ಶಿವಮೊಗ್ಗ ಜಿಲ್ಲಾ ಪಂಚಾಯತ್ ಕೊಡಚಾದ್ರಿ ಸಭಾಂಗಣದಲ್ಲಿ ಆ.24 ರಂದು ಮಹಾಲೇಖಪಾಲರ ಕಛೇರಿ, ಬೆಂಗಳೂರು ಮತ್ತು ಶಿವಮೊಗ್ಗ ಜಿಲ್ಲಾ ಖಜಾನೆ ಇವರ ಸಹಭಾಗಿತ್ವದಲ್ಲಿ ಪಿಂಚಣಿ ಅದಾಲತ್ ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮದ ಮುಖ್ಯ ಉದ್ದೇಶವು ನಿವೃತ್ತ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಎದುರಿಸಿತ್ತಿರುವ ಪಿಂಚಣಿ ಸಂಬಂಧಿತ ಸಮಸ್ಯೆಗಳು, ಬಾಕಿ ಪಿಂಚಣಿ, ಪರಿಷ್ಕರಣೆ, ಕುಟುಂಬ ಪಿಂಚಣಿ ಸೌಲಭ್ಯಗಳು ಹಾಗೂ ಇತರೆ ಕುಂದುಕೊರತೆಗಳನ್ನು ಆಲಿಸಿ, ಸಾಧ್ಯವಾದಷ್ಟು ಪರಿಹರಿಸುವುದಾಗಿತ್ತು. ಅದಾಲತ್ನಲ್ಲಿ ಪಿಂಚಣಿದಾರರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತಂದರು. ವಿವಿಧ ಇಲಾಖೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳು ಮತ್ತು ನಿಯಮಾವಳಿಗಳ ಆಧಾರದ ಮೇಲೆ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಂಡರು. ಕೆಲವು ಪ್ರಕರಣಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗಿದ್ದು, ಇನ್ನುಳಿದ ಪ್ರಕರಣಗಳನ್ನು ಸಂಬಂಧಿಸಿದ ಕಚೇರಿಗಳಿಗೆ ಕಳುಹಿಸಿ ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಪಿಂಚಣಿದಾರರಿಗೆ ಪಿಂಚಣಿ ಸಂಬಂಧಿತ ವಿಷಯಗಳಲ್ಲಿ ಅಗತ್ಯ ಮಾರ್ಗದರ್ಶನ ನೀಡುವುದರ ಜೊತೆಗೆ, ದಾಖಲೆಗಳ ನಿರ್ವಹಣೆ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಬಾಕಿ ಇರುವ ಪ್ರಕರಣಗಳ ಕುರಿತು ಮಾಹಿತಿ ನೀಡಲಾಯಿತು.
ಬೆಂಗಳೂರು ಮಹಾಲೇಖಪಾಲರು (ಎ & ಇ) ರಾಜೀವ್ ಕುಮಾರ್ ಸಿಂಗ್ ಇವರು ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉಪಮಹಾಲೇಖಪಾಲರಾದಂತಹ ಸಚಿನ್ ಕೃಷ್ಣ ಕೌಶಿಕ್, ಎ ಜಿ ಕಛೇರಿಯ ನಾಗಸೇನಾ ಟಿ ವಿ, ಹಾಜರಿದ್ದರು. ಜಿಲ್ಲಾ ಖಜಾನೆ ಉಪನಿರ್ದೇಶಕಿ ಸಾವಿತ್ರಿ ಹೆಚ್ ಎಸ್ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಪಂ ಮುಖ್ಯಲೆಕ್ಕಾಧಿಕಾರಿ ಶ್ರೀಕಾಂತ್ ಉಪಸ್ಥಿತರಿದ್ದರು. ಪಿಂಚಣಿದಾರರು, ಡಿಡಿಓಗಳು, ಸಿಬ್ಬಂದಿಗಳು, ಖಜಾನೆ ಸಿಬ್ಬಂದಿಗಳು, ನಿವೃತ್ತರ ಸಂಘದ ಪದಾಧಿಕಾರಿಗಳು, ಬ್ಯಾಂಕ್ ವ್ಯವಸ್ಥಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಖಜಾನೆಯ ಅಧಿಕಾರಿ ಅನಿತಾ ಕೆ.ಎಂ. ಸ್ವಾಗತಿಸಿದರು, ಲಕ್ಷ್ಮೀಶ್ ಕಾರ್ಯಕ್ರಮ ನಿರೂಪಿಸಿದರು
ಪಿಂಚಣಿ ಸಮಸ್ಯೆ ,ಬಾಕಿ ಪಿಂಚಣಿ,ಪರಿಷ್ಕರಣೆ,ಕುಟುಂಬ ಪಿಂಚಣಿ ಸೌಲಭ್ಯಗಳ ಬಗ್ಗೆ ಪಿಂಚಣಿ ಅದಾಲತ್ ನಲ್ಲಿ ಪರಿಹಾರಕ್ಕೆ ಸೂಚನೆ.
Date:
