ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಕುಟುಂಬಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಸಮನ್ವಯ ಟ್ರಸ್ಟ್, ಈ ಬಾರಿ ವಿದ್ಯಾನಗರ ಮುಖ್ಯರಸ್ತೆ ನಿವಾಸಿ ಡಾ. ಚಂಪಾ ಮಯೂರ್ ಅವರಿಗೆ ಪರಿಸರ ಕುಟುಂಬ ಪ್ರಶಸ್ತಿ ನೀಡಿ ಅಭಿನಂದಿಸಿದೆ.
ಸಮನ್ವಯ ಟ್ರಸ್ಟ್ ನೇತೃತ್ವ ಹಾಗೂ ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಮಾರ್ಗದರ್ಶನದಲ್ಲಿ ಶಿವಮೊಗ್ಗದ ಜಿಲ್ಲೆಯಲ್ಲಿನ ಪರಿಸರ ಸ್ನೇಹಿ ಕುಟುಂಬಗಳನ್ನು ಗುರುತಿಸಿ ಪರಿಸರ ಪ್ರಶಸ್ತಿ ನೀಡುವ ಮೂಲಕ ಗೌರವಿಸುವ ಕೆಲಸವನ್ನು ಟ್ರಸ್ಟ್ ವತಿಯಿಂದ ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ.
ಡಾ. ಚಂಪಾ ಮಯೂರ್ ಅವರು ಮನೆಯ ಒಳಭಾಗ ಮತ್ತು ಹೊರಭಾಗದಲ್ಲಿ ವಿಶೇಷ ಸಸ್ಯಗಳನ್ನು ಬೆಳೆಸಿ ಅತ್ಯಂತ ಸುಂದರವಾದ ಪರಿಸರ ನಿರ್ಮಿಸಿಕೊಂಡಿದ್ದಾರೆ. ಮನೆ ಆವರಣವನ್ನು ಆಕರ್ಷಕ ಸಸ್ಯವನವನ್ನಾಗಿಸಿ ರೂಪಿಸಿಕೊಂಡಿದ್ದಾರೆ. ಆಯುರ್ವೇದ ಗಿಡಗಳನ್ನು ಬೆಳೆಸುತ್ತಿದ್ದಾರೆ.
ಅಡುಗೆ ಮನೆಯಲ್ಲಿ ಉತ್ಪತ್ತಿ ಆಗುವ ತ್ಯಾಜ್ಯದಲ್ಲಿ ಹಸಿ ಕಸ, ಒಣ ಕಸ ಬೇರ್ಪಡಿಸುವ ಜತೆಯಲ್ಲಿ ಹಸಿ ಕಸದಲ್ಲಿ ಗೊಬ್ಬರ ತಯಾರಿಸಿ ಮನೆಯಲ್ಲಿರುವ ಸಸ್ಯಗಳಿಗೆ ಬಳಸುತ್ತಾರೆ. ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಡಾ. ಚಂಪಾ ಮಯೂರ್ ಅವರು ವಿವಿಧ ಸಂಘ ಸಂಸ್ಥೆಗಳ ಜತೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಮನೆಯ ಎಲ್ಲ ಸದಸ್ಯರಿಗೂ ಪರಿಸರದ ಬಗ್ಗೆ ವಿಶೇಷ ಪ್ರೀತಿ ಇದೆ. ಡಾ. ಚಂಪಾ ಮಯೂರ್ ಅವರ ಪರಿಸರ ಕಾಳಜಿ ಗುರುತಿಸಿ ಸಮನ್ವಯ ಟ್ರಸ್ಟ್ ಪರಿಸರ ಪ್ರಶಸ್ತಿ ನೀಡಿ ಅಭಿನಂದಿಸಿದೆ. ಸಮನ್ವಯ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ನೇತೃತ್ವದ ತಂಡವು ಪರಿಸರ ಸ್ನೇಹಿ ಕುಟುಂಬಗಳನ್ನು ಗುರುತಿಸಿ ಗೌರವಿಸುವ ವಿಶೇಷ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದೆ. ಪರಿಸರದ ಕಾಳಜಿಯನ್ನು ಮನೆಮನೆಗೆ ತಲುಪಿಸುವ ಆಶಯದಿಂದ ರಾಜ್ಯದಲ್ಲಿಯೇ ನಡೆಸುತ್ತಿರುವ ವಿಶೇಷ ಪ್ರಯತ್ನ ಇದಾಗಿದೆ.
ಉಪವಿಭಾಗಾಧಿಕಾರಿ ಸತ್ಯನಾರಾಯಣ ಅವರು ಪರಿಸರ ಕುಟುಂಬ ಪ್ರಶಸ್ತಿಯನ್ನು ಡಾ. ಚಂಪಾ ಮಯೂರ್ ಅವರಿಗೆ ನೀಡಿ ಗೌರವಿಸಿದರು. ಸಮನ್ವಯ ಟ್ರಸ್ಟ್ ನ ಸಮನ್ವಯ ಕಾಶಿ, ಸ್ಮಿತಾ, ಯತೀಶ್ ಮತ್ತಿತರರು ಇದ್ದರು.
ಡಾ.ಚಂಪಾ ಮಯೂರ್ ಅವರಿಗೆ “ಪರಿಸರ ಕುಟುಂಬ” ಪ್ರಶಸ್ತಿ
Date:
