Sunday, November 29, 2026
Sunday, November 29, 2026

ಕನ್ನಡ ಭಾಷಾಭಿಮಾನ ನಮ್ಮ ನಡೆ ನುಡಿ, ಆಚರಣೆಗಳಲ್ಲಿ ಪ್ರತಿಫಲಿಸಬೇಕು- ಎಸ್.ಎಮ್.ರಾಮಪ್ರಸಾದ್

Date:

ರಾಜ್ಯೋತ್ಸವ ಕಾರ್ಯಕ್ರಮಗಳು ಕೇವಲ ಆಚರಣೆ ಮತ್ತು ಮನರಂಜನಾ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಅವು ನಮ್ಮ ಭಾಷೆ, ನೆಲ, ಸಂಸ್ಕೃತಿ, ಪರಂಪರೆ ಹಾಗೂ ಆತ್ಮಗೌರವವನ್ನು ಹೆಚ್ಚಿಸುವ ಮಹತ್ವದ ಸಂದರ್ಭಗಳಾಗಬೇಕು. ಎಲ್ಲ ಕ್ಷೇತ್ರಗಳಲ್ಲಿಯೂ ಕನ್ನಡದ ಬಳಕೆ ಹೆಚ್ಚಾಗಬೇಕು. ಭಾಷಾಭಿಮಾನ ನಮ್ಮ ನಡೆ-ನುಡಿ ಮತ್ತು ಆಚರಣೆಗಳಲ್ಲಿ ಪ್ರತಿಫಲಿಸಬೇಕು. ಕನ್ನಡದ ಜೊತೆಗೆ ಇತರ ಭಾಷೆಗಳನ್ನೂ ಗೌರವಿಸುವ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ರಾಜ್ಯ ಲೆಕ್ಕಪತ್ರ ಇಲಾಖೆಯ ಪ್ರಧಾನ ನಿರ್ದೇಶಕ ಎಸ್.ಎಂ.ರಾಮಪ್ರಸಾದ್ ಹೇಳಿದರು.

ಅವರು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿ ಹಾಗೂ ನೌಕರರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗದ ಸರ್ಕಾರಿ ನೌಕರರ ಸೇವಾ ವಿಕಾಸ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ನುಡಿಹಬ್ಬ ಹಾಗೂ ಕ್ರೀಡೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ನಾಡಿನ ಅನೇಕ ಹಿರಿಯ ಕವಿ, ಸಾಹಿತಿ ಹಾಗೂ ಕಲಾವಿದರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಾಧನೆಗಳು ಇಂದಿನ ಪೀಳಿಗೆಗೆ ಸ್ಫೂರ್ತಿಯ ಸೆಲೆಯಾಗಿವೆ. ಪ್ರತಿಯೊಬ್ಬರೂ ಕನ್ನಡ ಪತ್ರಿಕೆಗಳು ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪರಭಾಷಿಕರಿಗೆ ಕನ್ನಡ ಕಲಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಕೈಜೋಡಿಸಬೇಕು. ಕನ್ನಡ ಭಾಷೆಯ ಉಳಿವು, ಬೆಳವಣಿಗೆ ಮತ್ತು ವಿಕಾಸದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ಭಾಷೆ ಮತ್ತು ಸಂಸ್ಕೃತಿಯನ್ನು ಕೇವಲ ಆಚರಣೆಗಳಿಗೆ ಸೀಮಿತಗೊಳಿಸದೆ ಕಚೇರಿಯ ದೈನಂದಿನ ಕಾರ್ಯಚಟುವಟಿಕೆಗಳಲ್ಲಿಯೂ ಎತ್ತಿಹಿಡಿಯಬೇಕು. ಇಲಾಖೆಯ ಜವಾಬ್ದಾರಿಗಳನ್ನು ದಕ್ಷತೆ, ಪ್ರಾಮಾಣಿಕತೆ ಹಾಗೂ ವೃತ್ತಿಪರತೆಯಿಂದ ನಿರ್ವಹಿಸಬೇಕು. ಇಲಾಖೆಯಿಂದ ಹೊರಬರುವ ವರದಿಗಳ ಗುಣಮಟ್ಟವನ್ನು ಹೆಚ್ಚಿಸಲು ಅಧಿಕಾರಿಗಳು ಮತ್ತು ನೌಕರರು ವಿಶೇಷ ಗಮನಹರಿಸಬೇಕು ಎಂದು ತಿಳಿಸಿದರು.

ಸರ್ಕಾರ ಮತ್ತು ಸಾರ್ವಜನಿಕರ ಹಣದ ಸಮರ್ಪಕ ಬಳಕೆ ಹಾಗೂ ಅದರ ಹೊಣೆಗಾರಿಕೆಯನ್ನು ಖಚಿತಪಡಿಸುವಲ್ಲಿ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಕಾವಲುಗಾರರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಇಲಾಖೆ ಆಧುನಿಕ ತಂತ್ರಜ್ಞಾನ ಮತ್ತು ವ್ಯವಸ್ಥೆಗಳಿಗೆ ತೆರೆದುಕೊಳ್ಳುವುದು ಅನಿವಾರ್ಯವಾಗಿದೆ. ಅಧಿಕಾರಿಗಳು ನಿಗದಿತ ಕಾಲಮಿತಿಯೊಳಗೆ ವಹಿಸಲಾದ ಕಾರ್ಯಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಆಸಕ್ತಿ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಅದರಲ್ಲೂ ಶುಲ್ಕ ವಸೂಲಾತಿ ಹಾಗೂ ಬಾಕಿ ಉಳಿದಿರುವ ಆಕ್ಷೇಪಣೆಗಳ ಇತ್ಯರ್ಥಕ್ಕೆ ವಿಶೇಷ ಗಮನಹರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ರಾಜ್ಯ ಲೆಕ್ಕಪತ್ರಗಳ ಇಲಾಖೆ ಸರ್ಕಾರಕ್ಕೆ ಗೌರವ ಮತ್ತು ಮನ್ನಣೆ ತಂದುಕೊಡುವ ಪ್ರಮುಖ ಇಲಾಖೆಯಾಗಿದೆ. ರಾಜ್ಯ ಲೆಕ್ಕಪತ್ರಗಳ ಇಲಾಖೆಯು ಆರ್ಥಿಕ ಶಿಸ್ತು, ಪಾರದರ್ಶಕತೆ, ಫಲಿತಾಂಶಾಧಾರಿತ ಕಾರ್ಯನಿರ್ವಹಣೆ ಹಾಗೂ ಸಮರ್ಪಕ ಲೆಕ್ಕಪತ್ರ ನಿರ್ವಹಣೆಯ ಮೂಲಕ ಜನರ ವಿಶ್ವಾಸ ಗಳಿಸಿದೆ.. ಇಲಾಖೆಯ ದಕ್ಷ ಕಾರ್ಯನಿರ್ವಹಣೆಯಿಂದ ಸರ್ಕಾರಕ್ಕೆ ಗೌರವ ಮತ್ತು ಮನ್ನಣೆ ದೊರೆಯುತ್ತಿದ್ದು, ಆಡಳಿತ ವ್ಯವಸ್ಥೆಯಲ್ಲಿ ಈ ಇಲಾಖೆ ಮುಂಚೂಣಿಯಲ್ಲಿದೆ ಎಂದರು.

ಹಿರಿಯ ಅಧಿಕಾರಿಗಳು ಮತ್ತು ನೌಕರರ ಅವಿರತ ಪರಿಶ್ರಮ, ಬದ್ಧತೆ ಹಾಗೂ ಸಂಘಟಿತ ಪ್ರಯತ್ನಗಳ ಫಲವಾಗಿ ನೌಕರರ ಸಂಘಟನೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಸಂಘಟನೆಯ ಮೂಲಕ ನೌಕರರ ಹಲವು ಗಂಭೀರ ಸ್ವರೂಪದ ಹಾಗೂ ದೀರ್ಘಕಾಲೀನ ಸಮಸ್ಯೆಗಳಿಗೆ ಸರ್ಕಾರದ ಆದೇಶಗಳ ಮೂಲಕ ಶಾಶ್ವತ ಪರಿಹಾರ ದೊರಕಿರುವುದು ಸಂತಸದ ಸಂಗತಿಯಾಗಿದೆ ಎಂದರು.

ನೌಕರರು ದಿನನಿತ್ಯದ ಬಿಡುವಿಲ್ಲದ ಕೆಲಸ-ಕಾರ್ಯಗಳು ಹಾಗೂ ಒತ್ತಡದ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಕನ್ನಡ ನುಡಿಹಬ್ಬ, ಕ್ರೀಡಾಕೂಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ನೌಕರರು ಕೆಲಸದ ಒತ್ತಡದಿಂದ ಹೊರಬಂದು ಸಹೋದ್ಯೋಗಿಗಳು ಹಾಗೂ ಕುಟುಂಬದ ಸದಸ್ಯರೊಂದಿಗೆ ಸಂತೋಷದಿಂದ ಕಾಲ ಕಳೆಯಲು ಅವಕಾಶ ದೊರೆಯುತ್ತದೆ. ಇಂತಹ ಕಾರ್ಯಕ್ರಮಗಳು ನೌಕರರಲ್ಲಿ ಪರಸ್ಪರ ಸೌಹಾರ್ದ, ಸಹಬಾಳ್ವೆ, ಒಗ್ಗಟ್ಟು ಮತ್ತು ಸಂಘಟನಾ ಮನೋಭಾವವನ್ನು ವೃದ್ಧಿಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ನೌಕರರ ಸಂಘಟನೆಯ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲು ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಸಂಘಟನೆಯ ಕಚೇರಿ ಸ್ಥಾಪನೆಗಾಗಿ ನಿವೇಶನ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಮನವಿಯನ್ನು ಪರಿಶೀಲಿಸಿ ನಿವೇಶನ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ಹೇಳಿದರು.

ಕ್ರೀಡೆಯು ಮನಸ್ಸಿಗೆ ಉಲ್ಲಾಸ ಮತ್ತು ಚೈತನ್ಯ ನೀಡುವುದರ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕ್ರೀಡೆ ಕೇವಲ ದೈಹಿಕ ಚಟುವಟಿಕೆಯಲ್ಲ, ಅದು ಸಂಘಟನೆ, ಒಗ್ಗಟ್ಟು ಮತ್ತು ಸಹಬಾಳ್ವೆಯ ಪ್ರತೀಕವೂ ಆಗಿದೆ. ಪ್ರತಿಯೊಬ್ಬರೂ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿ ಕ್ರೀಡಾಕೂಟವನ್ನು ಸಂಭ್ರಮಿಸಬೇಕು ಎಂದು ಕರೆ ನೀಡಿದರು.

ಇಲಾಖೆಯ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆ, ದಕ್ಷತೆ ಹಾಗೂ ಬದ್ಧತೆಯಿಂದ ನಿರ್ವಹಿಸುವ ಮೂಲಕ ಇಲಾಖೆಗೆ ಮಾತ್ರವಲ್ಲದೆ ಸರ್ಕಾರಕ್ಕೂ ಉತ್ತಮ ಹೆಸರು ಮತ್ತು ಗೌರವ ತಂದುಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೆಕ್ಕಪರಿಶೋಧನಾ ಇಲಾಖಾ ನೌಕರರ ಸಂಘದ ಅಧ್ಯಕ್ಷ ಶ್ರೀಕೃಷ್ಣ ಎನ್.ಬುಗಟ್ಯಾಗೋಳ ಅವರು ಮಾತನಾಡಿದರು. ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್‌ ಅವರು ಕನ್ನಡ ನುಡಿಹಬ್ಬದ ಸಂದೇಶ ನೀಡಿದರು. ಕರ್ನಾಟಕ ರಣಜಿ ತಂಡದ ಚಾಂಪಿಯನ್ ಮಿಥುನ್‌ಬಿರಾಲ ಅವರು ಕ್ರೀಡೋತ್ಸವದ ಸಂದೇಶ ನೀಡಿದರು. ಆರ್.ಮೋಹನ್‌ಕುಮಾರ್‌, ಅವಿನಾಶ್‌, ಪ್ರದೀಪ್‌, ತನುಜಾ, ನರಸಿಂಗರಾವ್‌, ಶ್ರೀಕಾಂತ್‌ಲೋಕೇಶ್‌ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಆಯೋಜಿಸಲಾದ ಮೊದಲ ಕಾರ್ಯಕ್ರಮ ಇದಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿ ಹಾಗೂ ನೌಕರರ ಸಂಘದ ನೌಕರರು ಮತ್ತು ಅವರ ಕುಟುಂಬದ ಅವಲಂಬಿತರು ಉಪಸ್ಥಿತರಿದ್ದರು. ಇದೇ ಕಾರ್ಯಕ್ರಮದಲ್ಲಿ ನೌಕರರ ಪ್ರತಿಭಾವಂತರಾದ 22ಕ್ಕೂ ಹೆಚ್ಚಿನ ಮಕ್ಕಳನ್ನು ಗುರುತಿಸಿ, ಪ್ರಮಾಣಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sahachetana Natyaalaya ಮೊದಲ ಅಂತಾರಾಷ್ಟ್ರೀಯ ನೃತ್ಯಪ್ರದರ್ಶನ: ಕಲಾರಸಿಕರ ಮನಸೂರೆಗೈದ ಸಹಚೇತನ ನಾಟ್ಯಾಲಯ

ದುಬೈನಲ್ಲಿ ನಡೆದ ಗಲ್ಫ್ ರಾಷ್ಟ್ರಗಳ ಅತಿದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದಾದ 'ದುಬೈ...

ಆಹಾರ ತಯಾರಿಕೆ: ಸಂಸ್ಕರಣೆ ಮತ್ತು ವಿತರಣೆಯಲ್ಲಿ ಸೂಕ್ತ ಸುರಕ್ಷತಾ ಕ್ರಮ ಅಳವಡಿಕೆ ಕಡ್ಡಾಯ- ಡಾ.ಎಚ್.ಪಿ.ಎಸ್.ಮೈತ್ರಿ

Rotary Club Shivamogga ಸುರಕ್ಷಿತ ಆಹಾರ ಪ್ರತಿಯೊಬ್ಬ ಗ್ರಾಹಕನ ಹಕ್ಕಾಗಿದ್ದು, ಆಹಾರದಿಂದ...

D.K. Shivakumar ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ಶಾಲೆಗಳಲ್ಲೂ ಸಂವಿಧಾನ ಪಾಠ ಅಳವಡಿಕೆ- ಡಿ.ಕೆ.ಶಿವಕುಮಾರ್.

D.K. Shivakumar ಸಂವಿಧಾನ ಎನ್ನುವುದು ಕೇವಲ ಪುಸ್ತಕವಲ್ಲ, ಅದು ಪ್ರತಿಯೊಬ್ಬ ಭಾರತೀಯನ...