Thursday, April 30, 2026
Thursday, April 30, 2026

Klive Special Article ಆನಂದವನದ ಆಧ್ಯಾತ್ಮಿಕ ಮೇರು- ಶ್ರೀಶೇಷಾಚಲ ಸದ್ಗುರು. ಲೇ: ಶ್ರೀವತ್ಸ ಪ್ರಸಾದ್ .ದಾವಣಗೆರೆ.

Date:

Klive Special Article “ನಮ್ರತೆಯ ಸಂತ – ಅಗಡಿ ಆನಂದವನದ ಶ್ರೀ ಶೇಷಾಚಲ ಸದ್ಗುರುಗಳು”
“ಸಾಧು ನೋಡೆಲೋ ಇವನು ಸಾಧು ನೋಡೆಲೋ | ವೇದತೀತ ವಾದತೀತ ನಾದತೀತ ಬ್ರಹ್ಮನೀತ || “ ಎಂದು ಸಂತ ಶಿಶುನಾಳ ಶರೀಫರು ಹಾಡುತ್ತಾರೆ. ಅದನ್ನು ಮುಂದುವರೆಸುತ್ತಾ “ಎಂಟು ಮದಗಳನ್ನು ತುಳಿದು ಕುಂಟನಾದನು”ಎಂದಾಗ ಒಮ್ಮೆ ಅರ್ಥಮಾಡಿಕೊಳ್ಳುವುದು ಕಠಿಣವಾಗುತ್ತದೆ. ಹೌದು! ಇದು ಅಗಡಿ ಆನಂದವನದ ಶ್ರೀ ಶೇಷಾಚಲ ಸದ್ಗುರು ಮಹಾರಾಜರನ್ನು ಕುರಿತು ಹಾಡಿದುದು.
ಅಗಡಿ ಇಂದಿನ ಹಾವೇರಿ ಜಿಲ್ಲೆಯಲ್ಲಿರುವ ಸಣ್ಣ ಹಳ್ಳಿ. ಅಲ್ಲಿ ಚಕ್ರವರ್ತಿ ರಾಮಭಟ್ಟ ಮತ್ತು ಲಕ್ಷ್ಮಿದೇವಿ ದಂಪತಿಗಳ ಜ್ಯೇಷ್ಠ ಪುತ್ರನಾಗಿ 1848 ರಲ್ಲಿ ಶೇಷಾಚಲನ ಜನನವಾಯ್ತು. ತಾತ ನರಸಿಂಹ ಭಟ್ಟರ ಜೊತೆಗೆ ಶೇಷಾಚಲನು ಬೆಳೆಯುತ್ತಿರುವಾಗ, ತಾತನವರು ಕಾಲವಶರಾದರು. ವೈದಿಕ ವಿದ್ಯಾ ಪ್ರವೀಣನಾಗಲಿ ಎಂದು ಇವರನ್ನು ವೇದಾಧ್ಯಯನಕ್ಕೆ ಕಳುಹಿಸಿದಾಗ ಎಲ್ಲವನ್ನೂ ಕಲಿತರೂ ಸಹಾ ಏನೂ ಅರಿಯದವನಂತಿರುತ್ತಿದ್ದ ಶೇಷಾಚಲನನ್ನು ಎಲ್ಲರೂ ಹೀಯಾಳಿಸುವರು, ಬೈಯ್ಯುವರು, ಮೂದಲಿಸುವರು. ಆದರೆ ಈ ಹುಡುಗ ಮಾತ್ರ ಯಾವುದಕ್ಕೂ ಕ್ರೋಧವಶನಾಗದೇ ಅತ್ಯಂತ ವಿಧೇಯತೆಯಿಂದ ನಗು ನಗುತ್ತಾ ಇರುತ್ತಿದ್ದ. ಅದು ಹುಟ್ಟಿದಾಗಿನಿಂದ ಸಮಸ್ಯೆಯಿತ್ತೋ ಅಥವಾ ಸಾಧನೆಯ ಸಂದರ್ಭದಲ್ಲಿ ಆಯಿತೋ ತಿಳಿಯದು ಶೇಷಾಚಲನು ಒಂದು ಕಾಲನ್ನು ಎಳೆದುಕೊಂಡು ಅಥವಾ ಸ್ವಲ್ಪ ಕುಂಟುತ್ತಾ ನಡೆಯುತ್ತಿದ್ದುದರಿಂದ ಅವನನ್ನು ʼಕುಂಟ ಶೇಷʼ ಎಂದು ಕೂಡಾ ಕರೆಯುತ್ತಾ ಜನರು ವಿಕೃತ ಸಂತೋಷಪಡುತ್ತಿದ್ದರು. ತಾತ ವೇದ-ವೇದಾಂತ ಸಂಪನ್ನ, ತಂದೆ ಅದ್ವಿತೀಯ ವೈದಿಕ ಶ್ರೇಷ್ಠರಾದರೆ ಮಗ ಮಂಕನಾಗಿದ್ದಾನೆ ಎಂದು ಬಂಧು-ಮಿತ್ರರೆಲ್ಲರೂ ಆಡುವ ಮಾತನ್ನು ಕೇಳಿ ಶೇಷನ ತಂದೆ ತಾಯಿಗಳಿಗೆ ಅತೀವ ದುಃಖವಾಗುತ್ತಿತ್ತು. ಆದರೆ ಅದನ್ನು ಮಗನೆದುರಿಗೆ ತೋರಿಸಿರಲಿಲ್ಲ. ಶೇಷಾಚಲನು ಮಾತ್ರ ತಂದೆಯೆಂದರೆ ಅತ್ಯಂತ ಭಕ್ತಿ ಕೈಲಾಗಲಿ ಬಿಡಲಿ ತಂದೆಗೆ ಸಹಾಯ ಮಾಡುವ ಪರಿಪಾಠ ಹೊಂದಿದ್ದನು. ಹೀಗಿರುವಾಗ ರಾಮಭಟ್ಟರೊಟ್ಟಿಗೆ ಶೇಷಾಚಲನೂ ಹೊರಟ. ಅಲ್ಲಿ ರಂಗೂತಾಯಿ ಎಂಬ ಹೆಂಗಸು ಮನಸೋ ಇಚ್ಛೆ ಶೇಷನನ್ನು ದಡ್ಡ, ಮೂರ್ಖ ಎಂದು ಹೀಯಾಳಿಸಿದಳು. ಆದರೂ ಶೇಷಾಚಲ ಬೇಸರ ಮಾಡಿಕೊಳ್ಳಲಿಲ್ಲ ಆದರೆ ಹೆತ್ತ ಕರುಳು ತಡೆಯಲು ಸಾಧ್ಯವೇ ? ತಾಯಿ ಲಕ್ಷ್ಮಮ್ಮನವರು “ಶೇಷಣ್ಣ ಇನ್ನೂ ಎಷ್ಟು ದಿನ ಈ ಮೌನ, ಎಷ್ಟು ದಿನ ಈ ತಮಾಷೆಯ ಕಾಲಹರಣ, ನೀನು ದೈವಾಂಶ ಸಂಭೂತ ಎಂದು ನಮಗಷ್ಟೇ ತಿಳಿದರೆ ಸಾಲದು, ನಿನ್ನ ಜ್ಞಾನಪ್ರಕಾಶತೆ ಜಗತ್ತಿಗೆ ತಿಳಿಯುವುದು ಯಾವಾಗ ?”ಎಂದು ಮಗನ ಮೈದಡವಿ ಕೇಳಿದಾಗಲೂ ಮಗನಿಂದ ಉತ್ತರವಿಲ್ಲ. ಕೆಲವೇ ದಿವಸಗಳಲ್ಲಿ ಮತ್ತೆ ಹಿಂದೆ ಅವಮಾನವಾದ ಸ್ಥಳದಲ್ಲಿಯೇ ಮತ್ತೊಂದು ವಿವಾಹ ಕಾರ್ಯಕ್ಕಾಗಿ ರಾಮಭಟ್ಟರೊಂದಿಗೆ ಶೇಷಾಚಲನೇ ಹೋದನು. ಆದರೆ ಈ ಬಾರಿ ಅಲ್ಲಿ ಯಾರಿಗೂ ಹೀಯಾಳಿಸುವ ಅವಕಾಶವೇ ದೊರೆಯದಾಯಿತು. ಬ್ರಹ್ಮಚಾರಿಯು ಅಸ್ಖಲಿತನಾಗಿ ಕಾರ್ಯಗಳನ್ನು ಮಾಡಿಸುತ್ತಿರುವಾಗ ಈ ಹಿಂದೆ ಹೀಯಾಳಿಸಿದ, ಚುಚ್ಚಿ ಮಾತನಾಡಿದ ರಂಗೂತಾಯಿಗೆ ಮಾತು ಬರದಂತಾಯಿತು ಬಾಲಕನ ಪೌಢಿಮೆ ಅವಳ ಕಣ್ಣುಗಳನ್ನು ತೆರೆಸಿ ಕಾರ್ಯಕ್ರಮವೆಲ್ಲ ಮುಗಿದಮೇಲೆ ಶೇಷಾಚಲ “ನೀನು ಮಾನವ ಮಾತ್ರನಲ್ಲ ಕಣಪ್ಪ,ನಿಜಕ್ಕೂ ಚಿದಂಬರನ ಅವತಾರ”ಎಂದು ಕಣ್ಣೀರಿಟ್ಟಳು. ಆಗಲೂ ಬಾಲಕನು ಮರು ಮಾತನ್ನಾಡದೇ ವಿನಮ್ರನಾಗಿ ಅವರ ಹೊಗಳಿಕೆಯನ್ನು ಬದಿಗಿರಿಸಿ ಊರಿಗೆ ಹೊರಟು ಬಂದ.
Klive Special Article ಮುಂದೆ ತಮ್ಮ 23-24ನೇ ವಯಸ್ಸಿನಲ್ಲಿ ಮರೋಳದ ಭೀಮರಾಯರ ಪುತ್ರಿ ತುಳಸೀದೇವಿಯವರೊಂದಿಗೆ ವಿವಾಹವಾಯಿತು. ಪತಿಗೆ ತಕ್ಕ ಪತ್ನಿ. ಯಾವುದರಲ್ಲಿಯೂ ಯಾವುದೇ ಕಿರಿಕಿರಿಯಿಲ್ಲ. ತಮ್ಮ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರು. ಶೀಘ್ರಕೋಪಿಗಳಂತೆ ಕಾಣುವ ತುಳಸೀದೇವಿಯವರು ಅಂತಃಕರಣದಿಂದ ಅತ್ಯಂತ ಕೋಮಲರಾಗಿದ್ದರು. ಚಿದಂಬರನ ಉಪಾಸಕರಾದ ಪತಿ-ಪತ್ನಿಯರು ಎಲ್ಲರಿಗೂ ಆದರ್ಶ ಪ್ರಾಯರಾಗಿದ್ದರು. ಸರಿ ಸಾಧುಗಳಿಗೆ ಪರೀಕ್ಷಾ ಸಮಯವೇನೋ ಎಂಬಂತೆ, ಆ ವರ್ಷ “ಡವಗಿಬರ” ಶುರುವಾಗಿ ಎಲ್ಲೆಡೆ ಹಾಹಾಕಾರವೆದ್ದಿತು. ಎಲ್ಲೆಂದರಲ್ಲಿ ಜನ ಸಾಯುತ್ತಿದ್ದಾರೆ, ಅದೆಷ್ಟೋ ಹೆಣಗಳಿಗೆ ಸಂಸ್ಕಾರವಿಲ್ಲ, ಎಲುಬು-ತಲೆಬುರುಡೆಗಳ ರಾಶಿ ರಾಶಿಗಳನ್ನು ಕಾಣುವಂತಹ ಪರಿಸ್ಥಿತಿ ಮೂಡಿತು. ರಾಮಭಟ್ಟರ ಕುಟುಂಬ ದೊಡ್ಡದು ಅಂದರೆ ಮನೆಯಲ್ಲಿ 10-15ಜನರಿದ್ದರು. ಪೂರ್ವ ಯೋಜನೆಯಂತೆ ಸಂಗ್ರಹಿಸಿದ ಧಾನ್ಯಗಳಿಂದ ಬರಗಾಲದ ಭೀಕರತೆ ಈ ಮನೆಯಲ್ಲಿ ಸ್ವಲ್ಪ ಕಡಿಮೆಯಿತ್ತು. ಪ್ರತಿದಿನ ಮಾಡಿದ ಅಡುಗೆಯನ್ನು ಸಮಪ್ರಮಾಣದಲ್ಲಿ ಮನೆಯ ಸದಸ್ಯರಿಗೆ ಹಂಚಿದಾಗೆ ಎಲ್ಲರೂ ಊಟ ಮಾಡಿದರೆ ಶೇಷಾಚಲ ಸದ್ಗುರುಗಳು ಮಾತ್ರ ತಮ್ಮ ಪಾಲಿಗೆ ಬಂದ ಅನ್ನದಲ್ಲಿ ಅರ್ಧವನ್ನು ಹಸಿದವರಿಗೆ ಅಥವಾ ಬಡವರಿಗೆ ಕೊಟ್ಟು ಉಳಿದದ್ದನ್ನು ಮಾತ್ರ ತಿನ್ನುತ್ತಿದ್ದರು. ಕೆಲವು ವರ್ಷಗಳ ನಂತರ ಬರದ ಛಾಯೆ ಕಡಿಮೆಯಾಗಲು ತೀರ್ಥ ಯಾತ್ರೆಗಾಗಿ ಹೊರಟು, ಉಡುಪಿ ಪರ್ಯಾಯವನ್ನು ಮುಗಿಸಿ ಶೃಂಗೇರಿಯ ಶಾರದಾಪೀಠಕ್ಕೆ ಬಂದರು. ಆಗ ಅಲ್ಲಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತಿ ಮಹಾಸ್ವಾಮಿಗಳವರು ಪೀಠಾಧ್ಯಕ್ಷರು. ಅವರ ಅನುಗ್ರಹವಾಗಬೇಕೆಂದು ಪ್ರತಿದಿನ ಶೇಷಾಚಲ ಮಹಾರಾಜರು ಮಹಾಸನ್ನಿಧಾನಂಗಳ ಊಟವಾದ ನಂತರ ಅವರು ಕೈಕಾಲು ತೊಳೆದುಕೊಂಡು ಹೋಗುತ್ತಿದ್ದರು. ಆ ಮಹಾತ್ಮರ ಪಾದೋದಕವನ್ನು ತಮ್ಮ ಮುಖ ಮೈಗಳಿಗೆ ಹಚ್ಚಿ ನಂತರ ಪ್ರಸಾದ ಸ್ವೀಕರಿಸುತ್ತಿದ್ದರು. ಹೀಗಿರುವಾಗ ಒಂದು ದಿನ ಇದ್ದಕ್ಕಿದ್ದಂತೆ ಮಹಾ ಸನ್ನಿಧಾನಂಗಳು ತಮ್ಮ ಪಕ್ಕದಲ್ಲಿ ಇನ್ನೊಂದು ಎಲೆಯನ್ನು ಹಾಕಿಸಿ ಅಲ್ಲಿ ಮಹಾರಾಜರನ್ನು ಕರೆಸಿ ಊಟಕ್ಕೆ ಕೂಡಿಸಿ ತಮ್ಮ ಎಲೆಯಲ್ಲಿಂದ ಮೂರು ತುತ್ತುಗಳನ್ನು ಪ್ರಸಾದ ರೂಪದಲ್ಲಿ ಅನುಗ್ರಹಿಸಿದರು. ಅದರ ನಂತರ ಅವರೇ ನೇರವಾಗಿ ಶೇಷಾಚಲ ಸಾಧುಗಳಿಗೆ ಉಪದೇಶ ನೀಡಿದರು. ಅಲ್ಲಿಂದ ಹೊರಟು ಹಲವಾರು ಪುಣ್ಯ ಕ್ಷೇತ್ರ ಸಂಚರಿಸುತ್ತಾ ಸಾಧುಗಳು ಅಗಡಿಗೆ ಬಂದರು. ಅಲ್ಲಿಂದ ಅವರ ಶಿಷ್ಯರ ಸಂಖ್ಯೆ ಬೆಳೆಯುತ್ತಾ ಹೋದಂತೆ ಲಿಂಗೂ ಭಗವಾನರು, ನಾರಾಯಣ ಭಗವಾನರು ಹಾಗೂ ಶಂಕರ ಭಗವಾನರು ಶೇಷಾಚಲ ಮಹಾರಾಜರ ಅಂತರಂಗ ಶಿಷ್ಯರಾದರು.
