Wednesday, November 18, 2026
Wednesday, November 18, 2026

ಒಂದೆಡೆ ತ್ವರಿತ ಮಾಹಿತಿ ನೀಡುವ ಪತ್ರಿಕೋದ್ಯಮ ಮತ್ತೊಂದೆಡೆ ತಪ್ಪು ಸುದ್ದಿಗಳಿಂದ ವ್ಯಕ್ತಿಗಳ ವ್ಯಕ್ತಿತ್ವ ನಾಶ ಮಾಡುತ್ತಿವೆ- ಡಾ.ಜಿ.ಪರಮೇಶ್ವರ

Date:

ಇಂದಿನ ಕಾಲದ ಪತ್ರಿಕೋದ್ಯಮದಲ್ಲಿ ಉಳಿವು (Survival) ಹಾಗೂ ಜನಪ್ರಿಯತೆ ಎಷ್ಟು ಮುಖ್ಯವಾಗಿತ್ತೋ ಅμÉ್ಟೀ ಜವಾಬ್ದಾರಿ ಮತ್ತು ಹೊಣೆಗಾರಿಕೆಯೂ ಮುಖ್ಯವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಪತ್ರಿಕೋದ್ಯಮದಲ್ಲಿ ಹೊಣಿಗಾರಿಕೆ ಕಡಿಮೆಯಾಗುತ್ತಿದೆ. ಹಾಗಾಗಿ ಪತ್ರಿಕೋದ್ಯಮದಲ್ಲಿ ಹೊಣಿಗಾರಿಕೆ ಮತ್ತು ಜನಪ್ರಿಯತೆಯ ಸಮತೋಲನ ಅಗತ್ಯವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಅಭಿಪ್ರಾಯಪಟ್ಟರು.

ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನುವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮವು ಜನರಿಗೆ ತ್ವರಿತ ಮಾಹಿತಿಯನ್ನು ನೀಡುತ್ತಿದ್ದರೆ, ಮತ್ತೊಂದೆಡೆ ತಪ್ಪು ಸುದ್ದಿಗಳಿಂದ ವ್ಯಕ್ತಿಗಳ ವ್ಯಕ್ತಿತ್ವವನ್ನೇ ನಾಶಮಾಡುತ್ತಿದೆ. ಆದ್ದರಿಂದ ಪತ್ರಕರ್ತರು ವರದಿ ಮಾಡುವಾಗ ಎಚ್ಚರಿಕೆ ವಹಿಸಬೇಕು. ಹಾಗೆಯೇ ಡಿಜಿಟಲ್ ಯುಗದ ಸವಾಲುಗಳ ಕುರಿತು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಪತ್ರಿಕೋದ್ಯಮದಲ್ಲಿ ಅನಿವಾರ್ಯತೆ ಇರಬಾರದು, ವರದಿಗಳಲ್ಲಿ ಸತ್ಯತೆ ಮತ್ತು ನೈಜತೆಗೆ ಹೆಚ್ಚಿನ ಮಹತ್ವ ನೀಡಬೇಕು. ಅದೇ ರೀತಿ ಬರಹಗಳು ಸಮಾಜದ ಸಮಸ್ಯೆಗಳನ್ನು ಹಾಗೂ ಘಟನೆಗಳನ್ನು ನಿಖರವಾಗಿ ಪ್ರತಿಬಿಂಬಿಸುವಂತಿರಬೇಕು. ಕೇವಲ ವರದಿ ಮಾಡುವುದಷ್ಟೇ ಮಾಧ್ಯಮಗಳ ಜವಾಬ್ದಾರಿಯಾಗಬಾರದು. ಸಮಾಜವನ್ನು ಬದಲಾಯಿಸುವ, ಸಮಾನತೆ ಮತ್ತು ಹಕ್ಕುಗಳ ಬಗ್ಗೆ ವಿಶ್ಲೇಷಿಸುವ ದೊಡ್ಡ ಜವಾಬ್ದಾರಿ ಪತ್ರಿಕೋದ್ಯಮದ ಮೇಲಿದೆ ಎಂದರು.

