Sunday, March 22, 2026
Sunday, March 22, 2026
Home Blog Page 1439

ದಸರೆಗೆ ಬಂದ ಬಸುರಿ ಆನೆ ಲಕ್ಷ್ಮಿಗೆ ಹೆರಿಗೆ ಸಂಭ್ರಮ

0

ದಸರಾ ಉತ್ಸವಕ್ಕೆ ಈಗಾಗಲೇ ಎಲ್ಲ ಕೆಲಸ ಕಾರ್ಯಗಳು ಆರಂಭಗೊಂಡಿದೆ. ಮೈಸೂರು ದಸರಾ ಉತ್ಸವಕ್ಕೆ ಆಗಮಿಸಿದ್ದ ಕುಮ್ಕಿ ಆನೆಯೊಂದು ಮುದ್ದಾದ ಗಂಡುಮರಿಗೆ ಜನ್ಮ ನೀಡಿದೆ.

ಆ ಆನೆಯ ಹೆಸರು ಲಕ್ಷ್ಮೀ. ಅರಮನೆಯ ಕೋಡಿ ಸೋಮೇಶ್ವರನಾಥ ದೇವಾಲಯ ಬಳಿ ಗಂಡು ಆನೆಮರಿಗೆ ಜನ್ಮ ನೀಡಿರುವ ಲಕ್ಷ್ಮಿ ಆನೆಯನ್ನು ಕ್ಯಾಂಪಸ್ಸಿನಲ್ಲಿರುವ ಇತರೆ ಆನೆಗಳಿಂದ ಬೇರ್ಪಡಿಸಿ ಅರಮನೆಯ ಆವರಣದ ನಿರ್ಬಂಧಿತ ಪ್ರದೇಶದಲ್ಲಿ ಇರಿಸಲಾಗಿದೆ.

ಲಕ್ಷ್ಮಿ ಮತ್ತು ಮರಿ ಆನೆ ಎರಡು ಆರೋಗ್ಯವಾಗಿವೆ. ಸದ್ಯ ಮುಂದಿನ ದಿನಗಳಲ್ಲಿ ತಾಯಿ ಮತ್ತು ಮರಿ ಆನೆಯ ಫೋಟೋವನ್ನು ಹಂಚಿಕೊಳ್ಳಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

15 ವರ್ಷದ ಹಿಂದೆ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದ ಸರಳಾ ಎಂಬ ಆನೆಯೂ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಆನೆಮರಿಗೆ ಚಾಮುಂಡಿ ಎಂದು ನಾಮಕರಣ ಮಾಡಲಾಗಿತ್ತು. ಈಗ ಲಕ್ಷ್ಮೀ ಎಂಬ ಆನೆ ಗಂಡು ಆನೆ ಮರಿಗೆ ಜನ್ಮ ನೀಡಿದೆ.

ಕಾಂಗ್ರೆಸ್ ನ ಅಭಿಯಾನ ಲಿಸ್ಟ್ ನಲ್ಲಿ ಬಿಜೆಪಿಯ ಲಂಚದ ಮೆನು ಕಾರ್ಡ್ ಬಿಡುಗಡೆ

0

ಕಾಂಗ್ರೆಸ್‌ನಿಂದ ಅಭಿಯಾನದ ಭಾಗವಾಗಿ ಬಿಜೆಪಿ ಲಂಚ ರೇಟ್‌ ಕಾರ್ಟ್‌ ಬಿಡುಗಡೆ ಮಾಡಿದೆ.

ಸರ್ಕಾರದ ಡೀಲ್‌ಗಳು, ಶೇಕಡವಾರು ಲೂಟಿಯ ಪಟ್ಟಿ ರಿಲೀಸ್‌ ಮಾಡುವ ಮುಖಾಂತರ ಕಾಂಗ್ರೆಸ್‌ ತನ್ನ ಆಕ್ರೋಶವನ್ನು ಹೊರಹಾಕಿದೆ.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌, ವಿಧಾನಸಭೆ ವಿಪಕ್ಷ ನಾಯಕರಾದ ಸಿದ್ದರಾಮಯ್ಯ , ವಿಧಾನ ಪರಿಷತ್ ವಿಪಕ್ಷ ನಾಯಕರಾದ ಬಿ.ಕೆ ಹರಿಪ್ರಸಾದ್‌ ಸೇರಿದಂತೆ ರಾಜ್ಯ ಬಿಜೆಪಿ ಸರ್ಕಾರದ ಶೇ.40 ಭ್ರಷ್ಟಾಚಾರದ ನಾನಾ ಸ್ವರೂಪಗಳ ವಿಡಿಯೋ ಮತ್ತು ಲಂಚದ ರೇಟ್ ಕಾರ್ಡ್ ಪಟ್ಟಿಯನ್ನು ಕಾಂಗ್ರೆಸ್ಸಿಗರು ಜಂಟಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.

ಕೋವಿಡ್‌ ಕಿಟ್‌ ಪೂರೈಕೆಗಾಗಿ ಶೇ.75, ಪಿಡ್ಲೂಡಿ ಒಪ್ಪಂದ ಶೇ.40, ಮಠಕ್ಕೆ ಅನುದಾನ ಶೇ. 40, ಮೊಟ್ಟೆ ಪೂರೈಕೆ ಶೇ.40, ಬೆಸ್ಕಾಂ 1 ಕೋಟಿ, ಪಿಎಸ್‌ಐ -80 ಲಕ್ಷ, ಸಹಾಯಕಪ್ರಾಧ್ಯಾಪಕ-50ರಿಂದ 70 ಲಕ್ಷ, ಬಿಡಿಎ ಆಯುಕ್ತ 10-415 ಲಕ್ಷ ರೂ, ಡಿಸಿ-ಎಸ್‌ಪಿ 1ರಿಂದ 16ಕೋಟಿ ರೂ. ವರ್ಗಾವಣೆಮಾಡಿದೆ. ಸರ್ಕಾರದ ರೇಟ್‌ ಕಾರ್ಡ್‌ ಬಿಡುಗಡೆ ಮಾಡುವ ಮೂಲಕ ಕೋಟಿ ಕೋಟಿ ಲೂಟಿ ಮಾಡಿದೆ ಎಂದು ಕಾಂಗ್ರೆಸ್‌ ಕಿಡಿ ಕಾರಿದೆ.

ಕೊಡಗಿನ ಗಡಿಭಾಗದಲ್ಲಿ ತೀವ್ರ ನಿಗಾ ಕಣ್ಗಾವಲು-ಗೃಹಸಚಿವ

0

ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯ ಗಡಿ ಭಾಗಗಳಲ್ಲಿ ಅಪರಾಧ ಕೃತ್ಯಗಳನ್ನು ತಡೆಯುವುದಕ್ಕಾಗಿ ತೀವ್ರ ನಿಗಾ ಇಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದರು.

ಅಂತಹ ಪ್ರಕರಣಗಳನ್ನು ತಡೆಯಲು ಬಿಗಿ ಕಣ್ಗಾವಲು ಇರಿಸಲಾಗುತ್ತದೆ ಎಂದರು.

ಕೊಡಗು ಜಿಲ್ಲೆಯಲ್ಲಿ 2021ರಲ್ಲಿ 1,684 ಅಪರಾಧ ಪ್ರಕರಣಗಳು ದಾಖಲಾಗಿವೆ. 1,617 ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಮಾಡಲಾಗಿದೆ. 2022ರ ಆಗಸ್ಟ್‌ ಅಂತ್ಯದವರೆಗೆ 1,122 ಪ್ರಕರಣಗಳು ದಾಖಲಾಗಿದ್ದು, 870 ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಮಾಡಲಾಗಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್‌ ಇಲಾಖೆಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂಬ ಅಪ್ಪಚ್ಚು ರಂಜನ್‌ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಕೊಡಗು ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಂದ 95 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪೊಲೀಸ್‌ ಇಲಾಖೆಯಿಂದಲೂ 10 ಕ್ಯಾಮೆರಾ ಅಳವಡಿಸಲಾಗಿದೆ. ಹೆಚ್ಚಿನ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕುರಿತು ಪರಿಶೀಲಿಸಿ, ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ಜಿಲ್ಲಾ ಖನಿಜ ನಿಧಿಯ ಅನುದಾನ ಬಳಸಿಕೊಂಡು ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌ ಸಲಹೆ ನೀಡಿದರು.

ಕಾನೂನು ರಚನೆ ನ್ಯಾಯಾಲಯದ ಕೆಲಸವಲ್ಲ-ಸುಪ್ರೀಂ ಕೋರ್ಟ್

0

ಅಪರಾಧಿ ಪ್ರಕರಣಗಳ ಮೊಕದ್ದಮೆ ಇರುವ ಜನಪ್ರತಿನಿಧಿಗಳಿಗೆ ಸಿಗುವ ವೇತನವನ್ನು ನಿಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ ಮನವಿಯನ್ನು ತಳ್ಳಿಹಾಕಲಾಯಿತು. ಸಂಸದರು ಮತ್ತು ಶಾಸಕರ ವೇತತನವನ್ನು ತಡೆಹಿಡಿಯಬೇಕೆಂದು ಈ ಮನವಿಯನ್ನು ದಾಖಲಿಸಲಾಗಿತ್ತು.

ಇಂತವರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಸಾಧ್ಯವಿಲ್ಲದಿದ್ದರೆ, ಕಡಿಮೆ ಪಕ್ಷ ವೇತನವನ್ನು ತೆಗೆದುಕೊಳ್ಳಲು ಅನುಮತಿ ನೀಡಬಾರದು. ಎಂದು ಈ ಮನವಿಯಲ್ಲಿ ಹೇಳಲಾಗಿತ್ತು.

ನ್ಯಾಯಾಲಯವು, ಕಾನೂನನ್ನು ಮಾಡುವುದು ನ್ಯಾಯಾಲಯದ ಕೆಲಸವಲ್ಲ. ಶಾಸಕರು ಮತ್ತು ಸಂಸದರ ವೇತನ ಅಥವಾ ಇತರ ಸೌಲಭ್ಯಗಳನ್ನು ನೀಡುವ ನಿರ್ಣಯವನ್ನು ಸರಕಾರ ತೆಗೆದುಕೊಳ್ಳುತ್ತದೆ. ಸಭಾಗೃಹದಿಂದ ಹೋದ ಬಳಿಕ ಈ ವಿಷಯವನ್ನು ನಿರ್ಣಯಿಸುವ ಅಧಿಕಾರವೂ ಈ ಸದಸ್ಯರ ಕೈಯಲ್ಲಿಯೆ ಇರುತ್ತದೆ. ವೇತನ ಮತ್ತು ನಿವೃತ್ತಿಗೆ ಸಂಬಂಧಿಸಿದ ವ್ಯವಸ್ಥೆಯನ್ನು ಹೆಚ್ಚು ಕಡಿಮೆ ಮಾಡುವ ಅಧಿಕಾರವೂ ಸಂಸದರು ಮತ್ತು ಶಾಸಕರ ಕೈಯಲ್ಲಿದೆ. ಅವರು ತಮ್ಮ ಹಿತವನ್ನು ಅಪಾಯಕ್ಕೀಡು ಮಾಡಿ ನಿವೃತ್ತಿವೇತನ ಅಥವಾ ವೇತನವನ್ನು ತೆಗೆದುಕೊಳ್ಳಲು ನಿರಾಕರಿಸಿರುವುದು ಎಲ್ಲಿಯೂ ಕಾಣಿಸಿಲ್ಲ. ಅಬ್ಜಾವಧಿಯ ಸಂಪತ್ತು ಇರುವ ಕೆಲವು ಸದಸ್ಯರೂ ವೇತನ ಹಾಗೂ ನಿವೃತ್ತಿವೇತನವನ್ನು ಬಿಡುವುದಿಲ್ಲ. ಇನ್ನೊಂದೆಡೆ ಕೆಲವು ಸದಸ್ಯರು ಮಾತ್ರ ವೇತನವನ್ನು ನಿರಾಕರಿಸಿದ ವಾರ್ತೆ ಬೆಳಕಿಗೆ ಬಂದಿತ್ತು ಎಂದು ತಿಳಿಸಿದೆ.

