“ಕುಮಾರ ವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿವುದು! ಮೈಯಲಿ
ಮಿಂಚಿನ ಹೊಳೆ ತುಳುಕಾಡುವುದು!“
ಕುಮಾರವ್ಯಾಸನ ಕಾಲದ ಕುರಿತಾಗಿ ಹಲವಾರು ಗೊಂದಲಗಳಿವೆ ವೇದವ್ಯಾಸ ವಿರಚಿತ ಮಹಾಭಾರತವನ್ನು “ಗದುಗಿನ ಭಾರತ” ಎಂಬ ಹೆಸರಿನಿಂದ ರಚಿಸಿದ ಗದುಗಿನ ನಾರಣಪ್ಪನಿಗೆ ಕುಮಾರ ವ್ಯಾಸ ಎಂಬ ಬಿರುದು ಬಂತು. ತನ್ನ ಕಾವ್ಯದ ಪ್ರತಿ ಭಾಗದಲ್ಲಿಯೂ ಆತ್ಮ ವಿಚಾರವನ್ನೇ ಹೇಳುವ ಕುಮಾರವ್ಯಾಸ ಅತ್ಯಂತ ಶ್ರೇಷ್ಠ ಕವಿ ಎಂದರೆ ತಪ್ಪಾಗಲಾರದು. ಒಂದು ತಲೆಮಾರಿನ ಜನರ ಮನೆಯ ಮನದ, ಹರಟೆಯ, ವಿನೋದದ, ಅಥವಾ ಜಿಜ್ಞಾಸೆಯ ವಸ್ತು “ಕರ್ನಾಟ ಭಾರತ ಕಥಾಮಂಜರಿ”ಯಾಗಿದ್ದಿತು ಎಂಬುದು ನಾನು ತಿಳಿದ ಹಾಗೂ ನೋಡಿದ ಸಂಗತಿ. ಒಮ್ಮೆ ಇದೇ ಆಗಸ್ಟ್-ಸೆಪ್ಟೆಂಬರ್ ತಿಂಗಳು ಕಳೆದರೂ ಮಳೆಯ ಮುಖ ಕಂಡಿರಲಿಲ್ಲ. ನಾವು ಚಿತ್ರದುರ್ಗದ ಜನರೇ ಹಾಗೆ. ಎಲ್ಲರಿಗೂ ಮೂರು ಕಾಲಗಳಾದರೆ ನಮಗೆ ಎರಡೇ ಕಾಲ ಒಂದು ಬೇಸಿಗೆ ಇನ್ನೊಂದು ಕಡುಬೇಸಿಗೆ. ಇದು ನಾನು ಹೇಲಿದ್ದಲ್ಲ. ಹಾಸ್ಯಬ್ರಹ್ಮ ಎಂದು ಹೆಸರಾದ ಬೀಚಿಯವರು ಹೇಳಿದ್ದು. ಏಕೆಂದರೆ ಬಳ್ಳಾರಿಯವರಾದ ಅವರೂ ಬಯಲುಸೀಮೆಯವರೇ ಆದ್ದರಿಂದ ನಮ್ಮ ಕಷ್ಟಗಳೇ ಅಲ್ಲಿಯೂ ಇದ್ದ ಕಾಲ.
