ಧೈರ್ಯ ಮತ್ತು ಶೌರ್ಯದ ಸಂಕೇತವಾದ ವೀರನಾರಿ ಒನಕೆ ಓಬವ್ವ ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಟಿ. ಹಾಲಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ‘ವೀರವನಿತೆ ಒನಕೆ ಓಬವ್ವ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಸಾಮಾನ್ಯ ಮಹಿಳೆಯೊಬ್ಬಳು ತನ್ನ ಪ್ರದೇಶಕ್ಕೆ ಗಂಡಾಂತರ ಬಂದಾಗ ಏನು ಮಾಡಬಲ್ಲಳು ಎಂಬುದನ್ನು ಓಬವ್ವ ತೋರಿಸಿಕೊಟ್ಟಿದ್ದಾರೆ. ಸರ್ವಸ್ವವನ್ನೂ ತೊರೆದು, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ವಿರೋಧಿ ಸೈನಿಕರನ್ನು ಸದೆಬಡಿದು ಚಿತ್ರದುರ್ಗದ ಕೋಟೆಯನ್ನು ಹೈದರಾಲಿ ಸೈನ್ಯದಿಂದ ರಕ್ಷಿಸಿದ ಆ ಮಹಾತಾಯಿಯ ತ್ಯಾಗವನ್ನು ಸ್ಮರಿಸುವುದು ನಮ್ಮೆಲ್ಲರ ಪರಮ ಕರ್ತವ್ಯವಾಗಿದೆ ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಓಬವ್ವನೇ ಸಾಕ್ಷಿ. 18ನೇ ಶತಮಾನದಲ್ಲಿ ಮಹಿಳೆಯರಿಗೆ ಸಾಮಾನ್ಯ ಹಕ್ಕುಗಳು ಸಹ ಇರಲಿಲ್ಲ. ಅಂತಹ ಕಾಲಘಟ್ಟದಲ್ಲಿ ತನ್ನ ಪತಿ ಊಟಕ್ಕೆ ಕುಳಿತಿದ್ದಾಗ, ಹೈದರಾಲಿ ಸೇನೆಯು ಕೋಟೆಯನ್ನು ರಹಸ್ಯವಾಗಿ ಪ್ರವೇಶಿಸಲು ಪ್ರಯತ್ನಿಸಿತು. ಅದನ್ನು ಕಂಡ ಆಕೆ ಆಗ ಅಂಜುಬುರುಕಳಾಗದೆ ಒಬ್ಬಂಟಿಯಾಗಿ ಎದುರಿಸಿ ನಿಂತವಳು ನಮ್ಮ ಓಬವ್ವ. ಧಾನ್ಯ ಕುಟ್ಟುವ ಒನಕೆಯನ್ನೇ ಆಯುಧವನ್ನಾಗಿ ಮಾಡಿಕೊಂಡು, ಶತ್ರು ಸೈನ್ಯದ ಎದೆ ನಡುಗಿಸಿ ಕೋಟೆಯನ್ನು ಉಳಿಸಿದ ಆಕೆಯ ಸಾಹಸ ಎಲ್ಲರಿಗೂ ಮಾದರಿ. ಹಾಗೂ ಇಡೀ ಭಾರತೀಯ ನಾರೀಶಕ್ತಿಗೆ ದೊಡ್ಡ ಸ್ಪೂರ್ತಿಯಾಗಿದೆ ಎಂದರು.
ಎಲ್ಲ ಹೆಣ್ಣು ಮಕ್ಕಳು ಈ ಇತಿಹಾಸವನ್ನು ತಿಳಿಯಬೇಕು ಹಾಗೂ ಆಕೆ ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು. ಸಮಾಜದಲ್ಲಿನ ಅಂಧವಿಶ್ವಾಸಗಳು ಸಂಹಾರವಾಗಬೇಕು, ಎಲ್ಲರೂ ಸುಶಿಕ್ಷಿತರಾಗಬೇಕು ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆದು ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ವಿಶೇಷ ಉಪನ್ಯಾಸ :
ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟದ ಸ್ನಾತಕೋತ್ತರ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ. ಹಸೀನಾ ಹೆಚ್.ಕೆ. ಅವರು ವಿಶೇಷ ಉಪನ್ಯಾಸ ನೀಡಿ, ಓಬವ್ವ ನಾರೀಶಕ್ತಿಯ ಪ್ರತೀಕವಾಗಿದ್ದು, ಶೌರ್ಯ, ವೀರತನ ಮತ್ತು ಸಾಹಸ ನಮ್ಮ ಹೆಣ್ಣುಮಕ್ಕಳಲ್ಲೇ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಈ ದೇಶದ ಹಾಗೂ ಜಗತ್ತಿನ ಎಲ್ಲಾ ಹೆಣ್ಣುಮಕ್ಕಳಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ ಎಂದರು.
ಕವಿರಾಜಮಾರ್ಗಕಾರರು ಕನ್ನಡಿಗರನ್ನು ‘ಸುಭಟರು ಎಂದು ಬಣ್ಣಿಸಿದ್ದಾರೆ. ‘ಸುಭಟರು’ ಎಂದರೆ ಯಾವುದೇ ಸಂದರ್ಭದಲ್ಲೂ ಶೂರರಾಗಿ ನಿಲ್ಲುವವರು ಎಂದರ್ಥ. ಈ ಮಣ್ಣಿನ ವೀರ ಪರಂಪರೆಯನ್ನು ನೇರವಾಗಿ ಸಾಬೀತುಪಡಿಸಿದ ಮಹಿಳೆ ಒನಕೆ ಓಬವ್ವ. ಪತಿ ಊಟಕ್ಕೆ ಬಂದ ಸಂದರ್ಭದಲ್ಲಿ ನೀರು ತರಲು ಹೋದಾಗ, ಕಾವಲು ಕಿಂಡಿಯ ಮೂಲಕ ಶತ್ರು ಸೈನ್ಯ ಒಳನುಗ್ಗುತ್ತಿರುವುದನ್ನು ಕಂಡ ಓಬವ್ವ, ಕ್ಷಣಮಾತ್ರವೂ ಯೋಚಿಸದೆ ಅಡುಗೆ ಮನೆಯಲ್ಲಿದ್ದ ಒನಕೆಯನ್ನೇ ಶಸ್ತ್ರವನ್ನಾಗಿ ಬಳಸಿ ಶತ್ರು ಸೈನಿಕರ ಸಂಹಾರ ಮಾಡಿದರು. ಪತಿಗೆ ಕಿಂಚಿತ್ತೂ ತಿಳಿಯದಂತೆ ನೂರಾರು ಶತ್ರು ಸೈನಿಕರನ್ನು ಸದೆಬಡಿದ ಆಕೆಯ ಸಮಯಪ್ರಜ್ಞೆ ಮತ್ತು ಧೈರ್ಯ ನಮ್ಮ ಸಂಸ್ಕಾರದ ದೊಡ್ಡ ಮಾರ್ಗಸೂಚಿಯಾಗಿದೆ. ಅವರ ಆದರ್ಶವನ್ನು ಮಾದರಿಯಾಗಿಟ್ಟುಕೊಂಡು ನಾವೆಲ್ಲರೂ ಸಹೋದರ-ಸಹೋದರಿಯರಂತೆ ಬಾಳೋಣ ಎಂದು ಕರೆ ನೀಡಿದರು.
ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ. ಮೈತ್ರಿ ಮಾತನಾಡಿ, ಹೈದರಾಲಿಯ ಸೈನ್ಯ ಕೋಟೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ, ಒಬ್ಬ ಸಾಮಾನ್ಯ ಗೃಹಿಣಿಯಾಗಿ ಅಪಾರ ಧೈರ್ಯ, ದೇಶಪ್ರೇಮ ಮತ್ತು ನಾಡಿನ ರಕ್ಷಣೆಯ ಸಂಕಲ್ಪ ತೊಟ್ಟು ಕೇವಲ ಒಂದು ಒನಕೆಯಿಂದ ಶತ್ರುಗಳನ್ನು ಒಬ್ಬೊಬ್ಬರನ್ನಾಗಿ ಎದುರಿಸಿ ಹೋರಾಡಿದ ಓಬವ್ವನವರ ಸಾಹಸ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ. ಅಂದಿನಿಂದ ಅವರು ‘ಒನಕೆ ಓಬವ್ವ’ ಎಂದೇ ನಮ್ಮ ಮನಸ್ಸುಗಳಲ್ಲಿ ಅಮರರಾಗಿದ್ದಾರೆ ಎಂದರು.
ಧೈರ್ಯಕ್ಕೆ ಲಿಂಗಭೇದವಿಲ್ಲ ಎಂಬ ಸಂದೇಶವನ್ನು ಓಬವ್ವನವರ ಜೀವನ ನೀಡುತ್ತದೆ. ಮಹಿಳೆಯರಿಗೆ ಅವಕಾಶ ಮತ್ತು ಆತ್ಮವಿಶ್ವಾಸ ಸಿಕ್ಕರೆ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಲ್ಲರು ಎಂಬುದಕ್ಕೆ ಅವರೇ ಅತ್ಯುತ್ತಮ ಉದಾಹರಣೆ. ಕಷ್ಟದ ಸಮಯದಲ್ಲಿ ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಂಡರೆ ಎಂತಹ ಫಲಿತಾಂಶ ಸಿಗುತ್ತದೆ ಎಂಬುದನ್ನು ಅವರು ತೋರಿಸಿದ್ದಾರೆ. ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯನ್ನು ನಾವೆಲ್ಲರೂ ಗೌರವಿಸಬೇಕು.
ಮಹಿಳಾ ಸಬಲೀಕರಣದ ಶಕ್ತಿಯಾಗಿರುವ ಓಬವ್ವನವರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವಕಾಶಗಳನ್ನು ಕಲ್ಪಿಸುವುದರ ಜೊತೆಗೆ, ಮಹಿಳೆಯರಿಗೆ ಸುರಕ್ಷತೆ, ಸ್ವಾಭಿಮಾನ ಮತ್ತು ಸ್ವಾವಲಂಬನೆಗೆ ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ಸೇರಿದಂತೆ ವಿವಿಧ ಸಮಾಜ ಹಾಗೂ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಧೈರ್ಯ, ಶೌರ್ಯ ಮತ್ತು ನಾರೀಶಕ್ತಿಯ ಪ್ರತೀಕ ವೀರವನಿತೆ ಒನಕೆ ಓಬವ್ವ: ಎಸ್.ಟಿ. ಹಾಲಪ್ಪ
Date:
