ಅಡಿಕೆ ತೋಟದಲ್ಲಿ ಸೋಗೆ ಆರಿಸುತ್ತಿದ್ದ ಮಹಿಳೆಯೊಬ್ಬರಿಗೆ ನಾಗರಹಾವು ಕಚ್ಚಿದ ಪರಿಣಾಮ ಮೃತಪಟ್ಟ ಘಟನೆ ಹೊಸನಗರ ತಾಲೂಕಿನ ನಗರ ಸಮೀಪದ ಕಟ್ಟಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕಟ್ಟಿಕೊಪ್ಪ ಗ್ರಾಮದ ದೊಡ್ಡಿಮನೆಯ ನಿವಾಸಿ ಶ್ರೀಲತಾ (56) ಮೃತಪಟ್ಟ ಮಹಿಳೆ.
ಶ್ರೀಲತಾ ಅವರು ಪತಿಯೊಂದಿಗೆ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕೈಬೆರಳಿಗೆ ನಾಗರಹಾವು ಕಚ್ಚಿದೆ. ತಕ್ಷಣ ಅವರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಮೃತರ ಪತಿ ಡಿ.ವಿ. ನಾಗರಾಜ್ ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