ಆದರೆ ಮೊನ್ನೆಯಷ್ಟೇ ಭದ್ರೆಯು ನಾಲೆಯ ಮೂಲಕ ನಮ್ಮ ಜಿಲ್ಲೆಗೆ ಬಂದಾಗ ಕೊಂಚ ನಿಟ್ಟುಸಿರು ಬಿಟ್ಟೆವು. ಇರಲಿ, ಮಳೆ ಬಂದಿಲ್ಲವಾದರೆ ಗದುಗಿನ ಭಾರತದ ವಿರಾಟ ಪರ್ವ, ಕನಕದಾಸರ ನಳಚರಿತ್ರೆ ಅಥವಾ ಯಕ್ಷಗಾನ ನಳಚರಿತ್ರೆ ಅಥವಾಇನ್ಯಾವುದೋ ಸದ್ಗ್ರಂಥ ಪಾರಾಯಣ ಮಾಡಿಸುವುದು ನಮ್ಮ ಹಳ್ಳಿಯ ಸಂಪ್ರದಾಯ ಅಥವಾ ನಂಬಿಕೆಯೂ ಹೌದು. ಹಾಗೆ ಅಪ್ಪನಿಗೆ ಗಮಕದ ಅಭ್ಯಾಸವಿರುವುದರಿಂದ ಹಾಗೂ ಅವರೂ ಸಾಹಿತಿಗಳಾಗಿರುವುದರಿಂದ ವಿರಾಟಪರ್ವ ವಾಚನ ಮತ್ತು ವ್ಯಾಖ್ಯಾನಗಳನ್ನು ಅವರೇ ಮಾಡುತ್ತಿದ್ದರು. ತೀರಾ ಇತ್ತೀಚೆಗೆ ನನಗೂ ಅದರ ಆಸಕ್ತಿ ಹೆಚ್ಚಾಗಿ ಅಭ್ಯಾಸ ಮಾಡುತ್ತಿರುವಾಗ. ಕುಮಾರ ವ್ಯಾಸ ಭಾರತವನ್ನು ಬರೆದದ್ದು ಹೇಗೆ ? ಎಂಬ ಸಂದೇಹದಲ್ಲಿ ಕೇಲಿದೆ. ಏಕೆಂದರೆ ಸಂಪೂರ್ಣ ಮಹಾಭಾರತವನ್ನು ಕುಮಾರವ್ಯಾಸ ಬರೆಯಲಿಲ್ಲ.
ಹತ್ತು ಪರ್ವಗಳನ್ನು ಅಂದರೆ “ಗದಾಪರ್ವ”ವರೆಗೆ ಮಾತ್ರ ಬರೆದು ಉಳಿದ ಎಂಟು ಪರ್ವಗಳನ್ನು ಶ್ರೀ ಕೃಷ್ಣದೇವರಾಯನ ಆಸ್ಥಾನ ಕವಿಯಾದ “ತಿಮ್ಮಣ್ಣ ಕವಿ” ಸಂಪೂರ್ಣಗಿಳಿದ್ದಾರೆ. ಇದಕ್ಕೆ ಒಂದು ಚಾರಿತ್ರಿಕ ಹಿನ್ನೆಲೆಯುಂಟು.
ಮಹಾಭಾರತದ ದ್ರೋಣಾಚಾರ್ಯರ ಮಗ ಅಶ್ವತ್ಥಾಮರು ಚಿರಂಜೀವಿಯಾಗಿದ್ದಾರೆ ಎಂಬ ಪ್ರತೀತಿಯಿದೆ. ಐದು ಸಹಸ್ರ ಬ್ರಾಹ್ಮಣ ಭೋಜನವಾದರೆ ಅಲ್ಲಿ ಯಾವುದೋ ರೂಪದಿಂದ ಅಶ್ವತ್ಥಾಮರ ಆಗಮನವಾಗುತ್ತದೆಂದೂ, ಅವರ ಮೂಲಕ ಭಾರತವನ್ನು ಬರೆಯುವ ಅಭಿಲಾಷೆಯಿಂದ ಗದುಗಿನ ನಾರಣಪ್ಪನು ಐದು ಸಾವಿರ ಬ್ರಾಹ್ಮಣರಿಗೆ ಸಂತರ್ಪಣೆಯನ್ನು ಏರ್ಪಡಿಸಿದನು. ಆದರೆ ಅಲ್ಲಿ ಬರುವ ಅಶ್ವತ್ಥಾಮರನ್ನು ಕಂಡು ಹಿಡಿಯುವುದು ಹೇಗೆ ? ಐದು ಸಹಸ್ರ ಬ್ರಾಹ್ಮಣರ ಸಂತರ್ಪನೆಯ ಸಂದರ್ಭದಲ್ಲಿ ದುರ್ಯೋಧನನನ್ನು ತೆಗಳಿದರೆ ಅಶ್ವತ್ಥಾಮರಿಗೆ ಕೋಪಬಂದು ಪ್ರಕಟವಾಗಬಹುದು ಎಂದು ಯೋಚಿಸಿ ಬ್ರಾಹ್ಮಣ ಪಂಕ್ತಿಯಲ್ಲಿ ಒಮ್ಮೆ ದುರ್ಯೋಧನನ ಅವಹೇಳನದ ಕಾರ್ಯ ಪ್ರಾರಂಭಿಸುತ್ತಾನೆ. ಆಗ ಆ ಪಂಕ್ತಿಯಲ್ಲಿಂದ ಒಬ್ಬ ವೃದ್ಧರು ಅತ್ಯಂತ ಸಿಡಿಮಿಡಿಗೊಂಡು ಎದ್ದು ಹೊರಡುವಾಗ ಅದನ್ನು ಗಮನಿಸಿದ ಕುಮಾರವ್ಯಾಸನಿಗೆ ಅವರೇ ಅಶ್ವತ್ಥಾಮರೆಂದು ಅರ್ಥವಾಗುತ್ತದೆ ಹಾಗೂ ಅವರನ್ನು ಬಹು ದೂರದವರೆಗೆ ಹಿಂಬಾಲಿಸಿ ಅವರನ್ನು ಸಮಾಧಾನಗೊಳಿಸಿ, ತನ್ನ ಮನೋಭೀಷ್ಟವನ್ನು ತಿಳಿಸಿದಾಗ, ಪ್ರಸನ್ನರಾದ ಅವರು ನಾರಣಪ್ಪನನ್ನು ಆಶೀರ್ವಾದಿಸಿ ವೀರನಾರಾಯಣನ ದೇವಾಲಯದಲ್ಲಿ ಒದ್ದೆಬಟ್ಟೆಯನ್ನುಟ್ಟು ಕುಳಿತುಕೋ ಆ ಮಡಿಯು ಆರುವವರೆಗೆ ವೀರನಾರಾಯಣನ ಪ್ರೇರಣೆಯಿಂದ ಬರುವ ಪದ್ಯಗಳನ್ನು ಬರೆ ಎಂದು ಹೇಳಿ, ನಂತರ ಒಂದು ಎಚ್ಚರಿಕೆಯನ್ನೂ ಸಹಾ ನೀಡುತ್ತಾರೆ.
“ ನೀನು ನನ್ನಿಂದ ಅನುಗ್ರಹೀತನಾದೆ ಎಂದು ಇನ್ನೊಬ್ಬರಿಗೆ ತಿಳಿಸಿದಲ್ಲಿ, ನಿನಗೆ ಮರಣವೊದಗಲಿ” ಎಂದು. ನಂತರ ಬಂದ ಕುಮಾರವ್ಯಾಸ ಹತ್ತು ಪರ್ವಗಳನ್ನು ಬರೆದ ಮನುಷ್ಯ ಸಹಜ ಸ್ವಭಾವದಿಂದ ಯಾರೊಟಿಗೋ ಈ ವಿಷಯ ಹಂಚಿಕೊಂಡಿದ್ದರಿಂದ ಅಕಾಲ ಮೃತ್ಯುವಿಗೀಡಾದನು. ಎಂದು ನಮ್ಮ ಹಳ್ಳಿಯ ಜನರ ಬಾಯಲ್ಲಿ ಕೇಳಿದ ಕಥೆ. ಇದರಲ್ಲಿ ಸತ್ಯವೆಷ್ಟು ಸುಳ್ಳೆಷ್ಟು ಎಂಬುದು ಸಂಪೂರ್ಣವಾಗಿ ವಾಚಕರ ಅಭಿಪ್ರಾಯಕ್ಕೆ ಬಿಟ್ಟದ್ದು.
