Klive Special Article “ನಮ್ರತೆಯ ಸಂತ – ಅಗಡಿ ಆನಂದವನದ ಶ್ರೀ ಶೇಷಾಚಲ ಸದ್ಗುರುಗಳು”
“ಸಾಧು ನೋಡೆಲೋ ಇವನು ಸಾಧು ನೋಡೆಲೋ | ವೇದತೀತ ವಾದತೀತ ನಾದತೀತ ಬ್ರಹ್ಮನೀತ || “ ಎಂದು ಸಂತ ಶಿಶುನಾಳ ಶರೀಫರು ಹಾಡುತ್ತಾರೆ. ಅದನ್ನು ಮುಂದುವರೆಸುತ್ತಾ “ಎಂಟು ಮದಗಳನ್ನು ತುಳಿದು ಕುಂಟನಾದನು”ಎಂದಾಗ ಒಮ್ಮೆ ಅರ್ಥಮಾಡಿಕೊಳ್ಳುವುದು ಕಠಿಣವಾಗುತ್ತದೆ. ಹೌದು! ಇದು ಅಗಡಿ ಆನಂದವನದ ಶ್ರೀ ಶೇಷಾಚಲ ಸದ್ಗುರು ಮಹಾರಾಜರನ್ನು ಕುರಿತು ಹಾಡಿದುದು.
ಅಗಡಿ ಇಂದಿನ ಹಾವೇರಿ ಜಿಲ್ಲೆಯಲ್ಲಿರುವ ಸಣ್ಣ ಹಳ್ಳಿ. ಅಲ್ಲಿ ಚಕ್ರವರ್ತಿ ರಾಮಭಟ್ಟ ಮತ್ತು ಲಕ್ಷ್ಮಿದೇವಿ ದಂಪತಿಗಳ ಜ್ಯೇಷ್ಠ ಪುತ್ರನಾಗಿ 1848 ರಲ್ಲಿ ಶೇಷಾಚಲನ ಜನನವಾಯ್ತು. ತಾತ ನರಸಿಂಹ ಭಟ್ಟರ ಜೊತೆಗೆ ಶೇಷಾಚಲನು ಬೆಳೆಯುತ್ತಿರುವಾಗ, ತಾತನವರು ಕಾಲವಶರಾದರು. ವೈದಿಕ ವಿದ್ಯಾ ಪ್ರವೀಣನಾಗಲಿ ಎಂದು ಇವರನ್ನು ವೇದಾಧ್ಯಯನಕ್ಕೆ ಕಳುಹಿಸಿದಾಗ ಎಲ್ಲವನ್ನೂ ಕಲಿತರೂ ಸಹಾ ಏನೂ ಅರಿಯದವನಂತಿರುತ್ತಿದ್ದ ಶೇಷಾಚಲನನ್ನು ಎಲ್ಲರೂ ಹೀಯಾಳಿಸುವರು, ಬೈಯ್ಯುವರು, ಮೂದಲಿಸುವರು. ಆದರೆ ಈ ಹುಡುಗ ಮಾತ್ರ ಯಾವುದಕ್ಕೂ ಕ್ರೋಧವಶನಾಗದೇ ಅತ್ಯಂತ ವಿಧೇಯತೆಯಿಂದ ನಗು ನಗುತ್ತಾ ಇರುತ್ತಿದ್ದ. ಅದು ಹುಟ್ಟಿದಾಗಿನಿಂದ ಸಮಸ್ಯೆಯಿತ್ತೋ ಅಥವಾ ಸಾಧನೆಯ ಸಂದರ್ಭದಲ್ಲಿ ಆಯಿತೋ ತಿಳಿಯದು ಶೇಷಾಚಲನು ಒಂದು ಕಾಲನ್ನು ಎಳೆದುಕೊಂಡು ಅಥವಾ ಸ್ವಲ್ಪ ಕುಂಟುತ್ತಾ ನಡೆಯುತ್ತಿದ್ದುದರಿಂದ ಅವನನ್ನು ʼಕುಂಟ ಶೇಷʼ ಎಂದು ಕೂಡಾ ಕರೆಯುತ್ತಾ ಜನರು ವಿಕೃತ ಸಂತೋಷಪಡುತ್ತಿದ್ದರು. ತಾತ ವೇದ-ವೇದಾಂತ ಸಂಪನ್ನ, ತಂದೆ ಅದ್ವಿತೀಯ ವೈದಿಕ ಶ್ರೇಷ್ಠರಾದರೆ ಮಗ ಮಂಕನಾಗಿದ್ದಾನೆ ಎಂದು ಬಂಧು-ಮಿತ್ರರೆಲ್ಲರೂ ಆಡುವ ಮಾತನ್ನು ಕೇಳಿ ಶೇಷನ ತಂದೆ ತಾಯಿಗಳಿಗೆ ಅತೀವ ದುಃಖವಾಗುತ್ತಿತ್ತು. ಆದರೆ ಅದನ್ನು ಮಗನೆದುರಿಗೆ ತೋರಿಸಿರಲಿಲ್ಲ. ಶೇಷಾಚಲನು ಮಾತ್ರ ತಂದೆಯೆಂದರೆ ಅತ್ಯಂತ ಭಕ್ತಿ ಕೈಲಾಗಲಿ ಬಿಡಲಿ ತಂದೆಗೆ ಸಹಾಯ ಮಾಡುವ ಪರಿಪಾಠ ಹೊಂದಿದ್ದನು. ಹೀಗಿರುವಾಗ ರಾಮಭಟ್ಟರೊಟ್ಟಿಗೆ ಶೇಷಾಚಲನೂ ಹೊರಟ. ಅಲ್ಲಿ ರಂಗೂತಾಯಿ ಎಂಬ ಹೆಂಗಸು ಮನಸೋ ಇಚ್ಛೆ ಶೇಷನನ್ನು ದಡ್ಡ, ಮೂರ್ಖ ಎಂದು ಹೀಯಾಳಿಸಿದಳು. ಆದರೂ ಶೇಷಾಚಲ ಬೇಸರ ಮಾಡಿಕೊಳ್ಳಲಿಲ್ಲ ಆದರೆ ಹೆತ್ತ ಕರುಳು ತಡೆಯಲು ಸಾಧ್ಯವೇ ? ತಾಯಿ ಲಕ್ಷ್ಮಮ್ಮನವರು “ಶೇಷಣ್ಣ ಇನ್ನೂ ಎಷ್ಟು ದಿನ ಈ ಮೌನ, ಎಷ್ಟು ದಿನ ಈ ತಮಾಷೆಯ ಕಾಲಹರಣ, ನೀನು ದೈವಾಂಶ ಸಂಭೂತ ಎಂದು ನಮಗಷ್ಟೇ ತಿಳಿದರೆ ಸಾಲದು, ನಿನ್ನ ಜ್ಞಾನಪ್ರಕಾಶತೆ ಜಗತ್ತಿಗೆ ತಿಳಿಯುವುದು ಯಾವಾಗ ?”ಎಂದು ಮಗನ ಮೈದಡವಿ ಕೇಳಿದಾಗಲೂ ಮಗನಿಂದ ಉತ್ತರವಿಲ್ಲ. ಕೆಲವೇ ದಿವಸಗಳಲ್ಲಿ ಮತ್ತೆ ಹಿಂದೆ ಅವಮಾನವಾದ ಸ್ಥಳದಲ್ಲಿಯೇ ಮತ್ತೊಂದು ವಿವಾಹ ಕಾರ್ಯಕ್ಕಾಗಿ ರಾಮಭಟ್ಟರೊಂದಿಗೆ ಶೇಷಾಚಲನೇ ಹೋದನು. ಆದರೆ ಈ ಬಾರಿ ಅಲ್ಲಿ ಯಾರಿಗೂ ಹೀಯಾಳಿಸುವ ಅವಕಾಶವೇ ದೊರೆಯದಾಯಿತು. ಬ್ರಹ್ಮಚಾರಿಯು ಅಸ್ಖಲಿತನಾಗಿ ಕಾರ್ಯಗಳನ್ನು ಮಾಡಿಸುತ್ತಿರುವಾಗ ಈ ಹಿಂದೆ ಹೀಯಾಳಿಸಿದ, ಚುಚ್ಚಿ ಮಾತನಾಡಿದ ರಂಗೂತಾಯಿಗೆ ಮಾತು ಬರದಂತಾಯಿತು ಬಾಲಕನ ಪೌಢಿಮೆ ಅವಳ ಕಣ್ಣುಗಳನ್ನು ತೆರೆಸಿ ಕಾರ್ಯಕ್ರಮವೆಲ್ಲ ಮುಗಿದಮೇಲೆ ಶೇಷಾಚಲ “ನೀನು ಮಾನವ ಮಾತ್ರನಲ್ಲ ಕಣಪ್ಪ,ನಿಜಕ್ಕೂ ಚಿದಂಬರನ ಅವತಾರ”ಎಂದು ಕಣ್ಣೀರಿಟ್ಟಳು. ಆಗಲೂ ಬಾಲಕನು ಮರು ಮಾತನ್ನಾಡದೇ ವಿನಮ್ರನಾಗಿ ಅವರ ಹೊಗಳಿಕೆಯನ್ನು ಬದಿಗಿರಿಸಿ ಊರಿಗೆ ಹೊರಟು ಬಂದ.
