ಸ್ವಾತಂತ್ರ್ಯ ಎಂದರೆ ಮನಬಂದಂತೆ ವರ್ತಿಸುವುದಲ್ಲ. ನೈತಿಕತೆ, ಸಾಮಾಜಿಕ ಜವಾಬ್ದಾರಿ ಹಾಗೂ ಕಾನೂನಿನ ಮಿತಿಗಳನ್ನು ಅರಿತು ಪಾಲಿಸುವುದೇ ನಿಜವಾದ ಸ್ವಾತಂತ್ರ್ಯ ಎಂದು ಮಿತ್ರೆ ಕಾಸ್ಮೋ ಕ್ಲಬ್ ಮಹಿಳಾ ಬಳಗದ ಅಧ್ಯಕ್ಷೆ ಶ್ರೀರಂಜಿನಿ ದತ್ತಾತ್ರಿ ಹೇಳಿದರು.
ಶಿವಮೊಗ್ಗನಗರದ ಪವಿತ್ರ ತುಂಗಾ ತಟದಲ್ಲಿರುವ ಗಂಗಾ ಪರಮೇಶ್ವರಿ ದೇವಾಲಯದ ಹೆಬ್ಬಾಗಿಲಿನಲ್ಲಿ ಮಿತ್ರೆ ಕಾಸ್ಮೋ ಕ್ಲಬ್ ಮಹಿಳಾ ಬಳಗದ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧ ಹಕ್ಕು” ಎಂದು ಬಾಲಗಂಗಾಧರ ತಿಲಕರು ಸಾರಿದ್ದಾರೆ. ಆದರೆ ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು. ಮಿತಿಯಿಲ್ಲದ ಸ್ವೇಚ್ಛಾಚಾರ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ. ಆದ್ದರಿಂದ ಜವಾಬ್ದಾರಿಯುತ ಸ್ವಾತಂತ್ರ್ಯವನ್ನು ಅಳವಡಿಸಿಕೊಂಡು ವಿಕಸಿತ ಭಾರತದ ನಿರ್ಮಾಣದತ್ತ ಪ್ರತಿಯೊಬ್ಬರೂ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಜಾತಿ, ಧರ್ಮ, ಭಾಷೆಯ ಎಲ್ಲ ಭೇದಗಳನ್ನು ಮೀರಿ ಒಗ್ಗಟ್ಟಿನ ಸಂದೇಶ ಸಾರುವ ದೇಶ ಭಾರತ. ದೇಶದ ಪ್ರಜೆಗಳು, ವಿಶೇಷವಾಗಿ ಮಹಿಳೆಯರು ಮತ್ತು ಯುವಜನರು, ಸ್ವಾತಂತ್ರ್ಯದ ಮೂಲತತ್ವಗಳನ್ನು ಎತ್ತಿಹಿಡಿಯುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವ ಸಂಕಲ್ಪ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಮಾಜದ ಮುಖಂಡ ಶ್ರೀ ದೀನ್ ದಯಾಳ್ ಅವರು ಭಾರತ ಮಾತೆಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ, ಬ್ರಿಟಿಷರ ದಾಸ್ಯದಿಂದ ಮುಕ್ತವಾದ ಭಾರತ ಇಂದು 80ನೇ ವಸಂತದತ್ತ ಸಾಗುತ್ತಿರುವುದು ಐತಿಹಾಸಿಕ ಮೈಲಿಗಲ್ಲು ಎಂದರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ ವಿಕಸಿತ ಭಾರತದ ನಿರ್ಮಾಣಕ್ಕೆ ಸಂಕಲ್ಪ ಮಾಡಿ, ಈ ಉತ್ಸವದ ಸ್ಫೂರ್ತಿಯನ್ನು ವರ್ಷಪೂರ್ತಿ ಮುಂದುವರಿಸಬೇಕು ಎಂದು ಹೇಳಿದರು.
