Kannada Sahitya Parishad ಕನ್ನಡಕ್ಕಾಗಿ ಹೋರಾಡಿದ ಕನ್ನಡ ಚಳವಳಿಗಾರರ ಮೇಲಿನ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಆಗ್ರಹ ಪಡಿಸಿದ್ದಾರೆ.
ಈ ಕುರಿತು 2023ರ ಜನವರಿ 6,7 ಮತ್ತು 8ರಂದು ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸರ್ವಾನುಮತದಿಂದ ನಿರ್ಣಯವನ್ನು ತೆಗೆದುಕೊಂಡಿತ್ತು.
ನಿರಂತರವಾಗಿ ಕರ್ನಾಟಕ ರಾಜ್ಯ ಸರ್ಕಾರದ ಮೇಲೆ ಒತ್ತಡವನ್ನೂ ಹಾಕುತ್ತಾ ಬಂದಿತ್ತು. ಆದರೆ ಅದು ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ರಾಜಕೀಯ ಮತ್ತು ಸಾಮಾಜಿಕ ನೆಲೆಗಳಲ್ಲಿ ಮೊಕದ್ದಮೆಗಳನ್ನು ಹಿಂಪಡೆಯಲಾಗುತ್ತಿದೆಯೇ ಹೊರತು ಕನ್ನಡಕ್ಕೆ ಹೋರಾಡಿದ ಚಳವಳಿಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯದಿರುವುದು ದುರದೃಷ್ಟಕರ ಸಂಗತಿ ಎಂದು ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
ಕನ್ನಡ ಹೋರಾಟಗಾರರು ತಮ್ಮ ಸಮಸ್ತವನ್ನು ಕನ್ನಡಕ್ಕಾಗಿ ತ್ಯಾಗ ಮಾಡಿ. ಕೇವಲ ಕನ್ನಡದ ಮೇಲಿನ ಅಭಿಮಾನದಿಂದ ಮೊಕದ್ದಮೆಗಳನ್ನು ಹೇರಿಕೊಂಡು ಹಲವು ಕಷ್ಟಗಳನ್ನು ಅನುಭವಿಸುತ್ತಾರೆ, ನ್ಯಾಯಾಲಯಕ್ಕೆ ಸುತ್ತುವ, ಸೆರೆಮನೆ ವಾಸ ಅನುಭವಿಸುವ, ವಿದೇಶಗಳಿಗೆ ಹೋಗುವ ರಹದಾರಿಯು ದೊರಕದೆ, ಅವಕಾಶಗಳಿಂದ ವಂಚಿತರಾಗುವ ಹೀಗೆ ಹಲವು ಸಂಕಷ್ಟಗಳನ್ನು ಅನುಭವಿಸಿ ವೈಯಕ್ತಿಕ ಜೀವನವನ್ನೇ ಇದಕ್ಕಾಗಿ ತ್ಯಾಗ ಮಾಡಿರುತ್ತಾರೆ.
Kannada Sahitya Parishad ರಾಜ್ಯ ಸರ್ಕಾರ ಅವರ ನೋವುಗಳಿಗೆ ಮಿಡಿಯದಿದ್ದರೆ ಕನ್ನಡಪರ ಎನ್ನಿಸಿಕೊಳ್ಳುವುದು ಹೇಗೆ? ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಇನ್ನು ಹೆಚ್ಚು ಸಮಯ ವ್ಯರ್ಥ ಮಾಡದಂತೆ ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಬೇಕೆಂದು ನಾಡೋಜ ಡಾ.ಮಹೇಶ ಜೋಶಿಯವರು ಆಗ್ರಹಿಸಿದ್ದಾರೆ.
