ವಿಶ್ವದ ಆರ್ಥಿಕತೆಯಲ್ಲಿ ಜವಳಿ ಕೈಗಾರಿಕೋದ್ಯಮದ ಪಾತ್ರವು ಮಹತ್ತರವಾಗಿದ್ದು ನೇಕಾರ ವೃತ್ತಿಯು ಇದರ ಮೂಲವಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.
ಅವರು ನಗರದ ಸ್ವಕುಳ ಸಾಳಿ ಸಮಾಜ ನೇಕಾರ ವತಿಯಿಂದ ಸದ್ಯೋಜಾತ ಶಿವಾಚಾರ್ಯ ಹಿರೇಮಠದಲ್ಲಿ ಏರ್ಪಾಡಾಗಿದ್ದ ಭಗವಾನ್ ಶ್ರೀ ಜಿಹ್ವೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಜವಳಿ ಕೈಗಾರಿಕೋದ್ಯಮದ ಮೂಲಪುರುಷರು ನೇಕಾರರು. ಕೈಮಗ್ಗದಿಂದ ಬಟ್ಟೆ ನೇಯುವ ನೇಕಾರರಿಗೆ ಭಗವಾನ್ ಜಿಹ್ವೇಶ್ವರರು ಆರಾಧ್ಯ ದೈವವಾಗಿದ್ದು ಶಿವನ ನಾಲಗೆಯಿಂದ ಹುಟ್ಟಿ ಬಂದ ಜೀಹ್ವೇಶ್ವರರು ದೇವತೆಗಳಿಗೆ ಉಡಲು ಬಟ್ಟೆ ನೇಯ್ದು ಕೊಟ್ಟರು. ನೇಯ್ಗೆಯಲ್ಲಿ ಉದ್ದ ನೂಲಿನ ಹಾಸು ಹಾಗೂ ಅಡ್ಡನೂಲಿನ ಹೊಕ್ಕು ಮುಖ್ಯವಾಗಿದ್ದು ಉದ್ದನೂಲಿನ ಹಾಸು ಜ್ಞಾನದ ವೈಶಾಲ್ಯತೆಯ ಸಂಕೇತವಾದರೆ ಅಡ್ಡನೂಲಿನ ಹೊಕ್ಕು ವಿದ್ಯೆಯ ಸಂಕೇತವಾಗುತ್ತದೆ. ಹಾಸು ಹೊಕ್ಕು ನೂಲುಗಳು ಕೂಡಿ ವಸ್ತ್ರ ಸಿದ್ಧವಾಗುವಂತೆ ಸುಜ್ಞಾನ ಸದ್ವಿದ್ಯೆಗಳು ಕೂಡಿದಾಗ ಸುಸಂಸ್ಕೃತಿ ಸಾಕಾರವಾಗುತ್ತದೆ. ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಾದ ಇಂದೇ ನೇಕಾರರ ಮೂಲಪುರುಷರಾದ ಜಿಹ್ವೇಶ್ವರರ ಜಯಂತಿ ಬಂದಿರುವುದು ಬಹಳ ವಿಶೇಷ ಎಂದರಲ್ಲದೆ ಜಗತ್ತಿಗೆ ಬಟ್ಟೆಯ ಪರಿಚಯವನ್ನು ಮೊಟ್ಟಮೊದಲು ಮಾಡಿ ಕೊಟ್ಟಿದ್ದು ಭಾರತ ದೇಶ. ವಿಶ್ವದ ಜವಳಿ ಕೈಗಾರಿಕೋದ್ಯಮದ ಮೊತ್ತವು ವಾರ್ಷಿಕ ಸುಮಾರು ಒಂದುವರೆ ಟ್ರಿಲಿಯನ್ ಡಾಲರ್ ಗಳಷ್ಟಿದ್ದರೆ ಭಾರತದ ಜವಳಿ ಉದ್ಯಮದ ವಾರ್ಷಿಕ ಮೊತ್ತವೇ ಸುಮಾರು 160 ಬಿಲಿಯನ್ ಡಾಲರ್ ಗಳಷ್ಟಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಅವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಸಕಾರಾತ್ಮಕ ಉತ್ತೇಜನಗಳ ಅವಶ್ಯಕತೆ ಇದ್ದು ಇಂತಹ ಕಾರ್ಯಕ್ರಮಗಳಿಗೆ ಮಕ್ಕಳು ಹೆಚ್ಚಾಗಿ ಬರುವಂತಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬಿ ಎನ್ ಮಲ್ಲೇಶ್ ರವರು ಕುಲ ಕಸಬುಗಳಿಗೆ ತೊಂದರೆ ಬಂದಾಗ ಬೇರೆ ವೃತ್ತಿ ಅವಲಂಬಿಸಲು ಶಿಕ್ಷಣವು ಅವಶ್ಯ ಮಕ್ಕಳ ಉತ್ತಮ ಶಿಕ್ಷಣಕ್ಕೆ ಆದ್ಯತೆ ಕೊಡಬೇಕೆಂದರು.
ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಿ ಮಾಲತೇಶ್ ರಾವ್ ಜಾದವ್ ಮುಖ್ಯ ಅತಿಥಿಗಳಾಗಿ ಮಾತನಾಡಿ ಮುಂದಿನ ವರ್ಷಗಳಲ್ಲಿ ಸಮಾಜದವರು ತಮ್ಮದೇ ಆದ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಸುವಂತೆ ಅಗಲಿ ಎಂದು ಆಶಿಸಿದರು.
ಸಾನಿಧ್ಯ ವಹಿಸಿ ಆಶೀರ್ವಚನವನ್ನು ನೀಡಿದ ಜಡೆಸಿದ್ದ ಶಿವಯೋಗೀಶ್ವರ ಮಠದ ಡಾ. ಶಿವಾನಂದ ಮಹಾಸ್ವಾಮಿಗಳು ಜಿಹ್ವೆ ಎಂದರೆ ನಾಲಿಗೆ, ನಾಲಿಗೆಯನ್ನು ಹರಿಬಿಟ್ಟಲ್ಲಿ ಅಪಾಯ ತಪ್ಪಿದ್ದಲ್ಲ, ಅದಕ್ಕಾಗಿಯೇ ಭಗವಂತ ನಾಲಿಗೆಯ ನಿಗ್ರಹಕ್ಕೆ ಮುಚ್ಚಳ ರೂಪದಲ್ಲಿ ತುಟಿಗಳನ್ನು ಕೊಟ್ಟಿದ್ದಾನೆ ಎಂದರು.
ದಾವಣಗೆರೆ ಸ್ವಕುಳಸಾಳಿ ಸಮಾಜದ ಅಧ್ಯಕ್ಷರಾದ ಸುರೇಂದ್ರ ಕುಮಾರ್ ವಾಂಜ್ರೆಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ದಾನಿಗಳಿಗೆ ಸನ್ಮಾನ ನೆರವೇರಿತು.
ಕ್ಷೀರಸಾಗರದ ಹನುಮಂತಪ್ಪ, ಡಿ ನಾಗೇಂದ್ರ ಸರೋದೆ, ಗಣೇಶ್ ಕ್ಷೀರಸಾಗರ ಮುಂತಾದವರು ಉಪಸ್ಥಿತರಿದ್ದ ವೇದಿಕೆಯಲ್ಲಿ ಕಾರ್ಯಕ್ರಮದ ನಿರೂಪಣೆಯನ್ನು ಪ್ರಧಾನ ಕಾರ್ಯದರ್ಶಿ ಧರ್ಮರಾಜ್ ವಿ ಏಕಬೋಟೆ ಮಾಡಿದರೆ ಪ್ರಾರ್ಥನೆಯನ್ನು ಸಮಾಜದ ಮಹಿಳಾ ಮಂಡಳಿಯವರು ಹಾಡಿದರು.
ಸ್ವಾಗತವನ್ನು ಮಂಜುನಾಥ ಕಾಂಬ್ಳೆ ಕೋರಿದರೆ ವಂದನೆಗಳನ್ನು ವಾಸುದೇವ ಸಾಕ್ರೆ ಅರ್ಪಿಸಿದರು. ಸುಬ್ರಹ್ಮಣ್ಯಂ ಕೆಂದೋಳೆ ವಿರಚಿತ ಮೂಲಸ್ಥಂಭ ಸಾಳೀ ಮಹಾತ್ಮ್ಮ ಪುರಾಣ ಗ್ರಂಥ ಬಿಡುಗಡೆಗೆ ನೆರವೇರಿತು.
