ಸಾಂಖ್ಯಿಕ ದಿನಾಚರಣೆಯು ಕೇವಲ ಅಂಕಿಅಂಶಗಳನ್ನು ನೆನಪಿಸಿಕೊಳ್ಳುವ ದಿನವಲ್ಲ, ಬದಲಿಗೆ ದೇಶದ ಸುಸ್ಥಿರ ಅಭಿವೃದ್ಧಿಗೆ ದತ್ತಾಂಶವನ್ನು ಹೇಗೆ ದಿಕ್ಸೂಚಿಯನ್ನಾಗಿ ಬಳಸಬಹುದು ಎಂದು ಚಿಂತಿಸುವ ದಿನವಾಗಿದೆ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ ಹನುಮಾನಾಯ್ಕ್ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಾಂಖ್ಯಿಕ ತಜ್ಞರಾದ ಪ್ರೊ.ಪಿ.ಸಿ.ಮಹಾಲನೋಬಿಸ್ ಜನ್ಮ ದಿನ ಹಾಗೂ ಸಾಂಖ್ಯಿಕ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಣಕಾಸಿನ ಎಲ್ಲ ವ್ಯವಹಾರಗಳಿಗೆ ಹಾಗೂ ಪ್ರತಿ ಇಲಾಖೆಗಳ ಯೋಜನೆಗಳು ರೂಪುಗೊಳ್ಳುವುದಕ್ಕೆ ಸಾಂಖ್ಯಿಕ ಇಲಾಖೆಯ ಅಂಕಿಅಂಶಗಳೇ ಆಧಾರ. ಆದ್ದರಿಂದ ಇದನ್ನು ಮೂಲ ಇಲಾಖೆ ಎಂದು ಕರೆಯಬಹುದು.
ಕೇವಲ ಸಾಂಪ್ರದಾಯಿಕ ಸಮೀಕ್ಷೆಗಳ ಮೇಲೆ ಅವಲಂಬಿತವಾಗದೆ, ಈಗಾಗಲೇ ಸರ್ಕಾರದ ಬಳಿ ಇರುವ ಬೃಹತ್ ಆಡಳಿತಾತ್ಮಕ ದತ್ತಾಂಶವನ್ನು ಸರಿಯಾಗಿ ವಿಶ್ಲೇಷಿಸಿದರೆ, ಜನರಿಗೆ ಅಗತ್ಯವಿರುವ ನೈಜ ಯೋಜನೆಗಳನ್ನು ರೂಪಿಸಬಹುದು.
ಹೊಸದಾಗಿ ಮನೆಮನೆಗೆ ಹೋಗಿ ಸಮೀಕ್ಷೆ ನಡೆಸುವುದಕ್ಕೆ ಹೋಲಿಸಿದರೆ, ಲಭ್ಯವಿರುವ ದತ್ತಾಂಶವನ್ನು ಬಳಸುವುದು ಆರ್ಥಿಕವಾಗಿ ಮತ್ತು ಸಮಯದ ದೃಷ್ಟಿಯಿಂದ ಅತ್ಯಂತ ಲಾಭದಾಯವಾಗಿದ್ದು, ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆಯೇ ಇಲ್ಲವೇ ಎಂಬುದನ್ನು ನಿಖರವಾಗಿ ಪತ್ತೆಹಚ್ಚಲು ಮತ್ತು ಸೋರಿಕೆಯನ್ನು ತಡೆಗಟ್ಟಲು ಇದು ನೆರವಾಗುತ್ತದೆ ಎಂದರು.
ಉದ್ಯೋಗಿಗಳು ಸಾಂಖ್ಯಿಕ ಇಲಾಖೆ ಕೆಲಸಗಳನ್ನು ಹೇಗೆ ನಿರ್ವಹಣೆ ಮಾಡಬೇಕು. ಇಲಾಖೆಯಲ್ಲಿರುವ ಸಂಪನ್ಮೂಲ ವ್ಯಕ್ತಿಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿಸಿದ ಅವರು ಇಲಾಖೆಯಲ್ಲಿ ಕುಂದು ಕೊರತೆಗಳಿದ್ದಲ್ಲಿ ಹಿರಿಯ ಅಧಿಕಾರಿಗಳ ಸಹಕಾರ ಇದ್ದೇ ಇರುತ್ತದೆ ಎಂದ ಅವರು ಇಲಾಖೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹೆಚ್ ಇ ಮಹೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತದ “ಅಂಕಿಅಂಶಗಳ ಪಿತಾಮಹ” ಎಂದು ಪ್ರಸಿದ್ಧರಾದ ಪ್ರೊ. ಪ್ರಶಾಂತ ಚಂದ್ರ ಮಹಾಲನೋಬಿಸ್ ಅವರ ಜನ್ಮದಿನವಾದ ಜೂನ್ 29 ಅನ್ನು ಭಾರತದಲ್ಲಿ ಪ್ರತಿ ವರ್ಷ “ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ” ಎಂದು ಆಚರಿಸಲಾಗುತ್ತದೆ. ಆರ್ಥಿಕ ಯೋಜನೆ ಮತ್ತು ಸಾಂಖ್ಯಿಕ ಅಭಿವೃದ್ಧಿ ಕ್ಷೇತ್ರಗಳಿಗೆ ಅವರು ನೀಡಿದ ಮಹತ್ತರ ಕೊಡುಗೆಯನ್ನು ಗೌರವಿಸಲು ಭಾರತ ಸರ್ಕಾರವು 2007 ರಿಂದ ಈ ದಿನವನ್ನು ರಾಷ್ಟ್ರೀಯ ದಿನಾಚರಣೆಯಾಗಿ ಘೋಷಿಸಿತು.
ಅವರು ಕೋಲ್ಕತ್ತಾದಲ್ಲಿ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಅನ್ನು ಸ್ಥಾಪಿಸಿದರು. ಭಾರತದ ಎರಡನೇ ಪಂಚವಾರ್ಷಿಕ ಯೋಜನೆಗೆ (ಮಹಾಲನೋಬಿಸ್ ಮಾದರಿ) ಬುನಾದಿ ಹಾಕಿಕೊಟ್ಟರು, ಇದು ದೇಶದ ಕೈಗಾರಿಕೀಕರಣಕ್ಕೆ ವೇಗ ನೀಡಿತು.
ದತ್ತಾಂಶ ಸಂಗ್ರಹ ಮತ್ತು ಯೋಜನೆ ರೂಪಿಸುವಲ್ಲಿ ಪ್ರಮುಖ ಕೊಡುಗೆಗಳನ್ನು ಇವರು ನೀಡಿದ್ದಾರೆ. ಯಾವುದೇ ಯೋಜನೆಗಳಿಗೆ ಅಂಕಿಅಂಶಗಳಗಳು ಬಹಳ ಮುಖ್ಯವಾಗಿದ್ದು ಈ ಅಂಕಿಅಂಶಗಳನ್ನು ಹೇಗೆ ಸಿದ್ದಪಡಿಸಿ, ಬಳಸಿಕೊಳ್ಳಬೇಕೆಂದು ಇವರು ತೋರಿಸಿಕೊಟ್ಟರು ಹಾಗೂ ಹಲವಾರು ಮಾದರಿ ಸಮೀಕ್ಷೆಗಳನ್ನು ಇವರು ನೀಡಿದ್ದು ಇವನ್ನು ಆಧಾರವಾಗಿಟ್ಟುಕೊಂಡು ಜಗತ್ತಿನಾದ್ಯಂತ ಅಳವಡಿಕೆ ಮಾಡಿಕೊಳ್ಳಲಾಗಿದೆ ಎಂದರು.
ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆಯ ಸಂದರ್ಭದಲ್ಲಿ ಪ್ರತಿ ವರ್ಷ ಒಂದು ಪ್ರಮುಖ ಧ್ಯೇಯವಾಕ್ಯ ಅಥವಾ ವಿಷಯವನ್ನು ಇಟ್ಟುಕೊಂಡು ಚರ್ಚೆಗಳನ್ನು ನಡೆಸಲಾಗುತ್ತದೆ. “ಅನ್ ಲಾಕಿಂಗ್ ದಿ ಪೊಟೆನ್ಶಿಯಲ್ ಆಫ್ ಅಡ್ಮಿನಿಸ್ಟ್ರೇಟಿವ್ ಡೇಟಾ” (ಆಡಳಿತಾತ್ಮಕ ದತ್ತಾಂಶದ ಸಾಮರ್ಥ್ಯವನ್ನು ಮುಕ್ತಗೊಳಿಸುವುದು) ಎಂಬುದು ಈ ವರ್ಷದ ವಿಷಯವಾಗಿದ್ದು ಅತ್ಯಂತ ಪ್ರಸ್ತುತವಾದ ವಿಷಯವಾಗಿದೆ.
ಸರ್ಕಾರದ ವಿವಿಧ ಇಲಾಖೆಗಳು ತಮ್ಮ ದೈನಂದಿನ ಕೆಲಸ ಕಾರ್ಯಗಳು, ಯೋಜನೆಗಳ ಅನುಷ್ಠಾನ, ನಾಗರಿಕರ ನೋಂದಣಿ (ಉದಾಹರಣೆಗೆ: ಆಧಾರ್, ಪಡಿತರ ಚೀಟಿ, ತೆರಿಗೆ ಪಾವತಿ, ಆರೋಗ್ಯ ದಾಖಲೆಗಳು) ಮುಂತಾದ ಪ್ರಕ್ರಿಯೆಗಳ ಸಮಯದಲ್ಲಿ ಸಂಗ್ರಹಿಸುವ ದತ್ತಾಂಶವೇ ಆಡಳಿತಾತ್ಮಕ ದತ್ತಾಂಶವಾಗಿದೆ ಎಂದರು.
ಇಲಾಖೆಯ ಪ್ರಜ್ಞಾ ಎನ್ ಸ್ವಾಮಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿ, ಪೊಟೆನ್ಶಿಯಲ್ ಅಡಿಮಿನಿಸ್ಟ್ರೇಟಿವ್ ಡೇಟಾ ಎಂದರೆ ಆಡಳಿತಾತ್ಮಕ ಪ್ರಕ್ರಿಯೆಗಳು, ಸರ್ಕಾರಿ ಯೋಜನೆಗಳು ಅಥವಾ ಸಾಂಸ್ಥಿಕ ನಿರ್ವಹಣೆಯ ಸಂದರ್ಭದಲ್ಲಿ ಭವಿಷ್ಯದ ಯೋಜನೆ ಮತ್ತು ನಿರ್ಧಾರ ಕೈಗೊಳ್ಳಲು ಬಳಸಬಹುದಾದ ಸಂಭಾವ್ಯ ಆಡಳಿತಾತ್ಮಕ ದತ್ತಾಂಶವಾಗಿದೆ. ಭವಿಷ್ಯದ ಉತ್ತಮ ಮತ್ತು ದಕ್ಷ ಆಡಳಿತಕ್ಕಾಗಿ ವ್ಯವಸ್ಥಿತವಾಗಿ ಬಳಸಿಕೊಳ್ಳಬಹುದಾದ ಎಲ್ಲಾ ರೀತಿಯ ಸರ್ಕಾರಿ ಹಾಗೂ ಸಾಂಸ್ಥಿಕ ಮಾಹಿತಿಯೇ “ಪೊಟೆನ್ಶಿಯಲ್ ಅಡಿಮಿನಿಸ್ಟ್ರೇಟಿವ್ ಡೇಟಾ” ಆಗಿದೆ.
ಯಾವುದೇ ಒಂದು ಜಿಲ್ಲೆ ಅಥವಾ ಇಲಾಖೆಯ ಆಡಳಿತವನ್ನು ಸುಗಮಗೊಳಿಸಲು ಈ ರೀತಿಯ ಡೇಟಾ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಸರ್ಕಾರಿ ಕಚೇರಿಗಳು, ನಾಗರಿಕ ಸೇವಾ ಕೇಂದ್ರಗಳು ಮತ್ತು ಇಲಾಖೆಗಳು ತಮ್ಮ ದೈನಂದಿನ ಚಟುವಟಿಕೆಗಳ ಮೂಲಕ ಸಂಗ್ರಹಿಸುವ ಮಾಹಿತಿಗಳು, ನಾಗರಿಕರಿಗೆ ತಲುಪುವ ಸೌಲಭ್ಯಗಳು, ಅರ್ಜಿಗಳ ವಿಲೇವಾರಿ ಪ್ರಮಾಣ ಮತ್ತು ಬಾಕಿ ಇರುವ ಕೆಲಸಗಳ ವಿವರಗಳು.
ಜಿಲ್ಲಾ ಮಟ್ಟದಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕೆಲಸಗಳನ್ನು ಯೋಜಿಸಲು ಈ ಡೇಟಾ ಸಹಕಾರಿಯಾಗಿದೆ.ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಇದು ಪ್ರಮುಖ ಆಧಾರವಾಗಿದೆ. ಪ್ರಕೃತಿ ವಿಕೋಪಗಳು ಅಥವಾ ತುರ್ತು ಸಂದರ್ಭದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳಲು ಈ ಮುನ್ಸೂಚನಾ ಡೇಟಾ ನೆರವಾಗುತ್ತದೆ.
ಸಂಗ್ರಹಿಸಿದ ದತ್ತಾಂಶವು ಅತ್ಯಂತ ನಿಖರವಾಗಿರಬೇಕು ಮತ್ತು ಸಾರ್ವಜನಿಕರ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿರಬೇಕು. ಡೇಟಾ ನಿರ್ವಹಣೆಯಲ್ಲಿಕೆಲಚಾರು ಸವಾಲುಗಳಿವೆ. ಯೋಜನೆಗಳ ಸ್ವರೂಪ ಬದಲಾದಾಗ, ಮಾಹಿತಿ ಕೊರತೆ, ಡೇಟಾ ಪ್ರೈವಸಿ ಈ ರೀತಿಯ ಸವಾಲುಗಳಿದ್ದು, ಇಲಾಖೆಯು ಡಿಜಿಟಲ್ ಕೌಶಲ್ಯ ಗಳನ್ನು ಅಗತ್ಯವಾಗಿ ಕಲಿತುಕೊಳ್ಳಬೇಕು. ಹಾಗೂ ತಂತ್ರಜ್ಞಾನದ ಜೊತೆ ಜೊತೆಗೆ ಸಾಗಬೇಕಿದೆ ಎಂದರು.
ಇಲಾಖೆಯ ನೌಕರರಾದ ಪ್ರವೀಣ್, ಪ್ರೊ.ಪಿ.ಸಿ.ಮಹಾಲನೋಬಿಸ್ ರವರ ಜೀವನ ಚರಿತ್ರೆ ಹಾಗೂ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು.
ನಿವೃತ್ತ ಸಾಂಖ್ಯಿಕ ಸಂಗ್ರಹಣಾಧಿಕಾರಿ ಬ್ರಿಜಿತ್ ವರ್ಗೀಸ್ ಮಾತನಾಡಿ, ದತ್ತಾಂಶಗಳು ನಿಖರತೆ ಪಡೆಯಲು ಡಿಜಿಟಲೈಸ್ ಆಗಬೇಕು. ತಂತ್ರಾAಶ ಬಳಕೆಯಿಂದ ಹೆಚ್ಚು ಉಪಯೋಗ ಇದ್ದು, ಇಲಾಖೆಯ ಯುವ ಉದ್ಯೋಗಿಗಳಿಗೆ ತರಬೇತಿಗಳು ಲಭಿಸಿದರೆ ಇನ್ನೂ ಅನುಕೂಲವಾಗುತ್ತದೆ ಎಂದರು.
ನಿವೃತ್ತ ಜಂಟಿ ನಿರ್ದೇಶಕ ಹನುಮಂತಪ್ಪ, ನಿವೃತ್ತ ಡಿಡಿ ಬಾಲರಾಜ್ ಮಾತನಾಡಿದರು.
ಸಾಂಖ್ಯಿಕ ಸಂಗ್ರಹಣೆಯ ಎಲ್ಲಾ ವಿಭಾಗಗಳಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ಶಿವಮೊಗ್ಗ ಜಿಲ್ಲೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಇದೇ ವೇಳೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಎಂ ಎ ಡಿ ಬಿ ಉಪನಿರ್ದೇಶಕ ಶಿವಾನಂದ್ ಕುದರಿ, ಸಾಂಖ್ಯಿಕ ಇಲಾಖೆ ಅಧಿಕಾರಿಗಳು, ನೌಕರರು, ನಿವೃತ್ತ ಅಧಿಕಾರಿಗಳು ಹಾಜರಿದ್ದರು.
