ಶಿವಮೊಗ್ಗ ಲೋಕಸಭಾ ಕ್ಷೇತ್ರದ ರೈಲ್ವೆ ಯೋಜನೆಗಳು ಹಾಗೂ ಬೈಂದೂರು ಭಾಗದ ಪ್ರಯಾಣಿಕರ ಪ್ರಮುಖ ಬೇಡಿಕೆಗಳ ಕುರಿತು ಸಂಸದ ಬಿ.ವೈ. ರಾಘವೇಂದ್ರ ಅವರು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಶ್ರೀಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅನುಕೂಲವಾಗುವಂತೆ ಮೂಕಾಂಬಿಕಾ ರಸ್ತೆ (ಬೈಂದೂರು) ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆ ಕಲ್ಪಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.
ಇದರ ಜೊತೆಗೆ ಮಡಗಾಂವ್–ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಬೈಂದೂರಿನಲ್ಲಿ ನಿಲುಗಡೆ, ಮತ್ಸ್ಯಗಂಧಾ ಎಕ್ಸ್ಪ್ರೆಸ್ ಹಾಗೂ ಪಂಚಗಂಗಾ ಎಕ್ಸ್ಪ್ರೆಸ್ಗೆ ಸೇನಾಪುರದಲ್ಲಿ ನಿಲುಗಡೆ ಮತ್ತು ಮಂಗಳೂರು ಸೆಂಟ್ರಲ್–ಮಡಗಾಂವ್ MEMU ಎಕ್ಸ್ಪ್ರೆಸ್ಗೆ ಬಿಜೂರಿನಲ್ಲಿ ನಿಲುಗಡೆ ನೀಡುವಂತೆ ಮನವಿ ಮಾಡಿದರು.
ಬೈಂದೂರು ಭಾಗದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗುವಂತೆ ಇತರೆ ಪ್ರಮುಖ ರೈಲುಗಳಿಗೂ ನಿಲುಗಡೆ ಕಲ್ಪಿಸುವಂತೆ ಸಂಸದರು ಒತ್ತಾಯಿಸಿದರು.
ಬೈಂದೂರಿನಲ್ಲಿ ಹೆಚ್ಚಿನ ರೈಲುಗಳಿಗೆ ನಿಲುಗಡೆ ದೊರೆತರೆ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸುಗಮ ಪ್ರಯಾಣದ ಜೊತೆಗೆ ಕರಾವಳಿ ಭಾಗದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಸಂಸದರ ಮನವಿಗಳನ್ನು ಆಲಿಸಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಭಕ್ತರು, ಪ್ರಯಾಣಿಕರು ಹಾಗೂ ಬೈಂದೂರು–ಕೊಲ್ಲೂರು ಭಾಗದ ಸಮಗ್ರ ಅಭಿವೃದ್ಧಿಗೆ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