ಕ್ರಿಯೆಟಿವ್ ಕಾಲೇಜಿನಲ್ಲಿ ಕಂಪೆನಿ ಸೆಕ್ರೆಟರಿ ಕಾರ್ಯಾಗಾರ

0

09/09/2022 ರಂದು ಕ್ರಿಯೇಟಿವ್‌ ಪಿ ಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ ಎಸ್‌ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸಿ.ಎಸ್‌ ಬಗ್ಗೆ ಖ್ಯಾತ ಕಂಪೆನಿ ಸೆಕ್ರೇಟರಿ ಸಂತೋಷ ಪ್ರಭು ವಿದ್ಯಾರ್ಥಿಗಳಿಗೆ ಸಿ.ಎಸ್‌ ನ ಮಹತ್ವದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.

ಗಣ್ಯರು ಈ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ C.S ಎಂಬುದು ಒಂದು ಅತ್ಯುನ್ನತ ಹುದ್ದೆ ಇಂದು ಭಾರತದಲ್ಲಿ C.S ನ ಕೊರತೆ ಇದ್ದು, ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವು ಅಗತ್ಯ ಎಂದರು.

ಸಿ ಎಸ್‌ ಎನ್ನುವುದು ಶೈಕ್ಷಣಿಕ ಸಂಸ್ಥೆಯಲ್ಲಿ ಪ್ರಾಂಶುಪಾಲರು ಹೇಗೆ ವಿದ್ಯಾರ್ಥಿಗಳ, ಬೋಧಕ ಬೋಧಕೇತರ ವರ್ಗದವರ ಸಮಗ್ರ ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲಿಸುತ್ತಾರೆಯೋ ಹಾಗೆ ಒಬ್ಬ ಕಂಪೆನಿ ಸೆಕ್ರೆಟರಿಯೂ ಕೂಡಾ ತನ್ನೆಲ್ಲಾ ಕಂಪೆನಿ ಉದ್ಯೋಗಿಗಳ, ಆಡಳಿತ ವರ್ಗದವರ ಬಗ್ಗೆ ಸದಾ ಕಾಳಜಿವಹಿಸಿ, ಕಾರ್ಯೋನ್ಮುಖರಾಗುವುದರೊಂದಿಗೆ ಕಂಪೆನಿಯ ಯಶಸ್ಸಿನ ಬಗ್ಗೆ ಚಿಂತಿಸುವ ಮಹತ್ವಾಕಾಂಕ್ಷಿ ಹುದ್ದೆಯಾಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀ ರಾಘವೇಂದ್ರ ಬಿ ರಾವ್‌, ಶ್ರೀ ಉಮೇಶ್‌, ಶ್ರೀಮತಿ ಅಕ್ಷತಾ ಜೈನ್‌ ಮತ್ತಿತರಿದ್ದರು. ವಿದ್ಯಾರ್ಥಿನಿ ವಿನುತ ಕಾರ್ಯಕ್ರಮ ನಿರೂಪಿಸಿದರು, ಪ್ರಜ್ವಲ್‌ ವಂದಿಸಿದರು.

ಹಿಂದಿ ದಿವಸ್ ಆಚರಣೆ ಬೇಡ-ಕುಮಾರಸ್ವಾಮಿ

0

ಕರ್ನಾಟಕದಲ್ಲಿ ಹಿಂದಿ ದಿವಸ್ ಆಚರಣೆ ಪ್ರಶ್ನಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಒಂದು ಭಾಷೆಯನ್ನು ಮಾತ್ರ ಮೆರೆಸುವುದು ನಿಜಕ್ಕೂ ಜನತೆಗೆ ಎಸಗುವ ಪರಮ ಅನ್ಯಾಯ.

ಭಾರತವು ಸಾವಿರಾರು ಭಾಷೆ ಹಾಗೂ ಉಪಭಾಷೆಗಳನ್ನು ಒಳಗೊಂಡ, 560ಕ್ಕೂ ಹೆಚ್ಚು ಸಂಸ್ಥಾನಗಳು ಒಪ್ಪಿ ಸೇರಿರುವ ಹಾಗೂ ಸಾಂಸ್ಕೃತಿಕವಾಗಿ ಬಿನ್ನ ಆಚರಣೆಗಳನ್ನು ಹೊಂದಿರುವ ಒಂದು ಮಹಾನ್ ಒಕ್ಕೂಟ. ಇಂಥ ನಾಡಿನಲ್ಲಿ ಕೇವಲ ಒಂದು ಭಾಷೆಯನ್ನು ಮಾತ್ರ ಮೆರೆಸುವುದು ಸರಿಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸೆ.14ರಂದು ಭಾರತ ಒಕ್ಕೂಟ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾದ ಹಿಂದಿ ದಿವಸವನ್ನು ಕರ್ನಾಟಕದಲ್ಲಿ ಒತ್ತಾಯಪೂರ್ವಕವಾಗಿ ಆಚರಿಸುವುದು ರಾಜ್ಯ ಸರ್ಕಾರ ಕನ್ನಡಿಗರಿಗೆ ಮಾಡುವ ಅನ್ಯಾಯವಾಗಿದೆ. ಕರ್ನಾಟಕ ಸರ್ಕಾರದ ವತಿಯಿಂದ ನಮ್ಮ ರಾಜ್ಯದ ಜನತೆಯ ತೆರಿಗೆ ಹಣದಲ್ಲಿ ಯಾವುದೇ ಕಾರಣಕ್ಕೂ ಹಿಂದಿ ದಿವಸ ಆಚರಣೆ ಮಾಡಬಾರದೆಂದು ಆಗ್ರಹಿಸುತ್ತೇನೆ ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಕೊಹಿನೂರ್ ವಜ್ರ ಭಗವಾನ್ ಜಗನ್ನಾಥನಿಗೆ ಸೇರಿದ್ದು – ಒಡಿಶಾ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ

0

ಒಡಿಶಾದ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯು ಕೊಹಿನೂರ್ ವಜ್ರವು ಜಗನ್ನಾಥನಿಗೆ ಸೇರಿದ್ದು ಎಂದು ಹೇಳಿಕೊಂಡಿದೆ. ಹಾಗೂ ಅದನ್ನು ಯುನೈಟೆಡ್ ಕಿಂಗ್‌ಡಮ್‌ನಿಂದ ಐತಿಹಾಸಿಕ ಪುರಿ ದೇವಸ್ಥಾನಕ್ಕೆ ಹಿಂದಿರುಗಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮಧ್ಯಸ್ಥಿಕೆಯನ್ನು ಕೋರಿದೆ.

ರಾಣಿ ಎಲಿಜಬೆತ್ ರ ಮರಣದ ನಂತರ ಆಕೆಯ ಮಗ ಪ್ರಿನ್ಸ್ ಚಾರ್ಲ್ಸ್ ರಾಜನಾಗಿದ್ದಾನೆ. ನಿಯಮಗಳ ಪ್ರಕಾರ, ಈಗ 105 ಕ್ಯಾರೆಟ್ ವಜ್ರದ ಕಿರೀಟವು ಪ್ರಿನ್ಸ್ ಪತ್ನಿ ಕ್ಯಾಮಿಲ್ಲಾಗೆ ಹೋಗುತ್ತದೆ.

12ನೇ ಶತಮಾನದ ದೇವಾಲಯಕ್ಕೆ ಕೊಹಿನೂರ್ ವಜ್ರವನ್ನು ಮರಳಿ ತರುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಪುರಿ ಮೂಲದ ಶ್ರೀ ಜಗನ್ನಾಥ ದೇವಾಲಯದವರು ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದಾರೆ.

ಕೊಹಿನೂರ್ ವಜ್ರವು ಶ್ರೀ ಭಾಗವಾನ್‌ ಜಗನ್ನಾಥ ಅವರದ್ದು. ಇದು ಈಗ ಇಂಗ್ಲೆಂಡ್ ರಾಣಿ ಬಳಿ ಇದೆ. ದಯಮಾಡಿ ಅದನ್ನು ಭಾರತಕ್ಕೆ ತರಲು ಕ್ರಮಕೈಗೊಳ್ಳುವಂತೆ ನಮ್ಮ ರಾಷ್ಟ್ರಪತಿಯವರನ್ನು ವಿನಂತಿಸುತ್ತೇವೆ. ಮಹಾರಾಜ ರಂಜಿತ್ ಸಿಂಗ್ ಅವರು ತಮ್ಮ ಉಯಿಲಿನಲ್ಲಿ ಇದನ್ನು ಜಗನ್ನಾಥ ದೇವರಿಗೆ ದಾನ ಮಾಡಿದ್ದಾರೆ ಎಂದು ಸೇನಾ ಸಂಚಾಲಕ ಪ್ರಿಯಾ ದರ್ಶನ್ ಪಟ್ನಾಯಕ್ ಜ್ಞಾಪಕ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಂಜಾಬ್‌ನ ಮಹಾರಾಜ ರಂಜಿತ್ ಸಿಂಗ್ ಅವರು ಅಫ್ಘಾನಿಸ್ತಾನದ ನಾದಿರ್ ಶಾ ವಿರುದ್ಧದ ಯುದ್ಧದಲ್ಲಿ ಗೆದ್ದ ನಂತರ ಪುರಿ ಭಗವಂತನಿಗೆ ವಜ್ರವನ್ನು ದಾನ ಮಾಡಿದ್ದಾರೆ. ಆದರೆ, ತಕ್ಷಣ ಅದನ್ನು ಹಸ್ತಾಂತರಿಸಲಿಲ್ಲ. ರಣಜಿತ್ ಸಿಂಗ್ 1839 ರಲ್ಲಿ ನಿಧನರಾದರು. 10 ವರ್ಷಗಳ ನಂತರ, ಬ್ರಿಟಿಷರು ಕೊಹಿನೂರ್ ಅನ್ನು ಅವರ ಮಗ ದುಲೀಪ್ ಸಿಂಗ್‌ನಿಂದ ಕಿತ್ತುಕೊಂಡರು. ಆದರೆ, ಅದು ಪುರಿಯಲ್ಲಿ ಜಗನ್ನಾಥ ದೇವರಿಗೆ ನೀಡಲ್ಪಟ್ಟಿದೆ ಎಂದು ಅವರಿಗೆ ತಿಳಿದಿತ್ತು ಎಂದು ಇತಿಹಾಸಕಾರ ಮತ್ತು ಸಂಶೋಧಕ ಅನಿಲ್ ಧೀರ್ ಅವರು ತಿಳಿಸಿದ್ದಾರೆ.

ಯುನೈಟೆಡ್ ಸ್ಟೇಟ್ಸ್ ನಲ್ಲಿ ಮಂಕಿಪಾಕ್ಸ್ ಗೆ ಮೊದಲ ಬಲಿ

0

ಯುನೈಟೆಡ್ ಸ್ಟೇಟ್ಸ್ನಲ್ಲಿ ಮಂಕಿಪಾಕ್ಸ್ ಕಾಯಿಲೆಯಿಂದ ಮೊದಲ ಸಾವಾಗಿರುವುದು ವರದಿಯಾಗಿದೆ ಎಂದು ಲಾಸ್ ಏಂಜಲೀಸ್ ಕೌಂಟಿ ಸಾರ್ವಜನಿಕ ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.

ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಕೂಡ ಸಂತ್ರಸ್ತನ ಸಾವು ಮಂಕಿಪಾಕ್ಸ್ ಸೋಂಕಿನಿಂದ ಉಂಟಾಗಿದೆ ಎಂದು ದೃಢಪಡಿಸಿದೆ.

ಸೋಂಕು ಪತ್ತೆಯಾದ ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈಗ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಮರಣೋತ್ತರ ಪರೀಕ್ಷೆಯ ವರದಿಯಿಂದ ಸಾವನ್ನು ದೃಢಪಡಿಸಲಾಗಿದೆ ಎಂದು ಲಾಸ್ ಏಂಜಲೀಸ್ ಕೌಂಟಿ ಸಾರ್ವಜನಿಕ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಂಗನ ಕಾಯಿಲೆಯಿಂದ ಸಂಭವಿಸಿದ ಮೊದಲ ಸಾವು ಎಂದು ವರದಿಯಾಗಿದೆ. ರಾಷ್ಟ್ರೀಯ ಅಂಕಿಅಂಶಗಳು, ಈ ವರ್ಷ ಯುಎಸ್ ನಲ್ಲಿ ಸುಮಾರು 22,000 ಮಂಕಿಪಾಕ್ಸ್ ಪ್ರಕರಣಗಳು ದೃಢೀಕರಿಸಲ್ಪಟ್ಟಿದೆ.

ದಸರಾ ಉತ್ಸವಕ್ಕೆ ಸಜ್ಜಾಗುತ್ತಿದೆ ಮೈಸೂರು

0

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೈಸೂರು ಅರಮನೆ ಮತ್ತು ವಿವಿಧೆಡೆ ಸಿದ್ಧತೆ ಆರಂಭವಾಗಿದೆ.

ಸೆ.20ರ ಮಂಗಳವಾರದಿಂದ ಸಿಂಹಾಸನ ಜೋಡಣೆ ಆರಂಭವಾಗಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರಗೆ ಅರಮನೆಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸೆ.26ರಂದು ಖಾಸಗಿ ದರ್ಬಾರ್ ಹಾಗೂ ವಿವಿಧ ಪೂಜೆಗಳು, ಧಾರ್ಮಿಕ ವಿಧಿಗಳು ನೆರವೇರಲಿವೆ. ಅಂದೂ ಸಹ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಅಕ್ಟೋಬರ್ 4ರಂದು ಅರಮನೆಯಲ್ಲಿ ಆಯುಧಪೂಜೆ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಅ.5ರಂದು ವಿಜಯದಶಮಿ ಆಚರಣೆ ಇರುತ್ತದೆ. ಅಂದೂ ಸಹ ಸಂಪೂರ್ಣ ಅರಮನೆ ಪ್ರವೇಶಕ್ಕೆ ನಿರ್ಬಂಧವಿದೆ. ಅ.20ರಂದು ಸಿಂಹಾಸನ ವಿಸರ್ಜನೆ‌ ಹಿನ್ನೆಲೆಯಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಇರುತ್ತದೆ ಎಂದು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಮಾಹಿತಿ ನೀಡಿದ್ದಾರೆ.

ಜಗದ್ವಿಖ್ಯಾತ ಮೈಸೂರು ದಸರಾ ಉತ್ಸವ ಸೆಪ್ಟೆಂಬರ್ 26ರಿಂದ ಆರಂಭವಾಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದಸರಾ ಉದ್ಘಾಟಿಸಲಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

2022ರ ಮೈಸೂರು ದಸರಾ ಉತ್ಸವಕ್ಕೆ ಗೋಲ್ಡ್ ಪಾಸ್ ಇರುವುದಿಲ್ಲ ಎಂದು ಮೈಸೂರಿನಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ಗಣ್ಯರು, ವಿದೇಶಿಗರು ಹೆಚ್ಚಾಗಿ ಗೋಲ್ಡ್ ಪಾಸ್ ಅವಲಂಬಿಸಿದ್ದರು. ಒತ್ತಡ ಕಡಿಮೆ ಮಾಡುವ ಸಲುವಾಗಿ ಗೋಲ್ಡ್ ಪಾಸ್​ನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಿವಿಐಪಿ ಪಾಸ್ ಹಾಗೂ ಕರ್ತವ್ಯನಿರತ ಪಾಸ್ ಹೊರತುಪಡಿಸಿ ಉಳಿದ ಪಾಸ್‌ಗಳನ್ನು ರದ್ದು ಮಾಡಲು ಚಿಂತನೆ ಮಾಡಲಾಗಿದೆ.

ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ಮೈಸೂರಿಗೆ ಬಂದಿದೆ. 4 ಹೆಣ್ಣಾನೆಗಳು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲಿವೆ. ಗೋಪಾಲಸ್ವಾಮಿ, ಅಭಿಮನ್ಯು, ಭೀಮ, ಮಹೇಂದ್ರ, ಅರ್ಜುನ, ವಿಕ್ರಮ, ಧನಂಜಯ, ಕಾವೇರಿ, ಗೋಪಿ, ಶ್ರೀರಾಮ, ವಿಜಯಾ, ಚೈತ್ರಾ, ಲಕ್ಷ್ಮೀ, ಪಾರ್ಥಸಾರಥಿ ಆನೆಗಳು ಮೈಸೂರಿನಲ್ಲಿ ಬೀಡುಬಿಟ್ಟಿದ್ದು, ಪ್ರತಿದಿನ ತಾಲೀಮು ಮಾಡುತ್ತಿವೆ ಎಂದು ತಿಳಿದುಬಂದಿದೆ.

ಕಲ್ಯಾಣ ಯೋಜನೆಯಡಿ ರೈತರಿಂದ ಅರ್ಜಿ ಆಹ್ವಾನ

0

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ, ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ದಿ ನಿಗಮ ಹಾಗೂ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮಗಳ ವ್ಯಾಪ್ತಿಗೆ ಒಳಪಡುವ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ಸೌಲಭ್ಯ ಒದಗಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ಸೇವಾಸಿಂಧು ಪೋರ್ಟಲ್ ಮೂಲಕ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‍ಲೈನ್‍ನಲ್ಲಿ ಅಕ್ಟೋಬರ್ 20 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.

ಮೇಲ್ಕಂಡ ನಿಗಮಗಳ ವ್ಯಾಪ್ತಿಗೆ ಒಳಪಡುವ ಜಾತಿ/ಸಮುದಾಯಗಳಿಗೆ ಸೇರಿದ, 18 ರಿಂದ 60 ವರ್ಷದೊಳಗಿನ ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದು ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿರದ ಖುಷ್ಕಿ ಜಮೀನು ಹೊಂದಿರುವವರು ಈ ಸೌಲಭ್ಯ ಪಡೆಯಬಹುದು. ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000 ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000 ಗಳ ಒಳಗಿರಬೇಕು. ಕನಿಷ್ಟ 01 ಎಕರೆ ಜಮೀನು ಹೊಂದಿರಬೇಕು. ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿದ್ದು ಆಧಾರ್ ಕಾರ್ಡ್‍ನಲ್ಲಿರುವಂತೆಯೇ ರೈತರ ಹೆಸರು, ಬ್ಯಾಂಕ್ ಖಾತೆಯ ಪುಸ್ತಕದಲ್ಲಿಯೂ ಇದ್ದು, ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿಯೂ ಆಧಾರ್ ಕಾರ್ಡ್‍ನಲ್ಲಿರುವಂತೆ ಹೆಸರು ಹೊಂದಾಣಿಕೆಯಾಗಬೇಕು.

ವೈಯಕ್ತಿಕ ಕೊಳವೆ ಬಾವಿ ಯೋಜನೆಯಡಿ ಘಟಕ ವೆಚ್ಚ ರೂ.2.50 ಲಕ್ಷ ಇದರಲ್ಲಿ ರೂ. 2.00 ಲಕ್ಷ ಸಹಾಯಧನ ಹಾಗೂ ರೂ.50 ಸಾವಿರ ನಿಗಮದಿಂದ ಶೇ.4 ರ ಬಡ್ಡಿದರದಲ್ಲಿ ನೀಡವ ಸಾಲದ ಮೊತ್ತವಾಗಿರುತ್ತದೆ.

ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್ www.dbcdc.karnataka.gov.in ಇಲ್ಲಿ ಹಾಗೂ ಸಹಾಯವಾಣಿ ಸಂಖ್ಯೆ 080-22374832, 9606066389 ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ, ಭಾಗ್ಯ ನಿಲಯ, ಭಂಡಾರಿ ಗ್ಯಾಸ್ ಏಜೆನ್ಸಿ ಹತ್ತಿರ, 1ನೇ ತಿರುವು, ಗಾಂಧಿನಗರ, ಶಿವಮೊಗ್ಗ, ದೂ.ಸಂ: 08182-229634 ಇವರನ್ನು ಸಂಪರ್ಕಿಸಿ ಪಡೆಯಬಹುದು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.