Saturday, March 21, 2026
Saturday, March 21, 2026
Home Blog Page 1455

ರಾಯಚೂರಿನಲ್ಲಿ ವರುಣನ ಅವಾಂತರ

0

ರಾಜ್ಯಾದ್ಯಂತ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ರಾಯಚೂರಿನಲ್ಲಿ ತುಂಗಾಭದ್ರ ಎಡದಂಡೆ ಕಾಲುವೆಗೆ ಕಾರು ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿರುವ ಘಟನೆ ನಡೆದಿದೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡುದೂರು ಬ್ರಿಡ್ಜ್ ಬಳಿ ತುಂಗಾಭದ್ರ ಎಡದಂತೆ ಕಾಲುವೆಗೆ ಕಾರು ಉರುಳಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿದ್ದು, ಪತ್ತೆಗಾಗಿ ಶೋಧ ಕಾರ್ಯಚಾರಣೆ ನಡೆಯುತ್ತಿದೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದಲ್ಲಿ ಕೋವಿಡ್ ಮಾರ್ಗಸೂಚಿ ಸರ್ಕಾರದ ಸುತ್ತೋಲೆ

0

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣದಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಹೋಟೆಲ್‌, ಕ್ಲಬ್‌, ರೆಸ್ಟೋರೆಂಟ್‌, ಪಬ್‌, ಬಾರ್‌ಗಳಲ್ಲಿ ಆಹಾರ ಸೇವನೆಯ ಸಮಯವನ್ನು ಹೊರತುಪಡಿಸಿದ ಅವಧಿಯಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ. ಶಿಕ್ಷಣ ಸಂಸ್ಥೆಗಳಲ್ಲಿ ಐದು ವರ್ಷಕ್ಕಿಂತ ಮೇಲಿನ ಮಕ್ಕಳು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ವಸತಿ ಸಮುಚ್ಚಯಗಳ ಸಾಮಾನ್ಯ ಪ್ರದೇಶಗಳು, ಛತ್ರಗಳು, ಚಿತ್ರಮಂದಿರಗಳು, ಶಾಪಿಂಗ್‌ ಮಾಲ್‌ಗಳು, ಬಸ್‌, ಮೆಟ್ರೊ ರೈಲು, ರೈಲುಗಳು ಮತ್ತು ಇತರ ಸಾಮಾನ್ಯ ಪ್ರದೇಶಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಗೌರಿ ಹಬ್ಬ, ಗಣೇಶ ಚತುರ್ಥಿ, ಓಣಂ, ಅನಂತ ಪದ್ಮನಾಭ ವ್ರತ, ವಿಶ್ವಕರ್ಮ ಜಯಂತಿ, ಮಹಾಲಯ ಅಮಾವಾಸ್ಯೆ ದಿನಗಳಂದು ಜನರು ಗುಂಪು ಸೇರದಂತೆ ತಡೆಯಬೇಕು. ಗಣೇಶೋತ್ಸವವನ್ನು ಹೊರಾಂಗಣ ಪ್ರದೇಶಗಳಲ್ಲಿ ಆಚರಿಸುವುದು ಸೂಕ್ತ. ಜನರ ದೇಹದ ತಾಪಮಾನ ಪರೀಕ್ಷೆ ನಡೆಸಲು ಪ್ರವೇಶ ದ್ವಾರದಲ್ಲಿ ಥರ್ಮಲ್‌ ಸ್ಕ್ಯಾನಿಂಗ್‌ ವ್ಯವಸ್ಥೆ ಅಳವಡಿಸಬೇಕು. ಸ್ಯಾನಿಟೈಸರ್‌ ಒದಗಿಸಬೇಕು. ಒಳಾಂಗಣದಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಸೂಚನೆಯನ್ನು ನೀಡಲಾಗಿದೆ.

ಗೌತಮ್ ಅದಾನಿವಿಶ್ವದ ನಂ1ರಿಚ್ ಮ್ಯಾನ್

0

ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅದಾನಿ ಗ್ರೂಪ್ ನ ಅಧ್ಯಕ್ಷ ಗೌತಮ್ ಅದಾನಿ, ಫ್ರಾನ್ಸ್ ನ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ವಿಶ್ವದ ನಂ. 3 ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ.