ಜವಾಹರ ಲಾಲ್ ನೆಹರೂ ಅವರು ಪತ್ರಿಕೋದ್ಯಮದಲ್ಲಿ ಕೆಲವು ಅಪಾಯಗಳಿದ್ದರೂ ಸಹ, ನಿಯಂತ್ರಿತ ಅಥವಾ ದಮನಕ್ಕೊಳಗಾದ ಪತ್ರಿಕೆಗಿಂತ ಸಂಪೂರ್ಣ ಸ್ವಾತಂತ್ರ್ಯವಿರುವ ಪತ್ರಿಕೆ ಇರುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದ ಉಪ ಮುಖ್ಯಮಂತ್ರಿಗಳು, ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವಾಗಿರುವ ಪತ್ರಿಕೋದ್ಯಮಕ್ಕೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು. ಆದರೆ ತಮ್ಮ ಇತಿಮಿತಿಯಲ್ಲಿ ಯಾರಿಗೂ ಹಾನಿಯಾಗದಂತೆ, ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕೆಂದರು.

ಹಿಂದಿನ ಕಾಲದಲ್ಲಿ ಪತ್ರಿಕೆಗಳ ಬರಹಗಳು ಸಮಾಜವನ್ನು ಕಟ್ಟುವ ಅಥವಾ ತಿದ್ದುವ ಶಕ್ತಿಯನ್ನು ಹೊಂದಿದ್ದವು. ಆದರೆ ಇಂದಿನ ಡಿಜಿಟಲ್ ಹಾಗೂ ಕೃತಕ ಬುದ್ಧಿಮತ್ತೆ ಯುಗದಲ್ಲಿ ನಿಜವಾದ ಸ್ವಂತಿಕೆಯ ಬರಹಗಳು ಮತ್ತು ವಿಶ್ಲೇಷಣೆಗಳು ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹಾಗಾಗಿ ಕೇವಲ ವರದಿಗಾರರಾಗದೆ, ಆಳವಾದ ಅಧ್ಯಯನ ಮತ್ತು ವಿಶ್ಲೇಷಣಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಅವರು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪಾರದರ್ಶಕ ಮತ್ತು ಜವಬ್ದಾರಿ ಕಾಪಾಡಿಕೊಳ್ಳುವುದರೋಂದಿಗೆ‌ ಎಚ್ಚರಿಕೆ ವಹಿಸಬೇಕು – ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್

ಸರ್ಕಾರದ ಮುಖ್ಯಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಮಾತನಾಡಿ, ಪ್ರಜಾಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮವು ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಕಾಪಾಡಿಕೊಳ್ಳುವ ಜೊತೆಗೆ, ಇಂದಿನ ಡಿಜಿಟಲ್ ಹಾಗೂ ಕೃತಕ ಬುದ್ಧಿಮತ್ತೆ ಯುಗದಲ್ಲಿ ಮಾಧ್ಯಮಗಳು ಇನ್ನಷ್ಟು ಎಚ್ಚರಿಕೆಯನ್ನು ವಹಿಸಬೇಕಿದೆ ಎಂದರು.

ಯುವಜನರ ತಮ್ಮ ಮಾನಸಿಕ ತೊಳಲಾಟವನ್ನು ಯಾರೊಂದಿಗೂ ಹಂಚಿಕೊಳ್ಳದ ಕಾರಣ, ಸರ್ಕಾರವು ಯುವ ಸಮುದಾಯ ಎದುರಿಸುತ್ತಿರುವ ಆತ್ಮವಿಶ್ವಾಸದ ಕೊರತೆ, ಗೊಂದಲ ಹಾಗೂ ಮಾನಸಿಕ ಒತ್ತಡಗಳನ್ನು ನಿವಾರಿಸಲು ಆರಂಭಿಸಲಾದ ‘14416’ “ಟೆಲಿ ಮನಸ್ಸು” ಎಂಬ ಹೆಲ್ಪ್ ಲೈನ್ ಅನ್ನು ಆರಂಭಿಸಿದೆ. ಇದುವರೆಗೂ ಈ ಹೆಲ್ಪ್ ಲೈನ್ ನ ಪ್ರಯೋಜನವನ್ನು ಸುಮಾರು 1 ಲಕ್ಷಕ್ಕೂ ಅಧಿಕ ಜನರು ಪಡೆದುಕೊಂಡಿದ್ದು, ಇದರಲ್ಲಿ ಶೇ. 60 ರಷ್ಟು ಯುವ ಜನರೇ ಪಡೆದುಕೊಂಡಿದ್ದಾರೆ. ತಜ್ಞರ ಸಹಾಯದಿಂದ ಶೇ. 99ರಷ್ಟು ಮಂದಿ ಸಕಾರಾತ್ಮಕ ಪರಿಹಾರ ಕಂಡುಕೊಂಡಿದ್ದಾರೆ ಎಂದು ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ದೇವಸ್ಥಾನಗಳ ಹೂವಿನ ತ್ಯಾಜ್ಯವನ್ನು ಬಳಸಿ ‘ಉಡುಪಿ ಸುಗಂಧ’ ಹೆಸರಿನಲ್ಲಿ ಅಗರಬತ್ತಿ ಹಾಗೂ ರೂಮ್ ಫ್ರೆಶ್ನರ್ ಗಳಂತಹ ಉತ್ಪನ್ನಗಳನ್ನು ತಯಾರಿಸುತ್ತಿರುವ ಯಶಸ್ವಿ ಸ್ವಸಹಾಯ ಗುಂಪುಗಳ ಬಗ್ಗೆ ಮಾಹಿತಿ ನೀಡಿದ ಅವರು ಇಂತಹ ಯಶಸ್ವಿ ಯಶೋಗಾಥೆಯಂತಹ ವರದಿಗಳ ಬಗ್ಗೆ ಮಾಧ್ಯಮದವರು ಬೆಳಕು ಚೆಲ್ಲಬೇಕು ಎಂದರು.

“ಹಳೆಯದೆಲ್ಲವೂ ಒಳ್ಳೆಯದಲ್ಲ, ಹೊಸದೆಂಬ ಮಾತ್ರಕ್ಕೆ ಯಾವುದೂ ಕೆಟ್ಟದ್ದಲ್ಲ” – ಎಸ್.ಆರ್. ರಾಮಕೃಷ್ಣ

ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ “ಪತಿಕೋದ್ಯಮ: ಜನಪ್ರಿಯತೆಯೇ ಅಥವಾ ಜವಾಬ್ದಾರಿಯುತವೇ” ಎಂಬ ವಿಷಯದ ಕುರಿತು ಏರ್ಪಡಿಸಲಾಗಿದ್ದ ಚರ್ಚೆಯಲ್ಲಿ ಮಾತನಾಡಿದ ಡೆಕ್ಕನ್ ಹೆರಾಲ್ಡ್ ನ ನಿವೃತ್ತ ಸಹ ಸಂಪಾದಕರಾದ ಎಸ್.ಆರ್. ರಾಮಕೃಷ್ಣ ಅವರು ಮಾತನಾಡಿ “ಹಳೆಯದೆಲ್ಲವೂ ಒಳ್ಳೆಯದಲ್ಲ, ಹೊಸದೆಂಬ ಮಾತ್ರಕ್ಕೆ ಯಾವುದೂ ಕೆಟ್ಟದ್ದಲ್ಲ” ಎಂಬ ಕಾಳಿದಾಸನ ತತ್ವ ಇಂದಿಗೂ ಮಾಧ್ಯಮಗಳಿಗೆ ಅನ್ವಯಿಸುತ್ತದೆ. ಜನಪ್ರಿಯತೆಗಿಂತ ಜವಾಬ್ದಾರಿಯುತ ವರದಿಗಾರಿಕೆ ಹಾಗೂ ಜನರಿಗೆ ಸ್ವತಃ ನಿರ್ಣಯಿಸಲು ಅವಕಾಶ ನೀಡುವುದೇ ನಿಜವಾದ ಪತ್ರಿಕೋದ್ಯಮದ ಲಕ್ಷಣ ಎಂದರು.

ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ “ಪತಿಕೋದ್ಯಮ: ಜನಪ್ರಿಯತೆಯೇ ಅಥವಾ ಜವಾಬ್ದಾರಿಯುತವೇ” ಎಂಬ ವಿಷಯದ ಕುರಿತು ಏರ್ಪಡಿಸಲಾಗಿದ್ದ ಚರ್ಚೆಯಲ್ಲಿ ಮಾತನಾಡಿದ ಡೆಕ್ಕನ್ ಹೆರಾಲ್ಡ್ ನ ನಿವೃತ್ತ ಸಹ ಸಂಪಾದಕರಾದ ಎಸ್.ಆರ್. ರಾಮಕೃಷ್ಣ ಅವರು ಮಾತನಾಡಿ “ಹಳೆಯದೆಲ್ಲವೂ ಒಳ್ಳೆಯದಲ್ಲ, ಹೊಸದೆಂಬ ಮಾತ್ರಕ್ಕೆ ಯಾವುದೂ ಕೆಟ್ಟದ್ದಲ್ಲ” ಎಂಬ ಕಾಳಿದಾಸನ ತತ್ವ ಇಂದಿಗೂ ಮಾಧ್ಯಮಗಳಿಗೆ ಅನ್ವಯಿಸುತ್ತದೆ. ಜನಪ್ರಿಯತೆಗಿಂತ ಜವಾಬ್ದಾರಿಯುತ ವರದಿಗಾರಿಕೆ ಹಾಗೂ ಜನರಿಗೆ ಸ್ವತಃ ನಿರ್ಣಯಿಸಲು ಅವಕಾಶ ನೀಡುವುದೇ ನಿಜವಾದ ಪತ್ರಿಕೋದ್ಯಮದ ಲಕ್ಷಣ ಎಂದರು.

ಆಧುನಿಕ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಭರಾಟೆಯ ನಡುವೆಯೂ ಸಾಂಪ್ರದಾಯಿಕ ಮಾಧ್ಯಮಗಳಾದ ಮುದ್ರಿತ ಪತ್ರಿಕೆಗಳು ಹಾಗೂ ಪ್ರತ್ಯೇಕ ವರದಿಗಾರಿಕೆಯ ಮಹತ್ವ ಕಡಿಮೆಯಾಗಿಲ್ಲ. ಪತ್ರಿಕೋದ್ಯಮದಲ್ಲಿ ಜನಪ್ರಿಯತೆ ಮತ್ತು ಜವಾಬ್ದಾರಿ ಒಂದೇ ನಾಣ್ಯದ ಎರಡು ಮುಖಗಳಲ್ಲ. ಅತ್ಯುತ್ತಮ ಪತ್ರಿಕೋದ್ಯಮವು ಜನಪ್ರಿಯವಾಗಿಯೂ ಇರಬಹುದು ಹಾಗೂ ಜವಾಬ್ದಾರಿಯುತವಾಗಿಯೂ ಇರಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಪತ್ರಿಕೋದ್ಯಮದಲ್ಲಿ ಕೇವಲ ಜನಪ್ರಿಯತೆಗಾಗಿಯೇ ಕೆಲಸ ಮಾಡದೇ, ಓದುಗರ ಹಿತಾಸಕ್ತಿ ಹಾಗೂ ತಮ್ಮ ಜವಾಬ್ದಾರಿಯನ್ನು ಕಾಪಾಡಿಕೊಳ್ಳುವ ಮೂಲಕ ನೈಜ ಮಾನವೀಯ ಮೌಲ್ಯಗಳನ್ನು ಬಿಂಬಿಸುವಂತಹ ವರದಿಗಳಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕೆಂದರು.

