡಿದೆ.

ರಷ್ಯ ದೇಶವು ವಿಶ್ವವನ್ನು ಪರಮಾಣು ದುರಂತದ ಅಂಚಿಗೆ ತಂದಿದೆ- ಝೆಲೆನ್ಸ್ಕಿ

0

ರಷ್ಯಾವನ್ನು ಈಗಲೇ ತಡೆದು ನಿಲ್ಲಿಸದಿದ್ದರೆ ಆ ದೇಶದ ಕೊಲೆಗಾರರು ಖಂಡಿತಾ ಇತರ ದೇಶಗಳತ್ತ ಕಣ್ಣು ಹಾಕುತ್ತಾರೆ. ಉಕ್ರೇನ್ ಮೇಲಿನ ಆಕ್ರಮಣದ ಸಂದರ್ಭ ನಡೆದಿರುವ ಅಪರಾಧ ಕೃತ್ಯಗಳಿಗೆ ರಷ್ಯಾವನ್ನು ಹೊಣೆಗಾರರನ್ನಾಗಿಸಲು ಅಂತರಾಷ್ಟ್ರೀಯ ಸಮುದಾಯ ಮತ್ತು ವಿಶ್ವಸಂಸ್ಥೆ ಕ್ರಮ ಕೈಗೊಳ್ಳಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರು ಆಗ್ರಹಿಸಿದ್ದಾರೆ.

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್ ಭೂಪ್ರದೇಶದಲ್ಲಿ ವಿಶ್ವದ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ನಮ್ಮ ಸ್ವಾತಂತ್ರ್ಯವು ನಿಮ್ಮ ಭದ್ರತೆಯಾಗಿದೆ ಎಂದರು.

ಝಪೋರಿಝಿಯ ಅಣುವಿದ್ಯುತ್ ಸ್ಥಾವರವನ್ನು ಯುದ್ಧವಲಯನ್ನಾಗಿ ಪರಿವರ್ತಿಸುವ ಮೂಲಕ ರಶ್ಯವು ವಿಶ್ವವನ್ನು ಪರಮಾಣು ದುರಂತದ ಅಂಚಿಗೆ ತಂದು ನಿಲ್ಲಿಸಿದೆ.

ಚೆರ್ನೋಬಿಲ್ನಲ್ಲಿ ಒಂದು ರಿಯಾಕ್ಟರ್ ಸ್ಫೋಟಿಸಿದಾಗ ಆಗಿದ್ದ ವಿಪತ್ತನ್ನು ಅಂತರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ ಮರೆಯಬಾರದು. ಝಪೋರಿಝಿಯದಲ್ಲಿ 6 ರಿಯಾಕ್ಟರ್ಗಳಿವೆ. ಆದ್ದರಿಂದ ಐಎಇಎ ತಕ್ಷಣ ಇದನ್ನು ತನ್ನ ನಿಯಂತ್ರಣಕ್ಕೆ ಪಡೆಯಬೇಕು. ರಶ್ಯವು ಇಲ್ಲಿ ಪರಮಾಣು ಬ್ಲಾಕ್ಮೇಲ್ ನಡೆಸುವುದನ್ನು ಬಿಟ್ಟು ಕೂಡಲೇ ಹಿಂದೆ ಸರಿಯಬೇಕು ಎಂದು ಝೆಲೆನ್ಸ್ಕಿ ಆಗ್ರಹಿಸಿದರು.

ಮದರಸಾಗಳಲ್ಲೂ ಎನ್ಇಪಿ ಜಾರಿಗೆಯಾಗಲಿದೆ

0

ಮುಸ್ಲಿಂ ಧಾರ್ಮಿಕ ಶಿಕ್ಷಣ ಕೇಂದ್ರಗಳ ನಿಯಂತ್ರಣಕ್ಕೆ ಮಂಡಳಿ ರಚನೆ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸಭೆ ನಡೆಸಿ ಚರ್ಚೆ ಕೂಡ ಮಾಡಲಾಗಿದೆ. ಸದ್ಯ ಈಗ ಎಲ್ಲಾ ಇಲಾಖೆಗಳಿಗೂ ಸಮಿತಿ ಮಾಡಿದ್ದೇವೆ. ಅದೇ ರೀತಿ ರಾಜ್ಯದ ಮದರಸಾಗಳಿಗೂ ಸಮಿತಿ ರಚಿಸುತ್ತೇವೆ ಎಂದು ಪ್ರಾಥಮಿಕ & ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಮದರಸಾಗಳಲ್ಲೂ NEP ಜಾರಿಯಾಗಲಿದೆ. ಅಂತ್ಯದಲ್ಲಿರುವ‌ ಕಟ್ಟಕಡೆಯ ಮಗುವಿಗೂ ಶಿಕ್ಷಣ ತಲುಪಬೇಕು. ಮದರಸಾದಿಂದ ಮಕ್ಕಳು ಬೇರೆ ಮಕ್ಕಳ ಮಟ್ಟಕ್ಕೆ ಕಾಂಪೀಟ್ ಮಾಡಲಾಗ್ತಿಲ್ಲ. ಎಲ್ಲಾ ಇಲಾಖೆಗೂ ಸಮಿತಿ ಮಾಡಿದ್ದೇವೆ, ಅದೇ ರೀತಿ ಮದರಸಾಗೂ ಮಾಡಿದ್ದೇವೆ. ನಮ್ಮ ಅಧಿಕಾರಿಗಳು ಶಾಲೆಗಳನ್ನು ಹೇಗೆ ಪರಿಶೀಲನೆ ಮಾಡಬೇಕು ಎಂಬ ನಿಯಮವಿದೆ. ಅದೇ ರೀತಿ‌ ಮದರಸಾಗಳನ್ನು ಪರಿಶೀಲಿಸ್ತಾರೆ ಎಂದರು.

ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧವಿಲ್ಲ-ಸಚಿವ ನಾಗೇಶ್

0

ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದಂತೆ ಶಿಕ್ಷಣ ಇಲಾಖೆ ಈದ್ ಮಿಲಾದ್ ಆಚರಣೆಗೂ ಅವಕಾಶ ನೀಡುವಂತೆ ಮುಸ್ಲೀಂ ಮುಖಂಡರು ಒತ್ತಾಯಿಸಿದ್ದರು. ಈ ಬೆನ್ನಲ್ಲೇ ಶಾಲೆಗಳಲ್ಲಿ ವಿನಾಯಕನ ಪ್ರತಿಷ್ಠಾಪನೆಗೆ ಯಾವುದೇ ನಿರ್ಬಂಧವಿಲ್ಲ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟ ಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಶಾಲೆಗಳಲ್ಲಿ ಗಣೇಷ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧವಿಲ್ಲ. ಸರಸ್ವತಿ ಪೂಜೆ, ಗಣೇಶ ಪ್ರತಿಷ್ಠಾಪನೆ ನಡೆಯುತ್ತಿದೆ. ಮುಂದೆಯೂ ಸರಸ್ವತಿ ಪೂಜೆ, ಗಣೇಶ ಪ್ರತಿಷ್ಠಾಪನೆ ನಡೆಯಲಿದೆ ಎಂದರು.

ಶಾಲೆಗಳಲ್ಲಿ ಈ ಪದ್ಧತಿಯು ಬಾಲಗಂಗಾಧರ ತಿಲಕ್ ಕಾಲದಿಂದಲೂ ಇದೆ. ಆದರೇ ಯಾವುದೇ ನಮಾಜ್, ಕೃಷ್ಣ ಪೂಜೆ, ಅಯ್ಯಪ್ಪ ಪೂಜೆ, ಕ್ರೈಸ್ತರ ಪ್ರಾರ್ಥನೆಗೆ ಶಾಲೆಗಳಲ್ಲಿ ಅವಕಾಶವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.

ಕೆಂಪಣ್ಣ ಆರೋಪ ರಾಜಕೀಯ ಪ್ರೇರಿತ-ಬೊಮ್ಮಾಯಿ

0

ಗುತ್ತಿಗೆದಾರರ ಸಂಘದ ಕೆಂಪಣ್ಣ ಮಾಡಿರುವ 40% ಕಮಿಷನ್ ಆರೋಪ ರಾಜಕೀಯ ಪ್ರೇರಿತ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ, ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಇಂತಹ ಪ್ರಕರಣಗಳ ತನಿಖೆ ನಡೆಸಲು ಲೋಕಾಯುಕ್ತ ಎಂಬ ಸ್ವಾಯತ್ತ ಸಂಸ್ಥೆ ಇದೆ. ಇತ್ತೀಚೆಗೆ ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರವನ್ನು ಲೋಕಾಯುಕ್ತಕ್ಕೆ ನೀಡಲಾಗಿತ್ತು. ಆ ಸಂಸ್ಥೆಯಲ್ಲಿ ಯಾರ ವಿರುದ್ಧವಾದರೂ ದೂರುಗಳನ್ನು ನೀಡುವ ಅಧಿಕಾರ ಎಲ್ಲರಿಗೂ ಇದೆ. ಆದರೆ, ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಕೆಂಪಣ್ಣ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಂತರ ಆರೋಪ ಮಾಡಿದ್ದಾರೆ. ಜೊತೆಗೆ ಎಲ್ಲಾ ಪಕ್ಷಗಳ ಶಾಸಕರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳುತ್ತಾರೆ. ಹಿಂದಿನ ಸರ್ಕಾರದಲ್ಲಿ ಈ ಹಗರಣವು ನಡೆದಿದ್ದವು ಆದರೆ ಅವು ಏಕೆ ಬೆಳಕಿಗೆ ಬರಲಿಲ್ಲ ಎಂದು ಪ್ರಶ್ನಿಸಿದರು.