Klive Special Article ಈಗಿನ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕೋಳೀವಾಡವೆಂಬ ಗ್ರಾಮವೆಂದೂ ಅವನ ವಂಶಸ್ಥರು ಈಗಲೂ ಅಲ್ಲಿ ವಾಸಿಸುತ್ತಾರೆಂದೂ ಹೇಳಲಾಗಿದೆ. ಈ ಬಗ್ಗೆ ಸಂಶೋಧನೆ ಮಾಡಿದ ಶ್ರೀ ಎ.ವಿ.ಪ್ರಸನ್ನ, ಕೆ.ಎ.ಎಸ್. ಅವರು ಅವರ ಮನೆಗೆ ಹೋಗಿ ವಿಚಾರ ವಿನಿಮಯ ಮಾಡಿ ಅವರಲ್ಲಿರುವ ಕಾಗದ ಪತ್ರಗಳನ್ನೂ ಕುಮಾರವ್ಯಾಸ ಭಾರತದ ಓಲೆಗರಿ ಪ್ರತಿಗಳನ್ನೂ ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ಪತ್ರಗಳ ಆಧಾರದ ಮೇಲೆ ಕವಿಯ ವಂಶಸ್ಥರು ತಮ್ಮ ವಂಶದ ಚರಿತ್ರೆಯನ್ನು ಈ ರೀತಿ ತಿಳಿಸುತ್ತಾರೆ. ಕುಮಾರವ್ಯಾಸನ ಪೂರ್ವಿಕರಾದ ಚಿನ್ನದ ಕೈ ಮಾಧವರಸಯ್ಯನು ಹಿರೇಹಂದಿಗೋಳ ಗ್ರಾಮದವನಾಗಿದ್ದು ಕೋಳೀವಾಡ ಗ್ರಾಮವನ್ನು ಕ್ರಯಕ್ಕೆ ಪಡೆದು, ಕೋಳೀವಾಡದಲ್ಲಿಯೇ ನೆಲಸಿದ. ಅವರು ಅದ್ವೈತಿಗಳಾಗಿದ್ದು ಹರಿ-ಹರರಲ್ಲಿ ಅಬೇಧವನ್ನು ಕಾಣುವವರು. ಇವರು ಅಗಸ್ತ್ಯ ಗೋತ್ರಕ್ಕೆ ಸೇರಿದವರು. ಈ ಬಗ್ಗೆ ಗದುಗಿನ ಕುಮಾರವ್ಯಾಸ ಸಂಘದ ಅಧ್ಯಕ್ಷರೂ ಆದ ಶ್ರೀ ಎಂ.ಎಚ್. ಹರಿದಾಸ ಅವರು ರಚಿಸಿರುವ ಮಹಾಕವಿ ಕುಮಾರವ್ಯಾಸ (ಪ್ರ.ವಿಕ್ರಮ ಪ್ರಕಾಶನ ಗದಗ) ಕಿರು ಹೊತ್ತಿಗೆಯಲ್ಲಿ ಹೆಚ್ಚನ ವಿಷಯವಿದೆ. ಅವನ ವಂಶಸ್ಥರಾದ ದತ್ತಾತ್ರೇಯ ಪಾಟೀಲರು ಶ್ರೀ ಎ.ವಿ.ಪ್ರಸನ್ನ ಅವರಿಗೆ ಕೊಟ್ಟ ಕುಮಾರವ್ಯಾಸನ ವಂಶಾವಳಿಯನ್ನು ಗಮಕ ಸಂಪದ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಒಟ್ಟಿನಲ್ಲಿ ಕವಿ ನಾರಾಯಣಪ್ಪ ಕೋಳಿವಾಡದ ಶಾನುಭೋಗ
. ಗದುಗಿನ ವೀರನಾರಾಯಣ ಇವನ ಆರಾಧ್ಯದೈವ. ಇವನಿಗೆ ವೇದವ್ಯಾಸ ಮತ್ತು ಅಶ್ವತ್ಥಾಮರ ಅನುಗ್ರಹವಾಗಿತ್ತೆಂದು ಹೇಳಲಾಗುತ್ತದೆ. ( ನಾನು ಮೇಲೆ ಹೇಳಿದ ಕಥೆಗೆ ಇಲ್ಲಿ ಸಾಮ್ಯವನ್ನು ಕಾಣಬಹುದು ).
ಈತನ ವಂಶಾವಳಿಯಂತೆ, ವೀರನಾರಾಯನೆಂಬ ಹೆಸರಿನವರು ಐದು ಜನ ಬರುತ್ತಾರೆ. ಅದರಲ್ಲಿ ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ನಂತರ ನಾಲ್ಕನೆಯವನಿಗೆ ೧ನೇ ವೀರನಾರಾಯಣ ಗೌಡ ಎಂದಿದೆ. ಅವನೇ ಕುಮಾರವ್ಯಾಸನೆಂದು ನಿರ್ಧರಿಸಿದ್ದಾರೆ. ಇಲ್ಲಿ ಗೌಡ ಎಂಬ ಪದ ಜಾತಿ ಸೂಚಕವಲ್ಲ. ಅದು ಗ್ರಾಮವೃದ್ಧ > ಗಾಮುಂಡ > ಗೌಡ ಎಂದು ನಿರ್ಣಯಿಸಿದ್ದಾರೆ. ಆನವ್ಮತರ ಕೆಲವು ಅದೇ ಮನೆತನದವರು ಅಯ್ಯ, ಪಾಟೀಲ ಎಂದು ತಮ್ಮ ಹೆಸರಿನ ಕೊನೆಗೆ ಸೇರಿಸಿ ಕೊಂಡಿದ್ದಾರೆ. ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ಕಾಲ ಕ್ರಿ.ಶ. ೧೧೪೮. ಇವನ ನಂತರದ ನಾಲ್ಕನೆಯ ತಲೆಮಾರಿನವ ಕುಮಾರವ್ಯಾಸ. ಪ್ರತಿ ತಲೆಮಾರಿಗೆ ೨೫ ವರ್ಷವೆಂದು ಹಿಡಿದರೆ, ಕುಮಾರವ್ಯಾಸನ ಕಾಲ ಕ್ರಿ.ಶ. ೧೨೪೮ . ಅವನು ಸುಮಾರು ೭೦ ವರ್ಷ ಬದುಕಿದ್ದನೆಂದು ಭಾವಿಸಿದರೂ ಕ್ರಿ.ಶ. ೧೨೪೮ ರಿಂದ ೧೩೧೮ ಎಂದರೆ ೩೦-೪೦ ವರ್ಷ ವ್ಯತ್ಯಾಸ ಬರುತ್ತದೆ.
ವಂಶಾವಳಿ :
||ಶ್ರೀ ವೀರನಾರಾಯಣ ಪ್ರಸನ್ನಃ||
೧.ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯ.
೨.ತಿರುಮಲಯ್ಯ.
೩. ಲಕ್ಕರಸಯ್ಯ.
೪.ವೀರನಾರಾಯಣ ಗೌಡ.; ಕೃಷ್ಣರಸಯ್ಯ ; ತಂಕರಸಯ್ಯ ; ತಿರುಮಲಯ್ಯ. ಅಶ್ಯತ್ಥಯ್ಯ ?
೪-೧ ನೇ ವೀರನಾರಾಯಣ ನೇ ಕುಮಾರವ್ಯಾಸ
ನಂತರ ೧೯೪೧ ಕ್ಕೆ ೧೯ ತಲೆಮಾರಿನ ಪಟ್ಟಿ ಇದೆ
“ವೀರನಾರಾಯಣನೆ ಕವಿ ಲಿಪಿ
ಕಾರ ಕುಮಾರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ಧನರು
ಚಾರು ಕವಿತೆಯ ಬಳಕೆಯಲ್ಲ ವಿ
ಚಾರಿಸುವಡಳವಲ್ಲ ಚಿತ್ತವ
ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ”
ಎಂಬ ಈ ಪದ್ಯವನ್ನು ನೋಡಿದಾಗ ನಮ್ಮಿಂದ ಎಲ್ಲವೂ ಸಾಧ್ಯವಿಲ್ಲ. ಯಾವುದೇ ಕಾವ್ಯವನ್ನು ಬರೆಯುವಾಗ ಒಂದು ಆಧ್ಯಾತ್ಮಿಕ ಹಿನ್ನೆಲೆ ಹಾಗೂ “ಧೀ ಶಕ್ತಿಯೊಂದರ ಪ್ರೇರಣೆ ಎಂದುಕೊಳ್ಳಬಹುದು. ಹಾಗಾಗಿ ಕುಮಾರವ್ಯಾಸನಿಗೆ ಪ್ರೇರಣೆಯಾಗಿರುವುದು ಆ ಪ್ರೇರಣೆಯಿಂದಲೇ ತಾನು ಬರೆಯುತ್ತಿರುವುದು ಎಂದು ಗರ್ವಪಡದೇ ಹೇಳುತ್ತಾನೆ. ಗದಗಿನ ಭಾರತದಲ್ಲಿ ಎರಡು ಕಡೆಗಳಲ್ಲಿ ಕುಮಾರ ವ್ಯಾಸ ಅತಿಯಾದ ವರ್ಣನೆಯನ್ನು ಮಾಡುತ್ತಾನೆ ಎನಿಸುತ್ತದೆ.
