ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಶಿವಮೊಗ್ಗದ ಅಶೋಕನಗರದಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2026 ಅನ್ನು ನವೆಂಬರ್ 16 ರಿಂದ 18 ರವರೆಗೆ ಆಯೋಜಿಸಲಾಗಿದೆ.
ನವೆಂಬರ್ 16 ರಂದು ಬೆಳಿಗ್ಗೆ 9:00 ಗಂಟೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕರು ಹಾಗೂ ಪದ್ಮಶ್ರೀ ಪುರಸ್ಕೃತ ಶ್ರೀ ಶೇಖರ್ ನಾಯ್ಕ ಎಲ್. ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ ಗೌರವ ರಕ್ಷೆ ಸ್ವೀಕರಿಸಿದರು.
ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ನಿಖಿಲ್ ಬಿ. ಭಾ.ಪೊ.ಸೇ. ಅವರ ನೇತೃತ್ವದಲ್ಲಿ ನಡೆದ ಈ ಉದ್ಘಾಟನಾ ಸಮಾರಂಭದಲ್ಲಿ ಪಥ ಸಂಚಲನ, ಕ್ರೀಡಾ ಜ್ಯೋತಿಯ ಆಗಮನ ಮತ್ತು ಕ್ರೀಡಾಪಟುಗಳ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮಗಳು ಜರುಗಿದವು.
ಮುಂದುವರಿದು, ನವೆಂಬರ್ 18 ರಂದು ಸಂಜೆ 4:00 ಗಂಟೆಗೆ ಸಮಾರೋಪ ಸಮಾರಂಭವು ಪೂರ್ವ ವಲಯ ದಾವಣಗೆರೆಯ ಪೊಲೀಸ್ ಮಹಾನಿರೀಕ್ಷಕರಾದ ಶ್ರೀ ಎನ್. ಸತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅಂದು 100 ಮೀಟರ್ ಓಟ, 100×4 ರಿಲೇ, ಹಗ್ಗ ಜಗ್ಗುವ ಸ್ಪರ್ಧೆ, ಪಥ ಸಂಚಲನ, ರಿಟ್ರೇಟ್ (ಧ್ವಜ ಅವರೋಹಣ) ಹಾಗೂ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದೊಂದಿಗೆ ಕ್ರೀಡಾಕೂಟವು ಸಂಪೂರ್ಣಗೊಳ್ಳಲಿದೆ.
