S.N. Channabasappa ರಾಜ್ಯ ಹಾಗೂ ದೇಶದ ಸಾರ್ವಜನಿಕ ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಅತ್ಯಂತ ಶ್ಲಾಘನೀಯವಾಗಿದ್ದು, ದೇಶಪ್ರೇಮಿ ನಾಗರೀಕನಾಗಿ ಇದಕ್ಕೆ ಕೈಜೋಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದ್ದಾರೆ.
ಇಂದಿನಿಂದ ರಾಜ್ಯಾದ್ಯಂತ ಅಧಿಕೃತವಾಗಿ ಆರಂಭಗೊಂಡಿರುವ ಎಸ್‌ಐಆರ್ ಅಭಿಯಾನದ ಅಂಗವಾಗಿ, ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರಿಗಳ ತಂಡವು ಶಾಸಕರ ಸ್ವಗೃಹಕ್ಕೆ ಭೇಟಿ ನೀಡಿ ಎಸ್‌ಐಆರ್ ನಮೂನೆಯನ್ನು ನೀಡಿತು. ಈ ಸಂದರ್ಭದಲ್ಲಿ ಶಾಸಕರು ನಮೂನೆಯನ್ನು ಸ್ವೀಕರಿಸಿ, ಪ್ರಕ್ರಿಯೆಗೆ ಅಗತ್ಯವಾದ ಪೂರಕ ವಿವರಗಳನ್ನು ಹಂಚಿಕೊಂಡರು.
ಈ ಕುರಿತು ಪ್ರಕಟಣೆ ನೀಡಿರುವ ಶಾಸಕರು, “ಎಸ್‌ಐಆರ್ ಪ್ರಕ್ರಿಯೆಯು ಸಮಾಜದ ಸುರಕ್ಷತೆ ಮತ್ತು ನಾಗರಿಕರ ಹಿತರಕ್ಷಣೆಯನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಲಿದೆ. ಯಾವುದೇ ಅಪಪ್ರಚಾರ ಅಥವಾ ಗೊಂದಲಗಳಿಗೆ ಕಿವಿಗೊಡದೆ ಸಾರ್ವಜನಿಕರು ಈ ಪ್ರಕ್ರಿಯೆಯನ್ನು ಮುಕ್ತವಾಗಿ ಸ್ವಾಗತಿಸಬೇಕು” ಎಂದು ಕರೆ ನೀಡಿದ್ದಾರೆ.
S.N. Channabasappa ಶಿವಮೊಗ್ಗ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರತಿಯೊಬ್ಬ ನಿವಾಸಿಯೂ ತಮ್ಮ ಮನೆಗಳಿಗೆ ಆಗಮಿಸುವ ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನಿಖರವಾದ ಮಾಹಿತಿ ನೀಡುವ ಮೂಲಕ, ಈ ಭದ್ರತಾ ಪ್ರಕ್ರಿಯೆಯನ್ನು ಶೇಕಡಾ ನೂರರಷ್ಟು ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ವಿನಂತಿ ಮಾಡಿದ್ದಾರೆ.