ಪವಿತ್ರ ತುಂಗಾ ತಟದಲ್ಲಿ ಮಿತ್ರೆ ಕಾಸ್ಮೋ ಕ್ಲಬ್ ಮಹಿಳಾ ಬಳಗವು ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ಸಮಾಜದ ಮತ್ತಷ್ಟು ಮಹಿಳೆಯರು ಇಂತಹ ಸಾವಿರಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೇಶಭಕ್ತಿ ಹಾಗೂ ಸಾಮಾಜಿಕ ಜಾಗೃತಿಯನ್ನು ಬೆಳೆಸಬೇಕು ಎಂದರು.
ಭಾರತ ಇಂದು ಜಾಗತಿಕ ನಾಯಕತ್ವದತ್ತ ಮುನ್ನಡೆಯುತ್ತಿದ್ದು, ಆಂತರಿಕ ಯೋಜನೆಗಳು, ಆರ್ಥಿಕ ಪ್ರಗತಿ, ಯುವಶಕ್ತಿಯ ನಾವೀನ್ಯತೆ, ಮೇಕ್ ಇನ್ ಇಂಡಿಯಾ ಹಾಗೂ ಡಿಜಿಟಲ್ ಕ್ರಾಂತಿಯಂತಹ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ. ಈ ಎಲ್ಲ ಬೆಳವಣಿಗೆಗಳು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿ ಎಂದು ಅವರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಿತ್ರೆಯರೆಲ್ಲರೂ ಸೇರಿ ದೇಶಭಕ್ತಿ ಗೀತೆಗಳನ್ನು ಹಾಡಿದರು. ‘ಶಿವಸುಂದರ ಭಾರತ’, ‘ಪುಣ್ಯ ನೆಲ’, ‘ಹಿಮದ ಮುಕುಟವ ಧರಿಸಿ ಶಿರದಲಿ ಮೆರೆಯುತಿಹಳು ಭಾರತೀ’, ‘ಜಯತು ಜನನೀ ಜನ್ಮಭೂಮಿ ಪುಣ್ಯ ಭುವನಂ ಭಾರತಂ’ ಸೇರಿದಂತೆ ವಿವಿಧ ಗೀತೆಗಳ ಗಾಯನ ನಡೆಯಿತು. ಬಳಿಕ ‘ವಂದೇ ಮಾತರಂ’ ಹಾಗೂ ರಾಷ್ಟ್ರಗೀತೆ ‘ಜನಗಣಮನ’ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಗೌರವ ಸಲ್ಲಿಸಲಾಯಿತು.
ಸಮಾಜಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಶ್ರೀ ದೀನ್ ದಯಾಳ್ ಅವರನ್ನು ಮಿತ್ರೆ ಕಾಸ್ಮೋ ಕ್ಲಬ್ ಮಹಿಳಾ ಬಳಗದ ವತಿಯಿಂದ ಗೌರವಿಸಲಾಯಿತು.
ಕಾರ್ಯದರ್ಶಿಗಳಾದ ದೀಪಾ ಶ್ರೀನಿವಾಸ್ ಹಾಗೂ ಹೇಮಾ ಸತೀಶ್, ಸದಸ್ಯರಾದ ಮನುಪ್ರೀತಂ, ಲತಾ ಶಂಕರ್, ದೀಪಾ ಮಂಜುನಾಥ್, ಸುಧಾ ಬೆನಕಪ್ಪ, ನಿವೇದಿತಾ ನವುಲೆ, ಲಕ್ಷ್ಮೀ ಶ್ರೀನಿವಾಸ್, ಭಾವನಾ, ವಿನುತಾ ನಾಯಕ್, ಡಾ. ಸಮತಾ, ಗೀತಾ ಮಂಜಪ್ಪ ಹಾಗೂ ಶ್ರೀಲತಾ ಪ್ರಭು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶಭಕ್ತಿ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸಿಹಿ ವಿತರಿಸಲಾಯಿತು.