ಮಾಧ್ಯಮಗಳು ಮೌನಕ್ಕೆ ಶರಣಾಗುವ ಸ್ಥಿತಿ ಉಂಟಾಗಿದೆ – ಪಂಕಜ್ ಪಚೌರಿ

ಈ ವಿಚಾರದಲ್ಲಿ ಪ್ರಧಾನ ಭಾಷಣ ಮಾಡಿದ ಮಾಜಿ ಹಿರಿಯ ವ್ಯವಸ್ಥಾಪಕ ಸಂಪಾದಕರು, ಎನ್.ಡಿ.ಟಿವಿ ಹಾಗೂ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಮಾಜಿ ಸಂವಹನ ಸಲಹೆಗಾರರಾದ ಪಂಕಜ್ ಪಚೌರಿ ಅವರು ಮಾತನಾಡಿ, ರಾಜಕೀಯ ನಾಯಕರು ಅಧಿಕಾರದಲ್ಲಿದ್ದಾಗ ಮಾಧ್ಯಮವನ್ನು ತಮ್ಮ ಪರವಾಗಿ ಬಳಸಿಕೊಳ್ಳಲು ಬಯಸುತ್ತಾರೆ, ಆದರೆ ಅಧಿಕಾರವಿಲ್ಲದಾಗ ಮಾಧ್ಯಮಗಳ ಪರಿಸ್ಥಿತಿ ಭಿನ್ನವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ತಾವು 1984ರಲ್ಲಿ ಪತ್ರಿಕಾ ವೃತ್ತಿಗೆ ಕಾಲಿಟ್ಟಾಗ ಸಮಾಜಕ್ಕೆ ಸೇವೆ ಮಾಡಬೇಕು ಮತ್ತು ಜಗತ್ತನ್ನು ಬದಲಾಯಿಸಬೇಕೆಂಬ ಹಂಬಲವಿತ್ತು. ಯಾವುದೇ ಪತ್ರಿಕಾಗೋಷ್ಠಿಗಳಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯುವುದು ನನ್ನ ಅಭ್ಯಾಸವಾಗಿತ್ತು. ಆದರೆ ಇಂದು ನೂರಾರು ಮಾಧ್ಯಮ ಪ್ರತಿನಿಧಿಗಳು ಒಂದೆಡೆ ಸೇರಿ ಯಾವುದೇ ಪ್ರಶ್ನೆಯನ್ನು ಕೇಳದೆ ಮೌನವಾಗಿರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ದೇಶದ ಜನರು ಯೂಟ್ಯೂಬ್, ಚಾಟ್ ಜಿಪಿಟಿ, ಫೇಸ್ಬುಕ್ ಮತ್ತು ವಾಟ್ಸಾಪ್ ಮುಂತಾದ ವೇದಿಕೆಗಳ ಅತಿ ದೊಡ್ಡ ಬಳಕೆದಾರರಾಗಿದ್ದರೂ, ಆನ್ ಲೈನ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತು ಆದಾಯದ ಶೇ. 84 ರಿಂದ ಶೇ. 96ರಷ್ಟು ಭಾಗವು ಎರಡು ವಿದೇಶಿ ಕಂಪನಿಗಳಿಗೆ ಹೋಗುತ್ತಿರುವುದು ವಿಷಾದದ ಸಂಗತಿ. ದೇಶದ ಪ್ರತಿಯೊಬ್ಬ ನಾಗರಿಕನಿಗೆ ಘನತೆಯ ಜೀವನ, ಶಿಕ್ಷಣ ಮತ್ತು ಉದ್ಯೋಗ ದೊರಕುವವರೆಗೂ ಪತ್ರಿಕೋದ್ಯಮದ ಕೆಲಸ ಪೂರ್ಣಗೊಳ್ಳುವುದಿಲ್ಲ ಎಂದು ಅವರು ಎಚ್ಚರಿಸಿದರು.

ದೇಶದ ಶೇ. 16 ರಿಂದ 80ರಷ್ಟು ಜಿಡಿಪಿ ಒದಗಿಸುವ ಕೃಷಿ ಕ್ಷೇತ್ರಕ್ಕೆ ಪತ್ರಿಕಾರಂಗದಲ್ಲಿ ಕಡಿಮೆ ಪ್ರಾತಿನಿಧ್ಯ ಸಿಗುತ್ತಿದೆ. ಕೆಲವೇ ಕೆಲವು ಮಾಧ್ಯಮ ಸಂಸ್ಥೆಗಳು ಮಾತ್ರ ಕೃಷಿಯನ್ನು ನಿಯಮಿತವಾಗಿ ವರದಿ ಮಾಡುತ್ತವೆ. ಇನ್ನು ಕೃಷಿಯನ್ನು ಕೇವಲ ಹರಿಯಾಣ-ಪಂಜಾಬ್ ನಲ್ಲಿ ಒಟ್ಟು ತ್ಯಾಜ್ಯ ಸುಡುವುದು ಅಥವಾ ದೆಹಲಿಯಲ್ಲಿ ರೈತರು ಹೆದ್ದಾರಿ ತಡೆಯುವಂತಹ ಸಂದರ್ಭಗಳಲ್ಲಿ ಮಾತ್ರ ಅಪರಾಧ ಕಥೆಯಂತೆ ಬಿಂಬಿಸಲಾಗುತ್ತಿದೆ ವಿಷಾದ ವ್ಯಕ್ತಪಡಿಸಿದರು.

ಸಾಮಾಜಿಕ ಹಾಗೂ ನಾಗರಿಕ ಸಮಸ್ಯೆಗಳನ್ನು ಅಪರಾಧ ಘಟನೆಗಳಂತೆ ಬಿಂಬಿಸಲಾಗುತ್ತಿದ್ದು, ಜನರಿಗೆ ಉತ್ತರ ಸಿಗದ ಪರಿಸ್ಥಿತಿ ನಿರ್ಮಾಣವಾಗಿ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದನೆ ಕೊರತೆ ಕಾಣುತ್ತಿದೆ. ನಮ್ಮ ದೇಶವು ಐಟಿ, ಬಾಹ್ಯಾಕಾಶ ಮತ್ತು ಸೇವಾ ವಲಯಗಳಲ್ಲಿ ದೇಶವು ಉತ್ತಮ ಸಾಧನೆ ಮಾಡಿದ್ದರೂ, ಲಕ್ಷಾಂತರ ಜನರು ಕಳಪೆ ಆರೋಗ್ಯ, ಶಿಕ್ಷಣ ವ್ಯವಸ್ಥೆ ಮತ್ತು ಜೀವನಮಟ್ಟದೊಂದಿಗೆ ಬದುಕುತಿರುವ ವಾಸ್ತವವನ್ನು ಮಾಧ್ಯಮಗಳು ಎತ್ತಿಹಿಡಿಯಬೇಕಿದೆ ಎಂದರು.

ಪತ್ರಿಕೋದ್ಯಮಿಗಳು ತಮ್ಮ ಜವಾಬ್ದಾರಿಯನ್ನು ಮರೆಯುತ್ತಿದ್ದಾರೆ – ಸುದರ್ಶನ್ ಚನ್ನಂಗಿಹಳ್ಳಿ

ವಿಜಯ ಕರ್ನಾಟಕ ದಿನಪತ್ರಿಕೆ ಮುಖ್ಯ ಸಂಪಾದಕರಾದ ಸುದರ್ಶನ್ ಚನ್ನಂಗಿಹಳ್ಳಿ ಅವರು ಮಾತನಾಡಿ, ಇಂದಿನ ಪತ್ರಿಕೋದ್ಯಮದಲ್ಲಿ ಜನಪ್ರಿಯತೆಗೆ ಹೆಚ್ಚು ಒಲವನ್ನು ತೋರಿಸಲಾಗುತ್ತಿರುವುದರಿಂದ ಪತ್ರಿಕೋದ್ಯಮಿಗಳು ತಮ್ಮ ಜವಾಬ್ದಾರಿಯನ್ನು ಮರೆಯುತ್ತಿದ್ದಾರೆ. ಪತ್ರಕರ್ತರಾದವರಿಗೆ ಸಾಮಾಜಿಕ ಹೊಣಿಗಾರಿಕೆ ತುಂಬಾ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಇಂದಿನ ಡಿಜಿಟಲ್ ಯುಗದಲ್ಲಿ ಜರ್ನಲಿಸಂ ಎಂದರೆ ಕೇವಲ ಸತ್ಯದ ಹುಡುಕಾಟವಲ್ಲ, ಬದಲಿಗೆ ‘ವೈರಲ್’ ಆಗುವುದು ಮತ್ತು ಜನಪ್ರಿಯತೆ ಗಳಿಸುವುದೇ ಪ್ರಮುಖ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಸಾಂಪ್ರದಾಯಿಕ ಮಾಧ್ಯಮ ರಂಗದ ಹಾದಿ ತಪ್ಪುತ್ತಿದ್ದು, ಪತ್ರಕರ್ತರ ನೈತಿಕ ಜವಾಬ್ದಾರಿ ಮರೆಯಾಗುತ್ತಿದೆ ಎಂದರು.

ಇತ್ತೀಚೆಗೆ ಜನಪ್ರತಿನಿಧಿಗಳು ನೇರವಾಗಿ ಮಾಧ್ಯಮಗಳ ಎದುರು ಮಾತನಾಡುವುದಕ್ಕಿಂತ ಹೆಚ್ಚಾಗಿ ಟ್ವೀಟ್ ಗಳ ಮೂಲಕವೇ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮಾಧ್ಯಮಗಳು ಕೂಡ ಆ ಟ್ವೀಟ್ ಗಳನ್ನೇ ಸುದ್ದಿಯಾಗಿ ಬಿತ್ತರಿಸುತ್ತಿವೆ. ತಂತ್ರಜ್ಞಾನ ಬೆಳೆದಂತೆ ಪತ್ರಕರ್ತರು ಕಚೇರಿಯಲ್ಲೇ ಕುಳಿತು ಸುದ್ದಿ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಮುಖ್ಯಮಂತ್ರಿಗಳು ಅಥವಾ ಮಂತ್ರಿಗಳ ಕಚೇರಿಯ ಸುತ್ತಮುತ್ತ ಅಥವಾ ವಿಧಾನಸೌಧದ ಸುತ್ತ ಓಡಾಡುವುದು ಬಿಟ್ಟರೆ, ರೈತರು, ಕಾರ್ಮಿಕರು ಹಾಗೂ ಜನರ ನಿಜವಾದ ಸಮಸ್ಯೆಗಳ ಬಗ್ಗೆ ಆಳವಾದ ವರದಿ ಮಾಡುವ ಗ್ರೌಂಡ್ ರಿಪೋರ್ಟಿಂಗ್’ ಕಣ್ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ ಅವರು ಪ್ರಾಸ್ತಾವಿಕ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಗೋವಿಂದ ರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಮಂಜುನಾಥ. ಜೆ, ಇಲಾಖೆಯ ಆಯುಕ್ತರಾದ ಶರತ್, (ಅಧಿಕ ಪ್ರಭಾರ), ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿಗಳಾದ ಎನ್. ಎಸ್. ಮಹೇಶ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಸೇರಿದಂತೆ ಹಿರಿಯ ಪತ್ರರ್ತರು, ಪತ್ರಿಕೋದ್ಯಮದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಪದೇ ಪದೆ ಮೂತ್ರ ವಿಸರ್ಜನೆ! ಸಮಸ್ಯೆಯ ಮೂಲ ಏನು? ...

ಹಗಲು-ರಾತ್ರಿ ಎನ್ನದೆ ಪದೇ ಪದೇ ಶೌಚಾಲಯಕ್ಕೆ ಓಡಬೇಕಾಗುವುದು ದಿನನಿತ್ಯದ ಬದುಕಿಗೆ, ನೆಮ್ಮದಿಯ...

Madhu Bangarappa ಕೆಪಿಎಸ್ ಶಾಲೆಗಳ ಉದ್ಘಾಟನೆ ಶೀಘ್ರ ಶಿವಮೊಗ್ಗದಲ್ಲೇ ಏರ್ಪಡಿಸಲಾಗುವುದು- ಮಧು ಬಂಗಾರಪ್ಪ

Madhu Bangarappa ಕೆಪಿಎಸ್ ಶಾಲೆಗಳ ಉದ್ಘಾಟನೆ ಕಾರ್ಯಕ್ರಮ ಶೀಘ್ರದಲ್ಲೇ ಶಿವಮೊಗ್ಗದಲ್ಲಿ ಆಯೋಜಿಸಲಾಗುತ್ತದೆ.ಈ...

Shimul ಸಹಕಾರಿ ರತ್ನ ಪ್ರಶಸ್ತಿ – ನನ್ನ ಜೀವನದ ಸ್ಮರಣೀಯ ಗೌರವ- ವಿದ್ಯಾಧರ್.

Shimul ನನ್ನ ಸಹಕಾರ ಕ್ಷೇತ್ರದ ಸೇವೆ ಮತ್ತು ಕಾರ್ಯವನ್ನು ಗುರುತಿಸಿ ಪ್ರತಿಷ್ಠಿತ...