Klive Special Article ಮುಂದೆ ತಮ್ಮ 23-24ನೇ ವಯಸ್ಸಿನಲ್ಲಿ ಮರೋಳದ ಭೀಮರಾಯರ ಪುತ್ರಿ ತುಳಸೀದೇವಿಯವರೊಂದಿಗೆ ವಿವಾಹವಾಯಿತು. ಪತಿಗೆ ತಕ್ಕ ಪತ್ನಿ. ಯಾವುದರಲ್ಲಿಯೂ ಯಾವುದೇ ಕಿರಿಕಿರಿಯಿಲ್ಲ. ತಮ್ಮ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರು. ಶೀಘ್ರಕೋಪಿಗಳಂತೆ ಕಾಣುವ ತುಳಸೀದೇವಿಯವರು ಅಂತಃಕರಣದಿಂದ ಅತ್ಯಂತ ಕೋಮಲರಾಗಿದ್ದರು. ಚಿದಂಬರನ ಉಪಾಸಕರಾದ ಪತಿ-ಪತ್ನಿಯರು ಎಲ್ಲರಿಗೂ ಆದರ್ಶ ಪ್ರಾಯರಾಗಿದ್ದರು. ಸರಿ ಸಾಧುಗಳಿಗೆ ಪರೀಕ್ಷಾ ಸಮಯವೇನೋ ಎಂಬಂತೆ, ಆ ವರ್ಷ “ಡವಗಿಬರ” ಶುರುವಾಗಿ ಎಲ್ಲೆಡೆ ಹಾಹಾಕಾರವೆದ್ದಿತು. ಎಲ್ಲೆಂದರಲ್ಲಿ ಜನ ಸಾಯುತ್ತಿದ್ದಾರೆ, ಅದೆಷ್ಟೋ ಹೆಣಗಳಿಗೆ ಸಂಸ್ಕಾರವಿಲ್ಲ, ಎಲುಬು-ತಲೆಬುರುಡೆಗಳ ರಾಶಿ ರಾಶಿಗಳನ್ನು ಕಾಣುವಂತಹ ಪರಿಸ್ಥಿತಿ ಮೂಡಿತು. ರಾಮಭಟ್ಟರ ಕುಟುಂಬ ದೊಡ್ಡದು ಅಂದರೆ ಮನೆಯಲ್ಲಿ 10-15ಜನರಿದ್ದರು. ಪೂರ್ವ ಯೋಜನೆಯಂತೆ ಸಂಗ್ರಹಿಸಿದ ಧಾನ್ಯಗಳಿಂದ ಬರಗಾಲದ ಭೀಕರತೆ ಈ ಮನೆಯಲ್ಲಿ ಸ್ವಲ್ಪ ಕಡಿಮೆಯಿತ್ತು. ಪ್ರತಿದಿನ ಮಾಡಿದ ಅಡುಗೆಯನ್ನು ಸಮಪ್ರಮಾಣದಲ್ಲಿ ಮನೆಯ ಸದಸ್ಯರಿಗೆ ಹಂಚಿದಾಗೆ ಎಲ್ಲರೂ ಊಟ ಮಾಡಿದರೆ ಶೇಷಾಚಲ ಸದ್ಗುರುಗಳು ಮಾತ್ರ ತಮ್ಮ ಪಾಲಿಗೆ ಬಂದ ಅನ್ನದಲ್ಲಿ ಅರ್ಧವನ್ನು ಹಸಿದವರಿಗೆ ಅಥವಾ ಬಡವರಿಗೆ ಕೊಟ್ಟು ಉಳಿದದ್ದನ್ನು ಮಾತ್ರ ತಿನ್ನುತ್ತಿದ್ದರು. ಕೆಲವು ವರ್ಷಗಳ ನಂತರ ಬರದ ಛಾಯೆ ಕಡಿಮೆಯಾಗಲು ತೀರ್ಥ ಯಾತ್ರೆಗಾಗಿ ಹೊರಟು, ಉಡುಪಿ ಪರ್ಯಾಯವನ್ನು ಮುಗಿಸಿ ಶೃಂಗೇರಿಯ ಶಾರದಾಪೀಠಕ್ಕೆ ಬಂದರು. ಆಗ ಅಲ್ಲಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಮಹಾಸ್ವಾಮಿಗಳವರು ಪೀಠಾಧ್ಯಕ್ಷರು. ಅವರ ಅನುಗ್ರಹವಾಗಬೇಕೆಂದು ಪ್ರತಿದಿನ ಶೇಷಾಚಲ ಮಹಾರಾಜರು ಮಹಾಸನ್ನಿಧಾನಂಗಳ ಊಟವಾದ ನಂತರ ಅವರು ಕೈಕಾಲು ತೊಳೆದುಕೊಂಡು ಹೋಗುತ್ತಿದ್ದರು. ಆ ಮಹಾತ್ಮರ ಪಾದೋದಕವನ್ನು ತಮ್ಮ ಮುಖ ಮೈಗಳಿಗೆ ಹಚ್ಚಿ ನಂತರ ಪ್ರಸಾದ ಸ್ವೀಕರಿಸುತ್ತಿದ್ದರು. ಹೀಗಿರುವಾಗ ಒಂದು ದಿನ ಇದ್ದಕ್ಕಿದ್ದಂತೆ ಮಹಾ ಸನ್ನಿಧಾನಂಗಳು ತಮ್ಮ ಪಕ್ಕದಲ್ಲಿ ಇನ್ನೊಂದು ಎಲೆಯನ್ನು ಹಾಕಿಸಿ ಅಲ್ಲಿ ಮಹಾರಾಜರನ್ನು ಕರೆಸಿ ಊಟಕ್ಕೆ ಕೂಡಿಸಿ ತಮ್ಮ ಎಲೆಯಲ್ಲಿಂದ ಮೂರು ತುತ್ತುಗಳನ್ನು ಪ್ರಸಾದ ರೂಪದಲ್ಲಿ ಅನುಗ್ರಹಿಸಿದರು. ಅದರ ನಂತರ ಅವರೇ ನೇರವಾಗಿ ಶೇಷಾಚಲ ಸಾಧುಗಳಿಗೆ ಉಪದೇಶ ನೀಡಿದರು. ಅಲ್ಲಿಂದ ಹೊರಟು ಹಲವಾರು ಪುಣ್ಯ ಕ್ಷೇತ್ರ ಸಂಚರಿಸುತ್ತಾ ಸಾಧುಗಳು ಅಗಡಿಗೆ ಬಂದರು. ಅಲ್ಲಿಂದ ಅವರ ಶಿಷ್ಯರ ಸಂಖ್ಯೆ ಬೆಳೆಯುತ್ತಾ ಹೋದಂತೆ ಲಿಂಗೂ ಭಗವಾನರು, ನಾರಾಯಣ ಭಗವಾನರು ಹಾಗೂ ಶಂಕರ ಭಗವಾನರು ಶೇಷಾಚಲ ಮಹಾರಾಜರ ಅಂತರಂಗ ಶಿಷ್ಯರಾದರು.
1910ರಲ್ಲಿ ಗಳಗನಾಥದಲ್ಲಿ ಶ್ರೀ ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ದರ್ಶನವಾಯಿತು. ಸಂಜೆ ಶೇಷಾಚಲ ಮಹಾರಾಜರು ಬ್ರಹ್ಮ ಚೈತನ್ಯರನ್ನು ಕಂಡು ದೂರದಿಂದಲೇ ದೀರ್ಘದಂಡ ಸಾಷ್ಟಾಂಗ ನಮಸ್ಕಾರ ಮಾಡಿದರು. ಅವರನ್ನು ಕಂಡು ಸಂತೋಷದಿಂದ ನಮಸ್ಕರಿಸಿದರು. ಆಗ ಹೀಗೇಕೆ ಮಾಡುತ್ತಿರುವಿರಿ ಎಂದು ಕೇಳಲು ಬ್ರಹ್ಮಚೈತನ್ಯ ಮಹಾರಾಜರು “ಅರೇ ಅಲ್ಲಿ ಪ್ರತ್ಯಕ್ಷ ರಾಮನೇ ಕಣ್ಣೆದುರಿಗೆ ಬರಲು ನಮಸ್ಕರಿಸದೇ ಇರಲು ಹೇಗೆ ಸಾಧ್ಯ ?”ಎಂದು ನುಡಿದು ಶೇಷಾಚಲ ಸಾಧುಗಳನ್ನು ಮತ್ತೆ ಪ್ರೀತಿಯಿಂದ ಆಲಂಗಿಸಿಕೊಂಡು ಸುಮಾರು ಒಂದು ಒಂದೂವರೆಗಂಟೆ ಮಾತನಾಡಿ ನಂತರ ಬೀಳ್ಕೊಟ್ಟರು. ಇದರ ನಂತರದಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಹಾಸ್ವಾಮೀಜಿಯವರು ಶೇಷಾಚಲ ಸಾಧುಗಳನ್ನು ಭೇಟಿಯಾಗುವ ಸಂದರ್ಭ ಬಂತು. ಹುಬ್ಬಳ್ಳಿಯ ಪ್ರಸಿದ್ಧ ವಕೀಲರಾದ. ರಾ.ರಾ.ಜೋಶಿಯವರ ಮಗಳ ಮದುವೆಗೆ ಶೇಷಾಚಲ ಮಹಾರಾಜರು ಹೋಗಿದ್ದರು. ಅಲ್ಲಿಗೆ ಮಹಾತ್ಮರಾದ ಸಿದ್ಧಾರೂಢರೂ ಸಹಾ ಬಂದು ಮುಹೂರ್ತದ ನಂತರ ಹಿಂತಿರುಗುವಾಗ ಶೇಷಾಚಲ ಮಹಾರಾಜರು ಅವರನ್ನು ಬೀಳ್ಕೊಡಲು ಬಂದು “ಮಹರಾಜ್ ತಮ್ಮ ದರ್ಶನದಿಂದ ಬಹಳ ಸಂತೋಷವಾಯ್ತು “ಎನ್ನಲು ಸಿದ್ಧಾರೂಢರು “ಸಾಧುಗಳೇ ತಮ್ಮ ಸಾಕ್ಷಾತ್ಕಾರ ಬಲದಿಂದ ಪರಬ್ರಹ್ಮನ ದರ್ಶನ ಪ್ರತಿನಿತ್ಯವೂ ಆಗುತ್ತಿರುವಾಗ ಈ ಜಡ ದೇಹದ ದರ್ಶನದಿಂದ ಸಂತೋಷವೇನು?”ಎಂದು ಮುಗುಳ್ನಕ್ಕರು. ಆಗ ಮಹಾರಾಜರು ಆರೂಢರಿಗೆ, ಅವರ ಎತ್ತು-ಗಾಡಿಗಳಿಗೆ, ಗಾಡಿಯ ಚಾಲಕನಿಗೆ ಎಲ್ಲರಿಗೂ ನಮಸ್ಕರಿಸಿ ಅವರನ್ನು ಬೀಳ್ಕೊಟ್ಟರು. ಇದೀಗ ಶೇಷಾಚಲ ಸಾಧುಗಳು ನಮಸ್ಕರಿಸಿದಾಗ ಆರೂಢರು ಪ್ರತಿನಮಸ್ಕರಿಸಲಿಲ್ಲ ಸಾಧುಗಳಿಗಿಂತಲೂ ಆರೂಢರು ಶ್ರೇಷ್ಠ ಎಂದು ತಮ್ಮೊಳಗೆ ಗುನುಗುತ್ತಿರುವುದು ಆರೂಢರ ಕಿವಿಗೆ ಬಿದ್ದು ಶಿಷ್ಯರಿಗೆ ತಿಳಿಸಿದರು “ ನೋಡಿದಿರಾ ಆ ಸಾಧು ತನ್ನ ನಮಸ್ಕಾರದಿಂದ ನಮ್ಮನ್ನು ಹೇಗೆ ಕಡೆಗಣಿಸಿದರು. ಅದಕ್ಕೆ ಶಿಷ್ಯರು “ಸಾಧುಗಳು ನಿಮಗೆ ಎರಡೆರಡು ಬಾರಿ ನಮಸ್ಕರಿಸಿದರಲ್ಲವೆ, ಅಂದಮೇಲೆ ಹೇಗೆ ಕಡೆಗಣಿಸಿದಂತಾಯಿತು ?”ಎನ್ನಲು ಆರೂಢರು “ನೋಡು, ನನಗೆ ಕೈ ಮುಗಿದರು ನಾನು ಪ್ರತಿ ನಮಸ್ಕರಿಸಲಿಲ್ಲ, ಎತ್ತು ಗಾಡಿಗಳಿಗೂ ನಮಸ್ಕರಿಸಿದರು ಅವೂ ಸುಮ್ಮನಿದ್ದವು, ಹಾಗಾದರೆ ಮನುಷ್ಯರೂ ಪಶುಗಳೂ ಒಂದೇ ಎಂಬಂತಾಗಲಿಲ್ಲವೇ ?” ಅದರರ್ಥ ಇಷ್ಟೇ ಪ್ರತಿ ಜೀವಿಯೂ ಪರಬ್ರಹ್ಮ ಸ್ವರೂಪ. ಸಾಧುಗಳು ಸಾಧುತನದಿಂದ ಮತ್ತು ಆರೂಢರು ಆರೂಢತನದಿಂದ ನಡೆದುಕೊಂಡರು. ಹೀಗಾಗಿ ಇಬ್ಬರೂ ದೊಡ್ಡವರೇ. ಅಜ್ಞಾನಿಗಳಾದವರು ಆಕ್ಷೇಪಿಸುತ್ತಾರೆ. ಎಂದು ತಿಳಿಸಿದರು.