ಒಂದು ಕೃಷ್ಣನನ್ನು ಚಿತ್ರಿಸುವ ಎಲ್ಲ ಸಂದರ್ಭಗಳಲ್ಲಿ ಹಾಗೂ ಯುದ್ಧದ ವರ್ಣನೆಯ ಸಂದರ್ಭದಲ್ಲಿ ತನ್ನನ್ನು ತಾನು ಮರೆತು ವರ್ಣಿಸುತ್ತಾನೆ. ಉಳಿದಂತೆ ನಡುಗನ್ನಡ ಕಾವ್ಯ ಅದರಲ್ಲಿಯೂ ಭಾಮಿನ ಷಟ್ಪದಿಯಲ್ಲಿನ ಓಘ ಕುಮಾರವ್ಯಾಸನಿಗಲ್ಲದೇ ಮತ್ತೊಬ್ಬರಿಗೆ ಸಾಧ್ಯವಿಲ್ಲ ಎಂಬಂತಿದೆ. ಇಷ್ಟಾಗಿಯೂ ವಾಚಕರಲ್ಲಿ ಗೊಂದಲವಿರಬಹುದು ಈ ಅಧ್ಯಾತ್ಮ ರಶ್ಮಿ ಅಂಕಣಕ್ಕೂ ಹಾಗೂ ಈ ವ್ಯಕ್ತಿಗೂ ಏನು ಸಂಬಂಧ ಎಂದು ಹೌದು. ಈ ಮೇಲೆ ತಿಳಿಸಿದಂತೆ ಸ್ವಲ್ಪ ಗೊಂದಲಮಯವೇ ಏಕೆಂದರೆ ನಾನು ಸಾಹಿತ್ಯ ವಿದ್ಯಾರ್ಥಿಯಲ್ಲ ಹಾಗೂ ಕನ್ನಡದ ಛಂದಸ್ಸು, ಅಲಂಕಾರಗಳನ್ನು ಸಾಹಿತ್ಯಿಕವಾಗಿ ತಿಳಿದವನಲ್ಲ. ಹಲವಾರು ಗುರುಗಳ ಸತತ ಮಾರ್ಗದರ್ಶನ ಹಾಗೂ ಪ್ರೋತ್ಸಾಹವೇ ಈ ಅಂಕಣಕಾರನಿಗೊಂದು ದಾರಿ ಮಾಡಿಕೊಡುತ್ತಿದೆ. ಪ್ರತಿವಾರ ಹೊಸ ಆಧ್ಯಾತ್ಮಿಕ ವಿಷಯ-ವ್ಯಕ್ತಿಗಳನ್ನು ಪರಿಚಯಿಸುತ್ತಿರುವ ನಾನು ಇಂದು ಕುಮಾರವ್ಯಾಸ ಎಂಬ ತತ್ತ್ವಜ್ಞಾನಿಯ ಪರಿಚಯ ಮಾಡಿಸುವಲ್ಲಿ ಹೆಜ್ಜೆಯಿಡುತ್ತಿದ್ದೇನೆ.
ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. “ಗದುಗಿನ ನಾರಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸ ನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ.