ಈ ಮೂಲಕ ಇದೇ ಮೊದಲ ಬಾರಿಗೆ ಏಷ್ಯಾದ ವ್ಯಕ್ತಿಯೊಬ್ಬರು ಈ ಪಟ್ಟಿಯಲ್ಲಿ ಅಗ್ರ ಮೂರು ಸ್ಥಾನಗಳಿಗೆ ಪ್ರವೇಶಿಸಿದ್ದಾರೆ.
ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ಚೀನಾದ ಜಾಕ್ ಮಾ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎಂದು ತಿಳಿದುಬಂದಿದೆ.

ಸೂಚ್ಯಂಕದ ಪ್ರಕಾರ ಇತ್ತೀಚಿನ ದತ್ತಾಂಶವು ಅಂಬಾನಿ ಒಟ್ಟು 91.9 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ 11 ನೇ ಸ್ಥಾನದಲ್ಲಿದ್ದಾರೆ ಎಂದು ತೋರಿಸುತ್ತದೆ. ಅದಾನಿ ಗ್ರೂಪ್ ಭಾರತದ ಮೂರನೇ ಅತಿದೊಡ್ಡ ಸಮೂಹವಾಗಿದೆ .

ಒಟ್ಟು 137.4 ಶತಕೋಟಿ ಡಾಲರ್ ನಿವ್ವಳ ಆಸ್ತಿ ಹೊಂದಿರುವ 60 ವರ್ಷದ ಅದಾನಿ, ಲೂಯಿಸ್ ವಿಟಾನ್ ಅಧ್ಯಕ್ಷ ಅರ್ನಾಲ್ಟ್ ಅವರ ಸಂಪತ್ತನ್ನು ಹಿಂದಿಕ್ಕಿದ್ದಾರೆ ಎನ್ನಲಾಗಿದೆ.

ಈದ್ಗಾ ಮೈದಾನ ವಿವಾದ ಸುಪ್ರೀಂ ಕೋರ್ಟಿಗೆ ವಕ್ಫ್ ಬೋರ್ಡ್ ಅಪೀಲು

0

ಚಾಮರಾಜಪೇಟೆ ಈದ್ಗಾ ಮೈದಾನವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ದ್ವಿಸದಸ್ಯ ಪೀಠ ನೀಡಿರುವ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ರಾಜ್ಯ ವಕ್ಫ್ ಬೋರ್ಡ್ ನಿರ್ಧರಿಸಿದೆ ಎಂದು ಕ್ಷೇತ್ರದ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಅವರು ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್ 29(ಸೋಮವಾರ) ಸುಪ್ರೀಂಕೋರ್ಟ್‍ನಲ್ಲಿ ಈ ಸಂಬಂಧ ವಕ್ಫ್ ಬೋರ್ಡ್ ಅರ್ಜಿ ಸಲ್ಲಿಸಲಿದೆ. ಅಲ್ಲದೆ, ವಕ್ಫ್ ಬೋರ್ಡ್ ಪರವಾಗಿ ವಕಾಲತ್ತು ವಹಿಸಲು ದೇಶದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಸಮ್ಮತಿ ಸೂಚಿಸಿದ್ದಾರೆ’ ಎಂದು ಹೇಳಿದರು.

ಹೈಕೋರ್ಟ್ ಏಕ ಸದಸ್ಯ ಪೀಠ ಈದ್ಗಾ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ನೀಡಿದ್ದ ಮಧ್ಯಂತರ ಆದೇಶದಿಂದಾಗಿ ಸಮಾಜದಲ್ಲಿ ಶಾಂತಿ ನೆಲೆಸಿತ್ತು. ಆದರೆ, ತದನಂತರ, ರಾಜ್ಯ ಸರಕಾರವು ಈ ಆದೇಶವನ್ನು ಪ್ರಶ್ನಿಸಿ ದ್ವಿಸದಸ್ಯ ಪೀಠದ ಮೊರೆ ಹೋಗಿ ಮನವಿ ಸಲ್ಲಿಸಿತು. ಅದನ್ನು ಪುರಸ್ಕರಿಸಿ ದ್ವಿಸದಸ್ಯ ಪೀಠವು ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಿಸಲು ಅನುಮತಿ ನೀಡಿದೆ ಎಂದು ಅವರು ಹೇಳಿದರು.

ದ್ವಿಸದಸ್ಯ ಪೀಠದ ಮಧ್ಯಂತರ ಆದೇಶದಿಂದಾಗಿ ಮುಸ್ಲಿಮ್ ಸಮುದಾಯದ ಭಾವನೆಗಳಿಗೆ ಹಾನಿಯಾಗಿದೆ. ಆದುದರಿಂದ, ವಕ್ಫ್ ಬೋರ್ಡ್ ದ್ವಿಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ. ಸೋಮವಾರ ಸುಪ್ರೀಂಕೋರ್ಟ್‍ನಲ್ಲಿ ಈ ಸಂಬಂಧ ಅರ್ಜಿ ಸಲ್ಲಿಸಲಿದೆ ಎಂದು ಝಮೀರ್ ಅಹ್ಮದ್ ಖಾನ್ ಅವರು ತಿಳಿಸಿದರು.

ಕೊಮ್ಮನಾಳಿನಲ್ಲಿ ಸೆರೆಗೆ ಬಿದ್ದ ನರಭಕ್ಷಕ ಚಿರತೆ

0

ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳಿಗೆ ತಲೆನೋವಾಗಿದ್ದ ಹೆಣ್ಣು ಚಿರತೆ ಈಗ ಬೋನಿನಲ್ಲಿ ಸೆರೆ ಹಿಡಿಯಲಾಗಿದೆ.

ಶಿವಮೊಗ್ಗ ಜಿಲ್ಲೆಯ ಕೊಮ್ಮನಾಳು ಗ್ರಾಮದಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಗಿದೆ.

ಶಿವಮೊಗ್ಗ ಗ್ರಾಮಾಂತರ ಭಾಗದ ಕೊಮ್ಮನಾಳು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಂಡಿತ್ತು.
ಬನ್ನಿಕೆರೆ ಗ್ರಾಮದ ಹೊನ್ನಾಳಿ ಭಾಗದಲ್ಲೂ ಚಿರತೆ ಕಾಣಿಸಿಕೊಂಡು, ಜನರು ಭಯಭೀತರಾಗಿದ್ದರು.

ಈ ಹಿಂದೆ ಹೊನ್ನಾಳಿಯ ಪಲವನಹಳ್ಳಿ ಗ್ರಾಮದಲ್ಲಿ ಮಹಿಳೆಯನ್ನ ಗಾಯಗೊಳಿಸಿತ್ತು.

ನಂತರ ,ಬನ್ನಿಕೆರೆ ಗ್ರಾಮದಲ್ಲಿ ಕಾಣಿಸಿಕೊಂಡು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು.
ಇಂದು ಬೆಳಗ್ಗೆ ಚಿರತೆಯನ್ನು ಬೋನಿನಲ್ಲಿ ಸೆರೆ ಹಿಡಿಯಲು
ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಕುಸಿತ

0

ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತಗೊಂಡಿರುವುದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 ಗಂಟೆಯಲ್ಲಿ 5,439 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಇನ್ನು ದೇಶದಲ್ಲಿ 65,732 ಕೊರೋನಾ ಸಕ್ರಿಯ ಪ್ರಕರಣಗಳಿದೆ. ಶೇ.98.62ರಷ್ಟು ಜನ ಕೊರೋನಾ ದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಕಳೆದ 24 ಗಂಟೆಯಲ್ಲಿ 22,031 ಜನರು ಕೊರೋನಾದಿಂದ ಗುಣಮುಖರಾಗಿದ್ದಾರೆ. 24 ಗಂಟೆಯಲ್ಲಿ 3,20,418 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ.

ಪರಿಸರ ಸ್ನೇಹಿ ಗಣಪ ಮೂರ್ತಿ ವಿತರಣೆ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಭಾನುವಾರ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಔಷಧೀಯ ಸಸ್ಯಗಳ ಬೀಜಗಳನ್ನು ಒಳಗೊಂಡಿರುವ 10,000 ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸಲಿದೆ.

ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುವ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಈ ಕಾರ್ಯಕ್ರಮವು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರುವ ಗುರಿಯನ್ನು ಹೊಂದಿದೆ.

ಶ್ರೀ ವಿದ್ಯಾರಣ್ಯ ಯುವಕ ಸಂಘದ ಆಯೋಜಿಸಲಾದ ಈ ಕಾರ್ಯಕ್ರಮವು ಪರಿಸರ ಸ್ನೇಹಿ ಗಣೇಶ ಚತುರ್ಥಿಯ ಆಚರಣೆಯನ್ನು ಉತ್ತೇಜಿಸುತ್ತದೆ. ಹಬ್ಬವನ್ನು ಆಚರಿಸುವ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಯುವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮೈಸೂರು ರಾಜವಂಶಸ್ಥರಾದ ಯುದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಾರ್ವಜನಿಕರಿಗೆ ಮತ್ತು ಸಂಸ್ಥೆಗಳಿಗೆ ಮನೆ ಹಾಗೂ ಇತರ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲು ವಿಗ್ರಹಗಳನ್ನು ವಿತರಿಸಿದರು, ಮೊದಲು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಂತರ ಬಕೆಟ್ ಮತ್ತು ಮಡಕೆಗಳಲ್ಲಿ ಮುಳುಗಿಸಬೇಕು, ಇದರಿಂದ ಮಣ್ಣಿನ ಗಣಪ ಔಷಧೀಯ ಸಸ್ಯಗಳಾಗಿ ಪರಿವರ್ತನೆಯಾಗಲಿದೆ.

ಸಾರ್ವಜನಿಕರು ಮತ್ತು ಸಂಘಟಕರು ಯಾವುದೇ ರಾಸಾಯನಿಕಗಳನ್ನು ಹೊಂದಿರದ ಪರಿಸರ ಸ್ನೇಹಿ ವಿಗ್ರಹಗಳನ್ನು ಖರೀದಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆಗಳನ್ನು ನೀಡಿದೆ. ಅಲ್ಲದೆ, ಕೆರೆಗಳಲ್ಲಿ ವಿಗ್ರಹಗಳನ್ನು ಮುಳುಗಿಸುವ ಮುನ್ನ ಕಾಗದದ ಬಟ್ಟಲುಗಳನ್ನು ಬಳಸಿ ಪ್ರಸಾದ ವಿತರಿಸಬೇಕು ಹೂಮಾಲೆ ತೆಗೆಯಬೇಕು. ಸಾರ್ವಜನಿಕರು ಮೂರ್ತಿಗಳನ್ನು ಅಲಂಕರಿಸಲು ಪ್ಲಾಸ್ಟಿಕ್ ಬದಲಿಗೆ ನೈಸರ್ಗಿಕ ಹೂವುಗಳನ್ನು ಬಳಸಲು ಸೂಚಿಸಲಾಗಿದೆ.

ಗಣೇಶ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು ವಿತರಿಸಲು ಕೆಎಸ್‌ಪಿಸಿಬಿ ನಿರ್ಧರಿಸಿದೆ. ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸಲು ಸಾರ್ವಜನಿಕರು ಕೈ ಜೋಡಿಸಬೇಕೆಂದು ಮನವಿ ಮಾಡಿದೆ.

ಮಳೆಹಾನಿ ಪರಿಹಾರಕ್ಕೆ ವಿಳಂಬ ಮಾಡಬೇಡಿ- ಬೊಮ್ಮಾಯಿ

0

ಭಾರಿ ಮಳೆ, ಪ್ರವಾಹದಿಂದ ಬಾಧಿತ ಸಂತ್ರಸ್ತರಿಗೆ ಮನೆ ಹಾಗೂ ಬೆಳೆ ಪರಿಹಾರ ವಿತರಣೆಯಲ್ಲಿ ವಿಳಂಬ ಸಲ್ಲದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್​ ಸೂಚನೆ ನೀಡಿದ್ದಾರೆ.

ಭಾರಿ ಮಳೆಯಿಂದ ಹಾನಿಗೆ ಒಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಜತೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಸಂವಾದ ನಡೆಸಿದರು.

ಕೆರೆಗಳು ತುಂಬಿರುವ ಕಾರಣ ಬಿರುಕು ಉಂಟಾಗದಂತೆ ನಿಗಾವಹಿಸಬೇಕು. ಅದರಲ್ಲೂ ದೊಡ್ಡ ಕೆರೆಗಳಿರುವೆಡೆ ಎಚ್ಚರಿಕೆವಹಿಸಿ ಯಾವುದೇ ಸಾವು, ನೋವಾಗದಂತೆ ನೋಡಿಕೊಳ್ಳಬೇಕು. ತುಂಬಿದ ಕೆರೆಗಳ ಸಮೀಕ್ಷೆ ಕೈಗೆತ್ತಿಕೊಂಡು ಅಗತ್ಯವಿರುವೆಡೆ ತುರ್ತಾಗಿ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ ಸಲಹೆ ನೀಡಿದರು.

ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲೂ ಹಣವಿದೆ. ಅಲ್ಲದೆ, ತುರ್ತು ಹಾಗೂ ತಾತ್ಕಾಲಿಕ ಕೆಲಸಗಳಿಗೆ ಬಿಡುಗಡೆ ಹಣ ಬಳಸಿಕೊಂಡು ಮನೆ ಹಾಗೂ ಬೆಳೆ ಹಾನಿಗೆ ತಕ್ಷಣವೇ ಪರಿಹಾರ ವಿತರಿಸಿ, ಬಾಧಿತರ ಕಷ್ಟಗಳಿಗೆ ಯುದ್ಧೋಪಾದಿಯಲ್ಲಿ ಸ್ಪಂದಿಸಬೇಕು ಎಂದರು.

ಮಳೆಯಿಂದಾಗಿ ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿದೆ. ವಾಹನದಟ್ಟಣೆ ಮಾರ್ಗಯಿದಾಗಿದ್ದು, ಸುಗಮ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಅಗತ್ಯವಿದೆ. ಈ ಸಮಸ್ಯೆಗೆ ಪರಿಹಾರವಾಗಿ ಪರ್ಯಾಯ ಸಂಚಾರ ವ್ಯವಸ್ಥೆ ಮಾಡಬೇಕು. ಮೈಸೂರು, ರಾಮನಗರ ಮತ್ತು ಮಂಡ್ಯ ಎಸ್​ಪಿ ಜಂಟಿಯಾಗಿ ಈ ಹೊಣೆ ನಿರ್ವಹಿಸಬೇಕು ಎಂದು ಸಿಎಂ ಸೂಚಿಸಿದರು.

ವಿಶ್ವಸಂಸ್ಥೆ ಅಣ್ವಸ್ತ್ರ ನಿಶ್ಶಸ್ತ್ರೀಕರಣ ಜಂಟಿ ಘೋ಼ಷಣೆಗೆ ರಷ್ಯ ಅಡ್ಡಗಾಲು

0

ಅಣ್ವಸ್ತ್ರ ನಿಶ್ಯಸ್ತ್ರೀಕರಣ ಒಪ್ಪಂದದ ಕುರಿತು ೪ ವಾರಗಳ ಸಮಾಲೋಚನೆಯ ಬಳಿಕ ವಿಶ್ವಸಂಸ್ಥೆಯು ಪರಮಾಣು ನಿಶ್ಯಸ್ತ್ರೀಕರಣದ ಜಂಟಿ ಘೋಷಣೆಯನ್ನು ಅಂಗೀಕರಿಸುವ ಪ್ರಕ್ರಿಯೆಗೆ ರಶ್ಯ ತಡೆಯೊಡ್ಡಿದೆ. ಘೋಷಣೆಯಲ್ಲಿ ಕೆಲವೊಂದು ರಾಜಕೀಯ ಅಂಶಗಳಿವೆ ಎಂದು ರಶ್ಯ ಪ್ರತಿಪಾದಿಸಿದೆ.

ಪರಮಾಣು ಹರಡುವಿಕೆಯನ್ನು ತಡೆಯಲು, ಸಂಪೂರ್ಣ ನಿಶ್ಯಸ್ತ್ರೀಕರಣವನ್ನು ಉತ್ತೇಜಿಸಲು ಮತ್ತು ಪರಮಾಣು ಶಕ್ತಿಯ ಶಾಂತಿಯುತ ಬಳಕೆಯಲ್ಲಿ ಸಹಕಾರವನ್ನು ಉತ್ತೇಜಿಸುವ ಗುರಿ ಹೊಂದಿರುವ ಪರಮಾಣು ಪ್ರಸರಣ ನಿರೋಧ ಒಪ್ಪಂದಕ್ಕೆ ಸಹಿಹಾಕಿರುವ 191 ದೇಶಗಳು ಪ್ರತೀ 5 ವರ್ಷಕ್ಕೊಮ್ಮೆ ಒಪ್ಪಂದದ ಅಂಶವನ್ನು ಪರಿಶೀಲನೆ ನಡೆಸುತ್ತವೆ. ಈ ನಿಟ್ಟಿನಲ್ಲಿ ನ್ಯೂಯಾರ್ಕ್ ನ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಆಗಸ್ಟ್ 1 ರಿಂದ ಸಭೆ ಸೇರಿರುವ191ದೇಶಗಳ ಪ್ರತಿನಿಧಿಗಳು ಶುಕ್ರವಾರದ ಅಂತಿಮ ಅಧಿವೇಶನದಲ್ಲಿ ಘೋಷಣೆ ಅಂಗೀಕರಿಸುವ ನಿರೀಕ್ಷೆಯಿತ್ತು.

ಆದರೆ ಘೋಷಣೆಯ ಅಂತಿಮ ಕರಡು ಪಠ್ಯದ ಬಗ್ಗೆ ರಶ್ಯದ ಪ್ರತಿನಿಧಿ ಇಗೋರ್ ವಿಶ್ನೆವೆಟ್ಸ್ಕಿ ಆಕ್ಷೇಪಿಸಿದರು. 30 ಕ್ಕೂ ಹೆಚ್ಚು ಪುಟಗಳ ಈ ಘೋಷಣೆ ಸಮತೋಲನ ಹೊಂದಿಲ್ಲ. ಸ್ಪಷ್ಟವಾದ ರಾಜಕೀಯ ಸ್ವರೂಪದ ಕೆಲವು ಪ್ಯಾರಾಗಳ ಕುರಿತು ನಮ್ಮ ನಿಯೋಗವು ಒಂದು ಪ್ರಮುಖ ಆಕ್ಷೇಪವನ್ನು ಹೊಂದಿದೆ . ರಶ್ಯ ಮಾತ್ರವಲ್ಲ, ಇತರ ಹಲವು ದೇಶಗಳೂ ಘೋಷಣೆಯನ್ನು ವಿರೋಧಿಸಿವೆ ಎಂದವರು ಹೇಳಿದರು.

ಮೂಲಗಳ ಪ್ರಕಾರ, ಉಕ್ರೇನ್ನ ಝಪೊರಿಝಿಯಾ ಪರಮಾಣು ಸ್ಥಾವರಕ್ಕೆ ಸಂಬಂಧಿಸಿದ(ಈಗ ರಶ್ಯದ ಸೇನೆಯ ವಶದಲ್ಲಿದೆ) ವಾಕ್ಯಗಳ ಕುರಿತು ರಶ್ಯ ಆಕ್ಷೇಪ ಎತ್ತಿದೆ. ಝಪೊರಿಝಿಯಾ ಸೇರಿದಂತೆ ಉಕ್ರೇನ್ನ ಇಂಧನ ಸ್ಥಾವರಗಳ ಸುತ್ತಮುತ್ತ ನಡೆಯುತ್ತಿರುವ ಸೇನಾ ಚಟುವಟಿಕೆ ಅತ್ಯಂತ ಕಳವಳಕಾರಿಯಾಗಿದೆ ಮತ್ತು ಈ ಸ್ಥಳಗಳ ಮೇಲಿನ ನಿಯಂತ್ರಣವನ್ನು ಉಕ್ರೇನ್ ಕಳೆದುಕೊಂಡಿರುವುದು ಸುರಕ್ಷತೆ ವಿಷಯದಲ್ಲಿ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಈ ವಾಕ್ಯದಲ್ಲಿ ಉಲ್ಲೇಖಿಸಲಾಗಿದೆ.

ʼಅಂತಿಮವಾಗಿ, ಸಮಾವೇಶವು ಒಪ್ಪಂದವನ್ನು ಸಾಧಿಸುವ ಸ್ಥಿತಿಯಲ್ಲಿ ಇಲ್ಲ’ ಎಂದು ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಅರ್ಜೆಂಟೀನಾದ ಗುಸ್ತಾವೊ ಝವಿನೆನ್ ಹೇಳಿದರು. ೨೦೧೫ರ ಪರಿಶೀಲನಾ ಸಮಾವೇಶದಲ್ಲಿಯೂ ಕೆಲವು ವಸ್ತುನಿಷ್ಟ ವಿಷಯಗಳ ಬಗ್ಗೆ ಒಪ್ಪಂದಕ್ಕೆ ಬರಲಾಗಿಲ್ಲ. ಇದರ ಹೊರತಾಗಿ, ಇರಾನ್ನ ಪರಮಾಣು ಕಾರ್ಯಕ್ರಮ, ಉತ್ತರ ಕೊರಿಯಾದ ಪರಮಾಣು ಪರೀಕ್ಷೆ ಸೇರಿದಂತೆ ಹಲವು ಜ್ವಲಂತ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಈ ವರ್ಷದ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ʼಜಗತ್ತು ಶೀತಲ ಯುದ್ಧದ ಉತ್ತುಂಗದ ಬಳಿಕ ದೂರವಾಗಿದ್ದ ಪರಮಾಣು ಅಪಾಯದ ಅಂಚಿನಲ್ಲಿದೆ. ಮನುಕುಲವು ಕೇವಲ ಒಂದು ತಪ್ಪು ತಿಳುವಳಿಕೆ, ತಪ್ಪು ಲೆಕ್ಕಾಚಾರ ಪರಮಾಣು ವಿನಾಶಕ್ಕೆ ಕಾರಣವಾಗುವ ಸ್ಥಿತಿಯಲ್ಲಿದೆ’ ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರದಿಂದ ಭಾರತ್ ಬ್ರಾಂಡ್ ಅಡಿಯಲ್ಲಿ ರಸಗೊಬ್ಬರ ಮಾರಾಟ

0

ಯೂರಿಯಾ, ಡಿಎಪಿ ಸೇರಿದಂತೆ ಸಬ್ಸಿಡಿ ಇರುವ ಎಲ್ಲ ರಸಗೊಬ್ಬರಗಳನ್ನು ಅಕ್ಟೋಬರ್‌ನಿಂದ ‘ಭಾರತ್’ ಬ್ರ್ಯಾಂಡ್‌ ಅಡಿಯಲ್ಲಿ ಮಾರಾಟ ಮಾಡಲಾಗುತ್ತದೆ. ರಸಗೊಬ್ಬರಗಳು ರೈತರಿಗೆ ಸಕಾಲದಲ್ಲಿ ಸಿಗಬೇಕು, ಇವುಗಳ ಸಾಗಾಟದ ಮೇಲಿನ ಸಬ್ಸಿಡಿ ತಗ್ಗಿಸಬೇಕು ಎಂಬ ಉದ್ದೇಶ ಇದರ ಹಿಂದಿದೆ.

ರಸಗೊಬ್ಬರ ಸಬ್ಸಿಡಿ ಯೋಜನೆ ‘ಪ್ರಧಾನಮಂತ್ರಿ ಭಾರತೀಯ ಜನಉರ್ವರಕ್‌ ಪರಿಯೋಜನಾ’ (ಪಿಎಂಬಿಜೆಪಿ) ಅಡಿಯಲ್ಲಿ ಜಾರಿಗೆ ತರುತ್ತಿರುವ ‘ಒಂದು ದೇಶ ಒಂದು ರಸಗೊಬ್ಬರ’ ಎಂಬ ಹೊಸ ಉಪಕ್ರಮದ ಬಗ್ಗೆ ಮಾಹಿತಿ ನೀಡಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನಸುಖ್ ಮಾಂಡವೀಯ ಅವರು, ‘ಕಂಪನಿಗಳು ತಮ್ಮ ಬ್ರ್ಯಾಂಡ್‌, ಹೆಸರು, ಲೋಗೊ ಮತ್ತು ಉತ್ಪನ್ನಕ್ಕೆ ಸಂಬಂಧಿಸಿದ ಇತರ ಅಗತ್ಯ ವಿವರಗಳನ್ನು ಚೀಲದ ಮೂರನೆಯ ಒಂದರಷ್ಟು ಭಾಗದಲ್ಲಿ ಪ್ರದರ್ಶಿಸಬಹುದು’ ಎಂದು ತಿಳಿಸಿದ್ದಾರೆ.

