ಕೆರೆಗೆ ಬಿದ್ದ ಹೋರಿಯನ್ನು ರಕ್ಷಿಸಲು ನೀರಿಗೆ ಇಳಿದ ಯುವಕನೊಬ್ಬ ಕೆಸರಿನಲ್ಲಿ ಕಾಲು ಸಿಲುಕಿ ಮುಳುಗಿ ಮೃತಪಟ್ಟ ಘಟನೆ ಶಿಕಾರಿಪುರ ತಾಲ್ಲೂಕಿನ ಹುಣಸೇಕೊಪ್ಪ ಗ್ರಾಮದ ಸಮೀಪ ನಡೆದಿದೆ.
ಮೃತನನ್ನು 22 ವರ್ಷದ ಅಶ್ರಫ್ ಎಂದು ಗುರುತಿಸಲಾಗಿದೆ. ಕಾರ್ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ಅಶ್ರಫ್, ಹಿತ್ತಲ ಗ್ರಾಮದಲ್ಲಿ ನಡೆದ ಹೋರಿ ಬಿಡುವ ಹಬ್ಬ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದ ವೇಳೆ ಹೋರಿ ಕೆರೆಗೆ ಬಿದ್ದಿದೆ. ನೀರಿನಲ್ಲಿ ಒದ್ದಾಡುತ್ತಿದ್ದ ಹೋರಿಯನ್ನು ರಕ್ಷಿಸಲು ಅಶ್ರಫ್ ಕೆರೆಗೆ ಇಳಿದಿದ್ದಾನೆ. ಈ ವೇಳೆ ಕೆರೆಯ ಕೆಸರಿನಲ್ಲಿ ಆತನ ಕಾಲು ಸಿಲುಕಿಕೊಂಡು ಹೊರಬರಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಜೊತೆಯಲ್ಲಿದ್ದ ಯುವಕರು ರಕ್ಷಣೆಗೆ ಪ್ರಯತ್ನಿಸಿದರೂ ಅಶ್ರಫ್ನನ್ನು ಉಳಿಸಲು ಸಾಧ್ಯವಾಗಲಿಲ್ಲ. ಕುಟುಂಬಕ್ಕೆ ಆಧಾರವಾಗಿದ್ದ ಯುವಕನ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮೃತನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
