Madhu Bangarappa ತೀರ್ಥಹಳ್ಳಿಯಲ್ಲಿ ಭೂಕುಸಿತದಿಂದ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಹತ್ವದ ಹೇಳಿಕೆ ನೀಡಿದ್ದಾರೆ. ಭೂಕುಸಿತದಿಂದ ಹಾನಿಗೊಳಗಾದ ಕುಟುಂಬಗಳಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿರುವ ಸಚಿವರು, ಸಂತ್ರಸ್ತರಿಗೆ ನಿವೇಶನದ ಜೊತೆಗೆ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ. ಇದೇ ವೇಳೆ, ಭೂಕುಸಿತ ಹಾಗೂ ಹುಲಿಕಲ್ ಘಾಟಿ ಕುಸಿತ ಪ್ರಕರಣಗಳ ಕುರಿತು ಎಫ್‌ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿದ್ದಾರೆ.
ತೀರ್ಥಹಳ್ಳಿಯಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ ಭೂಕುಸಿತದಲ್ಲಿ ಮೂವರು ಮೃತಪಟ್ಟಿದ್ದರು. ಮೃತರು ಕೂಲಿ ಕೆಲಸಕ್ಕಾಗಿ ಈ ಪ್ರದೇಶಕ್ಕೆ ಬಂದಿದ್ದವರು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಭೂಕುಸಿತದಿಂದ ಕೆಲವು ಮನೆಗಳಿಗೂ ಹಾನಿಯಾಗಿದ್ದು, ಅಪಾಯದ ಪ್ರದೇಶದಲ್ಲಿರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸಲು ಈಗಾಗಲೇ ನೋಟಿಸ್ ನೀಡಲಾಗಿದೆ. ಮುಂದೆ ಇಂತಹ ಅನಾಹುತಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ತಿಳಿಸಿರುವ ಮಧು ಬಂಗಾರಪ್ಪ, ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ಹೆಚ್ಚಿನ ಪರಿಹಾರ ದೊರಕಿಸಿಕೊಡಲು ಮನವಿ ಮಾಡುವುದಾಗಿ ಹೇಳಿದ್ದಾರೆ.
ಅಪಾಯದ ಪ್ರದೇಶದಲ್ಲಿ ಸಂತ್ರಸ್ತರು ಮತ್ತೆ ವಾಸಿಸಲು ಸಾಧ್ಯವಿಲ್ಲ. ಹೀಗಾಗಿ ಅವರಿಗೆ ನಿವೇಶನ ಒದಗಿಸುವುದರ ಜೊತೆಗೆ ಮನೆ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡಲು ಪ್ರಯತ್ನಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಇದರ ಜೊತೆಗೆ, ತಾವು ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ನೆರವು ನೀಡುವುದಾಗಿ ತಿಳಿಸಿದ್ದಾರೆ. ಸ್ಥಳೀಯ ಯುವಕರೂ ಕೂಡ ಸಂತ್ರಸ್ತರಿಗೆ ಐದು ಲಕ್ಷ ರೂಪಾಯಿ ನೆರವು ನೀಡಲು ಮುಂದಾಗಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಸದ್ಯಕ್ಕೆ ಸಂತ್ರಸ್ತರು ಬಾಡಿಗೆ ಮನೆಯಲ್ಲಿ ವಾಸಿಸಲು ಅಗತ್ಯವಿರುವ ಬಾಡಿಗೆ ಹಣವನ್ನು ಒದಗಿಸಲು ಕೂಡ ಪ್ರಯತ್ನಿಸಲಾಗುತ್ತಿದೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.
ಭೂಕುಸಿತ ಪ್ರಕರಣದಲ್ಲಿ ಎಫ್‌ಐಆರ್‌ಗೆ ಸೂಚನೆ
ಇನ್ನು ತೀರ್ಥಹಳ್ಳಿ ಭೂಕುಸಿತ ಪ್ರಕರಣ ಹಾಗೂ ಹುಲಿಕಲ್ ಘಾಟಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ವಿಚಾರವೂ ಪ್ರಸ್ತಾಪವಾಗಿದೆ.
Madhu Bangarappa ಹುಲಿಕಲ್ ಘಾಟಿಗೆ ಈ ಹಿಂದೆ ಭೇಟಿ ನೀಡಿದ್ದ ಸಂದರ್ಭದಲ್ಲೇ ಎಫ್‌ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಸಚಿವರು ಹೇಳಿದ್ದಾರೆ. ಇಂತಹ ಘಟನೆಗಳಲ್ಲಿ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ತಪ್ಪಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ, ಕೂಡಲೇ ಎಫ್‌ಐಆರ್ ದಾಖಲಿಸುವಂತೆ ಸೂಚನೆ ನೀಡುವುದಾಗಿ ಮಧು ಬಂಗಾರಪ್ಪ ಹೇಳಿದ್ದಾರೆ. ಕಾನೂನುಬದ್ಧವಾಗಿ ಯಾರ ವಿರುದ್ಧ ಪ್ರಕರಣ ದಾಖಲಾಗಬೇಕೋ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಎಫ್‌ಐಆರ್ ದಾಖಲಿಸಲು ಇಷ್ಟು ದಿನ ಏಕೆ ವಿಳಂಬವಾಯಿತು ಎಂಬುದರ ಬಗ್ಗೆಯೂ ತನಿಖೆ ನಡೆಸುವಂತೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ.
ಜೆಡಿಎಸ್ ಪಾದಯಾತ್ರೆ ವಿಚಾರ
ಇನ್ನು ಬಿಡದಿಯಿಂದ ಬೆಂಗಳೂರಿಗೆ ಜೆಡಿಎಸ್ ಪಾದಯಾತ್ರೆ ನಡೆಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಚಿವ ಮಧು ಬಂಗಾರಪ್ಪ, “ಪ್ರತಿಪಕ್ಷದವರು ಅವರ ಕೆಲಸವನ್ನು ಮಾಡಲಿ” ಎಂದು ಹೇಳಿದ್ದಾರೆ.
ಸಚಿವರಿಗೆ ಖಾತೆ ಹಂಚಿಕೆ ವಿಚಾರ
ಹೊಸ ಸಚಿವರಿಗೆ ಖಾತೆ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಯಾವುದೇ ಖಾತೆ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವುದಾಗಿ ಹೇಳಿದ್ದಾರೆ.
“ನಾನು ಶಾಲೆಗೆ ಸೇರುತ್ತೇನೋ, ಕಾಲೇಜಿಗೆ ಸೇರುತ್ತೇನೋ ಗೊತ್ತಿಲ್ಲ. ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಶಾಲೆಯಲ್ಲಿ ಈಗಾಗಲೇ 99 ಪರ್ಸೆಂಟ್ ತೆಗೆದುಕೊಂಡು ತೇರ್ಗಡೆಯಾಗಿದ್ದೇನೆ“ ಎಂದು ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ.
ಖಾತೆ ಹಂಚಿಕೆ ಕುರಿತು ನಾಳೆ ಎಲ್ಲವೂ ತೀರ್ಮಾನವಾಗಲಿದೆ. ಈಗಾಗಲೇ ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಂಡಿದ್ದು, ಅಲ್ಲಿಂದಲೇ ಅಂತಿಮ ತೀರ್ಮಾನವಾಗಲಿದೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.