ಇದೇರೀತಿ ತಮ್ಮ ಕೈಂಕರ್ಯಗಳನ್ನು ಅತ್ಯಂತ ನಮ್ರತೆಯಿಂದ ಯಾರಿಗೂ ಕೇಡು ಬಯಸದೇ, ನೋವು ಮಾಡದೇ ತುಚ್ಛವಾಗಿ ಕಾಣದೇ “ಸಾಧು” ಎಂದರೆ ಶೇಷಾಚಲ ಸಾಧು ಎಂದು ಪ್ರತಿಯೊಬ್ಬರ ಬಾಯಿಂದ ಕರೆಸಿಕೊಂಡು ನಂತರ ಎಲ್ಲವನ್ನೂ ಎಲ್ಲರನ್ನೂ ಈಶ್ವರ ಸ್ವರೂಪ ಎಂದು ಭಾವಿಸಿ ಮಕ್ಕಳಾಗಲಿ-ದೊಡ್ಡವರಾಗಲಿ, ಬುದ್ಧಿವಂತ-ದಡ್ಡ, ವಿವೇಕಿ-ಅವಿವೇಕಿ, ಗಂಡು-ಹೆಣ್ಣು ಎಲ್ಲರನ್ನೂ ಸಮಭಾವದಿಂದ ತಾಯಿ, ಮಹಾರಾಜ ಎಂದು ಸಂಬೋಧಿಸಿ ಜಗತ್ತಿಗೆ ವಿನಯ ಶೀಲತೆಯ ಪ್ರಭಾವ ತೋರಿಸಿದ ಈ ಸಾಧುಗಳನ್ನು ಏನೆಂದು ಹೆಸರಿಸಲು ಸಾಧ್ಯ ? ಸಂತರಾದವರಿಗೆ ಚಮತ್ಕಾರಗಳು ಮುಖ್ಯವಲ್ಲ ಮನುಕುಲದ ಉದ್ಧಾರವೇ ಮೂಲ ಧ್ಯೇಯ ಎಂಬುದು ಇವರ ಜೀವನದ ಉದ್ದೇಶವಾಗಿತ್ತು. ಹಾಗೂ “ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಂ” ಎಂಬ ಉಕ್ತಿಗೆ ಜ್ವಲಂತ ಉದಾಹರಣೆ ನಾವು ಶೇಷಾಚಲ ಸಾಧುಗಳನ್ನು ಕಾಣಬಹುದು. ತಮ್ಮ ವಿನಯದಿಂದಲೇ ಜಗತ್ತಿಗೆ ಆದರ್ಶವಾದವರು. ಎಲ್ಲ ವಿದ್ಯೆಯೂ ತಮ್ಮಲ್ಲರುವಾಗ ಕಾಮ, ಕ್ರೋಧ, ಮೋಹ, ಲೋಭ, ಮದ-ಮತ್ಸರಗಳೆಂಬ ಅಹಂಕಾರವನ್ನು ತುಳಿದು ಕುಂಟನಾನಾದನು ಎಂದು ಶರೀಫ ಸಾಹೇಬರು ಹಾಡಿದ್ದುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ.
ನಂತರ ಗಳಗನಾಥರಿಗೆ ಗುರುಗಳ ಆದೇಶವಾಗಿ ಸಂಸ್ಕೃತ ಪಾಠಶಾಲೆ ಪ್ರಾರಂಭವಾಯಿತು. ಗೋ-ರಕ್ಷಣಗೆಗಾಗಿ ಗೋಶಾಲೆ ಪ್ರಾರಂಭವಾಯಿತು. ಪಾಠಶಾಲೆಯ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಗಾಗಿ “ಮುಷ್ಠಿಭಿಕ್ಷಾ”ಅಂದರೆ ಭಕ್ತರು ತಮ್ಮ ಮನೆಯಲ್ಲಿ ಒಂದು ಸಣ್ಣ ಕೈಚೀಲವನ್ನಿರಿಸಿ ಪ್ರತಿದಿನ ಅದಕ್ಕೆ ಒಂದು ಹಿಡಿ ಅಕ್ಕಿಯನ್ನು ಹಾಕಬೇಕು ಮತ್ತು ಪ್ರತಿ ತಿಂಗಳಲ್ಲಿ ನಿರ್ದಿಷ್ಟ ದಿನದಂದು ಅದನ್ನು ಆನಂದವನಕ್ಕೆ ತಂದು ನೀಡಬೇಕು. ಈ ಪದ್ದತಿಯನ್ನು ನಾವು ಈಗಲೂ ಕಾಣಬಹುದಾಗಿದೆ. ಅದರಂತೆ ಹತ್ತು ಸಾವಿರ ಜನರು ಒಮ್ಮೆ ಊಟ ಮಾಡಲು ಅನುಕೂಲವಾಗುವಂತಹ ʼಅನ್ನಬ್ರಹ್ಮʼ ಎಂಬ ದಾಸೋಹ ಭವನವಿದೆ. ಅಗಡಿಯಲ್ಲಿ ಒಂದು ವಾರಗಳ ಕಾಲ ಗುರುಗಳ ಜಯಂತಿಯ ಸಂದರ್ಭ ಸದಾ ಸಂತರ್ಪಣೆಯಿರುತ್ತದೆ. ಸಾವಿರ ಸಾವಿರ ಭಕ್ತರು ಬಂದು ಸೇರುತ್ತಾರೆ. ಇವರ ಮುಮ್ಮಗ ಶ್ರೀ ಚಿದಂಬರ ಮೂರ್ತಿ ಚಕ್ರವರ್ತಿಗಳೂ ಕೂಡ ಶೇಷಾಚಲ ಮಹಾರಾಜರ ಸಂಪ್ರದಾಯದಂತೆ ಆಶ್ರಮದ ದೇಖ-ರೇಖಿ ನೋಡಿಕೊಂಡು ಬಂದರು. ಪ್ರಸ್ತುತ ಆಶ್ರಮದಲ್ಲಿ ಯಾವುದೇ ಕೈಂಕರ್ಯಗಳು ನಿಂತಿಲ್ಲ ಗುರುನಾಥನ ಆಶಯದಂತೆ ಅವನ ಆಶೀರ್ವಾದದಿಂದ ಎಲ್ಲವೂ ನಡೆಯುತ್ತಿದೆ. ಪ್ರತಿಯೊಬ್ಬರೂ ನೋಡಲೇಬೇಕಾದ ತಾಣ ಅದು ಅಗಡಿಯ ಆನಂದವನ. ಪ್ರತಿಯೊಂದು ಮಗುವಿಗೂ ಸಹಾ ಶೇಷಾಚಲ ಮಹಾರಾಜರ ಪರಿಚಯವಾಗಬೇಕು. ಅವರ ಆದರ್ಶಗಳು ಎಲ್ಲರಿಗೂತ ತಿಳಿಸಬೇಕು ಎಂಬುದು ಈ ಲೇಖನದ ಉದ್ದೇಶವಾಗಿದೆ. ಈ ಮಹಾತ್ಮರ ಬಗ್ಗೆ ನಾನು ತೃಪ್ತಿಯಾಗುವಷ್ಟು ಹೇಳಿಬಿಡುವೆ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಸಮುದ್ರದ ಮುಂದೆ ನಿಂತು ಈ ನೀರೆಲ್ಲವೂ ನನ್ನದೇ ಎಲ್ಲವನ್ನೂ ಕುಡಿದುಬಿಡುತ್ತೇನೆ ಎಂದು ಸಾಹಸ ಮಾಡಿದಂತಾಗಬಹುದು. ದೊಡ್ಡ ಆನೆಯನ್ನು ಕನ್ನಡಿಯಲ್ಲಿ ಹಿಡಿದಿಡುವ ಪ್ರಯತ್ನ ಮಾಡಿರುವ ಈ ಬಾಲಕನಿಗೆ ಪ್ರೋತ್ಸಾಹವಿರಲಿ. ತಪ್ಪುಗಳಿದ್ದಲ್ಲಿ ತಮ್ಮ ಅನಿಸಿಕೆಗಳನ್ನು-ಅಭಿಪ್ರಾಯಗಳನ್ನು ವೈಯಕ್ತಿಕವಾಗಿ ಮೊಬೈಲ್ ಕರೆಯ ಮೂಲಕವೋ ಅಥವಾ ಇ-ಮೇಲ್ ಮೂಲಕವೋ ದಯವಿಟ್ಟು ತಿಳಿಸಿ.
Klive Special Article ಆನಂದವನದ ಆಧ್ಯಾತ್ಮಿಕ ಮೇರು- ಶ್ರೀಶೇಷಾಚಲ ಸದ್ಗುರು. ಲೇ: ಶ್ರೀವತ್ಸ ಪ್ರಸಾದ್ .ದಾವಣಗೆರೆ.
ಗೋವನ್ನು ಕಾಪಾಡುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯ- ಜೆ.ಎಸ್.ಚಿದಾನಂದ ಗೌಡ
ಗೋಮಾತೆಯ ಗೌರವದ ಅಭಿಯಾನದ ಅಂಗವಾಗಿ ಪಟ್ಟಣದಲ್ಲಿ ಗೋ ಸಂರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ಗೋವು ಭಾರತೀಯ ಸಂಸ್ಕೃತಿಯಲ್ಲಿ ಪೂಜ್ಯ ಸ್ಥಾನ ಹೊಂದಿದ್ದು, ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆಯ ಪ್ರಮುಖ ಭಾಗವಾಗಿದೆ. ಹಾಲು, ಗೊಬ್ಬರ, ಗೋಮೂತ್ರ ಸೇರಿದಂತೆ ಹಲವು ರೀತಿಯಲ್ಲಿ ಮಾನವ ಜೀವನಕ್ಕೆ ಉಪಯುಕ್ತವಾಗಿರುವ ಗೋವುಗಳನ್ನು ಕಾಪಾಡುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯವಾಗಿದೆ ಎಂದರು.
ಗೋಮಾತೆಯನ್ನು ರಾಷ್ಟ್ರ ಮಾತೆಯೆಂದು ಘೋಷಿಸಬೇಕು. ಗೋ ಸೇವೆಗೆ ಸಂಬಂಧಿಸಿದಂತೆ ಕೇಂದ್ರಿಯ ಮಟ್ಟದಲ್ಲಿ ಸಮಗ್ರ ಕಾನೂನು ಜಾರಿಗೆ ತರಬೇಕು ಹಾಗೂ ದೇಶದಾದ್ಯಂತ ಗೋಹತ್ಯೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಗೋ ಹತ್ಯೆಯಲ್ಲಿ ತೊಡಗಿದವರಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಗೋ ಸಾಗಾಣೆಯಲ್ಲಿ ತೊಡಗುವ ವಾಹನಗಳನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕಬೇಕು. ಪ್ಲಾಸ್ಟಿಕ್ ಕವರ್‌ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧ ಹೇರಬೇಕು. ಪ್ರಾಣಿಗಳ ಜಾತ್ರೆಯ ಹೆಸರಲ್ಲಿ ನಡೆಯುವ ಅಕ್ರಮ ಗೋ ಸಾಗಾಣೆ ನಿಯಂತ್ರಿಸಲು ಕೇಂದ್ರದಿಂದ ಕಾನೂನು ರೂಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದಕ್ಕೂ ಮೊದಲು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಗೋ ಹತ್ಯೆ ನಿಷೇಧಕ್ಕೆ ಆಗ್ರಹಿಸಿ ಸಹಿ ಸಂಗ್ರಹ ಮಾಡಲಾಯಿತು.
ಸಮಿತಿಯ ಗೌರವಾಧ್ಯಕ್ಷ ಕೆ.ಪ್ರಭಾಕರ್ ರಾಯ್ಕರ್, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಗೌಡ ಜೇಡಗೇರಿ,ಉಪಾಧ್ಯಕ್ಷ ಶರತ್ ಸ್ವಾಮಿ, ಬಸವರಾಜಪ್ಪ, ರಾಜಣ್ಣ ನಡಹಳ್ಳಿ, ಶಿವನಗೌಡ, ಸುಧೀರ್ ಭಟ್, ಹಾಲಪ್ಪ ಗೌಡ, ಮಂಜುನಾಥ ಆರೇಕೊಪ್ಪ, ಸತೀಶ್, ಸೈಯದ್ ಶಫೀವುಲ್ಲಾ, ಸುರೇಶ್ ನಡಹಳ್ಳಿ, ಚಂದ್ರು ಪಾಟೀಲ್ ಸೇರಿದಂತೆ ಇತರರಿದ್ದರು
Nalanda Chess Academy ನಳಂದಾಚೆಸ್ ಅಕಾಡೆಮಿಯಿಂದ ಚೆಸ್ ಬೇಸಿಕ್ ಸಮ್ಮರ್ ಕ್ಯಾಂಪ್
Nalanda Chess Academy ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿರುವ ನಳಂದಾ ಚೆಸ್ ಅಕಾಡೆಮಿಯಿಂದ ಮೇ. 01 ರಿಂದ 10 ರವರೆಗೆ ಬೇಸಿಕ್ ಸಮ್ಮರ್ ಚೆಸ್ ಕ್ಯಾಂಪ್‌ನ್ನು (ಆರಂಭಕ್ಕೆ ಚೆಸ್ ಕಲಿಯಲು ಬಯಸುವವರಿಗೆ) ಪ್ರತಿದಿನ ಬೆಳಿಗ್ಗೆ 9:30ರಿಂದ 11 ಹಾಗೂ ಸಂಜೆ 5:15ರಿಂದ 6;15 ರವರೆಗೆ ಉನ್ನತ ಚೆಸ್ ತರಬೇತಿ ಶಿಬಿರ ನಡೆಯಲಿದೆ.
ಮೇ 02 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 01 ರವರೆಗೆ ಸಂಜೆ 3;30 ರಿಂದ 5ಗಂಟೆವರೆಗೆ ಆರ್ಟ್ ಕ್ರಾಫ್ಟ್, ನೃತ್ಯ, ಗುಂಪು ಹಾಡು, ಸಂಸ್ಕೃತ ಚಟುವಟಿಕೆಗಳು ಅಂದು ಬೆಳಿಗ್ಗೆ 11ರಿಂದ 12;.30 ಹಾಗೂ 01 ರವರೆಗೆ ನಡೆಯಲಿವೆ. ಮಾಹಿತಿಗೆ ಹಾಗೂ ಹೆಸರು ನೊಂದಾಯಿಸಲು ಮೊ. 9844436276, 9945809662, 9916910411ರಲ್ಲಿ ಸಂಪರ್ಕಿಸಿ.
ಎನ್.ಸಿ.ವಿ.ಟಿ. ಯೋಜನೆಯಡಿ ಐಟಿಐ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
ಶಿವಮೊಗ್ಗ ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಭದ್ರಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿನ ವಿವಿಧ ವೃತ್ತಿಗಳಿಗೆ 2026-27ನೇ ಸಾಲಿನ ಎನ್.ಸಿ.ವಿ.ಟಿ. ಯೋಜನೆಯಡಿ ಐಟಿಐ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಎಸ್.ಎಸ್.ಎಲ್.ಸಿ. ಪಾಸ್/ಫೇಲ್ ಆದ ವಿದ್ಯಾರ್ಥಿಗಳು ವೆಬ್‌ಸೈಟ್ www.cite.karnataka.gov.in ಮೂಲಕ ಮೇ 09 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08282-200080/ 9980129595/ 9880085914 ಗಳನ್ನು ಸಂಪರ್ಕಿಸುವುದು
ಶಿವಮೊಗ್ಗದ ಪಿಯು ಪರೀಕ್ಷೆ ಟಾಪರ್ಸ್ ಗೆ ಸದ್ಭಾವನಾ ಟ್ರಸ್ಟಿನಿಂದ ಅಭಿನಂದನೆ ಕಾರ್ಯಕ್ರಮ
ಛಲವಿದ್ದರೆ ಜೀವನದಲ್ಲಿ ಸಾಧನೆ ಸಾಧ್ಯ. ಸಾಧನೆಗೆ ಏನೇನು ಬೇಕೋ ಅದೆಲ್ಲವೂ ನಮ್ಮೊಳಗೇ ಇದೆ. ನಾವು ಪ್ರಯತ್ನ ಪಡಬೇಕು ಎಂದು ಸದ್ಭಾವನ ಟ್ರಸ್ಟ್‌ನ ಅಧ್ಯಕ್ಷರು, ಕಾಂಗ್ರೆಸ್‌ನ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್ ಹೇಳಿದರು.
ಅವರು ಇಂದು ಬೆಳಗ್ಗೆ ಸದ್ಭಾವನ ಟ್ರಸ್ಟ್‌ನಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಬೃಂದಾ 590(98.33) , ರಂಜಿತಾ ಜಿ. 596(99.33), ವಶಿಷ್ಟ ಎನ್.ಎಸ್. 595 (99.17), ಮಹಿನ್ ಖಾನಂ ಆಫ್ರಿದಿ 596 (99.33) ಹಾಗೂ ಸೋನಿಯಾ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಿ ಮಾತನಾಡಿದರು.
ಸಾಧನೆ ಮಾಡಿದವರನ್ನು ಗುರುತಿಸಿ ಶುಭಹಾರೈಸುವುದರ ಜೊತೆಗೆ ಸನ್ಮಾನಿಸಿ ಪ್ರೇರಣೆ ನೀಡಿದರೆ ಅವರು ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಉತ್ತಮವಾಗಿ ಅಧ್ಯಯನ ಮಾಡಿ ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಯಮುನಾ ರಂಗೇಗೌಡ, ಶಿವಮೊಗ್ಗ ಯುವ ಕಾಂಗ್ರೆಸ್ ಮುಖಂಡ ವಿನಯ್ ತಾಂದ್ಲೆ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯ ಬಸವರಾಜ ಹಾಗೂ ಮಂಜುನಾಥ್ ನವುಲೆ, ಜಿಲ್ಲಾ ಅಲೆಮಾರಿ ನಿಗಮದ ಅನುಷ್ಠಾನ ಸಮಿತಿಯ ಸದಸ್ಯ ಸಂದೀಪ್, ಶಿವಕುಮಾರ್, ಅನಿಲ್ ಆಚಾರ್, ಭರತ್, ಅವಿನಾಶ್, ಕುರುವಳ್ಳಿ ನಾಗರಾಜ್ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
Kuvempu University ಗ್ರಾಮೀಣ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಬೆಳೆಸುತ್ತವೆ: ಮಾಧುರಾವ್
Kuvempu University ಗ್ರಾಮೀಣ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ಸೇವಾ ಮನೋಭಾವವನ್ನು ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ ಎಂದು ಕೋಮಾರನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಮಾಧುರಾವ್ ಹೇಳಿದರು.
ಅವರು ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವತಿಯಿಂದ ಮಂಗಳವಾರ ಕೋಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರ ಕಾಚಗೊಂಡನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾದ “ಸಮಾಜಕಾರ್ಯ ಗ್ರಾಮೀಣ ಶಿಬಿರ- 2026 ”ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೈಗೊಂಡ ಸ್ವಚ್ಛತಾ ಕಾರ್ಯ, ಆರೋಗ್ಯ ಶಿಬಿರ ಹಾಗೂ ಜನಜಾಗೃತಿ ಕಾರ್ಯಕ್ರಮಗಳು ಗ್ರಾಮಾಭಿವೃದ್ಧಿಗೆ ಸಹಕಾರಿ ಆಗಿದ್ದು, ಇಂತಹ ಶಿಬಿರಗಳು ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು ವಿದ್ಯಾರ್ಥಿಗಳು ನಡೆಸಿದ ಸೇವಾ ಕಾರ್ಯಗಳನ್ನು ಪ್ರಶಂಸಿಸಿದರು. ಶಿಬಿರದ ಅವಧಿಯಲ್ಲಿ ಕೈಗೊಂಡ ಸ್ವಚ್ಛತಾ ಅಭಿಯಾನ, ಆರೋಗ್ಯ ಶಿಬಿರ, ಜನಜಾಗೃತಿ ಕಾರ್ಯಕ್ರಮಗಳು ಹಾಗೂ ಗ್ರಾಮಾಭಿವೃದ್ಧಿ ಚಟುವಟಿಕೆಗಳನ್ನು ಮೆಚ್ಚಿ, ಪ್ರಶಿಕ್ಷಣಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸಿದರು.
Kuvempu University ಮುಖ್ಯ ಅತಿಥಿಗಳಾಗಿ ಗ್ರಾಮದ ಮುಖಂಡರಾದ ಮಂಜುನಾಥ್, ಸವಿತಾ, ರವಿಕುಮಾರ್, ಸಾಕಮ್ಮ ಹಾಗೂ ಆನಂದರಾವ್ ಉಪಸ್ಥಿತರಿದ್ದು, ಶಿಬಿರದ ಯಶಸ್ಸಿಗೆ ವಿದ್ಯಾರ್ಥಿಗಳ ಪರಿಶ್ರಮವನ್ನು ಶ್ಲಾಘಿಸಿದರು.
ಸಂದರ್ಭದಲ್ಲಿ ಕೋಮಾರನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸಿಬ್ಬಂದಿ ವರ್ಗದವರು, ರಂಗಸ್ವಾಮಿ, ಸಮಾಜಕಾರ್ಯ ವಿಭಾಗದ ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
Government Industrial Training Institute ತೀರ್ಥಹಳ್ಳಿ ಐಟಿಐ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
Government Industrial Training Institute ತೀರ್ಥಹಳ್ಳಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು 2026ನೇ ಶೈಕ್ಷಣಿಕ ಸಾಲಿನ ಐಟಿಐ ತರಬೇತಿಗಾಗಿ ಆಸಕ್ತ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ ಮೆಕಾನಿಕ್, ಐಸಿಟಿಎಸ್‌ಎಮ್, ಡ್ರೇಸ್ ಮೇಕಿಂಗ್, ಮೆಕಾನಿಕ್ ಎಲೆಕ್ಟ್ರಿಕ್ ವೆಹಿಕಲ್, ಅಡ್ವಾನ್ಸ್ ಸಿಎನ್‌ಸಿ ಟೆಕ್ನಿಷಿಯನ್, ಮ್ಯಾನುಫಾಕ್ಚರಿಂಗ್ ಫ್ರೋಸಸ್ ಕಂಟ್ರೋಲ್ & ಆಟೋಮೆಸಿನ್, ಇಂಡಸ್ಟ್ರೀಯಲ್ ರೋಬೋಟಿಕ್ಸ್ ಅಂಡ್ ಡಿಜಿಟಲ್ ಮ್ಯಾನುಫಾಕ್ಚರಿಂಗ್, ಬೇಸಿಕ್ ಡಿಸೈನ್ ಅಂಡ್ ವರ್ಚ್ಯುವಲ್ ವೆರಿಫೈಯರ್, ಆರ್ಟೀಸಾನ್ ಯೂಸಿಂಗ್ ಅಡ್ವಾನ್ಸ್ ಟೂಲ್ಸ್ ಮತ್ತು ಅಲ್ಪಾವಧಿ ತರಬೇತಿಗಳಾದ ಎಲೆಕ್ಟ್ರಿಕ್ ಬ್ಯಾಟರಿ ವೆಹಿಕಲ್, ಅಡ್ವಾನ್ಸ್ ಪೈಂಟಿಂಗ್ ಟೆಕ್ನಾಲಜಿ, ಅಡ್ವಾನ್ಸ್ ಪ್ಲಂಬಿಂಗ್ ಟೆಕ್ನೀಷಿಯನ್‌ಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳು www.cite.karnataka.gov.in ಆನ್‌ಲೈನ್‌ನಲ್ಲಿ ಮೇ 08 ರೊಳಗಾಗಿ ಅರ್ಜಿ ಸಲ್ಲಿಸಬಹುದೆಂದು ತೀರ್ಥಹಳ್ಳಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 9880005425/ 9890350198/ 9945823291/ 9980626062/ 8310069017/8277494105 ಗಳನ್ನು ಸಂಪರ್ಕಿಸುವುದು.
Madhu Bangarappa ಹುಲಿಕಲ್ ಘಾಟ್ ಕುಸಿತ ಪ್ರಕರಣ: ಸಮಗ್ರ ವಿವರ ಪಡೆದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ- ಮಧು ಬಂಗಾರಪ್ಪ
Madhu Bangarappa ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಹೊಸನಗರ ತಾಲೂಕಿನ ವ್ಯಾಪ್ತಿಯ ಹುಲಿಕಲ್ ಘಾಟ್ ರಸ್ತೆ ಕಾಮಗಾರಿ ವೇಳೆ ಸಂಭವಿಸಿದ ಮಣ್ಣು ಕುಸಿತ ಅವಘಡದ ಕುರಿತು ಸಮಗ್ರ ವಿವರ ಪಡೆದು, ತಪ್ಪಿತಸ್ಥರ ವಿರುದ್ದ ಕಾನೂನಾತ್ಮಕ ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ತಿಳಿಸಿದರು.
ಅವರು ಹೊಸನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಹುಲಿಕಲ್ ಘಾಟ್ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ, ಕಾಮಗಾರಿ ಮತ್ತು ಮಣ್ಣು ಕುಸಿತದ ಪ್ರದೇಶವನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ಹುಲಿಕಲ್ ರಸ್ತೆ ತಡೆಗೋಡೆ ನಿರ್ಮಾಣ ವೇಳೆ ಮಣ್ಣು ಕುಸಿತ ಅವಘಡ ಸಂಭವಿಸಿ ಮೂರು ಕಾರ್ಮಿಕರು ಮೃತಪಟ್ಟಿದ್ದು, ಸೂಕ್ತ ರೀತಿಯ ಮುನ್ನೆಚ್ಚರಿಕೆ ವಹಿಸದೆ ಕಾಮಗಾರಿ ನಡೆಸಿದ ತಪ್ಪಿತಸ್ಥ ಅಧಿಕಾರಿ, ಗುತ್ತಿಗೆದಾರರ ವಿರುದ್ದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನ್ಯಾಯ ಒದಗಿಸಲಾಗುವುದು ಎಂದು ತಿಳಿಸಿದರು.
ಹಾಗೂ ಲೋಕೋಪಯೋಗಿ ಸಚಿವರೊಂದಿಗೆ , ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತುರ್ತಾಗಿ ವ್ಯವಸ್ಥಿತ ರೀತಿಯ ಕಾಮಗಾರಿ ನಡೆಸಲು ಕ್ರಮ ವಹಿಸಲಾಗುವುದು ಎಂದ ಅವರು ಈ ಭಾಗದ ಜನಸಾಮಾನ್ಯರ ಅಹವಾಲುಗಳಿಗೆ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದ್ದು, ಮುಂದೆಯೂ ಮಾಡುತ್ತೇನೆಂದು ಭರವಸೆ ನೀಡಿದರು.
ಕಾಮಗಾರಿ ವಿವರ :ಮಳೆಯಿಂದ ಭೂಕುಸಿತ ಉಂಟಾಗಿದ್ದ ಹುಲಿಕಲ್ ಘಾಟ್ ಸ್ಥಳದಲ್ಲಿ ಶಾಶ್ವತ ಪರಿಹಾರಕ್ಕಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಮೊದಲ ಹಂತದಲ್ಲಿ ರೂ.435 ಲಕ್ಷಗಳ ಅನುದಾನದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
Madhu Bangarappa ಸುಮಾರು 80 ಮೀಟರ್ ಉದ್ದದ ಆರ್.ಸಿ.ಸಿ. ತಡೆಗೋಡೆಯನ್ನು ಇಲಾಖೆಯ ತಾಂತ್ರಿಕ ವಿನ್ಯಾಸದಂತೆ ನಿರ್ಮಿಸಲಾಗುತ್ತಿದೆ.
ಡಿಸೆಂಬರ್ ಮಾಹೆಯಲ್ಲಿ ಕಾಮಗಾರಿ ಆರಂಭವಾಗಿದ್ದು, ಈಗಾಗಲೇ 60 ಮೀಟರ್ ಉದ್ದದ ಭಾಗದಲ್ಲಿ ಹಳೆಯ ಮಣ್ಣನ್ನು ತೆರವುಗೊಳಿಸಿ, ಅಡಿಪಾಯದೊಂದಿಗೆ ಸುಮಾರು 6 ಮೀಟರ್ ಎತ್ತರದವರೆಗೆ ಗೋಡೆ ನಿರ್ಮಿಸಲಾಗಿದೆ.
ಹೊಸನಗರ ತಾಲೂಕಿನ ತೀರ್ಥಹಳ್ಳಿ – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 52ರ ಸರಪಳಿ 38.00 ಕಿ.ಮೀ ನಿಂದ 43.58 ಕಿ.ಮೀ ವರೆಗಿನ ಸುಮಾರು 5.58 ಕಿ.ಮೀ ಉದ್ದದ ರಸ್ತೆ ಹುಲಿಕಲ್ ಘಾಟ್ ವ್ಯಾಪ್ತಿಯಲ್ಲಿ ಬರಲಿದ್ದು, ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.
ಹೇರ್ ಪಿನ್ ತಿರುವುಗಳ ಸುಧಾರಣೆ: ರಸ್ತೆಯ ಸರಪಳಿ 42.05 ಕಿ.ಮೀ ನಿಂದ 42.25 ಕಿ.ಮೀ ವರೆಗಿನ ಭಾಗವು ಪ್ರಸ್ತುತ ಅತ್ಯಂತ ಕಿರಿದಾದ ಹೇರ್ ಪಿನ್ ತಿರುವುಗಳಿಂದ ಕೂಡಿದ್ದು, ಈ ಭಾಗದ ಸುಧಾರಣೆಗೂ ಆದ್ಯತೆ ನೀಡಲಾಗಿದೆ ಎಂದರು.
ಇದೇ ವೇಳೆ ಸಾರ್ವಜನಿಕರು ಮಾತನಾಡಿ, ಹುಲಿಕಲ್ ಘಾಟ್ ರಸ್ತೆ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥಿತ ಯೋಜನೆ ರೂಪಿಸಿ, ಅನುದಾನ ನಿಗದಿಗೊಳಿಸಿ ಶಾಶ್ವತ ಪರಿಹಾರ ಒದಗಿಸುವಂತೆ ಮನವಿ ಮಾಡಿದರು.
ಈ ವೇಳೆ ಎಂಎಡಿಬಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ, ಪಿಡಬ್ಲ್ಯುಡಿ ಅಧೀಕ್ಷಕ ಅಭಿಯಂತರರಾದ ಗಣೇಶ್ , ಇತರೆ ಅಧಿಕಾರಿಗಳು , ಸ್ಥಳೀಯರು ಹಾಜರಿದ್ದರು.
ಹಳೆಯ ನೆನಪು ನೋಡಿದರೆ ವಿದ್ಯಾರ್ಥಿಜೀವನ ಬಂಗಾರದ ಜೀವನ ಎಂಬುದು ಅರ್ಥವಾಗುತ್ತದೆ- ಪ್ರಾಂಶುಪಾಲ ವಿಜಯ ಕುಮಾರ್
ಸ್ನೇಹ ಮಿಲನದಂತಹ ಕಾರ್ಯಕ್ರಮಗಳು ಮನುಷ್ಯರ ಭಾವನೆಗಳನ್ನು ಬಾಂಧವ್ಯಗಳನ್ನು ಜೀವಂತವಾಗಿಟ್ಟುಕೊಳ್ಳುವಲ್ಲಿ ಸಹಾಯಕವಾಗುತ್ತದೆ ಎಂದು ಪ್ರಾಂಶುಪಾಲ ವಿಜಯ್‌ಕುಮಾರ್ ಹೇಳಿದರು.
ಅವರು ಕಂಟ್ರಿಕ್ಲಬ್‌ನಲ್ಲಿ ಆಯೋಜಿಸಿದ್ದ 2009 ಮತ್ತು 2010 ನೇ ಸಾಲಿನ ಬಿ.ಎಡ್ ವಿದ್ಯಾರ್ಥಿಗಳ ಗುರುವಂದನಾ ಮತ್ತು ಸ್ನೇಹಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ನೇಹಮಿಲನ ಕಾರ್ಯಕ್ರಮಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದು ಸ್ವಾಗತಾರ್ಹಕೂಡ. ಯಾವುದೋ ತರಗತಿಗಳಲ್ಲಿ ನಾವೆಲ್ಲ ಒಟ್ಟಾಗಿ ಓದಿರುತ್ತೇವೆ. ಕಲಿತು ನಕ್ಕು, ನಲಿದಿರುತ್ತೇವೆ. ನಂತರ ನಮ್ಮ ನಮ್ಮ ಜೀವನದ ದಾರಿಗಳನ್ನು ನಾವು ಹುಡುಕಿಕೊಳ್ಳುತ್ತೇವೆ. ಆದರೆ ನಮ್ಮ ಹಳೇಯ ನೆನಪುಗಳನ್ನು ನೋಡುತ್ತಾ ಹೋದರೆ ವಿದ್ಯಾರ್ಥಿ ಜೀವನ ಬಂಗಾರದ ಜೀವನ ಎಂಬುದು ನಮಗೆ ಅರ್ಥವಾಗುತ್ತದೆ. ಈಗಾಗಲೇ ಬದುಕಿನ ಬಹುಭಾಗವನ್ನು ಕಳೆದಿರುವ ನಮಗೆ ನಮ್ಮ ಬಾಲ್ಯದ ನೆನಪುಗಳು ಮರಳಿ ಬಂದು ನಮ್ಮ ವಯಸ್ಸು ಚಿಕ್ಕದಾಗುತ್ತದೆ. ಇದೊಂದು ಸುಂದರ ಕಾರ್ಯಕ್ರಮ. ಆದರೆ ಜೊತೆಗೆ ಓದಿದ ಸಹಪಾಠಿಗಳನ್ನು ಸೇರಿಸುವುದೇ ಒಂದು ಬಹುದೊಡ್ಡ ಕೆಲಸ ಎಂದರು.
ರುದ್ರಮ್ಮ ಮಾತನಾಡಿ, ಹಳೇಯ ನೆನಪುಗಳು ಹೊಸ ನೆನಪುಗಳನ್ನು ನೀಡಿ ಮನಸ್ಸನ್ನು ಮುದಗೊಳಿಸುತ್ತದೆ. ವಯಸ್ಸು ಜಾಸ್ತಿ ಆಯಿತು, ಮಕ್ಕಳಾದವು, ಕೂದಲು ಬೆಳ್ಳಗಾಯಿತು, ಜವಾಬ್ದಾರಿ ಜಾಸ್ತಿಯಾಯಿತು ಎಂದುಕೊಳ್ಳುತ್ತಿರುವಾಗಲೇ ಕಾಲೇಜಿನಲ್ಲಿ ಹಾಜರಿ ಹಾಕಿದಾಗ ಬಂದಿದ್ದೇನೆ ಗುರುಗಳೇ ಎನ್ನುವ ಸಂಭ್ರಮ ನೆನಪಾಗಿ ಈ ಸ್ನೇಹದ ಹೂ ಎಂದೂ ಬಾಡಲ್ಲ ಎನಿಸುತ್ತದೆ ಎಂದರು.
ನಾವೆಲ್ಲಾ 2009-2010ರ ಬಿ.ಎಡ್.ನಲ್ಲಿ ಓದುತ್ತಿರುವ ಹಳೇಯ ವಿದ್ಯಾರ್ಥಿಗಳು ಆಗ ಮೊಗ್ಗಾಗಿ ಶಾಲೆಗೆ ಬಂದಿದ್ದೆವು ಈಗ ಹೂವಾಗಿ ಅರಳಿದ್ದೇವೆ. ಮತ್ತೆ ಒಂದೆಡೆ ಸೇರಿ ಕಂಪು ಸೂಸಿಸುತ್ತಿದ್ದೇವೆ. ಯಾರೋ ಟೀಚರ್ ಆಗಿದ್ದಾರೆ, ಮತ್ಯಾರೋ ರೈತರಾಗಿದ್ದಾರೆ, ರಾಜಕಾರಣಿಗಳಾಗಿದ್ದಾರೆ, ಅಫೀಸಿನಲ್ಲಿ ಕೆಲಸ ಮಾಡುತ್ತಿದ್ದಾರೆ, ಬದುಕು ನಮ್ಮನ್ನು ಎಲ್ಲೋ ಎಳೆದುಕೊಂಡು ಹೋಗಿದೆ. ಈಗ ನಾವೆಲ್ಲಾ ಒಟ್ಟಾಗಿದ್ದೇವೆ. ಈ ಸೊಗಸೇ ಚೆಂದ ಎಂದರು.
ಕಾರ್ಯಕ್ರಮದಲ್ಲಿ ಅಂದಿನ ಪ್ರಾಧ್ಯಾಪಕರುಗಳಾದ ನಂಜಾನಾಯ್ಕ್, ನಾಗರಾಜ್, ಪ್ರಶಾಂತ್, ಮೋಹನ್ ಸೇರಿದಂತೆ ಹಲವರಿದ್ದರು. ಕಾರ್ಯಕ್ರಮವನ್ನು ಆಗಿನ ವಿದ್ಯಾರ್ಥಿ ನಾಯಕರಾಗಿದ್ದ ಶೇಖರ್ ನಾಯ್ಕ (ಲಂಬು), ನಾಗೇಶ್, ಮಣಿಕಂಠ ಮುಂತಾದವರು ಭಾಗವಹಿಸಿದ್ದರು. ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿ ನಲಿದರು. 16 ವರ್ಷದ ವಿದ್ಯಾರ್ಥಿ ಜೀವನ ನಂತರ ತಮ್ಮ ಬದುಕಿನ ಬದಲಾವಣೆಗಳ ಕುರಿತು ಪರಸ್ಪರ ಹಂಚಿಕೊಂಡರು. ಇದರ ಜೊತೆಗೆ ಅವರ ಕುಟುಂಬ ವರ್ಗದವರೂ ಸೇರಿ ಮತ್ತಷ್ಟು ಖುಷಿಗೊಂಡಿತು. ಇದೊಂದು ಜೀವಕೋಶದ ಅನುಭವವನ್ನು ಪಡೆಯಿತು.
ಪಿಯು ವಾರ್ಷಿಕ ಪರೀಕ್ಷೆ- 2 ( ಪೂರಕ ಪರೀಕ್ಷೆ) ಏಪ್ರಿಲ್ 30 ರಿಂದ ಮೇ 13 ವರೆಗೆ ನಡೆಯಲಿದೆ : ಎನ್.ಹೇಮಂತ್
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ವತಿಯಿಂದ 2026 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 (ಪೂರಕ ಪರೀಕ್ಷೆ) ಏಪ್ರಿಲ್ 30 ರಿಂದ ಮೇ 13 ರವರೆಗೆ ನಡೆಯಲಿದ್ದು, ಜಿಲ್ಲಾಡಳಿತವು ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅಗತ್ಯ ಸಿದ್ದತೆ ನಡೆಸಿದೆ ಎಂದು ಜಿಲ್ಲಾಧಿಕಾರಿಗಳಾದ(ಪ್ರ) ಹೇಮಂತ್ ಎನ್ ತಿಳಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪಿಯುಸಿ ವಾರ್ಷಿಕ ಪರೀಕ್ಷೆ 2 ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಏಪ್ರಿಲ್ 30 ರಿಂದ ಮೇ 13 ರವರೆಗೆ ಜಿಲ್ಲೆಯ 08 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ. (ಮೇ 13 ರಂದು ಮಾತ್ರ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ಮತ್ತು ಮಧ್ಯಾಹ್ನ 2:00 ರಿಂದ ಸಂಜೆ 4:15 ರವರೆಗೆ ಪರೀಕ್ಷೆ ನಡೆಯಲಿದೆ) ಪರೀಕ್ಷೆಗಳು ನಡೆಯಲಿವೆ.
ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಸೂಕ್ತ ಆಸನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶವಿರುವುದಿಲ್ಲ.
ಪರೀಕ್ಷಾ ಅವಧಿಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಮೆಸ್ಕಾಂ ಇಲಾಖೆಗೆ ಸೂಚಿಸಿದರು.
ಪರೀಕ್ಷೆಗಳು ಪಾರದರ್ಶಕವಾಗಿ ನಡೆಯಲು ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀ.ಫಾಸಲೆಯವರೆಗೆ ಪರೀಕ್ಷಾ ದಿನಗಳಂದು ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಲಾಗಿದೆ ಎಂದರು.
ಮಂಡಳಿಯ ಮಾರ್ಗಸೂಚಿಯಂತೆ ಎಲ್ಲಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ ಅವರು, ಶಾಂತಿಯುತವಾಗಿ ಪರೀಕ್ಷೆಗಳನ್ನು ನಡೆಸುವ ಮೂಲಕ ಯಶಸ್ವಿಗೊಳಿಸಬೇಕೆಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಅಧಿಕಾರಿಗಳು ಹಾಜರಿದ್ದರು.