ಇನ್ನುಳಿದ ಮೂರನೆಯ ಎರಡರಷ್ಟು ಭಾಗದಲ್ಲಿ ಕಂಪನಿಗಳು ‘ಭಾರತ್‌’ ಬ್ರ್ಯಾಂಡ್ ಹಾಗೂ ಪಿಎಂಬಿಜೆಪಿ ಲೋಗೊ ಪ್ರದರ್ಶಿಸಬೇಕಾಗುತ್ತದೆ. ಹಳೆಯ ದಾಸ್ತಾನು ಖಾಲಿ ಮಾಡಲು ಕಂಪನಿಗಳಿಗೆ ವರ್ಷಾಂತ್ಯದವರೆಗೆ ಅವಕಾಶ ಇದೆ.

ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ರಸಗೊಬ್ಬರಗಳಿಗೆ ಸಬ್ಸಿಡಿ ನೀಡಲು ₹ 1.62 ಲಕ್ಷ ಕೋಟಿ ವ್ಯಯಿಸಿದೆ. ಕಳೆದ ಆರು ತಿಂಗಳಲ್ಲಿ ಜಾಗತಿಕ ಮಟ್ಟದಲ್ಲಿ ಆಗಿರುವ ಬೆಲೆ ಏರಿಕೆ ಗಮನಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರ ನೀಡಬೇಕಿರುವ ಸಬ್ಸಿಡಿ ಮೊತ್ತವು ₹ 2.25 ಲಕ್ಷ ಕೋಟಿ ಆಗುವ ಸಾಧ್ಯತೆ ಇದೆ.

ಬೇರೆ ಬೇರೆ ಕಂಪನಿಗಳು ತಯಾರಿಸುವ ರಸಗೊಬ್ಬರಗಳು ಒಂದೇ ಆಗಿದ್ದರೂ, ರಸಗೊಬ್ಬರಗಳನ್ನು ಬೇರೆ ಬೇರೆ ಬ್ರ್ಯಾಂಡ್ ಅಡಿ ಬೇರೆ ಬೇರೆ ರಾಜ್ಯಗಳಲ್ಲಿ ತಯಾರಿಸಲಾಗುತ್ತಿದೆ. ರಸಗೊಬ್ಬರಗಳನ್ನು ತಯಾರಿಕಾ ಕೇಂದ್ರಗಳಿಂದ ಬಹುದೂರದ ಪ್ರದೇಶಗಳಿಗೆ ರವಾನೆ ಮಾಡಲಾಗುತ್ತಿದೆ. ಇದರಿಂದಾಗಿ ಸಾಗಣೆ ಸಬ್ಸಿಡಿ ಹೊರೆ ಕೇಂದ್ರದ ಮೇಲೆ ಬೀಳುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.

‘ರಸಗೊಬ್ಬರ ತಯಾರಿಕಾ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಸ್ಥಳೀಯವಾಗಿ ಮಾರಾಟ ಮಾಡುವಂತಾಗಲಿ, ಅನಗತ್ಯ ಸಾರಿಗೆ ಕೆಲಸ ಕಡಿಮೆಯಾಗಲಿ ಎಂಬುದು ಏಕ ಬ್ರ್ಯಾಂಡ್‌ ಜಾರಿಗೆ ತರುವುತ್ತಿರುವುದು ಹಿಂದಿನ ಉದ್ದೇಶ’ ಎಂದು ಹೇಳಿದ್ದಾರೆ.

ಏಕ ಬ್ರ್ಯಾಂಡ್‌ ವ್ಯವಸ್ಥೆ ಜಾರಿಗೆ ಬಂದ ನಂತರ, ಯಾವ ಬ್ರ್ಯಾಂಡ್‌ನ ರಸಗೊಬ್ಬರ ಖರೀದಿಸಬೇಕು ಎಂಬ ಗೊಂದಲವು ರೈತರಲ್ಲಿ ಮೂಡುವುದಿಲ್ಲ ಎಂದಿದ್ದಾರೆ.