Klive Special Article ರಕ್ಷಾ ಬಂಧನ” ಎಲ್ಲಾ ಹಬ್ಬಗಳಂತಲ್ಲದೆ ಹೆಣ್ಣು ಮಕ್ಕಳಿಗೆ ವಿಶೇಷವಾದ ಹಬ್ಬ. ಕಾರಣ ಹೆಣ್ಣು ಮಕ್ಕಳು ತಮ್ಮ ಅಣ್ಣ -ತಮ್ಮಂದಿರಿಗೆ (ರಕ್ತ ಸಂಬಂಧಿಯೇ ಆಗಿರಬೇಕಿಲ್ಲ) “ಶ್ರೀರಕ್ಷೆಯ” ಎರವಲಾಗಿ ರಾಖಿಯನ್ನು ಕಟ್ಟುವುದರ ಸಂಭ್ರಮವೇ ರಕ್ಷಾ ಬಂಧನ ….
ಅಣ್ಣತಮ್ಮಂದಿರನ್ನೊಳಗೊಂಡ ನಾವು ಸಮಾಜದ ರೂಪವಾಗಿ ಎಲ್ಲಾ ಹೆಣ್ಣು ಮಕ್ಕಳಿಗೆ ಸುರಕ್ಷೆಯನ್ನು ನೀಡಬೇಕಿದೆ ..
ಈ ಮಾತಿಗೆ ಕಾರಣ ಇತ್ತೀಚೆಗೆ ಕೆಲವು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವ ವಿಷಯದ ಗಂಭೀರತೆಯನ್ನು ಅರಿತು ನಮ್ಮ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ,ಮಾನ್ಯ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ಅಧೀಕ್ಷಕರ ನೇತೃತ್ವದಲ್ಲಿ ನಮ್ಮ ಜಿಲ್ಲೆಯ ಮಕ್ಕಳ ಸುರಕ್ಷತೆಗೆ MISSION SURAKSHA – Safe Urban And Rural Areas for Knowing and Shielding All children rights ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಯುತ ಹೇಮಂತ್ ರವರಂತೂ ನಮ್ಮ ಶಿವಮೊಗ್ಗ ಜಿಲ್ಲೆಯನ್ನು ಲೈಂಗಿಕ ದೌರ್ಜನ್ಯ ಮುಕ್ತ ಹಾಗೂ ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸುವ ಮಹಾಭಿಲಾಷೆಯನ್ನು ಹೊತ್ತು ಎಲ್ಲಾ ಇಲಾಖೆಗಳನ್ನು ಸಮ್ಮಿಳಿತಗೊಳಿಸಿ ನಗರದ ವಾರ್ಡ್ ಹಾಗೂ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಕಾವಲು ಸಮಿತಿಗಳನ್ನು ರಚಿಸಿ ಈ ಅಭಿಯಾನದ ಯಶಸ್ಸಿಗೆ ಸಿದ್ದರಾಗಿ ನಿಂತಿದ್ದಾರೆ. ಈ ಮಹತ್ಕಾರ್ಯಕ್ಕೆ ಟೊಂಕ ಕಟ್ಟಿ ನಿಂತು ಸದಾ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಮಾನ್ಯ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರ ಅಭಿಲಾಷೆಗೆ ಸದಾ ಜೊತೆಯಾಗಿ ನಿಲ್ಲುವ ನಾವು ನಮ್ಮ ಜಿಲ್ಲಾ ಉಪ ನಿರ್ದೇಶಕರಾದ ಮಂಜುನಾಥ್ ರವರ ಸಲಹೆ ಮೇರೆಗೆ ಈ ಮಹತ್ತ್ಕಾರ್ಯದ ಒಳ್ಳೆಯ ಗುರಿಯನ್ನು ಮುಟ್ಟಲು ಹೊರಟು ನಿಂತಿದ್ದೇವೆ . ಹಾಗಾಗಿ ಪ್ರತಿ ಶಾಲೆಯಲ್ಲೂ 17 ಅಂಶಗಳನ್ನೊಳಗೊಂಡ ಕ್ರಿಯಾಯೋಜನೆ ತಯಾರಿಸಿ ಪ್ರತಿ ಗ್ರಾಮದಲ್ಲೂ ಈ ಎರಡು ಮಹಾಮಾರಿಗಳ ತಡೆಗೆ ಕಾರ್ಯ ಪ್ರವೃತ್ತರಾಗಲು ಸೂಚಿಸಲಾಗಿದೆ.
Klive Special Article ಈ ಅಭಿಯಾನದ ಮುಖ್ಯ ಭಾಗ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವುದು. ಈ ನಿಟ್ಟಿನಲ್ಲಿ ನಾವು ನಮ್ಮ ತಾಲ್ಲೂಕಿನಲ್ಲಿ ಅಭಿಯಾನವನ್ನು ಕೈಗೊಂಡು ಎಲ್ಲಾ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ನಿರ್ಧರಿಸಿ ,ಪ್ರತಿ ಶಾಲೆಯಲ್ಲಿಯೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಪ್ರತಿದಿನ ಪೋಷಕರ ಮನೆಗೆ ತೆರಳಿ ಅವರ ಮನವೊಲಿಸಿ ಅವರನ್ನು ಶಾಲೆಗೆ ಕರೆ ತರಲು ಪ್ರಾರಂಭಿಸಿದ್ದೇವೆ…ಈಗಾಗಲೇ ಸಾಕಷ್ಟು ಮಕ್ಕಳನ್ನು ಶಾಲೆಯ ಮುಖ್ಯವಾಹಿನಿಗೆ ಕರೆ ತಂದಿದ್ದೇವೆ……
ಈ ಸಂದರ್ಭದಲ್ಲಿ ಒಂದು ಹಳ್ಳಿಗೆ ತೆರಳಿದಾಗ ನಮ್ಮ ಶಿಕ್ಷಕರು ಸಾಕಷ್ಟು ಬಾರಿ ಮನೆಗೆ ತೆರಳಿ ಶಾಲೆಗೆ ಮರುಹಾಜರಾಗಲು ತಿಳಿಸಿದರೂ “ನಾನು ಯಾವುದೇ ಕಾರಣಕ್ಕೂ ಶಾಲೆಗೆ ಬರುವುದಿಲ್ಲ” ಎಂಬ ದಿಟ್ಟ ನಿರ್ಧಾರವನ್ನು ಕೈಗೊಂಡ ಒಂದು ಮಗುವಿನ ಮನೆಗೆ ತೆರಳಿದೆನು ಆ ಮಗುವಿನ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಕೆಯ ನಿರ್ಧಾರ ಇನ್ನೂ ಅಚಲವಾಗಿಯೇ ಇತ್ತು. ಬಹಳಷ್ಟು ಪ್ರಯತ್ನ ನಡೆಸಿ, ಆ ಮಗುವಿಗೆ ಶಾಲೆಯನ್ನು ತೊರೆದರೆ ಹಾಗೂ ಜ್ಞಾನದ ಕೊರತೆಯಾದರೆ ಆಗುವ ನಷ್ಟಗಳನ್ನು ಮನವರಿಕೆ ಮಾಡಿಸಿ ಆಕೆಗೆ ಶಾಲೆಯಲ್ಲಿ ಸಂತಸದ ವಾತಾವರಣ ನಿರ್ಮಾಣದ ಭರವಸೆಯನ್ನು ನೀಡಿದ ನಂತರ ಆಕೆಯನ್ನು ಶಾಲೆಗೆ ಮರಳಿ ತರಲಾಯಿತು… ಮೊದಲು ಭೇಟಿ ನೀಡಿದಾಗ ಆ ಮಗುವಿಗೆ ಶಾಲೆಗೆ ಬರಲು ದುಃಖ ಉಮ್ಮಳಿಸಿ ಬರುತ್ತಿತ್ತು ..ಆದರೆ ಆ ಶಾಲೆಗೆ ಬಂದು ಕುಳಿತ ನಂತರ ಆಕೆಯ ಕಣ್ಣಲ್ಲಿ ಆನಂದ ಭಾಷ್ಪ ತುಂಬಿತ್ತು..ನಾನಿನ್ನೆಂದೂ ಶಾಲೆಯನ್ನು ಬಿಡುವುದಿಲ್ಲ ಎಂದು ಆಕೆ ನಮಗೆ ಭರವಸೆಯನ್ನೂ ನೀಡಿದಳು…..ಈ ಘಟನೆಯ ನಂತರ ನನಗೂ ನನ್ನ ಕೆಲಸದ ಮೇಲೆ ಗೌರವ ಹಾಗೂ ಸಾರ್ಥಕವೆನಿಸಿತು.
ಸಂವಿಧಾನದ 4A ಭಾಗದ 51A ವಿಧಿಯಲ್ಲಿ ಅಡಕವಾಗಿರುವ ಮೂಲಭೂತ ಕರ್ತವ್ಯಗಳಿಗೆ 2002ನೇ ಇಸವಿಯಲ್ಲಿ 86ನೇ ತಿದ್ದುಪಡಿ ಮೂಲಕ 11ನೇ ಕರ್ತವ್ಯವಾಗಿ ತಂದೆ ತಾಯಿ ಅಥವಾ ಪೋಷಕರು ಸಂದರ್ಭಾನುಸಾರ 6 ರಿಂದ 14 ವಯಸ್ಸಿನ ತಮ್ಮ ಮಗುವಿಗೆ ಅಥವಾ ತಮ್ಮ ಪರಿಪಾಲಿತ ಮಗುವಿಗೆ ಶಿಕ್ಷಣ ಪಡೆಯಲು ಅವಕಾಶಗಳನ್ನು ಒದಗಿಸಬೇಕು ಎಂದು ಸ್ಪಷ್ಟಪಡಿಸಿದರೂ ಈ ರೀತಿಯ ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಇನ್ನೂ ಮನೆಯಲ್ಲಿಯೇ ಉಳಿಯುವುದು ಹಾಗೂ ಕೂಲಿಗೆ ತೆರಳುತ್ತಿರುವುದು ಕಂಡುಬರುತ್ತಿದೆ …ಕಾರಣ ಬಡತನ ಮತ್ತಿತರ ತೊಂದರೆಗಳು ಎಂದು ಅವರು ಹೇಳುತ್ತಾರೆ . ಆದರೆ ಇಂತಹ ಮಕ್ಕಳನ್ನು ಮುಖ್ಯ ವಾಹಿನಿಗೆ ತಂದು ಅವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿದರೆ ಅವರ ಕುಟುಂಬದ ಸ್ಥಿತಿ ಸುಧಾರಣೆಯಾಗಿ ಅವರು ಸಮಾಜದಲ್ಲಿ ಸದೃಢರಾಗಿ ಬೆಳೆಯುತ್ತಾರೆ ಇಲ್ಲವಾದಲ್ಲಿ ಈ ರೀತಿಯ ಮಕ್ಕಳೇ ಸಮಾಜದ ಘಾತುಕ ಶಕ್ತಿಗೆ ಬಲಿಯಾಗುತ್ತಾರೆ…ಶಾಲೆಯಿಂದ ಹೊರಗುಳಿದ ಮಕ್ಕಳು ಮುಂದೊಂದು ದಿನ ಸಮಾಜದಿಂದಲೂ ಹೊರಗುಳಿದು ಸಮಾಜಘಾತಕ ಶಕ್ತಿಯಾಗಿಯಾಗಿಯೂ ಬದಲಾಗಬಲ್ಲರು.
ಈ ಬದಲಾವಣೆಗೆ ಕಾರಣ ನಾವುಗಳೇ ಅಂದರೆ ಸಮಾಜವೇ ಆಗಬಹುದು.. ಯಾವುದೇ ಅಭಿಯಾನ ಯಶಸ್ವಿಯಾಗಬೇಕಾದರೆ ಸಮಾಜದ ಅಂದರೆ ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯ “1098” ಸಹಾಯವಾಣಿಯನ್ನು ಮಕ್ಕಳೂ ಸೇರಿಕೊಂಡು ಪ್ರತಿಯೊಬ್ಬರೂ ಬಳಸಬಹುದಾಗಿದೆ ಯಾವುದಾದರೂ ಘಟನೆಗಳು ನಡೆದ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತ ಅದರ ಮುನ್ಸೂಚನೆಯನ್ನರಿತು ಮುಂಚಿತವಾಗಿಯೇ ಈ ತರದ ಘಟನೆಗಳನ್ನು ತಡೆಯಲು ಈ “1098”ಸಹಾಯವಾಣಿಯನ್ನು ಬಳಸುವುದರ ಮೂಲಕ ಹಾಗೂ ಸಂಬಂಧಿತ ಇಲಾಖೆಯ ಗಮನಕ್ಕೆ ತರುವುದರ ಮೂಲಕ ಸುರಕ್ಷಾ ಅಭಿಯಾನದ ಯಶಸ್ವಿಗೆ ಕರಣಿಭೂತರಾಗಿ ಈ “ರಕ್ಷಾಬಂಧನ” ದಿನದಿಂದ ಸುರಕ್ಷೆಯ ಭರವಸೆಯನ್ನು ನಮ್ಮ ಮಕ್ಕಳಿಗೆ ನೀಡೋಣ……
ರಮೇಶ್
ಕ್ಷೇತ್ರ ಶಿಕ್ಷಣಾಧಿಕಾರಿಗಳು
ಶಾಲಾ ಶಿಕ್ಷಣ ಇಲಾಖೆ
ಶಿವಮೊಗ್ಗ
