Rotary Shivamogga ಸಮುದಾಯದ ಆರ್ಥಿಕ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈ ಜೋಡಿಸಿದಾಗ ದೇಶ ಅಭಿವೃದ್ಧಿ ಸಾಧ್ಯ ಎಂದು ಡಾ. ಎ.ಟಿ.ಪದ್ಮೇಗೌಡ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಹಳ್ಳಿಗಳಿಂದ ಕೂಡಿರುವಂತಹ ದೇಶವಾಗಿದ್ದು, ದೇಶದ ಜನಸಂಖ್ಯೆ 145 ಕೋಟಿ ದಾಟಿದ್ದು, ಪ್ರತಿಯೊಬ್ಬರು ಕೂಡ ಸಮಾಜದಲ್ಲಿ ಮೊಟ್ಟಮೊದಲು ತನ್ನ ಕುಟುಂಬವನ್ನು ನಿರ್ವಹಣೆ ಮಾಡುವುದನ್ನು ಕಲಿತರೆ ಸಮುದಾಯದ ಆರ್ಥಿಕ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಅವಶ್ಯಕತೆಗಿಂತ ಹೆಚ್ಚಾಗಿ ಹಣವನ್ನು ಸಂಪಾದಿಸುತ್ತಿದ್ದಾರೆ. ಆದರೆ ಕೆಲವರು ಹಣವನ್ನು ಸಂಪಾದಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹಬ್ಬ ಹರಿದಿನಗಳು ಬಂದ ಸಂದರ್ಭದಲ್ಲಿ ಅವಶ್ಯಕತೆಗಿಂತ ಹೆಚ್ಚು ಹಣವನ್ನು ಖರ್ಚು ಮಾಡಿ ಸಾಲಗಾರನಾಗಿ ಜೀವನ ಸಾಗಿಸುತ್ತಾನೆ. ಇದರಿಂದ ಸಮಾಜದ ಮತ್ತು ಸಮುದಾಯದ ಆರ್ಥಿಕ ಅಭಿವೃದ್ಧಿ ಬಹಳ ಕಷ್ಟವಾಗುತ್ತದೆ ಎಂದು ಹೇಳಿದರು.
ಭಾರತೀಯರು ಬೇರೆ ದೇಶಗಳಿಗಿಂತ ವಿಭಿನ್ನ ವೈವಿಧ್ಯತೆಯ ವ್ಯವಸ್ಥೆಯನ್ನು ಹೊಂದಿದ್ದೇವೆ. ಪ್ರತಿಯೊಬ್ಬರೂ ಕೂಡ ಒಗ್ಗಟ್ಟಿನಿಂದ ದುಡಿದಾಗ ಮಾತ್ರ ಸಮುದಾಯ, ಸಮಾಜ ದೇಶ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್ ಕುಮಾರ್ ಮಾತನಾಡಿ, ರೋಟರಿ ಪೂರ್ವ ಸಂಸ್ಥೆಯ ಪ್ರತಿಯೊಬ್ಬ ಸದಸ್ಯರು ಸಮಾಜಮುಖಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮುದಾಯವನ್ನು ಬಲಪಡಿಸಬೇಕು ಎಂದು ತಿಳಿಸಿದರು.
Rotary Shivamogga ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಧನಂಜಯ.ಬಿ.ಆರ್., ನಿಯೋಜಿತ ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಡಾ. ಗುಡುದಪ್ಪ ಕಸಬಿ, ಚಂದ್ರಹಾಸ ಪಿ ರಾಯ್ಕರ್, ಪರಮೇಶ್ವರ ಶಿಗ್ಗಾವ್, ರವಿಶಂಕರ್ ಬಿ ಎಂ, ಅರುಣ್ ದೀಕ್ಷಿತ್, ವಿಜಯಲಕ್ಷ್ಮೀ ಇತರರಿದ್ದರು.