1910ರಲ್ಲಿ ಗಳಗನಾಥದಲ್ಲಿ ಶ್ರೀ ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ದರ್ಶನವಾಯಿತು. ಸಂಜೆ ಶೇಷಾಚಲ ಮಹಾರಾಜರು ಬ್ರಹ್ಮ ಚೈತನ್ಯರನ್ನು ಕಂಡು ದೂರದಿಂದಲೇ ದೀರ್ಘದಂಡ ಸಾಷ್ಟಾಂಗ ನಮಸ್ಕಾರ ಮಾಡಿದರು. ಅವರನ್ನು ಕಂಡು ಸಂತೋಷದಿಂದ ನಮಸ್ಕರಿಸಿದರು. ಆಗ ಹೀಗೇಕೆ ಮಾಡುತ್ತಿರುವಿರಿ ಎಂದು ಕೇಳಲು ಬ್ರಹ್ಮಚೈತನ್ಯ ಮಹಾರಾಜರು “ಅರೇ ಅಲ್ಲಿ ಪ್ರತ್ಯಕ್ಷ ರಾಮನೇ ಕಣ್ಣೆದುರಿಗೆ ಬರಲು ನಮಸ್ಕರಿಸದೇ ಇರಲು ಹೇಗೆ ಸಾಧ್ಯ ?”ಎಂದು ನುಡಿದು ಶೇಷಾಚಲ ಸಾಧುಗಳನ್ನು ಮತ್ತೆ ಪ್ರೀತಿಯಿಂದ ಆಲಂಗಿಸಿಕೊಂಡು ಸುಮಾರು ಒಂದು ಒಂದೂವರೆಗಂಟೆ ಮಾತನಾಡಿ ನಂತರ ಬೀಳ್ಕೊಟ್ಟರು. ಇದರ ನಂತರದಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಹಾಸ್ವಾಮೀಜಿಯವರು ಶೇಷಾಚಲ ಸಾಧುಗಳನ್ನು ಭೇಟಿಯಾಗುವ ಸಂದರ್ಭ ಬಂತು. ಹುಬ್ಬಳ್ಳಿಯ ಪ್ರಸಿದ್ಧ ವಕೀಲರಾದ. ರಾ.ರಾ.ಜೋಶಿಯವರ ಮಗಳ ಮದುವೆಗೆ ಶೇಷಾಚಲ ಮಹಾರಾಜರು ಹೋಗಿದ್ದರು. ಅಲ್ಲಿಗೆ ಮಹಾತ್ಮರಾದ ಸಿದ್ಧಾರೂಢರೂ ಸಹಾ ಬಂದು ಮುಹೂರ್ತದ ನಂತರ ಹಿಂತಿರುಗುವಾಗ ಶೇಷಾಚಲ ಮಹಾರಾಜರು ಅವರನ್ನು ಬೀಳ್ಕೊಡಲು ಬಂದು “ಮಹರಾಜ್‌ ತಮ್ಮ ದರ್ಶನದಿಂದ ಬಹಳ ಸಂತೋಷವಾಯ್ತು “ಎನ್ನಲು ಸಿದ್ಧಾರೂಢರು “ಸಾಧುಗಳೇ ತಮ್ಮ ಸಾಕ್ಷಾತ್ಕಾರ ಬಲದಿಂದ ಪರಬ್ರಹ್ಮನ ದರ್ಶನ ಪ್ರತಿನಿತ್ಯವೂ ಆಗುತ್ತಿರುವಾಗ ಈ ಜಡ ದೇಹದ ದರ್ಶನದಿಂದ ಸಂತೋಷವೇನು?”ಎಂದು ಮುಗುಳ್ನಕ್ಕರು. ಆಗ ಮಹಾರಾಜರು ಆರೂಢರಿಗೆ, ಅವರ ಎತ್ತು-ಗಾಡಿಗಳಿಗೆ, ಗಾಡಿಯ ಚಾಲಕನಿಗೆ ಎಲ್ಲರಿಗೂ ನಮಸ್ಕರಿಸಿ ಅವರನ್ನು ಬೀಳ್ಕೊಟ್ಟರು. ಇದೀಗ ಶೇಷಾಚಲ ಸಾಧುಗಳು ನಮಸ್ಕರಿಸಿದಾಗ ಆರೂಢರು ಪ್ರತಿನಮಸ್ಕರಿಸಲಿಲ್ಲ ಸಾಧುಗಳಿಗಿಂತಲೂ ಆರೂಢರು ಶ್ರೇಷ್ಠ ಎಂದು ತಮ್ಮೊಳಗೆ ಗುನುಗುತ್ತಿರುವುದು ಆರೂಢರ ಕಿವಿಗೆ ಬಿದ್ದು ಶಿಷ್ಯರಿಗೆ ತಿಳಿಸಿದರು “ ನೋಡಿದಿರಾ ಆ ಸಾಧು ತನ್ನ ನಮಸ್ಕಾರದಿಂದ ನಮ್ಮನ್ನು ಹೇಗೆ ಕಡೆಗಣಿಸಿದರು. ಅದಕ್ಕೆ ಶಿಷ್ಯರು “ಸಾಧುಗಳು ನಿಮಗೆ ಎರಡೆರಡು ಬಾರಿ ನಮಸ್ಕರಿಸಿದರಲ್ಲವೆ, ಅಂದಮೇಲೆ ಹೇಗೆ ಕಡೆಗಣಿಸಿದಂತಾಯಿತು ?”ಎನ್ನಲು ಆರೂಢರು “ನೋಡು, ನನಗೆ ಕೈ ಮುಗಿದರು ನಾನು ಪ್ರತಿ ನಮಸ್ಕರಿಸಲಿಲ್ಲ, ಎತ್ತು ಗಾಡಿಗಳಿಗೂ ನಮಸ್ಕರಿಸಿದರು ಅವೂ ಸುಮ್ಮನಿದ್ದವು, ಹಾಗಾದರೆ ಮನುಷ್ಯರೂ ಪಶುಗಳೂ ಒಂದೇ ಎಂಬಂತಾಗಲಿಲ್ಲವೇ ?” ಅದರರ್ಥ ಇಷ್ಟೇ ಪ್ರತಿ ಜೀವಿಯೂ ಪರಬ್ರಹ್ಮ ಸ್ವರೂಪ. ಸಾಧುಗಳು ಸಾಧುತನದಿಂದ ಮತ್ತು ಆರೂಢರು ಆರೂಢತನದಿಂದ ನಡೆದುಕೊಂಡರು. ಹೀಗಾಗಿ ಇಬ್ಬರೂ ದೊಡ್ಡವರೇ. ಅಜ್ಞಾನಿಗಳಾದವರು ಆಕ್ಷೇಪಿಸುತ್ತಾರೆ. ಎಂದು ತಿಳಿಸಿದರು.
ಇದೇರೀತಿ ತಮ್ಮ ಕೈಂಕರ್ಯಗಳನ್ನು ಅತ್ಯಂತ ನಮ್ರತೆಯಿಂದ ಯಾರಿಗೂ ಕೇಡು ಬಯಸದೇ, ನೋವು ಮಾಡದೇ ತುಚ್ಛವಾಗಿ ಕಾಣದೇ “ಸಾಧು” ಎಂದರೆ ಶೇಷಾಚಲ ಸಾಧು ಎಂದು ಪ್ರತಿಯೊಬ್ಬರ ಬಾಯಿಂದ ಕರೆಸಿಕೊಂಡು ನಂತರ ಎಲ್ಲವನ್ನೂ ಎಲ್ಲರನ್ನೂ ಈಶ್ವರ ಸ್ವರೂಪ ಎಂದು ಭಾವಿಸಿ ಮಕ್ಕಳಾಗಲಿ-ದೊಡ್ಡವರಾಗಲಿ, ಬುದ್ಧಿವಂತ-ದಡ್ಡ, ವಿವೇಕಿ-ಅವಿವೇಕಿ, ಗಂಡು-ಹೆಣ್ಣು ಎಲ್ಲರನ್ನೂ ಸಮಭಾವದಿಂದ ತಾಯಿ, ಮಹಾರಾಜ ಎಂದು ಸಂಬೋಧಿಸಿ ಜಗತ್ತಿಗೆ ವಿನಯ ಶೀಲತೆಯ ಪ್ರಭಾವ ತೋರಿಸಿದ ಈ ಸಾಧುಗಳನ್ನು ಏನೆಂದು ಹೆಸರಿಸಲು ಸಾಧ್ಯ ? ಸಂತರಾದವರಿಗೆ ಚಮತ್ಕಾರಗಳು ಮುಖ್ಯವಲ್ಲ ಮನುಕುಲದ ಉದ್ಧಾರವೇ ಮೂಲ ಧ್ಯೇಯ ಎಂಬುದು ಇವರ ಜೀವನದ ಉದ್ದೇಶವಾಗಿತ್ತು. ಹಾಗೂ “ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಂ” ಎಂಬ ಉಕ್ತಿಗೆ ಜ್ವಲಂತ ಉದಾಹರಣೆ ನಾವು ಶೇಷಾಚಲ ಸಾಧುಗಳನ್ನು ಕಾಣಬಹುದು. ತಮ್ಮ ವಿನಯದಿಂದಲೇ ಜಗತ್ತಿಗೆ ಆದರ್ಶವಾದವರು. ಎಲ್ಲ ವಿದ್ಯೆಯೂ ತಮ್ಮಲ್ಲರುವಾಗ ಕಾಮ, ಕ್ರೋಧ, ಮೋಹ, ಲೋಭ, ಮದ-ಮತ್ಸರಗಳೆಂಬ ಅಹಂಕಾರವನ್ನು ತುಳಿದು ಕುಂಟನಾನಾದನು ಎಂದು ಶರೀಫ ಸಾಹೇಬರು ಹಾಡಿದ್ದುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ.
ನಂತರ ಗಳಗನಾಥರಿಗೆ ಗುರುಗಳ ಆದೇಶವಾಗಿ ಸಂಸ್ಕೃತ ಪಾಠಶಾಲೆ ಪ್ರಾರಂಭವಾಯಿತು. ಗೋ-ರಕ್ಷಣಗೆಗಾಗಿ ಗೋಶಾಲೆ ಪ್ರಾರಂಭವಾಯಿತು. ಪಾಠಶಾಲೆಯ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಗಾಗಿ “ಮುಷ್ಠಿಭಿಕ್ಷಾ”ಅಂದರೆ ಭಕ್ತರು ತಮ್ಮ ಮನೆಯಲ್ಲಿ ಒಂದು ಸಣ್ಣ ಕೈಚೀಲವನ್ನಿರಿಸಿ ಪ್ರತಿದಿನ ಅದಕ್ಕೆ ಒಂದು ಹಿಡಿ ಅಕ್ಕಿಯನ್ನು ಹಾಕಬೇಕು ಮತ್ತು ಪ್ರತಿ ತಿಂಗಳಲ್ಲಿ ನಿರ್ದಿಷ್ಟ ದಿನದಂದು ಅದನ್ನು ಆನಂದವನಕ್ಕೆ ತಂದು ನೀಡಬೇಕು. ಈ ಪದ್ದತಿಯನ್ನು ನಾವು ಈಗಲೂ ಕಾಣಬಹುದಾಗಿದೆ. ಅದರಂತೆ ಹತ್ತು ಸಾವಿರ ಜನರು ಒಮ್ಮೆ ಊಟ ಮಾಡಲು ಅನುಕೂಲವಾಗುವಂತಹ ʼಅನ್ನಬ್ರಹ್ಮʼ ಎಂಬ ದಾಸೋಹ ಭವನವಿದೆ. ಅಗಡಿಯಲ್ಲಿ ಒಂದು ವಾರಗಳ ಕಾಲ ಗುರುಗಳ ಜಯಂತಿಯ ಸಂದರ್ಭ ಸದಾ ಸಂತರ್ಪಣೆಯಿರುತ್ತದೆ. ಸಾವಿರ ಸಾವಿರ ಭಕ್ತರು ಬಂದು ಸೇರುತ್ತಾರೆ. ಇವರ ಮುಮ್ಮಗ ಶ್ರೀ ಚಿದಂಬರ ಮೂರ್ತಿ ಚಕ್ರವರ್ತಿಗಳೂ ಕೂಡ ಶೇಷಾಚಲ ಮಹಾರಾಜರ ಸಂಪ್ರದಾಯದಂತೆ ಆಶ್ರಮದ ದೇಖ-ರೇಖಿ ನೋಡಿಕೊಂಡು ಬಂದರು. ಪ್ರಸ್ತುತ ಆಶ್ರಮದಲ್ಲಿ ಯಾವುದೇ ಕೈಂಕರ್ಯಗಳು ನಿಂತಿಲ್ಲ ಗುರುನಾಥನ ಆಶಯದಂತೆ ಅವನ ಆಶೀರ್ವಾದದಿಂದ ಎಲ್ಲವೂ ನಡೆಯುತ್ತಿದೆ. ಪ್ರತಿಯೊಬ್ಬರೂ ನೋಡಲೇಬೇಕಾದ ತಾಣ ಅದು ಅಗಡಿಯ ಆನಂದವನ. ಪ್ರತಿಯೊಂದು ಮಗುವಿಗೂ ಸಹಾ ಶೇಷಾಚಲ ಮಹಾರಾಜರ ಪರಿಚಯವಾಗಬೇಕು. ಅವರ ಆದರ್ಶಗಳು ಎಲ್ಲರಿಗೂತ ತಿಳಿಸಬೇಕು ಎಂಬುದು ಈ ಲೇಖನದ ಉದ್ದೇಶವಾಗಿದೆ. ಈ ಮಹಾತ್ಮರ ಬಗ್ಗೆ ನಾನು ತೃಪ್ತಿಯಾಗುವಷ್ಟು ಹೇಳಿಬಿಡುವೆ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಸಮುದ್ರದ ಮುಂದೆ ನಿಂತು ಈ ನೀರೆಲ್ಲವೂ ನನ್ನದೇ ಎಲ್ಲವನ್ನೂ ಕುಡಿದುಬಿಡುತ್ತೇನೆ ಎಂದು ಸಾಹಸ ಮಾಡಿದಂತಾಗಬಹುದು. ದೊಡ್ಡ ಆನೆಯನ್ನು ಕನ್ನಡಿಯಲ್ಲಿ ಹಿಡಿದಿಡುವ ಪ್ರಯತ್ನ ಮಾಡಿರುವ ಈ ಬಾಲಕನಿಗೆ ಪ್ರೋತ್ಸಾಹವಿರಲಿ. ತಪ್ಪುಗಳಿದ್ದಲ್ಲಿ ತಮ್ಮ ಅನಿಸಿಕೆಗಳನ್ನು-ಅಭಿಪ್ರಾಯಗಳನ್ನು ವೈಯಕ್ತಿಕವಾಗಿ ಮೊಬೈಲ್‌ ಕರೆಯ ಮೂಲಕವೋ ಅಥವಾ ಇ-ಮೇಲ್‌ ಮೂಲಕವೋ ದಯವಿಟ್ಟು ತಿಳಿಸಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ನಗರದ ಬಡಾವಣೆಗಳಲ್ಲಿನ ಚರಂಡಿ ಸಮಸ್ಯೆ ತ್ವರಿತ ಬಗೆಹರಿಸಿ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಿವಮೊಗ್ಗ ನಗರದ ಬಡಾವಣೆಗಳಲ್ಲಿನ ಚರಂಡಿ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ...

B.Y. Raghavendra ಪ್ರವಾಸಿ ತಾಣವಾಗಿ ಜೋಗದ ಅಭಿವೃದ್ದಿ ಕಾಮಗಾರಿ ಶೀಘ್ರ ಪೂರೈಸಲು ಸಂಸದ ರಾಘವೇಂದ್ರ ಸೂಚನೆ

B.Y. Raghavendra ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಪ್ರವಾಸಿ ತಾಣವಾದ ಜೋಗ ಜಲಪಾತವನ್ನು...

Revenue Department ಮೇ 1 & 2 ಶಿವಮೊಗ್ಗದಲ್ಲಿ ಕಂದಾಯ ಇಲಾಖಾ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ

Revenue Department ಕಂದಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ...

Klive Special Article ವಿಶಿಷ್ಟಾವತಾರಾ.. ನರಸಿಂಹಾವತಾರ ...

Klive Special Article ವಿಷ್ಣುವಿನ ದಶಾವತಾರದಲ್ಲಿ ನಾಲ್ಕನೇ ಅವತಾರವೇ ನೃಸಿಂಹಾವತಾರ.ದಶಾವತಾರದಲ್ಲಿ ಇದೊಂದು...