ತೀರ್ಥಹಳ್ಳಿ ಕ್ಷೇತ್ರದಲ್ಲಿ ರಾಷ್ಟ್ರೀಯತೆಯ ಬೇರುಗಳನ್ನು ಗಟ್ಟಿಗೊಳಿಸಿ, ದಶಕಗಳ ಕಾಲ ಪಕ್ಷದ ಸಂಘಟನೆಗೆ ಆಧಾರಸ್ತಂಭವಾಗಿದ್ದ ಹಿರಿಯ ಮಾರ್ಗದರ್ಶಕ ನಗರವಳ್ಳಿ ಶಂಕರ್ ನಾರಾಯಣ ಐತಾಳರ ನಿಧನಕ್ಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
“ಐದು ದಶಕಗಳಿಗೂ ಹೆಚ್ಚು ಕಾಲ ನಮ್ಮ ಸಂಘಟನೆಯನ್ನು ಪೋಷಿಸಿ, ಪಕ್ಷದ ಸುಧೀರ್ಘಾವಧಿಯ ಖಜಾಂಚಿಯಾಗಿ ಅತ್ಯಂತ ಪ್ರಾಮಾಣಿಕ ಸೇವೆ ಸಲ್ಲಿಸಿದ್ದ ಶಂಕರ್ ನಾರಾಯಣ ಐತಾಳರ ಅಗಲಿಕೆ ತೀರ್ಥಹಳ್ಳಿ ತಾಲೂಕಿನ ಸಾಮಾಜಿಕ ಮತ್ತು ಸಂಘಟನಾತ್ಮಕ ಬದುಕಿಗೆ ತುಂಬಲಾರದ ನಷ್ಟವಾಗಿದೆ” ಎಂದು ತಿಳಿಸಿದ್ದಾರೆ.
”ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಪಕ್ಷದ ಬೆಳವಣಿಗೆಯನ್ನೇ ತಮ್ಮ ಬದುಕಿನ ಗುರಿಯಾಗಿಸಿಕೊಂಡಿದ್ದ ಅವರು, ತನು-ಮನ-ಧನವನ್ನು ರಾಷ್ಟ್ರ ಕಾರ್ಯಕ್ಕೆ ಸಮರ್ಪಿಸಿದ್ದರು. ನೂರಾರು ಕಾರ್ಯಕರ್ತರನ್ನು ಬೆಳೆಸಿ ಪೋಷಿಸಿದ ಅವರ ನಿಸ್ವಾರ್ಥ ಸೇವೆ, ಮನೆಗೆ ಬಂದವರಿಗೆ ನೀಡುತ್ತಿದ್ದ ಆತ್ಮೀಯ ಆದರಾತಿಥ್ಯ ಹಾಗೂ ಪಕ್ಷಾತೀತವಾದ ಜನಪ್ರಿಯತೆ ಸದಾ ಸ್ಮರಣೀಯ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಸಂಘಟನೆ ಹೆಮ್ಮರವಾಗಿ ಬೆಳೆದು ನಿಂತಿದ್ದನ್ನು ಕಂಡು ಅವರು ಅಪಾರ ಸಂತಸ ಪಡುತ್ತಿದ್ದರು” ಎಂದು ಸಂಸದರು ಸ್ಮರಿಸಿದ್ದಾರೆ.
”ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬವರ್ಗದವರಿಗೆ, ಬಂಧು-ಮಿತ್ರರಿಗೆ ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಶ್ರೀ ಬಿ.ವೈ. ರಾಘವೇಂದ್ರ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
