Sunday, July 26, 2026
Sunday, July 26, 2026

Samarth Ramdas”ಸಾತ್ವಿಕ ಹೃದಯಿ” ಸಮರ್ಥ ರಾಮದಾಸರು. ಲೇ; ಪ್ರಸಾದ್ ಶ್ರೀವತ್ಸ, ದಾವಣಗೆರೆ.

Date:

Samarth Ramdas ಜಾಂಬ ಎಂಬ ಪುಟ್ಟ ಹಳ್ಳಿ ಔರಂಗಾಬಾದ್‌ ಜಿಲ್ಲೆಯಲ್ಲಿದೆ. ಅಲ್ಲಿ ಸುಮಾರು ವರ್ಷಗಳ ಹಿಂದೆ ಸೂರ್ಯಾಜಿ ಪಂತನೆಂಬ ಯಜುರ್ವೇದೀಯ ಬ್ರಾಹ್ಮಣರಿದ್ದರು. ಶ್ರೀರಾಮಚಂದ್ರನ ಪರಮಭಕ್ತರಾದ ಇವರು ಪ್ರತಿದಿನವೂ 1000 ಸೂರ್ಯನಮಸ್ಕಾರ ಮಾಡುವ ಅಭ್ಯಾಸದವರು. ಇದರಂತೆ ನಡೆಯುತ್ತಿರುವಾಗ ಒಮ್ಮೆ ಸಾಕ್ಷಾತ್‌ ಸೂರ್ಯನೇ ಒಬ್ಬ ವೃದ್ಧನ ವೇಷದಲ್ಲಿ ಪ್ರಕಟವಾಗಿ ಶ್ರೀರಾಮ, ಲಕ್ಷ್ಮಣ ಮತ್ತು ಸೀತಾದೇವಿಯರ ವಿಗ್ರಹಗಳನ್ನು ನೀಡಿ, “ಪಂತ, ನಿನಗೆ ಇಬ್ಬರು ಗಂಡು ಮಕ್ಕಳಾಗುತ್ತಾರೆ ಅವರಲ್ಲಿ ಒಬ್ಬನು ನಿನ್ನ ವಂಶೋದ್ಧಾರಕನಾದರೆ, ಇನ್ನೊಬ್ಬನು ಲೋಕೋದ್ಧಾರಕ್ಕಾಗಿ ಸಂನ್ಯಾಸಿಯಾಗುತ್ತಾನೆ”ಎಂದು ವರ ನೀಡಿದನು. ಅದರಂತೆ ಖುಷಿಗೊಂಡು ಮನೆಗೆ ಬಂದು ಪತ್ನಿಗೆ ನಡೆದುದನ್ನು ಸವಿವರವಾಗಿ ಹೇಳಿದನು. ಹೀಗೇ ದಿನಗಳು ಕಳೆಯಲು ಸೂರ್ಯಾಜಿ ಮತ್ತು ರಾಣೂಬಾಯಿ ದಂಪತಿಗಳ ದ್ವಿತೀಯ ಪುತ್ರರಾಗಿ ಇವರ ಜನನವಾಗುತ್ತದೆ. 1608 ರ ಕೀಲಕ ನಾಮ ಸಂವತ್ಸರದ, ಚೈತ್ರ ಶುದ್ಧ ನವಮಿಯಂದು ಜನಿಸಿದ ಬಾಲಕನು ಈ ಲೋಕೋದ್ಧಾರಕ್ಕಾಗಿ ಪಣತೊಟ್ಟು ಸಂನ್ಯಾಸಿಯಾಗಿ ಮುಂದೆ ಸಮರ್ಥ ರಾಮದಾಸನೆನಿಸಿಕೊಳ್ಳುತ್ತಾನೆ. ಈ ಹುಡುಗನ ಪೂರ್ವದ ಹೆಸರು ನಾರಾಯಣ ಎಂಬುದಾಗಿತ್ತು.
ನಾರಾಯಣನು ತುಂಬಾ ತುಂಟ, ಹಾಗೂ ಚಾಣಾಕ್ಷನಾಗಿದ್ದನು. ಎಲ್ಲದರಲ್ಲಿ ಮೊದಲನೇ ನಂಬರು, ಓದುವುದರಲ್ಲಿ ಕೇವಲ ಕೆಲವೇ ದಿನಗಳಲ್ಲಿ ಮಾಸ್ತರ ಹತ್ತಿರವಿದ್ದ ಎಲ್ಲ ವಿದ್ಯೆಗಳೂ ಮುಗಿದವು, ಹೀಗಿರುತ್ತಿರುವಾಗ 7ನೇ ವಯಸ್ಸಿನ ಹುಡುಗ ನಾರಾಯಣ ಅವನ ತಂದೆ ಸೂರ್ಯಾಜಿಯನ್ನು ಕಳೆದುಕೊಳ್ಳುತ್ತಾನೆ. ನಂತರ ಸಂಸಾರದ ಜವಾಬ್ದಾರಿ ನಾರಾಯಣನ ಅಣ್ಣ ಗಂಗಾಧರನದ್ದೇ ಆಯಿತು. ತುಂಟ ನಾರಾಯಣನು ಯಾವಾಗಲೂ ಆಟಗಳಲ್ಲಿಯೇ ಕಾಲಕಳೆಯುತ್ತಿರುವಾಗ ಒಮ್ಮೆ ತಾಯಿಯು ಹೇಳುತ್ತಾರೆ “ಮಗೂ, ನೀನು ನಿನ್ನ ಅಣ್ಣನನ್ನು ನೋಡು,ಸಂಸಾರಕ್ಕಾಗಿ ಎಷ್ಟು ಕಷ್ಟಪಡುತ್ತಾನೆ, ನೀನೂ ಸಹಾ ಸಂಸಾರದ ಜವಾಬ್ದಾರಿ ಹೊರಬೇಕು”ಇದನ್ನು ಕೇಳಿದ ನಾರಾಯಣ ಅಲ್ಲಿಂದ ಎದ್ದು ಹೊರಟು ಹೋಗಿ ಒಂದು ಕತ್ತಲು ಕೋಣೆಯಲ್ಲಿ ಕುಳಿತುಬಿಟ್ಟ. ಎರಡು ಮೂರು ದಿನಗಳಕಾಲ ಅಲ್ಲಿಂದ ಕದಲಲಿಲ್ಲ, ನಂತರ ತಾಯಿ ಗಾಬರಿಗೊಂಡು ಹೋಗಿ ಏನು ಮಾಡುತ್ತಿದ್ದೆ ಎಂದು ಕೇಳಲು “ಜಗತ್ತೆಂಬ ಸಂಸಾರದ ಬಗ್ಗೆ ಯೋಚಿಸುತ್ತಿದ್ದೆ”ಎಂದು ಹೇಳುತ್ತಾನೆ. ತಾಯಿಗೆ ಏನೂ ಅರ್ಥವಾಗುವುದಿಲ್ಲ ಸುಮ್ಮಾನಾದರು.
ಆಗಿನ ಕಾಲ ಬಾಲ್ಯವಿವಾಹ ನಡೆಯುತ್ತಿದ್ದ ದಿನಗಳು, ನಾರಾಯಣನಿಗೆ ವಯಸ್ಸು 12 ಆಯ್ತು. ಮದುವೆ ನಿಶ್ಚಯ ಮಾಡಿದರು ಹಾಗೂ ವಿವಾಃದ ದಿನ ಪುರೋಹಿತರು ಹೇಳಿದರು “ಸುಮುಹೂರ್ತಾಸ್ಸಾವಧಾನ ಸುಲಗ್ನಾಸ್ಸಾವಧಾನ ಶ್ರೀ ಲಕ್ಷ್ಮೀನಾರಾಯಣ ಧ್ಯಾನ ಸಾವಧಾನ”. ನಾರಾಯಣನ ಕಿವಿ ನೆಟ್ಟಗಾಗಿ ಮತ್ತೆ ಮತ್ತೆ ಕೇಳಿ ಅದರ ಅರ್ಥವೇನೆಂದು ಕೇಳುತ್ತಾನೆ ಅದಕ್ಕೆ ಪುರೋಹಿತರು “ಈಗ ನೀನು ಸಂಸಾರದ ಬಂಧನದಲ್ಲಿ ಬೀಳುತ್ತಿರುವೆ ಎಚ್ಚರ, ಇದರಿಂದ ನೀನು ಹಿಂಸೆಪಡಬಹುದು ಎಚ್ಚರ, ಈ ಸಂಸಾರದ ನೋವುಗಳಿಂದ ಹೊರಬರಲು ನೀನು ನಾರಾಯಣ ಸ್ಮರಣೆಯನ್ನು ಮಾಡು”ಎಂದರ್ಥ ಎಂದರು. ಅದನ್ನು ಕೇಳಿದವನೇ ನಾರಾಯಣ ಎದ್ದು ಯಾರ ಕೈಗೂ ಸಿಗದಂತೆ ಓಡಿಹೋಗಿಬಿಡುತ್ತಾನೆ. ಹಿಂದೆ ಎಷ್ಟು ಜನರು ಅವನನ್ನು ಹಿಡಿಯಲು ಹೊರಟರೂ ಸಹಾ ಕೈಗೆ ಸಿಗಲಿಲ್ಲ. ಅಲ್ಲಿಂದ ಹೊರಟ ನಾರಾಯಣ 160 ಕಿ.ಮೀ.ದೂರದ ಪಂಚಚಟಿಗೆ ಬಂದು ಶ್ರೀರಾಮನ ಉಪಾಸನೆ ಮಾಡಲುತೊಡಗಿದನು. 12 ವರ್ಷದ ಬಾಲಕ ಹೇಗೆ ಸಾಧನೆಯನ್ನು ಮಾಡಿದನೆಂದರೆ 13 ಕೋಟಿ ರಾಮನಾಮ ಜಪವನ್ನು ಮಾಡತೊಡಗಿದನು. ಪಂಚವಟಿಯಲ್ಲಿ ಟಾಕಳಿ/ತಾಕಲಿ ಎಂಬ ನಿರ್ಜನ ಪ್ರದೇಶವೊಂದಿತ್ತು ಅಲ್ಲಿ ನದಿಯಲ್ಲಿ ಸ್ನಾನಮಾಡಿ, ಪ್ರತಿದಿನ 30000 ಜಪ ಮಾಡಬೇಕು ನಂತರ 1-2 ಮನೆಯಲ್ಲಿ ಮಧುಕರಿ ಬೇಡಿ ಅದನ್ನು ಬಟ್ಟೆಯಲ್ಲಿ ಕಟ್ಟಿ ನದಿಯ ನೀರಿನಲ್ಲಿ ಅದರ ಸಾರ ಹೋಗುವವರೆಗೆ ತೋಯಿಸಬೇಕು, ನಂತರ ಅದು ನೀರಸವಾದಮೇಲೆ ತಿನ್ನಬೇಕು, ಆಮೇಲೆ ಉಪನಿಷತ್‌, ವೇದಾಂತ ಮುಂತಾದ ಅಭ್ಯಾಸ ಮಾಡಬೇಕು, ರಾತ್ರಿ ಮತ್ತೆ ಧ್ಯಾನ ಪೂಜೆ ಜಪಗಳಲ್ಲಿ ಕಾಲಹರಣಮಾಡಬೇಕು ಹೀಗೆ 12 ವರ್ಷಗಳಕಾಲ ತಪಸ್ಸಾಚರಿಸಿದರು. ಮುಂದೆ ರಾಮನಾಮದ ನಿರಂತರ ಅನುಸಂಧಾನದಿಂದ ಅವರ ಸರ್ವಾಂಗವೂ ರಾಮನಾಮದಿಂದ ತುಂಬಿಹೋಯಿತು. ಈ 12 ವರ್ಷಗಳಲ್ಲಿ ಶ್ರೀರಾಮನ ಅನುಗ್ರಹದಿಂದ ಹಲವಾರು ಸಿದ್ಧಿಗಳು ಇವರ ವಶವಾದವು. ರಾಮನ ಸಂಪೂರ್ಣ ಅನುಗ್ರಹವಾಗಿ ಒಂದು ದಿನ ರಾಮನ ಪ್ರೇರಣೆಯಂತೆ ನಿತ್ಯವೂ ಪಂಚವಟಿಯಲ್ಲಿ ರಾಮಾಯಣವನ್ನು ಉಪನ್ಯಾಸ ಮಾಡಹತ್ತಿದರು, ಆ ಉಪನ್ಯಾಸಕ್ಕೆ ಜನರು ತಂಡೋಪತಂಡವಾಗಿ ಬರುತ್ತಿದ್ದರು ಹಾಗೂ ಶ್ರೀರಾಮನ ದಿವ್ಯ ಚರಿತ್ರೆಯನ್ನು ಕೇಳಿ ಪುಳಕಿತರಾಗಿ ಹಿಂತಿರುತ್ತಿದ್ದರು, ಆಗಿನಿಂದ ನಾರಾಯಣ ಸಮರ್ಥ ರಾಮದಾಸರಾಗಿರುತ್ತಾರೆ. ಹೀಗಿರುವಾಗ ಶಿವಾಜಿಯ ತಂದೆ ಶಹಾಜಿಯೂ ಒಮ್ಮೆ ಬಂದು ಸಮರ್ಥರ ದರ್ಶನವನ್ನು ಪಡೆಯುತ್ತಾನೆ, ಇದರ ನಂತರ ಸಮರ್ಥರಿಗೆ ತೀರ್ಥಾಟನೆ ಮಾಡಲು ಆಜ್ಞೆಯಾಗುತ್ತದೆ. ಅದರಂತೆ ಅವರು ಹೊರಟು, ಬ್ರಹ್ಮಗಿರಿ, ತ್ರಯಂಬಕೇಶ್ವರ, ವಾರಣಾಸಿ, ಅಯೋಧ್ಯಾ, ಮಥುರಾ, ವೃಂದಾವನ ಹೀಗೆ ಹಲವಾರು ತೀರ್ಥಕ್ಷೇತ್ರಗಳಲ್ಲಿ ಸಂಚರಿಸಿ ಜನರನ್ನು ನಾಮಸ್ಮರಣೆಗೆ ಹಚ್ಚಿದರು.
Samarth Ramdas ಇದೇ ರೀತಿ ನಡೆಯುತ್ತಿರುವ ಸಮಯದಲ್ಲಿ ಇತ್ತ ತುಳಜಾ ಭವಾನಿಯ ಪರಮ ಭಕ್ತ ಸಮರ್ಥಗುರುವನ್ನು ಅರಸುತ್ತಿದ್ದನು. ಒಮ್ಮೆ ಅವನಿಗೆ ತುಳಜಾಭವಾನಿಯು ಸ್ವಪ್ನದಲ್ಲಿ ದರ್ಶನವಿತ್ತು, “ನೀನು ಸಮರ್ಥರಿಗೆ ಶರಣು ಹೋಗು, ಅವರೇ ನಿನ್ನ ಗುರು”ಎಂದಳು. ಈ ಮೊದಲು ಶಿವಾಜಿಯು ಸಮರ್ಥರ ಹೆಸರು ಕೇಳಿದ್ದನು ಹಾಗೂ ಅವರ ದರ್ಶನಕ್ಕಾಗಿ ಹಲವಾರು ಬಾರಿ ಹೋಗಿದ್ದರೂ ಅವರ ದರ್ಶನವಾಗಿರಲಿಲ್ಲ, ಇದರಿಂದ ಈ ಬಾರಿ ಶಿವಾಜಿಯು ಕೃತ ನಿಶ್ಚಯನಾದನು ಸಮರ್ಥರ ದರ್ಶನವಾಗದ ಹೊರತು ಅನ್ನ ನೀರು ಮುಟ್ಟುವುದಿಲ್ಲ ಎಂದು ಮಲಗಿಬಿಟ್ಟನು. ರಾತ್ರಿ ಸ್ವಪ್ನದಲ್ಲಿ ಖಡಾವು, ಜಪಮಾಲೆ, ಕುಬಡಿ ಹಿಡಿದು ಕೌಪೀನಧಾರಿಗಳಾಗಿ ಸಮರ್ಥರು ನಾಳೆ ದರ್ಶನಕ್ಕೆ ಬರಲು ಆಜ್ಞಾಪಿಸಿದರು. ಮರುದಿನ ಶಿವಾಜಿ ಚಾಪಳಕ್ಕೆ ಹೋದಾಗ ಅಲ್ಲಿ ಅವರಿರಲಿಲ್ಲ. ಅವರ ಶಿಷ್ಯ ದಿವಾಕರಭಟ್ಟರೆಂಬುವವರೊಂದಿಗೆ ʼಅಂಗಣವಾಡಿʼ ಎಂಬಲ್ಲಿಗೆ ಹೋದಾಗ ಸಮರ್ಥರು ಔದುಂಬರ ವೃಕ್ಷದಡಿಯಲ್ಲಿ ಕುಳಿತು “ದಾಸಬೋಧೆ”ಯನ್ನು ಬರೆಯುತ್ತಿದ್ದರು. ಶಿವಾಜಿಯನ್ನು ಕಂಡು ಮುಗುಳ್ನಕ್ಕರು ಹಾಗೂ ಕುಶಲೋಪರಿಯಾಯಿತು, ಶಿವಾಜಿಯು ತನಗೆ ಅನುಗ್ರಹಿಸಬೇಕೆಂದು ವಿನಂತಿಸಿದನು ಅವರಿಂದ ಅನುಗ್ರಹೀತನಾಗಿ ಅಲ್ಲಿಂದ ಹೊರಬಿದ್ದನು. ಇದಾದನಂತರ ಶಿವಾಜಿಯ ಪಟ್ಟಾಭಿಷೇಕಕ್ಕೆ ಸಮರ್ಥರಿಗೆ ಸ್ವತಃ ಆಮಂತ್ರಣ ನೀಡಲು ಬಂದನು. ಆಗ “ಶಿವಾಜಿ ಅಲ್ಲಿಗೆ ನಾನು ಬಂದರೆ ಜನರು ಸಹಜವಾಗಿ ನನ್ನ ಕಡೆಗೆ ತಿರುಗಿ, ನಿನ್ನನ್ನು ಮರೆತುಬಿಡುತ್ತಾರೆ, ಇದರಲ್ಲಿ ನೀನೇ ಆಕರ್ಷಣೀಯನಾಗಬೇಕು”ಎಂದು ಪ್ರೇವದಿಂದ ನುಡಿದು ಬೀಳ್ಕೊಟ್ಟರು. ಮುಂದೆ ಶಿವಾಜಿಯು ತನ್ನ ಕೊನೆಯ ದಿನದವರೆಗೆ ಸಮರ್ಥರ ಆಜ್ಞೆಯನ್ನು ಮೀರಲಿಲ್ಲ. ವಿಶೇಷವೆಂದರೆ ಶಿವಾಜಿಯು ಸಮರ್ಥರ ಅಂತರಂಗದ ಶಿಷ್ಯನಾಗಿದ್ದರು. ಶಿವಾಜಿಯ ಹತ್ಯೆಯಾದ ಒಂದು ವರ್ಷದ ನಂತರ ಸಮರ್ಥರು ದೇಹಬಿಡುತ್ತಾರೆ. ಸಮರ್ಥರ ಚಮತ್ಕಾರಗಳೆಂದರೆ ಅವುಗಳು ಅಸಾಧ್ಯ ಮತ್ತು ನಮ್ಮ ಊಹೆಗೂ ಮೀರಿದ್ದಾಗಿದೆ. ಅದು ಅವರು ಕೇವಲ ರಾಮನ ಲೀಲೆಯೆನ್ನುತ್ತಿದ್ದರೇ ಹೊರತು ಯಾವತ್ತೂ ನನ್ನಿಂದಾಯಿತು ಎಂದು ಹೇಳುತ್ತಿರಲಿಲ್ಲ.
ಒಮ್ಮೆ ಒಬ್ಬ ಬ್ರಾಹ್ಮಣನು ಸಮರ್ಥರ ಬಳಿ ರಾಮನಾಂದ ಅನುಗ್ರಹ ತೆಗೆದುಕೊಂಡನು ಹಾಗೂ ಕೆಲವು ದಿನಗಳ ತರುವಾಯ ಅವನು ತನ್ನ ಅಹಂಕಾರದಿಂದ ನಾನು ತುಕಾರಾಮರ ಬಳಿ ಅನುಗ್ರಹ ಪಡೆಯುತ್ತೇನೆಂದು ಹೇಳಿ, ತುಕಾರಾಮರ ಕಡೆಗೆ ಹೋಗಿ ಅನುಗ್ರಹಿಸಬೇಕೆಂದು ಕೇಳಲು ಅವರು “ನೀನು ಈಗಾಗಲೇ ಸಮರ್ಥರಿಂದ ಅನುಗ್ರಹೀತನಾಗಿದ್ದೀಯ ಅವರು ಅನುಗ್ರಹಿಸಿದ ಮಂತ್ರವನ್ನು ನೀನು ಅವರಿ ಹಿಂತಿರುಗಿಸಿ ಬಾ” ಎಂದರು. ಆಗ ಅವನು ಸಮರ್ಥರಿಗೆ ತಮ್ಮ ಉಪದೇಶ ಹಿಂತಿರಿಗಿ ಪಡೆಯಲು ಕೇಳಿದಾಗ ತ್ರಯೋದಾಕ್ಷರಿ ಮಂತ್ರವನ್ನು ಉಚ್ಛರಿಸಿ, ಬಾಯಿ ಮುಕ್ಕಳಿಸಿ ಈ ಬಂಡೆಯ ಮೇಲೆ ಉಗುಳು ಎಂದರು ಅವನು ಹಾಗೆ ಮಾಡಿದಾಗ ಕಲ್ಲುಬಂಡೆಯ ಮೇಲೆ ತ್ರಯೋದಾಕ್ಷರಿ ಮಂತ್ರವು ಮೂಡಿಬಂದು ಅವನ ನಾಲಿಗೆ ಬಿದ್ದು ಹೋಯಿತು. ಆದರೆ ಕೃಪಾಳು ಸದ್ಗುರು ಸಮರ್ಥರು ಮತ್ತೆ ಅವನಿಗೆ ನುಡಿಯನ್ನು ನೀಡಿದರು. ಹೀಗೆ ಅದೆಷ್ಟೋ ಚಮತ್ಕಾರಗಳನ್ನು ಕೇವಲ ನಮ್ಮಂಥವರನ್ನು ಭಗವಂತನೆಡೆಗೆ ತಿರುಗಿಸುವ ಸಲುವಾಗಿ ಮಾಡಿದರು. ದಾಸಬೋಧೆಯ ಮೂಲಕ ಜನರನ್ನು ಎಚ್ಚರಿಸಿದರು. “ಮನೋಬೋಧ ಅಥವಾ ಮನಾಚೆ ಶ್ಲೋಕ”ಎಂಬ ಮರಾಠಿ ಶ್ಲೋಕಗಳಿಂದ ಮನಸ್ಸನ್ನು ಹೇಗೆ ನಿಯಂತ್ರಿಸಿ ಭಗವಂತನೆಡೆಗೆ ಹಚ್ಚಬಹುದು ಎಂದು ತಿಳಿಸಿಕೊಟ್ಟರು. ಅದರಂತೆ ಇಂದಿಗೂ ಅವರ ಸ್ಥಳಗಳಾದ, ಸಜ್ಜನಗಡ, ಚಾಪಳಗಳಲ್ಲಿ ಪರಂಪರೆಯು ಮುಂದುವರೆಯುತ್ತಿದೆ. ಸದಾ ನಾಮಸ್ಮರಣೆ, ಪ್ರವಚನ ಮುಂತಾದ ಅತ್ಯಂತ ಸರಳ ಮಾರ್ಗಗಳ ಮೂಲಕ ಮನುಕುಲದ ಉದ್ಧಾರ ಸಾಧ್ಯ ಎಂದು ಮನದಟ್ಟು ಮಾಡಿದ ಮಹಾತ್ಮರು ಪ್ರತ್ಯಕ್ಷ ಮಾರುತಿಯ ಅವತಾರವೇ ಇವರಾಗಿದ್ದು, ಇವರ ರಾಮಾಯಣದ ಪ್ರವಚನದ ಸಂದರ್ಭದಲ್ಲಿ ಪ್ರತ್ಯಕ್ಷ ಮಾರುತಿಯೇ ಅದರ ಮಾಧುರ್ಯವನ್ನು ಸವಿಯುತ್ತಿದ್ದನು ಎಂಬ ಉಲ್ಲೇಖವಿದೆ. ಒಟ್ಟಾರೆ ಪ್ರತಿ ಸತ್ಪುರುಷರು ಹೇಳಿದ್ದು, ಈಗ ಸಂತರು ಹೇಳುತ್ತಿರುವುದೂ ಅದೇ “ಒಂದೇ ನಾಮವು ಭವ ಬಂಧನ ಬಿಡಿಸುವುದು ಎಂದು ವೇದಂಗಳು ಸಾರುತಲಿರುತಿಹ ಒಂದೇ ನಾಮವು ಸಾಲದೇ ಶ್ರೀಹರಿಯೆಂಬ “ ಅದು ಹಲವು ವಿಭಿನ್ನ ನಾಮಗಳ ರೂಪಗಳ ಮೂಲಕ ಚೈತನ್ಯ ಸ್ವರೂಪವಾಗಿ ಕಾಣುತ್ತದೆ. ಆ ಪರವಸ್ತುವನ್ನು ಅರಿಯಲು ಬೇಕಾದ್ದು ಬುದ್ಧಿಯಲ್ಲ ಮನಸ್ಸು ಹಾಗೂ ಆ ಭಗವಂತನಿಗಾಗಿ ಸದಾ ಮಿಡಿಯುವ ಸಾತ್ವಿಕ ಹೃದಯವಷ್ಟೇ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Prahlad Joshi ಅತ್ಯಂತ ವಿನಮ್ರತೆ ಹಾಗೂ ನಿಷ್ಠೆಯಿಂದೀ ಕರ್ತವ್ಯ ಸ್ವೀಕರಿಸುತ್ತಿದ್ದೇನೆ- ಪ್ರಹ್ಲಾದ ಜೋಷಿ.

Prahlad Joshi ಇಂದು ಭಾರತ ಸರ್ಕಾರದ ಕೇಂದ್ರ ಶಿಕ್ಷಣ ಸಚಿವರಾಗಿ ಶ್ರೀ ಪ್ರಹ್ಲಾದ...

K.S.Eshwarappa ಕನಕರ ಸ್ಥಳಮಾಹಿತಿ ಉತ್ಖನನ ಕಾರ್ಯ ಅರ್ಥಪೂರ್ಣ. ಇಂತಹ ಸಂಶೋಧನೆಗಳಿಗೆ ನನ್ನ ಬೆಂಬಲವಿದೆ – ಕೆ.ಎಸ್.ಈಶ್ವರಪ್ಪ.

K.S.Eshwarappa ಪ್ರಸ್ತುತ ಸಮಾಜದಲ್ಲಿ ಇತಿಹಾಸ ಪ್ರಜ್ಞೆ ಕೊರತೆಯಿದೆ. ಇಂತಹಸನ್ನಿವೇಶದಲ್ಲಿ ಇತಿಹಾಸ ಪ್ರಾಧ್ಯಾಪಕ,...

Dharmendra Pradhan ಧರ್ಮೇಂದ್ರ ಪ್ರಧಾನ್ ರಾಜಿನಾಮೆ,ಕೇವಲ ನೈತಿಕ ಜವಾಬ್ದಾರಿ ಎತ್ತಿ ಹಿಡಿದಿದೆ ಅಷ್ಟೆ- ವಸಂತಕುಮಾರ್.

Dharmendra Pradhan ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಕೇವಲ ನೈತಿಕತೆಯ ಜವಾಬ್ದಾರಿ ಎತ್ತಿ...