ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ರಕ್ತನಿಧಿ ಕೇಂದ್ರಗಳಲ್ಲಿ ಸಂಗ್ರಹಿಸುವ ರಕ್ತದ ಸಮರ್ಪಕ ಬಳಕೆ, ರಕ್ತ ವ್ಯರ್ಥವಾಗುವುದನ್ನು ತಡೆಗಟ್ಟುವುದು ಹಾಗೂ ಹೆಚ್ಚುವರಿ ರಕ್ತ ಸಂಗ್ರಹಣೆ ಕುರಿತು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳ ಆರೋಗ್ಯಾಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು ನಿರ್ವಹಿಸುತ್ತಿರುವ ರಕ್ತನಿಧಿಗಳ ಮುಖ್ಯಸ್ಥರು ವಿಶೇಷ ಗಮನಹರಿಸುವಂತೆ ಜಿಲ್ಲಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯ ರಕ್ತನಿಧಿ ಕೇಂದ್ರಗಳ ಕಾರ್ಯನಿರ್ವಹಣಾ ವರದಿ, ಏಯ್ಡ್ಸ್ ನಿಯಂತ್ರಣಕ್ಕಾಗಿ ಇಲಾಖೆ ಹಾಗೂ ಸ್ವಯಂಸೇವಾ ಸಂಸ್ಥೆಗಳ ಮೂಲಕ ಕೈಗೊಳ್ಳಲಾದ ಕ್ರಮಗಳು ಹಾಗೂ ನಡೆಸಿದ ಕಾರ್ಯಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ರಕ್ತದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ಕೆಂಪು ರಕ್ತಕಣಗಳು, ಪ್ಲಾಸ್ಮಾ, ಪ್ಲೇಟ್ಲೆಟ್ಗಳಾಗಿ ಬೇರ್ಪಡಿಸಿ ಅಗತ್ಯವಿರುವ ರೋಗಿಗಳಿಗೆ ಆದ್ಯತೆ ಮೇರೆಗೆ ವಿತರಿಸಬೇಕು. ಅಂತಹ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆಗಳು, ಹೆರಿಗೆ ಸಂದರ್ಭಗಳು, ಅಪಘಾತಗಳು, ಶಸ್ತ್ರಚಿಕಿತ್ಸೆಗಳು ಹಾಗೂ ರಕ್ತಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ಆದ್ಯತೆ ನೀಡಬೇಕು ಎಂದ ಅವರು, ಆಸ್ಪತ್ರೆಗಳ ನಡುವೆ ರಕ್ತದ ಲಭ್ಯತೆ ಮತ್ತು ಬೇಡಿಕೆಯ ಸಮನ್ವಯ ಸಾಧಿಸಬೇಕಲ್ಲದೆ, ರಕ್ತದ ಸಂಗ್ರಹಣೆ, ವಿತರಣೆ ಮತ್ತು ಬಳಕೆಯ ಬಗ್ಗೆ ನಿಖರ ದಾಖಲೆ ನಿರ್ವಹಿಸಬೇಕು. ಸ್ವಯಂಸೇವಾ ಸಂಸ್ಥೆಗಳು ಕಾರ್ಯಕ್ರಮಗಳನ್ನು ಆಯೋಜಿಸಿ ಸಂಗ್ರಹಿಸುವ ರಕ್ತದಲ್ಲಿ ಶೇ. 25ರಷ್ಟನ್ನು ನಿಯಮಾನುಸಾರ ಜಿಲ್ಲಾ ಆರೋಗ್ಯ ಇಲಾಖೆಗೆ ಸಕಾಲದಲ್ಲಿ ನೀಡುವಂತೆ ಅವರು ಸೂಚಿಸಿದರು.
ಸಂಗ್ರಹಿಸಲಾಗುವ ಅಮೂಲ್ಯ ಹಾಗೂ ಜೀವರಕ್ಷಕ ರಕ್ತವನ್ನು ಯಾವುದೇ ಕಾರಣಕ್ಕೂ ಹಾಳಾಗದಂತೆ ಹಾಗೂ ಸದ್ಭಳಕೆ ಆಗುವಂತೆ ನೋಡಿಕೊಳ್ಳಬೇಕು ಎಂದ ಅವರು, ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಕೈಗಾರಿಕೆಗಳು, ಸಂಘ-ಸಂಸ್ಥೆಗಳು, ಯುವಜನರು ಮತ್ತು ಸ್ವಯಂಸೇವಾ ಸಂಘಟನೆಗಳ ಸಹಯೋಗದಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕು. ಈ ಮೂಲಕ ಸ್ವಯಂಪ್ರೇರಿತ ರಕ್ತದಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಸಲಹೆ ನೀಡಿದರು.
ರಕ್ತದಾನ ಶಿಬಿರಗಳನ್ನು ಕೇವಲ ಸಂಗ್ರಹಣೆಯ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ನಡೆಸದೆ, ಆಸ್ಪತ್ರೆಗಳ ನೈಜ ಬೇಡಿಕೆಗೆ ಅನುಗುಣವಾಗಿ ಆಯೋಜಿಸುವಂತೆ ಸಲಹೆ ನೀಡಿದ ಅವರು, ಅದಕ್ಕಾಗಿ ರಕ್ತನಿಧಿಗಳ ನಡುವೆ ಸಮನ್ವಯ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಇದರಿಂದಾಗಿ ರಕ್ತ ವ್ಯರ್ಥವಾಗುವುದನ್ನು ತಡೆಯಬಹುದಾಗಿದೆ. ಸಂಗ್ರಹಿಸಿದ ಪ್ರತಿಯೊಂದು ರಕ್ತದ ಘಟಕವೂ ಅಗತ್ಯವಿರುವ ರೋಗಿಯ ಅಮೂಲ್ಯ ಜೀವ ಉಳಿಸಲು ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದರು.
• ಮಾನ್ಯ ಆರೋಗ್ಯ ಸಚಿವರ ಸೂಚನೆಯಂತೆ ವಿಶ್ವ ರಕ್ತದಾನಿಗಳ ಮಾಸಾಚರಣೆ ಅಂಗವಾಗಿ ನವೆಂಬರ್ 25ರಂದು ಶಿವಮೊಗ್ಗ ಜಿಲ್ಲಾ ಕೇಂದ್ರ ಮತ್ತು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರಗಳನ್ನು ಆಯೋಜಿಸಿ, ಸುಮಾರು 1000ರಕ್ತದ ಘಟಕಗಳನ್ನು ಸಂಗ್ರಹಿಸಲು ಉದ್ಧೇಶಿಸಲಾಗಿದೆ. ಆಸಕ್ತರು ಸಹಕರಿಸಲು ಮನವಿ ಮಾಡಲಾಗಿದೆ. – ಡಾ|| ಎಸ್.ಕೆ.ಕಿರಣ್, ಜಿಲ್ಲಾ ಏಯ್ಡ್ಸ್ ನಿಯಂತ್ರಣಾಧಿಕಾರಿ.
ಜಿಲ್ಲೆಯಲ್ಲಿ ಹೊಸದಾಗಿ ಎಚ್ಐವಿ ಸೋಂಕು ಪತ್ತೆಯಾಗುತ್ತಿರುವ ಪ್ರಮಾಣ ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕಾಗಿ ಪರೀಕ್ಷೆ ಮತ್ತು ಚಿಕಿತ್ಸೆ ಸೌಲಭ್ಯಗಳ ವ್ಯಾಪ್ತಿ ಹೆಚ್ಚಿಸುವಂತೆ ಸೂಚಿಸಿದ ಅವರು, ಸೋಂಕಿತ ಗರ್ಭಿಣಿಯರು ಮತ್ತು ಮಕ್ಕಳಿಗೆ ವಿಶೇಷ ಆರೈಕೆ ಒದಗಿಸಬೇಕಲ್ಲದೇ ತಾಯಿಯಿಂದ ಮಗುವಿಗೆ ಸೋಂಕು ಹರಡದಂತೆ ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಈಗಾಗಲೇ ಸೋಂಕು ದೃಢಪಟ್ಟವರಿಗೆ ತಕ್ಷಣ ನಿಯಂತ್ರಣ ಕ್ರಮವಾಗಿ ಚಿಕಿತ್ಸೆ ಆರಂಭಿಸಬೇಕು. ಚಿಕಿತ್ಸೆ ಪಡೆಯುತ್ತಿರುವವರು ಔಷಧಿಗಳನ್ನು ನಿಯಮಿತವಾಗಿ ಸೇವಿಸುವಂತೆ ಅನುಸರಣೆ ವ್ಯವಸ್ಥೆ ಮಾಡಬೇಕು ಎಂದ ಅವರು, ಶಾಲಾ-ಕಾಲೇಜುಗಳು, ಗ್ರಾಮ ಪಂಚಾಯಿತಿಗಳು ಹಾಗೂ ನಗರ ಪ್ರದೇಶಗಳಲ್ಲಿ ಎಚ್ಐವಿ ಸೋಂಕಿನ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಏಯ್ಡ್ಸ್ ನಿಯಂತ್ರಣಾಧಿಕಾರಿ ಡಾ|| ಎಸ್.ಕೆ.ಕಿರಣ್, ಜಿಲ್ಲಾ ಸರ್ಜನ್ ಡಾ|| ನಾಗೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಕಾಂತರಾಜ್, ಡಾ|| ಯೋಗೀಶ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಆರೋಗ್ಯಾಧಿಕಾರಿಗಳು, ರಕ್ತನಿಧಿ ಕೇಂದ್ರಗಳ ಮುಖ್ಯಸ್ಥರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ತುರ್ತುಚಿಕಿತ್ಸೆ, ಹೆರಿಗೆ, ಅಪಘಾತಗಳು, ಶಸ್ತ್ರಚಿಕಿತ್ಸೆ, ರಕ್ತಸಂಬಂಧಿ ಕಾಯಿಲೆಗಳಿಗೆ ರಕ್ತದ ಲಭ್ಯತೆ ಆದ್ಯತೆ ನೀಡಿ- ಪ್ರಕಾಶ್ ಜಿ.ಟಿ.ನಿಟ್ಟಾಲಿ
Date:
