Wednesday, August 12, 2026
Wednesday, August 12, 2026

ರೈತರಿಗೆ ಮಾಹಿತಿ. ಅಡಿಕೆ ಗಿಡಗಳಿಗೆ ಬೇರು ಹುಳುಗಳ ಕಾಟ & ನಿಯಂತ್ರಣ

Date:

ಬೇರು ಹುಳುಗಳು ತೇವಾಂಶವಿರುವ ಮಣ್ಣಿನ ಪದರದಲ್ಲಿ ಗೋಡು ಮಣ್ಣಿನಿಂದ ಕೂಡಿದ ಹಳ್ಳದ ಪಕ್ಕದ ಮತ್ತು ಗದ್ದೆ ಜಮೀನಿನಲ್ಲಿ ಮಾಡಿದ ಅಡಿಕೆ ತೋಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹುಳುಗಳು ಭೂಮಿಯೊಳಗಿದ್ದು, ಅಡಿಕೆ ಬೇರುಗಳನ್ನು ಕತ್ತರಿಸಿ ತಿನ್ನುವುದರಿಂದ ಗಿಡಗಳು ರೋಗಗ್ರಸ್ತವಾದಂತೆ ಕಂಡುಬರುತ್ತವೆ. ಬಾಧೆಗೀಡಾದ ಮರಗಳಲ್ಲಿ ಎಲೆಗಳು ಹಳದಿಯಾಗಿ, ಗರಿ ಮತ್ತು ಗೆಣ್ಣುಗಳು ಗಿಡ್ಡವಾಗಿ, ಕಾಂಡದ ತುದಿ ಮೊನಚಾಗುತ್ತದೆ. ಇಳುವರಿ ಕಡಿಮೆಯಾಗುತ್ತಾ ನಂತರದ ದಿನಗಳಲ್ಲಿ ಮರಗಳು ಸಾಯುತ್ತವೆ.
ಲ್ಯೂಕೋಫೋಲಿಸ್ ಕೋನಿಯೋಫೋರಾ ದುಂಬಿಗಳು ಮೇ ಮತ್ತು ಜೂನ್ ತಿಂಗಳಲ್ಲಿ ಎರಡು ಮಳೆಗಳಾದ ನಂತರ ಹೊರಬರುತ್ತವೆ. ಲ್ಯೂಕೋಫೋಲಿಸ್ ಬರ್ಮಿಸ್ಟೆರಿ ದುಂಬಿಗಳು ಜೂನ್ ತಿಂಗಳಲ್ಲಿ ಹೊರಬರುತ್ತವೆ. ಲ್ಯೂಕೋಫೋಲಿಸ್ ಲೆಪಿಡೋಫೋರಾ ಜುಲೈ ತಿಂಗಳಿನ ಕೊನೆಯಲ್ಲಿ ಅಥವಾ ಆಗಸ್ಟ್ ತಿಂಗಳಿನ ಪ್ರಾರಂಭದಲ್ಲಿ ಹೊರಬರುತ್ತವೆ. ಈ ದುಂಬಿಗಳು ಸಂಜೆಯ ಸುಮಾರು ೬.೩೦ ರಿಂದ ೭.೩೦ರ ವೇಳೆಯಲ್ಲಿ ಮಣ್ಣಿನಿಂದ ಹೊರಬರುತ್ತವೆ.
ಆಳದಲ್ಲಿ ಮಣ್ಣಿನ ಗೂಡಿನೊಳಗೆ ಕೋಶಗಳು ಇಡುವುದರಿಂದ ಮಣ್ಣಿನಿಂದ ಹೊರಗೆ ಬರಲು ಮಳೆ ಅತ್ಯಾವಶ್ಯಕ, ಮೊದಲ ಮಳೆ ಬರುತ್ತಿದ್ದಂತೆಯೇ ಮೇ ಅಥವಾ ಜೂನ್ ತಿಂಗಳಿನಲ್ಲಿ ದುಂಬಿಗಳು ಮಣ್ಣಿನ ಗೂಡಿನೊಳಗಿಂದ ಗುಂಪುಗಳಲ್ಲಿ ಹೊರ ಬರುತ್ತವೆ. ಮಳೆಗಾಲವು ಹುಳುಗಳು ಹೊರಗೆ ಬರಲು ಉತ್ತೇಜಿಸುತ್ತದೆ. ಲ್ಯೂಕೋಫೋಲಿಸ್ ಕೋನಿಯೋಫೋರ್ ಒಂದು ವರ್ಷದಲ್ಲಿ ಜೀವನ ಚಕ್ರವನ್ನು ಮುಗಿಸಿದರೆ, ಲ್ಯೂಕೋಫೋಲಿಸ್ ಬರ್ಮಿಸ್ಟೆರಿ ಮತ್ತು ಲ್ಯೂಕೋಫೋಲಿಸ್ ಲೆಪಿಡೋಫೋರಾ ಎರಡು ವರ್ಷಗಳಲ್ಲಿ ತಮ್ಮ ಜೀವನ ಚಕ್ರವನ್ನು ಮುಗಿಸುತ್ತವೆ. ರೈತರಿಗೆ ಇವುಗಳ ನಿರ್ವಹಣಾ ಕ್ರಮಗಳ ಮಾಹಿತಿಯನ್ನು ಡಾ. ನಾಗರಾಜಪ್ಪ ಅಡಿವಪ್ಪರ್, ಮುಖ್ಯಸ್ಥರು, ಅಡಿಕೆ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ ಇವರು ತಿಳಿಸಿರುತ್ತಾರೆ.
ಹತೋಟಿ ಕ್ರಮಗಳು
ಮುಂಗಾರಿನಲ್ಲಿ ಒಂದೆರಡು ಹದ ಮಳೆ ಆದ ನಂತರ ಮುಸ್ಸಂಜೆಯಲ್ಲಿ ಭೂಮಿಯಿಂದ ಹೊರಬರುವ ದುಂಬಿಗಳನ್ನು ಹಿಡಿದು ನಾಶಪಡಿಸುವುದರಿಂದ ಸಂತತಿಯನ್ನು ಕಡಿಮೆ ಮಾಡಬಹುದು.
ಆಗಸ್ಟ್ ಮೊದಲನೆ ವಾರದಲ್ಲಿ ೨-೩ ನೇ ಹಂತದ ಬೇರು ಹುಳುಗಳು ಹೆಚ್ಚಾಗಿರುವಾಗ ಕ್ಲೋರಪೈರಿಫಾಸ್ ೨೦ ಇ.ಸಿಯನ್ನು ಎಕರೆಗೆ ೨ ಲೀ ನಂತೆ (೨೦೦ ಲೀಟರ್ ನೀರಿಗೆ ೪೦೦ ಮಿ.ಲೀ ಔಷಧಿ ಕರಗಿಸಿ) ಪ್ರತಿ ಮರಕ್ಕೆ ೩-೫ ಲೀ. ಪ್ರಮಾಣದಲ್ಲಿ ಮರದ ಸುತ್ತ ಸುರಿಯಬೇಕು.
ಸೆಪ್ಟೆಂಬರ್ ತಿಂಗಳಲ್ಲಿ ಸಾಧ್ಯವಿರುವ ಕಡೆ ಬಸಿಗಾಲುವೆಗಳಲ್ಲಿ ೩-೪ ದಿನ ಕಂಠ ಮಟ್ಟ ನೀರು ನಿಲ್ಲಿಸಿದರೆ ಹುಳುಗಳು ಭೂಮಿಯ ಮೇಲ್ಪದರಕ್ಕೆ ಬರುತ್ತದೆ. ಬಸಿಗಾಲುವೆಗಳ ಮಧ್ಯದ ಪಟದಲ್ಲಿ ಅಗೆತ ಮಾಡಿ ಹುಳುಗಳನ್ನು ಹೆಕ್ಕಿ ನಾಶಪಡಿಸಬೇಕು. ನಂತರ ಇದೇ ತಿಂಗಳ ಮೂರನೇ ವಾರದಲ್ಲಿ ಕ್ಲೋರಫೈರಿಪಾಸ್ ೨೦ ಇ.ಸಿಯನ್ನು ಎಕರೆಗೆ ೨ ಲೀ. (೨೦೦ ಲೀಟರ್ ನೀರಿಗೆ ೪೦೦ ಮಿ.ಲೀ. ಔಷಧಿ ಕರಗಿಸಿ) ದ್ರಾವಣ ಅಥವಾ ಇಮಿಡಾಕ್ಲೋಪ್ರಿಡ್ ೧೭.೮ ಎಸ್.ಎಲ್ ಅನ್ನು ಎಕರೆಗೆ ೭೦೦ ಮಿ.ಲೀ. ಪ್ರಮಾಣದಲ್ಲಿ (೨೦೦ ಲೀಟರ್ ನೀರಿಗೆ ೨೦೦ ಮಿ.ಲೀ. ಔಷಧಿ ಕರಗಿಸಿ) ಪ್ರತಿ ಮರಕ್ಕೆ ೩-೫ ಲೀಟರ್ ನಂತೆ ದ್ರಾವಣ ರೂಪದಲ್ಲಿ ಸೇರಿಸ ಬೇಕು.
ಮೆಟಾರೈಜಿಯಂ ಅನಿಸೋಪ್ಲಿಯೆ ಅಥವಾ ಹೆಟರೋರಾಬ್ಟಿಸ್ ಜಂತುಹುಳು ೨೦ ಗ್ರಾಂ ಪುಡಿಯನ್ನು ೧ ಲೀ. ನೀರಿನಲ್ಲಿ ಬೆರೆಸಿ ಗಿಡದ ಬುಡ ಭಾಗಕ್ಕೆ ಹಾಕಬೇಕು ಹಾಗೆಯೇ ಮರವೊಂದಕ್ಕೆ ೨೫೦ ಗ್ರಾಂ ಬೇವಿನ ಹಿಂಡಿಯನ್ನು ಹಾಕಬೇಕು.
ಇದಲ್ಲದೆ ತೋಟಗಳಿಗೆ ಕಲ್ಲುಗೊಚ್ಚು ಮಣ್ಣನ್ನು ಲಭ್ಯವಿರುವೆಡೆ ಹಾಕಬೇಕು. ಬೇರುಹುಳುಗಳ ಸಂಪೂರ್ಣ ನಿಯಂತ್ರಣ ಕಷ್ಟ ಸಾಧ್ಯವಾದರೂ ಸಮಗ್ರ ಹತೋಟಿ ಕ್ರಮಗಳನ್ನು ೩-೪ ವರ್ಷ ನಿರಂತರವಾಗಿ ಅನುಸರಿಸಿದರೆ ಹಾನಿಯನ್ನು ಕಡಿಮೆ ಮಾಡಿ, ಇಳುವರಿ ಹೆಚ್ಚಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...